ಬದಲಾಗಬೇಕಿದೆ ಬಿಜೆಪಿಯ ಗ್ರಹಿಕೆ
ಭಾರತದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿಯೂ ಒಂದಲ್ಲ ಒಂದು ವಿಷಯ ಪ್ರಾಮುಖ್ಯತೆ ಪಡೆಯುವುದನ್ನು ನೋಡುತ್ತೇವೆ. ಆದರೆ ಮುಸಲ್ಮಾನರ ವಿಷಯ ಮಾತ್ರ ಮೊದಲಿನಿಂದಲೂ ಬದಲಾಗದೇ ಉಳಿದಿದೆ.
ಮುಸ್ಲಿಮರು ಜನಸಂಖ್ಯೆಯ 12-15 ಪ್ರತಿಶತದಷ್ಟಿರುವುದರಿಂದ ಅವರ ಮತಗಳನ್ನು ಕಡೆಗಣಿಸುವುದು ಸುಲಭಸಾಧ್ಯವಲ್ಲ. ಹಾಗಾಗೇ ಎಲ್ಲಾ ಪಕ್ಷಗಳೂ ಅವರನ್ನು ಓಲೈಸಲು ತಮ್ಮದೇ ಆದ ತಂತ್ರಗಳನ್ನು ರಚಿಸಿಕೊಂಡಿವೆ.
ಹಾಗಂತ ಅವರ ಮತಗಳು ಏಕರೂಪವಾಗಿವೆ ಎನ್ನುವ ಹಾಗೂ ಇಲ್ಲ. ಏಕೆಂದರೆ ಬಿಜೆಪಿಯನ್ನೊಳಗೊಂಡಂತೆ ಭಾರತದ ವಿವಿಧ ಪಕ್ಷಗಳೂ ಅವರ ಮತ ಪಡೆಯುತ್ತವೆ. ಶಿವಸೇನೆ ಕೂಡ ಈ ಪಟ್ಟಿಯಲ್ಲಿ ಸೇರಿದೆ! ಆದರೆ ಪಕ್ಷದ ಸಿದ್ಧಾಂತ ಅಥವಾ ಪ್ರದೇಶಕ್ಕೆ ತಕ್ಕಂತೆ ಮತಗಳ ಪ್ರಮಾಣದಲ್ಲಿ ಭಿನ್ನತೆ ಇರಬಹುದಷ್ಟೆ. ಕಾಂಗ್ರೆಸ್ಗೆ ಎಲ್ಲಾ ಪಕ್ಷಗಳಿಗಿಂತಲೂ ಹೆಚ್ಚಿನ ಮುಸ್ಲಿಂ ಮತಗಳು ದೊರೆಯುತ್ತವೆ. ಇದಕ್ಕೆ ಮುಖ್ಯ ಕಾರಣ, ಆ ಪಕ್ಷ ದೇಶಾದ್ಯಂತ ಹರಡಿರುವುದು. ಈ ಸಮುದಾಯದವರು ತಮ್ಮ ಧಾರ್ಮಿಕ/ಕೋಮಿನ ನಾಯಕರ ನಿರ್ದೇಶನದಂತೆ ಮತದಾನ ಮಾಡುತ್ತಾರೆ ಎನ್ನುವ ಮಾತಿದೆ. ಈ ಮಾತು ನಿಜವೆನ್ನುವುದಾದರೆ, ಕೇಂದ್ರದಲ್ಲಿ ಬಲಿಷ್ಠ ಮುಸ್ಲಿಂ ನಾಯಕತ್ವವಿರಬೇಕಿತ್ತು. ಆದರೆ ಅದಿಲ್ಲ.
ಹಾಗಿದ್ದಾಗ, ಈ ರೀತಿಯ ಗ್ರಹಿಕೆಯೇಕಿದೆ? ಮುಸ್ಲಿಮರು ಬಿಜೆಪಿಗೆ ಉತ್ಸಾಹದಿಂದ ಮತ ನೀಡುವುದಿಲ್ಲ ಎನ್ನುವುದು ಈ ಗ್ರಹಿಕೆಗೆ ಮೂಲ ಕಾರಣವಿರಬಹುದು. ಇದರಿಂದ ಇನ್ನೊಂದು ಊಹೆಯೂ ಶುರುವಾಗುತ್ತದೆ. ಅದು, 'ಮುಸ್ಲಿಮರು ಬಹಳ ಚಾಣಾಕ್ಷತನದಿಂದ ಮತದಾನ ಮಾಡುತ್ತಾರೆ-ಅವರ ಮುಖ್ಯ ಉದ್ದೇಶ ಬಿಜೆಪಿಯನ್ನು ಸೋಲಿಸುವುದು' ಎಂಬುದು.
ಈ ಮಾತು ನಿಜವಾಗಿರಬೇಕೆಂದರೆ ಕೇಂದ್ರದಲ್ಲಿ ಕೇವಲ ಬಲಿಷ್ಠ ನಾಯಕತ್ವವಷ್ಟೇ ಅಲ್ಲದೆ, ಆ ಕೋಮಿನ ನಾಯಕರಿಗೆ ಮತದಾನದ ರೂಪುರೇಷೆ, ಪ್ರಮುಖ ಚುನಾವಣಾ ಕ್ಷೇತ್ರಗಳ ಪರಿಚಯ ಉತ್ತಮವಾಗಿರಬೇಕು. ಎಲ್ಲವೂ ಅಲ್ಲದಿದ್ದರೂ, ಬಹುತೇಕ ಕ್ಷೇತ್ರಗಳ ಬಗ್ಗೆಯಂತೂ ಅವರಿಗೆ ಅರಿವಿರಬೇಕು. ಆದರೆ ಇಂಥ ಗುಣವನ್ನು ನಮ್ಮ ರಾಷ್ಟ್ರೀಯ ಪಕ್ಷಗಳಲ್ಲೂ ಸಹ ಕಾಣಲು ಸಾಧ್ಯವಿಲ್ಲ. ಹಾಗಿದ್ದರೆ ಇಂಥ ಅಸ್ಪಷ್ಟ ಕಾಲ್ಪನಿಕ ಗುಣ ಕೇಂದ್ರ ಮುಸ್ಲಿಂ ನಾಯಕರಲ್ಲಿ ಬರುವುದಾದರೂ ಎಲ್ಲಿಂದ?
ಆದರೆ ಸ್ಥಳೀಯ ಮಟ್ಟದ ಸಮುದಾಯದ ನಾಯಕತ್ವ, ತಮಗೆ ಅಪಾಯ ತರಬಹುದು ಎಂದೆನಿಸುವವರನ್ನು ಸೋಲಿಸಲು ತಂತ್ರ ರಚಿಸಿ ಸರ್ವ ಪ್ರಯತ್ನ ಮಾಡುತ್ತದೆ ಎನ್ನುವ ಮಾತನ್ನಂತೂ ತಳ್ಳಿಹಾಕುವಂತಿಲ್ಲ. ಆದರೆ ನಾನು ಹೇಳುವುದು ಇಷ್ಟೇ- ಇದನ್ನೆಲ್ಲ ನೋಡಿ; 'ಕೇಂದ್ರ ಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸಲು ಮುಸ್ಲಿಂ ಸಮುದಾಯ ಪ್ರಬಲ ತಂತ್ರವನ್ನು ರಚಿಸುತ್ತದೆ' ಎಂದು ಷರಾ ಬರೆಯುವುದು ಮೂರ್ಖತನವಾದೀತು. ಅದಾಗ್ಯೂ ಮುಸಲ್ಮಾನರು ಬಿಜೆಪಿಗೆ ಉತ್ಸಾಹದಿಂದ ಮತದಾನ ಮಾಡುವುದಿಲ್ಲ ಎಂಬ ಮಾತಂತೂ ಸುಳ್ಳಲ್ಲ.
ಒಂದು ವೇಳೆ ಬಿಜೆಪಿ ಸಾಮಾನ್ಯ ಪಕ್ಷವಾಗಿದ್ದರೆ, ಈ ಸಂಗತಿ ಅಷ್ಟೇನೂ ಪ್ರಾಮುಖ್ಯತೆ ಪಡೆಯುತ್ತಿರಲಿಲ್ಲ ಅಥವಾ ಮಾಧ್ಯಮಗಳಲ್ಲಿ ರಾರಾಜಿಸುತ್ತಿರಲಿಲ್ಲ. ಆದರೆ ಕೇಂದ್ರ ಮಟ್ಟದಲ್ಲಿ ಕಾಂಗ್ರೆಸ್ಗೆ ಪರ್ಯಾಯವಾಗಬಲ್ಲ ಏಕೈಕ ಶಕ್ತಿ ಬಿಜೆಪಿ ಆಗಿರುವುದರಿಂದ ಈ ವಿಷಯ ಹೆಚ್ಚು ಮಹತ್ವ ಪಡೆಯುತ್ತದೆ.
ಕೇಂದ್ರದ ಕಳಂಕಿತ ಸರ್ಕಾರದ ಬದಲು ಸ್ವಚ್ಛ ಆಡಳಿತ ಒದಗಿಸಬಲ್ಲ ಪರ್ಯಾಯ ಪಕ್ಷವನ್ನು ಹುಡುಕಲು ಜನತೆ ಒದ್ದಾಡುತ್ತಿರುವ ಈ ಸಮಯದಲ್ಲಿ, ಬಿಜೆಪಿಯ ಮುಸ್ಲಿಂ ಸಮಸ್ಯೆ ಅಥವಾ ಮುಸ್ಲಿಮರ ಬಿಜೆಪಿ ಸಮಸ್ಯೆ(ಯಾವ ರೀತಿಯಿಂದ ಕರೆದರೂ ಸೈ) ಪ್ರಾಮುಖ್ಯತೆ ಪಡೆದೇ ಪಡೆಯುತ್ತದೆ.
ದೇಶದ ಅತಿದೊಡ್ಡ ಅಲ್ಪಸಂಖ್ಯಾತ ವರ್ಗವನ್ನು ಕಡೆಗಣಿಸಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂಬ ತಿಳವಳಿಕೆ ಬಿಜೆಪಿಗೂ ಬಂದಿದೆ. ಅಂದರೆ ಈಗ ಬಿಜೆಪಿಗೆ ಎದುರಾಗಿರುವ ಪ್ರಶ್ನೆ- ಹೇಗೆ ಮುಸ್ಲಿಮರ ಮನ ಗೆಲ್ಲಬೇಕು ಎಂಬುದು.
ಹಾಗಾಗೇ, 'ಆಫ್ಸ್ಟಂಪ್ಡ್' ಎನ್ನುವ ಖ್ಯಾತ ಬ್ಲಾಗಿಗನೊಬ್ಬ ಇತ್ತೀಚೆಗೆ ತನ್ನ ಬ್ಲಾಗ್ನಲ್ಲಿ, 'ಅಲ್ಪಸಂಖ್ಯಾತರ ಸಬಲೀಕರಣದ ಬಗೆಗೆ ಬಿಜೆಪಿಯ ಭವಿಷ್ಯದ ಪ್ರಸ್ತಾವನೆ ಏನಿರಬಹುದು' ಎಂಬುದನ್ನು ಊಹಿಸಿ ಲೇಖನ ಬರೆದಿರುವುದನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತವೆನಿಸುತ್ತಿದೆ. ಆತ ಹೇಳುವುದೇನೆಂದರೆ....
'ಅಲ್ಪಸಂಖ್ಯಾತ ಸಮುದಾಯದಿಂದ ಪ್ರೇರಿತರಾದ ಭಾರತೀಯರೇ, ದಯವಿಟ್ಟು ಬಿಜೆಪಿಗೆ ಮತ ನೀಡಬೇಡಿ! ಮತ ನೀಡಿಲ್ಲ ಎಂದರೂ ಚಿಂತೆಯಿಲ್ಲ, ಆದರೆ ನಮ್ಮ ಬಗ್ಗೆ ಭಯ ಇಟ್ಟುಕೊಂಡು ನೀವು ಆ ಕೆಲಸ ಮಾಡಬೇಡಿ. ಮತ ನೀಡದೇ ಇರಲು ಮುಖ್ಯ ಕಾರಣ ನಿಮ್ಮ ಸಾಮಾಜಿಕ-ಆರ್ಥಿಕ ಆಸಕ್ತಿಗಳಾಗಿರಲಿ, ನಮ್ಮ ಮೇಲಿನ ಭಯವಲ್ಲ.' ಆದರೆ ಇಂಥ ಗ್ರಹಿಕೆಯಿಂದ ಹೃದಯ ಗೆಲ್ಲುವುದು ಸಾಧ್ಯವಿಲ್ಲ. ಮತಗಳನ್ನು ಜಮೆಹಾಕುವ ಹೊಣೆಯಿರುವುದು ರಾಜಕೀಯ ಪಕ್ಷಗಳ ಮೇಲಷ್ಟೇ ಹೊರತು ಮತದಾರರ ಮೇಲಲ್ಲ. ಬಿಜೆಪಿ ಮುಸಲ್ಮಾನರನ್ನು ತಲುಪಬೇಕಿದೆ. ನಿಜ ಹೇಳಬೇಕೆಂದರೆ, ಅವರು ಆ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಬಿಜೆಪಿ ಒಂದು ವಿಷಯ ಅರ್ಥಮಾಡಿಕೊಳ್ಳಬೇಕು: ಅವರದ್ದು ಏಕರೂಪ ಗುಂಪಲ್ಲ. ವರ್ಷಗಳಿಂದ ಬಿಜೆಪಿ, ಹಿಂದು ಮತಗಳನ್ನು ಗಳಿಸುವುದಕ್ಕಾಗಿ ಈ ಸಮುದಾಯವನ್ನು 'ಅನ್ಯರು' ಎಂದೇ ಬಿಂಬಿಸುತ್ತಾ ಬಂದಿದೆ. ಬಿಜೆಪಿಗೆ ಇದರಿಂದ ಲಾಭವಾಗಿದೆಯಾದರೂ, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಅದಕ್ಕೆ ಸಾಧ್ಯವಾಗಿಲ್ಲ. ಭಾರತದ ವಿಶಾಲ ಆಯ್ಕೆಗಳನ್ನು ಒಂದು ಕಡೆ ಕಾಂಗ್ರೆಸ್ ಇನ್ನೊಂದೆಡೆ ಬಿಜೆಪಿ ಪ್ರತಿನಿಧಿಸುತ್ತಿದೆ. ಮುಂದಿನ ಕೆಲವು ವರ್ಷಗಳವರೆಗೆ ಈ ಸನ್ನಿವೇಶ ಬದಲಾಗುವ ಸಾಧ್ಯತೆಯಿಲ್ಲ. ಮುಸಲ್ಮಾನರು ಬಿಜೆಪಿಯನ್ನು ಬದಿಗೆಸರಿಸಿ ಮುನ್ನಡೆಯುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಬಿಜೆಪಿಗೂ ಕೂಡ ಅವರನ್ನು ಕಡೆಗಣಿಸಲು ಆಗುವುದಿಲ್ಲ.ಅಲ್ಪಸಂಖ್ಯಾತರ ಏಳಿಗೆಗಾಗಿ ವಿಶಾಲ ನೀತಿಯನ್ನು ರೂಪಿಸುವುದರಿಂದ ಬಿಜೆಪಿಗೆ ಕೇಂದ್ರ ಮಟ್ಟದಲ್ಲಿ ಲಾಭವಾಗುತ್ತದೆಯಾದರೂ, ಅದಕ್ಕಿಂತಲೂ ಮುಖ್ಯವಾಗಿ, ಬೇರು ಮಟ್ಟದಲ್ಲಿ ನಡೆಯುವ ಬಿಜೆಪಿಯ ರಾಜಕೀಯದ ವೈಖರಿಯೇ ಭವಿಷ್ಯದ ಈ ಸಂಬಂಧವನ್ನು ನಿರ್ಧರಿಸಲಿದೆ.
ರಾಜಕೀಯ ಸ್ಥಳೀಯವಾದದ್ದು. ಎಲ್ಲಾ ರಾಜಕೀಯವೂ ಅಷ್ಟೆ. ಸ್ಥಾನೀಯ ಮಟ್ಟದಲ್ಲಿ ಬಿಜೆಪಿ ಮುಸಲ್ಮಾನರ ಜೊತೆ ಕೈ ಜೋಡಿಸಿದಾಗಲೆಲ್ಲ ಅದು ಗೆದ್ದಿದೆ. 1980ರಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ (ಬಿಜೆಪಿಯ ಮೊದಲ ಶಾಸಕರಲ್ಲಿ ಒಬ್ಬರೂ ಹೌದು)ಕುಸುಮ್ತಾಯಿ ಅಭಯಂಕರ್ ಮುಸ್ಲಿಂ ಬೆಂಬಲದಿಂದಾಗಿ ರತ್ನಗಿರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಇನ್ನು ಮಹಾರಾಷ್ಟ್ರ ಬಿಜೆಪಿಯ ಮಾಜಿ ಶಾಸಕ 'ಬಾಳ ಮನೆ' ಅವರಿಗೂ ಮುಸಲ್ಮಾನರ ಪ್ರಬಲ ಬೆಂಬಲವಿದೆ. ಯಾವಾಗ ನರೇಂದ್ರ ಮೋದಿಯವರಿಗೆ ಈ ವಿಷಯ ಅರ್ಥವಾಯಿತೋ, ಅವರು ಗುಜರಾತ್ನಲ್ಲಿ ಸ್ಥಳೀಯ ಚುನಾವಣೆಗಳ ಮೂಲಕ ಈ ಕೆಲಸಕ್ಕೆ ಮುಂದಾದರು. ಆ ಪ್ರಯತ್ನ ಸಫಲವಾಯಿತು. ಬಿಜೆಪಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಈ ಬಹುಕಾಲದ ಶತ್ರುತ್ವ ಅಳಿಸಿ ಹೋಗಲು ಬಹಳ ಸಮಯವೇ ಹಿಡಿಯಲಿದೆ. ಆದರೆ ಆ ಕೆಲಸಕ್ಕೆ ಶುರುವಾತು ಈಗಲೇ ಆಗಬೇಕು. ಬಿಜೆಪಿ ಅಂತಹ ಹೆಜ್ಜೆ ಇಡಲು ಸಿದ್ಧವಿದೆಯೇ?
- ಸಾಜಿದ್ ಭೊಂಬಾಲ್, ಅಂಕಣಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

