ಭಾರತದ ನಗರಗಳೆಂಬ ನರಕದೊಳಗೆ ಒಂದು ಸುತ್ತು...

Updated on: 

ಒಂದು ದೊಡ್ಡ ಮಳೆ ಬಿತ್ತೆಂದರೆ ಸಾಕು ನಮ್ಮ ನಗರಗಳು ಮೆತ್ತಗಾಗಿಬಿಡುತ್ತವೆ. ವಿಐಪಿ ಸಿಟಿ ದೆಹಲಿಯೇ ಆಗಿರಲಿ, ಫೈನಾನ್ಷಿಯಲ್ ಹಬ್ ಮುಂಬೈ ಆಗಿರಲಿ ಅಥವಾ ಐಟಿ ಕ್ಯಾಪಿಟಲ್ ಬೆಂಗಳೂರೇ ಆಗಿರಲಿ...ಎಲ್ಲದರ ಕಥೆಯೂ ಒಂದೇ. ಚರಂಡಿಗಳೆಲ್ಲ ತುಂಬಿ ರಸ್ತೆಯ ಮೇಲೆ ಹರಿಯತೊಡಗುತ್ತವೆ, ಕಳಪೆ ರಸ್ತೆಗಳು ಕೊಳಚೆಮಯವಾಗುತ್ತವೆ, ಇಲ್ಲವೇ ಬಿರುಕು ಬಿಡುತ್ತವೆ, ಟ್ರಾಫಿಕ್ ತೆವಳಿಕೊಂಡು ಸಾಗತೊಡಗುತ್ತದೆ, ಸಾಮಾನ್ಯ ಜನರ ಬದುಕಿಗೆ ಬಹುದೊಡ್ಡ ಹೊಡೆತ ಬೀಳುತ್ತದೆ. ಪ್ರತೀ ವರ್ಷವೂ ಇದೇ ಕಥೆಯೇ. ಸರಿಯಾದ ಯೋಜನೆಗಳಿಲ್ಲ, ಉತ್ತರದಾಯಿಗಳಿಲ್ಲ. ಇನ್ನು ಚಿಕ್ಕ ಪಟ್ಟಣಗಳ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಿಕೊಳ್ಳುವುದೇ ಕಷ್ಟವಾಗುತ್ತದೆ.
ಇಂಥ ಸನ್ನಿವೇಶದಲ್ಲಿ ನಗರ ನಿರ್ವಾಹಕ ಸ್ಪಂದನೆ ಹೇಗಿರುತ್ತದೆ? ಮಳೆ ಬರುತ್ತಿದ್ದಂತೆಯೇ ಅವರು ಮರೆಯಾಗುತ್ತಾರೆ! ಮಳೆ ನಿಂತು, ನೀರು ಹರಿದುಹೋದ ನಂತರವೇ ಅವರ ದರ್ಶನ. ಹೊರಬಂದವರೇ ಚರಂಡಿಗಳಲ್ಲಿ ತುಂಬಿದ ಕೆಸರನ್ನು ಹೊರತೆಗೆದು ಕೈ ತೊಳೆದುಕೊಂಡು, ತಮ್ಮ ಕೆಲಸ ಆಯಿತೆಂದು ಮನೆಗೆ ಹೊರಡುತ್ತಾರೆ. ಮತ್ತೆ ತುಸು ಮಳೆ ಬಂದರೂ ಹೊರತೆಗೆದದ್ದೆಲ್ಲ ತಿರುಗಿ ಚರಂಡಿ ಸೇರುತ್ತದೆ. ಇನ್ನು ರಸ್ತೆಗಳ ಗತಿಯೂ ಇದೇ. ತಗ್ಗು ಬಿದ್ದಲ್ಲೆಲ್ಲ ಮಣ್ಣು ತುಂಬುತ್ತಾರೆ, ಆ ಮಣ್ಣು ಮಳೆಗೆ ಮತ್ತೆ ಹರಿದುಹೋಗುತ್ತದೆ. ದೊಡ್ಡ ದೊಡ್ಡ ಭರವಸೆ ಕೊಡುವುದರಲ್ಲಿ ಮಾತ್ರ ಇವರು ಹಿಂದೆ ಬೀಳುವುದಿಲ್ಲ! ಒಟ್ಟಿನಲ್ಲಿ ಸಾರ್ವಜನಿಕರ ಹಣ ಚರಂಡಿ ಸೇರುತ್ತದಷ್ಟೆ.
ರಾಷ್ಟ್ರ ರಾಜಧಾನಿ ದೆಹಲಿಯ ವಿಷಯವನ್ನೇ ತೆಗೆದುಕೊಳ್ಳಿ. ಕಾಮನ್‌ವೆಲ್ತ್ ಗೇಮ್ಸ್ ಸಮಯದಲ್ಲಿ ನಗರದ ಮೂಲಸೌಕರ್ಯಾಭಿವೃದ್ಧಿಯ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಲಾಯಿತು. ಅಷ್ಟೇ ಹಣವನ್ನು ನುಂಗಿ ನೀರು ಕುಡಿಯಲಾಯಿತು ಎನ್ನುವುದು ಬೇರೇ ವಿಷಯ. ರಸ್ತೆಗಳ ಅಗಲೀಕರಣವಾಯಿತು, ಪಾದಾಚಾರಿಗಳಿಗಾಗಿ ಸಬ್‌ವೇ ಮತ್ತು ಸ್ಕೈವೇಗಳ ನಿರ್ಮಾಣವಾಯಿತು, ಮೆಟ್ರೋ ರೈಲು ಜಾಲಕ್ಕೆ ಸ್ವಲ್ಪ ಟಚಪ್ ಕೊಡಲಾಯಿತು, ಅದ್ಧೂರಿ ಬಸ್‌ಗಳನ್ನು ರೋಡಿಗೆ ಬಿಡಲಾಯಿತು...ಮೇಲ್ನೋಟಕ್ಕೆ ಪ್ರಪಂಚದ ಯಾವುದೇ ದೊಡ್ಡ ನಗರಕ್ಕೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ದೆಹಲಿ ಮಿನುಗತೊಡಗಿತು. ಆದರೆ ನೆಲದೊಳಗೆ, ಅಂದರೆ ಚರಂಡಿಗಳೊಳಗೆ ಏನಾಗುತ್ತಿದೆ ಎನ್ನುವುದನ್ನು ಮಾತ್ರ ಯಾರೂ ನೋಡಲಿಲ್ಲ. ಅವುಗಳು ಇಕ್ಕಟ್ಟಾಗೇ ಇದ್ದವು. ಕೆಸರು, ಕಸವೆಲ್ಲ ಜಮಾ ಆಗಿ ಮುಚ್ಚಿ ಹೋದವು.  ಕಾಮನ್‌ವೆಲ್ತ್ ಕ್ರೀಡೆಗಳು ಜಾತ್ರೆಯಂತೆ ಅತ್ಯುತ್ಸಾಹದಿಂದ ನಡೆದುಹೋದವು. ಆದರೆ ಮಳೆಗಾಲ ಯಾವಾಗ ಬಂದಿತೋ, ಆಗ ದೆಹಲಿಯ ಹೊಲಸು ಮುಖದ ಅನಾವರಣವಾಗತೊಡಗಿತು. ಚರಂಡಿಗಳು ತುಂಬಿ ಹರಿಯತೊಡಗಿದವು, ರಸ್ತೆಗಳು ಕೆರೆಗಳಂತಾದವು, ತೆರೆದ ಗುಂಡಿಗಳು ಆರ್ಭಟಿಸತೊಡಗಿದವು! ಈಗಲೂ ದೆಹಲಿ ಬದಲಾಗಿಲ್ಲ, ಮಳೆಗಾಲವೆಂದಾಕ್ಷಣ ದೆಹಲಿಗರು ಹೆದರಿ ಸಾಯುತ್ತಾರೆ, ಉರಿಯುವ ಬಿಸಿಲಿನಿಂದ ಮುಕ್ತಿ ಸಿಗುತ್ತದೆ ಎನ್ನುವುದು ಗೊತ್ತಿದರೂ ಕೂಡ.
ಇನ್ನು ಮುಂಬೈನ ಕಥೆಯೇನು? ಕಳೆದ ಕೆಲವು ವರ್ಷಗಳ ಹಿಂದೆ ಧಾರಾಕಾರ ಮಳೆಯಿಂದಾಗಿ ಇಡೀ ನಗರವೇ ಕೆಲವು ದಿನಗಳವರೆಗೆ ಜಲಾವೃತವಾಗಿದ್ದು ನೆನಪಿದೆ ತಾನೆ? ಅಲ್ಲಿನ ಜನ ಜೀವನ ಒಮ್ಮೆಗೇ ನಿಂತುಬಿಟ್ಟಿತ್ತು. ವಾಹನಗಳು ರಸ್ತೆಗಳಲ್ಲಿ ಸಿಲುಕಿಕೊಂಡವು. ನೀರು ಮನೆಗಳಿಗೆ ನುಗ್ಗಿತು. ಉಪನಗರಗಳ ರೇಲ್ವೇ ಹಳಿಗಳೆಲ್ಲ ವಾರಗಟ್ಟಲೇ ನೀರಿನಲ್ಲಿ ಮುಳುಗಿದ್ದವು. ಮುಂಬೈಕರರಂತೂ ತತ್ತರಿಸಿಹೋದರು. ಅಲ್ಲೂ ಕೂಡ ದೆಹಲಿಯಂಥದ್ದೇ ಪರಿಸ್ಥಿತಿ. ಮುಂಬೈ ಬೆಳೆಯುತ್ತಿದೆ, ಜನಸಂಖ್ಯೆ ಹೆಚ್ಚಾಗುತ್ತಿದೆ, ಇದರೊಟ್ಟಿಗೆ ವಾಹನಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಆದರೂ ಸರಿಯಾದ ಚರಂಡಿ ವ್ಯವಸ್ಥೆ ಆ ನಗರದಲ್ಲಿಲ್ಲ. ಕೊನೆಗೆ ಓಡಿಬಂದ ಅಧಿಕಾರಿಗಳು ಮುಂದೆಂದೂ ಇಂಥ ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಭರವಸೆ ಕೊಟ್ಟರು. ಭರವಸೆ ಕೊಟ್ಟರಷ್ಟೇ ಹೊರತು ಅನುಷ್ಠಾನಕ್ಕೆ ತರಲಿಲ್ಲ. ಪ್ರತಿ ಮಳೆಗಾಲದಲ್ಲೂ ಮುಂಬೈಕರರ ಸಂಕಟ ಎಂದಿನಂತೇ ಮುಂದುವರಿದಿದೆ.   
ಇನ್ನು ಬೆಂಗಳೂರು, ತಾನು ದೇಶದ 'ಸಿಲಿಕಾನ್ ಸಿಟಿ' ಎಂದು ಬೀಗುತ್ತದೆ. ಆದರೆ ಅದಕ್ಕೆ ತಕ್ಕಂಥ ರಸ್ತೆಗಳು ಮತ್ತು ಚರಂಡಿ ವ್ಯವಸ್ಥೆ ನಮ್ಮಲ್ಲಿಲ್ಲ. ಒಂದೊಳ್ಳೆ ಮಳೆ ಬಂದರೂ ಸಾಕು, ರಸ್ತೆಗಳೆಲ್ಲ ನದಿಗಳಾಗಿ ಬದಲಾಗುತ್ತವೆ. ಅವು ಅಗಲವಾಗಿರದೇ ಇರುವುದು ಇದಕ್ಕೊಂದು ಕಾರಣ. ಇನ್ನು ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲದಿರುವುದರಿಂದ ಕಸ ಮತ್ತು ಕೆಸರು ತುಂಬಿಕೊಂಡು ಅವು ಬ್ಲಾಕ್ ಆಗುತ್ತವೆ. ಚರಂಡಿಯೊಳಗೆ ನುಸುಳಲಾರದೇ ನೀರೆಲ್ಲ ಮತ್ತೆ ರಸ್ತೆಗಳ ಮೇಲೆಯೇ ಹರಿಯುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪರಿಹಾರ ಕಾರ್ಯ ಕೈಗೊಳ್ಳಬೇಕಾದವರು ಮಾತ್ರ ಪರಸ್ಪರ ಕೆಸರೆರಚಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಾರೆ.  ಗುಣಮಟ್ಟದ ರಸ್ತೆಗಳು ಮತ್ತು ಉತ್ತಮ ಚರಂಡಿ ವ್ಯವಸ್ಥೆಯೇ ಅಭಿವೃದ್ಧಿಶೀಲ ನಗರದ ಪ್ರಮುಖ ಚಿಹ್ನೆಗಳು. ಪ್ರಪಂಚದ ಯಾವುದೇ ಪ್ರಮುಖ ನಗರಕ್ಕೆ ಬೇಕಾದರೆ ಭೇಟಿ ಕೊಡಿ. ಮೊದಲು ನಿಮ್ಮ ಕಣ್ಣಿಗೆ ಬೀಳುವುದೇ ಉನ್ನತ ಗುಣಮಟ್ಟದ ರಸ್ತೆ ಮತ್ತು ಫುಟ್‌ಪಾತ್‌ಗಳು. ಅದ್ಭುತ ಎನಿಸುವಂಥ ಚರಂಡಿ ವ್ಯವಸ್ಥೆ ನಂತರ ನಿಮ್ಮ ಗಮನಕ್ಕೆ ಬರುತ್ತದೆ. ದುರದೃಷ್ಟವಶಾತ್ ನಮ್ಮ ನಗರಗಳು ಈ ವಿಷಯದಲ್ಲಿ ಮಾತ್ರ ಬಹಳ ಹಿಂದೆ ಬಿದ್ದಿವೆ. ನಗರ ನಿರ್ವಾಹಕರ ನಡುವೆ ಸರಿಯಾದ ಸಮನ್ವಯವಿಲ್ಲ. ತುರ್ತು ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಆದರೆ ದೂರ ನಿಂತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದರಲ್ಲಿ ಮಾತ್ರ ಇವರುಗಳದ್ದು ಎತ್ತಿದ ಕೈ! ಇನ್ನೊಬ್ಬರ ತಲೆಗೆ ತಪ್ಪನ್ನು ಸವರಿ ನುಣುಚಿಕೊಳ್ಳುವುದರಲ್ಲಿ ಪರಿಣತರಿವರು. ಇನ್ನು ಭರವಸೆ ಕೊಡುವ ವಿಷಯದಲ್ಲಿ ಇವರಿಗೆ ಸರಿಸಾಟಿಯೇ ಇಲ್ಲವೆನ್ನಬಹುದು. ಆದರೆ ಆಡಿದ್ದನ್ನು ಮಾಡಿತೋರಿಸಿದ ಉದಾಹರಣೆಗಳು ಮಾತ್ರ ಇಲ್ಲ.
ನಗರ ನಿರ್ವಹಣೆಗಾಗಿ ನಾವು ತೆರುವ ಭಾರೀ ತೆರಿಗೆಗಳೆಲ್ಲ ಎಲ್ಲಿ ಹೋಗುತ್ತವೆ, ಏನಾಗುತ್ತವೆ? ಭ್ರಷ್ಟ ಅಧಿಕಾರ ವರ್ಗ, ನಿರ್ಲಜ್ಜ ಕಾಂಟ್ರ್ಯಾಕ್ಟರುಗಳೊಂದಿಗೆ ಕೈ ಜೋಡಿಸಿ ಸರ್ಕಾರಿ ಸಂಸ್ಥೆಗಳಿಂದ ಹಣ ಹಿಂಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಬಹುತೇಕ ಕೆಲಸಗಳು ಅರ್ಧಕ್ಕೆ ನಿಂತಿರುತ್ತವೆ ಅಥವಾ ಶುರುವಾಗಿರುವುದೇ ಇಲ್ಲ. ತೆರೆದ ಗುಂಡಿಗಳನ್ನು ಮುಚ್ಚುವ ವಿಷಯವಾಗಲಿ, ಕಟ್ಟಿಕೊಂಡ ಚರಂಡಿಯನ್ನು ಸರಿಪಡಿಸುವುದಿರಲಿ, ಎಲ್ಲದರಲ್ಲೂ ಇವರಿಗೆ ಅಸಡ್ಡೆ. ಟಾರು ಹಾಕಿದ ಕೆಲವೇ ದಿನಗಳಲ್ಲಿ ರಸ್ತೆಗಳಲ್ಲಿ ತಗ್ಗು ಬೀಳುತ್ತವೆ. ಆದರೆ ಇದಕ್ಕಾಗಿ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಅಥವಾ ಕಾಂಟ್ರಾಕ್ಟರ್‌ಗಳನ್ನು ಪ್ರಶ್ನಿಸಲಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಇಂಥ ಒಂದು ಸರ್ಕಾರಿ ಇಲಾಖೆಗೆ ದಾಳಿ ಮಾಡಿದ ಲೋಕಾಯುಕ್ತ ಸಂಸ್ಥೆಗೆ ಆಶ್ಚರ್ಯ ಕಾದಿತ್ತು. ಅಸ್ತಿತ್ವದಲ್ಲೇ ಇರದ ರಸ್ತೆಯೊಂದನ್ನು ಹಲವು ಬಾರಿ ರಿಪೇರಿ ಮಾಡಿದ್ದಾಗಿ(ಅದೂ ಭಾರೀ ಹಣ ಖರ್ಚು ಮಾಡಿ) ದಾಖಲೆಗಳಲ್ಲಿ ಬರೆಯಲಾಗಿತ್ತು. ಇನ್ನು, ಕೆಲವು ರೋಡುಗಳನ್ನು ಕಾಲ ಕಾಲಕ್ಕೆ ರಿಪೇರಿ ಮಾಡಲಾಗಿತ್ತು-ಅದೂ ಪೇಪರ್‌ಗಳಲ್ಲಷ್ಟೆ!
ಆಡಳಿತದಲ್ಲಿ ನಾಗರಿಕರೂ ಸಹಭಾಗಿಗಳಾದರೆ ಮಾತ್ರ ಎಲ್ಲವನ್ನೂ ಸರಿಪಡಿಸಬಹುದು. ಪ್ರತಿಯೊಂದು ವಾರ್ಡಿನ ನಿವಾಸಿ ಕಲ್ಯಾಣ ಸಂಘಗಳು, ಸರ್ಕಾರಿ ಇಲಾಖೆಗಳು ಮಾಡುತ್ತಿರುವ ಕೆಲಸದ ಮೇಲೆ ನಿಗಾ ಇಡಬೇಕು. ಗುಂಡಿಗಳನ್ನು ಮುಚ್ಚುವುದಾಗಲಿ, ರಸ್ತೆಗಳ ರಿಪೇರಿಯಾಗಲಿ, ಚರಂಡಿಗಳನ್ನು/ ಗಾರ್ಬೇಜ್‌ಗಳನ್ನು ಸ್ವಚ್ಛಗೊಳಿಸುವುದಾಗಲಿ...ಎಲ್ಲವನ್ನೂ ಅವುಗಳು ಕಾಲ ಕಾಲಕ್ಕೆ ಪರಿಶೀಲಿಸುವಂತಾಗಬೇಕು. ಕಾಂಟ್ರಾಕ್ಟರ್ ಮತ್ತು ಅಧಿಕಾರಿಗಳ ನಡುವಿನ ಸಂಬಂಧ ಕೊನೆಗೊಳ್ಳಬೇಕು. ಭ್ರಷ್ಟ ಅಧಿಕಾರಿಗಳನ್ನು ಹೊರ ಹಾಕಿ, ಅವರ ಮೇಲೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಜ್ಜ ಕಾಂಟ್ರಾಕ್ಟರ್‌ಗಳನ್ನು ಅಭಿವೃದ್ಧಿ ಕೆಲಸಗಳಿಂದ ದೂರವಿಡಬೇಕು. ಇವೆಲ್ಲವೂ ಸಾಧ್ಯವಾಗಲು ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ವಿಪರ್ಯಾಸವೆಂದರೆ, ಅದೀಗ ಯಾರಲ್ಲೂ ಕಾಣುತ್ತಿಲ್ಲ. ಇದರಿಂದಾಗಿ ನಮ್ಮ ನಗರಗಳು ನಷ್ಟ ಅನುಭವಿಸುತ್ತಾ ಸಾಗಿವೆ.
ಕೊನೆಯ ಗುಟುಕು: ಫೇಸ್‌ಬುಕ್‌ನಲ್ಲಿ ಕಂಡದ್ದು- 'ನಾನು ಜೀವನವಿಡೀ ರೋಗಗಳೊಂದಿಗೆ ಹೋರಾಡುತ್ತಾ ಬಂದಿದ್ದೇನೆ. ಬಚಾವಾಗಲು ಯಶಸ್ವಿಯೂ ಆಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಟೈಫಾಯ್ಡ್, ಚಿಕನ್‌ಪಾಕ್ಸ್, ಜಾಂಡೀಸ್‌ಗಳೊಂದಿಗೆ ಹೋರಾಡಿದರೆ, ಈಗ ಪರಿಸರ ಮಾಲಿನ್ಯ, ಕಲಬೆರಕೆ, ತೆರೆದ ಗುಂಡಿಗಳು, ಚರಂಡಿಗಳು ಮತ್ತು ಟ್ರಾಫಿಕ್‌ನೊಂದಿಗೆ ಸೆಣಸುತ್ತಿದ್ದೇನೆ. ಮತ್ತು ಈ ಹೋರಾಟ ಮುಂದವರಿಯಲಿದೆ...'

(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ  www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com