ಕಷ್ಟ ಬಂದಾಗ ಆಕೆ ಬಾಗಲಿಲ್ಲ, ಬಾಳಿ ತೋರಿಸಿದಳು!

Updated on: 

ಕಷ್ಟಗಳು, ಬೇಡುವುದನ್ನು ಮಾತ್ರವಲ್ಲ, ಬಾಳುವುದನ್ನೂ ಕಲಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಪಟ್ರೇಸಿಯಾ ನಾರಾಯಣ್ ಎಂಬ ಹೆಣ್ಣು ಮಗಳ ಯಶೋಗಾಥೆ ಇಲ್ಲಿದೆ. ಅದನ್ನೂ ಆಕೆಯ ಮಾತುಗಳಲ್ಲೇ ಕೇಳೋಣ:
'ನಿಜ ಹೇಳಬೇಕೆಂದರೆ ನನ್ನ ಬದುಕೇ ಆಕಸ್ಮಿಕಗಳ ಸರಮಾಲೆ. ಗೃಹಿಣಿಯಾಗಿ ಜೀವನ ನಡೆಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು. ಆದರೆ ಗಂಡ ಅನ್ನಿಸಿಕೊಂಡಾತ ನನ್ನ ಪಾಲಿಗೆ ಒಂದು ಶಾಪವಾದ. ಆತ ತನ್ನ ಜವಾಬ್ದಾರಿ ಮರೆತ. ಹೊಡೆದು ಬಡಿದು ಚಿತ್ರಹಿಂಸೆ ನೀಡಿದ. ಬಿಟ್ಟೂ ಬಿಡದೆ ಕಾಡಿದ. ಈ ಮಧ್ಯೆಯೇ ಇಬ್ಬರು ಮಕ್ಕಳಾದರು. ಆನಂತರವಾದರೂ ಗಂಡ ಬದಲಾಗಲಿಲ್ಲ.  ಪರಿಣಾಮ, ಹೊಟ್ಟೆಪಾಡಿನ ಕಾರಣಕ್ಕೆ ನಾನು ದುಡಿಯಲು ನಿಂತೆ. ಮೊದಲ ದಿನ ಸಂಪಾದಿಸಿದ್ದು ಕೇವಲ 50 ಪೈಸೆ. ಆದರೆ ಈಗ ದಿನಕ್ಕೆ ಎರಡೂವರೆ ಲಕ್ಷ ಸಂಪಾದಿಸ್ತಾ ಇದೀನಿ. 30 ವರ್ಷಗಳ ಹಿಂದೆ ಒಂದು ತಳ್ಳುಗಾಡಿಯ ಮೊಬೈಲ್ ಕ್ಯಾಂಟೀನ್ ಹೊಂದಿದ್ದವಳು, ಈಗ 14 ಎ.ಸಿ. ಹೋಟೆಲುಗಳ ಮಾಲೀಕಳಾಗಿದೀನಿ. ಒಮ್ಮೆ ಹಿಂತಿರುಗಿ ನೋಡಿದ್ರೆ ನಡೆದಿರುವುದೆಲ್ಲಾ ನಂಬಲಾಗದಂಥ ಪವಾಡ ಅನ್ನಿಸ್ತಿದೆ...
ನಮ್ಮದು ಸಂಪ್ರದಾಯಸ್ತ ಕ್ರಿಶ್ಚಿಯನ್ ಕುಟುಂಬ. ಅಪ್ಪನಿಗೆ ಅಂಚೆ ಮತ್ತು ತಂತಿ ಇಲಾಖೆಯಲ್ಲಿ, ಅಮ್ಮನಿಗೆ ದೂರವಾಣಿ ಇಲಾಖೆಯಲ್ಲಿ ನೌಕರಿಯಿತ್ತು. ನನಗೆ ಇಬ್ಬರು ಸೋದರರು. ಚೆನ್ನೈನ ಮರೀನಾ ಬೀಚ್‌ಗೆ ಹತ್ತಿರದಲ್ಲೇ ನಮ್ಮ ಮನೆಯಿತ್ತು. ಕಾಲೇಜಿಗೆ ಸೇರುವವರೆಗೂ ನನ್ನ ಬದುಕಲ್ಲಿ ಯಾವುದೇ ಮಹತ್ವದ ಘಟನೆಯೂ ನಡೆಯಲಿಲ್ಲ. ಆಕಸ್ಮಿಕಗಳ ಸರಮಾಲೆ ಆರಂಭವಾದದ್ದು ನಾನು ಕಾಲೇಜಿಗೆ ಹೋದ ನಂತರವೇ.
ಮೊದಲಿಗೆ ನಾರಾಯಣ್ ಎಂಬ ಸುಂದರಾಂಗನ ಪರಿಚಯವಾಯಿತು. ಈತ, ಕಾಲೇಜಿನ ದಾರಿಯಲ್ಲಿಯೇ ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿದ್ದ. ಪರಿಚಯವಾದ ದಿನದಿಂದಲೇ ನನ್ನ ಬಗ್ಗೆ ವಿಪರೀತ ಕೇರ್ ತಗೊಂಡ. ನನಗೆ ಇಷ್ಟವಾಗುವ ತಿಂಡಿಯೊಂದಿಗೇ ದಿನವೂ ಎದುರಾಗುತ್ತಿದ್ದ. ಆಗ ನನಗೆ 17ರ ನಿಗಿ ನಿಗಿ ಪ್ರಾಯ. ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ಗೆಳೆತನ ಗಟ್ಟಿಯಾಯಿತು. ಸ್ನೇಹ-ಪ್ರೇಮಕ್ಕೆ ತಿರುಗಿತು. ನಾರಾಯಣ್, ಜಾತಿಯಿಂದ ಬ್ರಾಹ್ಮಣನೆಂದೂ, ಆತ ನನಗಿಂತ 13 ವರ್ಷ ದೊಡ್ಡವನೆಂದೂ ಆಗಲೇ ಗೊತ್ತಾಯಿತು. ಆದರೆ, ನಾನು ಅದೆಂಥ ಪೆದ್ದು ಹುಡುಗಿಯಾಗಿದ್ದೆ, ಮ್ಯಾಡ್‌ಲವ್‌ನಲ್ಲಿ ಮುಳುಗಿ ಹೋಗಿದ್ದೆ ಎಂದರೆ, ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ ಮದುವೆಗೆ ಒಪ್ಪಿಕೊಂಡೆ. ಆಗಿನ್ನೂ ನನಗೆ 18 ತುಂಬಿರಲಿಲ್ಲ. ಈ ಅಂತರ್‌ಧರ್ಮೀಯ ಮದುವೆಗೆ ಎರಡೂ ಕುಟುಂಬಗಳು ಒಪ್ಪುವುದಿಲ್ಲ ಎಂದು ನಮಗೂ ಗೊತ್ತಿತ್ತು. ಹಾಗಾಗಿ, ಸಬ್‌ರಿಜಿಸ್ಟ್ರಾರ್ ಆಫೀಸಿನಲ್ಲಿ ಸ್ವಲ್ಪ ಲಂಚ ಕೊಟ್ಟು, ಗುಟ್ಟಾಗಿ ಮದುವೆಯಾದೆವು. 18 ವರ್ಷ ತುಂಬುವವರೆಗೂ ತಂದೆಯ ಮನೆಯಲ್ಲಿರುವುದೆಂದೂ, ಆನಂತರ ವಿಷಯ ತಿಳಿಸಿ ನಾರಾಯಣ್ ಮನೆಗೆ ಹೋಗಿ ಬಿಡುವುದೆಂದೂ ತೀರ್ಮಾನವಾಯಿತು.
ಆದರೆ, ಮೂರು ತಿಂಗಳು ಕಳೆಯುವುದರೊಳಗೆ ನಾರಾಯಣ್‌ನ ವರಸೆ ಬದಲಾಯಿತು. ನಿಮ್ಮ ಮನೆಯಲ್ಲಿ ತಕ್ಷಣವೇ ವಿಷಯ ತಿಳಿಸಿ ಹೊರಟು ಬಾ ಎಂದಾತ ಒತ್ತಾಯಿಸತೊಡಗಿದ. ನೀನು ಹೇಳದಿದ್ರೆ ನಾನೇ ಬಂದು ಗಲಾಟೆ ಮಾಡ್ತೀನಿ ಎಂದು ಬೆದರಿಸತೊಡಗಿದ. ಕಡೆಗೊಂದು ದಿನ ಗಟ್ಟಿ ಮನಸ್ಸು ಮಾಡಿ ವಿಷಯ ತಿಳಿಸಿದೆ. ಮನೆಯಲ್ಲಿ ಅಲ್ಲೋಲಕಲ್ಲೋಲವೇ ಆಗಿ ಹೋಯ್ತು. ವಿಷಯ ತಿಳಿದ ಬಂಧುಗಳು -'ಅನಾಹುತ ಆಗಿಹೋಗಿದೆ. ಏನೂ ಮಾಡೋಕಾಗಲ್ಲ. ಚರ್ಚ್‌ನಲ್ಲಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಿ' ಎಂದು ಅಪ್ಪನಿಗೆ ಸಲಹೆ ಮಾಡಿದರು. ಪರಿಣಾಮ, ಚರ್ಚ್‌ನಲ್ಲಿ ಮತ್ತೊಮ್ಮೆ ನಮ್ಮ ಮದುವೆಯಾಯಿತು. ಇದೆಲ್ಲಾ ನಡೆದದ್ದು 1977ರಲ್ಲಿ.
ಅದುವರೆಗೂ ಪಟ್ರೇಸಿಯಾ ಥಾಮಸ್ ಆಗಿದ್ದ ನಾನು, ಮದುವೆಯ ನಂತರ ಪಟ್ರೇಸಿಯಾ ನಾರಾಯಣ್ ಆದೆ. ಮದುವೆಯ ನಂತರ ನಾರಾಯಣ್ ಪೋಷಕರೂ ದೂರವಾದರು. ಹಾಗಾಗಿ ನಾವು ಅಣ್ಣಾನಗರ್‌ನಲ್ಲಿ ಬಾಡಿಗೆ ಮನೆ ಹಿಡಿದೆವು. ಆರು ತಿಂಗಳು ಕಳೆಯುವುದರೊಳಗೆ ಗರ್ಭಿಣಿಯಾದೆ. ಆಗಲೇ, ನಂಬಲಾಗದಂಥ ಸತ್ಯವೊಂದು ಗೊತ್ತಾಗಿ ಹೋಯಿತು. ಏನೆಂದರೆ, ನನ್ನ ಗಂಡ ಕುಡುಕನಾಗಿದ್ದ. ಮಾದಕ ವ್ಯಸನಿಯಾಗಿದ್ದ. ಜೂಜುಕೋರನಾಗಿದ್ದ. ಮೈಗಳ್ಳನಾಗಿದ್ದ. ಕುಡಿದು ಬಂದು ನನಗೆ ಹೊಡೆಯುವುದು, ಸಿಗರೇಟಿನಿಂದ ಸುಡುವುದು, ಹಣಕ್ಕಾಗಿ ಪೀಡಿಸುವುದು ಅವನ ದಿನಚರಿಯೇ ಆಗಿಹೋಯಿತು. ಮಗ ಹುಟ್ಟಿದ ನಂತರವೂ ಅವನು ಬದಲಾಗಲಿಲ್ಲ. ನಾನು ಕಷ್ಟ ಹೇಳಿಕೊಳ್ಳಲು ತಾಯಿಯ ಮನೆಗೆ ಹೋದರೆ ಅಲ್ಲಿಗೂ ಬಂದು ಗಲಾಟೆ ಮಾಡಿಬಿಟ್ಟ. 'ಎಲ್ಲರ ಮಾತು ಮೀರಿ ಮದುವೆ ಮಾಡ್ಕೊಂಡೆ ಅಲ್ವಾ, ಈಗ ಅನುಭವಿಸು, ಎಂದು ಬಂಧುಗಳೆಲ್ಲ ಚುಚ್ಚಿ ಮಾತಾಡಿದರು. ಈ ಸಂದರ್ಭದಲ್ಲಿ ನನ್ನೆದುರು ಎರಡು ಆಯ್ಕೆಗಳಿದ್ದವು. ಒಂದು: ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು. ಎರಡು: ಹೋರಾಡುತ್ತಲೇ ಬದುಕಿ ಬಿಡುವುದು, ನಾನು ಎರಡನೆಯದನ್ನೇ ಆಯ್ಕೆ ಮಾಡಿಕೊಂಡೆ.
ಮನೆಯ ಬಾಡಿಗೆ ಹಾಗೂ ಹೊಟ್ಟೆಪಾಡಿಗೆ ಆಗುವಷ್ಟು ಹಣ ಹೊಂದಿಸುವುದು ನನ್ನ ಮೊದಲ ಗುರಿಯಾಗಿತ್ತು. ಮರೀನಾ ಬೀಚ್‌ನಲ್ಲಿ ತಳ್ಳುಗಾಡಿಯಲ್ಲಿ ಕಾಫಿ/ಟೀ ಮಾರಬಹುದಲ್ಲ ಎಂಬ ಯೋಚನೆ ಬಂದದ್ದೇ ಆಗ. ಈ ಬಿಜಿನೆಸ್ ಮಾಡುವವರು ಕಾರ್ಪೋರೇಷನ್ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಬೇಕಿತ್ತು. ಒಂದು ವರ್ಷದ ಮಗನನ್ನು ಕಂಕುಳಲ್ಲಿಟ್ಟುಕೊಂಡು ಹತ್ತು ತಿಂಗಳು ಅಲೆದ ನಂತರ ಕಡೆಗೂ ಲೈಸೆನ್ಸ್ ಸಿಕ್ಕಿತು. ಬಿಜಿನೆಸ್ ಆರಂಭಿಸಲು ಹಣ ಬೇಕಲ್ಲವೇ? ಆಗ, ಅಮ್ಮ ನೆರವಿಗೆ ಬಂದಳು. ತನ್ನಲ್ಲಿದ್ದ ಹಣ ನೀಡಿ-'ಒಳ್ಳೆಯದಾಗುತ್ತೆ, ಹೆದರಬೇಡ' ಅಂದಳು. ಪರಿಣಾಮವಾಗಿ, 1982ರ ಜೂನ್ 21ರಂದು ಬಾಡಿಗೆಗೆ ಒಂದು ತಳ್ಳುಗಾಡಿ ಹಿಡಿದು, ಕಾಫಿ/ಟೀ ತುಂಬಿದ ಫ್ಲಾಸ್ಕ್‌ಗಳೊಂದಿಗೆ ಬೀಚ್‌ಗೆ ಹೋಗಿಯೇ ಬಿಟ್ಟೆ. ಅವತ್ತು, ಸಿಕ್ಕ ಗಿರಾಕಿಗಳು ಕೇವಲ ಇಬ್ಬರು. ಬಂದ ಲಾಭ ಕೇವಲ 50 ಪೈಸೆ! ಮನೆಗೆ ಬಂದವಳೇ ಅಮ್ಮನನ್ನು ತಬ್ಬಿಕೊಂಡು ಗೋಳಾಡಿದೆ. ಭಿಕ್ಷೆಗೆ ಹೋಗಿದ್ರೇ ಒಳ್ಳೆಯದಿತ್ತು ಎಂದೆ. ಅಮ್ಮ, ಸಮಾಧಾನ ಹೇಳಿದಳು. ನಾಳೆಯೂ ಹೋಗಿ ಬಾ. ಏನಾಗುತ್ತೋ ನೋಡೋಣ ಎಂದಳು.
ಮರುದಿನ ನಿಜವಾಗಿಯೂ ಪವಾಡ ನಡೆದು ಹೋಯ್ತು. ಸಂಜೆಯ ವೇಳೆಗೆ 600 ರೂ.ಗಳ ಸಂಪಾದನೆಯಾಗಿತ್ತು. ಆಗ, ರಸ್ತೆಯಲ್ಲಿ ಕ್ಯಾಂಟೀನ್ ಇಟ್ಕೊಂಡೂ ಬದುಕಬಹುದು ಅನ್ನಿಸಿತು. ಮರುದಿನದಿಂದ ಜಾಮ್, ಉಪ್ಪಿನಕಾಯಿ ತಯಾರಿಸಿದೆ. ಅವುಗಳನ್ನು ಅಮ್ಮ, ತನ್ನ ಗೆಳತಿಯರಿಗೆ ಮಾರಿದಳು. ಯಾವ ಉತ್ಪನ್ನಕ್ಕೂ ಕೆಮಿಕಲ್ಸ್, ಕಲರ್ ಬಳಸಿರಲಿಲ್ಲ. ಹಾಗಾಗಿ, ವ್ಯಾಪಾರ ಜೋರಾಯಿತು. ಕಾಫಿ, ಟೀ ಜೊತೆಯಲ್ಲಿ ಕಟ್ಲೆಟ್, ಸಮೋಸ, ಬಜ್ಜಿ, ವಡಾ, ಬಿಸ್ಕತ್, ಜ್ಯೂಸ್‌ಗಳೂ ಜಾಗ ಪಡೆದುಕೊಂಡವು. ಬೆಳಗ್ಗೆ 5ರಿಂದ 9 ಗಂಟೆಯವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 11 ಗಂಟೆಯವರೆಗೆ ತಳ್ಳುಗಾಡಿಯ ಕ್ಯಾಂಟೀನ್ ನಡೆಸುತ್ತಿದ್ದೆ. ಸ್ವಾವಲಂಬಿಯಾಗಿ ಬದುಕಬೇಕು ಎಂಬುದಷ್ಟೇ ಆಗ ನನ್ನ ಗುರಿಯಾಗಿತ್ತು. ಹಾಗಾಗಿ, ಕತ್ತಲೆಯಾಗಲಿ, ಗಂಡಸರ ಕೆಟ್ಟ ದೃಷ್ಟಿಯಾಗಲಿ ನನ್ನಲ್ಲಿ ಭಯ ಹುಟ್ಟಿಸಲಿಲ್ಲ. 2003ರವರೆಗೂ ಬದುಕು ಹೀಗೇ ಸಾಗಿಬಂತು. ಈ ವೇಳೆಗೆ ನಮ್ಮ ಬದುಕಿಗೆ ಮಗಳು ಬಂದಿದ್ದಳು. ಗಂಡನ ಕುಡಿತ ಮಿತಿ ಮೀರಿತ್ತು. ಹಿಂಸೆಯೂ...
ಹೀಗಿರುವಾಗಲೇ, ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಯಲ್ಲಿ ಕ್ಯಾಂಟೀನ್‌ನಲ್ಲಿ ಹೋಟೆಲ್ ಆರಂಭಿಸುವಂತೆ ಆಫರ್ ಬಂತು. ಬೆಳಗಿನ ಜಾವದಲ್ಲಿ ಮರೀನಾ ಬೀಚ್‌ಗೆ ವಾಕಿಂಗ್ ಬರುತ್ತಿದ್ದ ಮಂಡಳಿಯ ಅಧ್ಯಕ್ಷರು ಅಲ್ಲಿ ನನ್ನ ತಳ್ಳುಗಾಡಿ ಹೋಟೆಲಿನ ತಿಂಡಿಯ ರುಚಿ ನೋಡಿದ್ದರಂತೆ. ಆ ಕಾರಣದಿಂದಲೇ ಆಫರ್ ನೀಡಿದ್ದರು. ಇದು ನನ್ನ ಬದುಕಿನ ಮತ್ತೊಂದು ಟರ್ನಿಂಗ್ ಪಾಯಿಂಟ್. ಕೊಳಚೆ ನಿರ್ಮೂಲನಾ ಮಂಡಳಿಯ ಆವರಣದಲ್ಲಿದ್ದ ಕ್ಯಾಂಟೀನ್‌ಗೆ ದಿನಕ್ಕೆ 3000ಕ್ಕೂ ಹೆಚ್ಚು ಮಂದಿ ಗ್ರಾಹಕರು ಬರುತ್ತಿದ್ದರು.
ಹೊಸ ಆಫರ್ ಬಂತೆಂದು ಮರೀನಾ ಬೀಚ್‌ನ ವ್ಯಾಪಾರವನ್ನು ನಿಲ್ಲಿಸಲಿಲ್ಲ. ಬೆಳಗ್ಗೆ 5ರಿಂದ 9ರವರೆಗೆ ಬೀಚ್, ಆನಂತರ ಸ್ಲಂ ಕ್ಲಿಯರೆನ್ಸ್ ಬೋರ್ಡ್‌ನ ಹೋಟೆಲ್, ಮಧ್ಯಾಹ್ನ 4ರಿಂದ ರಾತ್ರಿ 11ರವರೆಗೆ ಮತ್ತೆ ಬೀಚ್...ಹೀಗೇ ನಡೀತಿತ್ತು ಬದುಕು. ಕೆಲಸ ಮತ್ತು ಸಂಪಾದನೆ ಎರಡೂ ಹೆಚ್ಚಿದಾಗ ಅಡುಗೆಯವರನ್ನು, ಮಾಣಿಗಳನ್ನು, ಕ್ಲೀನರ್‌ಗಳನ್ನು ನೇಮಿಸಿಕೊಂಡೆ. ಮುಂದಿನ ಕೆಲವೇ ದಿನಗಳಲ್ಲಿ ಬ್ಯಾಂಕ್ ಆಫ್ ಮಧುರೈನ ಹೆಡ್ ಆಫೀಸಿನಲ್ಲಿ ಹೋಟೆಲ್ ಆರಂಭಿಸುವಂತೆ ಆಫರ್ ಬಂತು. ತಿಂಗಳಿಗೆ ಒಂದು ಲಕ್ಷ ಲಾಭ ಸಿಗುತ್ತಿದ್ದ ಜಾಗ ಅದು. ನಾನು ತಕ್ಷಣವೇ ಒಪ್ಪಿಕೊಂಡೆ. ಹೀಗೆ, ಬದುಕಲ್ಲಿ ಒಂದೊಂದೇ ಯಶಸ್ಸು ಕಾಣುತ್ತಿರುವಾಗಲೇ ಮಕ್ಕಳು ಎದೆಯೆತ್ತರ ಬೆಳೆದಿದ್ದರು. ಶಾಲೆಯಲ್ಲಿ ಟಾಪರ್ ಅನ್ನಿಸಿಕೊಂಡಿದ್ದರು. ನನ್ನ ಯಶಸ್ಸು ಬಂಧುಗಳನ್ನೆಲ್ಲಾ ಬೆರಗಾಗಿಸಿತ್ತು. ಅವರು ತಾವಾಗಿಯೇ ಹತ್ತಿರ ಬಂದರು. ಈ ವೇಳೆಗೆ ತಂದೆಯ ಸಿಟ್ಟೂ ಮಾಯವಾಗಿತ್ತು.
ಅವತ್ತೊಂದು ದಿನ ಏನಾಯಿತೆಂದರೆ, ಮಧ್ಯಾಹ್ನದ ವೇಳೆ ಬೀಚ್‌ಗೆ ಹೋಗಲು ತಯಾರಿ ನಡೆಸಿದ್ದಾಗಲೇ ನನ್ನ ಗಂಡ ಜಗಳಕ್ಕೆ ನಿಂತ. ಮಕ್ಕಳೆದುರೇ ಎರಡು ಏಟು ಹೊಡೆದೂ ಬಿಟ್ಟ. ಮನಸ್ಸು ಕೆಟ್ಟು ಹೋಯ್ತು. ಎಲ್ಲಾದರೂ ಒಂದು ಕಡೆ ಒಬ್ಬಳೇ ಕೂತು ಅಳಬೇಕು ಅನ್ನಿಸ್ತು. ಮನೆಯಿಂದ ಹೊರಬಂದವಳೇ ಸಿಕ್ಕಿದ ಸಿಟಿ ಬಸ್ ಹತ್ತಿ -ಲಾಸ್ಟ್ ಸ್ಟಾಪ್ ಎಂದು ಟಿಕೆಟ್ ತಗೊಂಡೆ. ನಲವತ್ತು ನಿಮಿಷದ ನಂತರ ಬಸ್ ನಿಂತಾಗ ಎದುರಿಗೆ 'ನ್ಯಾಷನಲ್ ಪೋರ್ಟ್ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಸ್ಕೂಲ್‌'ನ ಕ್ಯಾಂಪಸ್ ಕಾಣಿಸಿತು. ಮನಸ್ಸು ಬಂದಂತೆ ಹೆಜ್ಜೆ ಹಾಕಿದೆ. ಓಡಿ ಬಂದ ಸೆಕ್ಯೂರಿಟಿಯವ- ಯಾರು ನೀವು? ಎಲ್ಲಿಗೆ ಹೋಗ್ತಿದೀರ ಎಂದ. ನಾನು ಹೋಟೆಲ್ ನಡೆಸುವಾಕೆ. ಇಲ್ಲಿ ಹೋಟೆಲ್ ಆರಂಭಿಸಲು ಅರ್ಜಿ ಕರೆದಿದ್ದಾರಂತೆ. ಅದಕ್ಕೆ ಬಂದೆ. ಆಡಳಿತಾಧಿಕಾರಿಯನ್ನು ನೋಡಿ ಹೋಗ್ತೀನಿ. ಐದೇ ನಿಮಿಷದ ಮಾತು. ಒಳಗೆ ಬಿಡಿ ಎಂದೆ. ಇದಿಷ್ಟೂ ಆ ಕ್ಷಣದಲ್ಲೇ ಹೊಳೆದ ಮಾತು. ಹಾಗೆಲ್ಲಾ ಯಾಕೆ ಮಾತಾಡಿದೆ ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಆದರೆ ಮಾತಾಡಿಬಿಟ್ಟಿದ್ದೆ.
ಸೆಕ್ಯೂರಿಟಿಯವನು ಒಳಗೆ ಹೋದಷ್ಟೇ ವೇಗದಲ್ಲಿ ವಾಪಸ್ ಬಂದು-'ಸಾಹೇಬ್ರು ಕರೀತಿದ್ದಾರೆ' ಅಂದ. ನನ್ನ ಅದೃಷ್ಟಕ್ಕೆ, ಅಲ್ಲಿ ನಿಜವಾಗಿಯೂ ಹೋಟೆಲ್ ಆರಂಭಿಸಲು ಅರ್ಜಿ ಕರೆಯಲಾಗಿತ್ತು. ಆಫೀಸರ್ ಜೊತೆ ಮಾತಾಡಿದೆ. ಕೇಟರಿಂಗ್‌ನಲ್ಲಿ ನನ್ನ ಅನುಭವ ಹೇಳಿಕೊಂಡೆ. ಪರಿಣಾಮವಾಗಿ, ಕ್ಯಾಂಪಸ್‌ನಲ್ಲಿದ್ದ 700 ವಿದ್ಯಾರ್ಥಿಗಳಿಗೆ ಮೂರು ಹೊತ್ತೂ ಊಟ ಒದಗಿಸುವ ಕೆಲಸ ನನಗೆ ಸಿಕ್ಕಿತು. ವಾಸಕ್ಕೆ ಕೇಂದ್ರ ಸರ್ಕಾರದ ಕ್ವಾಟ್ರಸ್ ಸಿಕ್ಕಿತು. ಒಂದು ವಾರಕ್ಕೆ 80,000 ರೂ. ಲಾಭವಾಗುತ್ತಿತ್ತು. ಇದು ನನ್ನ ಬದುಕಿನ ಸುವರ್ಣಯುಗ. ಆಗಲೇ ಕಾಲೇಜು ಮುಗಿಸಿದ್ದ ಮಗಳು ಸಂದೀಪಾಳ ಮದುವೆ ಮಾಡಿದೆ. ಇದಾಗಿ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ಗಂಡ ತೀರಿಕೊಂಡ.
ಈ ಸಂದರ್ಭದಲ್ಲಿಯೇ ಪಾಲುದಾರಿಕೆಯಲ್ಲಿ ಸ್ಟಾರ್ ಹೋಟೆಲು ಆರಂಭಿಸಲು ದೊಡ್ಡ ಕಂಪನಿಯೊಂದು ಆಹ್ವಾನಿಸಿತು. ಈ ಮಾತುಕತೆಯಲ್ಲಿ ಬಿಜಿಯಾಗಿದ್ದಾಗಲೇ, ನಾವ್ಯಾರೂ ಊಹಿಸದಿದ್ದ ದುರಂತ ನಡೆದುಹೋಯಿತು. ದಿಂಡಿಗಲ್‌ನಿಂದ ಚೆನ್ನೈಗೆ ಬರುತ್ತಿದ್ದ ಮಗಳು-ಅಳಿಯ, ಅಳಿಯನ ತಮ್ಮ-ಹೆಂಡತಿ, ಚೆಂಗಲ್‌ಪೇಟೆಯ ಬಳಿ ಜರುಗಿದ ಭೀಕರ ಕಾರು ಅಪಘಾತದಲ್ಲಿ ಸ್ಥಳದಲ್ಲೇ ಸತ್ತು ಹೋದರು. ಗೋಳಾಡುತ್ತಲೇ ಸ್ಥಳಕ್ಕೆ ಹೋದರೆ, ಶವಗಳು ಅನಾಥವಾಗಿ ಬಿದ್ದಿದ್ದವು. ಆ್ಯಂಬುಲೆನ್ಸ್‌ನಲ್ಲಿ ಅವುಗಳನ್ನು ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಒಪ್ಪಲಿಲ್ಲ. ಕಡೆಗೆ ಒಂದು ಬಾಡಿಗೆ ಕಾರಿನ ಡಿಕ್ಕಿಯಲ್ಲಿ ಎಲ್ಲ ಶವಗಳನ್ನು ಮೂಟೆ ತುರುಕಿದಂತೆ ತುರುಕಿ ಅಂತ್ಯ ಸಂಸ್ಕಾರಕ್ಕೆ ತಂದರು. ವಿಪರ್ಯಾಸ ನೋಡಿ; ಆಕ್ಸಿಡೆಂಟ್ ಆಗುವ ಐದು ನಿಮಿಷ ಮೊದಲು ಮಗಳು ಫೋನ್ ಮಾಡಿದ್ದಳು. ನಿನ್ನ ಕೈ ತುತ್ತು ತಿನ್ನಬೇಕು ಅನ್ನಿಸ್ತಿದೆಯಮ್ಮಾ. ಬಿರಿಯಾನಿ, ಪಾಯಸ ಮಾಡಿರು. ಬೇಗ ಬರ್ತೀನಿ ಎಂದಿದ್ದಳು. ಸಡಗರದಿಂದ ಅಡುಗೆ ತಯಾರಿಸಿ  ಹೊರಗೆ ಬಂದಾಕ್ಷಣ ಸಾವಿನ ಸುದ್ದಿ ಕಿವಿಗೆ ಬಿದ್ದಿತ್ತು:
ನಮ್ಮ ಆಸೆ, ಕನಸು, ನಿರೀಕ್ಷೆಗಳಿಗೆ ಅರ್ಥವಿಲ್ಲ ಅನ್ನಿಸಿದ್ದೇ ಆಗ. ಎಲ್ಲಕ್ಕಿಂತ ಹೆಚ್ಚಾಗಿ ಮೃತದೇಹಗಳನ್ನು ಆ್ಯಂಬುಲೆನ್ಸ್‌ಗೆ ಹಾಕದ ಸಿಬ್ಬಂದಿಯ ವರ್ತನೆ ನನಗೆ ಅತಿಯಾದ ನೋವು ನೀಡಿತು. ತಕ್ಷಣವೇ ಐದು ಆ್ಯಂಬುಲೆನ್ಸ್‌ಗಳನ್ನು ಖರೀದಿಸಿ, ದಿಂಡಿಗಲ್‌ನಿಂದ ಚೆನ್ನೈಗೆ ಹೋಗಿ ಬರುವ ರೋಗಿಗಳಿಗೆ ಉಚಿತ ಸೇವೆ ಒದಗಿಸಲು ಮುಂದಾದೆ. 2004ರಲ್ಲಿ ಆರಂಭವಾದ ಈ ಸೇವೆ, ನಾನು ಬದುಕಿರುವವರೆಗೂ ಮುಂದುವರಿಯುತ್ತದೆ.
ಈಗ ಚೆನ್ನೈನ ವಿವಿಧ ಭಾಗಗಳಲ್ಲಿ ಸಂದೀಪಾ ಹೆಸರಿನ 14 ಎ.ಸಿ. ರೆಸ್ಟೋರೆಂಟ್‌ಗಳನ್ನು ಆರಂಭಿಸಿದ್ದೇನೆ. ಗ್ರಾಹಕರಿಗೆ ಮನೆಯ ತಿಂಡಿ ತಿಂದಂಥ ಅನುಭವ ಸಿಗುವಂತೆ ನೋಡಿಕೊಂಡಿದ್ದೇನೆ. ಗ್ರಾಹಕರ ವೇಷದಲ್ಲಿ ನನ್ನ ಮಗಳು- ಅಳಿಯನೇ ಬರ್ತಾನೆ ಎಂದು ಭಾವಿಸಿ ತಿಂಡಿ ತಯಾರಿಸುತ್ತೇನೆ. ವ್ಯಾಪಾರ ಭರ್ಜರಿಯಾಗಿದೆ. 2010ರಲ್ಲಿ ಕೇಂದ್ರ ಸರ್ಕಾರ, ದೇಶದ ಅತ್ಯುತ್ತಮ ಮಹಿಳಾ ಉದ್ಯಮಿ ಎಂದು ಗೌರವಿಸಿದೆ. ಕೇವಲ 50 ಪೈಸೆ ಲಾಭದೊಂದಿಗೆ ಬದುಕು ಆರಂಭಿಸಿದ ನಾನು ಈಗ ದಿನಕ್ಕೆ ಎರಡೂವರೆ ಲಕ್ಷ ರೂ. ಎಣಿಸ್ತಾ ಇದೀನಿ. 200 ಮಂದಿಗೆ ಕೆಲಸ ಕೊಟ್ಟಿದ್ದೀನಿ. ಎಲ್ಲ ನೌಕರರ ಮಕ್ಕಳ ಹೆಸರಲ್ಲಿ ತಲಾ 2000 ರೂ. ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದೀನಿ. ಇದೆಲ್ಲಾ ನನ್ನ ಮಗಳ ನೆನಪಿಗೆ. ಇಷ್ಟಲ್ಲದೆ ಅವಳ ಬರ್ತ್‌ಡೇ ದಿನ ಆಸ್ಪತ್ರೆಗೆ ಭೇಟಿ ನೀಡಿ ಹಾಲು-ಹಣ್ಣು ಹಂಚಿ ಬರ್ತೀನಿ. ಪ್ರತಿ ವರ್ಷವೂ ಒಂದಷ್ಟು ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡ್ತೇನೆ. ಆ ಸಂದರ್ಭದಲ್ಲಿ ಮಗಳು, ಯಾವುದೋ ಮೂಲೆಯಲ್ಲಿ ನಿಂತು 'ಲವ್ ಯೂ ಮಮ್ಮೀ' ಎಂದಂತೆ ಭಾಸವಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲ ದುಃಖದ ಕೈಗೆ ಮನಸ್ಸು ಒಪ್ಪಿಸಿ ಕೂತುಬಿಡ್ತೀನಿ. ಈಗ, ಹೋಟೆಲಿನ ಜವಾಬ್ದಾರಿ ಹೊರಲು ಮಗ ಇದ್ದಾನೆ. ನಮಗಾಗಿ ತುಂಬಾ ಕಷ್ಟಪಟ್ಟಿದ್ದೀಯ. ರೆಸ್ಟ್ ತಗೋ ಎಂದು ಕಾಳಜಿ ತೋರುತ್ತಾನೆ. ಬರೀ 30 ವರ್ಷದ ಹಿಂದೆ ನನ್ನನ್ನು ಗೇಲಿ ಮಾಡುತ್ತಿದ್ದ ಬಂಧುಗಳು ಈಗ - 'ವಿ ಆರ್ ಪ್ರೌಡ್ ಆಫ್ ಯೂ' ಎಂದು ಚೀರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ, ಎಲ್ಲರಿಗೂ ನಾನು ಹೇಳಬಯಸುವುದಿಷ್ಟೆ: ಕಷ್ಟ ಬಂದಾಗ ಕಂಗಾಲಾಗಬೇಡಿ. ಅವಡುಗಚ್ಚಿ ನಿಂತು ಎದುರಿಸಿ...'
ಛಲವೊಂದು ಜೊತೆಗಿದ್ದರೆ, ಗಾಡ್‌ಫಾದರ್‌ಗಳ ಬೆಂಬಲ ಇಲ್ಲದೆಯೂ ಬಾಳ ಹೋರಾಟದಲ್ಲಿ ಗೆಲ್ಲಬಹುದು ಎನ್ನುವ ಪಟ್ರೇಸಿಯಾ ನಾರಾಯಣ್ ಅವರ ಮೇಲ್ ಐಡಿ: Petty.patty9333@gmail.com

-ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com