ಮಹಾಪ್ರಜೆಗಳ ಮೌನದ ನಡುವೆ ಗಹಗಹಿಸಿದ ಹಗರಣ ಭಾರತ
ಇದೊಂದು ವಿನಾಶಕಾರಿ ಆಡಳಿತ ಮತ್ತು ಆ ಬಗ್ಗೆ ಮೌನದಿಂದಿರುವ ಪ್ರಜೆಗಳ ಕತೆ.
ಮೊದಲನೆಯದಾಗಿ ಯುಪಿಎ ಸರ್ಕಾರವು ರಸ್ತೆ ವಿಭಾಗದಲ್ಲಿ ಸರ್ವನಾಶಕ್ಕೆ ಮುಂದಾಯಿತು. ರಸ್ತೆ ಕಾಮಗಾರಿ ನಿಧಾನವಾಯಿತು. ಹಿಂದಿನ ಸರ್ಕಾರ ಅರ್ಧಕ್ಕೆ ನಿಲ್ಲಿಸಿದ್ದ ಹೆದ್ದಾರಿಗಳನ್ನು ಮುಂದುವರಿಸುವುದಕ್ಕೆ ಹೋಗಲಿಲ್ಲ. ಎನ್ಡಿಎ ಸರ್ಕಾರ ಸುವರ್ಣ ಚತುಷ್ಪಥ ಯೋಜನೆ ರೂಪಿಸಿದ್ದು ಹಿಂದುತ್ವವನ್ನು ಹರಡುವುದಕ್ಕಾಗಿತ್ತು ಬಿಡಿ ಎಂಬಂತೆ ನಾವೆಲ್ಲ ಮಗಮ್ಮಾದೆವು.
ನಂತರ ಅವರು ವಾಯುಯಾನ ವಲಯಕ್ಕೆ ಬಂದರು. ತೆರಿಗೆದಾರರಿಂದ ಏರ್ ಇಂಡಿಯಾ ಹಣ ಕೊಳ್ಳೆ ಹೊಡೆದಿದ್ದೇ ಬಂತು. ಕೆಟ್ಟ ನಿಯಂತ್ರಣ ಪದ್ಧತಿಗಳು ಖಾಸಗಿ ವಿಮಾನಯಾನವನ್ನು ಹಾಳುಗೆಡವುವಂತೆ ಆಯಿತು. ಭಾರತ ಯಾವತ್ತೂ ವಿಮಾನಯಾನಕ್ಕೆ ಹೆಸರಾದ ದೇಶವೇ ಆಗಿರಲಿಲ್ಲ ಎಂಬಂತೆ ಅವರು ಚಿತ್ರಣವನ್ನು ಬದಲಿಸಿದರು. ಮಹಾಪ್ರಜೆಗಳಾದ ನಾವು ಆಗಲೂ ಮಾತನಾಡಲಿಲ್ಲ.
ಇನ್ನು ವಿದ್ಯುತ್ ಕ್ಷೇತ್ರ. ಮೆಗಾ ಸಾಮರ್ಥ್ಯಗಳ ಬಗ್ಗೆ ಮಾತನಾಡಿದವರು ವಾಸ್ತವವಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಲೇ ಇಲ್ಲ. ಸೂಕ್ತ ಬೆಲೆ ನಿಗದಿ ಅವರಿಗೆ ಸಾಧ್ಯವಾಗಲೇ ಇಲ್ಲ. ಯಾರ್ಯಾರಿಗೋ ಪರವಾನಗಿಗಳನ್ನು ಕೊಟ್ಟರು. ಇದಕ್ಕೂ ಮಹಾಪ್ರಜೆಗಳ ಮೌನ ಸಮ್ಮತಿ.
ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶವೆಲ್ಲ ಮುಗಿದ ಮೇಲೆ ಆರ್ಟಿಇ ಎಂದರು. ಸಾಮರ್ಥ್ಯವನ್ನೇನೋ ಹೆಚ್ಚಿಸಲಾಯಿತಾದರೂ 'ಕಟ್ ಆಫ್' ಪರಿಕಲ್ಪನೆ ಇನ್ನಷ್ಟು ನೆಗೆಯಿತು. ಕೆಲ ವಿಷಯಗಳ ಬೋಧನೆಗೆ ಅಗತ್ಯಕ್ಕಿಂತ ಹೆಚ್ಚು. ಇನ್ನು ಕೆಲವಕ್ಕೆ ಕಲಿಸುವವರೇ ಇಲ್ಲ ಎಂಬ ಪರಿಸ್ಥಿತಿ. ವಿಶ್ವವಿದ್ಯಾಲಯಗಳ ಕಟ್ಟಡ ನಿರ್ಮಾಣವನ್ನೇ ವಿಶ್ವವಿದ್ಯಾಲಯಗಳ ರೂಪಿಸುವ ರೀತಿ ಎಂದು ತಿಳಿದುಕೊಂಡುಬಿಟ್ಟರು. ಆಗಲೂ ಮಹಾಪ್ರಜೆ ಮಾತನಾಡಿದ್ದಿಲ್ಲ. ಇಷ್ಟಕ್ಕೂ ಶಿಕ್ಷಣ ಸರಿ ಇಲ್ಲದಿರುವುದೇ ನಾವು ಎಲ್ಲವನ್ನೂ ಬಾಯಿ ಮುಚ್ಚಿಕೊಂಡು ಸಹಿಸಿಕೊಂಡಿರುವುದಕ್ಕೆ ಕಾರಣ.
ನಂತರ ಕೈಗಾರಿಕೆಗಳಿಗೆ ಕೈಯಿಟ್ಟರು. ಎಷ್ಟು ಸಾಧ್ಯವಾಗುವುದೋ ಅಷ್ಟು ಹಿಂದಕ್ಕೆ ಕರೆದೊಯ್ದರು. ನಿಯಂತ್ರಣ ವ್ಯವಸ್ಥೆ ಇನ್ನಷ್ಟು ಸಂಕೀರ್ಣ ಮತ್ತು ಅಸ್ಪಷ್ಟಗೊಂಡಿತು. ಭೂಮಿ ಲೂಟಿಗೆ ಎಸ್ಇಝಡ್ ಎಂಬ ಹೆಸರಿಟ್ಟು ಕೈಗಾರಿಕಾ ನೀತಿಯನ್ನೇ ಬಿಕರಿಗೆ ಇಟ್ಟರು. ಅವರು ವಿದೇಶಿ ವಿನಿಮಯ ತರುವ ಬಗ್ಗೆ ಮಾತನಾಡಿದರು. ಆದರೆ ಯಾವ ಬಗೆಯದ್ದು ಎಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಇರಲಿಲ್ಲ.
ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಬೆಳವಣಿಗೆ ಕಂಡುಬಂದಿದ್ದೇನೋ ಖರೆ. ಆದರೆ ಸರ್ಕಾರದ ನಿಯಂತ್ರಣದಲ್ಲಿರುವ ಉದ್ಯೋಗವೇ ಉತ್ತಮವಾದದ್ದು ಎಂಬುದು ಅವರ ನಿರ್ಧಾರವಾಗಿತ್ತು. ಹಾಗೆಂದೇ ಉದ್ಯೋಗ ಖಾತ್ರಿ ಯೋಜನೆಯ ವಿಸ್ತಾರವನ್ನು ವೈಫಲ್ಯ ಎಂದಲ್ಲದೆ ಯಶಸ್ಸನ್ನಾಗಿ ನೋಡಲಾಗುತ್ತಿದೆ. ಆದರೆ ಹೆಚ್ಚು ಹೆಚ್ಚು ಮಂದಿ ಉದ್ಯೋಗ ಖಾತ್ರಿ ಯೋಜನೆಯನ್ನೇ ಅವಲಂಬಿಸುತ್ತಿದ್ದಾರೆ ಎಂದರೆ ಅದರರ್ಥ ಅರ್ಥವ್ಯವಸ್ಥೆ ವಿಫಲವಾಗಿದೆ ಎಂದೇ. ಪ್ರಜೆಗಳು ಈ ಬಗ್ಗೆಯೂ ಮಾತನಾಡಲೊಲ್ಲರು. ಏಕೆಂದರೆ ಹೆಚ್ಚು ಹೆಚ್ಚು ಮಂದಿ ಸರ್ಕಾರವನ್ನು ಅವಲಂಬಿಸುವ ಸ್ಥಿತಿ ಬಂದರೆ ಅದುವೇ ಉತ್ತಮ ಆಡಳಿತ ಎಂದು ನಂಬಿದವರು ನಾವು.
ನಂತರದ್ದು ಕೃಷಿಕ್ಷೇತ್ರ. ಮೊದಲಿಗೆ ಅವರು ತಮ್ಮ ನೀರಾವರಿ ಹಗರಣಗಳ ಮೂಲಕ ಕೃತಕ ಅಭಾವವನ್ನು ಸೃಷ್ಟಿಸಿದರು. ನಂತರ ತಂತ್ರಜ್ಞಾನ ಅಳವಡಿಕೆ ಎಂಬ ರಾಗ ಹಾಡತೊಡಗಿದರು. ಕೊನೆಗೆ ಅವರು ಭಾರತವು ಅಕ್ಕಿ ಮತ್ತು ಗೋಧಿಯ ಅರ್ಥವ್ಯವಸ್ಥೆಯಾಗಿಯೇ ಉಳಿದುಕೊಳ್ಳಲಿ ಎಂಬ ತೀರ್ಮಾನಕ್ಕೆ ಬಂದರು. ಅವೆರಡು ಬಿಟ್ಟು ಉಳಿದೆಲ್ಲದರ ಕೊರತೆ ಆಯಿತು. ಹೇಗೂ ಸರ್ಕಾರ ಆಹಾರ ಒದಗಿಸುವೆ ಎನ್ನುತ್ತಿರುವಾಗ ನಾವೇಕೆ ಆಹಾರ ಉತ್ಪಾದನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದು ಮಹಾಪ್ರಜೆ ಮೌನವಾದ.
ನಂತರ ಈ ಆಡಳಿತಾರೂಢರು ಸಂಸ್ಥೆಗಳ ವಿಷಯಕ್ಕೆ ಕೈ ಹಾಕಿದರು. ಇದಂತೂ ಕಾಂಗ್ರೆಸ್ನ ಡಿಎನ್ಎದಲ್ಲೇ ಇದೆ. ಯಾವುದರ ಮೇಲೆ ನಿಯಂತ್ರಣವಿಲ್ಲ ಎಂಬ ಬಗ್ಗೆ ಅವರು ಪಟ್ಟಿಯನ್ನೇ ತಯಾರಿಸಿದರು: ಸಂಸತ್ತು, ಇಂಟಲಿಜೆನ್ಸ್ ಬ್ಯೂರೊ, ಅಧಿಕಾರಶಾಹಿ ಹಾಗೂ ನೀವು ಹೆಸರಿಸಬಹುದಾದ ಎಲ್ಲ ಸಂಸ್ಥೆಗಳೂ! ಅವುಗಳ ಹಿಂದೆ ಬಿದ್ದರು. ತಮ್ಮ ರಾಜಕೀಯ ವಿನ್ಯಾಸವನ್ನು ರೂಪಿಸಿಕೊಳ್ಳುವ ಸಲಕರಣೆಗಳನ್ನಾಗಿ ಆ ಸಂಸ್ಥೆಗಳನ್ನು ಅವರು ಬಳಸಿಕೊಂಡರು. ಸರ್ಕಾರದ ಎಲ್ಲ ಅಂಗಗಳ ನೈತಿಕ ಶಕ್ತಿಯನ್ನೇ ಅವರು ಕುಂದಿಸಿದರು. ಇವನ್ನೆಲ್ಲ ಸುಧಾರಣೆಯ ಹೆಸರಲ್ಲಿ ಮಾಡಲಾಯಿತು. ಮಹಾಪ್ರಜೆ ಮಾತನಾಡಲಿಲ್ಲ.
ನಂತರದ್ದು ಹಣದುಬ್ಬರ ಪರ್ವ. ಶೇ. 10ರ ಜಿಡಿಪಿ ದರದ ಕನಸನ್ನು ಹಣದುಬ್ಬರಕ್ಕೆ ತಪ್ಪಾಗಿ ಅರ್ಥ ಮಾಡಿಕೊಂಡಂತಿತ್ತು ಅವರ ನಡೆ. ಮುಂದಿನ ತ್ರೈಮಾಸಿಕದಲ್ಲಿ ಹಣದುಬ್ಬರ ಹತೋಟಿಗೆ ಬಂದೇ ಬಿಡುತ್ತದೆ ಎಂದು ಅವರು ಹೇಳುತ್ತಲೇ ಬಂದರು. ಹಣದುಬ್ಬರ ಎಂಬುದು ಶ್ರೀಮಂತರಿಗೆ ಮಾತ್ರವೇ ಸಮಸ್ಯೆಯಾಗುತ್ತಿದೆ ಎಂದು ನಮ್ಮನ್ನು ನಂಬಿಸುವುದಕ್ಕೆ ನೋಡಿದರು. ಏನೂ ಆಗಿಲ್ಲ ಎಂಬಂತೆ ಅದರ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದರು. ಹಣದುಬ್ಬರ ಎಂಬುದು ಕೇವಲ ಅಂಕಿಗಳ ಆಟವಷ್ಟೆ ಎಂಬ ಮನೋಭಾವ ತೋರಿದರು.
ಅವರು ದೂರಸಂಪರ್ಕ ವಲಯಕ್ಕೆ ಕೈಯಿರಿಸಿದರು. ಅತಿ ದುರಾಸೆಯಿಂದ ಬಾಚಿಕೊಳ್ಳುವುದಕ್ಕೆ ಮುಂದಾದರು. ಮನಸಿಗೆ ಬಂದಂತೆ ತರಂಗಗುಚ್ಛಗಳನ್ನು ವಿತರಿಸಿದರು. ಆಗಲೂ ಪ್ರಜೆ ಮಾತನಾಡಿದ್ದಿಲ್ಲ. ನಂತರದ್ದು ಹಣಕಾಸು ಸ್ಥಿರತೆಯ ವಿಚಾರ. ಬಹುದೊಡ್ಡ ಕೊರತೆಯನ್ನೇ ನಿರ್ಮಿಸಿದ ಶ್ರೇಯಸ್ಸು ಅವರದ್ದು. ಬ್ಯಾಂಕಿಂಗ್ ಕ್ಷೇತ್ರವನ್ನು ಹೆಚ್ಚುಕಮ್ಮಿ ಮಲಗಿಸಿಯೇಬಿಟ್ಟರು. ಇವರ ಅಪದ್ಧಗಳಿಂದಾಗಿ ಬಂಡವಾಳ ಸೊರಗಿ ಹೋಯಿತು. ಮಹಾಪ್ರಜೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಬಿಟ್ಟಿ ಊಟ ಕೊಡುತ್ತೇವೆ ಎನ್ನುವವರಿರುವಾಗ ಅರ್ಥ ವ್ಯವಸ್ಥೆಯ ನಾಜೂಕುಗಳ ಚಿಂತೆ ಏಕೆ?
1970ರ ಮಾದರಿಯ ನಿಯಂತ್ರಣಗಳನ್ನು ಹೇರುವುದು ಅವರ ಇರಾದೆಯಾಗಿತ್ತು. ಹೆಚ್ಚು ನಿಯಮಗಳಿದ್ದಷ್ಟೂ ಚೆಂದ ಎಂಬುದವರ ಆಲೋಚನೆ. ಅನಿಶ್ಚಿತತೆಯೇ ಉದ್ಯಮವನ್ನು ಚುರುಕಾಗಿಸುತ್ತದೆ ಎಂಬ ಮನೋಭಾವ. ಎಲ್ಲ ಆಡಳಿತಾತ್ಮಕ ಸಮಸ್ಯೆಗಳಿಗೂ ಅವರ ಬಳಿ ಇರುವ ಪರಿಹಾರ ಎಂದರೆ ಹೊಸ ಕಾಯಿದೆ ಒಂದನ್ನು ತರುವುದು. ಹೆಚ್ಚು ಹೆಚ್ಚು ನಿಯಂತ್ರಕರು ಇದ್ದಷ್ಟೂ ಒಳ್ಳೆಯದು. ಅವರು ಭಾರತದ ವೈವಿಧ್ಯವನ್ನು ಧ್ವನಿಸುತ್ತಾರೆ!
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಇವರ ನಿಯಮಗಳ ಸಂಕೋಲೆ ಶುರುವಾಯಿತು. ಅಭಿವ್ಯಕ್ತಿಗೆ ಮುಂದಾದವರ ಬಗ್ಗೆ ದೇಶದ್ರೋಹದಂಥ ಕಾನೂನುಗಳನ್ನೇ ಹೇರಿದರು. ವಸಾಹತು ಕಾಲದ ಕಾಯ್ದೆಗಳಿಗೆ ಮರುಜೀವ ಬರುವಂತೆ ನೋಡಿಕೊಂಡವರು ಅವರು. ನಾವು ಕೋಮುವಾದಿ ಶಕ್ತಿಗಳ ವಿರುದ್ಧವಿದ್ದೇವೆ ಎಂದು ಘೋಷಿಸಿಕೊಂಡರು. ಆದರೆ, ದಿಗ್ವಿಜಯ ಸಿಂಗ್ ಹೇಳಿಕೆಗಳೆಲ್ಲ ಕೋಮು ಪ್ರಚೋದನೆ ನೀಡುವಂತೆಯೇ ಇವೆ. ಮಹಾಪ್ರಜೆ ಮಾತನಾಡಲಿಲ್ಲ. ಏಕೆಂದರೆ ಇವು ಹಿಂದುತ್ವದ ಶಕ್ತಿ ಅಲ್ಲವಾದ್ದರಿಂದ ಶಾಂತಿ- ಸೌಹಾರ್ದಕ್ಕೆ ಭಂಗ ತರುವುದಿಲ್ಲ ಎಂಬ ನಂಬಿಕೆ!
ಜವಾಬ್ದಾರಿ ಹೊತ್ತುಕೊಳ್ಳದಿರುವುದೇ ಅಧಿಕಾರದ ಉದ್ದೇಶ ಎಂಬಂತೆ ಬೋಧನೆಗಿಳಿದರು ಅವರು. ನಿಮ್ಮದು ಬಡವರ ಪಕ್ಷವಾಗಿದ್ದರೆ ಭ್ರಷ್ಟಾಚಾರ ಮಾಡಿದರೆ ತಪ್ಪಿಲ್ಲ ಎಂಬಂತೆ ಅವರ ಧ್ವನಿ ಉಸುರಿತು. ಪ್ರಾಮಾಣಿಕತೆ ಎಂಬುದು ಅರ್ಥ ಕಳೆದುಕೊಂಡ ಪದ ಎಂದು ಸಾರಿ ಹೇಳುವಂತೆಯೇ ನಡೆದುಕೊಂಡರು. 10 ಜನಪಥವಿರುವಾಗ ಸ್ವತಂತ್ರ ಚಿಂತಕರಿಗೇನು ಕೆಲಸ? ನಾವದನ್ನೂ ಹೊರಗುತ್ತಿಗೆ ಕೊಟ್ಟಿದ್ದೇವೆ..
ಬಡವರ ಮನೆಗೆ ಹೋಗಿ ಊಟ ಮಾಡಿ ಮಲಗಿದವರು ಸಿನಿಕರೇ ಆಗಿಹೋದರು. ಆ ಅನುಭವದಿಂದ ಅವರೆಷ್ಟು ಸಮ್ಮೋಹಿತರಾದರೆಂದರೆ ಭಾರತವನ್ನು ಬಡವಾಗಿಯೇ ಇಡುವ ನೀತಿಗಳನ್ನು ರೂಪಿಸಿದರು. ನಮ್ಮ ಆಯ್ಕೆಗಳನ್ನು ಸಂಕುಚಿತವನ್ನಾಗಿಸುವ ನಿಟ್ಟಿನಲ್ಲಿ ಅವರು ಸೆಕ್ಯುಲರಿಸಮ್ನ ಬ್ಲ್ಯಾಕ್ಮೇಲ್ಗೆ ಇಳಿದರು. ನಮ್ಮ ಜತೆ ಇಲ್ಲ ಎಂದರೆ ನೀವು ಸೈತಾನರೆಂದೇ ಅರ್ಥ ಎಂಬುದವರ ಬೊಬ್ಬೆ. ನಮ್ಮನ್ನು ಅವರು ಎಷ್ಟು ಮೂರ್ಖರೆಂದು ಭಾವಿಸಿದ್ದಾರೆ ಎಂದರೆ ಅವರ ಸರ್ಕಾರದ ಮೂರು ಪ್ರಮುಖರು ತಮ್ಮ ಯಾವ ನಡೆಗೂ ಸಮರ್ಥನೆ ನೀಡುವ ಅವಶ್ಯಕತೆಯೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ.
ಈ ಯಾವ ಹಂತಗಳಲ್ಲೂ ಮಹಾಪ್ರಜೆಗಳಾದ ನಾವು ಮಾತಾಡಿದ್ದೇ ಇಲ್ಲ. ಕೊನೆಪಕ್ಷ ನಮಗೊಂದು ಮತವಿದೆ ಎಂಬುದನ್ನು ಮರೆಯದಿರೋಣ.
- ಪ್ರತಾಪ್ ಭಾನು ಮೆಹ್ತಾ, ಅಂಕಣಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

