ಇವರು ನಮ್ಮ ಸಂಸದರೋ, ಅಮೆರಿಕದ ಆಸ್ಥಾನಿಕರೋ?
ಕಳೆದ 15 ವರ್ಷಗಳಲ್ಲಿ ತಥಾಕಥಿತ ಸೆಕ್ಯುಲರ್ ವರ್ಗಗಳಿಂದ ಅತಿ ಹೆಚ್ಚು ವಿರೋಧವನ್ನು ಎದುರಿಸಿದ ಮತ್ತು ಪ್ರಪಂಚದಲ್ಲಿ ಸರ್ವಾಧಿಕ ಚರ್ಚೆಗೊಳಗಾದ ಏಕೈಕ ವ್ಯಕ್ತಿ ಬಹುಶಃ ನರೇಂದ್ರ ಮೋದಿಯವರೇ ಇರಬೇಕು. ಮೋದಿಯವರನ್ನು ವಿರೋಧಿಸುವುದಕ್ಕೆ ಅಥವಾ ಅವರ ಸಮರ್ಥನೆಗೆ ನಿಲ್ಲುವುದಕ್ಕೆ ಭಾರತದ ಲೋಕತಂತ್ರದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಒಂದಂತೂ ನಿಜ. ಈ ವರ್ಗದ ಸುಳ್ಳು ಆರೋಪಗಳು ಹೆಚ್ಚುತ್ತಿರುವ ಸಮಯದಲ್ಲೇ ನರೇಂದ್ರ ಮೋದಿಯವರ ಪ್ರಖ್ಯಾತಿಯೂ ಹೆಚ್ಚುತ್ತಿದೆ. ಸಾಮಾನ್ಯ ಜನರು ಮೋದಿಯವರನ್ನು ಮನಸಾರೆ ಮೆಚ್ಚುತ್ತಿದ್ದಾರೆ. ಈಗ ಮೋದಿಯವರ ವಿರುದ್ಧ ನಡೆಸಲಾದ ಇನ್ನೊಂದು ಮಸಲತ್ತೂ ಹೊರಬಿದ್ದಿದೆ. ರಾಜ್ಯ ಸಭಾ ಸದಸ್ಯ ಮೊಹಮ್ಮದ್ ಅದೀಬ್, ಇನ್ನಿತರ ಸಂಸದರ ಹಸ್ತಾಕ್ಷರ ಪಡೆದು ಅಮೆರಿಕ ಸರ್ಕಾರಕ್ಕೆ ಒಂದು ಪತ್ರ ಕಳುಹಿಸಿದ್ದರಂತೆ. ನರೇಂದ್ರ ಮೋದಿಯವರಿಗೆ ವೀಸಾ ನೀಡಬಾರದೆಂಬುದು ಆ ಪತ್ರದ ಸಾರಾಂಶ.
ಇನ್ನು, ಅದಕ್ಕೂ ತಮಗೂ ಸಂಬಂಧವಿಲ್ಲ, ತಮ್ಮ ಹಸ್ತಾಕ್ಷರಗಳನ್ನು ನಕಲು ಮಾಡಲಾಗಿದೆ ಎಂದು ಸೀತಾರಾಮ್ ಯೆಚೂರಿ ಮತ್ತು ವಂದನಾ ಚೌಹಾಣ ಹೇಳುತ್ತಿದ್ದಾರೆ. ಅವರ ಮಾತಲ್ಲಿ ಎಷ್ಟು ಸತ್ಯವಿದೆಯೋ ತಿಳಿಯದು, ಈ ವಿಷಯವನ್ನು ನ್ಯಾಯಾಲಯವೇ ತೀರ್ಮಾನಿಸಬೇಕು.
ಆದರೆ ಒಂದು ವಿಷಯ ಅರ್ಥವಾಗುತ್ತಿಲ್ಲ. ಅಮೆರಿಕ ಸರ್ಕಾರಕ್ಕೆ ಪತ್ರ ಬರೆದ ಈ ರಾಜಕಾರಣಿಗಳ ಪಾಲಿಗೆ ಭಾರತದ ಸವೋಚ್ಛ ಕಾನೂನಿನ ನಿರ್ಮಾತೃ, ಅಂದರೆ, 'ಸಂಸತ್ತಿನ' ಬಾಗಿಲುಗಳೆಲ್ಲ ಮುಚ್ಚಿಕೊಂಡಿದ್ದವೇ? ತಮ್ಮ ದೇಶದ ನಾಗರಿಕನೊಬ್ಬನ ಮೇಲೆ ಪ್ರತಿಬಂಧ ಹೇರಬೇಕೆಂದು ಅಮೆರಿಕ ಸರ್ಕಾರಕ್ಕೆ ಕೇಳಿಕೊಳ್ಳುವ ಮೂಲಕ ಇವರೆಲ್ಲ ಭಾರತದ ನಾಗರಿಕರನ್ನಷ್ಟೇ ಅಲ್ಲದೆ, ತಮ್ಮ ಸಂಸತ್ ಸದಸ್ಯತ್ವವನ್ನೂ ತಿರಸ್ಕಾರದಿಂದ ನೋಡಿದ್ದಾರೆ.
ನಮ್ಮ ದೇಶದ ನಾಗರಿಕನೊಬ್ಬ ಹೇಗೆಯೇ ಇರಲಿ, ಆತನ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವ ಅಧಿಕಾರ ಭಾರತದ ಜನತೆಗೆ ಮತ್ತು ಕಾನೂನು ವ್ಯವಸ್ಥೆಯನ್ನು ಲಾಗೂ ಮಾಡುವ ಸಂವಿಧಾನಿಕ ಸಂಸ್ಥೆಗಳಿಗಷ್ಟೇ ಇದೆ. ಯಾರಿಗಾದರೂ ವೀಸಾ ಕೊಡುವುದು, ಕೊಡದಿರುವುದು ಅಮೆರಿಕದ ಆಂತರಿಕ ವಿಚಾರ. ಅದು ಅಮೆರಿಕ ಸರ್ಕಾರ ಮತ್ತು ಆ ವ್ಯಕ್ತಿಯ ನಡುವಿನ ವಿಷಯ. ಮೊಹಮ್ಮದ್ ಅದೀಬ್ ಈ ಪತ್ರದ ಮೂಲಕ ಅಮೆರಿಕ ಸರ್ಕಾರದ ಆಂತರಿಕ ವಿಚಾರದಲ್ಲಿ ಮೂಗುತೂರಿಸಿದ್ದಾರೆ. ಒಂದು ವೇಳೆ ಅಮೆರಿಕ ಸರ್ಕಾರ ಅಥವಾ ಅಲ್ಲಿನ ಸದಸ್ಯರ ಒತ್ತಡಕ್ಕೆ ಸಿಲುಕಿ ಭಾರತ ಇಂಥದ್ಯಾವುದಾದರೂ ಕೆಲಸ ಮಾಡುತ್ತದೆಯೇ? ಹಾಗೆ ಮಾಡುವುದು ತರವೇ? ಭಾರತೀಯರು ಅಂಥ ನಡೆಯನ್ನು ಸಹಿಸುತ್ತಾರೆಯೇ?
ಇದು ಕೇವಲ ಭಾರತ ಅಥವಾ ಭಾರತದ ಸಂಸತ್ತಿಗೆ ಮಾಡಿದ ದ್ರೋಹ ಮತ್ತು ವಿಶ್ವಾಸಘಾತವಷ್ಟೇ ಅಲ್ಲ, ಜನರ ಬೆಂಬಲದಿಂದ ಮುಖ್ಯಮಂತ್ರಿಯಾದ ವ್ಯಕ್ತಿಯೊಬ್ಬನಿಗೆ ಅಮೆರಿಕ ಸರ್ಕಾರದ ಮೂಲಕ ಅವಮಾನ ಮಾಡುವ ಹೀನ ಪ್ರಯತ್ನವೂ ಹೌದು. ಈ ವಿಷಯವನ್ನು ಯಾರಾದರೊಬ್ಬರು ನ್ಯಾಯಾಲಯಕ್ಕೆ ಒಯ್ದು ಭಾರತದ ವ್ಯವಸ್ಥೆಯನ್ನು ಹೀಗಳೆದವರಿಗೆ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ.
50ರ ದಶಕದಲ್ಲಿ ನೆಹರೂರ ಲಂಡನ್ ಯಾತ್ರೆಗೆ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು. ಅವರ ವಿದೇಶ ಪ್ರವಾಸವನ್ನು ನಿಷೇಧಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸರಸಂಘಚಾಲಕ ಪರಮಪೂಜ್ಯ ಗುರೂಜಿ ಅವರು,ವಿರೋಧ ವ್ಯಕ್ತ ಪಡಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು. 'ಭಾರತದ ಪ್ರಧಾನಮಂತ್ರಿಗಳ ವಿರುದ್ಧ ನಮ್ಮ ಪ್ರತಿಕ್ರಿಯೆ ಏನಿದ್ದರೂ, ಅದು ಭಾರತದಲ್ಲೇ ವ್ಯಕ್ತವಾಗಲಿ. ಅವರು ವಿದೇಶಕ್ಕೆ ಹೋಗುವುದು ನಮ್ಮ ಪ್ರತಿನಿಧಿಗಳಾಗಿ, ದೇಶದ ಪ್ರತಿನಿಧಿಯಾಗಿ. ಅಲ್ಲಿ ಅವರಿಗೆ ಸನ್ಮಾನವಾಗಬೇಕು, ಯಾವ ಅಪಮಾನಗಳೂ ಎದುರಾಗಬಾರದು. ಅವರಿಗೆ ಅಪಮಾನವಾದರೆ ನಮಗೂ ಆದಂತೆ. ಪ್ರಧಾನಿಗಳು ತಮ್ಮ ಹುದ್ದೆಯಿಂದ ಕೆಳಕ್ಕಿಳಯಬೇಕೆಂಬ ಕೂಗು ಕೇವಲ ಭಾರತದಲ್ಲಷ್ಟೇ ಪ್ರತಿಧ್ವನಿಸಲಿ, ಆ ಸದ್ದು ವಿದೇಶಗಳಿಗೆ ತಲುಪದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ' ಎಂದು ಹೇಳಿದ್ದರು!
ಇದೇ ಕೆಲವು ಸಮಯದ ಹಿಂದೆ ನಾನು ಜಪಾನ್ ಸರ್ಕಾರದ ಆಹ್ವಾನದ ಮೇರೆಗೆ ಆ ದೇಶಕ್ಕೆ ಹೋಗಿದ್ದೆ. ಅಲ್ಲಿಯ ಪತ್ರಕರ್ತರು ಡಾ. ಮನಮೋಹನ್ ಸಿಂಗ್ ಅವರ ಬಗ್ಗೆ ನನ್ನನ್ನು ಪ್ರಶ್ನಿಸಿದರು. ಪ್ರಧಾನಿ ಸಿಂಗ್ ಅವರ ಬಗ್ಗೆ ನಾನು ಗೌರವದಿಂದ ಮಾತಾಡಿದೆ. ಒಳ್ಳೆಯ ಪದಗಳನ್ನು ಪ್ರಯೋಗ ಮಾಡಿದೆ. ಇದನ್ನು ಕೇಳಿ ಆ ಪತ್ರಕರ್ತರು ಗೊಂದಲಗೊಂಡರು. 'ಭಾರತದಲ್ಲಿ ನೀವು ಮನಮೋಹನ್ ಸಿಂಗ್ ಅವರನ್ನು ತೀವ್ರವಾಗಿ ವಿರೋಧಿಸುತ್ತೀರಿ, ಆದರೆ ಇಲ್ಲೇಕೆ ಅವರ ಬಗ್ಗೆ ಇಷ್ಟೊಂದು ಚೆನ್ನಾಗಿ ಮಾತನಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದರು. ಅದಕ್ಕೆ ನಾನಂದೆ, 'ಮನಮೋಹನ್ ಸಿಂಗ್ ನಮ್ಮ ದೇಶದ ಪ್ರಧಾನಮಂತ್ರಿಗಳು, ಕಾಂಗ್ರೆಸ್ನ ಪ್ರಧಾನಿಗಳಲ್ಲ. ಹಾಗಾಗೇ ಅವರೊಂದಿಗೆ ನಮ್ಮ ದೇಶದ ಗೌರವವೂ ಜೊತೆಯಾಗಿದೆ. ಒಂದು ವೇಳೆ ಯಾರಾದರೂ ಸಿಂಗ್ ಅವರ ವಿರುದ್ಧ ಮಾತನಾಡಿದರೆ, ನಾನವರ ವಿರುದ್ಧ ಮಾತಾಡುತ್ತೇನೆ. ಏಕೆಂದರೆ ಅದು ಕೇವಲ ಪ್ರಧಾನಿಗಳಿಗಷ್ಟೇ ಅಲ್ಲ, ಭಾರತಕ್ಕೆ ಮಾಡುವ ಅವಮಾನವಾಗುತ್ತದೆ'.
ಗುಜರಾತ್ನ ಸೋಮನಾಥ ಮಂದಿರದ ಮೇಲೆ ಮೊಹಮ್ಮದ್ ಗಜನಿ ಆಕ್ರಮಣ ಮಾಡಲಿದ್ದಾನೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಹಿಂದು ರಾಜರೆಲ್ಲರೂ ಒಟ್ಟಾಗಿ ತಮ್ಮ ಸೈನ್ಯಗಳ ನೇತೃತ್ವವಹಿಸಿ ಸೋಮನಾಥದ ನಾಲ್ಕೂ ಕಡೆಗಳಲ್ಲಿ ಕಾವಲು ಕಾಯುತ್ತಾ ನಿಂತರು. ಆದರೆ ಅದೇ ಸಮಯದಲ್ಲಿ ಅವರೊಳಗಿನ ವ್ಯಕ್ತಿಯೊಬ್ಬ ಗಜನಿಯಿಂದ ಇನಾಮು ಪಡೆಯಬಹುದು ಎಂಬ ದುರಾಸೆಗೆ ಬಿದ್ದು ಮುಸಲ್ಮಾನ ಸೈನ್ಯಕ್ಕೆ ಗುಪ್ತ ಮಾರ್ಗವೊಂದನ್ನು ತೋರಿಸಿಕೊಡುತ್ತಾನೆ. ಗಜನಿಯ ಸೇನೆ ಆ ಮಾರ್ಗದ ಮೂಲಕ ನುಗ್ಗಿ ಹಿಂದು ಸೇನೆಯನ್ನು ಸೋಲಿಸಿ, ಮಂದಿರವನ್ನು ಛಿದ್ರ ಮಾಡಿಹಾಕುತ್ತದೆ. ಇನಾಮು ದೊರೆಯುತ್ತದೆ ಎಂಬ ಆಸೆಯಿಂದ ಆ ವ್ಯಕ್ತಿ ಗಜನಿಯ ಬಳಿ ಹೋದಾಗ, ಅವನನ್ನೂ ಕೊಂದುಹಾಕಲಾಗುತ್ತದೆ!
ಈ ಸಂಸದರೂ ಅಷ್ಟೇ. ತಮ್ಮ ಸ್ವಾರ್ಥ ಮತ್ತು ದ್ವೇಷದಿಂದ ಅಂಧರಾಗಿ ಅಂಥದ್ದೇ ಇತಿಹಾಸವನ್ನು ರಚಿಸಲು ಮುಂದಾಗುತ್ತಿದ್ದಾರೆ. ಮೊದಲು ಇಂಥ ಮಾನಸಿಕತೆಯನ್ನು ಸೋಲಿಸಬೇಕಾಗಿದೆ. ತಮ್ಮ ತತ್ಕಾಲಿಕ ರಾಜಕೀಯ ಲಾಭಕ್ಕಾಗಿ ದೇಶದ ದೀರ್ಘಕಾಲಿಕ ಹಿತಗಳನ್ನು ಬಲಿಕೊಡಲು ಇವರು ಹಿಂದೆ ಮುಂದೆ ನೋಡುವುದಿಲ್ಲ.
ಮೋದಿಯವರಿಗೆ ವೀಸಾ ನೀಡಬಾರದೆಂದು ಅಮೆರಿಕಕ್ಕೆ ಪತ್ರಬರೆದಿರುವ ಈ 65 ಸಂಸದರನ್ನು 'ಅಮೆರಿಕದ ಹೊಸ ಆಸ್ಥಾನಿಕರು' ಎಂದು ಕರೆದರೆ ಹೇಗಿರುತ್ತದೆ? ಇವರೆಲ್ಲ ಹಿಂದಿನ ಜನ್ಮದಲ್ಲಿ, ತಮ್ಮ ಸ್ವಾರ್ಥಕ್ಕಾಗಿ ವಿದೇಶಿ
ಆಕ್ರಮಣಕಾರರನ್ನು ಭಾರತಕ್ಕೆ ಕರೆದುಕೊಂಡು ಬಂದು ಈ ದೇಶವನ್ನು ಅನೇಕ ವರ್ಷಗಳ ಕಾಲ ಗುಲಾಮಗಿರಿಗೆ ದೂಡಿದವರಾಗಿದ್ದರು ಅನಿಸುತ್ತದೆ!
- ತರುಣ್ ವಿಜಯ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

