ಕೆಟ್ಟ ಸಂಸ್ಕೃತಿಗೆ ನಾಂದಿಯಾಗುತ್ತಿರುವ ಶಿಕ್ಷಣ ವ್ಯವಸ್ಥೆ
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮೌಲ್ಯಮಾಪನದ ಮೂಲಕ ಅರಿಯುವ ಸಲುವಾಗಿ "ಪರೀಕ್ಷಾಪದ್ಧತಿ"ಯನ್ನು ಅನಾದಿ ಕಾಲದಿಂದಲೂ ಆಯಾ ಕಾಲಮಾನಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಬರಲಾಗಿದೆ. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಮೌಲ್ಯಮಾಪನದ ಮೂಲಕ ಅಂಕ ನೀಡುವ ಪದ್ಧತಿ ಪ್ರಸ್ತುತ ಜಾರಿಯಲ್ಲಿದೆ.
ಆದರೆ ಇಂದಿನ ಜಾಗತಿಕ ಪ್ರಬಲ ಸ್ಪರ್ಧಾತ್ಮಕತೆ ಶಿಕ್ಷಣ ರಂಗಕ್ಕೂ ವ್ಯಾಪಿಸಿರುವುದರಿಂದ ಇಲ್ಲಿಯೂ ಅದರ ಪರಿಣಾಮ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗಿರುವುದು ಮಾತ್ರ ಖೇದದ ಸಂಗತಿ! ಈ ಅನಾರೋಗ್ಯಕರ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಲು ತಮ್ಮ ಬದುಕು- ಭವಿಷ್ಯವನ್ನು ಒತ್ತೆಯಿಟ್ಟಾದರೂ ಸಜ್ಜಾಗಬೇಕಾದ ಅನಿವಾರ್ಯತೆಗೆ ಪೋಷಕರು ಮತ್ತು ಮಕ್ಕಳು ಒಳಗಾಗಬೇಕಾಗಿರುವುದು ವಿಪರ್ಯಾಸ.
ಇಂದು ಮಕ್ಕಳನ್ನು ಹೆತ್ತು ಪೋಷಿಸುವುದಕ್ಕಿಂತ ಹೆಚ್ಚಾಗಿ ಅವರ ಭವಿಷ್ಯವನ್ನು ರೂಪಿಸುವುದು ಪೋಷಕರಿಗೆ ಬಹು ದೊಡ್ಡ ಸವಾಲಾಗಿದೆ. ಒಂದು ಮಗುವಿಗೆ ಪೋಷಕರು ಉತ್ತಮ ಶಿಕ್ಷಣವನ್ನು ನೀಡಬೇಕಾದರೆ ಒಂದು ಮಹಾಯಾಗವನ್ನು ಮಾಡಿ ಮುಗಿಸಿದಂತಾಗುತ್ತದೆ. ಇಂದಿನ ಸಾಮಾಜಿಕ ಪರಿಸರದಲ್ಲಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರಿಗೂ ಪ್ರತಿಷ್ಠೆಯ ವಿಷಯವಾಗಿದೆ. ಇದಕ್ಕಾಗಿ ಅವರು ದುಬಾರಿ ವೆಚ್ಚವನ್ನು ಮಾಡಬೇಕಾಗುತ್ತದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಅತಿ ಬುದ್ಧಿವಂತರನ್ನಾಗಿಸುವ ಒತ್ತಡ ಒಂದೆಡೆಯಾದರೆ, ಮತ್ತೊಂದೆಡೆ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸದಿದ್ದರೆ ಬಂಧು ಬಾಂಧವರ, ನೆರೆಹೊರೆಯವರ ಹಾಗೂ ಸ್ನೇಹಿತರ ಎದುರು ಅಪರಾಧಿ ಮನೋಭಾವನೆಯಿಂದ ನಿಲ್ಲಬೇಕಾಗಬಹುದೆಂಬ ಕೀಳರಿಮೆ ಮತ್ತು ಆತಂಕಕ್ಕೆ ಅವರು ಒಳಗಾಗುತ್ತಿದ್ದಾರೆ. ಆದ್ದರಿಂದ ತಮಗೆ ಎಷ್ಟೇ ಕಷ್ಟವಾದರೂ ಲೆಕ್ಕಿಸದೆ ತಮ್ಮ ಮಕ್ಕಳಿಗೆ ಒಳ್ಳೆಯ (ದುಬಾರಿ) ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಹಣವನ್ನು ನೀರಿನಂತೆ ಖರ್ಚು (ಪೋಲು) ಮಾಡುತ್ತಿದ್ದಾರೆ. ಏನೇ ಆಗಲಿ ತಮ್ಮ ಮಕ್ಕಳು ಶೇ.100ರಷ್ಟು ಅಂಕ ಗಳಿಸಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಬೇಕೆಂಬ ಜಿದ್ದಾಜಿದ್ದಿಗೆ ಬಿದ್ದು ಮಕ್ಕಳನ್ನು ಬಲಿಪಶುವನ್ನಾಗಿ ಮಾಡುತ್ತಿದ್ದಾರೆ.
ಆದರೆ ಎಲ್ಲಾ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಒಂದೇ ಮಟ್ಟದಲ್ಲಿ ಇರುವುದಿಲ್ಲ ಎನ್ನುವುದನ್ನು ಅರಿಯದೇ ಮಕ್ಕಳ ಮೇಲೆ ಹೆಚ್ಚಿನ ಅಂಕ ಗಳಿಸಲು ಭಾರಿ ಒತ್ತಡ ಹೇರುತ್ತಾರೆ. ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದು ಪೋಷಕರು ನಿರೀಕ್ಷಿಸಿದ ಮಟ್ಟದಲ್ಲಿ ಅಂಕ ಗಳಿಸಲು ವಿಫಲರಾಗುತ್ತಾರೆ. ಆಗ ಪೋಷಕರ ಹಾಗೂ ಶಿಕ್ಷಕರ ಒತ್ತಡ-ಭಯದಿಂದ ಮಾನಸಿಕ ಕ್ಷೋಭೆಗೊಳಗಾಗಿ ಕುಗ್ಗಿ ಹೋಗುವ ಮಕ್ಕಳು ಆತ್ಮಹತ್ಯೆ, ಮನೆಬಿಟ್ಟು ಹೋಗುವುದು, ಮಾದಕ ವ್ಯಸನಗಳಿಗೆ ಬಲಿಯಾಗುವುದು ಅಥವಾ ಸಮಾಜ ಕಂಟಕರಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ.
ಇನ್ನು ಅಂಕ ಗಳಿಕೆಯನ್ನೇ ಮುಖ್ಯವಾಗಿಟ್ಟುಕೊಂಡು ಖಾಸಗಿ ವಿದ್ಯಾಸಂಸ್ಥೆಗಳು ಪೋಷಕರಿಂದ ಹಣ ಸುಲಿದು ನಿತ್ಯ ಹಬ್ಬ ಆಚರಿಸುತ್ತಿವೆ. ತಮ್ಮ ಶಾಲಾ ಫಲಿತಾಂಶವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಟಿ.ಸಿ. ಕೊಟ್ಟು ಬೇರೆ ಶಾಲೆಗಳಿಗೆ ಸೇರ್ಪಡೆಯಾಗಲು ಒತ್ತಾಯಿಸುತ್ತಾರೆ. ಇದರಿಂದ ಪೋಷಕರಿಗೂ ತೊಂದರೆಯಾಗುವುದಲ್ಲದೆ, ಮುಗ್ಧ ಮಕ್ಕಳ ಮನಸ್ಸಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಧೈರ್ಯ, ಹುಮ್ಮಸ್ಸು, ಆತ್ಮಸ್ಥೈರ್ಯ ಹಾಗೂ ವಿಶ್ವಾಸವನ್ನು ತುಂಬ ಬೇಕಾದ ವಿದ್ಯಾ ಸಂಸ್ಥೆಗಳು ಅವರಲ್ಲಿ ತಾನೊಬ್ಬ ನಿಷ್ಪ್ರಯೋಜಕ ಎಂಬ ಭಾವನೆ ಮೂಡಲು ಕಾರಣವಾಗುತ್ತಿವೆ. ಅವರನ್ನು ನಿರಾಶಾವಾದಿಗಳನ್ನಾಗಿಸುತ್ತಿವೆ. ಕುಟುಂಬದವರಿಂದ, ಇತರರಿಂದ ನಿಂದನೆಗೆ ಒಳಗಾಗುವಂತೆ ಮಾಡಿ ಕಲಿಯಲು ತಾನು ಅಸಮರ್ಥ ಎಂಬ ಭಾವನೆ ಮಕ್ಕಳಲ್ಲಿ ಮೂಡಲು ಇಂದಿನ ಶಿಕ್ಷಣ ವ್ಯವಸ್ಥೆ ಕಾರಣವಾಗಿದೆ. ಪೋಷಕರಿಗೆ ಮತ್ತು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸದೃಢ ಸಮಾಜದ ಬುನಾದಿಗೆ ಕಾರಣವಾಗಬೇಕಾದ ವಿದ್ಯಾಸಂಸ್ಥೆಗಳು ಹೊಣೆಗೇಡಿತನದಿಂದ ವರ್ತಿಸುತ್ತಿರುವುದಕ್ಕೆ ಮತ್ತು ಭ್ರಷ್ಟತೆಗೆ ನಮ್ಮ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆಯೇ ಕಾರಣವಾಗಿದೆ. ವಿದ್ಯಾಸಂಸ್ಥೆಗಳನ್ನು ಪವಿತ್ರ ಜ್ಞಾನಮಂದಿರಗಳನ್ನಾಗಿಸಬೇಕಾದ ಸರ್ಕಾರ ಅವುಗಳನ್ನು ಸಣ್ಣ ಕಾರ್ಖಾನೆಯಿಂದ ಬೃಹತ್ ಕಾರ್ಖಾನೆಯಾಗಿ ರೂಪುಗೊಳ್ಳುವಂತೆ ಮಾಡುತ್ತಿದೆ. ರಾಷ್ಟ್ರದ ಮತ್ತು ಸಾಮಾಜಿಕ ಹಿತವನ್ನು ಕಡೆಗಣಿಸಿ ವಿದ್ಯಾ ಸಂಸ್ಥೆಗಳನ್ನು ಬಂಡವಾಳಶಾಹಿಗಳ ಕೈಗೊಪ್ಪಿಸಿ ರಾಜಕೀಯ ಹಿತಾಸಕ್ತಿಯತ್ತ ಮಾತ್ರ ಕೇಂದ್ರಿಕರಿಸಿ (ಉದಾ. ಆರ್ಟಿಇ) ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿರುವುದು ಸೂಕ್ಷ್ಮ ದೃಷ್ಟಿಯಿಂದ ಗಮನಿಸಿದಾಗ ಮಾತ್ರ ಅರಿವಾಗುತ್ತದೆ.
ವರ್ಷದ ಆರಂಭದಿಂದಲೂ ಹಸಿವು, ನಿದ್ರೆ, ಮನರಂಜನೆಗಳನ್ನು ಬದಿಗಿರಿಸಿ ವಿರಮಿಸಿಕೊಳ್ಳದೆ ಹಗಲು ರಾತ್ರಿಗಳನ್ನು ಲೆಕ್ಕಿಸದೆ, ವರ್ಷಪೂರ್ತಿ ಓದಿ, ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಬಂದರೂ ನಿರಾಳವಾಗಿರಲು ಸಾಧ್ಯವಾಗುತ್ತಿಲ್ಲ. ಮನೆಯೊಳಗೆ ಕಾಲಿಡುತ್ತಿದ್ದಂತೆ ಟಿ.ವಿ. ಪರದೆಯ ಮೇಲೆ ಮೂಡಿ ಬರುತ್ತಿರುವ ಬ್ರೇಕಿಂಗ್ ನ್ಯೂಸ್ಗೆ ಶಾಕ್ ಆಗುತ್ತಾರೆ. ಕಾರಣ ಅಂದು ಅವರು ಎಷ್ಟೊಂದು ಚೆನ್ನಾಗಿ ಪರೀಕ್ಷೆ ಬರೆದು ಬಂದ ಖುಷಿಯಲ್ಲಿರುವಾಗಲೇ ಪರೀಕ್ಷಾ ಪತ್ರಿಕೆ ಬಯಲಾಗಿರುವ ಸುದ್ದಿ ಕೇಳಿ ಬೆಚ್ಚಿ ಬೀಳುತ್ತಾರೆ. ಇನ್ನೊಮ್ಮೆ ಆ ಪರೀಕ್ಷೆಗೆ ತಯಾರಾಗಬೇಕೆಂಬ ಹಿಂಸೆಯಲ್ಲದೇ ಮುಂದಿನ ಪರೀಕ್ಷೆಯ ಪತ್ರಿಕೆ ಹೇಗಿರುತ್ತದೋ ಎಂಬ ಆತಂಕಕ್ಕೆ ಅವರು ಒಳಗಾಗುತ್ತಾರೆ.
ಶಿಕ್ಷಣವೆನ್ನುವುದು ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಅತ್ಯಂತ ಮಹತ್ವವಾದದ್ದು. ಅದು ಬದುಕಿಗೆ ದಾರಿ ತೋರಿಸುವಂತಹದ್ದು. ಆದರೆ ಶಿಕ್ಷಣದ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು, ಸಾಮಾಜಿಕ ಪ್ರಜ್ಞೆ ಮರೆಯುತ್ತಿರುವುದು ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದು ಎಂತಹ ದುರಂತವಲ್ಲವೇ? ಭವ್ಯ ಭಾರತದ ಭವಿಷ್ಯವನ್ನು ಬರೆಯಬೇಕಾದ ಇಂದಿನ ಮಕ್ಕಳನ್ನು ನಾವು ವಿಶ್ವ ಮಾನವರನ್ನಾಗಿಸುವ ಬದಲು ಯಂತ್ರ ಮಾನವರನ್ನಾಗಿ ರೂಪಿಸಹೊರಟಿರುವುದು ಎಂತಹ ಘೋರ ಅಪರಾಧ ಅಲ್ಲವೇ?
ಸಾಮಾಜಿಕ ಅನಿಷ್ಟವಾಗಿ ಪರಿಣಮಿಸಿರುವ ಅಂಕ ಗಳಿಕೆ ಪದ್ಧತಿಗೆ ಕಡಿವಾಣ ಹಾಕಬೇಕಾದರೆ ಮೊದಲನೆಯದಾಗಿ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸದಿರುವುದು. ಅಂದರೆ ಫಲಿತಾಂಶವನ್ನು ಶಿಕ್ಷಣ ಸಂಸ್ಥೆಯ ನೋಟಿಸ್ ಬೋರ್ಡ್ಗಳಲ್ಲಿ ಅಥವಾ ಇಂಟರ್ನೆಟ್ನಲ್ಲಿ ಇತರರಿಗೆ ತಿಳಿಯುವಂತೆ ಪ್ರಕಟಿಸಬಾರದು. ಫಲಿತಾಂಶ ನೇರವಾಗಿ ವಿದ್ಯಾರ್ಥಿ ಅಥವಾ ಪೋಷಕರಿಗೆ ಮಾತ್ರ ತಿಳಿಯುವಂತೆ ಇರಬೇಕು. (ಪ್ರಸ್ತುತ ಎಸ್ಎಂಎಸ್ ಮೂಲಕ ಅಥವಾ ಇನ್ನಿತರ ಸರಳ ಮಾರ್ಗವನ್ನು ಅನುಸರಿಸಬಹುದು).
ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸುವುದರಿಂದ ಕಡಿಮೆ ಅಂಕ ಗಳಿಸಿರುವ ಅಥವಾ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಇತರರಿಗೆ ಫಲಿತಾಂಶ ತಿಳಿದಾಗ ಅಪಮಾನ ಉಂಟಾಗಬಹುದು. ಅವಮಾನಿತರಾದ ವಿದ್ಯಾರ್ಥಿಗಳು ಆತ್ಮಹತ್ಯೆ ಅಥವಾ ಇತರ ಕೃತ್ಯಕ್ಕೆ ಪ್ರಯತ್ನಿಸಬಹುದು. ಪೋಷಕರು ಮತ್ತು ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳಬಹುದು. ಒಟ್ಟಿನಲ್ಲಿ ಬಹಿರಂಗ ಫಲಿತಾಂಶ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ. ಆದ್ದರಿಂದ ಶಿಕ್ಷಣ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆಯಲ್ಲಿ ಗೌಪ್ಯತೆಯನ್ನು ಕಾಪಾಡುವುದರ ಮೂಲಕ ಸಂಬಂಧಪಟ್ಟವರಿಗೆ ಮಾತ್ರ ಫಲಿತಾಂಶ ತಿಳಿಯುವಂತೆ ಮಾಡುವುದರೊಂದಿಗೆ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಬೇಕಾಗಿದೆ.
ಎರಡನೆಯ ಸಮಸ್ಯೆಯೇನೆಂದರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರವೇಶ ನೀಡಬೇಕಾದರೆ ಅಂಕಗಳಿಕೆ ಮುಖಾಂತರ ನೀಡಲಾಗುತ್ತದೆ. ಕಡಿಮೆ ಅಂಕ ಗಳಿಸಿದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಇಚ್ಛೆ ಮತ್ತು ಅಭಿರುಚಿಗೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತಮಗೆ ಇಷ್ಟವಿಲ್ಲದ ವಿಷಯಗಳನ್ನೇ ಆಯ್ಕೆ ಮಾಡಿಕೊಂಡು ಓದಬೇಕಾಗುತ್ತದೆ. ಆಗ ಅವರು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕಾದರೆ ಉದಾ- ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಾಗ ವಿದ್ಯಾರ್ಥಿಯ ಉತ್ತೀಣ ಅಥವಾ ಅನುತ್ತೀರ್ಣತೆಯ ಬಗ್ಗೆ ಮಾತ್ರ ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ಫಲಿತಾಂಶದ ಪ್ರಕಟಣೆಯ ವೇಳೆ ಅಂಕಪಟ್ಟಿಯನ್ನು ಪ್ರಕಟಿಸಬಾರದು/ನೀಡಬಾರದು.
ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪ್ರವೇಶ ಪೂರ್ಣಗೊಂಡ ಬಳಿಕ ಅಂದರೆ ಫಲಿತಾಂಶ ಪ್ರಕಟವಾದ ಕನಿಷ್ಠ ಎರಡು ತಿಂಗಳ ನಂತರ ವಿದ್ಯಾರ್ಥಿಗಳಿಗೆ ನೇರವಾಗಿ ಅಂಕಪಟ್ಟಿ ತಲುಪುವಂತೆ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಂಸ್ಥೆಗಳಲ್ಲಾದರೂ ಓದುವ ಅವಕಾಶ ದೊರೆಯುವುದಲ್ಲದೇ ಅವರು ಆಯ್ಕೆ ಮಾಡಿಕೊಳ್ಳುವ ವಿಷಯವನ್ನು ಓದಲು ಅವಕಾಶ ಲಭಿಸುತ್ತದೆ. ಕಡಿಮೆ ಅಂಕದ ನೆಪವೊಡ್ಡಿ ಸುಲಿಗೆ ಮಾಡುವ ಸುಲಿಗೆಕೋರ ಶಿಕ್ಷಣ ಸಂಸ್ಥೆಗಳ ಸುಲಿಗೆಗೆ ಕಡಿವಾಣ ಬೀಳುತ್ತದೆ. ಬುದ್ಧಿವಂತರು ಮತ್ತು ದಡ್ಡರೆಂದು ವರ್ಗೀಕರಿಸದೆ ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುತ್ತದೆ.
ಮೂರನೆಯದಾಗಿ ಅಂಕಗಳಿಕೆಗಾಗಿ ವಿದ್ಯಾರ್ಥಿಗಳು ಅನೈತಿಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಗೆ ಮೊದಲೇ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಕೆಲವರ ಹಿತಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಂಕ ಗಳಿಕೆಯ ಒತ್ತಡ ಕಡಿಮೆಯಾದರೆ ಇಂತಹ ಅನಾಚಾರಗಳು ಕಡಿತವಾಗಲು ಸಹಾಯಕವಾಗುತ್ತದೆ.
ಯಾವುದೇ ದೇಶವಾದರೂ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಯಥೇಚ್ಛವಾಗಿ ಹಣ ಖರ್ಚು ಮಾಡಲು ಹಿಂಜರಿಯಬಾರದು. ಏಕೆಂದರೆ ಸುಶಿಕ್ಷಿತರಿಂದ ದೇಶ ಸುಭಿಕ್ಷವಾಗುತ್ತದೆ-ಸದೃಢ ಪ್ರಜೆಗಳಿಂದ ರಾಷ್ಟ್ರ ಸದೃಢವಾಗುತ್ತದೆ.
-ರಾಜು ವೆಂಕಟೇಶ್ ಬಿ.ಟಿ.
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

