ನಾವೊಂದು ನಿರೀಕ್ಷೆ ಮಾಡಿದ್ದರೆ ಅದಕ್ಕೆ ವಿರುದ್ಧವೇ ಆದ ಬೆಳವಣಿಗೆಗಳು ನಡೆಯುವುದು, ನಿರೀಕ್ಷೆಗೆ ನಿಲುಕದೇ ಇರುವ ಘಟನಾವಳಿಗಳು ನಡೆಯುವುದಕ್ಕೇ ರಾಜಕೀಯ ಎನ್ನುತ್ತಾರೆ. ಇಲ್ಲಿ ಆಗಬೇಕಿರುವುದು ಆಗುವುದಿಲ್ಲ, ಅಂದುಕೊಂಡಿದ್ದು ನಿಲುಕುವುದಿಲ್ಲ. ಅದರಲ್ಲೂ ರಾಜಕೀಯದಲ್ಲಿ ನಂಬಿಕೊಂಡು ಬಂದವರು ನೆರವಿಗೆ ಬಾರದೇ ಇರುವುದೇ ಹೆಚ್ಚು. ಅದರಲ್ಲೂ ನಿರ್ಧರಿಸುವ ಅಧಿಕಾರ ಹೊಂದಿರುವವರು ನಿರೀಕ್ಷೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಎಲ್ಲವೂ ಉಲ್ಟಾಪಲ್ಟ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಉರುಳಿಸಲು ಕೆಜೆಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಡೆಸಿದ ಪ್ರಯತ್ನಗಳ ಪರಿಸ್ಥಿತಿಯೂ ಇದೇ ಆಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸಬಾರದು ಎಂಬ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ ಶಾಸಕರಿಂದ ರಾಜಿನಾಮೆ ಕೊಡಿಸಲು ಹೊರಟಾಗ ಬಿಜೆಪಿ ಸರ್ಕಾರಕ್ಕೆ ಕೇಡುಗಾಲ ಬಂತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಎಲ್ಲರ ನಿರೀಕ್ಷೆಗಳೂ ಹುಸಿಯಾಗುವ ಘಟನೆಗಳು ನಡೆದುಹೋದವು. ಜ. 23ರಂದು ಸಿ.ಎಂ. ಉದಾಸಿ ನೇತೃತ್ವದಲ್ಲಿ 13 ಶಾಸಕರು ರಾಜಿನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ತೆರಳಿದಾಗ ರಾಜಿನಾಮೆ ಸ್ವೀಕರಿಸಬೇಕಾದ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ವಿದೇಶ ಪ್ರವಾಸದಲ್ಲಿದ್ದರು. ಅವರಿಗೆ ಪ್ರತಿಕ್ರಿಯಿಸುವವರೇ ಇರಲಿಲ್ಲ. ಇದರಿಂದ ಕೆರಳಿದ ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸ್ಪೀಕರ್ ವಿರುದ್ಧ ದೂರು ಸಲ್ಲಿಸಿದರು. ಸ್ಪೀಕರ್ ಅವರನ್ನು ಕೂಡಲೇ ಕರೆಸಿ ರಾಜಿನಾಮೆ ಅಂಗೀಕರಿಸುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿದರು. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸರ್ಕಾರವನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬುದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ನಿರೀಕ್ಷೆಯಾಗಿತ್ತು.
ಏಕೆಂದರೆ, ಕೇಂದ್ರದ ಯುಪಿಎ ಸರ್ಕಾರ ಹಂಸರಾಜ್ ಬಾರಧ್ವಾಜ್ ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕು ಎಂದು. 2009ರ ಜೂನ್ ತಿಂಗಳಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಹಂಸರಾಜ್ ಬಾರಧ್ವಾಜ್ ಅವರ ನಡವಳಿಕೆಯೂ ಅದೇ ರೀತಿ ಇತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಷ್ಟು ದಿನ ಬಿಡದೆ ಕಾಡಿದರು. ಬಿಜೆಪಿ ಅಜೆಂಡಾಗಳನ್ನು ಜಾರಿಗೊಳಿಸಲು ಅಡ್ಡಿಯಾದರು. ಹೇಗಾದರೂ ಮಾಡಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ರಾಜ್ಯಪಾಲರ ಅಪೇಕ್ಷೆಯಾಗಿತ್ತು. ಇದಕ್ಕಾಗಿ ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಗೂ ಶಿಫಾರಸು ಮಾಡಿದ್ದರು. ಆದ್ದರಿಂದ ಈ ಬಾರಿಯೂ ರಾಜ್ಯಪಾಲರು ತಮ್ಮ ಅಹವಾಲು ಆಲಿಸುತ್ತಾರೆ. ಬಿಜೆಪಿ ಸರ್ಕಾರ ಕಿತ್ತೊಗೆಯಲು ಸಹಕರಿಸುತ್ತಾರೆ. ತಾವು ಮಧ್ಯೆ ಪ್ರವೇಶಿಸಿ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದುಕೊಂಡಿದ್ದರು. ಏಕೆಂದರೆ, ಜ. 23ರಂದು ಸ್ಪೀಕರ್ ಅವರು ಇರುವುದಿಲ್ಲ. ಅವರ ಲಭ್ಯತೆ ಜ. 28ರ ನಂತರವೇ ಎಂಬುದು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದರೂ ರಾಜ್ಯಪಾಲರನ್ನು ನೆಚ್ಚಿಕೊಂಡು ಜ. 23ರಂದು ಅವರೆಲ್ಲರೂ ರಾಜಿನಾಮೆ ಪ್ರಹಸನಕ್ಕೆ ಕೈಹಾಕಿದ್ದು.
ಆದರೆ, ಆಗಿದ್ದೇ ಬೇರೆ. ಅದುವರೆಗೆ ಬೆರಳು ತೋರಿಸಿದರೆ ಹಸ್ತ ನುಂಗುತ್ತಿದ್ದ ರಾಜ್ಯಪಾಲರು ಈ ಬಾರಿ ನಿಧಾನವಾಗಿ ಹೆಜ್ಜೆ ಇಟ್ಟರು. ಸ್ಪೀಕರ್ ಅವರನ್ನು ಸಮನ್ ಮಾಡಲು ನನಗೆ ಅಧಿಕಾರವಿಲ್ಲ. ಶಾಸನಸಭೆಗೆ ಸಂಬಂಧಿಸಿದಂತೆ ಅವರೇ ಮುಖ್ಯಸ್ಥರಾಗಿದ್ದು, ಅವರ ಅಧಿಕಾರ ವ್ಯಾಪ್ತಿಯಲ್ಲಿ ನಾನು ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ. ಬೇಕಿದ್ದರೆ ಬೆಂಬಲ ಹಿಂತೆಗೆದುಕೊಳ್ಳುವ ಬಗ್ಗೆ ಪತ್ರ ನೀಡಿ. ಆಗ ನೋಡೋಣ ಎಂದು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಹೇಳಿಕಳುಹಿಸಿದರು. ರಾಜ್ಯಪಾಲರ ಈ ವರ್ತನೆಯನ್ನು ನಿರೀಕ್ಷಿಸಿರದ ಕೆಜೆಪಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ ಶಾಸಕರು ಮಾತ್ರ ಭ್ರಮನಿರಸನಕ್ಕೆ ಒಳಗಾದರು. ಹಾಗೆಂದು ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತೇವೆ ಎಂದು ಪತ್ರ ನೀಡುವ ಧೈರ್ಯ ಹೋಗಿದ್ದವರಿಗೆ ಇರಲಿಲ್ಲ. ಹೀಗಾಗಿ ರಾಜಿನಾಮೆ ಪ್ರಹಸನದ ಮೊದಲನೇ ಹಂತಕ್ಕೆ ತೆರೆಬಿತ್ತು.
ಹಾಗೆಂದು ರಾಜ್ಯಪಾಲರ ಈ ವರ್ತನೆಗೆ ಕಾರಣಗಳು ಇಲ್ಲದೇ ಏನೂ ಅಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅವರನ್ನು ಅಧಿಕಾರದಲ್ಲಿ ಉಳಿಸಲು 16 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ನೋಟಿಸ್ ಜಾರಿಗೊಳಿಸುವಾಗ ಇದೇ ರಾಜ್ಯಪಾಲರು ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿ ಮಧ್ಯೆ ಪ್ರವೇಶಿಸಿದ್ದರು. ಶಾಸಕರನ್ನು ಅನರ್ಹಗೊಳಿಸದಂತೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು, ನನ್ನ ಕಾರ್ಯವ್ಯಾಪ್ತಿಯಲ್ಲಿ ಮಧ್ಯೆ ಪ್ರವೇಶಿಸಲು ನಿಮಗೆ ಅಧಿಕಾರವಿಲ್ಲ ಎಂದು ಹೇಳಿ ರಾಜ್ಯಪಾಲರ ಸೂಚನೆಯನ್ನು ತಳ್ಳಿಹಾಕಿದ್ದರು. 16 ಶಾಸಕರನ್ನು ಅನರ್ಹಗೊಳಿಸಿದ್ದರು. ಹೀಗಾಗಿ ಮತ್ತೊಮ್ಮೆ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಮೂಗುತೂರಿಸಿ ಮುಜುಗರಕ್ಕೊಳಗಾಗುವುದು ಬೇಡ ಎಂಬ ಕಾರಣದಿಂದಲೇ ರಾಜ್ಯಪಾಲರು ಸುಮ್ಮನಾಗಿದ್ದು.
ಈ ಮಧ್ಯೆ ಶಾಸಕರು ನೀಡಿದ ದೂರು ಆಧರಿಸಿ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸುವ ಸಣ್ಣದೊಂದು ಅವಕಾಶ ರಾಜ್ಯಪಾಲರ ಬಳಿ ಇತ್ತು. ಆದರೆ, ಬಹುಮತ ಸಾಬೀತಾದರೆ ರಾಜ್ಯಪಾಲರು ಪೂರ್ವಾಪರ ಯೋಚಿಸದೆ ಬಹುಮತ ಸಾಬೀತಿಗೆ ಸೂಚಿಸಿದ್ದಾರೆ ಎಂಬ ಅಪವಾದ ಅವರಿಗೆ ಬರುತ್ತಿತ್ತು. ಏಕೆಂದರೆ, ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಯಾರೂ ರಾಜ್ಯಪಾಲರಿಗೆ ಲಿಖಿತವಾಗಿ ಹೇಳಿರಲಿಲ್ಲ. ಎಲ್ಲವನ್ನೂ ಗಮನಿಸುತ್ತಿದ್ದರೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಈ ವಿಚಾರದಲ್ಲಿ ಮೌನವಾಗಿದ್ದುದರಿಂದ ರಾಜ್ಯಪಾಲರ ಕೈ ಕಟ್ಟಿಹಾಕಿದಂತಾಗಿತ್ತು. ಹೀಗಾಗಿ ತಮ್ಮ ಮುಂದಿದ್ದ ಒಂದು ಸಣ್ಣ ಅವಕಾಶವನ್ನು ರಾಜ್ಯಪಾಲರು ಕೈಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು. ಹಾಗೆಂದು ರಾಜ್ಯಪಾಲರಿಗೆ ಬಿಜೆಪಿ ಸರ್ಕಾರದ ಬಗ್ಗೆ ವಿಶೇಷ ಪ್ರೀತಿಯೇನೂ ಇಲ್ಲ. ಆದರೆ, ಸರ್ಕಾರಕ್ಕೆ ಅಪಾಯವಾಗಿ ಮುಂದಿನ ಚುನಾವಣೆಯಲ್ಲಿ ಅದು ಮತ್ತೆ ಬಿಜೆಪಿಗೆ ಲಾಭವಾದರೆ ಎಂಬ ಅನುಮಾನ ಅವರಲ್ಲಿತ್ತು. ಹೀಗಾಗಿ ಕಾರ್ಯವ್ಯಾಪ್ತಿಯ ಒಳಗೇ ಅವರು ಮುದುಡಿ ಕುಳಿತರು.
ಇದು ರಾಜಿನಾಮೆ ಪ್ರಹಸನದ ಒಂದು ಭಾಗವಾದರೆ, ಯಡಿಯೂರಪ್ಪ ಅವರ ತಂತ್ರಕ್ಕೆ ಬಿಜೆಪಿ ಹೂಡಿದ್ದ ಪ್ರತಿತಂತ್ರ ಯಡಿಯೂರಪ್ಪ ಅವರನ್ನು ಮಾತ್ರವಲ್ಲ, ಇಡೀ ರಾಜಕೀಯ ವಲಯವನ್ನೇ ಬೆಚ್ಚಿಬೀಳಿಸಿತ್ತು. ಯಡಿಯೂರಪ್ಪ ಅವರ ಬೆಂಬಲಿಗರು ಜ. 23ರಂದು ರಾಜಿನಾಮೆ ಕೊಡುತ್ತಾರೆ ಎಂದು ವಾರಕ್ಕೆ ಮುನ್ನವೇ ಘೋಷಿಸಿದ್ದೇ ಶಾಸಕರ ಪಾಲಿಗೆ ಮುಳುವಾಯಿತು. ಅಷ್ಟೇ ಅಲ್ಲ, ಯಡಿಯೂರಪ್ಪ ಮತ್ತು ಬೆಂಬಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಂತಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಬಿಜೆಪಿ ಮುಖಂಡರು ಮೊದಲು ಮಾಡಿದ ಕೆಲಸವೇ ಸ್ಪೀಕರ್ ಅವರ ವಿದೇಶ ಪ್ರವಾಸ. ನೇಪಾಳಕ್ಕೆ ಹೋಗಿಬರಬೇಕು ಎಂದು ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಮೂರು ತಿಂಗಳಿನಿಂದ ಹೇಳುತ್ತಿದ್ದರೂ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಆದರೆ, ರಾಜಿನಾಮೆ ನೀಡುವುದಾಗಿ ಘೋಷಿಸುತ್ತಿದ್ದಂತೆ ನೇಪಾಳ ಅವರನ್ನು ಕೈಬೀಸಿ ಕರೆಯಿತು. ಇದನ್ನೇ ಅನುಕೂಲಕ್ಕೆ ಬಳಸಿಕೊಂಡ ಬಿಜೆಪಿ ಸ್ಪೀಕರ್ ಅವರ ಮನವೊಲಿಸಿ ಜ. 22ರಂದೇ ನೇಪಾಳಕ್ಕೆ ಹೊರಡುವಂತೆ ನೋಡಿಕೊಂಡಿತು. ಇನ್ನು ವಿಧಾನಸಭೆ ಕಾರ್ಯದರ್ಶಿಗಳು ಕೂಡ ವಿದೇಶ ಪ್ರವಾಸದಲ್ಲಿದ್ದುದರಿಂದ ಶಾಸಕರ ರಾಜಿನಾಮೆ ಸ್ವೀಕರಿಸಲು ವಿಧಾನಸಭೆಯಲ್ಲಿ ಯಾರೂ ಇರುವುದಿಲ್ಲ ಎಂಬುದು ಬಿಜೆಪಿ ಮುಖಂಡರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ, ಬಿಜೆಪಿಯ ಈ ಎಲ್ಲಾ ಪ್ರತಿತಂತ್ರಗಳ ಬಗ್ಗೆ ಅರಿವಿಲ್ಲದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತಾವು ನಿರ್ಮಿಸಿದ್ದ ಖೆಡ್ಡಾಕ್ಕೆ ತಾವೇ ಬೀಳುವಂತಾಯಿತು.
ಹಾಗೆಂದು ರಾಜಿನಾಮೆ ಪ್ರಹಸನ ಇಲ್ಲಿಗೇ ಮುಗಿಯಿತು ಎಂದು ಹೇಳಲು ಸಾಧ್ಯವಿಲ್ಲ. ರಾಜಿನಾಮೆಗೆ ಮುಂದಾಗಿರುವ ಶಾಸಕರನ್ನು ಆಟವಾಡಿಸಲು ಸ್ಪೀಕರ್ ಅವರ ಮುಂದೆ ಸಾಕಷ್ಟು ಅವಕಾಶಗಳಿವೆ. ಏಕೆಂದರೆ, ಶಾಸಕರು ರಾಜಿನಾಮೆ ನೀಡಿದ ಕೂಡಲೇ ಅದನ್ನು ಸ್ವೀಕರಿಸಬೇಕು ಎಂಬ ನಿಯಮವೇನೂ ಇಲ್ಲ. ಅದರ ಹಿಂದಿನ ಉದ್ದೇಶ ಅರಿತುಕೊಳ್ಳುವ ಅವಕಾಶ ಸ್ಪೀಕರ್‌ಗೆ ಇರುತ್ತದೆ. ಹೀಗಾಗಿ ರಾಜಿನಾಮೆ ಪತ್ರಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಕಾಲಹರಣ ಮಾಡಲು ಅವರಿಗೆ ಅಧಿಕಾರ ಇದೆ. ಇದಕ್ಕೆ ಕಾಲಮಿತಿಯೂ ಇರುವುದಿಲ್ಲ. ಶಾಸನಸಭೆಗೆ ಸಂಬಂಧಿಸಿದಂತೆ ಸ್ಪೀಕರ್ ಅವರದ್ದೇಪರಮಾಧಿಕಾರ ಆಗಿರುವುದರಿಂದ ರಾಜ್ಯಪಾಲರೂ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ. ಶಾಸಕರ ರಾಜಿನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ ಎಂಬುದು ಗೊತ್ತಿದ್ದರೂ ರಾಜಿನಾಮೆ ಅಂಗೀಕಾರವಾದ ನಂತರವಷ್ಟೇ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಬಹುದು. ಅದುವರೆಗೆ ಅವರೂ ಮೌನ ಪ್ರೇಕ್ಷಕರಾಗಿರಬೇಕಾಗುತ್ತದೆ.
ಏಕೆಂದರೆ, ಎಸ್.ಆರ್. ಬೊಮ್ಮಾಯಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಶಾಸನಸಭೆಯಲ್ಲಿ ಸ್ಪೀಕರ್ ಅವರ ಪರಮಾಧಿಕಾರದ ಬಗ್ಗೆ ಹೇಳಿತ್ತಲ್ಲದೆ, ಸರ್ಕಾರದ ಬಲಾಬಲ ವಿಧಾನಸಭೆಯಲ್ಲೇ ನಿರ್ಧಾರವಾಗಬೇಕು ಎಂದು ತಿಳಿಸಿತ್ತು. ಅಂದರೆ, ಶಾಸಕರ ರಾಜಿನಾಮೆ ಅಂಗೀಕಾರವಾದ ಬಳಿಕವಷ್ಟೇ ವಿಧಾನಸಭೆಯಲ್ಲಿ ಬಲಾಬಲ ನಿರ್ಧಾರವಾಗಬೇಕಾಗುತ್ತದೆ. ಈ ಅಂಶವೇ ಇದೀಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹುಲ್ಲುಕಡ್ಡಿಯ ಆಸರೆಯಂತಾಗಿದೆ.
ಇನ್ನೊಂದೆಡೆ ಸಿಕ್ಕಿದ ಸಮಯಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಕೂಡ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ರಾಜಿನಾಮೆ ನೀಡಲು ಮುಂದಾಗಿರುವ ಕೆಲವು ಶಾಸಕರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಶ್ವಾಸಮತ ಯಾಚಿಸಬೇಕಾದ ಪರಿಸ್ಥಿತಿ ಬಂದಲ್ಲಿ ಪಕ್ಷೇತರರನ್ನು ಕಲಾಪದಿಂದ ದೂರ ಉಳಿಯುವಂತೆ ಮನವೊಲಿಸುವಲ್ಲಿ ಒಂದು ಹಂತದ ಸಫಲತೆಯನ್ನೂ ಸಾಧಿಸಿದೆ. ಈ ವಿಚಾರಗಳು ಈಗ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ತಲೆಗೆ ಹುಳ ಬಿಟ್ಟಂತಾಗಿದೆ. ಜತೆಗೆ ರಾಜ್ಯಪಾಲರು ಸೇರಿದಂತೆ ಪ್ರತಿಪಕ್ಷಗಳಿಂದ ಸರ್ಕಾರ ಉರುಳಿಸುವ ತಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಬೆಂಬಲ ಸಿಗದಿರುವುದು ಕೂಡ ಅವರನ್ನು ರೊಚ್ಚಿಗೆಬ್ಬಿಸಿದೆ. ಇದರ ಪರಿಣಾಮವೇ ಹೇಗಾದರೂ ಮಾಡಿ ಸರ್ಕಾರ ಉರುಳುವಷ್ಟು ಸಂಖ್ಯಾಬಲವನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಎಂದು ಶತಪ್ರಯತ್ನದಲ್ಲಿ ತೊಡಗಿದ್ದಾರೆ. ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಶಾಸಕರು ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಈಗಾಗಲೇ ರಾಜಿನಾಮೆ ಕೊಡಲು ಮುಂದಾಗಿರುವ ಕೆಲ ಶಾಸಕರು ಎಲ್ಲಿ ಹಿಂದೆ ಸರಿಯುತ್ತಾರೋ ಎಂಬ ಆತಂಕವೂ ಕಾಡುತ್ತಿದೆ.
ಆದರೆ, ಈ ಎಲ್ಲಾ ಪ್ರಹಸನಗಳಿಗೆ ತೆರೆ ಎಳೆಯಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಇನ್ನೆರಡು ದಿನಗಳಲ್ಲಿ ಶಾಸಕರ ರಾಜಿನಾಮೆ ವಿಚಾರ ಇತ್ಯರ್ಥವಾಗುತ್ತದೆ. ಸಂಖ್ಯಾಬಲವೂ ಗೊತ್ತಾಗುತ್ತದೆ. ಸರ್ಕಾರ ಉಳಿಯುವುದೋ, ಉರುಳುವುದೋ ಎಂಬುದೂ ನಿರ್ಧಾರವಾಗುತ್ತದೆ. ಏನೇ ಆದರೂ, ಎಲ್ಲವೂ ತಮ್ಮಿಚ್ಛೆಯಂತೆ ನಡೆಯಬೇಕು ಎಂದು ಹೇಳುವವರಿಗೆ ರಾಜಕೀಯ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಈ ಪ್ರಕರಣದಲ್ಲಿ ಸಾಬೀತಾಗಿದೆ.
ಲಗೋರಿ: ನಟ ಒಬ್ಬನೇ ಆದರೂ ಕಥೆಗೆ ತಕ್ಕಂತೆ ಪಾತ್ರ ಬದಲಾಗುತ್ತದೆ.
- ಪಿ. ತ್ಯಾಗರಾಜ್
thyagarjun@gmail.com