ಹೆಣ್ಣು ಹೊರೆಯೆಂಬ ಭ್ರಮೆ ದೂರವಾಗುವುದೆಂದು?
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಕುಟುಂಬಕ್ಕೆ ದೊಡ್ಡ ಭಾರ ಎನ್ನುವ ರೀತಿಯಲ್ಲಿ ನೋಡಲಾಗುತ್ತದೆ. ಹಾಗಾಗೆ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಂಡು ಮಕ್ಕಳಿಗಿಂತ ಕಡಿಮೆ ಇದೆ. ಅವರ ಮದುವೆ ಸಮಯದಲ್ಲಿ ನೀಡಬೇಕಾದ ವರದಕ್ಷಿಣೆ ಆರ್ಥಿಕವಾಗಿ ಬಹಳ ದೊಡ್ಡ ಹೊರೆಯಾಗುತ್ತದೆ. ಮಾತ್ರವಲ್ಲ ಅವರು ಮದುವೆಯಾದ ಮೇಲೆ ಗಂಡನ ಮನೆಗೆ ಹೋದರೆ ಅವರ ಮೇಲಾಗಬಹುದಾದ ದೌರ್ಜನ್ಯ ಹಾಗೂ ತವರುಮನೆಯಿಂದ ಹೆಚ್ಚಿನ ಹಣದ ಅಪೇಕ್ಷೆ ಮುಂತಾದ ಸಮಸ್ಯೆಗಳು ಎದುರಾಗಬಹುದೆಂಬ ಭಯ ತಂದೆ ತಾಯಿ ಮನಸ್ಸಿನಲ್ಲಿ ಹುಟ್ಟಿರುತ್ತದೆ. ಇಂಥ ಒಂದು ಕೆಟ್ಟ ಪರಿಸ್ಥಿತಿಯ ಕಲ್ಪನೆ ಮಾತ್ರದಿಂದ ನಮಗೆ ಹೆಣ್ಣು ಮಕ್ಕಳು ಬೇಡ ಎಂದು ಜನ ಭಾವಿಸುತ್ತಾರೆ. ಇದರ ಜೊತೆಗೆ ನಮ್ಮ ಪಾರಂಪರಿಕ ಸಾಮಾಜಿಕ ಪದ್ಧತಿಯಂತೆ ಮನೆಯ ಆಸ್ತಿ ಹಾಗೂ ವಂಶ ಗಂಡು ಮಕ್ಕಳಿಂದಲೇ ಮುಂದುವರೆಯುತ್ತದೆ! ಕುಟುಂಬದ ಆದಾಯವನ್ನು ಹೆಚ್ಚಿಸುವುದರಲ್ಲಿ ಗಂಡು ಮಕ್ಕಳ ಪಾಲು ಯಾವಾಗಲೂ ಇರುತ್ತದೆ. ಆದುದರಿಂದ ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದ ಎಲ್ಲರಿಗೂ ಗಂಡು ಮಕ್ಕಳು ಮಾತ್ರ ಬೇಕು. ಆದರೆ, ಪ್ರಕೃತಿಯ ವಿಧಾನಗಳಂತೆ ಹುಟ್ಟಬೇಕಾದ ಮಕ್ಕಳ ಲಿಂಗದ ಬಗ್ಗೆ ಮನುಷ್ಯರ ನಿಯಂತ್ರಣ ಇರುವುದಿಲ್ಲ. ಆದುದರಿಂದ ಭ್ರೂಣದಲ್ಲಿರುವ ಮಗುವಿನ ಲಿಂಗ ಪರೀಕ್ಷೆಯನ್ನು ನಡೆಸಿ ಜನರು ಹೆಣ್ಣು ಮಗುವಿನ ಭ್ರೂಣದಲ್ಲಿ ಹತ್ಯೆ ಮಾಡಲೂ ಹಿಂಜರಿಯುವುದಿಲ್ಲ. ಇಂಥ ದುಸ್ಥಿತಿ ಮುಂದುವರಿದರೆ, ಬರುವ ದಿನಗಳಲ್ಲಿ ಹುಡುಗನಿಗೆ ಮದುವೆ ಮಾಡಲು ಹುಡುಗಿಯರು ಸಿಗುವುದಿಲ್ಲ. ಅಲ್ಲದೇ, ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ ಮತ್ತು ಸಮಾಜದಲ್ಲಿ ಸಹ ಆತಂಕ ಸೃಷ್ಟಿಯಾಗುತ್ತದೆ. ಇಂಥ ಗಂಭೀರ ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಒಂದು ಹೊಸ ಯೋಜನೆಯನ್ನು ಪ್ರಸ್ತಾಪಿಸಿತ್ತು.
ಅದರಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹುಟ್ಟಿರುವ ಹೆಣ್ಣು ಮಗುವಿಗೆ ಸರ್ಕಾರದ ವತಿಯಿಂದ ಹತ್ತು ಸಾವಿರ ರುಪಾಯಿ ಮೊತ್ತದ ಬಾಂಡ್ ಅನ್ನು ನೀಡಲು ಯೋಚಿಸಲಾಯ್ತು. ಈ ಹಣವನ್ನು, ಹುಡುಗಿ ಹದಿನೆಂಟು ವರ್ಷದವಳಾದಾಗ ಬಡ್ಡಿಯೊಂದಿಗೆ ಅವಳ ಹೆಸರಿನಲ್ಲಿ ಜಮೆ ಮಾಡಬೇಕು ಎಂಬುದು ಯೋಜನೆಯ ಮಹತ್ವಾಕಾಂಕ್ಷೆ. ಈ ಯೋಜನೆಯಡಿಯಲ್ಲಿ ಹುಟ್ಟಿನಿಂದ ಆರು ವರ್ಷದ ವಯಸ್ಸಿನವರೆಗೆ ಮಗು ಹಾಗೂ ತಾಯಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ವಿತರಿಸುವುದು. ನಂತರ ಸರ್ವ ಶಿಕ್ಷಣ ಅಭಿಯಾನದ ಮೂಲಕ ಹದಿನಾಲ್ಕು ವರ್ಷ ವಯಸ್ಸಿನವರೆಗೆ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ನೀಡುವುದು. ಮಗಳಿಗೆ ಹದಿನೆಂಟಾದಾಗ ಬಾಂಡ್ ಹಣವನ್ನು ತೆಗೆದುಕೊಳ್ಳುವ ಅಪೇಕ್ಷೆಯಲ್ಲಿರುವ ಪೋಷಕರು ಹುಡುಗಿ ಮದುವೆ ಬೇಗನೆ ಮಾಡುವುದಿಲ್ಲ ಎಂಬುದು ಯೋಜನೆಯ ನೀರಿಕ್ಷೆಯಾಗಿತ್ತು. ಈ ವ್ಯವಸ್ಥೆಯಿಂದ ಹುಟ್ಟಿದ ಎಲ್ಲಾ ಬಡ ಹೆಣ್ಣು ಮಕ್ಕಳ ಸಮೀಕ್ಷೆಯನ್ನು ಸರ್ಕಾರದ ವತಿಯಿಂದ ನಡೆಸಲು ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳ ಸುರಕ್ಷೆಯ ಜೊತೆಗೆ ಜನಸಂಖ್ಯೆಯ ನಿಯಂತ್ರಣ ಸಹ ಸರ್ಕಾರದ ಒಂದು ಮುಖ್ಯ ಉದ್ದೇಶ ಆಗಿರುತ್ತದೆ. ಆದುದರಿಂದ ಎರಡು ಹೆಣ್ಣು ಮಕ್ಕಳಿಗಿಂತ ಹೆಚ್ಚು ಮಕ್ಕಳು ಹುಟ್ಟಿದರೆ ಈ ಸೌಲಭ್ಯ ಲಭ್ಯವಾಗಬಾರದು ಎಂದು ನಿರ್ಧರಿಸಲಾಯಿತು. ಏಕೆಂದರೆ, ಗಂಡು ಮಕ್ಕಳ ನಿರೀಕ್ಷೆಯಲ್ಲಿ ಕೆಲವೊಮ್ಮೆ ಪಾಲಕರು ಸುಮಾರು ಮಕ್ಕಳನ್ನು ಹಡೆದಿರುತ್ತಾರೆ. ಹಾಗಾಗಿ ಈ ಒಂದು ಯೋಜನೆಯಿಂದ ಸುಮಾರು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ನಿವಾರಿಸುವುದು ಸರ್ಕಾರದ ಉದ್ದೇಶವಾಗಿತ್ತು.
ಈ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಿ, ಅನುದಾನ ಕೂಡ ನಿಗದಿಪಡಿಸಲಾಗಿತ್ತು. ಆದರೆ, ಅನುಷ್ಠಾನ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇಂಥ ಸಮಯದಲ್ಲಿ ನಾನು ಕಾರ್ಯದರ್ಶಿಯಾಗಿ ಅಧಿಕಾರ ತೆಗೆದುಕೊಂಡಾಗ ಯೋಜನೆಯನ್ನು ತ್ವರಿತವಾಗಿ ಕಾರ್ಯಗತ ಮಾಡಿಸಲು ಸರ್ಕಾರ ಸೂಚನೆ ನೀಡಿತು. ಕಡತಗಳನ್ನು ನೋಡಿದಾಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಈಗಾಗಲೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಪಾರದರ್ಶಕ ಕಾಯ್ದೆಯಂತೆ ಕ್ರಮ ಜರುಗಿಸಲಾಗಿತ್ತು. ಅತೀ ಕಡಿಮೆ ಖರ್ಚಿನಲ್ಲಿ ಉತ್ತಮ ಬಡ್ಡಿ ನೀಡಲು ಭಾರತೀಯ ಜೀವ ವಿಮಾ ಕಂಪೆನಿಯ ಆಯ್ಕೆಯಾಗಿತ್ತು. ಆದರೆ, ಅವರ ದರವನ್ನು ಮನ್ನಿಸಿದರೆ ಅಷ್ಟು ಕಡಿಮೆ ಹಣವನ್ನು ಪಡೆಯಲು ಜನ ಬಹುಶಃ ಭ್ರೂಣ ಹತ್ಯೆಯಾಗಲೀ ಅಥವಾ ಬಾಲ್ಯ ವಿವಾಹವನ್ನಾಗಲೀ ನಿಲ್ಲಿಸುವುದು ಕಷ್ಟ ಎಂಬ ಅನುಮಾನ ಉಂಟಾಯಿತು. ನಾಗರಿಕರ ಮಾನಸಿಕ ಬದಲಾವಣೆಗೆ ಆರ್ಥಿಕ ಪ್ರೋತ್ಸಾಹ ದೊಡ್ಡ ಪ್ರಮಾಣದಲ್ಲಿ ಇರಬೇಕು. ಆದರೆ ಕಂಪೆನಿಯ ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚಿನ ಅಧಿಕಾರ ಇಲ್ಲದೇ ಇರುವುದರಿಂದ ರಾಷ್ಟ್ರಮಟ್ಟದ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚೆ ಪ್ರಾರಂಭಿಸಲಾಯಿತು. ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಈ ಯೋಜನೆ ಬಗ್ಗೆ ಒಂದು ದೊಡ್ಡ ಸಂಶಯ ಇತ್ತು. ಏಕೆಂದರೆ, ಈ ಯೋಜನೆ ದೀರ್ಘಾವಧಿ ಯೋಜನೆಯಾಗಿದ್ದು, ಸರ್ಕಾರಗಳು ಕೇವಲ ಐದು ವರ್ಷಕ್ಕೆ ಸೀಮಿತವಾಗಿರುತ್ತವೆ. ಮುಂಬರುವ ಸರ್ಕಾರ ಇದರ ಬಗ್ಗೆ ನಿಷ್ಕ್ರಿಯತೆ ಅಥವಾ ನಿರಾಸಕ್ತಿ ತೋರಿದರೆ ವಿಮಾ ಕಂಪೆನಿಗೆ ದೊಡ್ಡ ಆರ್ಥಿಕ ಗಂಡಾಂತರ ಎದುರಾಗುತ್ತದೆ. ಆದುದರಿಂದ ಅವರು ಹಣವನ್ನು ಹೆಚ್ಚಿಸಲು ಹಿಂಜರಿಯುತ್ತಿದ್ದರು. ಆದರೆ, ಈ ಕಾರಣಕ್ಕಾಗಿ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ಅವರಿಗೆ ಯಾವುದೇ ಅಪಾಯ ಆಗದ ಹಾಗೆ ನೋಡಿಕೊಳ್ಳುವ ಭರವಸೆ ನೀಡಲಾಯಿತು. ಅಲ್ಲದೇ, ಇದನ್ನು ಕೇವಲ ಒಂದು ಆರ್ಥಿಕ ವ್ಯವಹಾರವಾಗಿ ಪರಿಗಣಿಸದೇ ಸಾಮಾಜಿಕ ಜವಾಬ್ದಾರಿ ಎಂದು ಮನವೊಲಿಸಿ ಹೆಚ್ಚಿನ ಹಣವನ್ನು ವಾಯಿದೆ ಮುಗಿದ ನಂತರ ನೀಡಲು ಒತ್ತಾಯಿಸಲಾಯಿತು.
ಸದರಿ ಕಂಪೆನಿ ಒಂದು ಸರ್ಕಾರಿ ಸಂಸ್ಥೆ ಆಗಿರುವುದರಿಂದ ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಹೆಚ್ಚಿನ ಹಣದ ಜೊತೆಗೆ ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಹಾಗೂ ಆರೋಗ್ಯ ವಿಮೆ ಸೌಲಭ್ಯವನ್ನು ಸಹ ಹೆಚ್ಚುವರಿಯಾಗಿ ತಮ್ಮ ಪ್ರಸ್ತಾವನೆಯಲ್ಲಿ ಸೇರಿಸಿಕೊಂಡಿತು. ಆಗ ಹತ್ತು ಸಾವಿರ ರು.ಗಳ ಹೂಡಿಕೆಗೆ ಹದಿನೆಂಟು ವರ್ಷ ಆದ ಮೇಲೆ ಮೂವತ್ತೆರಡು ಸಾವಿರ ರು.ಗಳು ಅಂದರೆ ಅದರ ಮೂರುಪಟ್ಟು ಹಣ ಸಿಗುವಂತಾಯಿತು. ನಂತರ ಹತ್ತೊಂಬತ್ತು ಸಾವಿರ ರು.ಗಳ ಹೂಡಿಕೆಗೆ ಹದಿನೆಂಟು ವರ್ಷ ಆದ ಮೇಲೆ ಒಂದು ಲಕ್ಷ ರು.ಗಳು ಅಂದರೆ ಅದರ ಐದುಪಟ್ಟು ಹಣ ಸಿಗುತ್ತಿತ್ತು. ಬೃಹತ್ ಮಾದರಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿರುವುದರಿಂದ ಅವಶ್ಯಕತೆ ಸಹ ಇತ್ತು.
ಈ ತಂತ್ರಾಂಶದಲ್ಲಿ, ಹೆಣ್ಣು ಮಕ್ಕಳ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಅಂತರ್ಜಾಲದ ಮೂಲಕ ದಾಖಲಿಸಬೇಕಾಗಿತ್ತು. ತಕ್ಷಣ ಈ ಮಾಹಿತಿಯನ್ನು ಭಾರತೀಯ ಜೀವ ವಿಮಾ ಕಂಪೆನಿಯವರು ಪರಿಷ್ಕರಿಸಿ ಬಾಂಡ್ಗಳಲ್ಲಿ ತುಂಬಿಸಿ ಅವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಯಮಿತಿ ಒಳಗಡೆ ಕಳುಹಿಸಿಕೊಡಬೇಕಾಗಿತ್ತು. ತಂತ್ರಾಂಶವನ್ನು ಅಳವಡಿಸದೇ ಹೋದರೆ ಪತ್ರ ವ್ಯವಹಾರದಲ್ಲಿ ತಿಂಗಳುಗಟ್ಟಲೆ ಸಮಯ ವ್ಯರ್ಥವಾಗುವ ಸಂಭವ ಇತ್ತು. ಮಾತ್ರವಲ್ಲ ಸರ್ಕಾರ ಹಾಗೂ ಸಹಯೋಗಿ ಕಂಪೆನಿ ಮಧ್ಯೆ ವಿಳಂಬದಿಂದಾಗಿ ವಾದ-ವಿವಾದವಾಗುವ ಅವಕಾಶಗಳು ಸಹ ಉದ್ಭವವಾಗುವ ಸಂಭವವಿತ್ತು. ಇಡೀ ಯೋಜನೆಯ ಅನುಷ್ಠಾನವನ್ನು ಪಾರದರ್ಶಕವಾಗಿ ಹಾಗೂ ತಾಂತ್ರಿಕ ಸಹಾಯದಿಂದ ವೇಗವಾಗಿ ಪೂರ್ಣಗೊಳಿಸುವ ಒಂದು ಕ್ರಿಯಾ ಯೋಜನೆಯನ್ನು ತಯಾರಿಸಿ ಜಾರಿಗೆ ತರಲಾಯಿತು. ಯೋಜನೆಯ ವಿವರಗಳನ್ನೆಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಚೆನ್ನಾಗಿ ಅರಿತುಕೊಳ್ಳಬೇಕಾದ್ದರಿಂದ ಸಂಬಂಧಪಟ್ಟ ಸಿಬ್ಬಂದಿಗೆ ಉತ್ತಮ ತರಬೇತಿ ನೀಡಲಾಯಿತು.
ಯೋಜನೆಯನ್ನು ನಾಗರಿಕರಿಗೆ ಮುಟ್ಟಿಸಬೇಕಾದರೆ ಅದರ ಪ್ರಚಾರ ತುಂಬ ಅಗತ್ಯವಾಗಿರುತ್ತದೆ. ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಬೇರೆಬೇರೆ ರೀತಿಯ ಪ್ರಚಾರ ಸಾಮಾಗ್ರಿಗಳು, ಜಾಹೀರಾತು, ಟಿ.ವಿ., ರೇಡಿಯೋ ಮುಂತಾದವುಗಳ ಮೂಲಕ ಸರ್ಕಾರ ಈ ಯೋಜನೆಗೆ ಒತ್ತು ನೀಡಿತು. ಬಡ ಕುಟುಂಬಗಳಿಗೆ ಇದರಿಂದ ತುಂಬಾ ಸಮಾಧಾನವಾಯಿತು. ಕೆಲವೇ ತಿಂಗಳುಗಳಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಏರಿಕೆ ಕಂಡುಬಂತು. ಪೌಷ್ಠಿಕ ಆಹಾರದ ವಿತರಣೆ ಹಾಗೂ ಆರೋಗ್ಯ ತಪಾಸಣೆಯ ಕಡ್ಡಾಯ ಷರತ್ತು ಇರುವುದರಿಂದ ಹುಟ್ಟಿದ ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ ಸಿಗುವಂತಾಯಿತು. ಅಂಗನವಾಡಿಗಳಿಂದ ಆರು ವರ್ಷದವರೆಗೆ ಪೋಷಣೆಯನ್ನು ಪಡೆದು ಕಡ್ಡಾಯವಾಗಿ ಶಾಲೆಗೆ ಸೇರಿಸುವ ಷರತ್ತು ಸಹ ಈ ಬಾಂಡ್ನಲ್ಲಿ ಇರುವುದರಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು ಆಗುತ್ತದೆ ಮತ್ತು ಶಾಲೆ ಬಿಟ್ಟು ಹೋಗವ ಪರಿಣಾಮ ಕಡಿಮೆಯಾಗುತ್ತದೆ ಎಂಬ ಕಾರಣದಿಂದ ತುಂಬಾ ಪರಿಣಾಮಕಾರಿಯಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಯಿತು. ಹಾಗೂ ಬೇರೆ ರಾಜ್ಯಗಳು ಇಂಥ ಯೋಜನೆಗಳನ್ನು ಅನುಸರಿಸಲು ಪ್ರಾರಂಭಿಸಿದರು. ಇಂತಹ ಉತ್ತಮ ಯೋಜನೆಯ ಅನುಷ್ಠಾನದಲ್ಲಿ ನಾನು ಪಾಲುದಾರಳಾಗಿದ್ದುದು ನನ್ನ ಭಾಗ್ಯವೆಂದೇ ಭಾವಿಸುತ್ತೇನೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

