ಒಂದೊಂದು ಸಾರಿ ಸಮಯ, ಸಂದರ್ಭ ಏನೇನೋ ಯೋಚನೆಗಳನ್ನು ತಂದು, ತುರುಕಿ ಮನಸ್ಸನ್ನು ಕಲ್ಲವಿಲ್ಲ ಮಾಡಿಬಿಡುತ್ತದೆ. ಆದರೆ ಹಾಗೆಲ್ಲ ಬಂದ ಯೋಚನೆಗಳು ಸಾಕಾರ ಆಗಿಬಿಡುತ್ತವೆ ಎಂದೇನೂ ಅಲ್ಲ. ಖಾಲಿ ಮನಸು ಹುಚ್ಚು ಕುದುರೆ ಆಗುವ ಪರಿ ಅದು.
ಬಿಜೆಪಿ ಹೊಸ್ತಿಲಲ್ಲಿ ನಿಂತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಮೈತ್ರಿ ಕೂಟ ರಚನೆಗೆ ಮುಂದಾಗಿದ್ದಾರೆ ಎಂಬುದು ಕೂಡ ಇಂಥದ್ದೇ ದಿಕ್ಕುಗಾಣದ ಕುದುರೆ ಪೇರಿಕಿತ್ತ ಪರಿ ಇದು.
ಹೌದು, ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿರುವ ಜಾತ್ಯತೀತ ಜನತಾ ದಳ, ಬಿಜೆಪಿ, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಹಾಗೂ ಪಕ್ಷೇತರರನ್ನು ಒಂದೇ ವೇದಿಕೆಯಡಿ ತಂದು, ಅದಕ್ಕೆ ವಿರೋಧಿಗಳ ಮೈತ್ರಿಕೂಟ ಎಂಬ ನಾಮಕರಣ ಮಾಡುವುದು ಯಡಿಯೂರಪ್ಪನವರ ಕಲ್ಪನೆಯ ಸಾರ. ಇದರ ಉದ್ದೇಶ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ಆಡಳಿತರೂಢ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವುದು, ಮಣ್ಣು ಮುಕ್ಕಿಸುವುದು.
ರಾಜಕೀಯದಲ್ಲಿ ಏನು ಬೇಕಾದರೂ ಅಗಬಹುದು, ಯಾರು ಯಾರಿಗೆ ಬೇಕಾದರೂ ಬೆನ್ನಿಗೆ ಚೂರಿ ಹಾಕಬಹುದು, ಅದೇ ರೀತಿ ಚೂರಿ ಹಾಕಿದವರು ಮತ್ತು ಹಾಕಿಸಿಕೊಂಡವರು ಏನೂ ಆಗಿಯೇ ಇಲ್ಲವೆಂಬಂತೆ ಆಲಂಗಿಸಿಕೊಳ್ಳಬಹುದು ಎನ್ನುವುದೇನೋ ಸರಿ. ಆದರೆ ಅವರವರ ಪಕ್ಷದಲ್ಲೇ ಹಾಸಿ, ಹೊದ್ದುಕೊಂಡು, ಮಲಗುವಷ್ಟು ಸಮಸ್ಯೆಗಳು ಕುಣಿಯುತ್ತಿರುವಾಗ ಅನ್ಯಪಕ್ಷಗಳ ನಡುವೆ ಹೊಂದಾಣಿಕೆ ಎಂಬುದು ಆಕಾಶ-ಭುವಿಯ ನಡುವೆ ಬೆಸುಗೆ ನಿರೀಕ್ಷಿಸಿದಂತೆ ಅಲ್ಲವೇ..?
ಎತ್ತು ಏರಿಗೆಳೆದರೆ ಕೋಣ ನೀರಿಗಿಳಿದಂತೆ, ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ, ಶೆಟ್ಟಿ ಪಟ್ಟಕ್ಕೆ ಬರುವಷ್ಟರಲ್ಲಿ ಪಟ್ಟಣ ಹಾಳಾಗಿತ್ತು - ಇವೇ ಮೊದಲಾದ ಮಾದರಿಯ ಹತ್ತು ಹಲವಾರು ಗಾದೆಗಳ ಸಮ್ಮಿಲನ ಪ್ರಸ್ತುತ ಚಾಲ್ತಿಗೆ ಬಂದಿರುವ ವಿರೋಧಿಗಳ ಮೈತ್ರಿಕೂಟ ಎಂಬ ಕಲ್ಪನೆ. ಇವೆರೆಲ್ಲ ಇವತ್ತು ವಿರೋಧಿಗಳ ಸಾಲಿನಲ್ಲಿ ಕೂತಿರುವುದೇ ಹಿಂದೆ ಒಬ್ಬರಿಗೊಬ್ಬರು ವಿಷ ಲೇಪಿತ ಚೂರಿ ಹಾಕಿದ ಪರಿಣಾಮವಾಗಿ, ಅದರ ಫಲವಾಗಿ. ಕುಮಾರಸ್ವಾಮಿ ಕೈ ಎತ್ತಿದರು ಅಂತ ಯಡಿಯೂರಪ್ಪ ಅಧಿಕಾರಕ್ಕೆ ಬಂದರು, ಯಡಿಯೂರಪ್ಪ ಎರಡೆದರು ಕೈಚಾಚಿ ಬಾಚಿದರು ಅಂತ ಸದಾನಂದಗೌಡರು ಪಟ್ಟಕ್ಕೆ ಬಂದರು. ಸದಾನಂದಗೌಡ ಅವರನ್ನು ಪಟ್ಟಕ್ಕೇರಿಸಿದ್ದು ಯಡಿಯೂರಪ್ಪ ಅವರೇ ಆದರೂ ಮುಂದೆ ಅದು ಅವರಿಗೇ ಅಪಥ್ಯವಾಯಿತು. ಹೀಗಾಗಿ ಹಿಂದೆ ತಾವು ವಿರೋಧಿಸಿದ್ದ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರಕ್ಕೆ ತಂದರು. ಆದರೆ, ನಂತರವೂ ಜಗದೀಶ ಶೆಟ್ಟರ್ ಹಾಗೂ ಹೈಕಮಾಂಡ್ ಕೈ ಎತ್ತಿದರು ಅಂತ ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಮಾಡಿಕೊಂಡರು, ಇನ್ನೊಂದೆಡೆ ಬಿಜೆಪಿಯವರು ತಮ್ಮನ್ನು ಬಳಸಿಕೊಂಡು ಬಿಸಾಡಿದರು ಅಂತ ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಕಟ್ಟಿಕೊಂಡರು - ಈಗ ಇವರೆಲ್ಲ ಸೇರಿ ಮೈತ್ರಿಕೂಟ ರಚಿಸಿಕೊಳ್ಳುತ್ತಾರೆ ಎಂದರೆ ಕಳ್ಳಿಗಿಡದ ಹಾಲಿನ ಜತೆ ಪರಂಗಿ ಹಾಲು ಬೆರೆಸಿಕೊಂಡು ಕುಡಿದಷ್ಟೇ 'ಪಸಂದು.'
ಇರಲಿ, ಯಡಿಯೂರಪ್ಪನವರ ಭಾವನೆ ಕಲ್ಪನೆಗಷ್ಟೇ ಚೆಂದ. ಏಕೆಂದರೆ ಇದು ಆಗಿ-ಹೋಗುವ ಮಾತಲ್ಲ. ಬಿಜೆಪಿಗೆ ಇನ್ನೇನು ಸೇರಿಯೇಬಿಟ್ಟರು ಎನ್ನುವ ಹಂತದಲ್ಲಿರುವ ಯಡಿಯೂರಪ್ಪನವರು ಒತ್ತಡ ತಂತ್ರವಾಗಿ ಈ ಅಸ್ತ್ರಪ್ರಯೋಗ ಮಾಡಿದ್ದಾರೆ. ಅವರಿಗೂ ಚೆನ್ನಾಗಿ ಗೊತ್ತು ವಿರೋಧಪಕ್ಷಗಳ ಮೈತ್ರಿಕೂಡ ಎಂಬುದು ಬಂಡೆ ಮೇಲೆ ಬೀಜ ಬಿತ್ತಿದಂತೆ ಎಂದು. ಅದು ಬೆಳೆಯುವುದಿರಲಿ, ಮೊದಲಿಗೆ ಬೀಜ ಮೊಳೆಯುವುದೇ ಇಲ್ಲ. ಉತ್ತರ ಮತ್ತು ದಕ್ಷಿಣ ದ್ರುವಗಳನ್ನು ಒಂದು ಮಾಡಲು ಸಾಧ್ಯವೇ..?!
ನಿಜ, ಇದಕ್ಕೆ ಇಂಬುಗೊಟ್ಟಂತೆ ಜೆಡಿಎಸ್ ಪಾಳೆಯದಲ್ಲೇ ಇದಕ್ಕೆ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ಮುಖಂಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಇಂಥದ್ದೆಲ್ಲ ನಡೆಯಲು ಸಾಧ್ಯವಿಲ್ಲ, ಬಿಜೆಪಿ ಜತೆಗಿರುವ ಪಕ್ಷಗಳೊಡನೆ ಮೈತ್ರಿಗೆ ದೇವೇಗೌಡರು ಒಪ್ಪುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲಿಗೆ ವಿರೋಧಿಗಳ ಮೈತ್ರಿಕೂಟ ಎಂಬುದು ಮತ್ತದೇ ಬಿಜೆಪಿ, ಕೆಜೆಪಿ ಹಾಗೂ ಬಿಎಸ್ಆರ್ಗೆ ಸೀಮಿತ ಎಂದಂತಾಯಿತು. ಅಂದರೆ ಕರ್ನಾಟಕದಲ್ಲಿ ವಿಭಜನೆ ಪೂರ್ವ ಬಿಜೆಪಿಯ ಮೂಲ ಸ್ವರೂಪದ ಮರು ಸಾಕ್ಷಾತ್ಕಾರಕ್ಕೆ ಸೀಮಿತ. ಪಕ್ಷೇತರರಿಗೆ ಹೇಗಿದ್ದರೂ ಆಯಿತು. ಆಟ ಮತ್ತು ಲೆಕ್ಕ ಎರಡೂ ಒಂದೇ ಅವರಿಗೆ.
ಯಡಿಯೂರಪ್ಪ ಅವರ ಮನಸ್ಸಿನಲ್ಲೂ ಇದಕ್ಕಿಂತ ಹೆಚ್ಚೇನೂ ನಿರೀಕ್ಷೆಯಿಲ್ಲ. ಏಕೆಂದರೆ, ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಮಾಡಿದ ವಿಶ್ವಾಸದ್ರೋಹದಿಂದ ತಮ್ಮ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅಧಿಕಾರದಲ್ಲಿದ್ದಷ್ಟೂ ದಿನ ಜೆಡಿಎಸ್ ತಮ್ಮನ್ನು ಬಿಡದೇ ಕಾಡಿದ್ದು, ಮುಂಚೂಣಿಯಲ್ಲಿ ನಿಂತು ಹಗರಣಗಳನ್ನು ಬೆಳಕಿಗೆ ತಂದಿದ್ದು... ಹೀಗೆ ಆ ಪಕ್ಷ ಮತ್ತು ತಮ್ಮ ಮಧ್ಯೆ ಇರುವ ರಾಜಕೀಯ ವೈರತ್ವವನ್ನು ಮರೆಯುವಷ್ಟು ಮತ್ತು ಮರೆತು ಒಟ್ಟಾಗುತ್ತೇವೆ ಎಂದು ನಿರ್ಧರಿಸುಷ್ಟು ಎಳಸು ರಾಜಕಾರಣಿ ಯಡಿಯೂರಪ್ಪ ಅವರಲ್ಲ. ಹೀಗಾಗಿ ಇಂಥ ಪ್ರಯೋಗಗಳಿಂದ ಮಹತ್ತರವಾದುದನ್ನು ಅವರೇನೂ ನಿರೀಕ್ಷಿಸುವುದಿಲ್ಲ. ಅದರಿಂದ ಅವರಿಗೆ ಆಗಬೇಕಾದ್ದೂ ಏನೂ ಇಲ್ಲ. ಆದರೂ ವಿರೋಧಪಕ್ಷಗಳ ಮೈತ್ರಿಕೂಟದ ಹೆಸರಿನಲ್ಲಿ ಒಡೆದು ಮೂರು ಹೋಳಾಗಿರುವ ತುಂಡುಗಳನ್ನು ತಮ್ಮ ನೇತೃತ್ವದಲ್ಲಿ ಮತ್ತೆ ಒಂದು ಗೂಡಿಸುವುದು ಯಡಿಯೂರಪ್ಪ ಅವರ ಈ ಮೈತ್ರಿಕೂಟ ರಾಜಕೀಯದ ಒಂದು ಭಾಗ.
ಆದರೂ ಒಂದು ಕಲ್ಲು ಎಸೆಯೋಣ, ಈ ಕಲ್ಲಿಗೆ ಹಣ್ಣು ಬೀಳದೇ ಇದ್ದರೆ ನಷ್ಟವೇನೂ ಇಲ್ಲ. ಎಸೆದ ಕಲ್ಲಿಗೆ ನಿರೀಕ್ಷಿಸಿದ ಹಣ್ಣು ಬೀಳಲಿಲ್ಲ, ಬೇರೆ ಹಣ್ಣುಗಳು ಬಿದ್ದವು ಎಂದು ಹೇಳಿಕೊಂಡು ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಒಂದು ಕಾರಣ ಸಿಗುತ್ತದೆ. ಈ ಎಲ್ಲವನ್ನೂ ಯೋಚಿಸಿಯೇ ಯಡಿಯೂರಪ್ಪನವರು ವಿರೋಧಪಕ್ಷಗಳ ಮೈತ್ರಿಕೂಟದ ಬಗ್ಗೆ ಹೇಳಿದ್ದಾರೆ ಎಂಬುದೇ ರಾಜಕೀಯ ಸತ್ಯ.
ಇರಲಿ, ಈ ಎಲ್ಲವನ್ನೂ ಪಕ್ಕಕ್ಕಿಟ್ಟು ಒಂದೊಮ್ಮೆ ವಿರೋಧಿಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದರೆ ಏನಾಗಬಹುದು ಎಂಬುದನ್ನೂ ನೋಡೋಣ. ಅದೂ ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು. ಎಲ್ಲರೂ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸನ್ನು ಮಣಿಸಿಯೇಬಿಟ್ಟರು, ಕಾಂಗ್ರೆಸ್ಗಿಂಥ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡರು ಎಂದಿಟ್ಟುಕೊಳ್ಳೋಣ. ಇದರಿಂದ ಕರ್ನಾಟಕದಲ್ಲೇನೂ ಸರಕಾರ ಬದಲಾಗಿ ಈ ವಿರೋಧಿಗಳ ಗುಂಪು ಅಧಿಕಾರ ಹಿಡಿಯಲು ಆಗುತ್ತದೆಯೇ? ಗರಿಷ್ಠ ಎಂದರೆ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾಗಬಹುದೇ ಹೊರತು ಈ ವಿರೋಧಿಗಳ ಗುಂಪೇನು ವಿಧಾನಸೌಧದ ಮೂರನೇ ಮಹಡಿ ಏರಲು ಸಾಧ್ಯವೇ? ಬಿಲ್ಕುಲ್ ಇಲ್ಲ. ಯಾರು, ಎಷ್ಟೇ ತಿಪ್ಪರಲಾಗ ಹಾಕಿದರೂ ಕರ್ನಾಟಕದಲ್ಲಿ ಮುಂದಿನ ಐದು ವರ್ಷ ಕಾಂಗ್ರೆಸ್ ಸರಕಾರ ಸುಭದ್ರ. ಆಂತರಿಕ ಸಂಘರ್ಷಗಳು, ಏರುಪೇರು ಉಂಟಾಗಬಹುದು. ಆದು ಯಾವುದೇ ಪಕ್ಷದ ಸರಕಾರ ಇದ್ದಾಗಲೂ ಇರುವಂಥದ್ದೇ. ಹಾಗೆಂದ ಮಾತ್ರಕ್ಕೆ ಪವಾಡ ಆಗಿಬಿಡುತ್ತದೇ ಎಂದೇನೂ ಅರ್ಥವಲ್ಲ. ಪವಾಡ ಆಗಲು ಬೇಕಾದ ಬಲವೂ ವಿರೋಧ ಪಕ್ಷಗಳಲ್ಲಿ ಇಲ್ಲ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಎಡವಟ್ಟಾಗಬಹುದು. ಕಾಂಗ್ರೆಸ್ ಬೋರಲು ಬೀಳಹುದು. ಆಗ ಕರ್ನಾಟಕದ ನಕಾರಾತ್ಮಕ ಫಲಿತಾಂಶ (ಅದೂ ಆಗಿದ್ದರೆ ಮಾತ್ರ) ಇಟ್ಟುಕೊಂಡು ಏನು ತಾನೇ ಮಾಡಲು ಸಾಧ್ಯ? ಸಾಮ್ರಾಟನೇ ದುರ್ಬಲನಾದಾಗ ಪಾಳೇಗಾರರನ್ನು ಹಿಡಿಯಲು, ಕಟ್ಟಿಹಾಕಲು ಸಾಧ್ಯವಿಲ್ಲ. ರಾಜ ಶಕ್ತನಾಗಿದ್ದರೆ ಮಾತ್ರ ಪಾಳೇಗಾರರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ನಿಭಾಯಿಸಲು ಆಗುತ್ತದೆಯೇ ಹೊರತು ತಾನೇ ಮಗುಚಿ ಬಿದ್ದಿದ್ದಾಗ ಅಲ್ಲ. ಅವನು ದುರ್ಬಲನಾದಾಗ ಪಾಳೆಗಾರರೇ ಚಕ್ರವರ್ತಿಗಳಾಗುತ್ತಾರೆ. ಅಂದರೆ, ಹನುಮಂತನೇ ಹಗ್ಗ ಕಡಿಯುವಾಗ ಪೂಜಾರಿಗೆಲ್ಲಿಂದ ತಂದುಕೊಡಬೇಕು ಶಾವಿಗೆ? ಹೈಕಮಾಂಡೇ ವೀಕ್ ಆದಾಗ ಕರ್ನಾಟಕದಲ್ಲೇನು ಮಾಡಲು ಸಾಧ್ಯ? ಎಲ್ಲಕ್ಕಿಂಥ ಮಿಗಿಲಾಗಿ ಸಿದ್ದರಾಮಯ್ಯನವರ ಮೈಯಲ್ಲಿ ಹರಿಯುತ್ತಿರುವುದು ಬಂಡಾಯದ ರಕ್ತಗುಣ. ಅಧಿಕಾರ ಕಿತ್ತುಕೊಂಡು ಹೋಗುವಾಗ ಏನು ಬೇಕಾದರೂ ಮಾಡಬಲ್ಲರು. ತಮಗಿಲ್ಲದ್ದು ಬೇರೆಯವರಿಗೆ ಏಕೆ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬಹುದು. ಆ ಪ್ರಶ್ನೆಗೆ ಸಿಗುವ ಉತ್ತರ ಪಕ್ಷವನ್ನೇ ಅಧಿಕಾರದಿಂದ ದೂರ ಇಡಬಹುದು. ಇದರಿಂದ ಕಾಂಗ್ರೆಸ್ಗೆ ನಷ್ಟವೇ ಹೊರತು ಲಾಭವಲ್ಲ.
ಅದೂ ಪಕ್ಕಕ್ಕೆ ಇರಲಿ. ವಿರೋಧಿಗಳೆಲ್ಲ ಸೇರಿಕೊಂಡರೂ ಒಟ್ಟಾರೆ ಅಂಕೆ-ಸಂಖೆ ಅವುಗಳನ್ನು ವಿರೋಧ ಪಕ್ಷದ ಸಾಲಿನಲ್ಲಿ ಕೂರಿಸುತ್ತದೆಯೇ ಹೊರತು ಬೇರೆಲ್ಲೂ ಇಲ್ಲ. ಈಗ ಅವು ಇರುವುದೂ ಅದೇ ಸಾಲಿನಲ್ಲೇ. ಒಟ್ಟಾದ ಮಾತ್ರಕ್ಕೆ ಸರಕಾರ ಮಾಡಲು ಸಾಧ್ಯವಿಲ್ಲ. ಗದ್ದುಗೆ ಸಮೀಪ ಸುಳಿಯಲೂ ಆಗುವುದಿಲ್ಲ. ಭಿನ್ನಮತ, ಬಂಡಾಯ ಅಂತ ಪಕ್ಷ ಒಡೆದರೂ, ಹಾಗೆ ಒಡೆದು ಬಂದ ಗುಂಪು ಕೂಡ ಅಧಿಕಾರ ಮಾಡಲು ಸಾಧ್ಯವಿಲ್ಲ. ಸುಖಾಸುಮ್ಮನೆ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವಿರೋಧಿಗಳ ಮೈತ್ರಿಕೂಟ ಏನನ್ನೋ ಸಾಧಿಸಿಬಿಡುತ್ತದೆ ಎಂಬುದು ಕೇವಲ ಭ್ರಮೆ. ಅವುಗಳ ಶ್ರಮ ಸ್ಟಾಂಡ್ ಹಾಕಿಕೊಂಡು ಸೈಕಲ್ ತುಳಿದಂತೆ. ಎಷ್ಟು ತುಳಿದರೂ, ಚಕ್ರ ಎಷ್ಟೇ ತಿರುಗಿದರೂ ಸೈಕಲ್ ಮಾತ್ರ ಮುಂದಕ್ಕೆ ಹೋಗದು.
ಇದೆಲ್ಲವೂ ಹಾಗಾದರೇ, ಹೀಗಾದರೆ ಎಂಬ 'ರೇ' ರಾಜ್ಯದ ಕಲ್ಪನೆ. ಯಡಿಯೂರಪ್ಪನವರಿಗೆ ಬಿಜೆಪಿ ಬಾಗಿಲು ತೆರೆಯುತ್ತಿದೆ. ಈಗಾಗಲೇ ರಾಜ್ಯ ಮತ್ತು ದಿಲ್ಲಿ ಏರಡೂ ಕಡೆ ಒಂದು ಹಂತಕ್ಕೆ ವಿಚಾರ ವಿನಿಮಯ, ಸಾಧಕ-ಬಾಧಕಗಳ ವಿಶ್ಲೇಷಣೆ ಆಗಿದೆ. ಯಡಿಯೂರಪ್ಪ ಮತ್ತು ಬಿಜೆಪಿ ಪರಸ್ಪರ ಅನಿವಾರ್ಯ ಎಂಬ ಸ್ಥಿತಿ ಎರಡೂ ಕಡೆಯೂ ಮನವರಿಗೆ ಆಗಿ ಪ್ರಕ್ರಿಯೆ ಬಾಕಿ ಉಳಿದಿದೆ. ಆದರೆ ಏಕಾಏಕಿ, ಯಾವುದೇ ಎಗ್ಗುಸಿಗ್ಗಿಲ್ಲದೇ ಈ ಪ್ರಕ್ರಿಯೆ ಮುಗಿದು ಹೋಯಿತು ಎಂದೆನಿಸಿಕೊಳ್ಳಲು ಅತ್ತ ಬಿಜೆಪಿಗೂ ಇಚ್ಚೆ ಇಲ್ಲ, ಇತ್ತ ಯಡಿಯೂರಪ್ಪನವರಿಗೂ ಇಲ್ಲ. ಹೀಗಾಗಿ ಸಮಯ, ಸಂದರ್ಭ, ರೀತಿ-ರಿವಾಜುಗಳ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.
ಎಲ್ಲವೂ ಸುಸೂತ್ರವಾಗಿ ಆಗುತ್ತದೆ ಎಂದೆನಿಸಿದ್ದರೂ ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ಕೆಲವರ ಬಗ್ಗೆ ಅಪನಂಬಿಕೆ ಇದ್ದೇ ಇದೆ. ಮೇಲೆ ನಕ್ಕರೂ ಮರೆಯಲ್ಲಿ ಸಿಡುಕುವ ಜನ ಇದ್ದೇ ಇರುತ್ತಾರೆ. ಅಂಥ ಜನರಿಂದ ಏನಾದರೂ ತೊಂದರೆ ಎದುರಾದರೆ ಇರಲಿ ಎಂಬ ಕಾರಣಕ್ಕೆ ಯಡಿಯೂರಪ್ಪನವರು ಈ ವಿರೋಧಿಗಳ ಮೈತ್ರಿಕೂಟ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಒಂದೊಮ್ಮೆ ಏನಾದರೂ ಹೆಚ್ಚು-ಕಮ್ಮಿ ಆದರೆ ಜೀವರಕ್ಷಕ ಜಲವಾಗಿ ಇರಲಿ ಎಂಬ ಮುನ್ನೆಚ್ಚರಿಕೆ ಅವರದು. ದಿಲ್ಲಿ ರಾಜಕೀಯದಲ್ಲಿ ತೃತೀಯ ರಂಗ ಮತ್ತೆ ಚರ್ಚೆಯಲ್ಲಿದೆ,ಚಾಲನೆ ಪಡೆದುಕೊಳ್ಳುತ್ತಿದೆ. ಇಂಥ ಸನ್ನಿವೇಶದಲ್ಲಿ ಅಂಥದ್ದೇ ಪ್ರಯೋಗವನ್ನು ರಾಜ್ಯ ರಾಜಕೀಯದಲ್ಲಿ ಮಾಡಬಾರದು ಏಕೆ? ಇಂಥ ಪ್ರಯೋಗದಿಂದ ಪಕ್ಷದ ಅಸ್ತಿತ್ವವನ್ನೂ ಉಳಿಸಿಕೊಂಡು, ಒಂದಷ್ಟು ರಾಜಕೀಯ ಮಾಡಬಹುದೇ ಎಂಬ ಅಂತರಂಗದ ಮಂಥನ ಯಡಿಯೂರಪ್ಪನವರದು. ಆದರೆ ಇದು ಮಂಥನಕ್ಕಷ್ಟೇ ಸೀಮಿತ. ಅದಕ್ಕಿಂತ ಮಿಗಿಲಾದದ್ದನ್ನು ಏನೂ ಮಾಡಲು ಸಾಧ್ಯವಿಲ್ಲ.
ಲಗೋರಿ: ಅಂದುಕೊಂಡಿದ್ದೆಲ್ಲಾ ಆಗುವುದಿಲ್ಲ, ಆಗಿದ್ದೆಲ್ಲವನ್ನೂ ಅಂದುಕೊಂಡಿರುವುದಿಲ್ಲ.
-ಪಿ. ತ್ಯಾಗರಾಜ್
thyagarjun@gmail.com