ಅಂಕಣಗಳು

ಬರಹದಲ್ಲಿ ಲಿಪ್‌ಸ್ಟಿಕ್ ಬೇಕೋ, ಐಸ್‌ಕ್ರೀಂ ಬೇಕೋ?

Published On :

ಕಳೆದ ಎಂಟು ವರ್ಷಗಳಿಂದ ರಾಕ್ಣೊ (ರಕ್ಷಕ) ಕೊಂಕಣಿ ವಾರಪತ್ರಿಕೆ ಹಾಗೂ ಕಾಜುಲೊ (ಮಿಂಚುಹುಳ) ಕೊಂಕಣಿ ಮಕ್ಕಳ ಮಾಸಪತ್ರಿಕೆಗಳಲ್ಲಿ ಸಂಪಾದಕನಾಗಿರುವೆ. 1938ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ರಾಕ್ಣೊ ಪತ್ರಿಕೆಯು ಈ ವರ್ಷ ಅಮೃತೋತ್ಸವ ವರ್ಷಾಚರಣೆಗೈಯುತ್ತಿದೆ. ತನ್ನಿಮಿತ್ತ ಈ ಲೇಖನ...
ಪತ್ರಿಕಾ ಕಚೇರಿ ಒಂದು ಭೋಜನಾಲಯವಿದ್ದಂತೆ. ಒಂದು ಪತ್ರಿಕೆ ಅಥವಾ ನಿಯತಕಾಲಿಕ ರಸವತ್ತಾದ ಒಂದು ಊಟದ ಬಟ್ಟಲಿದ್ದಂತೆ. ಅದರಲ್ಲಿ ವಿಭಿನ್ನತೆಯ ವಿಧವಿಧದ ಸಾಹಿತ್ಯಿಕ ಭಕ್ಷ್ಯಗಳಿರುತ್ತವೆ. ವಡೆ-ಆಂಬಡೆಗಳಿರುತ್ತವೆ, ತುಪ್ಪ- ಉತ್ತಪ್ಪಗಳಿರುತ್ತವೆ, ಅನ್ನ- ಚಿತ್ರಾನ್ನಗಳಿರುತ್ತವೆ, ಸ್ವೀಟ್- ಉಪ್ಪಿಟ್ಟುಗಳಿರುತ್ತವೆ, ಮೀನು- ಜೇನುಗಳಿರುತ್ತವೆ.
ಆ ಸಾಹಿತ್ಯಿಕ ಬಟ್ಟಲಿನಲ್ಲಿ ಕತೆ- ಕವಿತೆ- ಗೀತೆಗಳ ಸಾಲುಗಳಿವೆ. ಜನಜೀವನದ ಸವಾರಿಗಳು ಮತ್ತು ಅವುಗಳ ಮೇಲೆ ಹೆಣೆದ ಕಾದಂಬರಿಗಳಿವೆ, ವಿಡಂಬನೆ, ಚಿಂತನೆ- ಮಂಥನಗಳಿವೆ. ಕಥನ, ಪ್ರವಾಸ ಕಥನ ಹಾಗೂ ಪ್ರಹಸನಗಳಿವೆ. ಗದ್ಯ- ಪದ್ಯಗಳು ಒಂದಾಗಿ ಜೀವನವೆಂಬ ಕಥೆ ಹಳ್ಳಿ- ಕೇರಿಗಳಲ್ಲಿ ನಡೆಯುತ್ತಿದೆ. ಊರು-ಪಟ್ಟಣಗಳಲ್ಲಿ ರಿಕ್ಷಾಗಳಲ್ಲಿ ಪಯಣಿಸುತ್ತದೆ. ಹಳ್ಳ-ಕೊಳ್ಳ-ಕೆರೆ, ಬಾವಿ ಭುವಿಯಲ್ಲಿ ಜಿಗಿದು- ನೆನೆದು ಮುನ್ನಡೆಯುತ್ತಿದೆ. ಆಕಾಶದ ಎತ್ತರದಲ್ಲಿ ಹಾಗೂ ಸಾಗರದ ಆಳದಲ್ಲಿ ಏರಿ ಇಳಿಯುತ್ತಿದೆ. ಪುಟ ಪುಟಗಳಲ್ಲಿ ದಿಟ್ಟದಿಟ್ಟನೆ ಹೆಜ್ಜೆಗಳನ್ನಿಟ್ಟು ಪಟಪಟನೆ ಜೇಂಕಾರವನ್ನೀಯುತ್ತಾ ಕಥೆ- ಕವಿತೆ- ಹನಿಕಥೆ- ಮಿನಿಕಥೆ-ಮಹಾಕಥೆ ರುಂಯ್ಯನೆ ಓಡೋಡಿ ಹೋಗುವಾಗ ಪತ್ರಿಕೆಯೆಂಬ ಬಟ್ಟಲು ಓದುಗನ ಕೈಯಲ್ಲಿ ಬಟ್ಟಲಿನ ತಂಪು ಚೆಲ್ಲುವಾಗ ಅವನ ಮನದಲ್ಲಿ ಸಾಹಿತ್ಯಿಕ ರುಚಿಯ ಕಂಪು ಮೇಲೇರಿ ಅವನ ಹೃದಯದಲ್ಲಿ ಅದರ ಇಂಪು ತುಂಬಿ ತುಳುಕುವಾಗ ವೈವಿಧ್ಯ ಭಕ್ಷಗಳ ಭವ್ಯ ರುಚಿ ಒಬ್ಬರಿಂದ ಮತ್ತೊಬ್ಬರಿಗೆ ಹಂಚುತ್ತಾ ಹೋಗುವ ಪ್ರಕ್ರಿಯೆಯೇ ಸಾಹಿತ್ಯ ಕೃಷಿ ಅಥವಾ ಸಾಹಿತ್ಯಿಕ ಶ್ರೀಮಂತಿಕೆ.
ಶ್ರೀಮಂತಿಕೆಯ ಸಾಹಿತ್ಯ ಕೃಷಿಯಲ್ಲಿ ರಾಶಿ ರಾಶಿ ಖುಶಿಯಿದೆ. ಓದುಗನನ್ನು ಹೊಸ ಚಿಂತನೆಗೆ- ರಚನಾತ್ಮಕತೆಗೆ ಒಯ್ಯುವ ಸಾಹಿತ್ಯದ ಹಸಿರು ಸಸಿಯಿದೆ. ಹಾಗೂ ಓದುಗನನ್ನು ಕಾರ್ಯಾಚರಣೆಗೆ ಒಯ್ಯುವಂತ ಬಿಸಿಯನ್ನ ಅವನ ತನು- ಮನಕ್ಕೆ ತಾಗಿಸಿ ಅವನನ್ನು ಎದ್ದೇಳಿಸುವ ತಾಕತ್ತು ಈ ಸಾಹಿತ್ಯದ ಬಟ್ಟಲಲ್ಲಿದೆ. ಅದರಲ್ಲಿ ವಾದ- ಸಂವಾದಗಳು ತುಂಬಿವೆ, ಶಕ್ತಿ- ಭಕ್ತಿಯಿದೆ, ಹಾವ- ಭಾವಗಳನ್ನು ಬದಲಿಸುವ ಪ್ರಭಾವವಿದೆ. ಹೊಚ್ಚ ಹೊಸತನವನ್ನು ಬೀರುವ ಸ್ವಭಾವವಿದೆ, ನವ ನವೀನತೆಯನ್ನು ತುಂಬುವ ಪ್ರೇರಣೆ- ನಿರೂಪಣೆಗಳಿವೆ. ಮನುಷ್ಯನನ್ನು ಜಾಡಿಸಿ ಅವನಲ್ಲಿದ್ದ ಅರೆನಿದ್ದೆಯನ್ನೋಡಿಸಿ ಬಿಡುವ ಚಿತ್ರಗಳು, ಸೂತ್ರಗಳು, ವಿಚಿತ್ರಗಳು ಹಾಗೂ ಕ್ಯಾಪ್ಸೂಲುಗಳಿವೆ. ನವಚೇತನಗಳಿಂದ ತುಂಬುವಂತಹ ವಿಶೇಷ- ಆದೇಶ-ಸಂದೇಶಗಳಿವೆ.  
ಈಗಿನ ಬದಲಾದ ಕಾಲದಲ್ಲಿ ಸಾಹಿತ್ಯದ ರುಚಿ- ಶೈಲಿಗಳೂ ಕೆಲವೊಮ್ಮೆ ಮಾತ್ರವಲ್ಲ ಹಲವಾರು ಬಾರಿ ಬದಲಾದಂತಿವೆ. ಇಂತಹ ಕೆಲವು ಬರಹಗಳು ಬ್ಯೂಟಿಪಾರ್ಲರ್‌ನಲ್ಲಿ ಕೃತಕ ಮೇಕಪ್ ಮಾಡಿಸಿದಂತಿವೆ. ಈ ಬ್ರೈಡಲ್ ಮೇಕಪ್‌ಗಳಲ್ಲಿ ರಂಗು- ಬಣ್ಣಗಳು ವಿಪರೀತ. ಅವು ನೋಡಲು ಬಲು ಆಕರ್ಷಕ. ಆದರೆ ಎಲ್ಲಾ ಪಾತ್ರ ವಿಶೇಷಗಳು ಕೃತಕ. ಕೃತಕ ಮೇಕಪ್ಪು ಒಂದೆರಡು ತಾಸುಗಳಲ್ಲೇ ಜಾಡಿಸಿ ಬಿದ್ದು ಹೋದಂತೆ ಇಂತಹ ಬರಹ- ಕೃತಿಗಳು ಓದುಗನ ಮನದಿಂದ ಓದು ಮುಗಿಯುವ ಮೊದಲೇ ಹೊರಗೆಲ್ಲೋ ಚೆಲ್ಲಿ ಬಿಡುತ್ತವೆ.
ಒಂದಿಷ್ಟು ಈ ಕಾಲದ ಬರಹಗಳು ಕೇಟರಿಂಗ್ ಊಟದಂತಿವೆ. ಅದು ದೊಡ್ಡ ರಾಶಿ ಬರಹ- ಅವಸರದಲ್ಲಿ ಕತ್ತರಿಸಿ-ಕಡಿದು-ಕುದಿಸಿದ್ದು. ಅವಸರದಲ್ಲೇ ಅಡುಗೆ ಮಾಡಿ ತಂದು ಮತ್ತಷ್ಟು ಬಿಸಿ ಮಾಡಿ ಆಜಿನಮೋಟೊ ಹಾಗೂ ಬಣ್ಣಗಳನ್ನು ಕೂಡಿಸಿ ಫಳ ಫಳ ಹೊಳೆಯುವ ಕಡಾಯಿ - ಟ್ರೇಗಳಲ್ಲಿ ಶೃಂಗರಿಸಿ ಇಟ್ಟಿರುವರು. ಆದರೂ ಒಂದು ಸಣ್ಣ ಸಮಸ್ಯೆ ಇದೆ. ಅದರ ಒಳರುಚಿ ಎಲ್ಲಾ ಒಂದೇ, ಇನ್ನಷ್ಟು ತಿನ್ನುವೆನೆಂದರೆ ಮುಖಕ್ಕೇ ಬಡಿದಂತಾಗುವುದು. ನಾಲಗೆಯಲ್ಲಿ ರುಚಿಯೇ ತಾಗುವುದಿಲ್ಲ. ಬಟ್ಟಲು ತುಂಬಾ ತರುವುದು ಮತ್ತು ಕಸದ ಬುಟ್ಟಿಗೆ ಬಿಸಾಡುವುದು.
ಒಂದಿಷ್ಟು ಬರಹಗಳು ಪಾಸ್ಟ್‌ಫುಡ್‌ಗಳಂತೆ. ವೈವಿಧ್ಯ ಜಾಸ್ತಿ ಆದರೆ ರುಚಿ ಕಮ್ಮಿ. ಬಣ್ಣಗಳು ತುಂಬಿವೆ ಆದರೆ  ರುಚಿಯೇ ಇಲ್ಲ. ಕಟ್ಟಿದ ಪ್ಯಾಕೇಟು ಭಾರೀ ಜೋರು ಆದರೆ ಒಳ ತಾಕತ್ತು ಒಂದಿಷ್ಟು ಮಾತ್ರ. ಇದನ್ನು ತಿನ್ನುವುದು ಜಾಸ್ತಿ ಆದರೆ ಜೀರ್ಣಿಸಿಕೊಳ್ಳುವುದು ಕಡಿಮೆ. ಇನ್ನೂ ತಿನ್ನುತ್ತಲೇ ಇರಬೇಕು ಎನ್ನುವ ವ್ಯಸನ, ಆದರೆ ತಿಂದ ಮೇಲೆ ಆಯಾಸದ ಮನ. ಈ ದಿನದ ಕೆಲವು ಧಾರಾವಾಹಿಗಳ ಕತೆಗಳು ಈ ಫಾಸ್ಟ್‌ಫುಡ್‌ಗಳೇ. ಅವುಗಳಲ್ಲಿ ವ್ಯಸನ ಜಾಸ್ತಿ ಆದರೆ ಜೀವನ ಶೂನ್ಯ.
ಇನ್ನು ಕೆಲವು ಕತೆ- ಕವನಗಳು ಬಾಡಿಗೆ ಇಸ್ತ್ರಿ ಹಾಕಿದ ಬಟ್ಟೆಗಳ ಹಾಗೆ. ಹೊಸ ಪ್ಯಾಕ್, ಹೊಚ್ಚ ಹೊಸ ಪ್ಯಾಕೆಟ್, ನೋಡಲು ಬಲು ಚೆಂದದ ಹೊಸತನ. ಆದರೆ ಒಮ್ಮೆ ಬಿಡಿಸಿ ಅನುಭವಿಸುವಷ್ಟರಲ್ಲಿ ಅದರ ಇಸ್ತ್ರಿ ಮಾಯ. ಅರ್ಧ ಗಂಟೆ ಕಳೆಯುವುದರೊಳಗೇ ಅದು ಹಳೇ ಚಿಂದಿ ಬಟ್ಟೆಯ ಹಾಗೆ ಒಂದು ಥರಾ ವಾಸನೆ.
ಕೆಲವು ಬರಹಗಳನ್ನಂತೂ ಐಸ್‌ಕ್ರೀಮ್‌ಗೆ ಹೋಲಿಸಬಹುದು. ಕುಳಿತುಕೊಳ್ಳುವ ಆಸನ, ಐಸ್ಕ್ರೀಮ್ ಇಟ್ಟಿರುವ ಪ್ಲೇಟು ಎಲ್ಲಾ ಅಲಂಕೃತ. ಎಲ್ಲಾ ಕಡೆ ಥಂಡಾ ಥಂಡಾ, ಕೂಲ್ ಕೂಲ್. ಬಹಳಷ್ಟು ಚಿಲ್ ಚಿಲ್ ಥ್ರಿಲ್ ಥ್ರಿಲ್ ಮತ್ತೆ ಕೊನೆಗೊಂದು ಒಂದು ಮೀಟರ್ ಉದ್ದದ ಬಿಲ್. ಸಾಹಿತ್ಯ ನುಂಗುವಾಗ ಬಹಳ ತಂಪು- ಥಂಡಾ ಥಂಡಾ. ಪಾರ್ಲರ್‌ನಿಂದ ಹೊರಗೆ ಕಾಲಿಡುವಾಗ ಮಾತ್ರ ಪುನಃ ಬಿಸಿ ಬೆವರು. ಒಳಗೆ ಪ್ರಭಾವ ಫುಲ್, ಆದರೆ ಹೊರಗೆ ಬಂದಾಗ ಮಾತ್ರ ಎಲ್ಲ ನಿಲ್ ಮತ್ತು ಡಲ್. ಕೊನೆಗೆ ಉಳಿಯುವುದು ಕ್ಯಾಶಿಯರ್ ನೀಡಿದ ಬಿಲ್ ಮಾತ್ರ.
ಬರಹಗಳು ಬೇಕು ಕೆರೆಯಲ್ಲಿ ನೀರು ಅಲುಗಾಡಿದಾಗ ಅದರಲ್ಲಿ ಬಿದ್ದ ಪ್ರತಿಬಿಂಬದಂತೆ ಅಥವಾ ಚಂದ್ರನ ತಾಜಾತನದಂತೆ. ನೀರಿನ ಅಲುಗಾಡುವಿಕೆಯಲ್ಲಿ ಪ್ರತಿಬಿಂಬದ ಸಾವಿರ ತುಂಡುಗಳಾದರೂ ಇನ್ನೊಂದು ಗಳಿಗೆಯಲ್ಲಿ ಅವು ಒಂದಾಗಿ ಮತ್ತದೇ ಸುಂದರ ಪ್ರತಿಬಿಂಬ. ಒಂದು ಉತ್ತಮ ವಾರ್ತೆ- ಕತೆ- ಕವಿತೆ- ಸಾಹಿತ್ಯ ಜೀವನದ ಸಾವಿರ ಅಂಗುಲ- ಮಗ್ಗುಲುಗಳನ್ನು ಒಂದಾಗಿ ಹೆಣೆದು ಒಂದು ಹೊಚ್ಚಹೊಸ ಸೊಗಸನ್ನು ಚೆಲ್ಲುವುದು. ಇಂದಿನ ಡಿಜಿಟಲ್ ಯುಗದ ಜೀವನದ ಬ್ರೇಕ್ ಫೈಲ್‌ನಲ್ಲಿ ಅಂತಹ ಸಾಹಿತ್ಯದ ಅಗತ್ಯವಿದೆ. ಅದು ಸ್ಲಿಮ್ಮಾಗಿರಬೇಕು, ಅದು ಟ್ರಿಮ್ಮಾಗಿರಬೇಕು, ಅದು ಓದುಗನ ಅಂತರಾಳವನ್ನು ಜಿಮ್ ಮಾಡುವಂತಿರಬೇಕು. ಮನವನ್ನು ತಂಪಾಗಿರಿಸುವಂತಿರಬೇಕು, ಹೃದಯದಲ್ಲಿ ಕಂಪನ್ನು ತುಂಬುತ್ತಿರಬೇಕು. ಅದು ಖಂಡಿತ ಜೀವನವನ್ನು ಇಂಪಾಗಿರಿಸುವಂತಿರಬೇಕು.


-ಫಾದರ್ ಫ್ರಾನ್ಸಿಸ್ ರೊಡ್ರಿಗಸ್ ಸಂಪಾದಕರು
ರಾಕ್ಣೊ (ಕೊಂಕಣಿ ವಾರಪತ್ರಿಕೆ)


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.