ಚಾಮುಂಡಿ ಅಂತಂದ್ರೆ ಕಾವಿಗೆಂಥಾ ಪ್ರೀತಿ ಗೊತ್ತೆ!
ಹೆಣ್ಣು, ಹೊನ್ನು, ಮಣ್ಣುಗಳಿಂದ ದೂರವಿರಬೇಕಾದ ಮಠಗಳು ಇತ್ತೀಚೆಗೆ ಮೈಸೂರಿನ ಮಣ್ಣಿನ ಮೇಲೆ ವಿಪರೀತ ವ್ಯಾಮೋಹ ಬೆಳೆಸಿಕೊಂಡು ಬಿಟ್ಟಿವೆ. ವಾಸ್ತವದಲ್ಲಿ ಸರ್ವಸಂಗ ಪರಿತ್ಯಾಗಿಯಾಗಿರಬೇಕಾಗಿದ್ದ ಇವರು ತಾವು ಪ್ರತಿನಿಧಿಸುತ್ತಿರುವ ಜಾತಿಯ ರಾಜಕೀಯ ಶಕ್ತ್ಯಾನುಸಾರ ಇಡೀ ಊರಿನ ಎಲ್ಲಾ ದಿಕ್ಕುಗಳಲ್ಲಿಯೂ ಕಡಿಮೆ ಬೆಲೆಯಲ್ಲಿ, 'ಪ್ರೈಮ್‌ಲ್ಯಾಂಡ್' ಇರುವೆಡೆ ಯಥಾಶಕ್ತಿ ಎಕರೆಗಟ್ಟಲೆ ಜಾಗ ಖರೀದಿಸುತ್ತಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಶಕ್ತಿಮೀರಿ ಒತ್ತುವರಿ ಮಾಡಿ ಆಸ್ವಾದಿಸುತ್ತಾ, ಅಷ್ಟಿಷ್ಟು ಸಮಾಜ ಸೇವೆ ಹಾಗೂ ಶಿಕ್ಷಣವನ್ನೂ ಸಹಾ ಸಮಾಜಕ್ಕೆ ಉಣಬಡಿಸುತ್ತಾ, ತಾವು ಭಗವಂತನಂತೆ 'ಸರ್ವಾಂತರ್ಯಾಮಿ' ಎಂದು ಮತ್ತೆ ಮತ್ತೆ ನಿರೂಪಿಸುತ್ತಿದ್ದಾರೆ.
ಇನ್ನೊಂದೆಡೆ ಒಂದು ಪಂಗಡದ ಮಠಕ್ಕಿಂತ ತಾವೇನು ಕಡಿಮೆ ಎಂಬ ಧೋರಣೆಯಲ್ಲಿ ಮತ್ತೊಬ್ಬ ಮಠದವರೂ ಹಾಗೆಯೇ ಮಗದೊಬ್ಬರೂ ಕೂಡ ಪೈಪೋಟಿಗೆ ಬಿದ್ದಿದ್ದಾರೆ. ಒಂದು ವೇಳೆ ಸರಕಾರ ಸುಮ್ಮನಿದ್ದರೆ ಇಡೀ ಮೈಸೂರಿಗೆ ಬೇಲಿ ಹಾಕಿ ತಮ್ಮದಾಗಿಸಿಕೊಳ್ಳುವ ತಾಕತ್ತು ಜೊತೆಗೆ ಜೀರ್ಣಶಕ್ತಿ ಈ ಕಾವಿಧಾರಿಗಳಿಗಿದೆ.
ಇವರು ತೊಡಗಿಸಿಕೊಂಡಿರುವ ವಿದ್ಯೆಯೆಂಬ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಬೆಳೆಗಳು ಹಾಗೂ ವಾಣಿಜ್ಯ ಬೆಳೆಗಳು ಎಂಬಂತೆ, ಸಾಂಪ್ರದಾಯಿಕ ಶಿಕ್ಷಣ ಹಾಗೂ ವಾಣಿಜ್ಯ ಶಿಕ್ಷಣ ಎಂಬ ಎರಡು ಪ್ರಕಾರದ ಕೃಷಿಯನ್ನು ನಾವು ಕಾಣಬಹುದು. ವಾಣಿಜ್ಯ ಶಿಕ್ಷಣ ಎಂದರೆ, ಬಿಕಾಂ ಎಂದು ತಪ್ಪಾಗಿ ಅರ್ಥೈಸಬೇಡಿ. ಎಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ಆಧುನಿಕ ವೃತ್ತಿಪರ ಶಿಕ್ಷಣ ಕೋರ್ಸ್‌ಗಳು ವಾಣಿಜ್ಯ ಬೆಳೆಯಂತೆ. ಇಲ್ಲಿ ಡೊನೇಷನ್ ರೂಪದಲ್ಲಿ ಕೋಟಿ ಕೋಟಿ ಕಪ್ಪು ಹಣ ಸಂಪಾದನೆ ಮಾಡಬಹುದು. ತೆರಿಗೆಯಂತೂ ಮೊದಲೇ ಇಲ್ಲ. ಇನ್ನುಳಿದಂತೆ ಇವರು ನಡೆಸುತ್ತಿರುವ ಬಾಕಿ ಇತರೆ ಸೇವಾ ಸಂಸ್ಥೆಗಳ ಒಟ್ಟು ವಹಿವಾಟು ಕೇವಲ ತರೀ ಜಮೀನಿನ ಬೇಸಾಯದಂತೆ. ಆದರೂ ಇದು ಇವರಿಗೆ ಲಾಭ ತರುವ ಬೆಳೆಯೇನಲ್ಲ. ಹೀಗಿದ್ದರೂ ಇದನ್ನು ನಡೆಸುವುದು ಅವರಿಗೆ ಅನಿವಾರ್ಯ. ಇಲ್ಲದಿದ್ದರೆ ಜನರು 'ಇವರಿಗೆ ಹಣ ಮಾಡುವುದೇ ಉದ್ದೇಶ' ಎಂದು ವಿನಾಕಾರಣ ಟೀಕಿಸಬಹುದು. ಇಂಥಹ ಶ್ರೀಮಂತ ಮಠಗಳು, ಕಾವಿಧಾರಿಗಳು ಸರ್ಕಾರವನ್ನು ತದನಂತರ ರಿಮೋಟ್ ಕಂಟ್ರೋಲ್ ರೀತಿ ನಿಯಂತ್ರಿಸುವುದೂ ಇದೆ. ಒಟ್ಟಿನಲ್ಲಿ ಹೇಳುವುದಾದರೆ, ಇವರು ಬಹಳ ವ್ಯವಹಾರ ಚತುರರು.
ಒಬ್ಬ ಸ್ವಾಮಿಗಳಂತೂ ಬೆಟ್ಟದ ತಪ್ಪಲಿನಲ್ಲಿ ನೂರಾರು ಎಕರೆ ಜಾಗದಲ್ಲಿ ಸ್ವಲ್ಪ ಕೊಂಡು, ಇನ್ನೂ ಸ್ವಲ್ಪ ಆವರಿಸಿ ಮತ್ತೂ ಸ್ವಲ್ಪ ಅತಿಕ್ರಮಿಸಿ, ಆಶ್ರಯ ನಿರ್ಮಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿದ್ದ ಮೋಟು ಕಾಂಪೌಂಡ್ ಗೋಡೆಯನ್ನು, ಆಕಾಶದೆತ್ತರಕ್ಕೆ ಚಾಚಿಸಿ, ಪಾರದರ್ಶಕತ್ವಕ್ಕಿಂತ ಖಾಸಗೀತನಕ್ಕೆ ಹೆಚ್ಚು ಒತ್ತು ಕೊಟ್ಟು, ಝಗಝಗಮಗಿಸುವ ಅತೀ ವೈಭವೋಪೇತ ದೇವಾಲಯಗಳ ಸಮೂಹ ನಿರ್ಮಾಣವಾಗಿದೆ. ಆಗಾಗ್ಗೆ ಜನರನ್ನು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಹಾಗೂ ಭಜನೆಗಳ ಮೂಲಕ ವಿಶೇಷವಾಗಿ ರಂಜಿಸಲಾಗುತ್ತದೆ. ಮೈಸೂರಿನ ನೆಲ, ಜಲ ಬಳಸಿಕೊಂಡರೂ ಇವರ ಹೆಚ್ಚಿನ ಒಲವಿರುವುದು ಹೊರರಾಜ್ಯಗಳ ಹಾಗೂ ವಿದೇಶಿ ಭಕ್ತರ ಮೇಲೆಯೇ. ಸದಾ ಕಾಲ ವಿದೇಶ ಸಂಚಾರ ಮಾಡುತ್ತಾ, ಸಿಕ್ಕಾಪಟ್ಟೆ ಡಾಲರ್ ಗಳಿಸಿ, ಶ್ರೀಮಂತ ಭಕ್ತರನ್ನು ಹರಸಿ ಲೋಕೋದ್ಧಾರ ಮಾಡುತ್ತಿದ್ದಾರೆ. ಇವರ ಆಶ್ರಮಕ್ಕೆ ಒಂದು ವೇಳೆ ಹೋದರೆ, ಸ್ಥಳೀಯರಾದ ನಮಗೆ ನಾವಲ್ಲಿ ಪರಕೀಯರೆಂಬ ಅನಾಥಪ್ರಜ್ಞೆ ಕಾಡುವುದು ಸುಳ್ಳಲ್ಲ. ಇಲ್ಲಿ ಕನ್ನಡದ ಮಣ್ಣಿನ ವಾಸನೆ ಲವಲೇಶವೂ ಇರುವುದಿಲ್ಲ.
ಜೊತೆಗೆ ಈ ಕೆಲ ಮಠಾಧೀಶರು ತಾವು ಜನರಿಗೆ ಬಹಳ ಹತ್ತಿರದವರು ಎಂದು ಬಿಂಬಿಸಿಕೊಳ್ಳುತ್ತಾ, ಜಪ ತಪವನ್ನು ಹಾಗೆಯೇ ಆಧ್ಯಾತ್ಮಿಕ ಚಿಂತನೆಯನ್ನು ಬದಿಗಿಟ್ಟಿದ್ದಾರೆ. ವೇದಿಕೆಗಳಲ್ಲಿ ಮೊಬೈಲ್‌ನ್ನು ಕಿವಿಗಳಿಗಾನಿಸಿ, ರಾಜಕೀಯ ನಾಯಕರುಗಳ ಮೈಗೆ ಮೈ ಸೋಕಿಸಿ ಪಕ್ಕದಲ್ಲೇ ಕುಳಿತು, ದೇಶಾವರಿ ನಗೆ ಚೆಲ್ಲಿ, ಅಪಾತ್ರರಿಗೆ ಮಾಲಾರ್ಪಣೆ ಮಾಡುತ್ತಾ, ಅವರ ಕಿವಿಗಳಲ್ಲಿ ಅದೇನನ್ನೋ ಪಿಸುಗುಟ್ಟುತ್ತಾ, ಅಲ್ಲೊಂದು ಇಲ್ಲೊಂದು ನೂತನ ಅಂಗಡಿ ಅಥವಾ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಜ್ಯೋತಿ ಬೆಳಗಿಸಿ, ಬಹಳ ಸರಳ ಜೀವಿಗಳು ಎಂದೆನಿಸಿಕೊಂಡು ಬಿಡುತ್ತಾರೆ!
ಮತ್ತೊಬ್ಬ ಜಾತಿಯ ಗುರುಗಳು, ತಾವು ಗುರು ಸ್ಥಾನದಲ್ಲಿರುವ ಕಾರಣ "ನಾನು ಯಾವುದೇ ರಾಜಕೀಯ ವ್ಯಕ್ತಿಯ ಪಕ್ಕದಲ್ಲಿ ಮೈಗೆ ಮೈ ಸೋಕಿಸಿ ಕುಳಿತು ವೇದಿಕೆಯನ್ನು ಹಂಚಿಕೊಳ್ಳಲಾರೆ ಹಾಗೂ ಅಲಂಕರಿಸಲಾರೆ" ಎಂಬ ನಿಲವುಳ್ಳವರು. ಹೀಗಾಗಿ ಯಾವಾಗಲೂ ಈ ರಾಜಕೀಯ ನಾಯಕರಿಗಿಂತ ತುಸು ಎತ್ತರದ ಪೀಠದಲ್ಲಿ ಸಭೆಯಲ್ಲಿ ಕುಳಿತು ವಿರಾಜಮಾನರಾಗಿ, ಈ ರಾಜಕೀಯ ವ್ಯಕ್ತಿಗಳೊಂದಿಗೆ ಸಾಕಷ್ಟು ಆರೋಗ್ಯಕರ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಯಾವುದೇ ರಾಜಕೀಯ ಸೋಂಕಿಗೆ ಒಳಗಾಗದೆ, ಮಡಿವಂತರಾಗಿ ಮೂರು ಹೊತ್ತೂ ಸಹ ಪೂಜೆ ಪುನಸ್ಕಾರ ಹಾಗೂ ಜಪತಪಗಳಲ್ಲಿ ಕಾಲ ಕಳೆದು, ಕಟ್ಟಾ ಸಂನ್ಯಾಸ ಧರ್ಮವನ್ನು ಪಾಲಿಸುತ್ತಿದ್ದಾರೆ. ಇವರು ರಾಜಾಶ್ರಯದ ಕಾಲದಲ್ಲಿ, ಮಹಾರಾಜರು ತಮಗೆ ನೀಡಿದ್ದ ಮೈಸೂರಿನ ನಗರದ ಹೃದಯ ಭಾಗದಲ್ಲಿರುವ ತುಂಡು ಭೂಮಿಯಲ್ಲೇ ಸಣ್ಣ ಮಠವೊಂದನ್ನು ಸ್ಥಾಪಿಸಿಕೊಂಡು ಸಂತುಷ್ಟರಾಗಿ, ತಮ್ಮ ಕಾರ್ಯ ಕ್ಷೇತ್ರವನ್ನು, ಕರುನಾಡ ಸುಂದರ ಪ್ರಕೃತಿಯ ರಮಣೀಯ ಪರಿಸರದ ಹಿನ್ನೆಲೆಯುಳ್ಳ ದೂರದ ತಮ್ಮ ಮೂಲಮಠಕ್ಕೆ ಸೀಮಿತಗೊಳಿಸಿ, ಮೈಸೂರಿನಲ್ಲಿ ಬೇರೆಯವರಂತೆ ತಮ್ಮ ಸಾಮ್ರಾಜ್ಯ ಕ್ಷಮಿಸಿ, ಸಂಸ್ಥಾನ ವಿಸ್ತರಿಸಲು ಹೋಗಲಿಲ್ಲ. ಜೊತೆಗೆ ಬೇರೆಯವರಂತೆ ಅಷ್ಟಾಗಿ ಇವರಿಗೆ ಭೂ ದಾಹವಿಲ್ಲ. ಹಾಗೆಯೇ ಇವರು ಅಲ್ಪತೃಪ್ತರೂ ಕೂಡಾ. ಇವರ ಈ ಬಗೆಯ ಚಿಂತನೆಗಳು ಹಾಗೂ ಪಾಲಿಸುವಂಥ ಮೌಲ್ಯಗಳು, ಇವರ ಸಮುದಾಯದ ಕೆಲ ವರ್ಗದ ಜನರಿಗೆ ಅಸಂತೋಷವನ್ನುಂಟು ಮಾಡಿರುವುದೇನೋ ನಿಜ. ಈ ಅಸಂತುಷ್ಟರ ವಾದವೇನೆಂದರೆ, 'ಎಲ್ಲಾ ಮಠದವರೂ ಸಹ ವಿದ್ಯೆಯ ಕಾಳಸಂತೆ ವ್ಯಾಪಾರದಲ್ಲಿ ತೊಡಗಿ, ಹಣ ಮಾಡಿ ವಿಶೇಷವಾಗಿ ತಮ್ಮ ತಮ್ಮ ಕುಲ ಬಾಂಧವರಿಗೆ, ಯಥಾಶಕ್ತಿ ಸಹಾಯ ಮಾಡುತ್ತಿರುವಾಗ, ಇವರೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಿ, ಅದೇ ಕಸುಬಿನಲ್ಲಿ ತೊಡಗಿ, ಒಂದಷ್ಟು ಹಣ ಮಾಡಿ, ಸರ್ಕಾರ ಕಡೆಗಣಿಸಿರುವ ನಮ್ಮ ಸಮಾಜದ ಉದ್ಧಾರವನ್ನು ಮಾಡಲಿ, ಇದರಲ್ಲಿ ತಪ್ಪೇನು?' ಎಂಬುದೇ ಇವರ ಪ್ರಶ್ನೆ. ಆದರೆ ಒಂದಂತೂ ಸತ್ಯ. ಈ ಹಣ, ಆಸ್ತಿ, ಪಾಸ್ತಿ ಮಾಡುವ ಮನೋಭಾವಗದ ಸಂನ್ಯಾಸಿಯರ ನಡುವೆ, ಇವರು ತೀರಾ ವಿಭಿನ್ನವಾಗಿ ಎದ್ದು ಕಾಣುವುದನ್ನು, ಹಾಗೆಯೇ ರಾಜಕೀಯ ಹಗರಣಗಳಿಂದ ಹೊರತಾಗಿ, ಶುಭ್ರವಾದ ಬದುಕನ್ನು ಸಾಗಿಸುತ್ತಿರುವುದನ್ನು ಕಂಡು, ಹೆಮ್ಮೆ ಪಡುತ್ತಾ, ಸಂಭ್ರಮಿಸುತ್ತಿರುವವರೂ ಸಹಿತ, ಅವರದೇ ಸಮುದಾಯದಲ್ಲಿ ಹಲವಾರು ಜನ ಇದ್ದಾರೆ. ಕೆಲವೊಂದು ಮಠಗಳಂತೂ ಇತ್ತೀಚೆಗೆ ಸಕ್ರಿಯ ರಾಜಕೀಯ ಅಡ್ಡೆಗಳಾಗಿ ಪರಿವರ್ತನೆಯಾಗುತ್ತಿರುವುದು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಘೋರ ದುರಂತವೇ ಸರಿ. ಈ ಮಠಾಧೀಶರಿಗೆ ತಮ್ಮ ಸಮಾಜ ಸೇವೆಗೆ ಮೈಸೂರಿನಂಥ "ಪ್ರೈಮ್‌ಲ್ಯಾಂಡ್" ಜಾಗವೇ ಏಕೆ ಬೇಕು? ತಮ್ಮ ಮೂಲಮಠದ ಅತೀ ಹಿಂದುಳಿದ ಪ್ರದೇಶವನ್ನೇ ಅಭಿವೃದ್ಧಿಗೊಳಿಸಿ, ಅಲ್ಲೇ ಅವರು ಸಾರ್ಥಕತೆಯನ್ನು ಕಾಣಬಾರದೇಕೆ? ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ್ ಎಂಬ ಚಿಕ್ಕ ಗ್ರಾಮದಲ್ಲಿ ವಿದ್ಯಾ ಸಂಸ್ಥೆಯೊಂದು, ವಿಶ್ವವಿದ್ಯಾನಿಲಯಕ್ಕೆ ಸೆಡ್ಡು ಹೊಡೆಯುವ ಮಟ್ಟಿಗೆ ಬೆಳೆದು ತನ್ನ ಮೂಲದಲ್ಲಿಯೇ ಸಫಲತೆ ಕಾಣಲಿಲ್ಲವೇ?
ಒಂದು ಕಾಲದಲ್ಲಿ ಹಳೇ ಮೈಸೂರಿಗರ ಭಾಷೆಯಲ್ಲಿ, 'ಬೆಟ್ಟದ ಪಾದ ಸೇರುವುದು' ಎಂದರೆ, 'ಬದುಕು ಪೂರೈಸಿ ಮಣ್ಣಾಗುವುದು' ಎಂದು ಅರ್ಥವಾಗಿತ್ತು. ಹಾಗೆ ನೋಡಿದರೆ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಪಾದವನ್ನೂ ಎಲ್ಲಾ ಕಾವಿಧಾರಿಗಳು ಹಾಗೆಯೇ ಶುಭ್ರ ಶ್ವೇತ ವಸ್ತ್ರಧಾರಿಗಳೂ ಸಹಾ ಪೈಪೋಟಿಯಿಂದ ಸಜೀವವಾಗಿ ಹಾಗೆಯೇ ಸಶರೀರಿಗಳಾಗಿಯೇ ಆವರಿಸಿ, ತಮ್ಮದೇ ಆದ ಸಮುದಾಯಕ್ಕೆ ಉಜ್ವಲವಾದ ಬದುಕು ಕಟ್ಟಿಕೊಡಲು ಅಲ್ಲಿ ಒಂದು ವೇದಿಕೆಯನ್ನು ನಿರ್ಮಿಸಿ, ಎಕರೆಗಟ್ಟಲೆ ಬೇಲಿ ಹಾಕಿ ಸುತ್ತುವರಿಯುತ್ತಿದ್ದಾರೆ. ಇದು ನಮ್ಮ ಆಷಾಢಭೂತಿ ಜಾತ್ಯತೀತ ಸಾಮಾಜಿಕ ವ್ಯವಸ್ಥೆಯ ಘೋರ ವಿಪರ್ಯಾಸ. ಇದನ್ನು ಪ್ರಶ್ನಿಸಲು ನಮ್ಮ ಪರಿಸರವಾದಿಗಳು ಇಲ್ಲಾ ಜನಪ್ರತಿನಿಧಿಗಳು ಯಾರೂ ಇಲ್ಲವೇ? ಇಲ್ಲ ಇವರಿಗೆ ಮತ ಬ್ಯಾಂಕ್‌ನ ಭಯವೇ? ಪರಿಸ್ಥಿತಿ, ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ನಾವು ಚಾಮುಂಡಿಬೆಟ್ಟ ಏರಲು, ಸಂಬಂಧಪಟ್ಟ ಸ್ವಾಮೀಜಿಗಳಿಗೆ ಅರ್ಜಿ ಹಾಕಿ ಸರದಿಯಲ್ಲಿ ಅನುಮತಿ ಕೋರ ಬೇಕಾಗುತ್ತದೆ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ಈ ಬೆಟ್ಟದ ತಪ್ಪಲಂಚಿನಲ್ಲಿ ಜೀವಿಸುತ್ತಿರುವ ಅದೆಷ್ಟೋ ಪ್ರಾಣಿ ಸಂಕುಲ ಹಾಗೂ ಜೀವ ವೈವಿಧ್ಯಗಳು, ಬೆಟ್ಟದ ಬುಡದಲ್ಲಿ ಬೇಲಿ ಹಾಕಿ ಕೃತಕ ಉದ್ಯಾನ ನಿರ್ಮಿಸಿ, ಅವುಗಳ ಸ್ವಚ್ಛಂದ ಬದುಕಿಗೆ ಅಡ್ಡಿ ಪಡಿಸುತ್ತಲಿರುವ ಈ ಕಾವಿಧಾರಿ ಹಾಗೂ ಶುಭ್ರ ಶ್ವೇತ ವಸ್ತ್ರಧಾರಿಗಳ ಸಮೂಹವನ್ನು ಆ ಬೆಟ್ಟದ ತಪ್ಪಲಿನಲ್ಲಿರುವ ಮೂಕಪ್ರಾಣಿಗಳು ಶಪಿಸುತ್ತಲೂ ಇರಬಹುದು? ನಿಮಗೆ ಕೇಳಿಸುತ್ತಿದೆಯೇ ಆ ಪ್ರಾಣಿಗಳ ಮೂಕ ರೋದನೆ? ಇನ್ನೂ ಸ್ವಲ್ಪ ಕಿವಿಗೊಟ್ಟು ಕೇಳಿ.
ಈ ಸೀಮೋಲ್ಲಂಘನೆಯ ಹಿಂದೆ, ಹಿಂದಿನ ಸರ್ಕಾರಗಳ ಕೃತಜ್ಞತಾಭಾವ ಹಾಗೆಯೇ ಜೊತೆಗೆ ಗುರುಸೇವೆ ಮಾಡಿದೆವೆಂಬ ಅಂದಿನ ರಾಜಕಾರಣಿಯ ಧನ್ಯತಾಭಾವವೂ ಸಹಾ ಇದೆ. ಸಾಮಾಜಿಕ ಕಳಕಳಿಯಿರುವ ಯಾವುದೇ ಮಠಗಳು ತಾವೇ ತಾವಾಗಿ ಮುಂದೆ ಬಂದು, ತಾವು ತಿಳಿದೋ- ತಿಳಿಯದೆಯೋ ಆವರಿಸಿಕೊಂಡಿರುವ/ ಆಕ್ರಮಿಸಿರುವ/ ಅತಿಕ್ರಮಿಸಿರುವ ಈ ಬೆಟ್ಟದ ತಪ್ಪಲಿನ ಜಾಗವನ್ನು ಪೂರ್ತಾ ತೆರವು ಮಾಡಿ, ತಮ್ಮ ಮೂಲ ಸ್ಥಾನಕ್ಕೆ ಸ್ವಯಂ ಪ್ರೇರಣೆಯಿಂದ ವರ್ಗಾವಣೆಗೊಂಡು, ದಿಕ್ಕೆಟ್ಟು ಗುಳೆ ಹೊರಟಿರುವ ಬೆಟ್ಟದ ತಪ್ಪಲಿನ ನೂರಾರು ಜೀವರಾಶಿಗಳಿಗೆ, ಅವುಗಳ ನೆಲೆಯನ್ನು ಅವುಗಳಿಗೆ ಬಿಟ್ಟು ಕೊಡುವುದರ ಮುಖಾಂತರ, ಪುನರ್ವಸತಿ ಕಲ್ಪಿಸಿ, ಪ್ರಕೃತಿಯ ಅಸಮತೋಲನವನ್ನು ನಿವಾರಿಸಲು ಮುಂದಾಗಿ ವಿವೇಕದಿಂದ ವರ್ತಿಸುವರೇ?
- ನಾಗಮಂಗಲ ನರಸಿಂಹಮೂರ್ತಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

