ಉಗ್ರನನ್ನು ಉಳಿಸಲು ಚೀನಾದೊಂದಿಗೆ ಕೈ ಜೋಡಿಸಿತೇ ಕಾಂಗ್ರೆಸ್?
ರಾಹುಲ್ ಗಾಂಧಿಯವರು ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಕ್ಷಣಗಳಲ್ಲಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಲಕ್ಷಾಂತರ ಜನ ನೆರೆದಿದ್ದ ಚಿಂತನ ಶಿಬಿರದಲ್ಲಿ ಚಿಂತಿಸಲೇಬೇಕಾದ ವಿಷಯವೊಂದನ್ನು ಪ್ರಸ್ತಾಪಿಸಿದರು. 'ಒಂದೆಡೆ ನಾವು ದೇಶದಲ್ಲಿ ಶಾಂತಿ ಸ್ಥಾಪನೆ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ನುಸುಳುಕೋರರನ್ನು ತಡೆಯುವ ಜೊತೆಗೆ ಅಲ್ಪಸಂಖ್ಯಾತರ ವಿರುದ್ಧ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೆ ಇವೆಲ್ಲದರ ಮಧ್ಯೆ, ಆರ್ಎಸ್ಎಸ್ ಮತ್ತು ಬಿಜೆಪಿ ದೇಶದಲ್ಲಿ ಉಗ್ರಗಾಮಿ ಶಿಬಿರಗಳನ್ನು ನಡೆಸಿ, ಹಿಂದೂ ಉಗ್ರವಾದಿಗಳನ್ನು ಬೆಳಸುತ್ತಿವೆ ಎಂಬ ತನಿಖಾ ವರದಿ ನಮಗೆ ದೊರೆತಿದೆ. ಈ ಕುರಿತು ನಾವು ಜಾಗರೂಕತೆಯಿಂದ ಇದ್ದೇವೆ' ಎಂದು ಹೇಳಿದರು.
ದೇಶದ ಗೃಹ ಸಚಿವರಿಂದ ಹೊರಬಿದ್ದ ಈ ಮಾತುಗಳು ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸಿದವು. ಕ್ಯಾಬಿನಟ್ ಸಚಿವರಿಗೆ ತಾವೇನು ಮಾತನಾಡಬೇಕು, ಮಾತನಾಡಿದ ನಂತರ ಆ ಕುರಿತು ಯಾವ ರೀತಿಯ ಚರ್ಚೆಗಳು ಹುಟ್ಟಿಕೊಳ್ಳಬಹುದು ಎನ್ನುವುದರ ಬಗ್ಗೆ ಅರಿವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಅವರು ಆರ್ಎಸ್ಎಸ್ನ ಸ್ವಯಂ ರಕ್ಷಣಾ ತರಬೇತಿಗಳಿಗೆ ಉಗ್ರಗಾಮಿ ಶಿಬಿರಗಳೆಂದು ಖಂಡಿತವಾಗಿಯೂ ಅಂದಿರಲಾರರು. ಮಾನ್ಯ ಶಿಂಧೆ ಸಾಹೇಬರು, ಬಿಜೆಪಿ ಮತ್ತು ಆರ್ಎಸ್ಎಸ್ಗಳು ಉಗ್ರವಾದಿಗಳನ್ನು ಹುಟ್ಟುಹಾಕುತ್ತಿವೆ ಎನ್ನುವ ತೀವ್ರ ರೂಪದ ಆರೋಪ ಮಾಡುತ್ತಾರೆಂದ ಮೇಲೆ ಅದಕ್ಕೆ ಪೂರಕವಾದ ಆಧಾರಗಳು ಅವರ ಬಳಿ ಇರಲೇಬೇಕಲ್ಲವೇ? ಹಾಗಿದ್ದರೆ, ಉಗ್ರವಾದಿಗಳನ್ನು ಬೆಳೆಸುತ್ತಿರುವ ಆ ಪಕ್ಷ ಮತ್ತು ಸಂಘಟನೆಯ ಮೇಲೆ ಸರ್ಕಾರವೇಕೆ ಇದುವರೆಗೂ ಕ್ರಮ ಕೈಗೊಂಡಿಲ್ಲ? ಒಂದು ವೇಳೆ ಶಿಂಧೆ ಅವರ ಆಪಾದನೆ ನಿಜವಾಗಿದ್ದೇ ಆದರೆ, ಮೊದಲು ನಮ್ಮ ಗಮನ ಹರಿಯಬೇಕಾದದ್ದು ಕೇಂದ್ರ ಸರ್ಕಾರದ ವೈಫಲ್ಯದತ್ತ. ದೇಶದ ಆಂತರಿಕ ಭದ್ರತೆಗೆ ಮಾರಕವಾಗಿರುವ ಉಗ್ರಗಾಮಿಗಳ ಪೋಷಕರನ್ನು ಹಾಗೆಯೇ ಬಿಟ್ಟರೆ ಅವರು ಸುಮ್ಮನಿರುತ್ತಾರೆಯೇ? ಇಷ್ಟೆಲ್ಲ ಗೊತ್ತಿದ್ದ ಮೇಲೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಸುಮ್ಮನಿರುವ ಸರ್ಕಾರ ಅಧಿಕಾರದಲ್ಲಿರಲು ಯೋಗ್ಯವೇ?!
'ಶಿಂಧೆ ಸುಮ್ಮನೇ ನಾಲಿಗೆ ಹರಿಬಿಟ್ಟಿಲ್ಲ, ಅವರು ಹೇಳಿದ್ದರಲ್ಲಿ ಸತ್ಯವಡಗಿದೆ' ಎಂದು ಮೊದಲು ಸಮರ್ಥನೆಗೆ ನಿಂತವರು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್. ಮಾಧ್ಯಮಗಳೊಂದಿಗೆ ಮಾತನಾಡುತ್ತಾ -'ಮಾಜಿ ಗೃಹ ಸಚಿವರು ಮತ್ತು ಹಾಲಿ ಗೃಹ ಸಚಿವರು ನೀಡಿದ ಹೇಳಿಕೆಯಲ್ಲಿ ಹುರುಳಿದೆ ಎನ್ನುವುದನ್ನು ನಾನು ಹೇಳಬಯಸುತ್ತೇನೆ. ತನಿಖಾ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆಧಾರದ ಮೇಲೆಯೇ ಅವರು ಹಾಗೆ ಹೇಳಿದ್ದಾರೆ' ಎಂದರು.
ಖುರ್ಷಿದ್ ಅವರು ಪ್ರಸ್ತಾಪಿಸಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸಲ್ಲಿಸಿದ ವರದಿಯ ಬಗ್ಗೆ. ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರೂ ಕೂಡ, 'ಹೌದು ಈ ಕುರಿತು ನಮ್ಮ ಬಳಿ ಪ್ರಬಲ ಪುರಾವೆಗಳಿವೆ. ಆರ್ಎಸ್ಎಸ್ನೊಂದಿಗೆ ಒಂದಲ್ಲ ಒಂದು ರೀತಿ ನಂಟು ಹೊಂದಿರುವ; ಸಮ್ಜೋತಾ ಎಕ್ಸ್ಪ್ರೆಸ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ದರ್ಗಾದ ಸ್ಫೋಟಗಳಲ್ಲಿ ಭಾಗಿಯಾಗಿರುವ ಸುಮಾರು 10 ಜನರ ಹೆಸರು ನಮ್ಮ ಬಳಿ ಇವೆ' ಎಂದು ಹೇಳಿದರು. ಆದರೆ ಈ ಬಗ್ಗೆ ಎನ್ಐಎ ಹೇಳಿದ್ದೇ ಬೇರೆ! ಆರ್ಎಸ್ಎಸ್ ಮತ್ತು ಬಿಜೆಪಿ ಉಗ್ರ ಶಿಬಿರಗಳನ್ನು ನಡೆಸುತ್ತಿವೆ ಎನ್ನುವುದರ ಬಗ್ಗೆ ನಮ್ಮ ಬಳಿ ಪುರಾವೆಗಳಿಲ್ಲ ಎಂದದು ಹೇಳಿದೆ. ಹಾಗಿದ್ದರೆ, ಅದ್ಹೇಗೆ ಯುಪಿಎದ ಕ್ಯಾಬಿನೆಟ್ ಸಚಿವರು ಸಾರ್ವಜನಿಕವಾಗೇ, ರಾಷ್ಟ್ರದ ಪ್ರಮುಖ ವಿರೋಧ ಪಕ್ಷದ ವಿರುದ್ಧ ಇಂಥ ತೀವ್ರತಮ ಆಪಾದನೆ ಮಾಡಬಲ್ಲರು?
ಹಾಗೆ ನೋಡಿದರೆ, ಮೊದಲಿನಿಂದಲೂ ಯುಪಿಎ ಸರ್ಕಾರ ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟ ಹಿಂದೂ ಉಗ್ರರ ಕೆಲಸ ಎಂದು ಹೇಳುತ್ತಾ ಬಂದಿವೆ. ಆದರೆ ಹಿಂದೂ ಉಗ್ರವಾದಿಯೊಬ್ಬ ಆ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎನ್ನುವ ವಾದವೇ ಏಕೋ ಅರಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಯಾವ ಪುರಾವೆಯೂ ಇಲ್ಲದೆ ಪದೇ ಪದೇ ಯುಪಿಎ ಸರ್ಕಾರ ಹಿಂದೂ ಉಗ್ರವಾದಿಗಳ ಹೆಸರನ್ನು ಈ ಘಟನೆಯೊಂದಿಗೆ ಥಳುಕು ಹಾಕುತ್ತಿರುವುದು ನಿಜಕ್ಕೂ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಏಕೆಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ(ಯುಎನ್ಎಸ್ಸಿ)1267 ಸಮಿತಿ, ಈ ಕುರಿತು ಹೇಳುವುದೇ ಬೇರೆ. ಅಲ್ಖೈದಾ ಮತ್ತು ತಾಲಿಬಾನ್ ಸಂಘಟನೆಗಳಿಗೆ ನಿಷೇಧ ಹೇರಿರುವ ಈ ಸಮಿತಿ, 'ಮುಂಬೈನಲ್ಲಿನ ಟ್ರೇನ್ ಸ್ಫೋಟ ಮತ್ತು ಫೆಬ್ರವರಿ 2007ರಂದು ಪಾನಿಪತ್ನಲ್ಲಿ ನಡೆದ ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟದ ರೂವಾರಿ ಲಷ್ಕರ್-ಎ-ತೋಯ್ಬಾ(ಎಲ್ಇಟಿ) ಸಂಘಟನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿತ್ತು. ಎಲ್ಇಟಿಯೇ ಆ ದಾಳಿಯನ್ನು ನಡೆಸಿದೆ ಎನ್ನುವುದು ಖಚಿತವಾದ ಕಾರಣದಿಂದಾಗಿ, ವಿಶ್ವಸಂಸ್ಥೆ ಹಫೀಜ್ ಸಯೀದ್ನ ಮೇಲೂ ನಿಷೇಧ ಹೇರಿತ್ತು. ಆದರೆ ಕೂಡಲೇ ನಮ್ಮ ನೆರೆ ರಾಷ್ಟ್ರ ಚೀನಾ ಹಫೀಜ್ ಸಯೀದ್ನನ್ನು ವಿಶ್ವಸಂಸ್ಥೆಯ ಕೆಂಗಣ್ಣಿನಿಂದ ಬಚಾವು ಮಾಡಿತ್ತು! ಹಾಗಾಗೆ, ಯುಪಿಎ ಸರ್ಕಾರ ಚೀನಾದೊಂದಿಗೆ ಕೈಜೋಡಿಸಿ ಹಫೀಜ್ ಸಯೀದ್ನನ್ನು ರಕ್ಷಿಸುತ್ತಿದೆಯೇ ಎನ್ನುವ ಅನುಮಾನ ಮೂಡದೇ ಇರದು. ಇನ್ನು ಪಾಕಿಸ್ತಾನವಂತೂ ಈ ವಿಷಯವನ್ನೇ ನೆಪವಾಗಿಟ್ಟುಕೊಂಡು, ಭಯೋತ್ಪಾದನೆಯ ವಿಷಯದಲ್ಲಿ ನಾವಿಬ್ಬರೂ ಒಂದೇ ರೀತಿಯ ಸಮಸ್ಯೆಯನ್ನೆದುರಿಸುತ್ತಿದ್ದೇವೆ ಎಂದು ಹೇಳಿ ಬಚಾವಾಗುವ ದಾರಿಯನ್ನು ಕಂಡುಕೊಂಡಿದೆ.
ಇನ್ನು ಅಸೀಮಾನಂದ ಅವರ ವಿಷಯಕ್ಕೆ ಬಂದರೆ, ತಾವು ಸ್ಫೋಟದಲ್ಲಿ ಭಾಗಿಯಾಗಿದ್ದೇವೆಂದು ಒಪ್ಪಿಕೊಂಡಿದ್ದಾರೆ ಎನ್ನುವುದೇನೋ ನಿಜ. ಆದರೆ ಹಾಗೆ ಒಪ್ಪಿಕೊಳ್ಳುವಂತೆ ಅವರ ಮೇಲೆ ಪೊಲೀಸರು ಒತ್ತಡ ಹೇರಿದ್ದಾರೆ ಎನ್ನುವುದು ಅವರ ವಕೀಲರ ವಾದ.
ಆರ್ಎಸ್ಎಸ್ ಮತ್ತು ಬಿಜೆಪಿ, ಉಗ್ರವಾದಿಗಳನ್ನು ಬೆಳಸುತ್ತಿವೆ ಎಂದು ಶಿಂಧೆ ಹೇಳಿದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನದಿಂದ ಹಫೀಜ್ ಸಯೀದ್ನ ಪ್ರತಿಕ್ರಿಯೆ ಬಂದಿದೆ. 'ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟದಲ್ಲಿ ಅಮಾಯಕ ಪಾಕಿಸ್ತಾನಿ ಪ್ರಜೆಗಳು ಸಾವಿಗೀಡಾದರು. ಈ ಕೃತ್ಯ ರೂಪುಗೊಂಡಿದ್ದು ಭಾರತದ ನೆಲದಲ್ಲಿಯೇ, ಅದನ್ನು ರೂಪಿಸಿದವರು ಭಾರತೀಯರೇ ಎನ್ನುವುದನ್ನು ಖುದ್ದು ಆ ದೇಶದ ಗೃಹ ಸಚಿವರೇ ಹೇಳಿದ್ದಾರೆ. ಕಡೆಗೂ ಶಿಂಧೆಯವರ ಬಾಯಿಂದ ಸತ್ಯ ಹೊರಬಿದ್ದಿದೆ. ಭಾರತ ಭಯೋತ್ಪಾದಕರನ್ನು ಬೆಳೆಸುತ್ತಿದೆ ಎನ್ನುವುದು ಈಗಲಾದರೂ ಪ್ರಪಂಚಕ್ಕೆ ಅರಿವಾಗಲಿ' ಎಂದು ಗುಡುಗಿದ್ದಾನೆ.
ಶಿಂಧೆ ಅವರ ಭಾಷಣ ಮತ್ತು ಅದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಿಂದ ಬಂದ ಪ್ರತಿಕ್ರಿಯೆ, ರಾಹುಲ್ ಗಾಂಧಿಯ ಪದೋನ್ನತಿ ಮತ್ತವರ ಭಾಷಣದ ಬೆರಗನ್ನೆಲ್ಲ ಮರೆಮಾಚಿಬಿಟ್ಟವು. ಕಾಂಗ್ರೆಸ್ನ ಹೊಸ ಉಪಾಧ್ಯಕ್ಷರು ದೇಶದ ಸಂಸ್ಕೃತಿಯನ್ನು, ವ್ಯವಸ್ಥೆಯನ್ನು ಬದಲಿಸುವ ಬಗ್ಗೆ ಕೆಚ್ಚೆದೆಯ ಮಾತನಾಡಿ ಬೆನ್ನುತಟ್ಟಿಸಿಕೊಂಡದ್ದೂ ಹೌದು. ಆದರೆ ಹಾಗೆ ಮಾತನಾಡಿದ ಕೆಲವೇ ಕ್ಷಣಗಳಲ್ಲೇ ಶಿಂಧೆ, ರಾಹುಲ್ರನ್ನು ಪರೀಕ್ಷೆಗೆ ಹಚ್ಚಿಬಿಟ್ಟಿದ್ದಾರೆ. ಆ ಪರೀಕ್ಷೆಯ ಪ್ರಶ್ನೆಗಳು ಹೀಗಿವೆ: 'ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟವನ್ನು ನಡೆಸಿದ್ದು ಲಷ್ಕರ್-ಎ-ತೋಯ್ಬಾ ಮತ್ತು ಹಫೀಜ್ ಸಯೀದ್' ಎಂಬ ವಿಶ್ವಸಂಸ್ಥೆಯ ತನಿಖಾ ಮಂಡಳಿಯ ಹೇಳಿಕೆಯನ್ನು ರಾಹುಲ್ ಅಲ್ಲಗಳೆಯುತ್ತಾರಾ? ಆರ್ಎಸ್ಎಸ್ ಮತ್ತು ಬಿಜೆಪಿ ಉಗ್ರರ ತರಬೇತಿಯಲ್ಲಿ ತೊಡಗಿವೆ ಎನ್ನುವುದರ ಬಗ್ಗೆ ತಮ್ಮ ಬಳಿ ಪುರಾವೆಯಿಲ್ಲ ಎಂದು ಹೇಳುತ್ತಿರುವ ಎನ್ಐಎದ ಮಾತನ್ನು ಅವರು ನಂಬುತ್ತಾರಾ? ಗೃಹ ಸಚಿವರು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷದ ಕುರಿತು ಆಡಿರುವ ಮಾತುಗಳಿಗೆ ರಾಹುಲ್ರ ಪ್ರತಿಕ್ರಿಯೆ ಏನು? ವಿಶ್ವಸಂಸ್ಥೆ ಹಫೀಜ್ ಸಯೀದ್ನ ಮೇಲೆ ಹೇರಿದ್ದ ನಿಷೇಧವನ್ನು ತೆಗೆಸಿ ಹಾಕಿಸಿದ ಚೀನಾದ ಪಂಕ್ತಿಗೇ ಗೃಹ ಸಚಿವರೂ ಸೇರಿದ್ದಾರಲ್ಲ. ಆ ಬಗ್ಗೆ ರಾಹುಲ್ ಕಂಫರ್ಟೆಬಲ್ ಆಗಿದ್ದಾರಾ?
ದೇಶವಾಸಿಗಳು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬಯಸುತ್ತಿದ್ದಾರೆ. ಓಂ ಪ್ರಕಾಶ್ ಚೌಟಾಲಾರಿಗೆ 10 ವರ್ಷ ಶಿಕ್ಷೆ ವಿಧಿಸಿದ ಇದೇ ವ್ಯವಸ್ಥೆ, ಸುರೇಶ್ ಕಲ್ಮಾಡಿಯವರಿಗೆ ವಿದೇಶ ಪ್ರಯಾಣ ಮಾಡಲು ಅನುವು ಮಾಡಿಕೊಡುತ್ತದೆ. ರಾಬರ್ಟ್ ವಾದ್ರಾರ ಅನುಮಾನಾಸ್ಪದ ವ್ಯವಹಾರಗಳ ಬಗ್ಗೆ ಮಾತನಾಡಿದ ಅಧಿಕಾರಿಯನ್ನು ಎತ್ತಂಗಡಿ ಮಾಡುತ್ತದೆ. ಇಂತಹ ವ್ಯವಸ್ಥೆಯನ್ನು ಬದಲಿಸಲು ರಾಹುಲ್ ಸಿದ್ಧರಿದ್ದಾರಾ?
-ರಾಜಿಂದರ್ ಪುರಿ, ಹಿರಿಯ ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

