ಮಕ್ಕಳು ಶೌಚಾಲಯ ತೊಳೀಬಾರ್ದು ಅಂದ್ರೆ ಇನ್ಯಾರು ತೊಳೀಬೇಕು?

ಎಷ್ಟು ಹೊಣೆ ಹೊರಬೇಕು ಸ್ವಾಮಿ ಶಿಕ್ಷಕರು? ಮಧ್ಯಾಹ್ನದ ಬಿಸಿಯೂಟ, ಗಣತಿ, ಚುನಾವಣೆ, ಪ್ರಾಣಿ ಗಣತಿ, ಇದರ ಜತೆಗೆ ಶಾಲೆಯ ಪಠ್ಯೇತರ ಕೆಲಸಗಳು, ಕ್ರೀಡಾಕೂಟ ಆಯೋಜನೆ. ಈಗ ಶಾಲೆ ಆರಂಭಕ್ಕೂ ಮೊದಲು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಬೇಕಂತೆ!
ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಭರದಲ್ಲಿ, ಅವರ ಮೇಲಿನ ಶೋಷಣೆ ತಡೆಯುವ ಆತುರದಲ್ಲಿ ನಾವು ಶಿಕ್ಷಕರನ್ನು ಶೋಷಣೆ ಮಾಡುತ್ತಿದ್ದೇವೇನೋ ಎಂದು ಅನಿಸುತ್ತಿದೆ. ನಮ್ಮ ಮಕ್ಕಳು ಯಾವುದೇ ಕೆಲಸ ಮಾಡದಿರಲು ನಾವೇ ಪ್ರೋತ್ಸಾಹ ನೀಡುತ್ತಿದ್ದೇವೇನೋ ಎಂಬ ಅನುಮಾನವೂ ಮೂಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಉತ್ತಮವಾಗಿ ನಡೆಸಿಕೊಳ್ಳುವ ಭರದಲ್ಲಿ ಶಿಕ್ಷಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದೇವೆ.
ಇತ್ತೀಚೆಗೆ ನಡೆದ 2 ಘಟನೆಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಮೊದಲನೆಯದು ಬಿಹಾರದ್ದು. ಅಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಾದ ಏರುಪೇರಿನಿಂದ ಶಾಲಾ ಮಕ್ಕಳು ಮೃತಪಟ್ಟರು. ಇದಕ್ಕೆ ಪ್ರತಿಯಾಗಿ ಶಾಲಾ ಮುಖ್ಯೋಪಾಧ್ಯಾಯರನ್ನೇ ಬಂಧಿಸಲಾಗಿದೆ. ಪರಿಣಾಮ ಅಲ್ಲಿನ ಶಿಕ್ಷಕರು ಮಧ್ಯಾಹ್ನದ ಬಿಸಿಯೂಟ ನಮ್ಮ ಜವಾಬ್ದಾರಿಯೇ ಅಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ.
ಇನ್ನೊಂದು ನಮ್ಮದೇ ರಾಜ್ಯದ ರಾಮನಗರದಲ್ಲಿ ನಡೆದ ಘಟನೆ. ಅಲ್ಲಿನ ಶಾಲೆಯ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಛಗೊಳಿಸಿದ್ದು, ವಿವಾದಕ್ಕೀಡಾಯಿತು. ಆದರೆ ನನ್ನ ಕೆಲವು ಪ್ರಶ್ನೆಗಳಿವೆ. ಅದೇನೆಂದರೆ...
ಶಾಲೆಯಲ್ಲಿರುವ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಛ ಮಾಡಿಸುವುದು ತಪ್ಪು ಎಂದಾದರೆ ಅದನ್ನು ಮತ್ಯಾರು ಸ್ವಚ್ಛಗೊಳಿಸಬೇಕು? ಶಿಕ್ಷಕರು ಮಾಡಬೇಕೇ? ಮಕ್ಕಳ ಪಾಲಕರು ಬಂದು ಸ್ವಚ್ಛಗೊಳಿಸಬೇಕೇ? ಸ್ವಚ್ಛಗೊಳಿಸುವವರು ಯಾರೂ ಇಲ್ಲ ಎಂದಾದರೆ ಮಕ್ಕಳು ಸಿಕ್ಕಸಿಕ್ಕಲ್ಲಿ ಶೌಚ ಮಾಡುವುದೇ ಒಳ್ಳೆಯದೇ?
ಸರ್ಕಾರ ಶೌಚಾಲಯವನ್ನೇನೋ ಕಟ್ಟಿಸಿದೆ. ಆದರೆ ಅದನ್ನು ಸ್ವಚ್ಛಗೊಳಿಸಲು ಹಣ ಕೊಟ್ಟಿಲ್ಲ. ಹಣ ಕೊಟ್ಟಿದ್ದರೂ, ಆ 100-200ಕ್ಕೆ ಈಗ ಯಾರೂ ದಿನವೂ ಬಂದು ಶೌಚಾಲಯ ಸ್ವಚ್ಛಗೊಳಿಸುವುದೂ ಇಲ್ಲ. ಹಾಗಂತ ಶೌಚಾಲಯ ಸ್ವಚ್ಛವಾಗಿಲ್ಲ ಅಂದರೆ ಅದಕ್ಕೂ ಶಿಕ್ಷಕರೇ ಹೊಣೆ.
ಎಷ್ಟು ಹೊಣೆ ಹೊರಬೇಕು ಸ್ವಾಮಿ ಶಿಕ್ಷಕರು? ಮಧ್ಯಾಹ್ನದ ಬಿಸಿಯೂಟ, ಗಣತಿ, ಚುನಾವಣೆ, ಪ್ರಾಣಿ ಗಣತಿ, ಇದರ ಜತೆಗೆ ಶಾಲೆಯ ಪಠ್ಯೇತರ ಕೆಲಸಗಳು, ಕ್ರೀಡಾಕೂಟ ಆಯೋಜನೆ. ಈಗ ಶಾಲೆ ಆರಂಭಕ್ಕೂ ಮೊದಲು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಬೇಕಂತೆ! ಬಿಸಿಯೂಟದ ಲೆಕ್ಕವನ್ನೂ ಅವರೇ ಬರೆಯಬೇಕು. ಇದೆಲ್ಲದರ ನಡುವೆ ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಚ್ಚುಕಡಿಮೆಯಾದರೆ ಅದರ ಹೊಣೆಯನ್ನೂ ಅವರೇ ಹೊರಬೇಕು. ಇಷ್ಟು ಮಾಡಿ ಶೌಚಾಲಯವನ್ನೂ ಅವರೇ ತೊಳೆಯಬೇಕಾ?
ಯಾವ ಶಾಲೆಗೆ ಕಚೇರಿ ಕೆಲಸ ಮಾಡಲೆಂದು ಸರ್ಕಾರ ಗುಮಾಸ್ತರನ್ನು ನೇಮಿಸಿದೆ? ಹೋಗಲಿ ಒಬ್ಬ ಅಟೆಂಡರ್ನನ್ನು ಕೊಟ್ಟಿದೆಯಾ? ಯಾವುದೇ ಶಾಲೆಗೆ ಒಬ್ಬ ಡಿ ಗ್ರೂಪ್ ನೌಕರನನ್ನು ನೇಮಿಸಿದೆಯಾ?ಮುಖ್ಯಮಂತ್ರಿ ಕಚೇರಿಯಲ್ಲಿ 300 ಮಂದಿಯನ್ನು ನೇಮಿಸಿಕೊಂಡವರು ಕೂಡ ಪ್ರಾಥಮಿಕ ಶಾಲೆಗೆ ಒಬ್ಬ ಡಿ ಗ್ರೂಪ್ ನೌಕರರನ್ನು ಒದಗಿಸುವ ಚಿಂತನೆ ಮಾಡಲಿಲ್ಲ. ಗಂಟೆ ಹೊಡೆಯಲು ಕೂಡ ಜನ ಇಲ್ಲ. ಹೀಗಿರುವಾಗ ಯಾರಿಂದ ಈ ಎಲ್ಲಾ ಕೆಲಸ ಮಾಡಿಸಬೇಕು? ಮಕ್ಕಳ ದಾಖಲಿನಿಂದ ಆರಂಭಿಸಿ, ಟಿಸಿ ಬರೆದುಕೊಡುವವರೆಗೆ ಎಲ್ಲ ಕೆಲಸವನ್ನೂ ಶಿಕ್ಷಕರೇ ಮಾಡಬೇಕು. ಇನ್ನೂ ಎಷ್ಟು ಕೆಲಸ ಅವರಿಂದ ಮಾಡಿಸಬೇಕೆಂದಿದ್ದೀರಿ?
ನಾವು ಓದುವ ಶಾಲೆಯನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳುವುದು ತಪ್ಪೇ? ನಮ್ಮ ಶಾಲೆಯನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದೋ? ಗಬ್ಬೆದ್ದುಹೋದ ಪರಿಸರದಲ್ಲಿರುವ ಶಾಲೆಯಲ್ಲಿ ಕಲಿಯುವುದು ಒಳ್ಳೆಯದೋ?
ಮಕ್ಕಳ ಮತ್ತು ಶಾಲೆಯ ಪರಿಸರದ ಹಿತದೃಷ್ಟಿಯಿಂದಲೇ ಶಾಲೆಗಳಲ್ಲಿ ಒಂದು ವ್ಯವಸ್ಥೆ ಇದೆ. ಅದು ಎಷ್ಟೋ ವರ್ಷಗಳಿಂದ ಅನೂಚಾನಾಗಿ ನಡೆದುಕೊಂಡು ಬಂದಿದೆ. ಶಾಲೆಯ ಕೆಲವು ಕೆಲಸಗಳನ್ನು ಮಕ್ಕಳಿಗೆ ಪಾಳಿ ಮೂಲಕ ಮಾಡಿಸಲಾಗುತ್ತದೆ. ಅದನ್ನೇನು ಜಾತಿ, ಧರ್ಮ ನೋಡಿ ಮಾಡಿಸಲಾಗುವುದಿಲ್ಲ. ದಲಿತರವ ಶೌಚಕ್ಕೆ ಹೋಗುತ್ತಾನೆಂದು ಬ್ರಾಹ್ಮಣ ಮಕ್ಕಳ ಬಳಿ ಶೌಚಾಲಯ ತೊಳೆಸದೇ ಇರುವುದು ಅಥವಾ ಕೇವಲ ಹಿಂದುಳಿದ ವರ್ಗದ ಮಕ್ಕಳಿಂದಲೇ ಶೌಚಾಲಯ ತೊಳೆಸುವುದು ಮಾಡಲಾಗುತ್ತಿಲ್ಲ. ಬದಲಾಗಿ ಜಾತಿ, ಧರ್ಮ ಭೇದವಿಲ್ಲದೇ ಮಕ್ಕಳಿಗೆ ಸಮನಾಗಿ ಪಾಳಿ ಹಾಕಿ ಅದರಂತೆ ಮಕ್ಕಳಿಂದ ಕೆಲಸ ಮಾಡಿಸಲಾಗುತ್ತಿದೆ.
ಮಕ್ಕಳಿಂದ ಮಾಡಿಸದೇ ಹೋದಲ್ಲಿ ಶಿಕ್ಷಕರು ಸ್ವಂತ ಖರ್ಚಿನಿಂದ ಇದನ್ನೆಲ್ಲ ಮಾಡಿಸಲು ಸಾಧ್ಯವೇ?
ನಾನು ಶಾಲೆಗೆ ಹೋಗುವಾಗ ತರಗತಿಯ ಕಸ ಗುಡಿಸುವುದು, ತರಗತಿ ಸಮಯಕ್ಕೆ ಸರಿಯಾಗಿ ಗಂಟೆ ಭಾರಿಸುವುದು, ಎತ್ತರದಲ್ಲಿದ್ದ ಮೂರೂರು ಶಾಲೆಯಿಂದ ಕೊಂಚ ಕೆಳಗಿದ್ದ ಈಶ್ವರ ದೇವಸ್ಥಾನದ ಬಳಿಯಿದ್ದ ಊರಿನ ಅತ್ಯಂತ ಆಳದ ಬಾವಿಯಿಂದ ನೀರು ಸೇದಿ ತರುವುದು ಇವನ್ನೆಲ್ಲ ಮಕ್ಕಳೇ ಮಾಡುತ್ತಿದ್ದರು. ಯಾವ ಮಕ್ಕಳೂ ಅದನ್ನು ಶೋಷಣೆ ಎಂದು ಒಂದು ಕ್ಷಣಕ್ಕೂ ಭಾವಿಸಿರಲಿಲ್ಲ. ಪಾಳಿ ಪ್ರಕಾರ ಬರುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಮೇ 30-31ರಂದು ಶಾಲೆಗೆ ಹೋಗಿ ತರಗತಿಗಳನ್ನು ಸ್ವಚ್ಛಗೊಳಿಸಿ, ಜೂ.1ರಂದು ಶಾಲೆ ಆರಂಭಕ್ಕೆ ಸಿದ್ಧಗೊಳಿಸುವ ಕೆಲಸವನ್ನೂ ಮಕ್ಕಳೇ ಮಾಡುತ್ತಿದ್ದರು.
ನನಗೆ ಕಲಿಸಿದ ಶಾರದಕ್ಕೋರು ಪ್ರತಿ ಶನಿವಾರ ಬ್ಯಾಂಕಿನಿಂದ ಹಣ ತರಲು ನನ್ನನ್ನು ಕಳುಹಿಸುತ್ತಿದ್ದರು. ಅದರ ಪರಿಣಾಮವಾಗಿ ನಾನು ಸಣ್ಣ ವಯಸ್ಸಿನಲ್ಲಿಯೇ ಬ್ಯಾಂಕಿನ ವ್ಯವಹಾರದ ಬಗ್ಗೆ ಕಲಿತುಕೊಂಡೆ. ಬ್ಯಾಂಕ್ ಎಂದರೇನು? ಅಲ್ಲಿನ ವ್ಯವಸ್ಥೆಗಳೇನು? ಚೆಕ್ ಹೇಗಿರುತ್ತೆ? ಇವೆಲ್ಲವನ್ನೂ ಅರಿತುಕೊಂಡಿದ್ದು ಅವರಿಂದಲೇ. ಅವರು ಹಣ ತರಿಸುವ ಮೂಲಕ ನನ್ನನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಒಂದು ಕ್ಷಣಕೂಡ ನಾನು ಯೋಚಿಸಿರಲಿಲ್ಲ. ಇವತ್ತಿಗೂ ಹಾಗೆ ಅನಿಸಿಲ್ಲ.
ಆಗ ಮಕ್ಕಳ ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಹಾಗಿತ್ತು. ಶಾಲೆಯಲ್ಲಿ, ಕಲಿಸುವಾಗ, ಮಕ್ಕಳು ತಪ್ಪು ಮಾಡಿದಾಗ, ಬಯ್ಯುವುದು, ಹೊಡೆಯುವುದು ಇತ್ತು. ಆದರೆ ಮಕ್ಕಳನ್ನು ಅಷ್ಟೇ ಕಾಳಜಿ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಶಿಕ್ಷಕರು ಮತ್ತು ಮಕ್ಕಳ ನಡುವೆ ಭಾವನಾತ್ಮಕ ಬಾಂಧವ್ಯ ಇತ್ತು. ಮಕ್ಕಳಿಗೆ ಶಿಕ್ಷಕರ ಮೇಲೆ ಗೌರವವಿತ್ತು. ಭಯವಿತ್ತು. ಅದೆಲ್ಲ ಕೂಡಿದ ಪ್ರೀತಿಯಿತ್ತು.
ಬಹುಶಃ ನಾವೀಗ ಜಾಗೃತರಾಗಿದ್ದೇವೆ. ಆದ್ದರಿಂದಲೇ ಹೀಗೆ. ಮೊದಲೆಲ್ಲ ಶಿಕ್ಷಕರು ಶೋಷಣೆ ಮಾಡುತ್ತಿದ್ದರೂ ನಮಗೆ ಅದರ ಅರಿವಿಲ್ಲದೇ ಇದ್ದುದರಿಂದ ನಮಗದು ಶೋಷಣೆ ಎಂದು ಅನಿಸುತ್ತಲೇ ಇರಲಿಲ್ಲ ಎಂದು ವಾದಿಸುವವರೂ ಇರಬಹುದು. ನಮಗೆ ಜಾಗೃತಿ ಇರಬೇಕು. ಅದರಿಂದ ನಮಗೆ, ಸಮಾಜಕ್ಕೆ ಒಳ್ಳೆಯದಾಗಬೇಕು. ಆದರೆ ಮಿತಿಮೀರಿದ ಜಾಗೃತಿ ಬಹುಶಃ ನಮಗೆ ಮಾರಕವಾಗಲೂಬಹುದು.
ಯಾಕೆಂದರೆ ಈ ಜಾಗೃತಿಯ ಮೂಲಕವೇ ನಾವು ಶಿಕ್ಷಕರ ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನೇ ಹಾಳುಮಾಡಿದ್ದೇವೆ. ಶಿಕ್ಷಕರು ಮಕ್ಕಳಿಗೆ ಬಯ್ಯುವಂತಿಲ್ಲ. ಅವರಿಗೆ ಏನೂ ಬರದಿದ್ದರೂ ಪರೀಕ್ಷೆಯಲ್ಲಿ ಫೇಲ್ ಮಾಡುವಂತಿಲ್ಲ. ಶಾಲೆ ಆರಂಭದ ದಿನ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಬೇಕು. ಮಕ್ಕಳಿಗಾಗಿ ಶಾಲೆಯನ್ನು ಸಿಂಗರಿಸಿಡಬೇಕು. ಮಕ್ಕಳಿಗೆ ಎಲ್ಲಿಲ್ಲದ ರಾಜಮರ್ಯಾದೆ.
ಮಕ್ಕಳಿಗೆ ಮರ್ಯಾದೆ ಕೊಡಬಾರದು ಎಂದಲ್ಲ. ಆದರೆ ಹೀಗೆಲ್ಲ ಮಾಡುವುದರಿಂದ ಮಕ್ಕಳಿಗೆ ನಾವೇನೋ ದೊಡ್ಡ ಜನ. ಶಿಕ್ಷಕರು ನಮ್ಮ ಅನುಕೂಲಕ್ಕೆ ಇರುವವರು ಎಂಬ ಭಾವನೆ ಬರುತ್ತದೆ. ಅವರ ಕುರಿತಾಗಿ ಭಯ, ಭಕ್ತಿ ಇರುವುದಿಲ್ಲ. ಶಿಕ್ಷಕರಿಗೂ ಮಕ್ಕಳ ಬಗ್ಗೆ ಪ್ರೀತಿ ಇರುವುದಿಲ್ಲ. ಜಾಗೃತಿಯ ನೆಪದಲ್ಲಿ ನಾವು ಶಿಕ್ಷಕರು ಮತ್ತು ಮಕ್ಕಳ ನಡುವೆ ಕಂದಕ ಸೃಷ್ಟಿಸುತ್ತಿದ್ದೇವೆ. ಮಕ್ಕಳ ಹಕ್ಕುಗಳನ್ನು ಕಾಪಾಡುವ ಭರದಲ್ಲಿ ಶಿಕ್ಷಕರ ಗೌರವ, ಮಕ್ಕಳಿಗೆ ಶಿಕ್ಷಕರ ಬಗ್ಗೆ ಇರಬೇಕಾದ ಭಾವನೆಗಳನ್ನು ಕಲುಷಿತಗೊಳಿಸುತ್ತಿದ್ದೇವೆ.
ಕ್ರೀಡೆಯಲ್ಲಿ ಭಾಗವಹಿಸುವಾಗ ಮಕ್ಕಳಿಗೆ ಪೆಟ್ಟಾದರೆ ಶಿಕ್ಷಕರೇ ಹೊಣೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಚ್ಚು ಕಡಿಮೆಯಾದರೂ ಶಿಕ್ಷಕರೇ ಹೊಣೆ, ಅಂಕ ಕಡಿಮೆ ಬಂದರೂ ಅವರೇ ಹೊಣೆ, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲಿ, ಶಾಲೆಯಲ್ಲಿ ಶೌಚಾಲಯ ಸರಿ ಇರದೇ ಇರಲಿ, ಇದ್ದ ಶೌಚಾಲಯ ಸ್ವಚ್ಛವಿಲ್ಲದಿದ್ದರೆ, ಸ್ವಚ್ಛ ಮಾಡಿಸಿದರೆ ಹೀಗೆ ಶಾಲೆಯಲ್ಲಾಗುವ ಪ್ರತಿಯೊಂದು ಆಗು ಹೋಗುಗಳಿಗೂ ಅವರನ್ನೇ ಹೊಣೆ ಮಾಡುತ್ತಿದ್ದೇವೆ.
ಗುರುಭ್ಯೋ ನಮಃ ಎಂಬ ಮಾತು ಹುಟ್ಟಿದ್ದು ನಮ್ಮದೇ ದೇಶದಲ್ಲಾ? ತಂದೆ-ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡಿದ್ದು ಇದೇ ಸಮಾಜವಾ?
ಗುರುರ್ಬ್ರಹ್ಮ, ಗುರುರ್ವಿಷ್ಣು
ಗುರುದೇವೋ ಮಹೇಶ್ವರಃ
ಗುರುಃ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
ಎಂಬ ಶ್ಲೋಕ ಹೇಳಿ ಬೆಳೆದ ನಾವೇ ಇಂತಹ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆಯೇ ಎಂಬ ಅನುಮಾನ ಕಾಡುತ್ತಿದೆ.
ಶಿಕ್ಷಕರು ಅಂದರೆ ಅವರು ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರದಿಂದ ನೇಮಕಗೊಂಡವರು. ಮಕ್ಕಳ ಚಾಕರಿ ಮಾಡಲಲ್ಲ. ಮಕ್ಕಳ ಸಾವಿನ ನಂತರ ಬಿಹಾರದಲ್ಲಿ ಮುಖ್ಯ ಶಿಕ್ಷಕರು ಮೊದಲು ಊಟ ಮಾಡಿ ನಂತರ ಮಕ್ಕಳು ಊಟ ಮಾಡಬೇಕು ಎಂಬ ಕಾನೂನು ತರಲಾಗಿದೆ. ಇದನ್ನು ವಿರೋಧಿಸಿರುವ ಶಿಕ್ಷಕರು ಹೇಗೆ ಮಧ್ಯಾಹ್ನದ ಬಿಸಿಯೂಟ ಪಠ್ಯಕ್ಕೆ ಸಂಬಂಧಿಸಿದ್ದಲ್ಲ ಎಂಬ ಕಾರಣ ನೀಡಿ ಅದನ್ನು ಬಹಿಷ್ಕರಿಸಲು ಮುಂದಾಗಿದ್ದಾರೋ, ಮುಂದೊಮ್ಮೆ ರಾಜ್ಯದಲ್ಲೂ ಅಂತಹದೇ ಸ್ಥಿತಿ ನಿರ್ಮಾಣವಾಗಬಹುದು. ಶಿಕ್ಷಕರ ಮತ್ತು ಮಕ್ಕಳ ನಡುವಿನ ಬಾಂಧವ್ಯ ಕೇವಲ ತಾಂತ್ರಿಕವಾಗಿಬಿಡಬಹುದು. ಶಾಲೆಯ ಬೇರಾವ ಚಾಕರಿಯನ್ನೂ ನಾವು ಮಾಡುವುದಿಲ್ಲ. ಬೇಕಿದ್ದರೆ ಸರ್ಕಾರ ಗುಮಾಸ್ತ ಮತ್ತು ಡಿ ಗ್ರೂಪ್ ನೌಕರರನ್ನು ನೇಮಿಸಲಿ ಎಂದು ಅವರು ಹೇಳಬಹುದು. ಇಷ್ಟೆಲ್ಲ ಆಗಿ ಶಾಲೆಯ ಸಂಪೂರ್ಣ ವಾತಾವರಣ ಹಾಳಾಗುವ ಬದಲು, ಅವರ ಶಾಲೆಯ ವಾತಾವರಣ ಶುದ್ಧವಾಗಿಟ್ಟುಕೊಳ್ಳಲು ಮಕ್ಕಳು ಅವರ ಕೊಡುಗೆ ನೀಡಲಿ. ಆ ಮೂಲಕ ಮುಂದೆ ಮನೆಯಲ್ಲಿ, ಮನೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದನ್ನು ಕಲಿತುಕೊಳ್ಳಲಿ.
ಸಿಂಗಾಪೂರದಲ್ಲಿ ಶಾಲೆ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಎಂಬ ಕಾರ್ಯಕ್ರಮವೊಂದಿದೆ. ಆ ಕಾರ್ಯಕ್ರಮದಲ್ಲಿ ಮಕ್ಕಳಿಂದ ಒಂದು ವಾರ ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸುತ್ತಾರೆಂದು ನಮ್ಮ ಸಂಬಂಧಿಯೊಬ್ಬರ ಮಗಳು ಹೇಳುತ್ತಿದ್ದಳು. ನಾವು ನೋಡಿದರೆ ನಮ್ಮದೇ ಶಾಲೆಯ ಶೌಚಾಲಯ ಸ್ವಚ್ಛ ಮಾಡಿಸಿದ್ದಕ್ಕೆ ಶಿಕ್ಷಕರನ್ನು ಅಮಾನತು ಮಾಡುತ್ತೇವೆ!
- ವಿನಾಯಕ ಭಟ್ಟ ಮೂರೂರು
vakradanta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


