ಎತ್ತ ಕೊಂಡೊಯ್ಯಲಿದೆ ಈ ಎತ್ತಿನ ಹೊಳೆ ಯೋಜನೆ?
ಎತ್ತಿನಹೊಳೆ ಯೋಜನೆಗಾಗಿ ರಾಜ್ಯ ಸರ್ಕಾರ ಆಯವ್ಯಯದಲ್ಲಿ 1000 ಕೋಟಿ ರು. ನೀಡಿದ್ದು ಅದರಲ್ಲಿ 50 ಕೊಟಿ ರುಪಾಯಿಯನ್ನು ಯೋಜನಾ ವರದಿ ತಯಾರಿಕೆಗಾಗಿ ಮೀಸಲಿಡಲಾಗಿದೆ. ಈ ಯೋಜನೆಯ ಸಾಧಕ, ಬಾಧಕಗಳ ಕುರಿತಂತೆ ಚಿಂತನೆ ನಡೆಸದೇ ಕುಡಿಯುವ ನೀರಿಗಾಗಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನುವ ಉತ್ತರ ಹಾರಿಕೆಯದಾಗುತ್ತದೆ.
ಪಶ್ಚಿಮ ಘಟ್ಟ ಪ್ರದೇಶವನ್ನೇ ಬುಡಮೇಲು ಮಾಡಬಹುದಾದಂತಹ ಈ ಯೋಜನೆಯಿಂದ ಎರಡು ಜಿಲ್ಲೆಗಳ ಬರ ಪರಿಹಾರ ಮಾಡಬಹುದು ಎನ್ನುವುದು ಪರಮಶಿವಯ್ಯ ಸಮಿತಿಯ ವರದಿಯ ಪ್ರಮುಖಾಂಶ. ಪರಮಶಿವಯ್ಯ ಸಮಿತಿಯು ಎತ್ತಿನಹೊಳೆ ಯೋಜನೆಯ ಅಂದಾಜು ವೆಚ್ಚ 8167 ಕೋಟಿ ಎಂದು ವರದಿಯಲ್ಲಿ ಹೇಳಿಕೊಂಡಿದೆ. ಈ ಯೋಜನೆಗೆ 230 ಮೆ.ವ್ಯಾ ವಿದ್ಯುತ್ ಅವಶ್ಯಕತೆಯನ್ನು ಯೋಜನಾ ವರದಿಯಲ್ಲಿ ಹೇಳಲಾಗಿದೆ. ಯೋಜನೆಯ ವರದಿ ಪ್ರಕಾರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಯೋಜನೆ ಪರಿಹಾರ ನೀಡುತ್ತದೆ ಎಂದು ಹೇಳಲಾಗಿದೆ. ಯೋಜನೆಯ ಬಾಧಕಗಳ ಕುರಿತಂತೆ ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ.
ಎತ್ತಿನಹೊಳೆ ನೇತ್ರಾವತಿ ನದಿಯ ಪ್ರಮುಖ ಉಪನದಿಗಳಲ್ಲೊಂದು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಉಗಮಿಸುವ ನದಿ ಮುಂದೆ ಗುಂಡ್ಯ ಮತ್ತು ಕುಮಾರಧಾರಾ ನದಿಯ ಮೂಲಕ ನೇತ್ರಾವತಿಯನ್ನು ಸೇರಿಕೊಳ್ಳುತ್ತದೆ. ಇದರ ಜಲಾನಯನ ಪ್ರದೇಶ 65.80 ಚ.ಕಿ.ಮಿ. ಎತ್ತಿನಹೊಳೆ, ಕೆಂಪುಹೊಳೆ, ಕಾಡುಮನೆ ಹೊಳೆ, ಹೊಂಗಡದ ಹಳ್ಳ ಇವು ಗುಂಡ್ಯ ನದಿಯ ಪ್ರಮುಖ ಉಪ ನದಿಗಳು. ಗುಂಡ್ಯ ನದಿ ಕುಮಾರಧಾರಾ ನದಿಯ ಉಪನದಿ. ಈ ಎಲ್ಲ ನದಿಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಯಾವುದೇ ಒಂದು ನದಿಗೆ ಅಪಾಯ ಎದುರಾದರೂ ಅದರ ಬಿಸಿ ಉಳಿದ ಉಪನದಿಗಳಿಗೂ ತಾಗುತ್ತದೆ. ಅಧ್ಯಯನ ವರದಿಗಳ ಪ್ರಕಾರ ಗುಂಡ್ಯ-ಎತ್ತಿನಹೊಳೆ ಅರಣ್ಯ ಪ್ರದೇಶವು ಒದಗಿಸುತ್ತಿರುವ ಪರಿಸರ ಸೇವೆಯ ಮೌಲ್ಯ ವಾರ್ಷಿಕ 195 ಶತಕೋಟಿ ರುಪಾಯಿಗಳಾಗುತ್ತವೆ. ಅದು ಆಹಾರ ಮತ್ತು ನೀರಿನ ಭದ್ರತೆ ಒದಗಿಸುವ ಜೊತೆಗೆ ಸ್ಥಳೀಯ ಜನಸಮುದಾಯಗಳಿಗೆ ಬದುಕನ್ನು ಕಟ್ಟಿಕೊಡುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹಾದುಹೋಗುವ ಜೀವನದಿಗಳಿಗೆ ಅಲ್ಪಸ್ವಲ್ಪ ಹಾನಿಯಾದರೂ ಅದರ ಮಾರಕ ಪರಿಣಾಮ ಇಡೀ ರಾಜ್ಯದ ಮೇಲೆ ಆಗುತ್ತದೆ ಎನ್ನುವುದು ಸಂಶೋಧಕರ ಮತ್ತು ಪರಿಸರ ತಜ್ಞರ ಅಭಿಪ್ರಾಯ. ಅಂತಹ ಜೀವನದಿಗಳಲ್ಲೊಂದಾದ ಎತ್ತಿನಹೊಳೆ ನದಿಗೆ ಅಣೆಕಟ್ಟೆ ಕಟ್ಟುವ ಮೂಲಕ ನದಿಯನ್ನೇ ತಿರುಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ಮೂರು ಅಣೆಕಟ್ಟೆಗಳನ್ನು ಕಟ್ಟಲಾಗುತ್ತದೆ. ಅವುಗಳಲ್ಲಿ ಎತ್ತಿನಹೊಳೆಗೆ ಕಟ್ಟುವ ಅಡ್ಡಗಟ್ಟೆಯಲ್ಲಿ 50 ದಶಲಕ್ಷ ಘನ ಅಡಿ ಸಂಗ್ರಹ, ಹೊಂಗಡ ಹಳ್ಳ ಅಡ್ಡಗಟ್ಟೆಯಲ್ಲಿ 30 ದಶಲಕ್ಷ ಘನ ಅಡಿ ಸಂಗ್ರಹ ಮತ್ತು ಕಾಡುಮನೆ ಹಳ್ಳಕ್ಕೆ ಕಟ್ಟುವ ಅಡ್ಡಗಟ್ಟೆಯಲ್ಲಿ 10 ದಶಲಕ್ಷ ಘನ ಅಡಿ ನೀರು ಸಂಗ್ರಹವಾಗಲಿದೆ ಎಂದು ಪರಮಶಿವಯ್ಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸಮುದ್ರಮಟ್ಟದಿಂದ 800 ಮೀಟರ್ ಎತ್ತರದಲ್ಲಿ ಕಟ್ಟುವ ಅಣೆಕಟ್ಟೆಯಲ್ಲಿ ಹೊಂಗಡ ಹಳ್ಳ ಮತ್ತು ಕಾಡುಮನೆ ಹಳ್ಳದ ಅಣೆಕಟ್ಟೆಯಿಂದ ಎತ್ತಿನಹೊಳೆ ಅಣೆಕಟ್ಟೆಗೆ ನೀರು ಹರಿಸಿ ಅದನ್ನು ಸುರಂಗ ಮಾರ್ಗದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ರವಾನಿಸಲಾಗುತ್ತದೆ. 2011ರಲ್ಲಿ ಈ ಯೋಜನೆ ಕುರಿತು ಸರ್ಕಾರ 200 ಕೋಟಿ. ರು. ಮೀಸಲಿಡಲಾಗುವುದು ಎಂದು ಪ್ರಕಟಿಸಿತು. ಅದೇ ಯೋಜನೆಗೆ ಈಗ ಸರ್ಕಾರ ಮತ್ತೆ ಚಾಲನೆ ನೀಡುವ ಪ್ರಯತ್ನ ಮಾಡುತ್ತಲಿದೆ. ಹಾಗಾಗಿಯೇ ಆಯವ್ಯಯದಲ್ಲಿ ಇದಕ್ಕಾಗಿ ಹಣ ತೆಗೆದಿರಿಸಲಾಗಿದೆ. ಎತ್ತಿನಹೊಳೆ ಯೋಜನೆಯ ಬಾಧಕಗಳ ಕುರಿತಂತೆ ಚಿಂತಿಸಲೆಬೇಕಾದ ಅನಿವಾರ್ಯತೆ ಎದುರಾಗಿದೆ. ಎತ್ತಿನಹೊಳೆ ಪ್ರದೇಶ ಜೀವ ವೈವಿಧ್ಯತೆಯ ತಾಣ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಸಸ್ಯ ಸಂಕುಲಗಳಲ್ಲಿ ಶೇ.36ರಷ್ಟು, ಉಭಯವಾಸಿಗಳಲ್ಲಿ ಶೇ.87ರಷ್ಟು ಹಾಗೂ ಮೀನುವಾಸಿಗಳಲ್ಲಿ ಶೇ.41ರಷ್ಟು, ಅಪಾಯಕ್ಕೆ ಒಳಗಾಗಿರುವ ನಾಲ್ಕು ಮತ್ತು ಅಪಾಯದಂಚಿನಲ್ಲಿರುವ 14 ಪ್ರಾಣಿ ಸಂಕುಲಗಳು ಈ ಪ್ರದೇಶದಲ್ಲಿವೆ. ಹಾರುವ ಅಳಿಲುಗಳಿದ್ದು ಅವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ರಕ್ಷಿಸಬೇಕಾದ ಪ್ರಾಣಿಯಾಗಿದೆ. ಲ್ಯಾಂಡ್ ಸ್ಟೈಲ್, ನೀಲಗಿರಿ ಮಾರ್ಟನ್, ಮಲಬಾರ್ ವೈಲ್ಡ್ ಹಾರ್ನ್ಬಿಲ್, ಸಿಂಗಳೀಕ ಮತ್ತು ಹುಲಿ, ಆನೆಗಳು ಈ ಪ್ರದೇಶದ ಪ್ರಮುಖ ವನ್ಯಜೀವಿಯಾಗಿದ್ದು 239 ಸಸ್ಯ ಸಂಕುಲಗಳು ಈ ಪ್ರದೇಶದ ಪರಿಸರ ಶ್ರೀಮಂತಿಕೆಯನ್ನು ಸಾರಿ ಹೇಳುತ್ತವೆ.
ಜೀವ ವೈವಿಧ್ಯತೆಯ ತಾಣವಾಗಿ ದಕ್ಷಿಣ ಭಾರತಕ್ಕೆ ಮಳೆ ಕೊಡುವ ಕಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಎತ್ತಿನಹೊಳೆ ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಾಣ, ಬೃಹತ್ ಕಾಲುವೆ ನಿರ್ಮಾಣ, ಸುರಂಗ ನಿರ್ಮಾಣ ಕೈಗೆತ್ತಿಕೊಂಡಿದ್ದೇ ಆದಲ್ಲಿ ಜೈವಿಕ ಅಸಮತೋಲನ ಇನ್ನಷ್ಟು ಉಗ್ರರೂಪ ತಾಳುವುದರಲ್ಲಿ ಸಂಶಯವಿಲ್ಲ. ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಬೃಹತ್ ಯಂತ್ರಗಳು ಮಾಡುವ ಸದ್ದಿಗೆ ವನ್ಯಜೀವಿಗಳು ಚಲ್ಲಾಪಿಲ್ಲಿಯಾಗುತ್ತವೆ. ಕೆಲವೊಂದು ಜೀವಿಗಳು ನಾಶವಾದರೂ ಅಚ್ಚರಿಯಿಲ್ಲ. ಕಾಡು ನಾಶವಾಗುತ್ತದೆ. ಯೋಜನೆಯಿಂದ ಪೂರಕ ಪರಿಣಾಮಕ್ಕಿಂತ ಮಾರಕ ಪರಿಣಾಮವೇ ಅಧಿಕವಾಗುತ್ತದೆ. ಈ ಪ್ರದೇಶದಲ್ಲಿ ಜಲಮೂಲವನ್ನು ರಕ್ಷಿಸಿಕೊಂಡು ನಡೆಸಲಾಗುತ್ತಿರುವ ಕೃಷಿ ಚಟುವಟಿಕೆಗಳಿಗೆ ವ್ಯಾಪಕ ಹಾನಿಯುಂಟಾಗುತ್ತದೆ. ಕಾಫಿ ಹಾಗೂ ಏಲಕ್ಕಿ ತೋಟಗಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಟಿ. ವಿ. ರಾಮಚಂದ್ರ ಅವರು ಗುಂಡ್ಯ ಮತ್ತು ಎತ್ತಿನಹೊಳೆ ಪ್ರದೇಶದ ಅಧ್ಯಯನ ನಡೆಸಿ ಅದರ ಮಾರಕ ಪರಿಣಾಮವನ್ನು ವರದಿಯಲ್ಲಿ ತಿಳಿಸಿದ್ದಾರೆ. ಈ ವರದಿಯ ಆಧಾರದ ಮೇಲೆಯೇ ಕೇಂದ್ರ ಪರಿಸರ ಸಚಿವಾಲಯವು ಗುಂಡ್ಯ ಜಲವಿದ್ಯುತ್ ಯೋಜನೆಗೆ ಅನುಮತಿ ನಿರಾಕರಿಸಿದೆ. ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಪಶ್ಚಿಮ ಘಟ್ಟ ಪರಿಣಿತರ ಸಮಿತಿಯೂ ಸಹ ಈ ಎರಡು ಯೋಜನೆಗಳ ಮಾರಕ ಪರಿಣಾಮವನ್ನು ಎತ್ತಿ ಹೇಳಿದೆ. ಆದರೆ ಆಳುವವರಿಗೆ ಮಾರಕ ಪರಿಣಾಮಗಳು ಗೋಚರಿಸುವುದೇ ಇಲ್ಲ. ಪಶ್ಚಿಮ ಘಟ್ಟದ ಸಮೃದ್ಧ ಕಾಡನ್ನು ನದಿ ಮೂಲ, ಜಲ ಮೂಲಗಳನ್ನು ನಾಶ ಮಾಡಿ 184 ಕಿ.ಮಿ ದೂರದವರೆಗೆ ನೀರನ್ನು ಒಯ್ಯುವುದು ಆರ್ಥಿಕವಾಗಿಯೂ ಹೊರೆಯಾದ ಯೋಜನೆ. ಯೋಜನೆ ಅನುಷ್ಠಾನಗೊಂಡು ಪ್ರಸ್ತಾಪಿತ ಜಿಲ್ಲೆಗಳಲ್ಲಿ ನೀರು ಹರಿದಿದ್ದೇ ಆದರೆ 1 ಲೀಟರ್ ಕುಡಿಯುವ ನೀರಿನ ಬೆಲೆಯನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡಿಲ್ಲ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಮತ್ತು ಸುಸ್ಥಿರ ಬಳಕೆಯ ಅಗತ್ಯವನ್ನು ಮನಗಂಡ ಕೇಂದ್ರ ಸರ್ಕಾರ 2010ರಲ್ಲಿ ಡಾ. ಮಾಧವ ಗಾಡ್ಗೀಳರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಿತು. ಈ ಸಮಿತಿಯು 2011 ಅಗಸ್ಟ್ನಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಸಲಹೆ ಮಾಡಿದೆ. ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿ ಧಾಮಗಳನ್ನು ಹೊರತುಪಡಿಸಿ ಪಶ್ಚಿಮ ಘಟ್ಟದ ಉಳಿದ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಮೂರು ವರ್ಗಗಳಾಗಿ ವಿಂಗಡಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಂರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಸಲಹೆ ಮಾಡಿದೆ. ರಾಜ್ಯ ಸರ್ಕಾರ ಎತ್ತಿನಹೊಳೆಯಂತಹ ನದಿ ತಿರುವು ಯೋಜನೆಗಳನ್ನು ಕೈಗೊಳ್ಳುವ ಪೂರ್ವದಲ್ಲಿ ತಜ್ಞರು ನೀಡಿರುವ ವರದಿಗಳನ್ನು ಪರಾಮರ್ಶಿಸುವ ಜರೂರತ್ತಿದೆ.
ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಎತ್ತಿನಹೊಳೆ ಯೋಜನೆಯ ಕುರಿತು ವಿಧಾನ ಪರಿಷತ್ತಿನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಯೋಜನೆಯ ಬಾಧಕಗಳನ್ನು ಸರ್ಕಾರದ ಗಮನಕ್ಕೆ ತಂದರು. ಯೋಜನೆ ಅನುಷ್ಠಾನಗೊಂಡರೆ ಪರಿಸರದ ಮೇಲಾಗುವ ಮಾರಕ ಪರಿಣಾಮ, ಮೀನುಗಾರಿಕೆಯ ಮೇಲಾಗುವ ದುಷ್ಪರಿಣಾಮಗಳ ಕುರಿತಂತೆಯೂ ವಿವರಿಸಿದರು. ವಿರೋಧಕ್ಕೆ ವಿರೋಧ ಎನ್ನುವಂತೆ ಆಡಳಿತ ಪಕ್ಷದ ಸದಸ್ಯರು ಸದಾನಂದ ಗೌಡರ ಮಾತನ್ನು ವಿರೋಧಿಸಿದರು. ಕುಡಿಯುವ ನೀರಿಗೆ ಅಡ್ಡಿಪಡಿಸಲಾಗುತ್ತದೆ ಎಂದು ರಾಜಕೀಯ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಸದಾನಂದ ಗೌಡರು ವ್ಯಕ್ತಪಡಿಸಿದ ಅಭಿಪ್ರಾಯದ ಹಿಂದಿರುವ ಕಳಕಳಿಯನ್ನು ಆಡಳಿತ ಚುಕ್ಕಾಣಿ ಹಿಡಿದವರು ಮನಗಾಣಬೇಕಾಗಿದೆ.
ಕುಡಿಯುವ ನೀರಿನ ಸಮಸ್ಯೆಗೆ ಹಲವು ಪರಿಹಾರ ಮಾರ್ಗಗಳಿದ್ದರೂ ಬೃಹತ್ ಯೋಜನೆಯತ್ತಲೇ ಸರ್ಕಾರದ ಮತ್ತು ಅಧಿಕಾರಿಗಳ ಕಣ್ಣು ನೆಟ್ಟಿರುತ್ತದೆ. ಮಳೆ ಕೊಯ್ಲು ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಓಡುವ ನೀರನ್ನು ಇಂಗಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕಾಗಿದೆ. ಅರಣ್ಯೀಕರಣಕ್ಕಾಗಿ ಯೋಜನೆ ರೂಪಿಸಿದ್ದೇ ಆದಲ್ಲಿ ಬರಗಾಲವನ್ನು ದೂರ ಮಾಡಬಹುದಾಗಿದೆ. ನಗರ ಪ್ರದೇಶದಲ್ಲಿ ಮನೆ ಕಟ್ಟುವವರು ಮಳೆ ಕೊಯ್ಲಿಗಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಪ್ರತಿ ಮನೆಗಳಲ್ಲೂ ಮಳೆಕೊಯ್ಲು ನಡೆದಾಗ ಒಂದೆರಡು ವರ್ಷಗಳಲ್ಲೇ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ. ಬರಗಾಲ ಪೀಡಿತ ಕೃಷಿ ಜಮೀನುಗಳಲ್ಲಿ ಮಳೆ ನೀರು ಹರಿದುಹೋಗದಂತೆ ಚಿಕ್ಕ ಚಿಕ್ಕ ತೋಡುಗಳನ್ನು ವ್ಯಾಪಕವಾಗಿ ನಿರ್ಮಿಸಬಹುದು. ಈ ಎಲ್ಲ ಕ್ರಮಗಳನ್ನು ಅನುಸರಿಸಿದಾಗ ಬರಗಾಲವನ್ನು ಹೊಡೆದೋಡಿಸಬಹುದಾಗಿದೆ. ಈ ಎಲ್ಲ ಕ್ರಮಗಳಿಗೆ ಭಾರಿ ಪ್ರಮಾಣದ ಹಣ ಹೂಡಿಕೆಯ ಅವಶ್ಯಕತೆಯಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕಾನೂನನ್ನು ಜಾರಿಗೊಳಿಸಬೇಕಾಗಿದೆ. ಮಳೆಕೊಯ್ಲು, ಇಂಗು ಗುಂಡಿ ಪ್ರಕ್ರಿಯೆಗಳಿಗಾಗಿ ಸೀಮಿತ ಮೊತ್ತದ ಸಹಾಯಧನ ನೀಡಿದಲ್ಲಿ ಬೃಹತ್ ಯೋಜನೆಗಳ ಅವಲಂಬನೆಯೂ ತಪ್ಪುತ್ತದೆ. ಪ್ರಕೃತಿ ವಿನಾಶದ ಗೊಡವೆಯೂ ಇರುವುದಿಲ್ಲ. ಆಳರಸರು ಈ ಕುರಿತಂತೆ ದಿಟ್ಟ ನಿಲುವು ಪ್ರದರ್ಶಿಸಬೇಕಾಗಿದೆ.
ವಿಶ್ವಾಮಿತ್ರ ಹೆಗಡೆ
vishwottama@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

