ಕೆಲವೊಂದು ಸಂದರ್ಭಗಳಲ್ಲಿ, ನಾವ್ಯಾರೂ ನಿರೀಕ್ಷಿಸದಂಥ ಕಷ್ಟಗಳು ಎದುರಾಗಿ ಬಿಡುತ್ತವೆ. ದಿಢೀರನೆ ಎದುರಾದ ಸಂಕಷ್ಟದಿಂದ ಕಂಗಾಲಾಗಿ, 'ನಮ್ಮನ್ನು ಯಾಕಪ್ಪಾ ಪರೀಕ್ಷೆ ಮಾಡ್ತೀಯ ಭಗವಂತಾ' ಎಂದು ನೋವಿನಿಂದ, ಸಿಟ್ಟಿನಿಂದ ಕಾಣದ ದೇವರಿಗೆ ಪ್ರಶ್ನೆ ಹಾಕಿದ ಸಂದರ್ಭದಲ್ಲೇ ಯಾವುದೋ ಒಂದು ಕಾಣದ ಕೈ ನೆರವಿಗೆ ಬರುತ್ತದೆ. ಅಂಥ 2 ಪ್ರಸಂಗಗಳನ್ನು ವಿವರಿಸುತ್ತಿದ್ದೇನೆ. ಓದಿಕೊಳ್ಳಿ.
- ಹೈದರಾಬಾದ್ ಮೂಲದ ಹುಡುಗಿಯೊಬ್ಬಳು ಕಾಲ್ಸೆಂಟರ್ ಕೆಲಸಕ್ಕೆಂದು ಬೆಂಗಳೂರಿಗೆ ಬಂದಳು. ಜೆ.ಪಿ. ನಗರದ ಪಿ.ಜಿ.ಯೊಂದರಲ್ಲಿ ವಾಸವಿದ್ದಳು. ತೆಲುಗು ಹಾಗೂ ಬಟ್ಲರ್ ಇಂಗ್ಲೀಷ್ ಬಿಟ್ಟರೆ ಬೇರೊಂದು ಭಾಷೆ ಆಕೆಗೆ ಗೊತ್ತಿರಲಿಲ್ಲ. ಈ ಹುಡುಗಿ, ಎರಡನೇ ತಿಂಗಳ ಸಂಬಳ ಪಡೆದುಕೊಂಡ ಮರುದಿನವೇ 'ಅಮ್ಮನಿಗೆ ಆಕ್ಸಿಡೆಂಟ್' ಎಂಬ ಸುದ್ದಿ ಹೈದ್ರಾಬಾದ್ನಿಂದ ಬಂದಿದೆ. ಈಕೆ, ಗಾಬರಿಯಾಗಿ, ಆಸ್ಪತ್ರೆಯ ಖರ್ಚಿಗೆ ಬೇಕಾಗುತ್ತದೆ ಎಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಹೈದ್ರಾಬಾದ್ಗೆ ಟಿಕೆಟ್ ಬುಕ್ ಮಾಡಿಸಿದ್ದಾಳೆ. ನಂತರ ಪರ್ಸ್ನಲ್ಲಿ ದುಡ್ಡು, ಮೊಬೈಲ್, ಎಟಿಎಂ ಕಾರ್ಡ್, ಬಸ್ ಟಿಕೆಟ್ ಇಟ್ಟುಕೊಂಡು ಬಿಟಿಎಸ್ನಲ್ಲಿ ಮೆಜೆಸ್ಟಿಕ್ ತಲುಪಿದ್ದಾಳೆ. ಅವಳು ಬಸ್ನಿಂದ ಇಳಿದು ಹತ್ತು ಹೆಜ್ಜೆ ನಡೆದಿಲ್ಲ. ಆಗಲೇ ರೊಯ್ಯನೆ ನುಗ್ಗಿ ಬಂದ ಕಳ್ಳನೊಬ್ಬ ಆಕೆಯನ್ನು ಜೋರಾಗಿ ತಳ್ಳಿ, ಪರ್ಸ್ ಕಿತ್ತುಕೊಂಡು ಓಡಿ ಬಿಟ್ಟಿದ್ದಾನೆ. ಇದಿಷ್ಟೂ ಒಂದೇ ನಿಮಿಷದಲ್ಲಿ ನಡೆದು ಹೋಗಿದೆ. ಈ ಹುಡುಗಿ, ಹೆಲ್ಪ್, ಹೆಲ್ಪ್ ಎಂದು ಚೀರಿಕೊಂಡಾಗ ಎಲ್ಲರೂ ಇವಳತ್ತ ತಿರುಗಿದ್ದಾರೆ. ಕಳ್ಳ ಪರಾರಿಯಾಗಿದ್ದಾನೆ!
ಹುಡುಗಿ, ಗೊಳೋ ಎಂದು ಅಳುತ್ತಾ ತನಗೆ ಗೊತ್ತಿದ್ದ ಅರೆಬರೆ ಇಂಗ್ಲೀಷ್ನಲ್ಲಿಯೇ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ತಕ್ಷಣ ಹೋಗಿ ಪೊಲೀಸ್ ಕಂಪ್ಲೆಂಟ್ ಕೊಡಿ, ನಿಮ್ಮ ಫ್ರೆಂಡ್ಸ್ಗೆ ಫೋನ್ ಮಾಡಿ. ಬ್ಯಾಂಕ್ಗೆ ತಕ್ಷಣ ಫೋನ್ ಮಾಡಿ ಅಕೌಂಟ್ ಬ್ಲಾಕ್ ಮಾಡಿಸಿ ಎಂದೆಲ್ಲಾ ಸಲಹೆಗಳು ಹಲವರಿಂದ ಬಂದಿವೆ. ಮತ್ತೆ ಕೆಲವರು, 'ಏನಾಗಿದೆ? ಪಿಕ್ಪಾಕೆಟ್ಟಾ? ಎಷ್ಟಿತ್ತು ದುಡ್ಡು? ಮೊಬೈಲೂ ಇತ್ತಾ? ಯಾವ ಕಂಪನೀದಂತೆ ಮೊಬೈಲು ಎಂದೆಲ್ಲಾ ವಿಚಾರಿಸಿ ಕೊನೆಗೆ -ಪಾಪ ಛೇ, ಎಂದು ಉದ್ಗರಿಸಿ ಹೋಗಿ ಬಿಟ್ಟಿದ್ದಾರೆ. ಆದರೆ, ಆ ಹುಡುಗಿಗೆ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ.
ಹೀಗಿದ್ದಾಗಲೇ, ತರುಣನೊಬ್ಬ ಎಲ್ಲವನ್ನೂ ಗಮನಿಸಿದ್ದಾನೆ. ಆ ಹುಡುಗಿಯ ಮುಂದೆ ನಿಂತು ಏನಾಯ್ತು? ಎಲ್ಲಿಗೆ ಹೊರಟಿದ್ರಿ? ಇವತ್ತು ನಿಮ್ಮ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ್ರೆ ಆಗೋದಿಲ್ವಾ ಎಂದು ಪ್ರಶ್ನಿಸಿದ್ದಾನೆ. ಹುಡುಗಿ, ಮನೆಯಿಂದ ಫೋನ್ ಬಂದ ವಿಷಯ, ಅಮ್ಮನಿಗೆ ಆಕ್ಸಿಡೆಂಟ್ ಆಗಿರುವ ವಿಷಯ ಹೇಳಿದ್ದಾಳೆ. ಹೈದ್ರಾಬಾದ್ನ ನಂಬರ್ ಕೇಳಿದ ಹುಡುಗ, ಅಲ್ಲಿಗೆ ಫೋನ್ ಮಾಡಿ ಹುಡುಗಿಯ ಮಾತಿನಲ್ಲಿ ಸುಳ್ಳಿಲ್ಲ ಎಂದು ಪಕ್ಕಾ ಮಾಡಿಕೊಂಡಿದ್ದಾನೆ. ನಂತರ ಸರಸರನೆ ಎಟಿಎಂಗೆ ಹೋಗಿ ಸ್ವಲ್ಪ ದುಡ್ಡು ತಂದು ಆಕೆಯ ಕೈಗಿಟ್ಟು, ಈಗ ಎದ್ದೇಳಿ. ನಿಮಗೆ ಬಸ್ ಟಿಕೆಟ್ಗೆ ಏನಾದ್ರೂ ವ್ಯವಸ್ಥೆ ಮಾಡೋಣ ಎಂದಿದ್ದಾನೆ. ಗುಂಪುಗೂಡಿದ್ದ ಜನರಿಗೆ -ನಿಮ್ಮಿಂದ ಆಗುವಷ್ಟು ಸಹಾಯ ಮಾಡಿ. ಈ ಹುಡುಗಿ ಕಷ್ಟಕ್ಕೆ ಸಿಕ್ಕೊಂಡಿದ್ದಾಳೆ...' ಎಂದಿದ್ದಾನೆ. ಅವನ ಮಾತು ಪರಿಣಾಮ ಬೀರಿದೆ. ಪ್ರಯಾಣಿಕರು, ಕಾಲೇಜು ಹುಡುಗಿಯರು, ಕಂಡಕ್ಟರುಗಳು ನೂರು, ಇನ್ನೂರು, ಐನೂರು ರೂಪಾಯಿಗಳನ್ನು ಕೊಟ್ಟಿದ್ದಾರೆ. ಕೇವಲ ನಲವತ್ತು ನಿಮಿಷದಲ್ಲಿ ಹದಿನೈದು ಸಾವಿರದಷ್ಟು ಹಣ ಒಟ್ಟಾಗಿದೆ. ತಕ್ಷಣವೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿದ್ದ ಅಧಿಕಾರಿಗಳಿಗೆ ಎಲ್ಲ ವಿಷಯ ತಿಳಿಸಿದರೆ, ಅವರೂ ತಕ್ಷಣವೇ ಟಿಕೆಟ್ನ ವ್ಯವಸ್ಥೆ ಮಾಡಿದ್ದಾರೆ.
ಈಗ ಆ ಹುಡುಗಿ ಹೇಳುವುದು ಒಂದೇ ಮಾತು. ಈ ಬೆಂಗಳೂರನ್ನ, ಇಲ್ಲಿನ ಜನರನ್ನ, ಅವರು ತೋರಿಸಿದ ಪ್ರೀತಿಯನ್ನು ನಾನು ಯಾವತ್ತೂ ಮರೆಯಲಾರೆ. ಅಷ್ಟೇ ಅಲ್ಲ. ಯಾರೇ ಕಷ್ಟದಲ್ಲಿದ್ರೂ ಅವರಿಗೆ ತಕ್ಷಣ ನೆರವಾಗ್ತೀನಿ. ಆ ಮೂಲಕ ಪರಿಚಯವೇ ಇಲ್ಲದ ಜನ ನನಗೆ ಮಾಡಿದ ಸಹಾಯವನ್ನು ನೆನಪಿಸಿಕೊಳ್ತೇನೆ...
- ಈ ಘಟನೆ ನಡೆದದ್ದು ಚಿತ್ರದುರ್ಗ-ದಾವಣಗೆರೆಯ ಮಧ್ಯೆ ಇರುವ ಹಳ್ಳಿಯಲ್ಲಿ. ಗಂಡ, ಹೆಂಡತಿ ಹಾಗೂ ಮೂರು ವರ್ಷದ ಮಗು ಆ ಮನೆಯ ಸದಸ್ಯರು. ಗಂಡ ಯಾವುದೋ ಕೆಲಸದ ಮೇಲೆ ಬೇರೊಂದು ಊರಿಗೆ ಹೋಗಿದ್ದಾನೆ. ಹೆಂಡತಿ, ಮನೆ ಕೆಲಸದಲ್ಲಿ ಮೈಮರೆತಿದ್ದಾಳೆ. ಈ ಮಗುವಿನ ಕೈಗೆ ಜಿರಲೆ ಸಾಯಿಸಲೆಂದು ತಂದಿಟ್ಟಿದ್ದ 'ಲಕ್ಷಣರೇಖೆ' ಸಿಕ್ಕಿ ಬಿಟ್ಟಿದೆ. ಅದೇನೋ ತಿಂಡಿ ಎಂದು ಭಾವಿಸಿ, ತಿನ್ನಲು ಪ್ರಯತ್ನಿಸಿದೆ. ಒಂದೆರಡು ಸಣ್ಣ ಉಂಡೆಗಳನ್ನು ಕಡಿದು ನುಂಗಿ ಬಿಟ್ಟಿದೆ. ಕೆಲವೇ ಕ್ಷಣಗಳಲ್ಲಿ ಕಿಟಾರನೆ ಕಿರುಚುತ್ತಾ ಒದ್ದಾಡ ತೊಡಗಿದೆ.
ಮಗು ಅಳುವುದನ್ನು ಕೇಳಿ ಓಡಿ ಬಂದ ತಾಯಿಗೆ, ವಿಷಯ ಏನೆಂದು ಅರ್ಥವಾಗಿದೆ. ಆಗ ಮುಸ್ಸಂಜೆಯ ಹೊತ್ತು. ಆ ಕುಗ್ರಾಮದಲ್ಲಿ ವೈದ್ಯರು ಎಲ್ಲಿಂದ ಬರಬೇಕು? ಈಕೆ ಲಬೋ ಲಬೋ ಎನ್ನುತ್ತಾ ತಾನು ಧರಿಸಿರುವುದು ನೈಟಿ ಎಂಬುದನ್ನೂ ಮರೆತು ಮಗುವನ್ನು ಎತ್ತಿಕೊಂಡು ಊರಿಂದ ಅರ್ಧ ಮೈಲಿ ದೂರವಿದ್ದ ಹೆದ್ದಾರಿಗೆ ಓಡುತ್ತಾ ಬಂದಿದ್ದಾಳೆ. ಎಕ್ಸ್ ಪ್ರೆಸ್ ಬಸ್ಗಳಿಗೆ ಅವಳ ಅಳು, ಗೋಳು ಕಾಣಿಸಿಲ್ಲ. ಹೀಗಿರುವಾಗಲೇ ಕಾರ್ನಲ್ಲಿ ದಾವಣಗೆರೆಗೆ ಹೊರಟಿದ್ದ ದಂಪತಿಗೆ ಆಕೆಯನ್ನು ಕಂಡು ಅಯ್ಯೋ ಎನ್ನಿಸಿದೆ. ತಕ್ಷಣ ಕಾರ್ ನಿಲ್ಲಿಸಿ ವಿಚಾರಿಸಿದ್ದಾರೆ. ಆಕೆಯನ್ನು ಕಾರ್ಗೆ ಹತ್ತಿಸಿಕೊಂಡು ತುಂಬ ವೇಗವಾಗಿ ದಾವಣಗೆರೆಗೆ ತಲುಪಿದ್ದಾರೆ. ಒಳ್ಳೆಯ ಚಿಕಿತ್ಸೆ ನೀಡುವ ನರ್ಸಿಂಗ್ ಹೋಂ ಎಲ್ಲಿದೆ ಎಂದು ವಿಚಾರಿಸಿ, ಅಲ್ಲಿಗೆ ತಲುಪಿಕೊಂಡಿದ್ದಾರೆ. ಎರಡು ಗಂಟೆಗಳ ಸುಧೀರ್ಘ ಚಿಕಿತ್ಸೆಯ ನಂತರ-'ಮಗು ಅಪಾಯದಿಂದ ಪಾರಾಗಿದೆ. ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡ್ತೇವೆ' ಎಂದು ವೈದ್ಯರು ಘೋಷಿಸಿದ್ದಾರೆ.
ಕಾರ್ನಲ್ಲಿದ್ದ ದಂಪತಿ, ಆಗ ನಡೆದುದನ್ನೆಲ್ಲ ಡಾಕ್ಟರ್ಗೆ ವಿವರಿಸಿದ್ದಾರೆ. ಬಿಲ್ ಎಷ್ಟಾಗಿದೆ ಸರ್ ಎಂದು ವಿಚಾರಿಸಿ, ಅದದನ್ನೂ ಪಾವತಿಸಿ, ಮಗುವಿನ ತಾಯಿಗೆ 200ರು. ಕೊಟ್ಟು, ಹುಷಾರಾಗಿ ಮನೆ ತಲುಪಿಕೊಳ್ಳಮ್ಮ. ಊರಿಗೆ ಹೋದ ಮೇಲೆ ಯಾರಿಂದಾದ್ರೂ ಒಂದು ಫೋನ್ ಮಾಡಿಸು ಅಂದಿದ್ದಾರೆ. ಈಕೆ ಭಾವುಕಳಾಗಿ ಕೈ ಮುಗಿದು ಬಿಕ್ಕಳಿಸಿದರೆ - ಒಂದು ವೇಳೆ, ನೀನು ನಮ್ಮ ಅಕ್ಕನೋ, ತಂಗಿಯೋ ಆಗಿದ್ದಿದ್ರೆ ನಾವು ಹೆಲ್ಪ್ ಮಾಡ್ತಾ ಇರಲಿಲ್ವಾ? ಈಗಲೂ ಅಂಥದೇ ಒಂದು ಸಂಬಂಧ ಅಂದ್ಕೋ ಎಂದು ಹೇಳಿ, ಕೈ ಬೀಸಿ ಕಾರು ಹತ್ತಿದರಂತೆ...
ಇವೆರಡೂ ಪಿ.ಜಿ.ಯಲ್ಲಿ ನನ್ನೊಂದಿಗಿರುವ ಗೆಳತಿ ಸಂಧ್ಯಾ ಹೇಳಿದ ಪ್ರಸಂಗಗಳು. ಇವನ್ನು ನೆನಪಿಸಿಕೊಂಡಾಗಲೆಲ್ಲ ಯಾಕೋ ಖುಷಿಯಾಗುತ್ತದೆ. ಯಾಕೋ ಕಣ್ತುಂಬಿ ಬರುತ್ತದೆ. ಯಾಕೋ...
- ನಾನು ಪ್ರಣತಿ