ಅಂಕಣಗಳು

ಬಿಸಿಯೂಟದಲ್ಲಿ ಬೇಯುತ್ತಿರುವ ಅಡುಗೆ ತಯಾರಕರು

Published On :

ಬೆಳಗ್ಗೆ 9 ಗಂಟೆಗೆ ಬರಬೇಕು. ಅಡುಗೆ ಮಾಡುವ ಮುನ್ನ ಎಲ್ಲ ಪದಾರ್ಥಗಳನ್ನು ಸ್ವಚ್ಛ ಮಾಡಿಟ್ಟುಕೊಳ್ಳಬೇಕು. ಆದಾದ ನಂತರ ಅಡುಗೆ ಮಾಡಬೇಕು. ಅಡುಗೆಯಾದ ಮೇಲೆ ಮಕ್ಕಳು ಊಟ ಮಾಡಿ ನೆಮ್ಮದಿಯಾಗಿದ್ದಾರೆ ಎನ್ನುವವರೆಗೂ ಕಣ್ಣುಬಿಟ್ಟು ನೋಡಿಕೊಳ್ಳಬೇಕು. ಅದಾದ ಬಳಿಕ ಅಡುಗೆ ಮಾಡಿದ ಎಲ್ಲ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಸಂಜೆ ನಾಲ್ಕು ಗಂಟೆವರೆಗೂ ಬಿಡುವಿಲ್ಲದೆ ಕೆಲಸ ಮಾಡಬೇಕು. ಅಷ್ಟೇ ಯಾಕೆ, ಗ್ಯಾಸ್ ಖಾಲಿಯಾದಾಗಲೆಲ್ಲ ಅಡವಿ ಸುತ್ತಾಡಿ ಕಟ್ಟಿಗೆ ತರಬೇಕು. ಇಷ್ಟೆಲ್ಲ ಕೆಲಸ ಮಾಡುವವರಿಗೆ ಅಬ್ಬಬ್ಬಾ ಎಂದರೆ ಪ್ರತಿ ದಿನ ರು. 33ರಿಂದ 36 ನೀಡಲಾಗುತ್ತದೆ.
ಹೌದು, ಇದು ಕಠೋರ ಸತ್ಯ. ಪ್ರಪಂಚದ ಯಾವ ದೇಶದಲ್ಲಿಯೂ ಇಷ್ಟೊಂದು ಕಡಿಮೆ ಕೂಲಿ ನೀಡುವುದಿಲ್ಲ. ಆದರೆ, ಸರ್ಕಾರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಇಷ್ಟೊಂದು ಕಡಿಮೆ ವೇತನ ನೀಡುತ್ತಿರುವುದು ಅಮಾನವೀಯದ ಪರಮಾವಧಿ ಅಲ್ಲದೇ ಮತ್ತೇನು? ಇಷ್ಟೆ ಅಲ್ಲದೆ, ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಹೇಳುವ ಎಲ್ಲ ಕೆಲಸವನ್ನೂ ಮಾಡಬೇಕು.
ಸರ್ಕಾರ ಪ್ರಾರಂಭಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ರಾಜ್ಯದಲ್ಲಿ ಸುಮಾರು ರು. 1ಲಕ್ಷ 5 ಸಾವಿರ ಮಹಿಳೆಯರು ಕೆಲಸ ಮಾಡುತ್ತಾರೆ. ಇವರೆಲ್ಲರೂ ಬಿಸಿಯೂಟದ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದಾರೆ. 13 ವರ್ಷಗಳಿಂದ ಹೀಗೆ ಶೋಷಣೆಯಲ್ಲಿ ಬದುಕು ಸಾಗಿಸುತ್ತಿರುವ ಇವರು ಇಂದಲ್ಲ ನಾಳೆ ನಮ್ಮ ಬದುಕು ಹಸನಾಗುತ್ತದೆ. ನಮಗೂ ಸರ್ಕಾರ ಕನಿಷ್ಠ ಕೂಲಿ ನೀಡುತ್ತದೆ ಎಂದು ಬೆಂಕಿಯ ಮುಂದೆ ಬೇಯುತ್ತಿದ್ದರೂ ಸರ್ಕಾರ ಕಣ್ಣು ತೆರೆಯುತ್ತಲೇ ಇಲ್ಲ. ಹೀಗೆ ಕೆಲಸ ಮಾಡುವ ಮುಖ್ಯ ಅಡುಗೆದಾರರಿಗೆ ತಿಂಗಳಿಗೆ ರು. 1100 ಹಾಗೂ ಅಡುಗೆ ಸಹಾಯಕರಿಗೆ ರು. 1000 ನೀಡುತ್ತಾರೆ.
ಇಷ್ಟೊಂದು ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವವರ ಮೇಲೆ ನೂರಾರು ಹದ್ದಿನ ಕಣ್ಣು. ಒಂದು ಗಂಟೆ ತಡವಾಗಿ ಬಂದರೆ ಅಂದು ಬಿಸಿಯೂಟವೇ ತಡವಾಗುತ್ತದೆ. ಪರಿಣಾಮ ಶಾಲೆಯ ಎಲ್ಲ ವ್ಯವಸ್ಥೆಯೂ ಅವ್ಯವಸ್ಥೆಯಾಗುತ್ತದೆ. ಹೀಗಾಗಿ, ಮುಖ್ಯೋಪಾಧ್ಯಾಯರು ಅಡುಗೆದಾರರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ತಡವಾಗಿ ಬಂದಾಗಲೆಲ್ಲ ಗದರಿಸುತ್ತಾರೆ. ಮನ ಬಂದಂತೆ ಬೈಯುತ್ತಾರೆ. ಇನ್ನು ಇಡೀ ಗ್ರಾಮಸ್ಥರೇ ಇವರನ್ನು ತಪ್ಪು ಮಾಡಿದವರಂತೆ ಕಾಣುತ್ತಾರೆ. ಒಂದಿಲ್ಲೊಂದು ಕಾರಣ ಮುಂದೆ ಮಾಡಿ ಕಿತ್ತೊಗೆದು ತಮಗೆ ಬೇಕಾದವರನ್ನು ಸೇರಿಸಬೇಕು ಎಂದು ಶತಾಯಗತಾಯ ಶ್ರಮಿಸುತ್ತಿರುತ್ತಾರೆ. ಕಾರಣ, ಇದಕ್ಕಾಗಿಯೇ ಬಿಸಿಯೂಟದ ಕುರಿತು ಆಗಾಗ ಇಲ್ಲಸಲ್ಲದ ಕ್ಯಾತೆ ತೆಗೆಯುತ್ತಾರೆ. ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಎಂದು ಗೋಳಾಡಿಸುತ್ತಿರುತ್ತಾರೆ. ಅಷ್ಟೇ ಅಲ್ಲ, ಕೆಲಸ ಮುಗಿಸಿ ಮನೆಗೆ ಹೋಗುವಾಗ ಆಹಾರ ಪದಾರ್ಥ ತೆಗೆದುಕೊಂಡು ಹೋಗುತ್ತಾರೋ ಏನೋ ಎನ್ನುವಂತೆ ದುರುಗುಟ್ಟಿಸಿಕೊಂಡು ನೋಡುತ್ತಾರೆ. ಕೆಲವೊಮ್ಮೆ ಪರಿಶೀಲಿಸುವುದು ಉಂಟು. ಆಗಂತೂ ಮಹಿಳೆಯರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.
ಇಷ್ಟಕ್ಕೂ ಬಿಸಿಯೂಟ ಕಾರ್ಯಕರ್ತರಿಗೆ ಭದ್ರತೆಯೇ ಇಲ್ಲ. ಅವರನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಮನೆಗೆ ಕಳುಹಿಸಬಹುದಾಗಿರುವುದರಿಂದ ಆಗಾಗ ಹೊರಹಾಕುವುದು ಸೇರಿದಂತೆ ನಾನಾ ರೀತಿಯ ಕ್ರಮ ಜರುಗುತ್ತಲೇ ಇರುತ್ತವೆ. ಇವರಿಗೆ ಸರ್ಕಾರದಿಂದ ಯಾವುದೇ ಭದ್ರತೆಯೂ ಇಲ್ಲ. ಸೌಲಭ್ಯವೂ ಇಲ್ಲ. ಬೆಂಕಿಯಲ್ಲಿ ಬೇಯುತ್ತಿದ್ದರೂ ರಕ್ಷಣೆ ಇಲ್ಲ. ಇವರನ್ನು ಆ ದೇವರೆ ಕಾಪಾಡಬೇಕು. ಭದ್ರತೆಗಾಗಿ ಸುಮಾರು ವರ್ಷಗಳಿಂದ ಇವರು ಹೋರಾಡುತ್ತಲೇ ಬಂದರೂ ರಾಜ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಇವರನ್ನು ಕಾಯಂ ಮಾಡುವುದಿರಲಿ ಕನಿಷ್ಠ ವೇತನವನ್ನಾದರೂ ನೀಡಲು ಮನಸ್ಸು ಮಾಡುತ್ತಿಲ್ಲ. ಇದಕ್ಕಾಗಿ ಸಾಲು ಸಾಲು ಹೋರಾಟ ನಡೆದಿದ್ದರೂ ಸರ್ಕಾರ ಕಣ್ಣು ತೆರೆದಿಲ್ಲ.
ಭದ್ರತೆಯೇ ಇಲ್ಲದೆ ಕೆಲಸ ಮಾಡುತ್ತಿರುವ ಇವರ ಆರೋಗ್ಯವೂ ಹದಗೆಡಲಾರಂಭಿಸಿದೆ. ಬೆಂಕಿಯ ಮುಂದೆ ಕುಳಿತು ಅಡುಗೆ ಮಾಡುವುದರಿಂದ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಕನಿಷ್ಠ ಆರೋಗ್ಯ ವಿಮೆಯನ್ನಾದರೂ ಮಾಡಿಸಿಕೊಡಿ ಎನ್ನುವ ಬೇಡಿಕೆಯೂ ಈಡೇರಿಲ್ಲವಾದ್ದರಿಂದ ಇವರು ಪಾಡು ಹೇಳತೀರದಾಗಿದೆ.
ಸರ್ಕಾರಿ ಕೆಲಸದಲ್ಲಿರುವ ಎಲ್ಲರ ವೇತನಕ್ಕೂ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಹೆಚ್ಚಳ ಮಾಡಲಾಗುತ್ತದೆ. ಇನ್ನು ಆಗಾಗ ವೇತನ ಪರಿಷ್ಕರಣೆ ನಡೆಯುತ್ತದೆ. ಆದರೆ, ಬಿಸಿಯೂಟದಲ್ಲಿ ಕೆಲಸ ಮಾಡುವವರ ವೇತನ ಪರಿಷ್ಕರಣೆಯಾಗುವುದೇ ಇಲ್ಲ. 13 ವರ್ಷದಲ್ಲಿ ಕೇವಲ ಒಂದು ಸಾರಿ ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂಥ ಸ್ಥಿತಿಯಲ್ಲಿ ಸಾವಿರ ರುಪಾಯಿಯಲ್ಲಿ ತಿಂಗಳ ಪೂರ್ತಿ ಕುಟುಂಬ ನಿರ್ವಹಣೆ ಮಾಡುವುದಲ್ಲ, ಒಬ್ಬರ ತುತ್ತಿನ ಚೀಲವೂ ತುಂಬುವುದಿಲ್ಲ. ಕನಿಷ್ಠ ಊಟಕ್ಕಾಗುವಷ್ಟಾದರೂ ವೇತನ ನೀಡಬೇಕಲ್ಲವೇ?
ಬಿಸಿಯೂಟ ಕಾರ್ಯಕರ್ತರ ಬೇಡಿಕೆಗಳು: 1) ಕನಿಷ್ಠ ಹತ್ತು ಸಾವಿರ ಗೌರವಧನ 2) ಸೇವಾ ಭದ್ರತೆ 3) ನಿವೃತ್ತಿ ವೇತನ ನಿಗದಿ 4) ಕೆಲಸದ ಸಂದರ್ಭದಲ್ಲಿ ಅಪಘಾತವಾದರೇ ಲಕ್ಷ ರುಪಾಯಿ ಪರಿಹಾರ 5) ಕಿರುಕುಳವನ್ನು ತಪ್ಪಿಸಲು ನಿಯಮರೂಪಿಸಬೇಕು 6) ಜೀತದಾಳಿನಂತೆ ದುಡಿಸಿಕೊಳ್ಳುವ ಮುಖ್ಯೋಪಾಧ್ಯಾಯರ ಮೇಲೆ ಕ್ರಮ 7) ಕೆಲಸದಿಂದ ತೆಗೆದು ಹಾಕಿರುವವರನ್ನು ಮರಳಿ ಸೇರಿಸಿಕೊಳ್ಳಬೇಕು 8) ಆರೋಪ ಸಾಬೀತಾದರೆ ಮಾತ್ರ ಕ್ರಮಕೈಗೊಳ್ಳಬೇಕು 9) ವಿಮಾ ಸೌಲಭ್ಯವನ್ನು ಒದಗಿಸಬೇಕು 10) ಸಮವಸ್ತ್ರ ನೀಡಬೇಕು 11) ಅಡುಗೆದಾರರಿಗೆ ರಕ್ಷಣಾ ಸಾಮಗ್ರಿ ಒದಗಿಸಬೇಕು 12) ಬಿಪಿಎಲ್ ಪಡಿತರ ಚೀಟಿಯನ್ನು ನೀಡಬೇಕು 13) ಆರೋಗ್ಯ ಸೌಲಭ್ಯ 14) ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡಬೇಕು.

- ಸೋಮರಡ್ಡಿ ಅಳವಂಡಿ,
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.