ಅಂಕಣಗಳು

ಮಾಜಿ ಸೈನಿಕರ ಕಲ್ಯಾಣಕ್ಕೆ 'ವಿ-ಕೇರ್‌'

Published On :

ನಿನ್ನೆ ಕಾರ್ಗಿಲ್ ವಿಜಯ ದಿನ ಆಚರಿಸಿದ್ದೆವು. ಭಾರತೀಯ ಸೇನೆ ಹಲವು ವಿಕ್ರಮಗಳನ್ನು ಸಾಧಿಸಿದ್ದರೂ ಹೊಸ ಪೀಳಿಗೆಯ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಕದನವೆಂದರೆ ಕಾರ್ಗಿಲ್‌ನದ್ದು. ಹೀಗಾಗಿ ಕಾರ್ಗಿಲ್ ಕನವರಿಕೆಯ ಈ ಸಂದರ್ಭದಲ್ಲಿ ಆ ಸ್ಫೂರ್ತಿಗಾಥೆಯನ್ನು ನೆನಪಿಸಿಕೊಳ್ಳುತ್ತಲೇ, ಸೇನೆಯ ಶೌರ್ಯಭಾವ ಮತ್ತು ಈ ಬಗ್ಗೆ ನಮ್ಮ ನಾಡಿನ ಮನೋಭಾವ ಇವೆಲ್ಲದರ ಮನನವೂ ಅಗತ್ಯ. ಈ ಹಿನ್ನೆಲೆಯಲ್ಲಿ ಸೇನೆಯ ಕುರಿತು ಸಮಾಜದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನೆಲ್ಲ ಸೆರೆಹಿಡಿಯುತ್ತಿರುವ ಎರಡನೇ ಕಂತು ಇಲ್ಲಿದೆ.

ಮಾಜಿ ಸೈನಿಕರ ಕಲ್ಯಾಣಕ್ಕಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಮೈಸೂರಿನ ವಿ- ಕೇರ್ ಎಕ್ಸ್ ಸರ್ವಿಸ್‌ಮನ್ ಟ್ರಸ್ಟ್ ಶ್ರಮಿಸುತ್ತಿದೆ. 2ನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಮಂಡೇಟಿರ ನಾಣಯ್ಯ ಅವರ ಪುತ್ರ ಎಂ.ಎನ್. ಸುಬ್ರಮಣಿ ಈ ಟ್ರಸ್ಟ್‌ನ ಅಧ್ಯಕ್ಷರು.
ಸುಬ್ರಮಣಿ ಅವರು ಕೂಡ ನಿವೃತ್ತ ಸಾರ್ಜೆಂಟ್ (ಸೀನಿಯರ್ ನಾನ್ ಕಮಿಷನ್ಡ್ ಆಫೀಸರ್). ಸುಬ್ರಮಣಿ ಅವರು ಮಂಡ್ಯ ಮುನ್ಸಿಫಲ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ, ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದ್ದಾರೆ. ಅವರ ತಂದೆ ಸೇನೆಯಿಂದ ವಾಪಸ್ಸಾದ ನಂತರ ಸಬ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾಗಿದ್ದರು. ಮಗ ಸೇನೆಗೆ ಸೇರುವುದು ಅವರಿಗೆ ಇಷ್ಟವರಲಿಲ್ಲ. ಆದರೆ ಸುಬ್ರಮಣಿ ಅವರಲ್ಲಿ ಹರಿಯುತ್ತಿದ್ದುದು ಸೈನಿಕ ರಕ್ತ. ಹೀಗಾಗಿ ತಂದೆಯ ಆಶಯಕ್ಕೆ ವಿರುದ್ಧವಾಗಿ 1974ರಲ್ಲಿ ಏರಮನ್ ಆಗಿ ವಾಯುಸೇನೆಗೆ ಸೇರ್ಪಡೆಯಾದರು. 1982ರಲ್ಲಿ ಮೈಸೂರಿನ ಏರ್‌ಫೋರ್ಸ್ ಸೆಲೆಕ್ಷನ್ ಬೋರ್ಡ್‌ಗೆ ವರ್ಗವಾದಾಗ ಸೇವೆಯಲ್ಲಿದ್ದಾಗಲೇ ಓದು ಮುಂದುವರೆಸಿ ಎಂ.ಕಾಂ ಸ್ನಾತಕೋತ್ತರ ಪದವಿ ಪಡೆದರು. ನಂತರ ವಿದ್ಯಾವರ್ಧಕ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದರು.
15 ವರ್ಷಗಳ ಸೇವೆಯ ನಂತರ 1989ರಲ್ಲಿ ನಿವೃತ್ತರಾದರು. ನಂತರ 1993ರಲ್ಲಿ ಸರ್ಕಾರಿ ಪಿಯು ಕಾಲೇಜು ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇರ್ಪಡೆಯಾಗಿ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ್ದಾರೆ. ಸುಬ್ರಮಣಿ ಅವರ ತಂದೆ ಮಂಡೇಟಿರ ನಾಣಯ್ಯ ಅವರು 1990ರಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಸಾಯುವ ಮುನ್ನ ಸುಬ್ರಮಣಿ ಅವರನ್ನು ಹತ್ತಿರ ಕರೆದು, ನಾನು ಒಬ್ಬ ಮಾಜಿ ಸೈನಿಕ. ನೀನು ಕೂಡ ವಾಯುದಳದಲ್ಲಿ ಸೇವೆಯಲ್ಲಿದ್ದೆ. ಮಾಜಿ ಸೈನಿಕರು, ಅವರ ಪತ್ನಿಯರು ಮತ್ತು ಅವಲಂಬಿತರ ಸಮಸ್ಯೆಗಳು ಏನು ಎಂಬುದು ನಿನಗೆ ಗೊತ್ತಿದೆ. ಅವುಗಳ ಪರಿಹಾರಕ್ಕೆ ಶ್ರಮಿಸಿದರೆ ನಿನ್ನ ಓದು ಮತ್ತು ಬರಹ ಸಾರ್ಥಕ ಎಂದು ಹೇಳಿದರು.
ಪೀಪಲ್ಸ್ ಪಾರ್ಕ್‌ನ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸ ವೃತ್ತಿಯ ಜತೆಗೆ ಸುಬ್ರಮಣಿ ಅವರು ತಂದೆಯ ಕೊನೆಯ ಆಶಯ ಈಡೇರಿಕೆಗಾಗಿ ಮಾಜಿ ಸೈನಿಕರು, ಮೃತಯೋಧರ ಪತ್ನಿಯರು ಮತ್ತು ಅವಲಂಬಿತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದತ್ತ ಗಮನಹರಿಸಿದರು. ಇದಕ್ಕಾಗಿ 1990ರ ಆ.15ರಂದು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಕಚೇರಿ ತೆರೆದರು. ಕಾಲೇಜು ಹೊರತುಪಡಿಸಿ ಉಳಿದಂತೆ ಬಿಡುವಿನ ವೇಳೆಯನ್ನು ಮಾಜಿ ಸೈನಿಕರು, ವಿಧವೆಯರು ಮತ್ತು ಅವಲಂಬಿತರ ಸಮಸ್ಯೆಗಳ ಪರಿಹಾರಕ್ಕಾಗಿ ಮೀಸಲಿಟ್ಟರು. ಕಚೇರಿಯ ಬಾಡಿಗೆ ನಿರ್ವಹಣೆ, ಸಿಬ್ಬಂದಿಯ ವೇತನವನ್ನು ತಮ್ಮ ಪಿಂಚಣಿ ಹಣದಿಂದ ಭರಿಸಿದರು. ಈಗಲೂ ಭರಿಸುತ್ತಿದ್ದಾರೆ. ಒಮ್ಮೆ ಮಾಜಿ ಸೈನಿಕ ಅಥವಾ ಅವರ ಕಡೆಯವರು ತಮ್ಮ ಕಚೇರಿಗೆ ಬಂದು ಅರ್ಜಿ ನೀಡಿದರೆ ಮುಗಿಯಿತು. ಎರಡನೇ ಬಾರಿ ಬರುವಂತಿಲ್ಲ. ಆ ರೀತಿ ಸಂಬಂಧಪಟ್ಟವರ ಗಮನ ಸೆಳೆದು ಸಮಸ್ಯೆ ಪರಿಹರಿಸತೊಡಗಿದರು.
ಏನೇನು ಪರಿಹಾರ ಸಿಕ್ಕಿದೆ?: ಮಾಜಿ ಸೈನಿಕರಿಗೆ ಸೌಲಭ್ಯ ಕಲ್ಪಿಸುವುದರಲ್ಲಿ ಕರ್ನಾಟಕ ಸರ್ಕಾರ ದೇಶದ ಇತರೆ ರಾಜ್ಯಗಳಿಗಿಂತ ಮುಂದಿದೆ. ಆದರೆ ಮೊದಲೆಲ್ಲಾ ಪೊಲೀಸ್ ಇಲಾಖೆಯ ನೇಮಕಾತಿಯ ವಯೋವುತಿಯಲ್ಲಿ ಮಾಜಿ ಸೈನಿಕರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ 1994ರಲ್ಲಿ ಅದನ್ನು 27 ವರ್ಷಕ್ಕೆ ಇಳಿಸಿತು. ಇದರ ಪರಿಣಾಮ ಮಾಜಿ ಸೈನಿಕರು ಕೆಲಸದಿಂದ ವಂಚಿತರಾದರು. ಈ ವಿಷಯವನ್ನು ವಿ- ಕೇರ್ ಸಂಸ್ಥೆ ಸರ್ಕಾರದ ಗಮನಕ್ಕೆ ತಂದಿತು. ಈಗ ಮಾಜಿ ಸೈನಿಕರಿಗೆ 38 ವರ್ಷವಾದರೂ ಪೊಲೀಸ್ ಇಲಾಖೆಗೆ ಸೇರಬಹುದು.
ಸೇನೆಯಲ್ಲಿ ಯುದ್ಧಕ್ಕಿಂತ ತರಬೇತಿ ಕಠಿಣ. ತರಬೇತಿಯಲ್ಲಿ ಹೆಚ್ಚು ಬೆವರು ಹರಿಸಿದರೆ ಯುದ್ಧದಲ್ಲಿ ಕಡಿಮೆ ರಕ್ತ ಹರಿಸಿದರೆ ಸಾಕು ಎಂಬ ಮಾತಿದೆ. ಈ ರೀತಿ ತರಬೇತಿ ಪಡೆಯುವಾಗ ಗಾಯಾಳುಗಳಾದರೆ ಕಡಿಮೆ ಪಿಂಚಣಿ ನೀಡಿ ವಾಪಸ್ ಕಳುಹಿಸಲಾಗುತ್ತಿತ್ತು. ಅವರನ್ನು ಮಾಜಿ ಸೈನಿಕರು ಎಂದು ಪರಿಗಣಿಸುತ್ತಿರಲಿಲ್ಲ. ಒಂದೂವರೆ ವರ್ಷದಲ್ಲಿಯೇ ಗಾಯಗೊಂಡು ವಾಪಸ್ಸಾದ ಮೈಸೂರಿನ ಅಶೋಕಪುರಂನ ಹನುಮಂತರಾಯಪ್ಪ ಅವರ ಪ್ರಕರಣವನ್ನು ಕೈಗೆತ್ತಿಕೊಂಡು ವಿ- ಕೇರ್ ಸಂಸ್ಥೆ ಈ ರೀತಿಯ ಗಾಯಾಳುಗಳನ್ನು ಮಾಜಿ ಸೈನಿಕರು ಎಂದು ಪರಿಗಣಿಸುವಲ್ಲಿ ಯಶಸ್ವಿಯಾಯಿತು. ಈಗ ಇವರಿಗೆ ಕ್ಯಾಂಟಿನ್, ಮಾಜಿ ಸೈನಿಕರ ಆರೋಗ್ಯ ಯೋಜನೆ, ಉದ್ಯೋಗ ಮೀಸಲಾತಿ ಸಿಗುತ್ತಿದೆ.
ಎರಡನೇ ಮಹಾಯುದ್ಧದ ನಂತರ ಭಾರತೀಯ ಸೇನೆಯಿಂದ ಹಲವಾರು ಮಂದಿಯನ್ನು ವಾಪಸ್ ಕಳುಹಿಸಲಾಯಿತು. ಆದರೆ ಅವರಿಗೆ ಪಿಂಚಣಿ ನೀಡಿರಲಿಲ್ಲ. ತಮ್ಮ ತಂದೆ ಮಂಡೇಟಿರ ನಾಣಯ್ಯ ಅವರು ನಿಧನರಾದಾಗ ತಾಯಿ ಗಂಗಮ್ಮ ಅವರ ಕಡೆಯಿಂದ ಸೇನೆಯ ವರಿಷ್ಠಾಧಿಕಾರಿಗಳಿಗೆ ಅರ್ಜಿ ಹಾಕಿಸಿದ ಸುಬ್ರಮಣಿ ತಮ್ಮದಲ್ಲದ ತಪ್ಪಿಗೆ ಸೇನೆಯಿಂದ ಮರಳಿದ, 8-10 ವರ್ಷ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ, ಮೃತ ಯೋಧರ ಪತ್ನಿಯರಿಗೆ ಪಿಂಚಣಿ, ಕ್ಯಾಂಟಿನ್ ಮತ್ತಿತರ ಸೌಲಭ್ಯ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾದರು. ಜಾಂಡೀಸ್‌ನಿಂದ ನಿಧನರಾಗಿದ್ದ ಉಪಾಧ್ಯ ಎಂಬವರ ಕುಟುಂಬಕ್ಕೆ ಪಿಂಚಣಿ ನೀಡಿದ್ದನ್ನು ಅವರು ಉಲ್ಲೇಖಿಸಿದ್ದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಮಾಜಿ ಸೈನಿಕರಿಗೆ, ವಿಧವೆಯರಿಗೆ ಹಾಗೂ ಅವಲಂಬಿತರಿಗೆ ಏನಾದರೂ ಅನ್ಯಾಯವಾದಲ್ಲಿ, ಅಕ್ರಮ, ಅವ್ಯವಹಾರ ನಡೆದಲ್ಲಿ ಹೋರಾಟ ಮಾಡಿ ಸರಿಪಡಿಸುತ್ತಾರೆ. ಯುದ್ಧದಲ್ಲಿ ಮಡಿದವರ ವಿಧವೆಯರಿಗೆ ಬೆಂಗಳೂರಿನ ಇಂದಿರಾನಗರದಲ್ಲಿ ದೊರೆಯಬೇಕಾದ ನಿವೇಶನಗಳು ಅನ್ಯರ ಪಾಲಾದಾಗ ಹೋರಾಟ ಮಾಡಿದ್ದಾರೆ. ಎರಡು ಕಡೆ ಡಿಎ ಪಡೆದ ಅಧಿಕಾರಿಗಳು, ಕರ್ನಾಟಕದ ಕಾಯಂ ವಾಸಿಗಳ ಹೆಸರಿನಲ್ಲಿ ನಗದು ಬಹುಮಾನ ದುರುಪಯೋಗ ಮಾಡಿಕೊಂಡು ಅನ್ಯ ರಾಜ್ಯದ ಪದಕ ವಿಜೇತರ ವಿರುದ್ಧ ಹೋರಾಟ ನಡೆಸಿ, ಹಣ ವಾಪಸ್ ಮಾಡಿಸಿದ್ದಾರೆ. ಮಾಜಿ ಸೈನಿಕರಾದ ಬಿ.ಡಿ. ರುದ್ರಯ್ಯ ಎಂಬವರ ಮಕ್ಕಳಾದ ಬಿ.ಆರ್. ಹರೀಶ್- ಬಿಇ, ಬಿ.ಆರ್. ಸೀತಾ- ಪಿಯುಸಿ ಓದಲು ನೆರವಾಗಿದ್ದಾರೆ. ಕಚೇರಿ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸೋಮಶೇಖರ್ ಎಂಬ ಯುವಕನಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿರುವುದರ ಜತೆಗೆ ಬಿ.ಕಾಂ ನಂತರ ಕಾನೂನು ಪದವಿ ಓದಿಸುತ್ತಾರೆ.
ನಾನು ಇವತ್ತು ಇರುತ್ತೇನೆ. ನಾಳೆ ಇಲ್ಲದಿರಬಹುದು. ಆದರೆ ಮಾಜಿ ಸೈನಿಕರು, ವಿಧವೆಯರು ಹಾಗೂ ಅವರ ಅವಲಂಬಿತರ ಸಮಸ್ಯೆಗಳ ಪರಿಹಾರಕ್ಕೆ ಈ ಕಚೇರಿ ಸದಾ ಇರಬೇಕು. ಅದಕ್ಕಾಗಿ ಕಾನೂನು ಪದವಿ ಇದ್ದರೆ ಒಳ್ಳೆಯದು. ಸೋಮಶೇಖರ್ ವಕೀಲರಾದ ನಂತರ ಮುಖ್ಯ ಸಲಹೆಗಾರರಾಗಲಿದ್ದು, ನಾನು ಗೌರವ ಕಾನೂನು ಸಲಹೆಗಾರನಾಗಿ ಮುಂದುವರಿಯುತ್ತೇನೆ ಎನ್ನುತ್ತಾರೆ ಸುಬ್ರಮಣಿ. ಇವರ ಸಂಪರ್ಕ ಮೊ.9448471811.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.