ಪ್ರವಾಹೋತ್ತರಕಾಂಡ, ಭಾಗ-2
ಮನುಷ್ಯನಾದವನು ಅದನ್ನು ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಸುತ್ತೆಲ್ಲ ಹೆಣದ ರಾಶಿ. ಅದೂ ಕೊಳೆತು ನಾರಲಾರಂಭಿಸಿತ್ತು. ಹೊಟ್ಟೆಯೊಳಗೆ ಏನೆಂದೂ ಎನೂ ಇಲ್ಲದಿದ್ದರೂ ಕರುಳೇ ಬಾಯಿಗೆ ಬಂದುಬಿಡಬಹುದೇನೋ ಎಂಬ ರೀತಿಯ ವಾಕರಿಕೆ. ಹೇವರಿಕೆ. ಜೀವ ಭಯ ಹುಟ್ಟಿಸಿ ಹೋದ ಆ ಕರಾಳ ರಾತ್ರಿಯ ಪ್ರವಾಹ, ಅದನ್ನು ಮತ್ತೆ ಮತ್ತೆ ನೆನಪಿಸಲೋ ಎಂಬಂತೆ ಕಣ್ಣೆದುರಲ್ಲೇ ಮೈದುಂಬಿ ಹರಿಯುತ್ತಾ ವ್ಯಂಗ್ಯ ಮಾಡುತ್ತಿರುವ ನದಿ. ಬಂಧುಗಳನ್ನು, ಹೆತ್ತವರನ್ನು, ಸೋದರರನ್ನು, ಮಕ್ಕಳನ್ನು ಕಳೆದುಕೊಂಡು ಮಡುಗಟ್ಟಿದ ದುಃಖ, ಹೇಗೋ ತಾನೊಬ್ಬ ಬಚಾವಾದೆನಲ್ಲಾ ಎಂಬುದಕ್ಕೆ ಸಂತಸಪಡಬೇಕೋ, ತನ್ನವರನ್ನು ಕಳೆದುಕೊಂಡದ್ದರ ಬಗ್ಗೆ ಮರುಗಬೇಕೋ ಅರಿಯದ ಮನಃಸ್ಥಿತಿ, ಮುಂದೆ ನಿಂತಿರುವ ಕರಾಳ ಭವಿಷ್ಯದ ಪ್ರಶ್ನೆ, ಇಲ್ಲಿಂದ ಪಾರಾಗಿ ಹೋಗುವುದು ಹೇಗೆಂಬ ಬಗ್ಗೆ ಚಿಂತೆ, ಕನಿಷ್ಠ ನೀರಿಗೂ ಪರದಾಡುವ ಸ್ಥಿತಿ... ಇವೆಲ್ಲದರ ನಡುವೆ ಸೇನಾ ಸಿಬ್ಬಂದಿ ತಂದು ಹಂಚುವ ಆಹಾರ ಪೊಟ್ಟಣವನ್ನು ಬಿಚ್ಚಿ ಹೆಣಗಳ ರಾಶಿಯ ಎದುರೇ ಕುಳಿತು ತಿಂದು ಬದುಕಬೇಕಾದ ಅನಿವಾರ್ಯತೆ!
ವೈರಿಗಳಿಗೂ ಬಯಸದ ಸ್ಥಿತಿಯಲ್ಲಿ ಆ ಒಂಬತ್ತು ದಿನಗಳನ್ನು ಕಳೆದದ್ದನ್ನು ನೆನಪಿಸಿಕೊಳ್ಳುತ್ತಾನೆ ಕೇದಾರನಾಥದ ಪಕ್ಕದಲ್ಲೇ ಇರುವ ಗೌರಿಗಾಂವ್ಗೆ ಉದ್ಯೋಗಕ್ಕಾಗಿ ಬಂದಿದ್ದ ಘರ್ವಾಲ್ನ ಮಹೇಂದರ್. ಮೂಲತಃ ನೇಪಾಳದವನಾತ. ಇತ್ತ ವಲಸೆ ಬಂದು ಸಾಕಷ್ಟು ವರ್ಷಗಳಾದವು. ಹೆಂಡತಿ ಮಕ್ಕಳು ಎಲ್ಲರೂ ಗ್ರಾಮದಲ್ಲಿದ್ದರೆ, ಪ್ರತಿವರ್ಷ ಮಾರ್ಚ್ನಿಂದ ಸೆಪ್ಟೆಂಬರ್, ಅಕ್ಟೋಬರ್ವರೆಗೆ ಕೇದಾರಕ್ಕೆ ಆಗಮಿಸುವ ಯಾತ್ರಾರ್ಥಿಗಳ ಲಗ್ಗೇಜು ಹೊತ್ತು ಅವರು ಕೊಟ್ಟ ಹಣದಲ್ಲಿ ವರ್ಷದ ತುತ್ತನ್ನು ಕಂಡುಕೊಳ್ಳುವವ. ಅವತ್ತಿನ ಹಿಮಾಲಯದ ಸುನಾಮಿಗೆ ಆತ ಪ್ರತ್ಯಕ್ಷ ಸಾಕ್ಷಿ. ಊರಿಗೆ 9 ದಿನಗಳ ನಂತರ ಹಿಂದಿರುಗಿ, ಇದೀಗ ತಿಂಗಳ ನಂತರ ಮತ್ತೆ ಹೊಟ್ಟೆಪಾಡು ಅರಸಿ ಸೋನ್ ಪ್ರಯಾಗಕ್ಕೆ ಬಂದಿಳಿದಿದ್ದಾನೆ.
ಆ ದಿನಗಳಲ್ಲಿ ಬದುಕುಳಿದ ಒಬ್ಬೊಬ್ಬರೂ ಪಡುತ್ತಿದ್ದ ಪಾಡನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾನೆ. ಸತ್ತವರೇನೋ ಕ್ಷಣದಲ್ಲಿ ಎಲ್ಲ ನೋವನ್ನೂ ಕಳಕೊಂಡು ಬಿಟ್ಟಿದ್ದರು. ಆದರೆ ಅಲ್ಲಿ ಬದುಕುಳಿದವರು ಪ್ರತಿಕ್ಷಣವೂ ಸಾವಿನ ಭೀತಿ ಎದುರಿಸುತ್ತಾ ಕಳೆಯುತ್ತಿದ್ದುದು ಕಂಡಾಗ ವಿಧಿಯ ಮೇಲೆ ವಿಪರೀತ ಕೋಪ ಬಂದಿತ್ತು ಎಂದು ಅವುಡುಗಚ್ಚುತ್ತಾನೆ 45ರ ಆಸುಪಾಸಿನ ಆತ. ಒಂದೊಂದು ಹೆಲಿಕಾಫ್ಟರ್ ಬಂದಾಗಲೂ ಬದುಕಿನ ಅಲ್ಲಿದ್ದವರ ಬದುಕಿನ ಆಸೆ ಚಿಗುರೊಡೆಯುತ್ತಿತ್ತು. ಆಹಾರ ಪೊಟ್ಟಣಗಳನ್ನು ತಂದಾಗಲಂತೂ ಹಸಿಮಾಂಸಕ್ಕೆ ಹದ್ದುಗಳು ಹೊಡೆದಾಡುತ್ತಿದ್ದಂತೆ ಕಾಣುತ್ತಿತ್ತು. ನೂಕು ನುಗ್ಗಲಿನಲ್ಲಿ ದುರ್ಬಲರು, ಹೆಂಗಸರು, ಮಕ್ಕಳ ಕೈಯಿಂದ ಆಹಾರವನ್ನೇ ಕಿತ್ತುಕೊಳ್ಳುವ ಮಟ್ಟಕ್ಕೆ ರಾಕ್ಷಸೀಯ ವರ್ತನೆ ಮನಮಾಡಿತ್ತು ಆ ಸನ್ನಿವೇಶಕ್ಕೆ ಸಿಲುಕಿದ್ದ ಮನುಷ್ಯರಲ್ಲಿ. ಅದೊಂದು ದಿನ ಒಂದು ಮಗುವಂತೂ ತನಗೆ ಸಿಕ್ಕ ಆಹಾರದ ಪೊಟ್ಟಣವನ್ನು ಕಸಿದುಕೊಂಡಾರೆಂಬ ಆತಂಕದಲ್ಲಿ ದೂರ ಹೋಗಿ, ಹೆಣಗಳು ಬಿದ್ದಿದ್ದ ಪಕ್ಕದಲ್ಲೇ ಕುಳಿತು ಬಚ್ಚಿಟ್ಟುಕೊಂಡು ತಿನ್ನುತ್ತಿದ್ದ ಕರುಳು ಹಿಂಡುವ ದೃಶ್ಯವನ್ನು ತಾನು ಜೀವನದಲ್ಲಿ ಮರೆಯಲಾರೆ ಎನ್ನುತ್ತಾ ಅಂದಿನ ಬೀಭತ್ಸವನ್ನು ಬಣ್ಣಿಸುತ್ತಾನೆ ಮಹೇಂದರ್.
ತನ್ನ ಕರ್ಮಭೂಮಿ ಗೌರಿಗಾಂವ್ನ ಬಗ್ಗೆ ಅಲ್ಲಿನ ನಿವಾಸಿಗಳ ಬಗ್ಗೆ ಅವನಿಗೆ ಎಲ್ಲಿಲ್ಲದ ಹೆಮ್ಮೆ. ಕೇವಲ ಹತ್ತು ಹದಿನೈದು ಮನೆಗಳಿರುವ ಗೌರಿಗಾಂವ್ನ ಪುಟ್ಟ ಜನಸಂಖ್ಯೆ ಅವತ್ತು ತೋರಿದ ಔದಾರ್ಯ, ಮಾನವತೆ, ತಾಳ್ಮೆ ನಿಜಕ್ಕೂ ಮಾನವ ಕುಲಕ್ಕೇ ಮಾದರಿ ಎನ್ನುತ್ತಾನೆ. ಏನಿಲ್ಲವೆಂದರೂ ಸಾವಿರಕ್ಕೂ ಮಿಕ್ಕು ಪ್ರವಾಸಿಗಳು ಆ ರಾತ್ರಿ ಅಲ್ಲಿ ಸಿಲುಕಿ ಬಿದ್ದಿದ್ದರು. ಸ್ವತಃ ಗ್ರಾಮಸ್ಥರೂ ಪ್ರವಾಹದ ಬಿಸಿಗೆ ನಲುಗಿದವರೇ ಆಗಿದ್ದರು. ಆದರೂ ಹೊರಗಿನಿಂದ ಬಂದವರಿಗೆ ತಮ್ಮ ಪುಟ್ಟ, ಪುಟ್ಟ ಮನೆಗಳಲ್ಲೇ ಆಶ್ರಯ ನೀಡಿ, ಸತ್ಕರಿಸಿ, ತಮ್ಮಲ್ಲಿದ್ದ ಆಹಾರ- ಔಷಧಗಳನ್ನು ನೀಡಿ ಉಪಚರಿಸಿ ಭಾರತೀಯತೆಯನ್ನು ಎತ್ತಿ ಹಿಡಿದರು. ಗ್ರಾಮದ ಮುಖಂಡ ರಾಜೇಂದರ್ ಊರವರನ್ನೆಲ್ಲ ತಕ್ಷಣ ಒಟ್ಟು ಸೇರಿಸಿ, ಯಾತ್ರಾರ್ಥಿಗಳು ಇಲ್ಲಿಂದ ಸುರಕ್ಷಿತವಾಗಿ ತೆರಳುವವರೆಗೂ ಅವರಿಗೆ ಯಾವೊಂದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವೈಯಕ್ತಿಕ ಸುಖವನ್ನು ಬದಿಗಿಟ್ಟು ಸಾಮೂಹಿಕ ಪ್ರಯತ್ನಕ್ಕೆ ಮುಂದಾಗೋಣ ಎಂದು ಪ್ರೇರೇಪಿಸಿದ್ದರು. ಯಾತ್ರಾರ್ಥಿಗಳಿಗಾಗಿ ಹೊಲದ ಬದಿಯಲ್ಲಿ ತಾತ್ಕಾಲಿಕ ಚಪ್ಪರ ನಿರ್ಮಿಸಿ ಅವರು ಅಡುಗೆ ತಯಾರಿಸಿ ಬಡಿಸಿದ್ದರಂತೆ. ಇವತ್ತು ಆ ಗ್ರಾಮ ಒಂದು ರೀತಿಯಲ್ಲಿ ಮನೆಗೆ ಬಂದ ಬಂಧುಗಳನ್ನು ಬೀಳ್ಕೊಟ್ಟು ಖಾಲಿಯಾದ ಮನಸ್ಸಿನಂತಿದೆ. ಅವರಲ್ಲಿ ಒಂದೆಡೆ ಕೃತಾರ್ಥತೆ, ಇನ್ನೊಂದೆಡೆ ತಮ್ಮೂರಿನಲ್ಲೇ ಹೀಗಾಯಿತಲ್ಲಾ ಎಂಬ ವ್ಯಥೆ ಎರಡೂ ಮನೆ ಮಾಡಿದೆ.
ಇನ್ನು ಮಹೇಂದರ್ ಮತ್ತು ಆತನಂಥ ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಗ್ರಾಮಗಳವರನ್ನು ನಿರುದ್ಯೋಗ ಪೀಡಿಸುತ್ತಿದೆ. ಸಾವಿರಾರು ಕೂಲಿಯಾಳುಗಳು, ಹೋಟೆಲ್ ಕಾರ್ಮಿಕರು, ಲಾಡ್ಜ್ಗಳ ಮಾಲೀಕರು- ಕೆಲಸಗಾರರು, ಗೂಡಂಗಡಿ ನಡೆಸುತ್ತಿದ್ದವರು, ಚಹಾ ಗಾಡಿ ನಡೆಸುತ್ತಿದ್ದವರು, ಟ್ರ್ಯಾಕ್ಸ್ ಮತ್ತಿತರ ಸಣ್ಣಪುಟ್ಟ ವಾಹನಗಳನ್ನು ಓಡಿಸಿ ದಿನದ ಕೂಳನ್ನು ಕಂಡುಕೊಳ್ಳುತ್ತಿದ್ದ ಚಾಲಕರು ಕೆಲಸವಿಲ್ಲದೇ ಅಂಡಲೆಯುತ್ತಿದ್ದಾರೆ. ಇನ್ನು ಪ್ರವಾಹದಲ್ಲಿ ಕೊಚ್ಚಿಹೋದ ಕೂಲಿಗಳು, ಚಾಲಕರ ಕುಟುಂಬ ಅಕ್ಷರಶಃ ಅನಾಥವಾಗಿದೆ. ಸರಕಾರದ ಯಾವ ಭರವಸೆಯೂ ಅವರ ಬದುಕನ್ನು ಪುನರ್ ನಿರ್ಮಿಸಿಕೊಡುವ ಆಶಾಕಿರಣವನ್ನು ಮೂಡಿಸುತ್ತಿಲ್ಲ. ವಾಸ್ತವದಲ್ಲಿ ಸರಕಾರದ ಆದ್ಯತೆಗಳೇ ಬೇರೆ ಇರುವಾಗ ತಮ್ಮ ಬಗ್ಗೆ ಆಳುವವರು ಯೋಚಿಸುತ್ತಾರೆನ್ನುವುದು ಭ್ರಮೆ ಎಂಬುದು ಅವರಿಗೀಗ ಅರ್ಥವಾಗಿದೆ. ಆ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿ ಬಹುಗುಣ ನೇತೃತ್ವದ ಸರಕಾರದ ಬಗ್ಗೆ ಆಕ್ರೋಶಿತರಾಗುತ್ತಾರೆ, ಇಲ್ಲವೇ ಅತ್ಯಂತ ವಿಷಾದದ, ವ್ಯಂಗ್ಯದ ನಗು ಬೀರುತ್ತಾರೆ.
ಕೇವಲ ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿಗಳ ಪ್ರವಾಹ ಸಂಕಷ್ಟದ ಬಗ್ಗೆ, ಯಾತ್ರಾರ್ಥಿಗಳ ಪಡಿಪಾಟಲಿನ ಬಗ್ಗೆ ಮಾತ್ರ ದೇಶಾದ್ಯಂತ ವರದಿಗಳಾಗುತ್ತಿವೆ. ಹೆಚ್ಚೆಂದರೆ ಕೊಚ್ಚಿ ಹೋದ ಊರುಗಳ ಬಗ್ಗೆ ಸಹಾನುಭೂತಿ ವ್ಯಕ್ತವಾಗಿದೆ. ಆದರೆ ಸಂಪರ್ಕವನ್ನೇ ಕಳೆದುಕೊಂಡು ನಡುಗಡ್ಡೆಗಳಾಗಿ ಅತಂತ್ರಕ್ಕೆ ಸಿಲುಕಿರುವ ನೂರಾರು ಗ್ರಾಮಗಳ ನಿವಾಸಿಗಳ ಬಗ್ಗೆ, ಸುತ್ತಮುತ್ತಲಿನ ಸಣ್ಣಪುಟ್ಟ ಕ್ಷೇತ್ರಗಳ ಪ್ರಯಾಸದ ಬಗ್ಗೆಯಾಗಲಿ, ಬದುಕುಳಿದೂ ಬದುಕಿನ ದಾರಿಯನ್ನು ಕಳೆದುಕೊಂಡವರ ಬಗ್ಗೆಯಾಗಲಿ, ಕುಟುಂಬದಲ್ಲಿ ದುಡಿಮೆಗಾರನನ್ನೇ ಕಳೆದುಕೊಂಡು ಪರೋಕ್ಷ ಸಂತ್ರಸ್ತರಾಗಿರುವ ಕುರಿತಾಗಲೀ ಯಾರೂ ಯೋಚಿಸುತ್ತಿಲ್ಲ. ಮಂದಾಕಿನಿ ಕಣಿವೆಯುದ್ದಕ್ಕೂ ಹತ್ತಿಪ್ಪತ್ತು ಕಿ.ಮೀ. ವ್ಯಾಪ್ತಿಯಲ್ಲಿ ಕೇದಾರ ಪ್ರವಾಸಿಗಳಿಗೆ ಊಟ, ವಸತಿ, ವಾಹನ ಸೇರಿದಂತೆ ಹಲವು ಸೇವೆಗೆ ಸಜ್ಜಾಗಿರುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಜನ (ಪ್ರತ್ಯಕ್ಷ, ಪರೋಕ್ಷ ಅವಲಂಬಿತರು) ಹೊತ್ತಿನ ಕೂಲಿಗಾಗಿ ಯೋಚಿಸುವಂತಾಗಿದೆ. ಉನ್ನತ ಪರ್ವತಶ್ರೇಣಿ, ಕಣಿವೆಯ ದುರ್ಗಮ ಹಾದಿಯಲ್ಲಿ ಅಬಲರು, ವೃದ್ಧರು, ಮಕ್ಕಳನ್ನು ಹೊತ್ತುಕೊಂಡು ಹೋಗಿ ದೇವರ ದರುಶನ ಮಾಡಿಸುತ್ತಿದ್ದ, ಅ ಮೂಲಕ ಇಡೀ ವರ್ಷದ ಬದುಕನ್ನು ಕಂಡುಕೊಳ್ಳುತ್ತಿದ್ದರು. ಅವರೆಲ್ಲರ ಅನ್ನಕ್ಕೂ ಕಲ್ಲು ಬಿದ್ದಿದೆ ಎನ್ನುತ್ತಾರೆ ಸ್ವಯಂಸೇವಾ ಸಂಸ್ಥೆಯೊಂದರ ಮುಖ್ಯಸ್ಥ ರವೀಂದ್ರ ಛೋಪ್ಡಾ.
ಇನ್ನೂ ಅವತ್ತಿನ ಪ್ರವಾಹ ಸುತ್ತಲಿನ ಕೃಷಿ ಭೂಮಿಯನ್ನು ನಾಶಪಡಿಸಿ ಹೋಗಿದೆ. ಗುಪ್ತ ಕಾಶಿ ಸುತ್ತಮುತ್ತಲಲ್ಲೇ ಮುನ್ನೂರಕ್ಕೂ ಹೆಚ್ಚು ಕುಟುಂಬದ ಕೃಷಿ ಭೂಮಿ ಪ್ರವಾಹದಲ್ಲಿ ಕಳೆದುಹೋಗಿದೆ. ಜತೆಗೆ ಎರಡೂ ಜಿಲ್ಲೆಗಳ ನೀರಾವರೆ ವ್ಯವಸ್ಥೆಯೇ ಸಂಪೂರ್ಣ ನಾಮಾವಶೇಷವಾಗಿದೆ. ಹೀಗಾಗಿ ಕೃಷಿಕರಿಗೂ ದಿಕ್ಕಿಲ್ಲದಾಗಿದೆ.
ರುದ್ರ ಪ್ರಯಾಗ, ಉತ್ತರ ಕಾಶಿ ಜಿಲ್ಲೆಗಳಲ್ಲಂತೂ ಎಲ್ಲಿ ಹೋದರೂ ಅದೇ ಚರ್ಚೆ. ಆದ ಅನಾಹುತ, ಕೊಚ್ಚಿ ಹೋದ ರಸ್ತೆ, ಸೇತುವೆಗಳು, ಕಾಣೆಯಾದ ಊರುಗಳು, ಮಕಾಡೆ ಮಲಗಿದ ಬದುಕು, ಸಾವಿನ ಭೀಕರತೆ ಹೀಗೆ ಮಾತುಗಳು ಮಾರ್ದನಿಸುತ್ತಲೇ ಇವೆ, ಒಂದೂವರೆ ತಿಂಗಳ ನಂತರವೂ. ಅವತ್ತಿನಂತೆ ಪ್ರವಾಹ ಉಕ್ಕೇರಿ ನುಗ್ಗುತ್ತಿಲ್ಲ. ಆ ರಾತ್ರಿ ಸುರಿದ ಮಹಾಮಳೆ ಇಲ್ಲ. ಹೆಣಗಳ ರಾಶಿ ಮೇಲ್ನೋಟಕ್ಕೆ ಕಾಣುವುದಿಲ್ಲ (ಮಣ್ಣಿನಡಿ ಹೂತು ಕುಳಿತಿರುವ ಹೆಣಗಳ ರಾಶಿ ಕಾಣುತ್ತಿಲ್ಲವಾದರೂ ಅದರ ಅಸ್ತಿತ್ವಕ್ಕೆ ಸಾಕ್ಷಿಯಾಗಿ ಅಸಹನೀಯ ವಾಸನೆಯಿದೆ ಅಲ್ಲಿನ ಮಣ್ಣಿನಲ್ಲಿ). ಆ ದಿನಗಳಲ್ಲಿ ಇದ್ದ ಪ್ರವಾಸಿಗರ ದಂಡು, ಅವತ್ತಿನ ಧಾವಂತ, ಬದುಕಿಗಾಗಿ ನಡೆದ ಯುದ್ಧದ ಭೀಕರತೆಗಳಿಲ್ಲ. ಇದು ಬಿಟ್ಟರೆ ಒಂದು ತಿಂಗಳು ಹತ್ತು ದಿನಗಳ ನಂತರವೂ ಅಲ್ಲಿನ ಸನ್ನಿವೇಶದಲ್ಲಿ ಯಾವೊಂದೂ ಬದಲಾವಣೆಯಾಗಿಲ್ಲ. ಎರಡು ದಿನಕ್ಕೊಮ್ಮೆ ಬಿಟ್ಟೂ ಬಿಡದೆ ಗಿರಿಶಿಖರದ ಮೇಲ್ಭಾಗದಲ್ಲಿ ಮಳೆ ಸುರಿಯುತ್ತಲೇ ಇದೆ. ಅಷ್ಟಾದರೂ ವಾತಾವರಣದ ಉಷ್ಣತೆ 34 ಡಿಗ್ರಿ ಸೆಲ್ಷಿಯಸ್ಗಿಂತ ಕಡಿಮೆಯಿಲ್ಲ. ಮಳೆಗೆ ನಿತ್ಯವೂ ಗುಡ್ಡಗಳು ಕುಸಿಯುತ್ತಲೇ ಇವೆ. ಉತ್ತರಕಾಶಿ, ರುದ್ರಪ್ರಯಾಗದ ಮೇಲ್ಭಾಗದಲ್ಲಿ ಯಾವ ರಸ್ತೆಗಳೂ ಸಂಚಾರ ಯೋಗ್ಯವಾಗಿ ಉಳಿದಿಲ್ಲ. ಒಂದು ಕಡೆ ಹೋದರೆ ಅಲ್ಲಿಂದ ಮತ್ತೊಂದೆಡೆಗೆ ಅಥವಾ ಮರಳಿ ಬರುವುದು ದುಃಸ್ಸಾಧ್ಯವಾಗಿಯೇ ಇದೆ. ಕರೆಂಟು, ಫೋನ್ ಸಂಪರ್ಕವಂತೂ ಕೇಳುವುದೇ ಬೇಡ. ವಲಸೆಯ ಮಾತುಗಳೂ ಕೇಳಿಬರುತ್ತಿವೆ. ಕೆಲವರು ಊರು ಬಿಟ್ಟೂ ತೆರಳಿಯಾಗಿದೆ. ಪರ್ಯಾಯ ಉದ್ಯೋಗವಿಲ್ಲದ ಮೇಲೆ ಇದು ಅನಿವಾರ್ಯವಾಗಿದೆ. ಅಸಹನೆ, ಆಕ್ರೋಶ, ಅಸಹಾಯಕತೆ, ಬದುಕಿನ ಅನಿವಾರ್ಯತೆಯ ಜತೆಗೆ ಹಸಿವು ಮನುಷ್ಯನಿಂದ ಏನನ್ನು ಮಾಡಿಸಲೂ ಹಿಂಜರಿಯುವುದಿಲ್ಲ. ಹೀಗಾಗಿ ಸುಲಿಗೆ, ದರೋಡೆ, ಡಕಾಯಿತಿಯ ಸಾಧ್ಯತೆ ನಿರೀಕ್ಷಿತ. ಕೆಲ ಸಣ್ಣಪುಟ್ಟ ಅಂಥ ಘಟನೆಗಳ ಸುದ್ದಿ ಹಿಮಾಲಯ ಕಣಿವೆಯ ಗ್ರಾಮಗಳಲ್ಲಿ ನಿತ್ಯ ಮುಂಜಾನೆಯ ಮಾತಾಗಿ ಅತಂಕವನ್ನು ಹೆಚ್ಚಿಸುತ್ತಿದೆ. ಯಾರೂ ಹುಟ್ಟುತ್ತಲೇ ಅಪರಾಧಿಯಾಗುವುದಿಲ್ಲ ಅಲ್ಲವೇ? ಮನುಕುಲ ಯೋಚಿಸಬೇಕಿದೆ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in