ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಹಾಗೂ ಅಳಿದು ಉಳಿದ ಸದಸ್ಯರಿಂದ ರಾಜ್ಯದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿರುವ ಭಾರತೀಯ ಜನತಾ ಪಾರ್ಟಿಗಳ ನಡುವೆ ಯಾವುದೇ ರೀತಿಯ ಹೊಂದಾಣಿಕೆಯಾಗದಿದ್ದರೆ, ರಾಜಕೀಯವಾಗಿ ಆ ಎರಡು ಶಕ್ತಿಗಳೂ ಹೇಳಲು ಹೆಸರೇ ಇಲ್ಲದಂತೆ ಆಗುವ ಸಂಭವವಿದೆ. ನಿಜ. ಹಿಂದೆ, ಬಿಜೆಪಿಗೆ ರಾಜ್ಯ ವಿಧಾನ ಸಭೆಯಲ್ಲಿ ಪ್ರಾತಿನಿಧ್ಯವೇ ಇಲ್ಲದಿದ್ದ ಕಾಲದಲ್ಲೂ, ಆ ಪಕ್ಷ ಹಲವು ಹತ್ತು ರೀತಿಯಲ್ಲಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುವುದು ಸಾಧ್ಯವಿತ್ತು. ಅದು ಕೆಲವು ಜನವರ್ಗಗಳ ಪಾಲಿನ ಏಕೈಕ ಪ್ರಾಮಾಣಿಕ ಪಕ್ಷ ಎನ್ನುವ ಹೆಸರನ್ನು ಪಡೆದಿತ್ತು.
ಈಗ ಇತರ ಎಲ್ಲ ಪಕ್ಷಗಳಂತೆ, ಬಿಜೆಪಿಗೂ ಚುನಾವಣೆ ರಾಜಕೀಯ ಬಿಟ್ಟರೆ ಬೇರೆ ಜನಪರ ಹೋರಾಟದ ಮಾರ್ಗವೇ ಇಲ್ಲ. ಚುನಾವಣೆ ರಾಜಕೀಯ ತನ್ನ ಗರ್ಭದಲ್ಲಿ ಇತರ ಎಲ್ಲ ಶಕ್ತಿಗಳನ್ನೂ ಸೇರಿಸಿಕೊಂಡಂತೆ, ಬಿಜೆಪಿಯನ್ನು ಸೇರಿಸಿಕೊಂಡದ್ದೂ ಆಗಿದೆ.
ಹೋರಾಟದ ಪಕ್ಷಗಳಿಗೆ ಹಲವು ನಾಯಕರಿರಬಹುದು- ಅಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲ. ಆದರೆ ಚುನಾವಣೆಯನ್ನೇ ಏಕಮಾತ್ರ ಚಟುವಟಿಕೆ ಎಂದುಕೊಂಡಿರುವ ಪಕ್ಷಗಳಿಗೆ, ಜನರನ್ನು ಆಕರ್ಷಿಸಬಲ್ಲ, ಅವಕಾಶ ಸಿಕ್ಕರೆ ಸರ್ಕಾರದ ಚುಕ್ಕಾಣಿಯನ್ನು ಹಿಡಿಯಬಲ್ಲ ನಾಯಕ ಅಗತ್ಯ. ಎಲ್ಲಕ್ಕೂ ದೆಹಲಿಯತ್ತ ವರಿಷ್ಠರನ್ನು ನೋಡುವ ಕಾಂಗ್ರೆಸ್ಸಿಗೂ ಈ ಮಾತು ಅನ್ವಯ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ, ಚುನಾವಣೆಯ ಗೆಲವಿನ ದೃಷ್ಟಿಯಿಂದ ಯಡಿಯೂರಪ್ಪ ಅವರೊಬ್ಬರೇ ನಾಯಕರಾಗಿ ಹೊರಹೊಮ್ಮಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂತಹ ವ್ಯಕ್ತಿಯನ್ನು ಬಿಟ್ಟು ಬಿಜೆಪಿ, ರಾಜ್ಯದಲ್ಲಿ ಬೇರೆ ಯಾರಿಗೂ ನಾಯಕರ ಪಟ್ಟವನ್ನು ಕಟ್ಟುವ ಸ್ಥಿತಿಯಲ್ಲೇ ಇರಲಿಲ್ಲ. ಈಗಲೂ ಇದ್ದಂತಿಲ್ಲ.
ಗೊಂಡಾರಣ್ಯದ ಮಾತು: ಆದರೆ ಶಕ್ತಿ ರಾಜಕೀಯದ ಗೊಂಡಾರಣ್ಯದಲ್ಲಿ ಯಡಿಯೂರಪ್ಪ ತಮ್ಮ ಬಹುಮುಖ ತಂತ್ರಗಾರಿಕೆಯಿಂದ ಪಕ್ಷವನ್ನು ಅಧಿಕಾರದ ಹೊಸ್ತಿಲಿನಲ್ಲಿ ನಿಲ್ಲಿಸಿದಾಗ, ಅಲ್ಲಿಂದ ಮುಂದಿನ ದಾರಿ ಸುಲಭವೆಂದು ಅನೇಕರು ಭಾವಿಸಿರಬೇಕು. ಕೆಲವರು ಅದನ್ನು ಹೇಳಿಯೂ ಇದ್ದರು. ರಾಜಕೀಯದಲ್ಲಿ ಧರ್ಮಸಮಾಜದ ಸೂತ್ರಗಳು ನಡೆಯುವುದಿಲ್ಲ. ಅಲ್ಲಿ - ಇಲ್ಲಿ ತಪ್ಪಾಗುವುದು ಸಹಜ. ಅನೇಕ ಸಂದರ್ಭಗಳಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಉದ್ದೇಶ ಪೂರ್ವಕವಾದ ತಪ್ಪುಗಳನ್ನು ಮಾಡಲೇ ಬೇಕಾಗುತ್ತದೆ. ಭ್ರಷ್ಟಾಚಾರವಂತೂ ಎಲ್ಲ ಕಡೆ ಹಬ್ಬಿರುವುದರಿಂದ ಆದರಿಂದ ಪ್ರಮುಖರಿಗೆ ಮುಕ್ತಿ ಸಿಗುವುದು ಕಷ್ಟ. ಆದರೆ ಆ ಯಾತ್ರೆಯಲ್ಲಿ ಸ್ವಲ್ಪ ಎಡವಿದರೂ ಪಾತಾಳದ ದರ್ಶನವಾದರೂ ಆಶ್ಚರ್ಯವಿಲ್ಲ. ಯಡಿಯೂರಪ್ಪ ಅವರಿಗೆ ವರ್ಷದ ಹಿಂದೆ ಆಗಿದ್ದೂ ಅದೇ. ಭ್ರಷ್ಟಾಚಾರದ ಆರೋಪಗಳ ತನಿಖೆಯ ಹಂತದಲ್ಲೇ ಜೈಲು ಸೇರಬೇಕಾಗಿ ಬಂದಾಗ ಅವರ ಪ್ರತಿಷ್ಠೆಗೆ ಕುಂದುಂಟಾದರೂ, ಅವರ ನಾಯಕತ್ವದ ಜತೆಯಲ್ಲೇ ಬೆಳೆದು ಬಂದಿದ್ದ ಕೆಲವು ಜನವರ್ಗಗಳ ಮೂಢ ವಿಶ್ವಾಸ ಅವರ ಜತೆಯಲ್ಲೇ ಇತ್ತು. ಅದು ಅವರಿಗೂ ಗೊತ್ತಿತ್ತು.
ಹೀಗಾಗಿ ಬಿಜೆಪಿಯಿಂದ ಹೊರಗೆ ಹೋದರೂ ತಮ್ಮ "ಜನಪ್ರಿಯತೆ ವಿಪರೀತ ಕುಗ್ಗುವುದಿಲ್ಲ" ಎನ್ನುವ ಭಾವನೆ ಬಲವಾಗಿ ಬೆಳೆಯಿತು. ಅದೇ ಹಾವೇರಿಯ ಮಹಾಸಭೆಯಲ್ಲಿ ಬಿಜೆಪಿಯಿಂದ ಸಿಡಿದು ಹೋಗಿ ಹೊಸ ಪಕ್ಷವನ್ನು ಸ್ಥಾಪಿಸಿದ್ದರ ಹಿನ್ನೆಲೆ. ಆ ಕಾಲದಲ್ಲಿ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಬಿಜೆಪಿಯನ್ನು ಸೋಲಿಸಲೆಂದೇ ಹೊಸ ಪಕ್ಷದ ರಚನೆಯಾಗಿದೆ ಎನ್ನುವ ಭಾವನೆ ಇತರರಲ್ಲಿ ಮೂಡುವುದಕ್ಕೆ ನೆರವಾಗುವಂತೆ ವರ್ತಿಸಿದ್ದರೂ, ಅವರ ಮನಸ್ಸಿನ ಅಂತರಾಳದ ಒಂದು ಮೂಲೆಯಲ್ಲಿ ಅತಂತ್ರ ವಿಧಾನ ಸಭೆಯ ರಚನೆಯಾಗಿ, ತಮಗೂ ಅಧಿಕಾರದಲ್ಲಿ ಪಾಲು ಸಿಗುವ ಸಂಭವವಿದೆ ಎನ್ನುವ ಆಸೆಯೂ ಹುದುಗಿತ್ತು. ಹಾಗಾಗಲಿಲ್ಲ. ಬಿಜೆಪಿಯ ನಿರ್ಣಾಯಕವಾದ ಸೋಲಿಗೆ ಕಾರಣವಾದ ಕೆಜೆಪಿ ತೀರ ಹೀನಾಯವಾಗಿ ಸೋತಿತ್ತು. ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಬಿಜೆಪಿ - ಕೆಜೆಪಿ ನಾಯಕರಿಗೆ ಸ್ವಲ್ಪ ಕಾಲ ಬೇಕಾಯಿತು. ಈ ಸ್ಥಿತಿಯೇ ಶಾಶ್ವತವಾದರೆ ಬಿಜೆಪಿ-ಕೆಜೆಪಿ ಗಳೆರಡೂ ಪಕ್ಷಗಳು ಶಾಶ್ವತವಾಗಿ ಬೀದಿಯಲ್ಲೇ ಬೀಳಬೇಕಾದೀತು ಎನ್ನುವುದರ ಅರಿವಾಯಿತು. ಕಾಂಗ್ರೆಸ್ಸಿನಲ್ಲಿ ಈಗ ಕಂಡು ಬಂದಿರುವ ವಿಜಯದ ಉನ್ಮಾದದಲ್ಲಿ ಇತರರಿಗೆ ಸ್ಥಾನವಿಲ್ಲ ಎನ್ನುವುದೂ ನಿಜ. ಯಡಿಯೂರಪ್ಪ, ಹಿಂದೆ ಬಿಜೆಪಿಯನ್ನು ತೊರೆದು ಹೋಗುವಾಗಲೂ, ಅನೇಕ ದಿನಗಳ ಕಾಲ ಬೆಳಿಗ್ಗೆ ಒಂದು ಮಾತು, ಸಂಜೆ ಇನ್ನೊಂದು ಮಾತನ್ನು ಆಡುತ್ತಲೇ ಇದ್ದರು. ಆ ಪ್ರವೃತ್ತಿ ಕೊನೆಗೊಂಡಿದ್ದು ಚುನಾವಣೆಯ ಸೋಲಿನಲ್ಲೇ. ಈಗಲೂ ಅಷ್ಟೇ. ಯಡಿಯೂರಪ್ಪ ಬಿಜೆಪಿ ಜತೆ ಸೇರಿಕೊಳ್ಳುವ ವಿಚಾರದಲ್ಲಿ ದ್ವಂದಾರ್ಥದ ಮಾತುಗಳನ್ನೇ ಆಡುತ್ತಿದ್ದಾರೆ. ಹೀಗೇ ಉಳಿದುಕೊಂಡರೆ ಸದ್ಯದ ರಾಜಕೀಯದಲ್ಲಿ ಅನಾಥ ಪ್ರಜ್ಞೆಯೊಂದಿಗೇ ಬದುಕುವ ಅನಿವಾರ್ಯತೆಯೂ ಕಂಡು ಬಂದಿದೆ.
ಈಗಷ್ಟೇ ಸಂಧಾನ: ಈಗಷ್ಟೇ ಯಡಿಯೂರಪ್ಪ ಬಹಿರಂಗವಾಗಿ ವಿಧಾನಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವುದು. ತಮ್ಮಲ್ಲಿ ಜಗಳವಾಗದೇ ಇದ್ದರೆ, ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕುತ್ತಿರಲಿಲ್ಲ ಎನ್ನುವುದನ್ನು ಸದನದಲ್ಲೇ ಹೇಳಿದ್ದಾರೆ. ನಿಜ. ಯಡಿಯೂರಪ್ಪ ಬಿಜೆಪಿಯನ್ನು ಸೇರುವ ಅಥವಾ ಆ ಪಕ್ಷದ ಜತೆ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಮಾತನ್ನು ಸ್ಪಷ್ಟವಾಗಿ ಹೇಳಿಲ್ಲ. ಅದನ್ನು ಅವರಿಂದ ಈಗಲೇ ನಿರೀಕ್ಷಿಸುವಂತಿಲ್ಲ. ಆದರೆ ಬಿಜೆಪಿಯನ್ನು, ಪಕ್ಷದ ನಾಯಕರನ್ನು, ಮಾಜಿ ಸಂಗಾತಿಗಳನ್ನು ಹೀನಾಮಾನ ತೆಗಳುವುದನ್ನು ನಿಲ್ಲಿಸಿದ್ದಾರೆ. ವರ್ಷದ ರಾಜಕೀಯ ಒಂಟಿತನ ಅವರ ಮೇಲೆ ಪರಿಣಾಮ ಬೀರಿದೆ.
ಬಿಜೆಪಿಯ ನಾಯಕರಿಗೂ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರನ್ನು ಹುಡುಕುವುದಕ್ಕೆ ಆಗುವುದಿಲ್ಲ. ಹೀಗಾಗಿ ಯಾವ ದೃಷ್ಟಿಯಿಂದ ನೋಡಿದರೂ ಹಗೆತನದ ಬಿಸಿ ಈಗ ಇಲ್ಲ ಎಂದೇ ಕಂಡು ಬರುತ್ತಿದೆ. ಇದೇ ಸಮಯದಲ್ಲೇ ಬೇರೆ ಬೇರೆ ಹಂತಗಳಲ್ಲಿ ಅಂತರಂಗದ ಮಾತುಕತೆಗಳೂ ನಡೆದಿವೆ. ಬಿಜೆಪಿಗೆ ಯಡಿಯೂರಪ್ಪ ಬೇಕು. ಅವರಿಗೆ ಸೂಕ್ತ ಸ್ಥಾನಮಾನವನ್ನು (ರಾಜಕೀಯದಲ್ಲಿ ನಂಬರ್ ಒನ್-ಟೂ-ಥ್ರೀ ಪ್ರಶ್ನೆ ಇಲ್ಲ) ನೀಡಲೂ ಅದು ಸಿದ್ಧವಾಗಬಹುದು. ಆದರೆ ಯಡಿಯೂರಪ್ಪ ಅವರ ಈಗಿನ ಪರಿವಾರದಲ್ಲಿರುವ ಎಲ್ಲರಿಗೂ ಮರ್ಯಾದೆ ಮಾಡಲಿಕ್ಕೆ ಪಕ್ಷದಲ್ಲಿ ಅಷ್ಟೊಂದು ಸ್ಥಾನಗಳಿಲ್ಲ. ಪ್ರಾಯಶಃ ಇಲ್ಲೇ ತಕರಾರು ಬರಬಹುದು. ಶಾಶ್ವತವಾಗಿ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಗುಂಪು ಪ್ರತ್ಯೇಕವಾಗಿ ಉಳಿಯಬೇಕಾಗಿ ಬಂದರೆ ಅವರ ಬೆಂಬಲಿಗರಿಗೆ ಕಿರಿಕಿರಿಯಾಗುವುದು ಸಹಜವೇ. ಈಗ ಯಡಿಯೂರಪ್ಪ ಪರಿವಾರದಲ್ಲಿ ಮಹಾ ನಾಯಕರೆನಿಸಿಕೊಂಡಿರುವವರು ಯಾರೂ ಇಲ್ಲ.
ಮಾಜಿ ಕೇಂದ್ರ ಮಂತ್ರಿ ಧನಂಜಯಕುಮಾರ್ ಅವರ ಪ್ರಶ್ನೆ ಪ್ರತ್ಯೇಕ. ಅದನ್ನು ರಾಜ್ಯ ಬಿಜೆಪಿ ನಾಯಕರು ಬಗೆಹರಿಸುವಂತಿಲ್ಲ. ಅಲ್ಲಿ ಆಡ್ವಾಣಿ ಅವರ ಹೆಸರೂ ತಳಕು ಹಾಕಿಕೊಂಡಿರುವುದು ಸ್ವಲ್ಪ ಇರುಸು -ಮುರುಸಿನ ಪ್ರಶ್ನೆಯೇ. ಇದೆಲ್ಲವೂ ಈಗಲೇ ಇತ್ಯರ್ಥವಾಗಬೇಕೆಂದೇನೂ ಇಲ್ಲ. ರಾಜಕೀಯದಲ್ಲಿ ಷರತ್ತು ಬದ್ಧ, ವಿಷಯ ಆಧಾರಿತ ಹೊಂದಾಣಿಕೆ ಎನ್ನುವ ಮಾತೇ ಇಲ್ಲ. ಷರತ್ತುಗಳ ಮೂಲಕ ಮನಸ್ಸುಗಳನ್ನು ಒಂದುಗೂಡಿಸುವುದು ಅಸಾಧ್ಯ. ಷರತ್ತು ಹೊಂದಾಣಿಕೆ ಎನ್ನುವ ಪದಕ್ಕೇ ವಿರುದ್ಧವಾದದ್ದು. ಕಡ್ಡಿ ಮುರಿದರೆ ತುಂಡಾಗುವಂತಹ ಮಾತು ಇಲ್ಲಿ ಸಲ್ಲದು. ಇದ್ದಕ್ಕಿದ್ದಂತೆ ಈಗ ಅಲ್ಲಿ - ಇಲ್ಲಿ ಕೇಳಿ ಬರುತ್ತಿರುವ ಮಾತುಗಳಂತೆ, ಜಾತ್ಯತೀತ ಜನತಾದಳದ ನಾಯಕ ದೇವೇಗೌಡರ ಮನಸ್ಸೂ ಐಕ್ಯರಂಗದ ರಚನೆಗೆ ವಿರೋಧವಾಗಿಲ್ಲ. ಐಕ್ಯರಂಗದ ಪ್ರಸ್ತಾಪವೇನಿದ್ದರೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲೇ ಆಗಬೇಕು. ಇದುವರೆಗೆ ಐಕ್ಯರಂಗದ ಪ್ರಸ್ತಾಪ ಮಾಡುತ್ತಿರುವವರು ಸ್ಪಷ್ಟವಾದ ರಾಜಕೀಯ - ಆರ್ಥಿಕ ಸಿದ್ಧಾಂತಗಳಿಂದ ದೂರವಾಗಿರುವ ಪ್ರಾದೇಶಿಕ ಪಕ್ಷಗಳ ನಾಯಕರೇ. ಮಮತಾ ಬ್ಯಾನರ್ಜಿ, ನವೀನ ಪಟ್ಟನಾಯಕ, ಜಯಲಲಿತಾ ಅವರಂತಹವರೇ.
ಕರ್ನಾಟಕದ ರಾಜಕೀಯದ ಮಟ್ಟಿಗೆ ಹೇಳುವುದಾದರೆ, ಈ ನಾಯಕರಲ್ಲಿ ಯಾರೂ ರಾಷ್ಟ್ರೀಯ ನಾಯಕರಾಗಬಲ್ಲ ಭರವಸೆಯನ್ನು ಮೂಡಿಸಿಲ್ಲ. ಆದ್ದರಿಂದ ರಾಜ್ಯದ ಮಟ್ಟಿಗೆ ನಿಜವಾಗಲೂ ಪ್ರಸ್ತುತವಾಗಬಲ್ಲ ಐಕ್ಯರಂಗ ಬಿಜೆಪಿಯನ್ನು ದೂರವಿಡುವಂತಿಲ್ಲ, ಜಾತ್ಯತೀತ ಜನತಾದಳವನ್ನೂ ದೂರವಿಡುವಂತಿಲ್ಲ.
ಈಗ ತಾನೇ ವಿಧಾನ ಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್ಸಿನ ವಿಜಯೋನ್ಮಾದದ ತೀವ್ರತೆ ಕಡಿಮೆಯಾಗಲಿಕ್ಕೆ ಇನ್ನೂ ಸಮಯ ಬೇಕು. ಯಾರಿಗೂ ಅವಸರವಿದ್ದಂತೆ ಕಂಡು ಬರುತ್ತಿಲ್ಲ. ಇನ್ನು ಕೆಲವು ದಿನಗಳ ಕಾಲ ರಾಜ್ಯದ ರಾಜಕೀಯ ಹೀಗೇ ಸಾಗುವ ಸಂಭವವೇ ಹೆಚ್ಚು. ಇಲ್ಲಿ ಮುಖ್ಯವಾದ ವಿಚಾರ ಎಂದರೆ ಸಂಧಾನಕಾರರನ್ನು ದೂರವಿಡುವ ಕಠಿಣ ಮನಸ್ಸನ್ನು ಯಾರೂ ಪ್ರದರ್ಶಿಸಿಲ್ಲ ಎನ್ನುವುದು. (ಅದು ಬಿಜೆಪಿ - ಕೆಜೆಪಿ ಮಾತು).
ಈಗ ತಾನೇ ಬಹಿರಂಗವಾಗಿ ಮಾತಾಡುವುದು, ಕೈ ಕುಲುಕುವುದು ಆರಂಭವಾಗಿದೆ. ನೋಡಬೇಕು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವ ರಾಜಕೀಯ ಒತ್ತಡಗಳು ಯಾರ ಮೇಲೆ ಏನು ಪರಿಣಾಮ ಬೀರತ್ತೋ ಗೊತ್ತಿಲ್ಲ.
ಕಿಡಿಗೇಡಿತನ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈಗ ಮೈದಾನದ ರಾಜಕೀಯದಲ್ಲಿ ಸರ್ಕಾರವನ್ನು ವಿರೋಧಿಸುವ, ಹಿಗ್ಗಾ - ಮುಗ್ಗಾ ಜಗ್ಗುವುದು ಹೊಸದಲ್ಲ. ಆ ದಂಧೆಯಲ್ಲಿ ಸಾಕಷ್ಟು ಅನುಭವವಿದೆ. ಆದರೆ ವಿಧಾನ ಸಭೆಯಲ್ಲಿ ಸರ್ಕಾರದ ನಾಯಕರನ್ನು ಮುಖಾಮುಖಿಯಾಗಿ ಎದುರಿಸುವಾಗ ಅಂಕಿ - ಅಂಶಗಳ ವಿಚಾರದಲ್ಲಿ ಇರಬೇಕಾದಷ್ಟು ಪರಿಣತಿ ಇಲ್ಲ. ಸ್ವಲ್ಪ ಹೆಚ್ಚಿನ ಹೋಂ ವರ್ಕ್ ಬೇಕು.
-ಸತ್ಯ
anisikeprabha@gmail.com