ಗುಲಬರ್ಗದಿಂದ ಒಬ್ಬ ಹುಡುಗ ಫೋನ್ ಮಾಡಿದ್ದ. ನೇರವಾಗಿ 'ನೀವು ಸುವರ್ಣ ನ್ಯೂಸ್‌ನವರು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಬೇಕು ಸಾರ್. ಟಿ.ಆರ್.ಪಿ.ಗಾಗಿ ಕಾರ್ಯಕ್ರಮ ಮಾಡಬೇಡಿ' ಅನ್ನೋ ಸಿದ್ಧಭಾಷಣ ಓದಿದ.
ಪ್ರತಿಯೊಬ್ಬರೂ ಹೇಳೋ ಮಾತಿದು. ನ್ಯೂಸ್ ಚಾನೆಲ್‌ನವರು ಟಿ.ಆರ್.ಪಿ.ಗಾಗಿ ಏನೇನೋ ಮಾಡ್ತಾರೆ ಅನ್ನುವುದು ಅವರ ದೂರು. ಹಂಗೆ ಹೇಳೋರು ಒಂದು ಬುಧವಾರ ಬೆಳಿಗ್ಗೆ ಯಾವುದಾದರೂ ನ್ಯೂಸ್ ಚಾನೆಲ್ ಆಫೀಸಿಗೆ ಬರಬೇಕು. ಆವತ್ತು ಟಿ.ಆರ್.ಪಿ. ಬಂದಿರತ್ತೆ. ಕೆಲವರು ಮೀಸೆ ತಿರುವಿಕೊಂಡು ಓಡಾಡುತ್ತಿರುತ್ತಾರೆ. ಇನ್ನೂ ಕೆಲವರು ಕೆಳಗೆ ಹಾಕಿದ ತಲೆ ಮೇಲೆತ್ತದೆ ಮೂಲೆಯಲ್ಲಿ ಕುಳಿತಿರುತ್ತಾರೆ. ಮತ್ತೆ ಕೆಲವರು ತಮಗೆ ತಾವೇ ಸಮರ್ಥನೆ -ಸಮಾಧಾನ ಹೇಳಿಕೊಂಡು ಅದನ್ನ ಆಫೀಸಿನ ಹಿರಿತಲೆಗಳ ತನಕ ತಲುಪಿಸೋದಕ್ಕೆ ಶತಪ್ರಯತ್ನ ಮಾಡ್ತಿರ್ತಾರೆ.
ಪತ್ರಿಕೆ - ಮತ್ತು ಸುದ್ದಿ ವಾಹಿನಿಗಳಿಗಿರುವ ಪ್ರಮುಖ ವ್ಯತ್ಯಾಸವೇ ಇದು. ಪತ್ರಿಕೆಗಳಿಗೆ 6 ತಿಂಗಳಿಗೊಮ್ಮೆ ಸರ್ಕ್ಯುಲೇಷನ್ ಗೊತ್ತಾಗತ್ತೆ. ಯಾರನ್ನ ಯಾರು ಹಿಂದಿಕ್ಕಿದರು ಅನ್ನೋದರ ಲೆಕ್ಕಾಚಾರ ತಿಳಿಯತ್ತೆ. ತಲೆ ತಗ್ಗಿಸಬೇಕಾದವರು ತಗ್ಗಿಸಿ, ಬೆನ್ನು ಚಪ್ಪರಿಸಿಕೊಳ್ಳಬೇಕಾದವರು ಚಪ್ಪರಿಸಿಕೊಂಡು ಸುಮ್ಮನಾಗ್ತಾರೆ. ಮತ್ತೆ ಆರು ತಿಂಗಳ ಕಾಲ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ನ್ಯೂಸ್ ಚಾನೆಲ್‌ನಲ್ಲಿ ಅದು ಪ್ರತಿ ವಾರದ ಪ್ರಕ್ರಿಯೆ (ಈಗ ಪರವಾಗಿಲ್ಲ, ಮೊದಲು ವಾರಕ್ಕೆರಡು ಸಲ ಬರ್ತಿತ್ತು!)
ಪತ್ರಿಕೆಯ ಸರ್ಕ್ಯುಲೇಷನ್ ಇಡೀ ಪತ್ರಿಕೆಯ ಸಾಧನೆ. ಅಲ್ಲಿ ಯಾವ ಕಾಲಂ ಎಷ್ಟು ಜನ ಓದಿದರು, ಯಾವ ಅಂಕಣಕಾರ ಹೆಚ್ಚು ಜನರನ್ನ ತಲುಪಿದ, ಯಾವತ್ತಿನ ಪತ್ರಿಕೆ ತುಂಬ ಓದಿಸಿಕೊಂಡಿತು, ಯಾವ ಪುರವಣಿ ಹೆಚ್ಚು ಜನಪ್ರಿಯ, ಊಹೂಂ...ಇಂಥ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಆದರೆ, ಟಿ.ಆರ್.ಪಿ. ಹಂಗಲ್ಲ. ಅದು ಪ್ರತಿ ಕಾರ್ಯಕ್ರಮದ ಹಣೆಬರಹವನ್ನೂ ಹೇಳಿಬಿಡತ್ತೆ. ಯಾವ ಕಾರ್ಯಕ್ರಮವನ್ನ ಎಷ್ಟು ಜನ ನೋಡಿದರು, ನೋಡಿದವರ ಪೈಕಿ ಯಾವ ವಯಸ್ಸಿನವರು ಎಷ್ಟು ಜನ, ಪೂರ್ತಿಯಾಗಿ ನೋಡಿದರೋ, ಅರ್ಧಕ್ಕೇ ಬದಲಾಯಿಸಿದರೋ, ಅರ್ಧ ಗಂಟೆಯ ಕಾರ್ಯಕ್ರಮವನ್ನ ಸರಾಸರಿ ಎಷ್ಟು ನಿಮಿಷ ನೋಡಿದರು, ಬ್ರೇಕ್‌ನಲ್ಲಿ ಎಷ್ಟು ಜನ ಚಾನೆಲ್ ಬದಲಿಸಿದರು, ಬ್ರೇಕ್ ಮುಗಿದ ಮೇಲೆ ಎಷ್ಟು ಜನ ಮತ್ತೆ ಅದೇ ಕಾರ್ಯಕ್ರಮಕ್ಕೆ ವಾಪಸ್ ಬಂದರು, ಬರದವರು ಬೇರೆ ಯಾವ ಚಾನೆಲ್ ನೋಡತೊಡಗಿದರು, ಹೀಗೆ ಎಲ್ಲವೂ ತಿಳಿದು ಹೋಗುತ್ತದೆ. ಮೈಸೂರಿನ ತನಕ ಹೋಗಿ ಮಲ್ಲಿಗೆ ಬೆಳೆದ ರೈತನ ಬವಣೆಯ ಬಗ್ಗೆ ಕಾರ್ಯಕ್ರಮ ಮಾಡಿದವನೆದುರು, ಯೂ ಟ್ಯೂಬ್‌ನಿಂದ ಐಶ್ವರ್ಯ ರೈಳ ವಿಡಿಯೋ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಕೆಂಪು ಬಾಣದ ಗುರುತು ಹಾಕಿ ಪ್ರಸಾರ ಮಾಡಿದವನು ಮೀಸೆ ತಿರುವಿಕೊಂಡು ಓಡಾಡುತ್ತಿರುತ್ತಾನೆ!
ಆವತ್ತೇ ಮಧ್ಯಾಹ್ನದ ಮೀಟಿಂಗ್‌ನಲ್ಲಿ ಕಡಿಮೆ ಟಿ.ಆರ್.ಪಿ ತಂದ ಕಾರ್ಯಕ್ರಮದ ಪ್ರೊಡ್ಯೂಸರು ಉತ್ತರ ಕೊಡಬೇಕು. ಅವನೇನೋ ಹೇಳಬೇಕು ಅನ್ನುವಷ್ಟರಲ್ಲಿ, ಆ ಮೂಲೆಯಲ್ಲಿ ಕುಳಿತವನೊಬ್ಬ 'ಆ ಕಾರ್ಯಕ್ರಮ ಮಾಡೋದು ಬೇಡ ಅಂತ ಆವತ್ತೇ ಬಡಕೊಂಡೆ, ನನ್ನ ಮಾತೆಲ್ಲಿ ಕೇಳ್ತೀರಿ?' ಅಂತ ಎಲ್ಲರಿಗೂ ಕೇಳೋಹಾಗೆ ಗೊಣಗ್ತಾನೆ. 'ಟಿ.ಆರ್.ಪಿ. ಬರದಿರೋ ಕಾರ್ಯಕ್ರಮಕ್ಕೆ ಅಷ್ಟು ಖರ್ಚು ಮಾಡೋದಕ್ಕಾಗಲ್ಲ, ಬಜೆಟ್ ಕಡಿಮೆ ಮಾಡಿಕೊಳ್ಳಿ' ಅಂತಾನೆ ಅಕೌಂಟ್ಸ್‌ನವನು. 'ಆ ಕಾರ್ಯಕ್ರಮಕ್ಕೆ ಜಾಹೀರಾತು ಕೊಡಿ ಅಂತ ಯಾರನ್ನ ಕೇಳೋಣ?' ಅನ್ನೋದು ಮಾರ್ಕೆಟಿಂಗ್‌ನವರ ಪ್ರಾಬ್ಲಮ್ಮು. ಅಂಥದ್ದೊಂದು ಮೀಟಿಂಗ್ ಮುಗಿಸಿ ಹೊರಗೆ ಬರುವಷ್ಟರಲ್ಲಿ, ಆ ಕಾನ್ಸೆಪ್ಟಿನ ಸಹವಾಸವೇ ಸಾಕು ಅನ್ನಿಸಿಬಿಟ್ಟಿರತ್ತೆ.
ಈಗ ಹೇಳಿ, ಯಾರನ್ನ ಬೈಯ್ಯಬೇಕು? ತುಂಬ ಓದಿಕೊಂಡಿದ್ದ, ಸಾಹಿತ್ಯಿಕ ಹಿನ್ನೆಲೆಯ ವ್ಯಕ್ತಿಯೊಬ್ಬರು ಒಂದು ಚಾನೆಲ್‌ನ ಕಾರ್ಯಕ್ರಮ ವಿಭಾಗಕ್ಕೆ ಮುಖ್ಯಸ್ಥರೆನ್ನಿಸಿಕೊಂಡಿದ್ದರು. ಅವರ ಕಾನ್ಸೆಪ್ಟ್ ಪ್ರಕಾರ ತಯಾರಾದ ಒಂದು ಕಾರ್ಯಕ್ರಮಕ್ಕೆ ಟಿ.ಆರ್.ಪಿ. ಬರ್ತಿಲ್ಲ ಅನ್ನೋದು ಆಡಳಿತ ಮಂಡಳಿಗೆ ಬೇಜಾರು ತರಿಸಿತ್ತು. ಮಾತಾಡೋದಕ್ಕೆ ಕರೆಸಿದರು. 'ಎಲ್ಲಾ ಕಾರ್ಯಕ್ರಮಗಳನ್ನ ಟಿ.ಆರ್.ಪಿ.ಗಾಗಿ ಮಾಡೋದಕ್ಕಾಗಲ್ಲ ಸಾರ್. ಒಂದು ಮನೆ ಎದುರಿಗೆ ತುಳಸಿ ಗಿಡ ಇರೋದರಿಂದ ಯಾವ ಲಾಭವೂ ಇಲ್ಲ. ಆದರೆ, ತುಳಸಿ ಗಿಡ ಆ ಮನೆಗೆ ಲಕ್ಷಣ. ಅದೇ ರೀತಿ ತುಳಸಿಗಿಡದಂಥ ಒಂದಷ್ಟು ಕಾರ್ಯಕ್ರಮಗಳು ಇರಬೇಕು!' ಅಂದರಂತೆ ಅವರು. 'ನೂರು ಕೋಟಿ ಬಂಡವಾಳ ಹಾಕಿದ್ದರೆ ಸಂಕಟ ಅರ್ಥ ಆಗ್ತಿತ್ತು ನಿಮಗೆ' ಅಂದು ಅವರನ್ನ ಹೊರಗೆ ಕಳಿಸಲಾಯಿತು! ಇಬ್ಬರ ಪೈಕಿ ಯಾರು ಕರೆಕ್ಟು?
ಒಂದು ಸಾಮಾಜಿಕ ಕಳಕಳಿಯ ವಿಷಯ ಎತ್ತಿಕೊಂಡು, ಅದರ ಬಗ್ಗೆ ಆಮೂಲಾಗ್ರ ಸಂಶೋಧನೆ ಮಾಡಿ, ಸಂಬಂಧಪಟ್ಟ ವಿಷಯ ತಜ್ಞರನ್ನ ಮಾತಾಡಿಸಿ, ಮಾಹಿತಿ ತಗೊಂಡು ಅವರ ಪೈಕಿ ಕೆಲವರನ್ನ ಸ್ಟೂಡಿಯೋಗೆ ಕರೆಸಿ ಒಂದು ಅರ್ಥಪೂರ್ಣ ಚರ್ಚೆ ನಡೆಸುವ ಟಿ.ವಿ ವರದಿಗಾರನ ಅಷ್ಟೂ ಪ್ರಯತ್ನಕ್ಕೆ ಇನ್ನೊಂದು ಚಾನೆಲ್‌ನವರು ಸೈಫ್ ಅಲಿಖಾನ್- ಕರೀನಾ ಕಪೂರ್‌ರ ಅಫೇರ್ ಬಗ್ಗೆ ಸ್ಪೆಷಲ್ ಪ್ರೋಗ್ರಾಂ ಪ್ರಸಾರ ಮಾಡಿ ಚಪ್ಪಡಿ ಕಲ್ಲು ಎಳೆದುಬಿಡ್ತಾರೆ. ಸುವರ್ಣ ನ್ಯೂಸ್ ಏಷಿಯಾನೆಟ್ ನ್ಯೂಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿರೋದು ಅನ್ನೋ ವಿಷಯ ತುಂಬ ಜನರಿಗೆ ಗೊತ್ತಿದೆ. ಆ ಸಂಸ್ಥೆಗೆ ಕೇರಳದಲ್ಲಿ ಏಷಿಯಾನೆಟ್ ನ್ಯೂಸ್ ಅನ್ನೊ ಒಂದು ಚಾನೆಲ್ ಇದೆ. ಎರಡೂ ಒಂದೇ ಮಾತೃ ಸಂಸ್ಥೆಯ ಚಾನೆಲ್‌ಗಳಾಗಿರೋದ್ರಿಂದ ಅಲ್ಲಿ ಅತ್ಯಂತ ಯಶಸ್ವಿಯಾದ ಕಾರ್ಯಕ್ರಮದ ಕಾನ್ಸೆಪ್ಟ್‌ಗಳನ್ನ ಕನ್ನಡಕ್ಕೆ ತಂದು ಸುವರ್ಣ ನ್ಯೂಸ್‌ನಲ್ಲಿ ಪ್ರಸಾರ ಮಾಡೋದು ಅಂತಾಗಿತ್ತು. ಮೊದಲಿಗೆ ಆಯ್ಕೆಯಾದದ್ದು 'ಮಹಾಪತನ' ಅನ್ನೋ ಕಾರ್ಯಕ್ರಮ. ತುಂಬ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದು, ನಂತರ ನೇಪಥ್ಯಕ್ಕೆ ಸರಿದುಹೋದ ಪ್ರಸಿದ್ಧರ ಬಗೆಗಿನ ಕಾರ್ಯಕ್ರಮ ಅದು. ಅರ್ಧ ಗಂಟೆಯಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವ ಕಟ್ಟಿಕೊಡಬೇಕು. ಕೇರಳದಲ್ಲಿ ಸೂಪರ್‌ಹಿಟ್ ಆದ ಕಾರ್ಯಕ್ರಮ. ಅದನ್ನ ತ್ರಿಕರಣ ಶುದ್ಧಿಯಿಂದ ಕನ್ನಡಕ್ಕೆ ತಂದ್ವಿ. ಆದರೆ, ಅಟ್ಟರ್ ಫ್ಲಾಪು! 'ನೀವು ಜ್ಯೋತಿಷಿಗಳನ್ನ ಕೂರಿಸಿಕೊಂಡು ಪ್ರಳಯ - ಜಾತಕದ ಚರ್ಚೆ ಮಾಡಿಕೊಂಡಿರಿ. ಇಂಥವನ್ನೆಲ್ಲ ನಿಮ್ಮ ಜನ ನೋಡಲ್ಲ' ಅಂತ ವ್ಯಂಗ್ಯದ ಮಾತಾಡಿದರು ಮಲೆಯಾಳಂ ಚಾನೆಲ್‌ನ ಜನ. ಕೇರಳದ ಯಾವುದೇ ಚಾನೆಲ್‌ನ ನೋಡಿ. ಬಹಳ ರಚನಾತ್ಮಕ ಕಾರ್ಯಕ್ರಮಗಳು ಬರುತ್ತವೆ. ಒಂದು ದಿನ ಸಂಜೆ ಹೊತ್ತಿನ ಪ್ರೈಮ್‌ಟೈಮ್‌ನಲ್ಲಿ ದಪ್ಪ ಕನ್ನಡಕದ, ಢಾಳ ಬಣ್ಣದ ಚೂಡಿದಾರ್ ಹಾಕಿಕೊಂಡ ಮಧ್ಯವಯಸ್ಕ ಹೆಣ್ಣುಮಗಳೊಬ್ಬಳು ನ್ಯೂಸ್ ಓದುತ್ತಿದ್ದಳು. 'ಇದೇನಯ್ಯಾ ಹಿಂಗೆ?' ಅಂತ ಕೇರಳದ ಗೆಳೆಯನೊಬ್ಬನನ್ನ ಕೇಳಿದೆ. 'ಯಸ್, ಆಕೆ ನಮ್ಮ ರಾಜ್ಯದಲ್ಲಿ ತುಂಬ ಪಾಪ್ಯುಲರ್. ಬಹಳ ಓದಿಕೊಂಡಿರೋರು. ಜಗತ್ತಿನ ಆಗುಹೋಗುಗಳ ಬಗ್ಗೆ ಸ್ವಂತ ಅಭಿಪ್ರಾಯ ಇಟ್ಟುಕೊಂಡಿರೋ ಮಹಿಳೆ. ನಿಮ್ಮಲ್ಲಿ ತೆಳ್ಳಗೆ ಬೆಳ್ಳಗೆ ಇರೋರು ನ್ಯೂಸ್ ಆ್ಯಂಕರ್ ಆಗ್ತಾರೆ. ನಮ್ಮಲ್ಲಿ ಬುದ್ಧಿ - ಜಾಣ್ಮೆ ಇರೋರು ಆಗ್ತಾರೆ' ಅಂದ ಆತ.
ಹಂಗಾದರೆ ನಮ್ಮಲ್ಲಿ ಪ್ರಬುದ್ಧ ವೀಕ್ಷಕರೇ ಇಲ್ಲವಾ? ಖಂಡಿತಾ ಇದ್ದಾರೆ. ಅವರೊಂಥರಾ ಪ್ರಜ್ಞಾವಂತ ನಾಗರಿಕರಿದ್ದಂತೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ, ಹೆಚ್ಚುತ್ತಿರುವ ಭ್ರಷ್ಟಾಚಾರ- ವಂಶಪಾರಂಪರ್ಯ ರಾಜಕೀಯ ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಎಲೆಕ್ಷನ್ ದಿನ ಟ್ರಿಪ್ಗೆ ಹೋಗೋದು ಅವರ ಗುಣ. ಓಟು ಹಾಕಿ ರಾಜಕಾರಣಿಗಳನ್ನ ಆರಿಸೋರು ಮತ್ತದೇ ಅನಕ್ಷರಸ್ಥ ಮತದಾರರು! ನ್ಯೂಸ್ ಚಾನೆಲ್‌ಗಳ ಮೇಲೆ ಹರಿಹಾಯುವವರಿಗೆ ಯಾವ್ಯಾವ ಕಾರ್ಯಕ್ರಮಕ್ಕೆ ಎಷ್ಟೆಷ್ಟು ಟಿ.ಆರ್.ಪಿ. ಬಂದಿದೆ ಅನ್ನೋದರ ಲೆಕ್ಕ ಕೊಡಲಾ? ಕ್ರೈಂ ಕಾರ್ಯಕ್ರಮದಲ್ಲಿ ಮಗನನ್ನ ಕಳಕೊಂಡ ಅಸಹಾಯಕ ತಾಯಿಯ ಅಳಲಿನ ಕಥೆ ಹೇಳಿದರೆ ಎಷ್ಟು ಜನ ನೋಡ್ತಾರೆ, ಮಿನಿ ಸ್ಕರ್ಟ್ ಹಾಕಿಕೊಂಡ ಹುಡುಗಿಯರು ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಕಥೆ ಹೇಳಿದರೆ ಎಷ್ಟು ಜನ ನೋಡ್ತಾರೆ ಅನ್ನೋದರ ಲೆಕ್ಕ ಕೊಡಲಾ? ನಿಬಿರು ಅನ್ನೋ ಗ್ರಹ ಅಪ್ಪಳಿಸಿ ಪ್ರಳಯ ಆಗತ್ತಾ ಎಂಬುದರ ಬಗೆಗಿನ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ನಡೆಸಿದ ಚರ್ಚೆ, ಜ್ಯೋತಿಷಿಗಳು ನಡೆಸಿದ ಚರ್ಚೆ ಎದುರು ಹೇಗೆ ಪೇಲವವಾಯಿತು ಅನ್ನೋದನ್ನ ಬಿಡಿಸಿ ಹೇಳಬೇಕಾ?
ಪ್ರಬುದ್ಧ ಮೀಡಿಯಾ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದರೆ, ಪ್ರಬುದ್ಧ ವೀಕ್ಷಕರ ಬಗ್ಗೆ ಚರ್ಚೆ ಆಗೋದೇ ಇಲ್ಲವಲ್ಲ!
----
ಸಾಮಾಜಿಕ ತಾಣಗಳಲ್ಲಿ ನಮ್ಮ ಬಗ್ಗೆ ಓತಪ್ರೋತವಾಗಿ ಬರೆಯುತ್ತಿರುವವರ ಎದುರು ಸುಮ್ಮನೆ ಒಂದು ಪ್ರಪೋಸಲ್ಲು. ಎಲ್ಲರೂ ಸೇರಿ ಧರ್ಮಾರ್ಥ ಕಾರ್ಯಕ್ಕಾಗಿ ನೂರು ಕೋಟಿ ವಿನಿಯೋಗಿಸಬಲ್ಲ ಪುಣ್ಯಾತ್ಮರೊಬ್ಬರನ್ನ ಹುಡುಕೋಣ. ಒಂದು ನ್ಯೂಸ್ ಚಾನೆಲ್ ಹೇಗಿರಬೇಕು, ಎಂಥ ನ್ಯೂಸ್ ಕೊಡಬೇಕು ಎಂಬುದರ ಬಗ್ಗೆ ಇಷ್ಟೊಂದು ತಿಳಿದುಕೊಂಡಿರುವ ನೀವೇ ಸಾಕು. ಇಂಥದ್ದೊಂದು ಸಾಮಾಜಿಕ ಸೇವೆಗಾಗಿ ನೀವು ಸಂಬಳ ಕೇಳಲ್ಲ ಅನ್ನೋ ಗ್ಯಾರಂಟಿ ಇದೆ. ಇನ್ನು ಅದೆಷ್ಟೇ ಜಿಪುಣತನದಿಂದ ಒಂದು ಚಾನೆಲ್ ನಡೆಸಿದರೂ ತಿಂಗಳಿಗೆ ಒಂದೂವರೆ ಕೋಟಿ ಹಣ ಬೇಕು. ಇನ್ನು ಕ್ಯಾರೇಜ್ ಫೀ ಅಂತ ಒಂದು ವರ್ಷಕ್ಕೆ ಹೆಚ್ಚೂ ಕಡಿಮೆ ಹತ್ತು ಕೋಟಿ ರುಪಾಯಿಗಳನ್ನ ಕೇಬಲ್ ಆಪರೇಟರ್‌ಗಳಿಗೆ ಕೊಡಬೇಕು. ನೂರು ಕೋಟಿ ಬಂಡವಾಳ ಹಾಕಿದ, ತಿಂಗಳಿಗೆ ಒಂದೂವರೆ ಕೋಟಿ ರುಪಾಯಿಗಳನ್ನ ಧರ್ಮಾರ್ಥ ಕಾರ್ಯಕ್ಕೆ ವಿನಿಯೋಗಿಸುವ ಪುಣ್ಯಾತ್ಮರು ಆ ಹತ್ತು ಕೋಟಿ ಕೊಡಲ್ಲ ಅಂದಾರೆಯೇ? ಉಳಿದ ಬೇಜವಾಬ್ದಾರಿ ಚಾನೆಲ್‌ಗಳು ಏನಾದರೂ ಹಾಕಿಕೊಂಡು ಹಾಳಾಗಿ ಹೋಗಲಿ. ನಾವು ಮಾತ್ರ ಸಮಾಜಮುಖಿ ಕಾರ್ಯಕ್ರಮಗಳನ್ನ ಮಾತ್ರ ಪ್ರಸಾರ ಮಾಡೋಣ. ಟಿ.ಆರ್.ಪಿ. ಬರದಿದ್ದರೆ ಕತ್ತೆ ಬಾಲ. ಅರೆ, ಟಿ.ಆರ್.ಪಿ ಬಂದಿಲ್ಲ ಅಂದರೆ ಜನ ನೋಡಿಲ್ಲ ಅಂತ ಅರ್ಥ! ಜನ ನೋಡಿಲ್ಲ ಅಂದ ಮೇಲೆ ಯಾವ ಪುರುಷಾರ್ಥ ಸಾಧನೆ ಆಯಿತು?
---
ಕೆಟ್ಟ ಕಾರ್ಯಕ್ರಮಗಳು ಪೈಪೋಟಿಯಲ್ಲಿ ಸೋತು ಒಂದು ಜಾಗೃತ ವೀಕ್ಷಕ ವರ್ಗ ಹುಟ್ಟಿಕೊಳ್ಳಬೇಕು. ಅದು ಬಿಟ್ಟು ಎಲ್ಲರ ಜೊತೆಗೆ ನಂದೂ ಒಂದು ಕಲ್ಲು ಅನ್ನೋ ಹಾಗೆ, ಆ ಚಾನೆಲ್‌ಗೆ ಸಾಮಾಜಿಕ ಜವಾಬ್ದಾರಿ ಇಲ್ಲ, ಅವರು ಅಷ್ಟು ದುಡ್ಡು ತಿಂದರು, ಆ ವರದಿಗಾರನಿಗೆ ಅಷ್ಟು ಹೋಯಿತು ಅಂತ ಬಾಯಿಗೆ ಬಂದಂತೆ ಮಾತಾಡಿದರೆ ಕೇಳಿಸಿಕೊಳ್ಳುವಷ್ಟು ತಾಳ್ಮೆಯಾಗಲಿ, ಉತ್ತರಿಸುವ ಸಹನೆಯಾಗಲಿ ಯಾರಿಗೂ ಇರುವುದಿಲ್ಲ!
ಟಿ.ಆರ್.ಪಿ.(ಟೆಲಿವಿಷನ್ ರೇಟಿಂಗ್ ಪಾಯಿಂಟ್), ನೀಲ್ಸನ್ ಅಂಡ್ ಕಂಟಾರ್ ಮೀಡಿಯಾ ಅನ್ನೊ ಕಂಪನಿ ನಡೆಸುವ ಸಮೀಕ್ಷೆ. ರಾಜ್ಯದ ಕೆಲವು ನಗರಗಳನ್ನಾರಿಸಿಕೊಂಡು ಅಲ್ಲಿ ಕೆಲವು ಮನೆಗಳನ್ನ ಗುರುತಿಸಿ ಅವುಗಳಲ್ಲಿ ಪೀಪಲ್ ಮೀಟರ್ ಅಂತ ಕರೆಯಲಾಗುವ ಯಂತ್ರಗಳನ್ನ ಇಡುತ್ತಾರೆ. ಹಾಗೆ ಆರಿಸಿಕೊಂಡ ಮನೆಗಳವರನ್ನ ಅವರವರ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೂರು ವಿಭಾಗಗಳನ್ನಾಗಿ ಮಾಡ್ತಾರೆ. ಆ ಮನೆಯವರು ಎಷ್ಟೊತ್ತಿಗೆ ಯಾವ್ಯಾವ ಚಾನೆಲ್ ನೋಡಿದರು, ಎಷ್ಟು ಜನ ಕುಳಿತು ನೋಡಿದರು ಅನ್ನೋ ಲೆಕ್ಕಾಚಾರವನ್ನ ಪೀಪಲ್ ಮೀಟರ್ ದಾಖಲಿಸಿಕೊಂಡಿರತ್ತೆ. ಅವುಗಳ ಅಂಕಿ ಸಂಖ್ಯೆಗಳನ್ನ ವಾರಕ್ಕೊಂದು ಸಲ ಸೇರಿಸಿ ಟಿಆರ್‌ಪಿ ಕೊಡಲಾಗತ್ತೆ. ಅದನ್ನು ಯಾವ್ಯಾವ ಊರುಗಳಲ್ಲಿ ಹಾಕಲಾಗಿದೆ, ಯಾರ ಮನೆಗಳಲ್ಲಿ ಹಾಕಲಾಗಿದೆ ಎನ್ನುವ ಮಾಹಿತಿಗಳನ್ನ ಒಂದು ಚಾನೆಲ್ ಕಂಡುಹಿಡಿಯಲು ಪ್ರಯತ್ನಿಸಿದರೆ ಅದು ಅಕ್ಷಮ್ಯ ಅಪರಾಧ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿನ ಅಷ್ಟೂ ಪೀಪಲ್ ಮೀಟರ್‌ಗಳ ಸಂಖ್ಯೆ ಹಲವು ನೂರುರಲ್ಲಿದೆ. ಬೆಂಗಳೂರು ಸೇರಿದಂತೆ ಒಂಭತ್ತು ಊರುಗಳಲ್ಲಿ ಅವನ್ನು ಹಾಕಲಾಗಿದೆ.
ಕೇವಲ ಒಂಭತ್ತು ನಗರಗಳ ಜನರೇ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಬಹುದಾ? ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿ ಬಹುಸಂಖ್ಯೆಯ ಜನ ರೈತರು. ಹಾಗಾದರೆ ರೈತರಿಗಾಗಿ ಒಂದು ಕಾರ್ಯಕ್ರಮ ಮಾಡಿದರೆ ಯಶಸ್ವಿಯಾಗಬಹುದಲ್ಲವಾ? ಸಾಧ್ಯ ಇಲ್ಲ. ಯಾಕಂದ್ರೆ, ರೈತರಿರೋದು ಹಳ್ಳಿಗಳಲ್ಲಿ. ಯಾವ ಹಳ್ಳಿಯಲ್ಲೂ ಪೀಪಲ್ ಮೀಟರ್ ಇಲ್ಲ. ಹಾಗಾದರೆ, ಈ ಸಮೀಕ್ಷೆ ತಪ್ಪಲ್ಲವಾ? ಖಂಡಿತಾ ಹೌದು. ಆದರೆ, ಟಿ.ವಿ ಕಾರ್ಯಕ್ರಮಗಳ ಜನಪ್ರಿಯತೆಯನ್ನ ಕಂಡುಕೊಳ್ಳೋದಕ್ಕೆ ಟಿ.ಆರ್.ಪಿ. ಬಿಟ್ಟರೆ ಬೇರೆ ದಾರಿಯೇ ಇಲ್ಲ. ಜಾಹೀರಾತು ಸಂಸ್ಥೆಗಳು ಆ ಟಿ.ಆರ್.ಪಿ. ಆಧಾರದ ಮೇಲೆಯೇ ಯಾವ್ಯಾವ ಕಾರ್ಯಕ್ರಮಕ್ಕೆ ಎಷ್ಟು ಜಾಹೀರಾತು ಕೊಡಬೇಕು ಅನ್ನೋದನ್ನ ನಿರ್ಧರಿಸುತ್ತಾರೆ. ಅದೇ ಟಿ.ಆರ್.ಪಿ. ಆಧಾರದ ಮೇಲೆಯೇ ಚಾನೆಲ್‌ಳವರು ತಮ್ಮ ಜಾಹೀರಾತು ಬೆಲೆಯನ್ನ ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಚೆನ್ನಾಗಿ ಟಿ.ಆರ್.ಪಿ. ಬಂದರೆ ಅನ್ನ, ಇಲ್ಲದಿದ್ದರೆ ಉಪವಾಸ ಅನ್ನೋ ಸ್ಥಿತಿ!
ಇಷ್ಟೆಲ್ಲಾ ಹೇಳಿದ ನಂತರ ಕೂಡ, ಪ್ರತಿ ಚಾನೆಲ್‌ಗಳಲ್ಲಿ ಒಂದಷ್ಟು ರಚನಾತ್ಮಕ ಕಾರ್ಯಕ್ರಮಗಳು ಬರಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಅಂಥ ಕಾರ್ಯಕ್ರಮಗಳ ಬಗ್ಗೆ ನಾಲ್ಕು ಒಳ್ಳೆಯ ಮಾತಾದರೂ ಆಡಿದರೆ, ಮಾಡುವವರಿಗೆ ಉತ್ಸಾಹ ಬಂದೀತೇನೋ?
-ಅಜಿತ್ ಹನುಮಕ್ಕನವರ್
ಸುವರ್ಣ ನ್ಯೂಸ್