ಅಂಕಣಗಳು

ಹೊಸ ಸವಾಲು, ಹೊಸ ಅವಕಾಶಗಳ ಬೆನ್ನೇರಿ ಹೊರಟಾಗ...

Published On :

ಏಪ್ರಿಲ್ 2007ರಲ್ಲಿ ನನಗೆ ಬೆಳಗಾವಿಯಿಂದ ವರ್ಗಾವಣೆ ಆಗಿ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡೆ. ನಾನು ಈಗಾಗಲೇ ದೆಹಲಿಯ ಕೇಂದ್ರ ಸರ್ಕಾರದಲ್ಲಿ ಇದೇ ಇಲಾಖೆಯಲ್ಲಿ ಕೆಲಸ ಮಾಡಿದ್ದುದರಿಂದ ಇಲಾಖೆಯ ಕೆಲಸಗಳ ಪೂರ್ಣ ಪರಿಚಯ ನನಗಿತ್ತು. ಆದರೆ ದೆಹಲಿಯಲ್ಲಿ ಮಾಡುತ್ತಿದ್ದ ಯೋಜನೆಗಳೆಲ್ಲಾ ಭಾರೀ ಪ್ರಮಾಣದ್ದಾಗಿತ್ತು. ರಾಜ್ಯ ಸರ್ಕಾರದಲ್ಲಿ ಅದೇ ಕೆಲಸಗಳು ಸಣ್ಣ ಪ್ರಮಾಣದಲ್ಲಿ ನಡೆಯುತ್ತವೆ. ಕೇಂದ್ರದಲ್ಲಿದ್ದಾಗ ಎಲ್ಲಾ ರಾಜ್ಯಗಳ ಯೋಜನೆಗಳನ್ನು ಪರಿಶೀಲಿಸುತ್ತಿದ್ದೆವು. ಹಾಗಾಗಿ ಕರ್ನಾಟಕದಲ್ಲಿ ಈ ಇಲಾಖೆಯಲ್ಲಿ ನಡೆಯುತ್ತಿರುವ ಕೆಲಸಗಳ ಪರಿಚಯವೂ ನನಗಿತ್ತು. ಕರ್ನಾಟಕ ಆಗಲೇ ಸ್ತ್ರೀಶಕ್ತಿ ಯೋಜನೆಯಲ್ಲಿ ಬಹಳ ಹೆಸರು ಮಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ನಾಲ್ಕು ಮುಖ್ಯ ಅಂಗಗಳಾದ ಮಹಿಳೆ, ಮಕ್ಕಳು, ವೃದ್ಧರು ಮತ್ತು ವಿಕಲಚೇತನರು ಈ ಇಲಾಖೆಯ ಅಡಿಯಲ್ಲಿ ಬರುತ್ತಿದ್ದರು. ಹಾಗಾಗಿ ಅಪರಿಮಿತ ಉತ್ಸಾಹದಿಂದ ಈ ಹುದ್ದೆಗೆ ನಾನು ಬಂದೆ. ಈ ಇಲಾಖೆಯ ಕಾರ್ಯದರ್ಶಿಯ ಸ್ಥಾನವನ್ನು ಅಲಂಕರಿಸಿದಾಗ ನನ್ನ ಮನದಲ್ಲಿ ಮೂಡಿದ ಭಾವನೆಗಳು ಹೀಗಿವೆ....
"2001ರ ಜನಗಣತಿಯ ಪ್ರಕಾರ ನಮ್ಮ ಭಾರತದಲ್ಲಿ ಮಹಿಳೆಯರ ಜನಸಂಖ್ಯೆ 495.74 ದಶಲಕ್ಷ. ಅಂದರೆ ಶೇಕಡಾ 48.3ರಷ್ಟು. ಮಹಿಳೆಯ ಉನ್ನತಿ ಆಗಬೇಕಾದರೆ ಹೆಣ್ಣು ಗರ್ಭದಲ್ಲಿರುವ ದಿನಗಳಿಂದ ಮಸಣದವರೆಗೆ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಕರ್ನಾಟಕದಲ್ಲಿ ಪ್ರತಿ ಒಂದು ಸಾವಿರ ಗಂಡು ಮಕ್ಕಳಿಗೆ ಕೇವಲ 964 ಹೆಣ್ಣು ಮಕ್ಕಳಿದ್ದಾರೆ. ಇದಕ್ಕೆ ಮೂಲ ಕಾರಣ ಹೆಣ್ಣು ಭ್ರೂಣ ಹತ್ಯೆ. ಇದರ ಸಂಪೂರ್ಣ ನಿವಾರಣೆ ನನ್ನ ಮೊದಲ ಆದ್ಯತೆ. ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಸರಿಯಾದ ಆರೈಕೆಯಿಲ್ಲದೆ ಸಾವನ್ನಪ್ಪುತ್ತವೆ. ಇದರೊಂದಿಗೆ ಹೆರಿಗೆಯಾದ ಕೂಡಲೇ ಹೆಣ್ಣು ಸರಿಯಾದ ಸೌಕರ್ಯವಿಲ್ಲದೆ ಸಾವನ್ನಪ್ಪುವ ನಿದರ್ಶನಗಳೂ ಜಾಸ್ತಿಯೇ ಇದೆ. ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಸಮಾಜದ ದೊಡ್ಡ ದುರಂತ. ಸರಿಯಾದ ಪೌಷ್ಟಿಕ ಆಹಾರವಿಲ್ಲದೆ, ಅತಿಯಾದ ಕೆಲಸದ ಒತ್ತಡದೊಂದಿಗೆ ಆರೋಗ್ಯವೂ ಹದಗೆಟ್ಟು ಮಹಿಳೆ ರೋಗ ರುಜಿನಗಳಿಂದ ನರಳುವುದು ಸಾಮಾನ್ಯವಾಗಿದೆ. ಕಳಪೆ ನೈರ್ಮಲ್ಯ, ಅನಾರೋಗ್ಯಕರ ವಾತಾವರಣ, ಸ್ವಚ್ಛ ಕುಡಿಯುವ ನೀರಿನ ಅಭಾವ ಮಹಿಳೆಯನ್ನು ಅನಾರೋಗ್ಯದತ್ತ ತಳ್ಳುತ್ತದೆ. ಇದರೊಂದಿಗೆ ಹೆಣ್ಣು ಶಿಕ್ಷಣದಿಂದಲೂ ವಂಚಿತಳಾಗುತ್ತಾಳೆ. ಮನೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಇರುವ ತಾರತಮ್ಯ ದೂರವಾಗಿ ಗಂಡು ಮಗುವಿಗೆ ಸಿಗುವ ಶಿಕ್ಷಣ, ಆರೋಗ್ಯದ ಭಾಗ್ಯ ಹೆಣ್ಣು ಮಗುವಿಗೂ ಸಮನಾಗಿ ಸಿಕ್ಕಾಗ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ.
ಹೆಣ್ಣು ಮತ್ತು ಗಂಡು ಸಮನಾಗಿ ಹೆಜ್ಜೆ ಹಾಕಿದಾಗ ಮಾತ್ರ ಸುಭದ್ರ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮೊಟ್ಟ ಮೊದಲನೆಯದಾಗಿ ಹೆಣ್ಣನ್ನು ಅಶಕ್ತಳು, ಅಸಮರ್ಥಳು, ದುರ್ಬಲಳು ಎಂದು ಪದೇ ಪದೇ ಹೇಳಿ ಅವಳ ಆಂತರಿಕ ಶಕ್ತಿಯನ್ನು ಕುಗ್ಗಿಸಿ, ದಾಸಿಯನ್ನಾಗಿ ಮಾಡಿ ಶತಮಾನಗಳೇ ಕಳೆದಿವೆ. ಆದರೆ ಹೆಚ್ಚಿನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇರುವುದು ಹೆಣ್ಣಿನಲ್ಲೇ. ಇಪ್ಪತ್ತೊಂದನೆಯ ಶತಮಾನದಲ್ಲಿ ವೈದ್ಯೆಯಾಗಿ, ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ವಿಮಾನ ಚಾಲಕಳಾಗಿ, ಅಧಿಕಾರಿಯಾಗಿ, ರಾಜಕೀಯ ನಾಯಕಿಯಾಗಿ, ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಹೆಣ್ಣು ತನ್ನ ಸಾಮರ್ಥ್ಯವನ್ನು ಮೆರೆದಿದ್ದಾಳೆ. ಆದರೆ ಇದು ಕೇವಲ ಪಟ್ಟಣಕ್ಕೆ ಮಾತ್ರ ಸೀಮಿತವಾಗದೆ ಹಳ್ಳಿಯ ಹೆಣ್ಣು ಮಗಳೂ ಪ್ರತಿಯೊಂದು ಘಟ್ಟದಲ್ಲೂ ಗಂಡಿನೊಂದಿಗೆ ಸಹಭಾಗಿಯಾಗಿ ನಿರ್ಣಯವನ್ನು ತೆಗೆದುಕೊಳ್ಳುವಂತಾಗಬೇಕು.
ಎರಡನೆಯದಾಗಿ ಕೇವಲ ಗಂಡು ಮಕ್ಕಳ ಸಂತಾನಕ್ಕೆ ಹಂಬಲಿಸಿ, ಹುಟ್ಟಿದ ಹೆಣ್ಣು ಮಗುವಿಗೆ 'ನೀರು ಮಜ್ಜಿಗೆ', ವಂಶೋದ್ಧಾರಕ ಎಂದು ಗಂಡು ಮಗುವಿಗೆ ಮಾತ್ರ 'ಮೊಸರು' ಎಂಬ ತಾರತಮ್ಯ ನಿಲ್ಲಬೇಕು. ಇಬ್ಬರಿಗೂ ಸಮನಾಗಿ ಶಿಕ್ಷಣ ಮತ್ತು ಆರೋಗ್ಯ ದೊರಕಬೇಕು. ಹೆಣ್ಣು ಸ್ವಭಾವತಃ ಅಬಲೆ. ನಿರ್ಣಯ ತೆಗೆದುಕೊಳ್ಳಲಾಗದವಳು, ನಾಚಿಕೆ ಸ್ವಭಾವದವಳು, ಧೈರ್ಯವಿಲ್ಲದವಳು ಎಂದು ಹೇಳುವ ಮನೋಭಾವ ಬದಲಾಗಬೇಕು.
ಶಿಕ್ಷಣ ದೊರೆತು ದುಡಿಯುವ ಮಹಿಳೆಯ ಪಾಡಂತೂ ಅತ್ಯಂತ ಶೋಚನೀಯವಾಗಿದೆ. ಮಹಿಳೆ ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿಯೂ ದುಡಿಯಬೇಕು, ಮಕ್ಕಳನ್ನೂ ನೋಡಿಕೊಳ್ಳಬೇಕು. ಇದರಿಂದಾಗಿ ಆಕೆಗೆ ದೈಹಿಕ ಮತ್ತು ಮಾನಸಿಕ ಒತ್ತಡ ಅತಿಯಾಗುತ್ತದೆ. ದುಡಿಯುವ ಹೆಣ್ಣು ಮತ್ತು ಗಂಡು ಕೆಲಸ ಮತ್ತು ಜವಾಬ್ದಾರಿಯನ್ನು ಸಮನಾಗಿ ಹಂಚಿಕೊಂಡಾಗ ಮಾತ್ರ ಸಂಸಾರ ಸುಖಮಯವಾಗಿ ಹೆಣ್ಣು ಅನಂದದಿಂದ ಇರಲು ಸಾಧ್ಯ.
ಅತ್ಯಾಚಾರ, ಭ್ರೂಣ ಹತ್ಯೆ, ಶಿಶು ಮರಣ, ಹೆಂಡತಿಯನ್ನು ಹೊಡೆಯುವುದು, ವರದಕ್ಷಿಣೆ ಸಾವು, ಲೈಂಗಿಕ ಕಿರುಕುಳ, ಆರ್ಥಿಕ ಕಿರುಕುಳ, ಈ ರೀತಿಯ ಇನ್ನೂ ವೈಪರೀತ್ಯಗಳು ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಕುಗ್ಗುವಂತೆ ಮಾಡುತ್ತವೆ.
ಸ್ತ್ರೀಯನ್ನು ಪೂಜ್ಯ ಭಾವನೆಯಿಂದ ನಡೆಸಿಕೊಂಡ ಭವ್ಯ ಸಂಸ್ಕೃತಿ ನಮ್ಮದು. ಕರ್ನಾಟಕ ಸರ್ಕಾರ ಪ್ರತಿ ಇಲಾಖೆಯ ತನ್ನ ಕಾರ್ಯ ಯೋಜನೆಗಳಲ್ಲಿ ಶೇ. ಮೂವತ್ತಮೂರು ಭಾಗವನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಇಂಥಹ ಹಲವಾರು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನನ್ನ ಮೊದಲ ಹೆಜ್ಜೆ. ಮಹಿಳೆಯರು ತಮಗೆ ಸಹಾಯ ಬೇಕಾದರೆ ತಮ್ಮ ಹಕ್ಕನ್ನು ಕೇಳುವಂತೆ ಮಾಡುವುದು ನನ್ನ ಎರಡನೆಯ ಹೆಜ್ಜೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಯೋಜನೆಗಳನ್ನೇ ನಂಬಿ ಬದುಕುವ ಮನೋಭಾವ ಬಿಟ್ಟು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತೇವೆ ಎಂಬ ಆತ್ಮ ವಿಶ್ವಾಸ ಅವರಲ್ಲಿ ಹೆಮ್ಮರವಾಗಿ ಬೆಳೆದು ಇನ್ನಿತರರಿಗೆ ಅವರು ನೆರಳಾಗಿ ನಿಲ್ಲುವಂತೆ ಮಾಡುವುದು ನನ್ನ ಪ್ರಮುಖ ಕರ್ತವ್ಯ. ನನಗೆ ಸಮಾಜ ಏನು ಕೊಟ್ಟಿದೆ, ಸರ್ಕಾರ ಏನು ಮಾಡಿದೆ ಎಂಬ ಅನಿಸಿಕೆಯ ಬದಲಾಗಿ 'ನಾನು ಹೇಗೆ ಸಮಾಜಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿ, ಸರ್ಕಾರದ ಯೋಜನೆಗಳಲ್ಲಿ ನಾನು ಹೇಗೆ ಸಹಭಾಗಿಯಾಗಲಿ?' ಎಂಬ ಮಹತ್ತರ ಮನೋಬದಲಾವಣೆ ಬಂದರೆ ಮಹಿಳೆಯರಿಗೆ ನಾಯಕತ್ವ ಸಹಜವಾಗಿ ದೊರಕಿ, ಸುಂದರ ಸಂಸಾರ, ಆರೋಗ್ಯವಾದ ಸಮಾಜ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ.
'ಎಂದು ಮಹಿಳೆ ನಿರ್ಭಯವಾಗಿ ಮಧ್ಯರಾತ್ರಿ ಒಬ್ಬಳೇ ತಿರುಗಾಡಲು ಸಾಧ್ಯವೋ, ಅಂದು ಸ್ವತಂತ್ರ್ಯ ಭಾರತ ರಾಮರಾಜ್ಯವಾಗುತ್ತದೆ' ಎಂದರು ಮಹಾತ್ಮಾ ಗಾಂಧಿಯವರು. ಇಂಥಹ ಭವ್ಯ ಸಮಾಜದ ಕನಸನ್ನು ಸಾಕಾರಗೊಳಿಸಬೇಕಾದುದು ನಮ್ಮ ಕೈಯಲ್ಲಿದೆ. ಕೇವಲ ಮೂಕ ಪ್ರೇಕ್ಷಕರಾಗದೆ ಭವ್ಯ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರೂ ಸಹಭಾಗಿಗಳಾಗಬೇಕು. 'ಮಹಿಳೆಯನ್ನು ಗೌರವಿಸುವ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ದೇಶ ಭಾರತ' ಎಂದು ಇಡೀ ವಿಶ್ವವೇ ಗೌರವಿಸುವಂತೆ ಮಾಡುವುದು ನಮ್ಮ ಧರ್ಮ. ಇದು ಸಾಧ್ಯವಾಗಬೇಕಾದರೆ ಮಹಿಳೆಯ ಆಂತರಿಕ ಶಕ್ತಿ ಪೂರ್ಣ ಪ್ರಮಾಣದಲ್ಲಿ ಹೊರ ಹೊಮ್ಮುವಂತೆ ಮಾಡಬೇಕಾದ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ. ವಿದ್ಯೆ, ವಿವೇಕ, ಹೆಣ್ಣು ಭ್ರೂಣ ಹತ್ಯೆಗೆ ಪೂರ್ಣ ವಿರೋಧ. ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು, ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆ, ಲೈಂಗಿಕ ಕಿರುಕುಳದ ವಿರುದ್ಧ ಸಿಡಿದೇಳುವಿಕೆ, ಆರೋಗ್ಯದ ಬಗ್ಗೆ ಕಾಳಜಿ, ಆಸ್ತಿಯಲ್ಲಿ ಸಮಪಾಲು, ಮಕ್ಕಳ ಅಕ್ರಮ ಸಾಗಾಣಿಕೆಯ ಅಂತ್ಯ, ಹಿರಿಯರು ಮತ್ತು ವಿಕಲಚೇತನರ ಬಗ್ಗೆ ಸಹೃದಯತೆ, ಮಕ್ಕಳ ಆರೋಗ್ಯ, ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆ ತನ್ನ ಮಾನಸಿಕ, ದೈಹಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಸದೃಢತೆಯತ್ತ ಗಮನ ಕೊಟ್ಟಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಮಹಿಳೆ ಅರಳಿ ತನ್ನ ಕುಟುಂಬಕ್ಕೆ, ಸಮಾಜಕ್ಕೆ ಅರ್ಥ ತಂದುಕೊಡುತ್ತಾಳೆ. ಇವುಗಳನ್ನು ಸಾಕಾರಗೊಳಿಸುವುದು ನನ್ನ ನೇತೃತ್ವದಲ್ಲಿ, ನನ್ನ ಇಲಾಖೆಯ ಜವಾಬ್ದಾರಿಯಾಗಿದೆ.
ಕರ್ನಾಟಕ ಸರ್ಕಾರದಲ್ಲಿ ಇಪ್ಪತ್ತೈದು ಇಲಾಖೆಗಳು ಶೇ. ಮೂವತ್ತಮೂರರಷ್ಟು ಯೋಜನೆಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳೆಯ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಗರ್ಭದಲ್ಲಿರುವಾಗಿನಿಂದ ಹಿಡಿದು ಮಣ್ಣಾಗುವವರೆಗೆ ವಿವಿಧ ಹಂತಗಳಲ್ಲಿ ಯೋಜನೆಗಳನ್ನು ರೂಪಿಸಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಭಾಗ್ಯಲಕ್ಷ್ಮಿ ಯೋಜನೆ, ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಗ್ರಾಮಾಂತರ ಪ್ರದೇಶದ ಬಾಲಕಿಯರ ವಸತಿ ನಿಲಯಕ್ಕಾಗಿ ಆರ್ಥಿಕ ನೆರವು, ಮಹಿಳಾ ಕಾನೂನು ಪಧವೀದರರಿಗೆ ಸಹಾಯ ಧನ, ವೃತ್ತಿ ತರಬೇತಿ ಪಡೆಯುವ ಮಹಿಳೆಯರಿಗೆ ಆರ್ಥಿಕ ಸಹಾಯ, ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ, ಮಹಿಳೆಯರಿಗೆ ಉದ್ಯೋಗದಲ್ಲಿ ಶೇ. ಮೂವತ್ತರಷ್ಟು ಮೀಸಲಾತಿ, ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ವಿಶೇಷ ಘಟಕ, ಸಂಕಷ್ಟದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು. ವಿಧವಾ ವೇತನ, ವಿಧವೆಯರ ಮರುವಿವಾಹ ಹಾಗೂ ದೇವದಾಸಿಯರ ವಿವಾಹಕ್ಕೆ ಆರ್ಥಿಕ ನೆರವು. ಹಿರಿಯ ನಾಗರಿಕರಿಗೆ ಮಾಸಾಶನ, ಅಂಗವಿಕಲರ ಕಲ್ಯಾಣ ಮುಂತಾದ ಯೋಜನೆಗಳಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿವೆ. ಈ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿಯುವಂತಾಗಬೇಕು. ಯೋಜನೆಗಳ ಅನುಷ್ಠಾನ ಅಚ್ಚುಕಟ್ಟಾಗಿ, ಪಾರದರ್ಶಕವಾಗಿ ನಡೆಯಬೇಕು ಎನ್ನುವುದು ನನ್ನ ಮನದಾಳದ ಹಂಬಲವಾಗಿತ್ತು."
(ಮುಂದುವರೆಯುವುದು)

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.