ಉಳಿಯಬೇಕಿದೆ ಡಿ.ಎಡ್. ಕಾಲೇಜುಗಳ ಅಸ್ತಿತ್ವ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಸರ್ಕಾರ ಕೈಗೊಂಡ ತೀರ್ಮಾನ ಮತ್ತು ಪರಿಹಾರವೆಂದರೆ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸುಮಾರು 500ರಷ್ಟು ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದು ಮತ್ತು ಕಡಿಮೆ ವಿದ್ಯಾರ್ಥಿಗಳಿರುವ 2000ದಷ್ಟು ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನ ಮಾಡುವುದು. ರಾಜ್ಯದ ಅನೇಕ ಶಾಲೆಗಳಲ್ಲಿ ಕಟ್ಟಡ ಮತ್ತು ಶಿಕ್ಷಕರ ಕೊರತೆ ಇದ್ದರೂ ದಿವ್ಯ ಮೌನಕ್ಕೆ ಶರಣಾಗಿರುವುದು. ಮತ್ತೊಂದು ದುರಂತವೆಂದರೆ ಕಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ ತಳಬುಡವಿಲ್ಲದ ನಲಿಕಲಿಯಂತಹ ಅವೈಜ್ಞಾನಿಕ ಬೋಧನಾ ಪದ್ಧತಿ ಅಳವಡಿಸಿರುವುದು.
2010ರ ಅವಧಿಯಲ್ಲಿ 13000 ಶಾಲಾ ಶಿಕ್ಷಕರು ನಿವೃತ್ತಿಯಾಗಬೇಕಿತ್ತು. ಆದರೆ ಇಷ್ಟೊಂದು ದೊಡ್ಡ ಸಂಖ್ಯೆ ಶಿಕ್ಷಕರು ನಿವೃತ್ತಿಯಾದಲ್ಲಿ ಸರ್ಕಾರದ ಬಳಿ ಕೊಡಬೇಕಾದ ಕ್ರೋಢೀಕೃತ ನಿವೃತ್ತಿಯ ಮೊತ್ತವಿರಲಿಲ್ಲ. ಹಾಗಾಗೆ ಅದು ನಿವೃತ್ತಿಯ ವಯಸ್ಸನ್ನು 58ರಿಂದ 60ಕ್ಕೆ ಏರಿಸಿಬಿಟ್ಟಿತು.
ಕಳೆದ ಮೂರು ವರ್ಷಗಳಿಂದ ಡಿ.ಎಡ್. ಮತ್ತು ಬಿ.ಎಡ್.ಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಈ ಎಲ್ಲಾ ಯಡವಟ್ಟುಗಳ ಜೊತೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವ್ಯಾಪ್ತಿಯಲ್ಲಿ 18 ಕೋರ್ಸ್ಗಳ ಹೊರೆಯ ಜೊತೆಗೆ ಡಿ.ಎಡ್. ಕೋರ್ಸ್ನ್ನು ಸೇರಿಸಿರುವುದರಿಂದ ಇನ್ನಷ್ಟು ಹೊರೆಯಾಗಿದೆ. ಇದರಿಂದ ಸಕಾಲಕ್ಕೆ ಡಿ.ಎಡ್. ಕೋರ್ಸ್ನ ಪ್ರಾರಂಭ ಮತ್ತು ಮುಕ್ತಾಯ, ಮೌಲ್ಯಮಾಪನ, ಫಲಿತಾಂಶ, ವ್ಯಾಸಂಗಕ್ಕೆ ಅರ್ಜಿ ಕರೆಯುವುದು ಮತ್ತು ಇತರೆ ಚಟುವಟಿಕೆಗಳು ವಿಳಂಬವಾಗುತ್ತ್ತಿದೆ.
ಪ್ರತಿ ಶೈಕ್ಷಣಿಕ ವರ್ಷದ ದಾಖಲಾತಿ ಕೊರತೆಯ ನೆಪವನ್ನು ಮುಂದೊಡ್ಡಿ ಶಾಲೆಗಳನ್ನು ಮುಚ್ಚವುದು ತರವಲ. ಅದರ ಬದಲಾಗಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಪ್ರತ್ಯೇಕವಾಗಿ ವಾಹನ ಸೌಕರ್ಯ ಒದಗಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಲ್ಲಿರುವಂತೆ ಕಿರಿಯ ಪ್ರಾಥಮಿಕ ಹಂತದಲ್ಲಿ ಪ್ಲೇ ಗ್ರೂಪ್, ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಬೇಕು. ಈ ಹಂತದ ಬೋಧನಾ ಕಾರ್ಯಕ್ಕೆ ಡಿ.ಎಡ್. ತರಬೇತಿ ಹೊಂದಿದ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳಬೇಕು. ಈ ಮೂಲಕ ಸಾರ್ವತ್ರಿಕ ದಾಖಲಾತಿಗೆ ಪ್ರೇರಣೆ ನೀಡಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಸರ್ಕಾರದ ವಿವಿಧ ಕಾರ್ಯಗಳಾದ ಚುನಾವಣೆ, ಜನಗಣತಿ, ಮಕ್ಕಳ ಗಣತಿ, ಜಾನುವಾರುಗಳ ಗಣತಿಯಂತಹ ಇತರೆ ಕಾರ್ಯಗಳಿಗೆ ಬಳಸಿಕೊಳ್ಳುವುದು ಮೊದಲು ನಿಲ್ಲಬೇಕು. ಶಿಕ್ಷಕರ ಗಮನ ತರಗತಿಯ ಬೋಧನೆಗೆ ಮಾತ್ರ ಮೀಸಲಾಗಿರುವಂತೆ ಅವಕಾಶ ಕಲ್ಪಿಸಿ, ಶಾಲಾ ಕಾರ್ಯನಿರ್ವಹಣಾ ದಿನಗಳಲ್ಲಿ ಅವರಿಗೆ ನಿರಂತರವಾಗಿ ನೀಡುತ್ತಿರುವ ವೃತ್ತಿನಿರತ ತರಬೇತಿಗಳಿಗೆ ಕಡಿವಾಣ ಹಾಕಬೇಕು. ಮಧ್ಯವಾರ್ಷಿಕ ಮತ್ತು ವಾರ್ಷಿಕ ರಜಾದಿನಗಳಲ್ಲಿ ಮಾತ್ರ ಶಿಕ್ಷಕರಿಗೆ ತರಬೇತಿ ನೀಡುವಂತಾಗಬೇಕು. ಈ ರೀತಿಯ ತರಬೇತಿ ಅವಧಿಗೆ ಶಿಕ್ಷಕರಿಗೆ ಹೆಚ್ಚುವರಿ ಗಳಿಕೆ ರಜಾ ಸೌಲಭ್ಯಗಳನ್ನು ಒದಗಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟದ ಲೆಕ್ಕಪತ್ರ, ದಾಖಲಾತಿ ಪ್ರಕ್ರಿಯೆ ನಿರ್ವಹಣೆ ಮತ್ತು ಇತರೆ ಪತ್ರ ವ್ಯವಹಾರಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಶಾಲೆಗೆ ಒಬ್ಬರಂತೆ ದ್ವಿತೀಯ ದರ್ಜೆ ಸಹಾಯಕರನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿದೆ.
ಇನ್ನು 1999ರಿಂದ 2004-05ನೇ ಸಾಲಿನ ಅವಧಿಯಲ್ಲಿ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಮಾನವ ಮತ್ತು ಭೌತಿಕ ಸಂಪನ್ಮೂಲಗಳ ಕೊರತೆ ಇರುವ ಸುಮಾರು 500ರಷ್ಟು ಡಿ.ಎಡ್. ಕಾಲೇಜುಗಳನ್ನು ಮುಚ್ಚಲು ಸರ್ಕಾರ ಕೂಡಲೇ ಕಾರ್ಯೋನ್ಮುಖವಾಗಬೇಕು. ಹೀಗೆ ಮಾಡಿದಲ್ಲಿ ಮಾನವ ಮತ್ತು ಭೌತಿಕ ಸಂಪನ್ಮೂಲಗಳನ್ನು ಹೊಂದಿರುವ ಗುಣಮಟ್ಟದ ಶಿಕ್ಷಣ ನೀಡುತ್ತಿರುವ 360ರಷ್ಟು ಕಾಲೇಜುಗಳಾದರೂ ಅಸ್ತಿತ್ವದಲ್ಲಿರಲು ಸಾಧ್ಯವಾಗುತ್ತದೆ. ಪ್ರಾಥಮಿಕ ಶಾಲೆಗಳ ಮತ್ತು ಡಿ.ಎಡ್. ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಆರಂಭ ಮತ್ತು ಮುಕ್ತಾಯದ (ಜೂನ್ -1ರಿಂದ ಮಾರ್ಚ್ 10ರವರೆಗೆ) ಅವಧಿಯನ್ನು ಒಂದೇ ರೀತಿ ಇರುವಂತೆ ಕಾಯ್ದುಕೊಳ್ಳಬೇಕು. ಪ್ರತಿ ಶೈಕ್ಷಣಿಕ ವರ್ಷ ದ್ವಿತೀಯ ವರ್ಷದ ಪಿ.ಯು.ಸಿ. ಫಲಿತಾಂಶ ಪ್ರಕಟಣೆಯಾದ ದಿನವೇ ಡಿ.ಎಡ್. ವ್ಯಾಸಂಗಕ್ಕೆ ಸೇರಲು ಅರ್ಜಿ ಕರೆಯಬೇಕು. ಈ ಸಲ ಮೂರು ತಿಂಗಳು ತಡವಾಗಿ ಅರ್ಜಿ ಕರೆಯಲಾಯಿತು. ರಾಜ್ಯದಲ್ಲಿ ಪ್ರಸ್ತುತ 40 ಸರ್ಕಾರಿ ಡಿ.ಎಡ್. ಕಾಲೇಜುಗಳಿದ್ದು, ಉಳಿದವುಗಳೆಲ್ಲಾ ಖಾಸಗಿ ಕಾಲೇಜುಗಳೇ ಆಗಿವೆ. ಇವುಗಳಲ್ಲಿ ಅರ್ಧಕ್ಕಿಂತ ಕಡಿಮೆ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ.
ಇನ್ನು ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಈ ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ 7ನೇ ಮತ್ತು 10ನೇ ತರಗತಿ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಡಿ.ಎಡ್. ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಡಿ.ಎಡ್. ಪಠ್ಯಕ್ರಮ ಪರಿಷ್ಕರಿಸಿ ಪದವಿಗೆ ತತ್ಸಮಾನವೆಂದು ಘೋಷಿಸಬೇಕು. ಡಿ.ಎಡ್. ಪದವಿಯ ಮೇಲೆ ಬಿ.ಎಡ್. ವ್ಯಾಸಂಗ ಮಾಡಲು ಅನುವು ಮಾಡಿಕೊಡಬೇಕು. ಡಿ.ಎಡ್. ಕೋರ್ಸ್ ಪದವಿಯಂತೆ ಪಿ.ಯು. ನಂತರದ ಕೋರ್ಸ್ ಆಗಿರುವುದರಿಂದ ಡಿ.ಎಡ್. ಕೋರ್ಸ್ನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಬೇರ್ಪಡಿಸಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯಾದ ಡಿ.ಎಡ್. ಕೋರ್ಸ್ಗೆ ದಾಖಲಾಗಲು ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದೊರ್ಷಕ್ಕೆ ಇಳಿಮುಖವಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಭದ್ರ ಬುನಾದಿಯೇ ಆಗಿರುವ ಪ್ರಾಥಮಿಕ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. 2004-05ಕ್ಕಿಂತ ಮೊದಲು ಮತ್ತು ನಂತರದಲ್ಲಿ ಸುಮಾರು 4ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಾಥಮಿಕ ಶಾಲಾ ಶಿಕ್ಷಕರಾಗುತ್ತೇವೆ ಎಂಬ ಆಶಾಭಾವನೆಯಿಂದ ಡಿ.ಎಡ್. ಕೋರ್ಸ್ನ್ನು ಪೂರೈಸಿಕೊಂಡಿರುತ್ತಾರೆ. ಇದರಲ್ಲಿ ಬಹುತೇಕ ಅಭ್ಯರ್ಥಿಗಳು ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಮಧ್ಯಮ ವರ್ಗದವರೇ ಆಗಿದ್ದಾರೆ. ಇವರುಗಳು ತಮ್ಮ ಕುಟುಂಬಗಳು ಅನುಭವಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಲ್ಲೂ 35ರಿಂದ 50 ಸಾವಿರ ರೂಪಾಯಿಗಳನ್ನು ಹೊಂದಿಸಿಕೊಂಡು ಡಿ.ಎಡ್. ಕೋರ್ಸ್ನ್ನು ಪೂರ್ಣಗೊಳಿಸಿರುತ್ತಾರೆ. ಶಿಕ್ಷಣತಜ್ಞ ಗೋವಿಂದರವರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ಕಿರಿಯ ಪ್ರಾಥಮಿಕ ಹಂತ (1-5ನೇ ತರಗತಿ)ಕ್ಕೆ ಮಾತ್ರ ಇವರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಹಿರಿಯ ಪ್ರಾಥಮಿಕ ಹಂತ (6-7ನೇ ತರಗತಿ)ಕ್ಕೆ ಬಿ.ಎಡ್. ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸರ್ಕಾರಿ ಆದೇಶಗಳೇ ಆಗದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ್ಲ. ಬಿ.ಎಡ್. ಪದವೀಧರರಿಗೆ ಹಿರಿಯ ಪ್ರಾಥಮಿಕ ಹಂತ (6-7ನೇ ತರಗತಿ)ದ ತರಗತಿಗಳ ಬೋಧನೆಗೆ ತರಬೇತಿಯೇ ಆಗಿರುವುದಿಲ್ಲ. ಹೀಗೆ ಸೂಕ್ತ ತರಬೇತಿ ಪಡೆದವರನ್ನು ಬಿಟ್ಟು ತರಬೇತಿ ಪಡೆಯದವರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂಬುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಈ ಸಲದ ಹಿರಿಯ ಪ್ರಾಥಮಿಕ ಹಂತ (6-7ನೇ ತರಗತಿ)ದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮೊದಲು ಬಿ.ಎಡ್. ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂಬ ಸರ್ಕಾರಿ ಆದೇಶ ಹೊರಬಿದ್ದರೂ ಈಗಾಗಲೇ ಡಿ.ಎಡ್. ವ್ಯಾಸಂಗವನ್ನು ಪೂರೈಸಿರುವ ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು ಮತ್ತು ನೇಮಕಾತಿ ಹೊಂದಿದ ಅಂತಹ ಶಿಕ್ಷಕರಿಗೆ ನೇಮಕಾತಿ ಹೊಂದಿದ ಐದು ವರ್ಷಗಳೊಳಗಾಗಿ ಬಿ.ಎಡ್. ತರಬೇತಿ ಪಡೆಯಲು ಅವಕಾಶ ನೀಡಬೇಕು. NCTE (National Council for Teacher Education)) ಡಿ.ಎಡ್. ಕೋರ್ಸ್ನ ಅವಧಿಯನ್ನು ವಿಸ್ತರಿಸುವ ಬದಲು ಯಥಾಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಬೇಕಾಗಿದೆ.
ಇನ್ನು ಸರ್ಕಾರವೂ ಸಕಾರಾತ್ಮಕವಾಗಿ ಆಲೋಚಿಸದೇ ಇದ್ದಲ್ಲಿ ಪ್ರಾಥಮಿಕ ಶಿಕ್ಷಣವು ಸಂಪೂರ್ಣವಾಗಿ ನಿರ್ನಾಮಗೊಳ್ಳುವುದರಲ್ಲಿ ಸಂಶಯವಿಲ್ಲ. ರಾಜ್ಯ ಸರ್ಕಾರದ ಶಿಕ್ಷಣ ಮಂತ್ರಿಗಳು ಸರ್ಕಾರಿ ಆದೇಶ ಮಾಡದ ಹೊರತು ಪ್ರಾಥಮಿಕ ಶಿಕ್ಷಣಕ್ಕೆ ಹೊಡೆತ ಬೀಳುವಂತಹ ಅನಾವಶ್ಯಕ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು.
ಇಷ್ಟು ಅವಘಡಗಳು ಸಾಲದೆಂಬಂತೆ ಬಿ.ಎಡ್. ವ್ಯಾಸಂಗವನ್ನು ಒಂದು ವರ್ಷದಿಂದ ಎರಡು ವರ್ಷಗಳ ವಿಸ್ತರಣೆಗೆ ಚಿಂತನೆ, ಡಿ.ಎಡ್. ವ್ಯಾಸಂಗವನ್ನು ಎರಡು ವರ್ಷಗಳಿಂದ ನಾಲ್ಕು ವರ್ಷಗಳ ವಿಸ್ತರಣೆಗೆ ಚಿಂತನೆ, ಎಂಬ ಗಾಸಿಪ್ ಕೂಡಾ ಡಿ.ಎಡ್., ಬಿ.ಎಡ್. ಕಾಲೇಜುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ಮತ್ತು ಸರ್ಕಾರಿ, ಅನುದಾನಿತ, ಅನುದಾನರಹಿತ ಡಿ.ಎಡ್. ಕಾಲೇಜುಗಳ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಗುಣಾತ್ಮಕ ಶಿಕ್ಷಣ ಕೇಂದ್ರಗಳನ್ನಾಗಿ ಪರಿವರ್ತಿಸಿ, ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ಕೂಡಲೇ ಐದು ಜನ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಸದರಿ ಸಮಿತಿಯು ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸುವುದರ ಜೊತೆಗೆ ಇತರ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಮೂರು ತಿಂಗಳ ಅವಧಿಯೊಳಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತಾಗಬೇಕು. ಕರ್ನಾಟಕ ರಾಜ್ಯ ಸರ್ಕಾರದ ಘನತೆವೆತ್ತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಈ ಎಲ್ಲಾ ಅಂಶಗಳನ್ನು ಗಮನಿಸಿ ಆದಷ್ಟು ತ್ವರಿತ ಗತಿಯಲ್ಲಿ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂಬುದು ಸಕಲರ ಆಶಯವಾಗಿದೆ.
-ಡಾ. ಮಂಜುನಾಥ್, ಹೂವಿನಹಡಗಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

