ಹರಿವ ನೀರಿನೊಂದಿಗೆ ಬದುಕು ಬೆಸೆದುಕೊಂಡ ಗಂಗಾಮತಸ್ಥರು

Updated on: 

ಈ ಸಮುದಾಯಕ್ಕೆ ಗಂಗೆಯೇ ಮೂಲ. ಭೀಷ್ಮಾಚಾರ್ಯರ ವಂಶಸ್ಥರೂ ನಾವಾಗಿದ್ದೇವೆ ಎನ್ನುತ್ತಾರೆ ಈ ಜನಾಂಗದ ಜನ. ಗಂಗೆಯ ಮೂಲದವರಾದ್ದರಿಂದ ಸಮುದ್ರ, ನದಿ, ಕೆರೆ, ಹರಿಯುವ ನಾಲೆಗಳೇ ಇವರ ಪಾಲಿನ ಜೀವನಕ್ಕೆ ಆಧಾರ.
ಅವರೇ ಗಂಗಾಮತಸ್ಥರು. ಇದೊಂದು ಅದ್ಭುತ ಸಮುದಾಯ. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಸೆದುಕೊಂಡಿರುವ ಜಾತಿ ಇದಾಗಿದೆ. ಅಂದಹಾಗೆ ಗಂಗಾಮತಸ್ಥ ಎಂಬುದು ಸಂಸ್ಕೃತದಿಂದ ಬಂದಿರುವ ಪದ. ಈ ಸಮುದಾಯದ ಆಚಾರ, ವಿಚಾರಗಳಂತೂ ಬಲು ವಿಶಿಷ್ಟ. ಗಂಗಾಮತ, ಗಂಗೆಯ ಮಕ್ಕಳು, ಗಂಗೆಯ ಪುತ್ರರು, ಬೆಸ್ತ, ಜಾಲಗಾರ, ಗೌರಿಪುತ್ರ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೋಳಿ, ದೊರೆಯ, ಮೀನುಗಾರ, ಸುಣಗಾರ, ಪರಿವಾರ, ನಾಯಕ, ಬುಂಡೆ ಬೆಸ್ತರು, ತೋಟಿಗ, ತಳವಾರ ಮತ್ತು ರಾಜ ಪರಿವಾರ. ಇವೆಲ್ಲಾ ಗಂಗಾಮತಸ್ಥರಿಗೆ ಇರುವ ಇನ್ನಿತರ ಹೆಸರುಗಳು.
ಮೊದಲೇ ಹೇಳಿದಂತೆ ಇವರು ಗಂಗೆಯ ಮೂಲದವರಾದ್ದರಿಂದ ನೀರಿನ ಸಹವಾಸ ಹೆಚ್ಚು. ಅಂದರೆ, ಸಮುದ್ರ, ನದಿ, ಕೆರೆ ದಂಡೆಗಳೇ ಇವರ ನೆಲೆ. ಮೀನು ಹಿಡಿಯುವುದು, ದೋಣಿ, ತೆಪ್ಪ ನಡೆಸುವುದು ಮೂಲ ಕಸುಬು. ಜಾಲಗಾರ ಎಂದರೆ ಬಲೆ ಬೀಸುವವ, ಬೆಸ್ತ ಎಂದರೆ ಬೆತ್ತ ಹಿಡಿದು ದೋಣಿ ನಡೆಸುವವ ಎಂದರ್ಥವಂತೆ. ಇನ್ನು ಬೆಸೆದ ಎಂಬ ಪದದಿಂದ ಬೆಸ್ತ ಎಂಬುದು ಹುಟ್ಟಿಕೊಂಡಿತು ಎನ್ನುತ್ತಾರೆ ಇತಿಹಾಸ ತಜ್ಞರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಜಿಲ್ಲಾ ಕೋಶಾಧ್ಯಕ್ಷ ಡಾ. ಕೃಷ್ಣೇಗೌಡ ಅವರು ಗಂಗಾಮತಸ್ಥರ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಈ ವಿಷಯದ ಬಗ್ಗೆ ಅವರು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಸಂಪಾದಿಸಿದ್ದಾರೆ. ಸಮುದಾಯದ ವೈಶಿಷ್ಟ್ಯಗಳ ಬಗ್ಗೆ ಅವರು ಹೇಳುವುದು ಹೀಗೆ...
ಪೌರಾಣಿಕ ಹಿನ್ನೆಲೆ
ಗಂಗಾಮತಸ್ಥರು ಭೀಷ್ಮಾಚಾರ್ಯರ ವಂಶಸ್ಥರು ಎಂಬುದಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಜತೆಗೆ ಈ ಜಾತಿಯ ಜನ ತಮ್ಮನ್ನು ಮಹಾಭಾರತದ ಕಥೆಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದು ಹೇಗೆ ಎಂದರೆ, ಮಹಾಭೀಷ ಎಂಬ ರಾಜನಿಗೆ ಗಂಗೆಯ ಮೇಲೆ ಮೋಹ ಉಂಟಾಗುತ್ತದೆ. ಆತ ಆಕೆಯನ್ನು ವಿವಾಹವಾಗಲು ಬಯಸುತ್ತಾನೆ. ಒಮ್ಮೆ ಇಬ್ಬರೂ ಜೊತೆಯಲ್ಲಿದ್ದಾಗ ಬ್ರಹ್ಮ ನೋಡಿ ನೀವಿಬ್ಬರೂ ಭೂಲೋಕದಲ್ಲಿ ಜನಿಸಿ ಎಂದು ಶಾಪ ಕೊಡುತ್ತಾನೆ. ಅದರಂತೆ ಭೂಲೋಕದಲ್ಲಿ ಇಬ್ಬರ ಜನನವಾಗಿ ಮಹಾಭೀಷ ಶಂತನು ರಾಜನಾಗುತ್ತಾನೆ. ಗಂಗೆ ಗಂಗೆಯಾಗೇ ಜನಿಸುತ್ತಾಳೆ. ಶಂತನು ರಾಜ ಒಮ್ಮೆ ಭೇಟೆಗೆ ಹೋದಾಗ ಅಲ್ಲಿ ಗಂಗೆಯ ಪರಿಚಯವಾಗುತ್ತದೆ. ಆಕೆಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ, ಗಂಗೆ ವಿವಾಹಕ್ಕೆ ಮುನ್ನ ಕೆಲ ಷರತ್ತುಗಳನ್ನು ರಾಜನ ಮುಂದೆ ಇಡುತ್ತಾಳೆ.
ಕಥೆ ಹೇಳುವ ವೀರಗಲ್ಲುಗಳು
ಮದುವೆಯಾದ ಬಳಿಕ ದಂಪತಿಗೆ ಎಂಟು ಮಕ್ಕಳಾಗುತ್ತವೆ. ಆದರೆ ಗಂಗೆ ಏಳೂ ಮಕ್ಕಳನ್ನೂ ನದಿಗೆ ಎಸೆದುಬಿಡುತ್ತಾಳೆ. ಎಂಟನೇ ಮಗುವನ್ನು ಎಸೆಯಲು ಹೋದಾಗ ಶಂತನು ಆಕ್ಷೇಪ ವ್ಯಕ್ತಪಡಿಸುತ್ತಾನೆ. ಆಗ ಗಂಗೆ ಆ ಮಗುವಿನೊಂದಿಗೆ ಸ್ವರ್ಗಕ್ಕೆ ಹೊರಟು ಹೋಗುತ್ತಾಳೆ ಆ ಮಗುವೆ ಭೀಷ್ಮ. ಬಳಿಕ ಶಂತನು ಎರಡನೇ ಮದುವೆ ಆಗುತ್ತಾನೆ. ಆ ಭೀಷ್ಮಾಚಾರ್ಯನ ವಂಶದವರೇ ನಾವು ಎಂಬುದು ಗಂಗಾಮತಸ್ಥರ ಸ್ಪಷ್ಟ ಆಭಿಪ್ರಾಯ. ಯಾವುದೇ ಊರಿಗೆ ಹೋದರೂ ಅಲ್ಲಿ ಯಾವುದಾದರೂ ಶಿಲಾ ಶಾಸನ ಅಥವಾ ವೀರಗಲ್ಲುಗಳಿರುತ್ತವೆ. ಆ ವೀರುಗಲ್ಲುಗಳು ಸಾಮಾನ್ಯವಾಗಿ ಗಂಗಾಮತಸ್ಥರಿಗೆ ಸಂಬಂಧಿಸಿದ್ದಂತೆ. ಏಕೆಂದರೆ ಈ ಹಿಂದೆ ರಾಜರ ಕಾಲದಲ್ಲಿ ಗಂಗಾಮತಸ್ಥರು ನಾಯಕರಾಗಿ ಸೇನೆಯನ್ನು ಮುನ್ನಡೆಸುತ್ತಿದ್ದರಂತೆ. ಸೈನ್ಯದಲ್ಲಿ ವೀರಮರಣ ಅಪ್ಪಿದ ನೆನಪಿಗೆ ವೀರಗಲ್ಲುಗಳನ್ನು ನೆಡಲಾಗಿದೆಯಂತೆ. ಸೈನ್ಯವನ್ನು ಮುನ್ನಡೆಸುವುದರ ಜೊತೆಗೆ ರಾಜರ ಬಳಿ ಇವರು ಅಡುಗೆ ಕೆಲಸವನ್ನೂ ಮಾಡುತ್ತಿದ್ದರಂತೆ. ಅದರಲ್ಲಿಯೂ ಮಾಸಂದ ಆಡುಗೆ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಹೀಗಾಗಿ ರಾಜ ಪರಿವಾರದವರು ಎಂಬ ಹೆಸರೂ ಸಮುದಾಯದವರಿಗೆ ಬಂತು ಎಂಬ ಮಾತಿದೆ. ಕಾಡಿಗೆ ಹೋಗಿ ಬೇಟೆಯಾಡುವುದು ಇವರ ಮತ್ತೊಂದು ಹವ್ಯಾಸ ಆಗಿತ್ತಂತೆ. ಗಂಗಾಮತಸ್ಥರ ಬೇಟೆ ಸಂಸ್ಕೃತಿ ಮತ್ತು ರಾಜರ ಕಾಲದಲ್ಲಿ ಅವರು ಸೈನ್ಯವನ್ನು ಮುನ್ನಡೆಸುತ್ತಿದ್ದರು ಎಂಬುದಕ್ಕೆ ಮಂಡ್ಯ ಜಿಲ್ಲೆಯಲ್ಲಿ ಇಂದಿಗೂ ಹಲವಾರು ಶಾಸನಗಳು ಸಿಗುತ್ತವೆ ಎನ್ನುತ್ತಾರೆ ಡಾ. ಕೃಷ್ಣೇಗೌಡ ಅವರು.
ಬೇಟೆಯ ಹವ್ಯಾಸ
ಬೇಟೆ ಹವ್ಯಾಸವನ್ನು ಗಂಗಾಮತಸ್ಥರು ಇನ್ನೂ ಬಿಟ್ಟಿಲ್ಲ ಎಂಬುದಕ್ಕೂ ಸಾಕ್ಷಿ ಇದೆ. ಈಗಲೂ ಅವರು ಬಲೆ ಬೀಸಿ ಮೀನಿನ ಬೇಟೆ ಆಡುತ್ತಾರೆ. ಮಳೆಗಾಲದಲ್ಲಿ ಎಂದು ದಿನ ಕಾಡಿಗೆ ಹೋಗಿ ಅಲ್ಲಿ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ಅದರ ಮಾಂಸದಲ್ಲಿ ಊಟ ಸಿದ್ಧಪಡಿಸಿ ದೇವರಿಗೆ ನೈವೇದ್ಯ ಇಡುತ್ತಾರಂತೆ. ಈ ಸಂದರ್ಭದಲ್ಲಿ ಕಾಡಿನಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ.
ಇನ್ನು ಸೈನ್ಯದಲ್ಲಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಗಂಗಾಮತಸ್ಥರ ಕೆಲವು ಮನೆಗಳಲ್ಲಿ ಇವತ್ತೂ ಯುದ್ಧದಲ್ಲಿ ಬಳಸುತ್ತಿದ್ದ ಕತ್ತಿಗಳನ್ನು ನೋಡಬಹುದಾಗಿದೆ. ಕೆಲವರು ವೀಳ್ಯದ ಎಲೆ ತೋಟಗಳನ್ನು ಬೆಳೆಸಿದ್ದಾರೆ. ಅದಕ್ಕೂ ಹಿನ್ನೆಲೆ ಇದೆಯಂತೆ. ಇನ್ನು ಸುಣ್ಣ ಸುಡುವ ಸಂಸ್ಕೃತಿಯೂ ಇವರಲ್ಲಿದೆ. ಅದಕ್ಕಾಗಿಯೇ ಸುಣಗಾರ ಎಂಬ ಹೆಸರು ಬಂದಿರಬಹುದು.
ಕುಲದ ನ್ಯಾಯ ಪದ್ಧತಿ ಗಂಗಾಮತಸ್ಥರಲ್ಲಿ ಹಿಂದೆ ಹೆಸರುವಾಸಿಯಾಗಿತ್ತು. ಅದು ಈಗಲೂ ಇದೆ. ಕುಲದಲ್ಲಿ ಒಬ್ಬನನ್ನು ಯಜಮಾನ ಎಂದು ಘೋಷಿಸಿ ನ್ಯಾಯ ಪಂಚಾಯ್ತಿ ಸಂದಂರ್ಭದಲ್ಲಿ ಆತ ನೀಡುವ ತೀರ್ಮಾನಕ್ಕೆ ತಲೆಬಾಗುತ್ತಿದ್ದರು. ಒಂದೊಮ್ಮೆ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಇನ್ನೊಂದು ಪಂಚಾಯ್ತಿಗೆ ಹೋಗುತ್ತಿದ್ದರು. ಈ ನ್ಯಾಯ ಪದ್ಧತಿ ಇಂದೂ ಇದೆ.
ಜಾನಪದ ಕಲೆಗಳಲ್ಲಿ
ಜಾನಪದ ಕಲೆಗಳಲ್ಲಿ ಗಂಗಾಮತಸ್ಥರು ಎತ್ತಿದ ಕೈ. ಈ ಸಮುದಾಯದ ಸವಿತಾ ಚೀರ್ಕುನ್ನಯ್ಯ ಎಂಬುವರು ಪಟ್ಟದ ಕುಣಿತದಲ್ಲಿ ದೇಶ, ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಆ ಕಲೆ ಅವರಿಗೆ ರಕ್ತಗತವಾಗಿ ಬಂದಿದೆ. ಊರೂರು ತಿರುಗುತ್ತ ರಾಮ, ಕೃಷ್ಣ ಮತ್ತು ಹರಿ ಭಜನೆ ಮಾಡುವವರೂ ಈ ಜನಾಂಗದಲ್ಲಿದ್ದಾರೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಇವರು ವಿಶೇಷ ವೇಷಭೂಷಣಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು, ಮೈಗೆ ಸೊಪ್ಪು ಸುತ್ತಿಕೊಂಡು ನರ್ತಿಸುತ್ತಾರೆ. ಅವರನ್ನು ಪರದೇಶಿಗಳು ಎಂದು ಕರೆಯುತ್ತಾರೆ. ಕಾಯಿ ಪವಾಡ ಎಂಬುದು ಮತ್ತೊಂದು ಆಚರಣೆ. ಅಂದರೆ, ಇಬ್ಬರ ಮೇಲೆ ಇನ್ನಿಬ್ಬರು ನಿಲ್ಲುತ್ತಾರೆ. ಆ ಇಬ್ಬರ ಮೇಲೆ ಮತ್ತೊಬ್ಬ ನಿಲ್ಲುತ್ತಾನೆ. ಹೀಗೆ ನಿಂತು ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವುದೇ ಆ ಆಚರಣೆ. ಇನ್ನು ಕತ್ತಿ ಪವಾಡವೂ ಇವರಲ್ಲಿದೆ.
ಗಂಗಾಮತಸ್ಥರು ಹೆಣ್ಣು ದೇವರುಗಳನ್ನು ಹೆಚ್ಚಾಗಿ ಪೂಜಿಸುತ್ತಾರೆ. ಮಸಣ್ಣಮ್ಮ ಪ್ರಮುಖವಾದ ದೇವರು. ಚೌಡಮ್ಮ, ಕಾಳಮ್ಮ ದೇವರುಗಳಿಗೂ ಪೂಜೆ ಸಲ್ಲಿಕೆಯಾಗುತ್ತದೆ. ಮಧ್ಯರಾತ್ರಿ ಕಾಡಿಗೆ ಹೋಗಿ ಮಸಣಮ್ಮ ದೇವಿಗೆ ಪೂಜೆ ಮಾಡುತ್ತಾರೆ. ಪ್ರಾಣಿ ಬಲಿ ಕೊಟ್ಟು ಅದರ ಮೂಳೆಗಳನ್ನು ಮಣ್ಣಿನಲ್ಲಿ ಹೂಳುತ್ತಾರೆ. ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳು ಹಾಗೂ ಯಾರಾದರೂ ಸತ್ತಾಗ ಮಾಂಸದೂಟ ಮಾಡುವುದು ಇವರ ಇನ್ನೊಂದು ವಿಶೇಷ ಎಂಬುದು ಕೃಷ್ಣೇಗೌಡರ ವಿವರಣೆ.
ಸಮುದಾಯದ ಸ್ಥಿತಿಗತಿ
ರಾಜ್ಯದಲ್ಲಿ ಗಂಗಾಮತಸ್ಥರ ಜನಸಂಖ್ಯೆ ಸುಮಾರು 80 ಲಕ್ಷ ಇರಬಹುದು. ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿಯೂ ಈ ಸಮುದಾಯ ತೀರಾ ಹಿಂದುಳಿದಿದೆ. ನದಿ ಮತ್ತು ಸಮುದ್ರ ದಂಡೆಗಳಲ್ಲಿ ಇರುವವರು ಮೀನು ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ, ಇತರೆಡೆ ಅಂದರೆ, ಮೀನುಗಾರಿಕೆಗೆ ಕೆರೆ, ಕಟ್ಟೆಗಳನ್ನು ನಂಬಿದವರ ಬದುಕು ಕಷ್ಟಕರವಾಗಿದೆ. ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಅವರು ಸಮುದಾಯದ ಜನರನ್ನು ಸಂಘಟಿಸುತ್ತಾ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದ್ದಾರೆ.

-ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com