ಸೈನಿಕರಿಗಿಲ್ಲ ನಿವೇಶನ
ರಕ್ಷಣೆಗೆ, ಗಡಿ ಕಾಯಲು ಸೈನಿಕರು ಬೇಕು. ಆದರೆ, ಅದೇ ಸೈನಿಕರು ನಿವೃತ್ತಿಯಾಗಿ ಬಂದಾಗ ಅವರನ್ನು ಕ್ಯಾರೆ ಎನ್ನುವವರಿಲ್ಲ. ದೇಶವನ್ನು ಕಾದು ಭದ್ರತೆ ಒದಗಿಸಿದ ಜಿಲ್ಲೆಯ ಮಾಜಿ ಸೈನಿಕರಿಗೆ 14 ವರ್ಷಗಳಿಂದ ನಿವೇಶನವನ್ನೇ ನೀಡಿಲ್ಲ.
ನಮ್ಮ ದೇಶದಲ್ಲಿ ಸೈನಿಕರೆನ್ನುವುದಕ್ಕೆ ವಿಶೇಷ ಅರ್ಥವಿದೆ. ಆದರೆ, ಅದೇ ಸೈನಿಕರು ನಿವೃತ್ತಿಯಾದರೆ ಕಸಕ್ಕಿಂತ ಕಡೆ ಎನ್ನುವಂತೆ ಭಾಸವಾಗುವ ರೀತಿ ಜಿಲ್ಲೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಮಾಜಿ ಸೈನಿಕರ ಗೋಳನ್ನು ಕೇಳುವವರಿಲ್ಲ. ರಾಜ್ಯ ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಸೌಲಭ್ಯಗಳು ಸಿಕ್ಕಿಲ್ಲ. ಆದರೆ ಕೇಂದ್ರ ಸರ್ಕಾರದಿಂದ ಕ್ಯಾಂಟಿನ್ ಸೇಲ್ಸ್ ಡಿಫೆನ್ಸ್ (ಮಾಜಿ ಸೈನಿಕರ ಕ್ಯಾಂಟಿನ್) ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇದು ಬಿಟ್ಟರೆ ಮಾಜಿ ಸೈನಿಕರಿಗೆ ನಿವೇಶನ, ಜಮೀನು ಸೌಲಭ್ಯ ಮರೀಚಿಕೆ. 1999ರಿಂದ ಇಲ್ಲಿಯವರೆಗೆ ಸರ್ಕಾರ ಒಬ್ಬೇ ಒಬ್ಬ ಮಾಜಿ ಸೈನಿಕನಿಗೆ ನಿವೇಶನ ಕೊಟ್ಟಿಲ್ಲ.
ಬಳ್ಳಾರಿಯ ಮಿಲ್ಟ್ರಿ ಕ್ಯಾಂಟಿನ್ ರಾಜ್ಯದ 4 ಜಿಲ್ಲೆ ಹಾಗೂ ಆಂಧ್ರಪ್ರದೇಶದ ಅನಂತಪುರ ಸೇರಿ ವಿವಿಧ ಜಿಲ್ಲೆಯ ಮಾಜಿ ಸೈನಿಕರಿಗೆ ಆಸರೆಯಾಗಿದೆ. ದೂರದ ದಾವಣಗೆರೆ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಮಾಜಿ ಸೈನಿಕರು ಬಳ್ಳಾರಿಯ ಕ್ಯಾಂಟಿನ್ನಲ್ಲೇ ವಸ್ತುಗಳನ್ನು ಕೊಳ್ಳಬೇಕಿದೆ. ಈ ಸೈನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮಿಲ್ಟ್ರಿ ಕ್ಯಾಂಟಿನ್ನಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳು ಮಾಜಿ ಸೈನಿಕರಿಗೆ ಸಿಗುತ್ತವೆ ಎನ್ನುವುದು ಸತ್ಯವಾದರೂ ದೂರದ ಜಿಲ್ಲೆಗಳ ಸೈನಿಕರಿಗೂ ಇದೇ ಕ್ಯಾಂಟಿನ್ ಗತಿ.
67 ಸಾವಿರ ತುಂಬಿದರೂ ನಿವೇಶನ ಇಲ್ಲ: ಬಳ್ಳಾರಿಯ ಇಂಡಸ್ಟ್ರಿಯಲ್ ಏರಿಯಾ ಸಮೀಪದಲ್ಲಿ ಮಾಜಿ ಸೈನಿಕರಿಗೆ ನಿವೇಶನಕ್ಕೆಂದು 3.5 ಎಕರೆ ಪ್ರದೇಶ ಕಾಯ್ದಿರಿಸಲಾಗಿತ್ತು. ಆದರೆ ಅದು ಇಂಡಸ್ಟ್ರಿಯಲ್ ಭೂಮಿಯಾದ ಕಾರಣ ಅದನ್ನು ನಾನ್ ಇಂಡಸ್ಟ್ರಿಯಲ್ ಎಂದು ಪರಿವರ್ತಿಸುವ ಉದ್ದೇಶದಿಂದ ತೆರಿಗೆ ಕಟ್ಟಬೇಕೆಂದು ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಾಜಿ ಸೈನಿಕರು ಹಾಗೂ ವಿಧವೆಯವರ ಕ್ಷೇಮಾಭಿವೃದ್ಧಿ ಸಂಘ ಮಾಜಿ ಸೈನಿಕರಿಂದ ಕಲೆಹಾಕಿ 67 ಸಾವಿರವನ್ನು ಬುಡಾಕ್ಕೆ ಪಾವತಿಸಿದ್ದಾರೆ. ಆದರೆ ಇಲ್ಲಿಯವರೆಗೆ ನಿವೇಶನ ನೀಡಿಲ್ಲ. ಜಿಲ್ಲಾಧಿಕಾರಿ ಬಿಸ್ವಾಸ್ ಅವರು ಕಾಳಜಿ ವಹಿಸಿ ಫೈಲ್ನ್ನು ಸರ್ಕಾರದ ಮಟ್ಟಕ್ಕೆ ಕಳುಹಿಸಿದ್ದಾರೆ ಎಂದು ಮಾಜಿ ಸೈನಿಕರೊಬ್ಬರು ತಿಳಿಸಿದ್ದಾರೆ.
ಸಂಘದಲ್ಲಿ ಬಿಡಿಗಾಸು ಇಲ್ಲ: ಬಳ್ಳಾರಿ ಜಿಲ್ಲಾ ಮಾಜಿ ಸೈನಿಕರ ಹಾಗೂ ವಿಧವೆಯರ ಕ್ಷೇಮಾಭಿವೃದ್ಧಿ ಸಂಘದಿಂದ ಏನಾದರೂ ಚಟುವಟಿಕೆ ನಡೆಯುತ್ತಿದೆಯೇ ಎಂದು ಮಾಜಿ ಸೈನಿಕರನ್ನು ಕೇಳಿದರೆ, ಯಾವ ಚಟುವಟಿಕೆ ಮಾಡಬೇಕು ಸ್ವಾಮಿ? ನಮಗೆ ಕೊಡಬೇಕಾದ ನಿವೇಶನ ಕೊಟ್ಟಿಲ್ಲ, ಇನ್ನು ಸಂಘದಲ್ಲಿ ಬಿಡಿಗಾಸು ಇಲ್ಲ. ಮಾಜಿ ಸೈನಿಕರಿಂದ ಹಣ ಕೇಳಿದರೆ, ಸಂಘದಿಂದ ನಿವೇಶನ ಕೊಡಿಸುತ್ತೇವೆ ಎಂದು ಹೇಳಿ ಹತ್ತಾರು ವರ್ಷ ಕಳೆದಿವೆ. ಇನ್ನು ಸಂಘಕ್ಕೆ ಯಾವುದೇ ರೀತಿಯ ಹಣ ಸಹಾಯವೂ ಇಲ್ಲ, ಕಟ್ಟಡ ಇಲ್ಲ, ಮಾಜಿ ಸೈನಿಕರಿಗೆ ಬೇಕಾಗುವ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ತಿಳಿಸುವ ಮೂಲಕ ತಮ್ಮ ಗೋಳನ್ನು ವಿವರಿಸುತ್ತಾರೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

