ಅಂಕಣಗಳು

ಬಿಸಿಯೂಟ: ಈಗ ತುರ್ತಾಗಿ ಆಗಬೇಕಿರುವುದೇನು?

Published On :

ಜಾರ್ಖಂಡ್ ರಾಜ್ಯದ ಡೋಗಾರ್ ನಗರದಲ್ಲಿ ಎತ್ತ ತಿರುಗಿದರೂ ಒಂದಲ್ಲ ಒಂದು ದೇವಾಲಯಗಳು ಕಾಣಿಸುತ್ತವೆ. ಈ ಕಾರಣದಿಂದಲೇ ಡೋಗಾರ್ ನಗರಕ್ಕೆ ದೇವಾಲಯಗಳ ಬೀಡು ಎಂಬ ಹೆಸರು ಬಂದಿದೆ. ಈ ನಗರದಿಂದ ಆರು ಕಿಲೋಮೀಟರ್ ದೂರವಿರುವ ಕುಶ್ಮಾಹಾ ಎಂಬ ಕುಗ್ರಾಮದ ಶಾಲೆಯೊಂದರಲ್ಲಿ ನಾನು ಶಿಕ್ಷಕಿ. ಕುಗ್ರಾಮವಾದ ಕಾರಣ, ಕುಶ್ಮಾಹಾದಲ್ಲಿ ಬಾಡಿಗೆಗೆ ಮನೆಗಳು ಸಿಗುವುದಿಲ್ಲ. ಹಾಗಾಗಿ, ಬೇರೊಂದು ಊರಿನಲ್ಲಿ ನನ್ನ ವಾಸ. ದಿನವೂ ಬಸ್‌ನಲ್ಲಿ ಬಂದು ಸಂಜೆ ವಾಪಸಾಗುವುದು ನನಗೂ ಅಭ್ಯಾಸವಾಗಿ ಹೋಗಿದೆ.
ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಮುಂದಾಗಲಿ ಎಂಬ ಮಹದಾಸೆಯಿಂದಲೇ, ಮಧ್ಯಾಹ್ನ ಬಿಸಿಯೂಟ ನೀಡುವ ಯೋಜನೆಯನ್ನು ಇಲ್ಲಿನ ಸರ್ಕಾರವು ಜಾರಿಗೆ ತಂದಿದೆ. ಆದರೆ, ಈ ಯೋಜನೆ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗುವ ಬದಲು, ಅವರ ಪಾಲಿಗೆ ದುಃಸ್ವಪ್ನದಂತೆ ಭಾಸವಾಗತೊಡಗಿದೆ. ಬಿಸಿಯೂಟದಲ್ಲಿ ಹುಳು ಪತ್ತೆ, ಬಿಸಿಯೂಟ ತಿಂದು ಮಕ್ಕಳು ಅಸ್ವಸ್ಥ ಎಂಬಂಥ ಸುದ್ದಿಗಳು ದೇಶಾದ್ಯಂತ ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಸಂಬಂಧವಾಗಿ ಸರ್ಕಾರಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದೇ ಹೋದರೆ, ಸರ್ಕಾರಿ ಶಾಲೆಗಳ ಸಹವಾಸವೇ ಬೇಡ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ನಿರ್ಧರಿಸಿದರೂ ಅಚ್ಚರಿಯಿಲ್ಲ.
      ಈಗ ನನ್ನ ಅನುಭವ ಕೇಳಿ. ನಾನು ಕೆಲಸ ಮಾಡುವ ಕಾಶ್ಮಾಹಾದ ಪಾಠಶಾಲೆಯಲ್ಲಿ ಐದನೇ ತರಗತಿಯವರೆಗೆ ಕಲಿಸುವ ಅನುಕೂಲವಿದೆ. ನಮ್ಮ ಶಾಲೆಯಲ್ಲಿ 195 ವಿದ್ಯಾರ್ಥಿಗಳಿದ್ದಾರೆ. ನಾವು ಐವರು ಬೋಧಕರಿದ್ದೇವೆ. ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಜಾರ್ಖಂಡ್‌ನಲ್ಲಿ ಅವಿದ್ಯಾವಂತರದ್ದೇ ಪ್ರಾಬಲ್ಯ. ತುಂಬ ಬಡತನದಿಂದ ಕಂಗಾಲಾಗಿರುವ ಈ ರಾಜ್ಯದ ಬಹುಪಾಲು ಮಂದಿಗೆ ಮಕ್ಕಳನ್ನು ಓದಿಸುವ ಚೈತನ್ಯವಿಲ್ಲ ಎಂಬುದು ಸತ್ಯ.
ವಾಸ್ತವ ಹೀಗಿರುವಾಗಲೇ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಬಿಸಿಯೂಟ ನೀಡುವ ಮಹತ್ವದ ಯೋಜನೆಯನ್ನು 2004ರಲ್ಲಿ ಜಾರ್ಖಂಡ್ ಸರ್ಕಾರ ಆರಂಭಿಸಿತು. ಶಾಲೆಗೆ ಹೋದರೆ, ಮಕ್ಕಳಿಗೆ ಒಂದು ಪೊಗದಸ್ತಾದ ಊಟ ದೊರೆಯುತ್ತದೆ ಎಂಬುದು ಖಚಿತವಾದಾಗ ಪೋಷಕರು ಖುಷಿಯಾದರು. ಅದುವರೆಗೂ ದನ ಮೇಯಿಸಲು ಹೋಗುತ್ತಿದ್ದ ಮಕ್ಕಳನ್ನು ತಾವೇ ಖುದ್ದಾಗಿ ಶಾಲೆಗೆ ಕರೆದುಕೊಂಡು ಬಂದರು. ಆ ಲೆಕ್ಕದಲ್ಲಿ, ಒಂದು ಹೊತ್ತು ಊಟ ನೀಡುವ ಯೋಜನೆ, ಗ್ರಾಮೀಣ ಭಾಗದಲ್ಲಿ ನಿಜವಾಗಿಯೂ ಕ್ರಾಂತಿ ಉಂಟು ಮಾಡಿತು. ಅದುವರೆಗೂ ಶಾಲೆಯತ್ತ ತಿರುಗಿಯೂ ನೋಡದಿದ್ದ ಮಕ್ಕಳು ಶಾಲೆಗೆ ಬಂದರು. ಹೀಗೆ ಬಂದ ಮಕ್ಕಳಲ್ಲಿ ಎಂಟು, ಒಂಭತ್ತು ವರ್ಷ ತುಂಬಿದ್ದ ಮಕ್ಕಳೂ ಇದ್ದವು. ಆ ಮಕ್ಕಳೂ ಒಂದನೇ ತರಗತಿಯಿಂದಲೇ ಕಲಿಕೆ ಆರಂಭಿಸಿದವು. ಮತ್ತೊಂದು ಕಡೆಯಲ್ಲಿ, ಶಾಲೆಗೆ ನಿರಂತರವಾಗಿ ಚಕ್ಕರ್ ಹೊಡೆಯುತ್ತಿದ್ದ ಮಕ್ಕಳೂ ಬಿಸಿಯೂಟದ ಆಸೆಗೆ, ಒಂದು ದಿನವೂ ತಪ್ಪಿಸದೆ ಶಾಲೆಗೆ ಬರತೊಡಗಿದವು.
ಇದು, ಬಿಸಿಯೂಟದ ಯೋಜನೆಯಿಂದ ಉಂಟಾದ ಸಕಾರಾತ್ಮಕ ಬೆಳವಣಿಗೆಯ ಮಾತಾಯಿತು. ಈ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾದ ಸವಾಲುಗಳು ಹಾಗೂ ಜೊತೆಯಾದ ಸಂಕಟಗಳ ಬಗ್ಗೆಯೂ ಇಲ್ಲಿ ಹೇಳಬೇಕು.
    ಬಿಸಿಯೂಟ ತಯಾರಿಸಲು ಇಬ್ಬರು ಅಡುಗೆಯವರನ್ನು ನೇಮಿಸಿಕೊಳ್ಳುವುದೆಂದೂ, ಅವರಿಗೆ ದಿನಕ್ಕೆ ತಲಾ 40 ರುಪಾಯಿ ಸಂಬಳ ಕೊಡತಕ್ಕದ್ದೆಂದೂ ಸರ್ಕಾರದ ಸೂಚನೆಯಿದೆ. ಗ್ಯಾಸ್ ಸಿಲಿಂಡರ್ ಉಪಯೋಗಿಸಿ ಅಡುಗೆ ತಯಾರಿಸಬೇಕೆಂಬುದೂ ಸರ್ಕಾರದ ಆದೇಶ. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಸಿಲಿಂಡರ್‌ಗಳು ಪೂರೈಕೆಯಾಗುವುದಿಲ್ಲ. ಈ ಬಗ್ಗೆ ಸಿಲಿಂಡರ್ ಪೂರೈಸುವ ಏಜೆನ್ಸಿಯಲ್ಲಿ ಕೇಳಿದರೆ- ಸ್ಟಾಕ್ ಇಲ್ಲ ಎನ್ನುತ್ತಾರೆ. ಇಲ್ಲದಿದ್ದರೆ, ನಿಮ್ಮ ಶಾಲೆಯಿರುವ ಕುಗ್ರಾಮಕ್ಕೆ ಬರಲು ರಸ್ತೆ ಚೆನ್ನಾಗಿಲ್ಲ. ಹಾಗಾಗಿ ನೀವೇ ಬಂದು ಸಿಲಿಂಡರ್ ಕೊಂಡೊಯ್ಯಿರಿ ಅನ್ನುತ್ತಾರೆ. ಸಿಲಿಂಡರ್ ಬರಲಿಲ್ಲ ಎಂಬ ಕಾರಣಕ್ಕೆ ಬಿಸಿಯೂಟವನ್ನು ಕೊಡದಿರಲು ಸಾಧ್ಯವೆ? ಇಂಥ ಸಂದರ್ಭದಲ್ಲಿ ನಾವು ಸೌದೆಯನ್ನು ತರಿಸಿ ಅದರಿಂದಲೇ ಅಡುಗೆ ಮಾಡಿಸಬೇಕಿತ್ತು. ಸೌದೆಯನ್ನು ಬಳಸಿ ಅಡುಗೆ ತಯಾರಿಸುವುದು ಎಂದರೆ, ಅದಕ್ಕೆಂದೇ ಪ್ರತ್ಯೇಕವಾಗಿ ಒಲೆಯನ್ನು ಸಿದ್ಧಪಡಿಸಬೇಕಿತ್ತು.
      ಬಿಸಿಯೂಟದ ಯೋಜನೆ ಆರಂಭವಾದ ಸಂದರ್ಭದಲ್ಲಿ, ಅಡುಗೆ ತಯಾರಕರಿಗೆ ಮಾತ್ರವಲ್ಲ, ಶಿಕ್ಷಕರಿಗೂ ಉತ್ಸಾಹವಿತ್ತು. ದಿನವೂ ಒಂದೇ ಬಗೆಯ ಊಟ ನೀಡಿದರೆ, ಅದರಿಂದ ಏಕತಾನತೆ ಅನ್ನಿಸಿ, ಮಕ್ಕಳಿಗೆ ಊಟ ಮಾಡುವುದೂ ಒಂದು ಹಿಂಸೆ ಅನ್ನಿಸಬಹುದು. 'ಹಾಗಾಗದಂತೆ ಎಚ್ಚರ ವಹಿಸೋಣ. ದಿನಕ್ಕೆ ಒಂದು ವೆರೈಟಿಯ ತಿಂಡಿ ತಯಾರಿಸೋಣ' ಎಂದು ಎಲ್ಲರೂ ಮಾತಾಡಿಕೊಂಡೆವು. ಪರಿಣಾಮವಾಗಿ ಚಿತ್ರಾನ್ನ, ಮೊಸರನ್ನ, ಪೊಂಗಲ್, ಪುಳಿಯೊಗರೆ, ಪಲಾವ್... ಹೀಗೆ ಒಂದೊಂದೇ ಹೊಸ ಘಮ ಮಧ್ಯಾಹ್ನದ ಹೊತ್ತು ಶಾಲೆಯ ಆವರಣದಲ್ಲಿ ಪಸರಿಸಿತು. ಈ ವೆರೈಟಿ ತಿಂಡಿಗಳನ್ನು ವಿದ್ಯಾರ್ಥಿಗಳೂ ಸಂಭ್ರಮದಿಂದ ಸ್ವಾಗತಿಸಿದರು.
ಆದರೆ, ಈ ಸಡಗರ ಹೆಚ್ಚು ಕಾಲ ಉಳಿಯಲಿಲ್ಲ. ಯೋಜನೆಯನ್ನು ಆರಂಭಿಸಿದ ಸಂದರ್ಭದಲ್ಲಿ ಯಥೇಚ್ಛವಾಗಿ ಹಣ ಬಿಡುಗಡೆ ಮಾಡಿದ್ದ ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ಮೂರು ತಿಂಗಳು ಕಳೆಯುತ್ತಿದ್ದಂತೆ ಹಣ ಬಿಡುಗಡೆ ವಿಷಯದಲ್ಲಿ ಜಿಗುಟುತನ ತೋರಲಾರಂಭಿಸಿತು. ಪರಿಣಾಮವಾಗಿ, ಬಿಸಿಯೂಟದ ಯೋಜನೆಯ ಬಜೆಟ್‌ನಲ್ಲಿ ಪ್ರತಿ ವಿದ್ಯಾರ್ಥಿಗೆ 150 ಗ್ರಾಂ ಅನ್ನ ಮತ್ತು 30 ಗ್ರಾಂ ತರಕಾರಿ ನೀಡಬೇಕೆಂಬ ನಿಯಮ ರೂಪಿಸಿತು. ಹಾಗೆಯೇ ಒಬ್ಬ ವಿದ್ಯಾರ್ಥಿಗೆ ಒಂದು ಹೊತ್ತಿಗೆ 3.50 ರೂಪಾಯಿಗಳನ್ನು ಮೀಸಲಿಡುವುದಾಗಿಯೂ ಹೇಳಿತು. ಪರಿಣಾಮ, ಬಿಸಿಯೂಟದ ಯೋಜನೆಗೆ ಬಿಡುಗಡೆಯಾಗುವ ಹಣದಲ್ಲಿ ಭಾರೀ ಕಡಿತವಾಯಿತು. ಇದರ ಒಟ್ಟಾರೆ ಫಲಿತಾಂಶವೆಂದರೆ -ದಿನಕ್ಕೆ ಒಂದು ಥರದ ತಿಂಡಿ ತಯಾರಿಸುವ ಕೆಲಸ ನಿಂತು ಹೋಯಿತು. ಯಾವುದಾದರೂ ಎರಡು ತಿಂಡಿಯನ್ನು ಆಯ್ಕೆ ಮಾಡಿಕೊಂಡು ಅದನ್ನೇ ದಿನಬಿಟ್ಟು ದಿನ ತಯಾರಿಸುವ ಪದ್ಧತಿಯೂ ಜಾರಿಗೆ ಬಂತು.
ಬಿಸಿಯೂಟ ತಯಾರಿಕೆಯ ವಿಷಯವಾಗಿ ಇರುವ ಬಹು ದೊಡ್ಡ ಸಮಸ್ಯೆ ಅಂದರೆ, ಶಾಲೆಗಳಿಗೆ ಪೂರೈಸುವ ಅಕ್ಕಿ ಹಾಗೂ ಸಾಂಬಾರ್ ತಯಾರಿಕೆಗೆ ಬಳಕೆಯಾಗುವ ಕಾಳುಗಳ ಗುಣಮಟ್ಟಕ್ಕೆ ಸಂಬಂಧಿಸಿದ್ದು. ಎಲ್ಲರಿಗೂ ಗೊತ್ತಿರುವಂತೆ ಶಿಕ್ಷಣ ಇಲಾಖೆ ಅಥವಾ ಜಿಲ್ಲಾಡಳಿತದ ಅಧಿಕಾರಿಗಳು ಟೆಂಡರ್ ಕರೆದು ಅಕ್ಕಿ, ಎಣ್ಣೆ, ಕಾಳು ಮತ್ತು ತರಕಾರಿ ಸರಬರಾಜು ಮಾಡುವುದನ್ನು ಯಾವುದಾದರೂ ಕಂಪನಿಗೆ ಗುತ್ತಿಗೆ ನೀಡುತ್ತಾರೆ.
ಸಮಸ್ಯೆ ಇರುವುದೇ ಇಲ್ಲಿ. ಹೀಗೆ ಸರಬರಾಜಾಗುವ ಅಕ್ಕಿ, ಎಣ್ಣೆ ಹಾಗೂ ಕಾಳು ಉತ್ತಮ ಗುಣಮಟ್ಟದಿಂದ ಕೂಡಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವವರೇ ಇಲ್ಲವಾಗಿದ್ದಾರೆ. ಶಾಲಾ ಶಿಕ್ಷಕನಿಗೆ ಮಧ್ಯಾಹ್ನ ಅರ್ಧ ಗಂಟೆಯ ಬಿಡುವು ಸಿಗುವುದೇ ವಿನಃ ಅದರ ಹೊರತಾಗಿ ಎಕ್ಸ್‌ಟ್ರಾ ಬಿಡುವು ಎಂಬುದೂ ಇರುವುದಿಲ್ಲ. ಹೀಗಿರುವಾಗ, ದಿನವೂ ಬಿಸಿಯೂಟ ತಯಾರಿಕೆಗೆ ಬಳಸುವ ಆಹಾರ ಪದಾರ್ಥಗಳು ಹೇಗಿವೆ ಎಂದು ಪರಿಶೀಲಿಸಲು ಅವರಿಗೂ ಸಾಧ್ಯವಾಗುವುದಿಲ್ಲ. ಅಕ್ಕಿ ಹಾಗೂ ಕಾಳಿನ ಗುಣಮಟ್ಟ ಹೇಗಿದೆಯೆಂದು ನಿರ್ಧರಿಸಲು ಅಡುಗೆಯವರಿಗೆ ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಈ ಗುರುತರ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸುವುದರಿಂದಲೂ ಪ್ರಯೋಜನವಿಲ್ಲ. ಈ ನಡುವೆ ಆಹಾರ ಪದಾರ್ಥಗಳ ಪೂರೈಕೆದಾರರು ಮತ್ತು ಶಿಕ್ಷಣ/ಆಹಾರ ಇಲಾಖೆಯ ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಾಧ್ಯತೆಗಳು ಇದ್ದೇ ಇವೆ. ಬಿಸಿಯೂಟ ತಿಂದು ಮಕ್ಕಳು ಅಸ್ವಸ್ಥ, ಬಿಸಿಯೂಟ ತಿಂದ ಮಕ್ಕಳಿಗೆ ವಾಂತಿ, ಬಿಸಿಯೂಟದ ತಿಂದ ಮಕ್ಕಳು ಚಿರನಿದ್ರೆಗೆ ಎಂದೆಲ್ಲಾ ವರದಿಗಳು ಹಲವು ರಾಜ್ಯಗಳಿಂದ ಕೇಳಿ ಬರಲು, ಆಹಾರ ಪದಾರ್ಥದಲ್ಲಿನ ಗುಣಮಟ್ಟ ಹಾಗೂ ಅಡುಗೆ ತಯಾರಕರು ಶುಚಿತ್ವ ಕಾಪಾಡದಿರುವುದೇ ಪ್ರಮುಖ ಕಾರಣ ಎಂದು ಒತ್ತಿ ಹೇಳಬೇಕಾಗಿದೆ.
ಸರ್ಕಾರಗಳು ಆರಂಭಿಸಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆಯೇ ಅನುಮಾನ, ಗೊಂದಲ, ಅಸಹನೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ, ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ದೊಡ್ಡ ಹೆಸರು ಮಾಡಿರುವ ಹೆಸರಾಂತ ಕಂಪನಿಗಳಿಗೆ, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೂ ಆಹಾರ ಪದಾರ್ಥ ಪೂರೈಕೆಯ ಗುತ್ತಿಗೆ ನೀಡುವುದು, ಅಡುಗೆ ತಯಾರಿಕೆಗೂ ಅನುಭವ ಹೊಂದಿರುವ ನುರಿತ ಕೆಲಸಗಾರರನ್ನೇ ನೇಮಕ ಮಾಡಿಕೊಳ್ಳುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಇಷ್ಟಾದ ನಂತರವೂ, ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಪೌಷ್ಠಿಕಾಂಶದ ಕೊರತೆ ಕಂಡು ಬಂದರೆ ಆ ಕಂಪನಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸುವಂಥ ನಿರ್ದಾಕ್ಷಿಣ್ಯ ಕ್ರಮಕ್ಕೂ ಮುಂದಾಗುವ ದಾರ್ಷ್ಟ್ಯವನ್ನು ಸರ್ಕಾರಗಳು ಪ್ರದರ್ಶಿಸಬೇಕಾಗಿದೆ. ಜೊತೆಗೆ, ಆಹಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ಬಿಸಿಯೂಟ ಮತ್ತು ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಲು ಮುಂದಾಗಬೇಕಿದೆ. ಆಗ ಮಾತ್ರ ಬಿಸಿಯೂಟದ ಯೋಜನೆಗೆ ಈಗ ಅಂಟಿಕೊಂಡಿರುವ ಕಳಂಕ ದೂರವಾಗಬಹುದೇನೋ...

-ಶ್ವೇತಾ ಶರ್ಮ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.