ಅಂಕಣಗಳು

ಈ ಕಾರ್ಗಿಲ್ ವಿಜಯ ದಿವಸದಂದು ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿ

ಈ ಕಾರ್ಗಿಲ್ ವಿಜಯ ದಿವಸದಂದು ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿ
Published On :

ಜುಲೈ 26 ರಂದು ನಾವು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಿದ್ದೇವೆ. ಆ ದಿನ ನಮ್ಮ ದೇಶ ಕಾಯುತ್ತಿರುವ ಸಶಸ್ತ್ರಪಡೆಗಳ ವೀರಯೋಧರನ್ನು ದೇಶವಾಸಿಗಳೆಲ್ಲರೂ ನೆನೆಯುವ ದಿನ. 1999ರ ಆ ದಿನದಂದೇ ಶತ್ರುಗಳನ್ನು ನಮ್ಮ ನೆಲದಿಂದ ಓಡಿಸುವ ನಮ್ಮ ಸೈನಿಕರ ಖಚಿತ, ದಿಟ್ಟ ಪ್ರಯತ್ನಗಳು ಸಾಕಾರಗೊಂಡವು. ಆ ಪ್ರಯತ್ನದಲ್ಲಿ ಘಾಸಿಗೊಂಡ, ಪ್ರಾಣ ತ್ಯಾಗಮಾಡಿದ ವೀರಯೋಧರನ್ನು ಮತ್ತು ಅಂತಹ ಹುತಾತ್ಮರ ಕುಟುಂಬಗಳನ್ನು ಹೆಮ್ಮೆಯಿಂದ ಮತ್ತು ಕೃತಕೃತ್ಯತೆಯಿಂದ ನಾವೆಲ್ಲರೂ ವಿಶೇಷವಾಗಿ ನೆನೆಯಬೇಕು.
ಉತ್ತರಾಖಂಡ ಮತ್ತು ಆಸ್ಸಾಂನ ಭೀಕರ ವಿನಾಶಕಾರಿ ಪ್ರವಾಹ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಈ ವರ್ಷದ ಕಾರ್ಗಿಲ್ ವಿಜಯ್ ದಿವಸಕ್ಕೆ ವಿಶೇಷ ಮಹತ್ವವಿದೆ. ನಮ್ಮ ದೇಶ ಮತ್ತು ಜನರಿಗೆ ವಿಪತ್ತುಗಳೆದುರಾದಾಗ, ಪ್ರತಿಬಾರಿಯಂತೆ ಈ ಬಾರಿಯೂ ಕೂಡ ನಮ್ಮ ಸಶಸ್ತ್ರಪಡೆಯ ಯೋಧರು, ಅತ್ಯಂತ ಕ್ಲಿಷ್ಟಕರ ಸವಾಲುಗಳನ್ನೆದುರಿಸಿ, ಪರಿಸ್ಥಿತಿಗಳನ್ನು ಮೆಟ್ಟಿನಿಂತು, ತಮ್ಮ ಪ್ರಾಣದ ಹಂಗನ್ನು ತೊರೆದು ದೇಶವಾಸಿಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡದ್ದನ್ನು ನಾವು ಕಂಡಿದ್ದೇವೆ. ನೂರಾರು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಪ್ರತಿಕೂಲ ವಾತಾವರಣದ ನಡುವೆಯೂ ವಿಶ್ರಮಿಸದೆ ಕಾರ್ಯನಿರ್ವಹಿಸುವಾಗ ಒಂದು ಎಮ್.ಐ 17 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ವಿಂಗ್ ಕಮಾಂಡರ್ ಡೇರಿಲ್ ಕ್ಯಾಸ್ಟಲಿನೊ ಮತ್ತು ಜೊತೆಗಿದ್ದ 20 ಜನ ಯೋಧರು ಪ್ರಾಣತೆತ್ತ ದುರ್ಘಟನೆಯೂ ನಮ್ಮ ಕಣ್ಣೆದುರಿಗಿದೆ.
ಎದುರಾದ ಪ್ರಾಕೃತಿಕ ವಿಪತ್ತನ್ನೆದುರಿಸಲು ಭಾರತೀಯ ವಾಯುಸೇನೆಯ (ಐ.ಎ.ಎಫ್)ಸಿ 130 ಜೆ, ಎಮ್.ಐ 17 ವಿ, ಎ.ಎಲ್.ಹೆಚ್ ಮತ್ತು ಇನ್ನು ಅನೇಕ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ದೊಡ್ಡ ಪಡೆ ಎಡಬಿಡದೆ ಕಾರ್ಯನಿರ್ವಹಿಸಿದವು. ಭಾರತೀಯ ವಾಯುಪಡೆಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವೈಮಾನಿಕ ಕಾರ್ಯಾಚರಣೆ ಇದಾಗಿತ್ತು. ಉತ್ತರಾಖಂಡ ಒಂದರಲ್ಲೆ ಸುಮಾರು 19000 ಜನರನ್ನು ಐ.ಎ.ಎಫ್ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. 2,200ಕ್ಕೂ ಅಧಿಕ ಹಾರಾಟಗಳನ್ನು ನಡೆಸಿ ಸುಮಾರು 340 ಟನ್ ಪರಿಹಾರ ಪರಿಕರಗಳು ಮತ್ತು ಇತರೆ ಸಾಮಗ್ರಿಗಳನ್ನು ಸಾಗಿಸಿತು. ನಮ್ಮ ಸೇನಾಪಡೆಗಳು ತಮ್ಮ ಹೆಗ್ಗುರುತಾದ ಶಿಸ್ತಿನಿಂದಲೇ ಇಂತಹ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಿದವು. ಸಮಸ್ತ ಭಾರತೀಯರಲ್ಲಿ ನಮ್ಮ ಸೇನೆಯ ಮೇಲಿನ ಹೆಮ್ಮೆಯನ್ನು ಇದು ಇಮ್ಮಡಿಗೊಳಿಸಿದೆಯೆಂದರೆ ತಪ್ಪಾಗಲಾರದು.
"ಎಲ್ಲಿಯವರೆಗೆ ಪ್ರವಾಹದಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನು ನಾವು ರಕ್ಷಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೆಲಿಕಾಪ್ಟರ್‌ಗಳ ರೋಟರ್‌ಗಳು ಚಲಿಸುತ್ತಲೇ ಇರುತ್ತವೆ" ಎಂಬ ವಾಯುಸೇನೆಯ ಮುಖ್ಯಸ್ಥ ಬ್ರೌನಿ ಅವರ ಮಾತು ನಮ್ಮ ಭಾರತೀಯ ಸೇನೆಯ ಸಿದ್ಧಾಂತವನ್ನು ಮತ್ತು ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ದೊಡ್ಡ ದುರಂತ ಸಂಭವಿಸಿದರೂ ಕೂಡ ವಾಯುಸೇನೆ ತನ್ನ ಕಾರ್ಯಾಚರಣೆಯನ್ನು ಬಿಡದೆ ಮುಂದುವರೆಸಿ ತನ್ನ ನಿಷ್ಠೆ ಮತ್ತು ವೃತ್ತಿಪರತೆಯನ್ನು ಮೆರೆಯಿತು. ಪ್ರತಿಕೂಲ ಹವಾಮಾನದ ನಡುವೆ ಅಪಾಯಕಾರಿ ಭೌಗೋಳಿಕ ಪ್ರದೇಶಗಳಲ್ಲಿ, ಕೆಲವು ಅರೆಸೈನಿಕ ತುಕಡಿಗಳೊಡನೆ ಭೂಸೇನೆಯ ಸಾವಿರಾರು ಸೈನಿಕರು ಸಂತ್ರಸ್ತರ ನೆರವಿಗೆ ಧಾವಿಸಿದ್ದಲ್ಲದೆ ಅಭೂತಪೂರ್ವ ಶೋಧ ಮತ್ತು ರಕ್ಷಣಾಕಾರ್ಯಗಳಲ್ಲಿ ವ್ಯವಸ್ಥಿತವಾಗಿ ತೊಡಗಿಕೊಂಡು ಅತ್ಯಂತ ಮಹತ್ವದ ಪಾತ್ರವನ್ನು ಶ್ಲಾಘನೀಯವಾಗಿ ನಿರ್ವಹಿಸಿದರು. ನಿಜವಾದ ದೇಶಸೇವೆಯೆಂದರೇನೆಂದು ನಮಗೆ ತಿಳಿಯುವುದು ನಮ್ಮ ಭಾರತೀಯ ಸೇನೆಯಿಂದಲೇ!
ಹೀಗೆ ದೇಶಸೇವೆಯ ನೈಜ ಬಗೆಯನ್ನು ಪ್ರತಿದಿನವೂ ನಮಗೆ ತೋರಿಸುವ ಸೇನೆಯ ಎಲ್ಲಾ ವೀರ ಯೋಧರು ಮತ್ತು ಅವರ ಕುಟುಂಬಕ್ಕೆ ನಮ್ಮೆಲ್ಲರ ಕೃತಜ್ಞತೆಯ ಸಂಕೇತವಾದ ಜುಲೈ 26ರ, ಅವರೆಲ್ಲರ ಸ್ಮರಣೆಯ ದಿನವಾಗಬೇಕು. ಅದು, ನಮ್ಮ ಜೀವವನ್ನು ಕಾಯುವ, ನಮಗೆ ಸುರಕ್ಷೆ ನೀಡುವ ನಮ್ಮ ರಕ್ಷಕರಿಗಾಗಿ ಒಂದು ನಿಮಿಷ ಬಿಡುವು ಮಾಡಿಕೊಂಡು ಧನ್ಯವಾದ ಹೇಳಬೇಕಾದ ದಿನವಾಗಬೇಕು. ವರದಿಯಾಗಿರುವಂತೆ ಪ್ರವಾಹ ಸಂತ್ರಸ್ತರೊಬ್ಬರನ್ನು ಸೇನೆ ರಕ್ಷಿಸಿದಾಗ ಅವರು ಹೇಳಿದ ಮಾತು ಹೀಗಿದೆ- 'ಭಗವಾನ್ ಆಯೆ ಹೈ ವರ್ದಿ ಮೇ', (ನಮ್ಮನ್ನು ರಕ್ಷಿಸಲು) ಭಗವಂತನೇ ಬಂದಿದ್ದಾನೆ ಸಮವಸ್ತ್ರದಲ್ಲಿ!  
ಇಡೀ ದೇಶವೆ ನಮ್ಮ ಸೇನಾಪಡೆಗಳಿಗೆ ಕೃತಜ್ಞವಾಗಿದೆ. ನಮ್ಮ ರಾಜಕೀಯ ವರ್ಗವೂ ಈ ಭಾವನೆಗಳ ಆಳವನ್ನು ಅರ್ಥಮಾಡಿಕೊಳ್ಳಬೇಕು. ಈ ಕಾರ್ಗಿಲ್ ವಿಜಯ ದಿವಸದಿಂದಲೆ ಮಾತುಗಳಿಂದ ಕೃತಿಯೆಡೆಗೆ ತೆರಳುವ, ಸೇನೆಯ ಬೇಡಿಕೆಗಳ ಅನುಷ್ಠಾನದ ಕಾರ್ಯ ಬಹಳ ಮುಖ್ಯವಾಗಿ ಪ್ರಾರಂಭವಾಗಬೇಕಿದೆ. ಈ ದಿನದಿಂದಲೇ  ಸೇನಾಪಡೆಗಳ ಅಗತ್ಯಗಳನ್ನು ಕಡತಗಳಿಂದ, ಸಮಿತಿ, ಉಪ-ಸಮಿತಿಗಳಿಂದ ಹೊರತಂದು, ರಾಜಕೀಯ ಇಚ್ಛಾಶಕ್ತಿಯಿಂದ ಕಾರ್ಯಗತಗೊಳಿಸಬೇಕಾಗಿದೆ. ಹಾಗೆಯೇ ನಾಗರಿಕರು ಕೂಡಾ ಸೇನಾಪಡೆಗಳೊಂದಿಗೆ ತಮ್ಮ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ನಿರ್ಧರಿಸಬೇಕು. ಬ್ರಿಟನ್ ಮೊದಲಾದ ದೇಶಗಳಲ್ಲಿರುವಂತೆ, ಅಂತರ್ಜಾಲವೇ ಮೊದಲಾದ ಎಲ್ಲ ಸಾಧ್ಯ ಮಾಧ್ಯಮಗಳನ್ನು ಬಳಸಿಕೊಂಡು ನಮ್ಮ ಕೃತಜ್ಞತೆಯನ್ನು ವ್ಯಕ್ತಗೊಳಿಸಿ ನಮ್ಮ ಸಶಸ್ತ್ರ ಸೇನಾಪಡೆಗಳಿಗೆ ಹೃತ್ಪೂರ್ವಕ ಬೆಂಬಲ ವ್ಯಕ್ತಪಡಿಸಬೇಕು. ಹೀಗೆ ನಮ್ಮ ಸಶಸ್ತ್ರ ಪಡೆಗಳಿಗೆ ಪ್ರಜೆಗಳ ಬದ್ಧತೆಗಳು ಒಂದು ಕರಾರಿನಂತೆ ಪ್ರಬಲವಾಗಿ ವ್ಯಕ್ತವಾದಾಗ ಮಾತ್ರ ಅದು ಆಡಳಿತ ವರ್ಗವನ್ನು ಮುಟ್ಟುತ್ತದೆ. ಏಕೆಂದರೆ ಸಕ್ರಿಯ ನಾಗರಿಕರೆ ನಿಜವಾದ ಬದಲಾವಣೆಗಳನ್ನು ತರಲು ಸಕ್ಷಮರು.
ಭಾರತೀಯ ಸೇನಾಪಡೆಗಳ ಸಮಸ್ಯೆಗಳು ಮತ್ತು ಅಗತ್ಯಗಳು ಎಲ್ಲರಿಗೂ ತಿಳಿದೇ ಇದೆ. ಅವುಗಳು ಸರಳ, ನ್ಯಾಯಯುತ ಸುಸಂಬದ್ಧ ಬೇಡಿಕೆಗಳೇ ಆಗಿದ್ದು, ಅವುಗಳನ್ನು ಈಡೇರಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೆ. 40ರ ನಂತರ ಸೇವೆಯಿಂದ ಮುಕ್ತರಾಗುವ ಸೈನಿಕರಿಗೆ ವೃತ್ತಿ ಅವಕಾಶಗಳನ್ನು ಕಲ್ಪಿಸುವ ಖಾಸಗಿ ಉದ್ಯಮವಲಯಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕೆಂಬ ಒಂದು ಸೂಕ್ಷ್ಮ ವಿಷಯದ ಕುರಿತು ಅನೇಕ ವರ್ಷಗಳಿಂದ ನಾನು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇನೆ. ಮೇ 2013ರಲ್ಲಿ ಸಂಸತ್ತಿನಲ್ಲಿ ಸರ್ಕಾರವನ್ನು ಈ ಕುರಿತು ಪ್ರಶ್ನಿಸುವುದರ ಜೊತೆಗೆ ರಕ್ಷಣಾ ಸಚಿವರು ಮತ್ತು ವಿತ್ತ ಸಚಿವರಿಗೆ ಪತ್ರ ಬರೆದು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಇದು ಖಾಸಗಿ ವಲಯ ಮತ್ತು ಸಶಸ್ತ್ರಸೇನಾ ಪಡೆಗಳಿಗೆ ಲಾಭದಾಯಕ ಪ್ರಸ್ತಾಪವಾಗಿದೆ. ಆದರೆ ಸರ್ಕಾರ ತನ್ನ ಸಪ್ಪೆ ಆಧಿಕಾರಶಾಹಿ ಭಾಷೆಯಲ್ಲಿ, ಸದ್ಯಕ್ಕೆ ಇಂತಹ ಯಾವ ಪ್ರಸ್ತಾಪವೂ ಇಲ್ಲ ಎಂದು ಪ್ರತಿಕ್ರಿಯಿಸಿದೆ. ಆದರೆ ಇದನ್ನು ಅರ್ಥಪೂರ್ಣವಾಗಿ ನಾವು ಜಾರಿಗೆ ತರಬೇಕಾಗಿದೆ ಮತ್ತು ಪ್ರಜೆಗಳು ಒಕ್ಕೊರಲಿನಿಂದ ಇದಕ್ಕಾಗಿ ಒತ್ತಾಯಿಸಿದ್ದಲ್ಲಿ ಖಂಡಿತ ಜಾರಿಯಾಗುತ್ತದೆ.
ಹಾಗೆಯೇ, ಸೇನೆಯ ಬಹಳ ವರ್ಷಗಳ ಬೇಡಿಕೆಯಾದ 'ಒಂದು ಶ್ರೇಣಿ ಒಂದು ಪಿಂಚಣಿ' ಸೂತ್ರವನ್ನು ಕೇಂದ್ರ ಸಚಿವ ಸಂಪುಟದಲ್ಲಿ ಮೊದಲು ಅಂಗೀಕರಿಸಲ್ಪಟ್ಟಂತೆ, 6ನೆಯ ವೇತನ ಆಯೋಗದ ಅನುಸಾರವಾಗಿ, ವಿಳಂಬ ಅವಧಿಗೆ ಶೇಕಡಾ 6 ಬಡ್ದಿಯನ್ನೂ ಸೇರಿಸಿ ಸರ್ಕಾರ ಕೂಡಲೆ ಜಾರಿಗೊಳಿಸಬೇಕು. ಇದು ನಿವೃತ್ತ ಯೋಧರ ಒಂದು ಪ್ರಮುಖ ಸಮಸ್ಯೆಯನ್ನು ಪರಿಹರಿಸುವಲ್ಲಿ ದೊಡ್ಡ ಮೈಲಿಗಲ್ಲಾಗುವುದು ಖಚಿತ.
ಜೊತೆಗೆ, ಈ ಕಾರ್ಗಿಲ್ ವಿಜಯ ದಿನದಂದು ನಮ್ಮ ಹುತಾತ್ಮ ಯೋಧರಿಗೆ ನ್ಯಾಯವನ್ನೊದಗಿಸುವ ನಮ್ಮ ಹೋರಾಟದ ಕರ್ತವ್ಯವನ್ನು ಮತ್ತೆ ಪ್ರಬಲವಾಗಿ ಪ್ರಾರಂಭಿಸಬೇಕು. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯ ಮತ್ತು ಐದು ಭಾರತೀಯ ಯೋಧರನ್ನು ಪಾಕಿಸ್ತಾನ ಬಂಧಿಸಿ, ಹಿಂಸಿಸಿ ಅತ್ಯಂತ ಅಮಾನವೀಯವಾಗಿ ಸಾಯಿಸಿದ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಪ್ರಶ್ನಿಸಿ ಪಾಕಿಸ್ತಾನವನ್ನು ಉತ್ತರದಾಯಿಯನ್ನಾಗಿ ಮಾಡುವ ನಮ್ಮ ಪ್ರಯತ್ನವನ್ನು ಈ ದಿವಸದಿಂದಲಾದರೂ ಪ್ರಾರಂಭಿಸಬೇಕು. ಹಾಗೆಯೇ 1971ರ ಯದ್ಧದಲ್ಲಿ ಫ್ಲೈಟ್ ಲೆಫ್ಟಿನೆಂಟ್ ತಾಂಬೆ ಸೇರಿದಂತೆ  ನಾಪತ್ತೆಯಾಗಿರುವ 54 ಯೋಧರ ವಿಚಾರವನ್ನೂ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸಿ, ತಮ್ಮ ಪ್ರೀತಿಪಾತ್ರರಿಗೆ ಇನ್ನೂ ಕಾಯುತ್ತಿರುವ ಆ ಯೋಧರ ಕುಟುಂಬಗಳ ದನಿಯಾಗೋಣ.
ವೀರ ಯೋಧ ಜನರಲ್ ಜಾರ್ಜ್ ಎಸ್. ಪ್ಯಾಟನ್ ಒಮ್ಮೆ ಹೇಳಿದಂತೆ, 'ಸೈನಿಕನೇ ಸೈನ್ಯ. ಯಾವ ಸೈನ್ಯವೂ ತನ್ನ ಸೈನಿಕನಿಗಿಂತ ಉತ್ತಮವಾಗಿರಲಾರದು. ಸೈನಿಕನು ಒಬ್ಬ ನಾಗರಿಕನೂ ಕೂಡ. ವಾಸ್ತವವಾಗಿ ನಾಗರಿಕತ್ವದ ಅತ್ಯಂತ ಉನ್ನತ ಬಾಧ್ಯತೆ ಮತ್ತು ಗೌರವವೆಂದರೆ ದೇಶಕಾಗಿ ಶಸ್ತ್ರ ಹಿಡಿಯುವುದೇ ಆಗಿದೆ." ದೇಶಕ್ಕೆ ತನ್ನ ಬದ್ಧತೆಯನ್ನು ಗೌರವಿಸುವ ಸಮಯ ಬಂದಿದೆ ಮತ್ತು ಈ ನಿಟ್ಟಿನಲ್ಲಿ ಮುಂದಡಿಯಿಡಲು ಈ ವಿಜಯ ದಿವಸಕ್ಕಿಂತ ಒಳ್ಳೆಯ ದಿನ ಯಾವುದಿದೆ?'
ಈ ಕಾರ್ಗಿಲ್ ವಿಜಯ ದಿವಸದಂದು, ನಾವೆಲ್ಲರೂ ನಮ್ಮ ಸಂತೃಪ್ತ ವಲಯಗಳಿಂದ ಕಿಂಚಿತ್ ಹೊರಬಂದು, ಯಾವ ರೀತಿಯಲ್ಲಾದರೂ ಸರಿ, ನಮ್ಮ ಭಾರತೀಯ ಯೋಧನ ಸಾಹಸ, ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಅತಿಮುಖ್ಯವಾಗಿದೆ. ಇದನ್ನು ಒಂದು ಸಂಸ್ಮರಣ ದಿನವನ್ನಾಗಿ ನಾವು ಆಚರಿಸಬೇಕು. ನಿಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟ ಯೋಧರಿಗೆ ಗೌರವವನ್ನರ್ಪಿಸಲು, ನೀವು ಬೆಂಗಳೂರಿನವರಾದರೆ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಭೇಟಿಕೊಡಿ. ನೀವು ದೆಹಲಿಯವರಾದರೆ ಅಜ್ಞಾತ ಯೋಧನ ಚಿರಂತನ ಬೆಳಗುವ ಜ್ವಾಲೆಯ ಸ್ಥಳಕ್ಕೆ ಭೇಟಿಯಿತ್ತು ಪುಷ್ಪವನ್ನರ್ಪಿಸಿ ಮೌನ ಪ್ರಾರ್ಥನೆಯನ್ನು ಸಲ್ಲಿಸಿ. ಅಥವಾ ನೀವೆಲ್ಲಿಯೇ ಇದ್ದರೂ, ಅದು ಶಾಲೆಯಾಗಿರಲಿ, ಕಚೇರಿಯಾಗಿರಲಿ ಅಥವಾ ನಿಮ್ಮ ವಾಸಸ್ಥಳದಲ್ಲೇ ಆಗಲಿ, ದೇಶಕ್ಕಾಗಿ ಸಾವನ್ನೂ ಲೆಕ್ಕಿಸದೆ ಹೋರಾಡಿದ ಯೋಧರನ್ನು ಮತ್ತು ನಮ್ಮ ಶ್ರೇಷ್ಠ ಭಾರತದ ಕುರಿತು ಅವರಲ್ಲಿದ್ದ ಪ್ರೇಮ, ಸೇವೆ ಮತ್ತು ಅರ್ಪಣಾಭಾವಗಳ ಪರಿಕಲ್ಪನೆಗಳಿಂದ ಪ್ರಾಣವನ್ನರ್ಪಿಸಲು ಹಿಂಜರಿಯದ ಅವರ ಮನೋಭಾವವನ್ನೂ, ಈ ವೀರಯೋಧರನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳನ್ನು ಶ್ರದ್ಧೆಯಿಂದ ಗೌರವಿಸಲು ಈ ಕಾರ್ಗಿಲ್ ವಿಜಯ ದಿವಸದಂದು ಒಂದು ನಿಮಿಷ ಮೀಸಲಿರಿಸುವುದನ್ನು ದಯವಿಟ್ಟು ಮರೆಯಬೇಡಿ.

- ರಾಜೀವ್ ಚಂದ್ರಶೇಖರ್
ಸಂಸತ್ ಸದಸ್ಯರು, ರಾಜ್ಯ ಸಭೆ
ಅಧ್ಯಕ್ಷರು, ರಾಷ್ಟ್ರೀಯ ಸೈನಿಕಸ್ಮಾರಕ ಸಮಿತಿ
rajeev.c@nic.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.