ಎಂಡೋ ಪೀಡಿತರಿಗೆ ಪರಿಹಾರ ಸಿಗುವುದು ಎಂದು?
25 ವರ್ಷಗಳ ಹಿಂದೆ ಹೋಗೋಣ. ಅದು ಕಾಡಿನ ಮಧ್ಯ ಇರುವ ಶಾಲೆ. ಹೊರಗಡೆ ಹೆಲಿಕಾಪ್ಟರ್ ಸದ್ದು ಕೇಳಿದ್ದೇ ತಡ ಮಕ್ಕಳಿಗೆ ಖುಷಿಯೋ ಖುಷಿ. ಖುದ್ದು ಮೇಷ್ಟ್ರುಗಳೇ ಮಕ್ಕಳನ್ನು ಹೆಲಿಕಾಪ್ಟರ್ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಪುಟ್ಟ ಮಕ್ಕಳು ಅಚ್ಚರಿ, ಕಾತರ, ಸಂತೋಷದಿಂದ ಹೆಲಿಕಾಪ್ಟರ್ ಹಾರಾಟ ವೀಕ್ಷಿಸುತ್ತಿದ್ದಾರೆ. ಹೆಲಿಕಾಪ್ಟರ್ನಿಂದ ಬಿಳಿ ದ್ರಾವಣ ಚಿತ್ರ ವಿಚಿತ್ರವಾಗಿ ಸಿಂಪಡಣೆಯಾಗುವುದನ್ನು ನೋಡಿ ಅದೇನೊ ಸಂಭ್ರಮ.
ಇನ್ನೊಂದು ದೃಶ್ಯ. 1987ರ ವಸಂತಕಾಲ. ಶಾಲೆಯಿಂದ ಮನೆಗೆ ಬರುವಾಗ ಮಕ್ಕಳಿಗೆ ಹಣ್ಣು, ಚಿಗುರು ತಿನ್ನುವ ಅಭ್ಯಾಸ. ಅಂದು ಇಬ್ಬರು ಹುಡುಗರು ಲೆಕ್ಕಕ್ಕಿಂತ ಹೆಚ್ಚೇ ಚಿಗುರು ತಿಂದು ಮನೆಗೆ ಹೋಗಿದ್ದರು. ಆದರೆ, ಮತ್ತೆ ಶಾಲೆಗೆ ಬರಲಿಲ್ಲ. ಮಕ್ಕಳ ಮನೆಯಲ್ಲಿ ಸಾವಿನ ರೋದನ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ ಆಕ್ರಂದನವನ್ನು ಮರೆಯಲು ಸಾಧ್ಯವೇ ಇಲ್ಲ. ಇದು ಎಂಡೋ ಸಲ್ಫಾನ್ನಿಂದ ದೃಷ್ಟಿ ಕಳೆದುಕೊಂಡಿರುವ, ಎಂಡೋ ವಿರೋಧಿ ಹೋರಾಟಗಾರರು ಆಗಿರುವ ಶ್ರೀಧರ ಗೌಡ ಅವರು ದೃಷ್ಟಿ ಇರುವಾಗ ಬಾಲ್ಯದಲ್ಲಿ ನೋಡಿದ ಘಟನೆಗಳು.
ಅದು ಕೇರಳ, ಕರ್ನಾಟಕ ಗಡಿ ಭಾಗದ ಕೊಕ್ಕಡ, ಪಟ್ರಮೆ, ನಿಡ್ಲೆ, ಕಾಸರಗೋಡು ಪ್ರದೇಶ. ಎಂಡೋ ವಿಷ ಸಿಂಪಡಣೆ ಬಗ್ಗೆ ಅಲ್ಲಿ ಯಾರಿಗೂ ಸೂಕ್ತ ಮಾಹಿತಿ ಇರಲಿಲ್ಲ. ಕಾರ್ಮಿಕರು ಎಂಡೊ ಸಲ್ಫಾನ್ ಸಿಂಪಡಿಸಿದ ಬಳಿಕ ಡಬ್ಬಿಗಳನ್ನು ಉಪ್ಪಾರ ಹಳ್ಳದ ಹೊಳೆಯಲ್ಲಿ ತೊಳೆಯುತ್ತಿದ್ದರು. ತೊಳೆದ ನಂತರ ಮೀನುಗಳು ಸಾಯುತ್ತಿದ್ದವು. ಅಲ್ಲಿದ್ದ ಕಡು ಬಡವರು ಸತ್ತ ಮೀನುಗಳನ್ನು ತಿನ್ನುತ್ತಿದ್ದರು. ಆ ಮೀನು ತಿಂದವರ ಮನೆಗಳಲ್ಲೇ ಈಗ ಅಂಗವಿಕಲ ಮಕ್ಕಳ ಸಂಖ್ಯೆ ಅತಿ ಹೆಚ್ಚು!
ಇಲ್ಲಿನ ಮನೆಗಳಲ್ಲಿ ಒಬ್ಬೊಬ್ಬರ ಬದುಕು ಒಂದೊಂದು ದೊಡ್ಡ ದುರಂತ. ಕೊಕ್ಕಡ, ಪುತ್ತೂರು, ಪಟ್ರಮೆ, ಅಂಲಕಾರು ಅತಿ ಹೆಚ್ಚಿನ ಎಂಡೋ ಪೀಡಿತರಿದ್ದಾರೆ. ಗೇರು ಅಭಿವೃದ್ಧಿ ನಿಗಮ ಗೇರು ಮರಗಳಿಗೆ ಕ್ರಿಮಿನಾಶಕವಾಗಿ 1979ರಿಂದ 2000 ವರೆಗೆ ಎಂಡೋ ಸಲ್ಫಾನ್ನನ್ನು ವೈಮಾನಿಕವಾಗಿ ಸಿಂಪಡಣೆ ಮಾಡಿತ್ತು. ಆ ಸಮಯದಲ್ಲಿ ಕಾಡಿನ ನಡುವಿನ ಅನೇಕ ಮನೆಗಳ ಮೇಲೆಯೂ ಇದು ಬೀಳುತ್ತಿತ್ತು. ಶ್ರೀಧರ ಗೌಡರು ಎಂಡೋ ಪೀಡಿತರ ಮನೆಗಳಿಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ, ವರ್ಷ ಕಳೆದಂತೆ ಮಕ್ಕಳು ಸಾಯುತ್ತಿರುವುದರಿಂದ ಮನೆಗಳು ಬದಲಾಗುತ್ತಿವೆ. ಎಂಡೋ ಸಂತ್ರಸ್ತರು ಮೃತಪಟ್ಟರೂ ಮತ್ತೆ ಮತ್ತೆ ಎಂಡೋ ಪೀಡಿತ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ.
ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಒಂದು ಗ್ರಾಮದಲ್ಲಿ 15 ಮಂದಿ ಎರಡೆರಡು ಮದುವೆಯಾಗಿದ್ದಾರೆ. ಆದರೂ, ಮಕ್ಕಳಾಗಿಲ್ಲ. ವಿವಾಹಿತೆಯರಿಗೆ ಗರ್ಭ ನಿಲ್ಲುತ್ತಿಲ್ಲ. ಪುರುಷರ ತಪಾಸಣೆ ಮಾಡಿದಾಗ ಕೆಲವರಲ್ಲಿ ವೀರ್ಯಾಣು ಸಾಂಧ್ರತೆ ಕಡಿಮೆ, ಇನ್ನು ಕೆಲವರಲ್ಲಿ ವೀರ್ಯಾಣು ಚಲನಶಕ್ತಿ ಕಳೆದುಕೊಂಡಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಗ್ರಾಮವೊಂದರಲ್ಲಿಯೇ 70ಕ್ಕೂ ಹೆಚ್ಚು ಬುದ್ಧಿಮಾಂದ್ಯರಿದ್ದಾರೆ. ಮಂಗಳೂರಿನ ಡಾ. ರವೀಶ್ ತುಂಗಾ ಅವರ ಬಳಿಗೆ ಅಲ್ಲಿನ 30 ಮಂದಿ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಜೀನ್ಸ್ ಪರೀಕ್ಷೆ ಅತ್ಯಗತ್ಯ. ವಂಶವಾಹಿನಿಗಳೂ ಕೆಟ್ಟು ಹೋಗಿರುವುದರಿಂದ ಮದುವೆಯಾದರೆ ಮತ್ತೆ ಅಂಗವಿಕಲ ಮಕ್ಕಳೇ ಹುಟ್ಟುತ್ತಾರೆ. ಮದುವೆಯಾದರೂ ಮಕ್ಕಳಾಗದಂತೆ ನೋಡಿಕೊಳ್ಳಬೇಕು. ಒಟ್ಟಾರೆ ಇದು ಜಪಾನ್ನ ಹಿರೋಷಿಮಾ, ನಾಗಸಾಕಿ ಬಾಂಬ್ ಸ್ಫೋಟದ ಪರಿಣಾಮದಂತೆಯೇ ಇದೆ.
ಇನ್ನೊಂದೆಡೆ ಡಾ. ರವೀಂದ್ರನಾಥ ಶ್ಯಾನ್ಭಾಗ್, ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ ಗೌಡ, ಸಂಜೀವ ಕಬಕ ಮತ್ತವರ ತಂಡ ಮಾತ್ರ ಹೋರಾಟ ನಡೆಸುತ್ತಿದೆ. ಸರ್ಕಾರ ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿಲ್ಲ. 2012ರ ಡಿಸೆಂಬರ್ ತಿಂಗಳಲ್ಲಿ ಸಮೀಕ್ಷೆ ನಡೆಸಿ 5231 ಮಂದಿ ಎಂಡೋ ಸಂತ್ರಸ್ತರು ಇದ್ದಾರೆ ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಹೇಳಿದ್ದರು. ಆರೋಗ್ಯ ಇಲಾಖೆ ತಜ್ಞರು ವೈದ್ಯಕೀಯ ಶಿಬಿರವೊಂದರಲ್ಲಿ 1907 ಮಂದಿ ಮಾತ್ರ ಎಂಡೋ ಸಂತ್ರಸ್ತರು ಎಂದು ಘೋಷಣೆ ಮಾಡಿದರು. ಆದರೆ, ಇವರಿಗಾದರೂ ಪರಿಹಾರ ನೀಡಬಹುದಲ್ಲವೇ? ಊಹೂಂ! ಮತ್ತೆ 'ಸಮೀಕ್ಷೆ ಸರಿ ಆಗಿಲ್ಲ ಮತ್ತೊಮ್ಮೆ ಸಮೀಕ್ಷೆ ಮಾಡಿ' ಎಂಬ ಆದೇಶ.
ಬಹುಷಃ ಹೀಗೆ ಸಮೀಕ್ಷೆ ಮಾಡುತ್ತಿದ್ದರೆ ಇನ್ನಷ್ಟು ಮಂದಿ ಸತ್ತು ಹೋಗುತ್ತಾರೆ. ಆಗ ಪರಿಹಾರ ನೀಡುವ ಹೊರೆ ಕಡಿಮೆಯಾಗುಬಹುದು ಎಂಬ ದುರಾಲೋಚನೆ ಇರಬಹುದು. ಆದರೆ, ಇದೂ ಕೂಡಾ ಸಾಧ್ಯವಿಲ್ಲ ಎಂಬುದು ವಿಜ್ಞಾನಿಗಳೇ ಹೇಳುತ್ತಾರೆ. ಎಂಡೋ ಮಣ್ಣಿನಲ್ಲಿ ಬೆರೆತು ಹೋಗಿದ್ದು ಕಾಲಕ್ರಮೇಣ ಪ್ರಭಾವ ಕಡಿಮೆಯಾದರೂ 5 ತಲೆಮಾರುಗಳವರೆಗಂತೂ ಸಮಸ್ಯೆಯಾಗಲಿದೆ. ಕಾಸರಗೋಡಿನ ಮಣ್ಣಿನಲ್ಲಿ ಎಂಡೋ ವಿಷದ ಅಂಶದ ಪರಿಶೀಲನೆ ನಡೆಸಿದಾಗ ಇನ್ನೂ ದುಷ್ಪರಿಣಾಮ ಬೀರುವ ಸಾಮರ್ಥ್ಯ ಮಣ್ಣಿನಲ್ಲಿದೆ ಎಂಬ ವರದಿ ಬಂದಿದೆ.
ಯಾವ ರಾಜಕೀಯ ಪಕ್ಷಗಳೂ ಎಂಡೋ ಸಂತ್ರಸ್ತರ ಪರಿಹಾರಕ್ಕೆ ಮುತುವರ್ಜಿ ವಹಿಸಿಲ್ಲ. ಮತದಾನ ಬಹಿಷ್ಕಾರ ಮಾಡಿದರೂ ಕಿವಿಗೊಡುವುದಿಲ್ಲ. ಏಕೆಂದರೆ ಇಲ್ಲಿ ಹೆಚ್ಚಿನವರು ಬುದ್ಧಿಮಾಂದ್ಯರು, ಅಂಗವಿಕಲರು. ಮತದಾನದ ವಿಶೇಷ ಅವಕಾಶ ಇದ್ದರೂ ಅವರ ಮತದಾರ ಕಾರ್ಡ್ ಅನ್ನು ಸರಿಯಾಗಿ ಮಾಡಿಲ್ಲ. ಅವರಿಗೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ ಎಂಬ ಕೆಟಗರಿಯೂ ಇಲ್ಲ. ಯಾವುದೇ ಮಠಗಳು ಅವರ ಹಿಂದೆ ಇಲ್ಲ. ಬೆರಳೆಣಿಕೆ ಮತಗಳಿಗೆ ಕೋಟಿಗಟ್ಟಲೆ ಪರಿಹಾರ ಏಕೆ ನೀಡಬೇಕು ಅಲ್ಲವೇ?!
ಕೆಲ ಎನ್ಜಿಒಗಳು ಬೇರೆ ರಾಷ್ಟ್ರಗಳಲ್ಲಿ ದುರಂತ ಆದಾಗ ಕೋಟಿಗಟ್ಟಲೆ ರುಪಾಯಿಗಳಲ್ಲಿ ಪರಿಹಾರ ಸಂಗ್ರಹಿಸಿ ಕಳುಹಿಸುತ್ತವೆ. ಆದರೆ ಮನೆ ಅಂಗಳದಲ್ಲಿಯೇ ಸಮಸ್ಯೆ ಇದ್ದರೂ ಕಣ್ಣೆತ್ತಿಯೂ ನೋಡುತ್ತಿಲ್ಲ.
ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಪ್ರದೇಶಕ್ಕೆ ಎಂಥಾ ದೌರ್ಭಾಗ್ಯ ಎದುರಾಗಿದೆ ನೋಡಿ! ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವೊಬ್ಬ ಶಾಸಕನೂ ಎಂಡೋ ಸಮಸ್ಯೆ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಚಕಾರ ಎತ್ತಿಲ್ಲ. ಕಳೆದ ಬಾರಿ ಅಧಿವೇಶನದಲ್ಲಿ ಎಂಡೋ ಪೀಡಿತರ ಸಂಕಷ್ಟದ ಬಗ್ಗೆ ಮಾತನಾಡಿದ್ದು ಬೆಂಗಳೂರಿನ ಶಾಸಕ ರವಿಸುಬ್ರಹ್ಮಣ್ಯ. ಸಚಿವರಾಗಿದ್ದಾಗ ಶೋಭಾ ಕರಂದ್ಲಾಜೆ ಎಂಡೋ ಸಮಸ್ಯೆ ಬಗ್ಗೆ ಗಮನ ಸೆಳೆದರು. ಇದು ದೊಡ್ಡ ಮಟ್ಟದಲ್ಲಿ ನಡೆದ ಮೊದಲ ಪ್ರಯತ್ನ. ಸಮೀಕ್ಷೆ, ಪರಿಹಾರದಲ್ಲಿ ಎಡವಟ್ಟುಗಳಾದರೂ ಪ್ರಯತ್ನಕ್ಕೆ ಮೆಚ್ಚಲೇಬೇಕು. ಕೊಕ್ಕಡ, ಪಟ್ರಮೆ, ನಿಡ್ಲೆ ಗ್ರಾಮಗಳ 211 ಕುಟುಂಬಗಳಿಗೆ ತಲಾ ರು. 50 ಸಾವಿರ ಪರಿಹಾರ ಸಿಕ್ಕಿತು. ಆದರೆ ಅದು ಲೆಕ್ಕಕ್ಕೂ ಬರುವುದಿಲ್ಲ.
ಈ ಬಾರಿಯ ಬಜೆಟ್ನಲ್ಲಿ ಇದಕ್ಕಾಗಿ ಕೇವಲ ರು. 2 ಕೋಟಿ ನಿಗದಿ ಪಡಿಸಿದರು. ಮಠಗಳು ಕೇಳದೇ ಇದ್ದರೂ ಕೋಟಿಗಟ್ಟಲೆ ಹಣ ನೀಡುವಾಗ ಸರ್ಕಾರಕ್ಕೆ ಈ ಸಂತ್ರಸ್ತರ ಕಣ್ಣೀರು ಕಾಣಲೇ ಇಲ್ಲ. ಸರ್ಕಾರ ಎಂಡೋ ಸಿಂಪಡಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದಲೇ ಇಂತಹ ದಾರುಣ ಸ್ಥಿತಿ ಉಂಟಾಗಿದೆ. ಇದಕ್ಕೆ ಸರ್ಕಾರವೇ ಹೊಣೆ. ಮಾಡಿದ ಅನಾಹುತ ಸರಿಪಡಿಸಲು ಕೋಟಿ ಕೋಟಿ ನೀಡಿದರೂ ಸಾಧ್ಯವಿಲ್ಲ. ಅದನ್ನೂ ಅದು ಮಾಡುತ್ತಿಲ್ಲ. ಕನಿಷ್ಠ ಕಣ್ಣೀರು ಒರಸುವ ಪ್ರಯತ್ನವನ್ನಾದರೂ ಮಾಡಬಹುದಲ್ಲವೇ?
ಎಂಡೋ ಪೀಡಿತರ ಬದುಕನ್ನು 5 ಬಾರಿ ಚಿತ್ರೀಕರಿಸಿ ಸೀಡಿ ಮಾಡಿ ಸರ್ಕಾರಕ್ಕೆ ಶ್ರೀಧರ ಗೌಡರು ನೀಡಿದ್ದಾರೆ. ಬಹುಶಃ ಅಧಿಕಾರದಲ್ಲಿರುವವರು ಅದನ್ನು ನೋಡಿಲ್ಲವೆನಿಸುತ್ತದೆ. ನೋಡಿದ್ದರೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲೇ ಬೇಕು. ಏಕೆಂದರೆ ಕಲ್ಲು ಹೃದಯದವರನ್ನೂ ಕರಗಿಸುವಂತಹ ದೃಶ್ಯಗಳು ಅದರಲ್ಲಿವೆ.
ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ಎಲ್ಲ ಎಂಡೋ ಪೀಡಿತರನ್ನು ಬಸ್ಗಳಲ್ಲಿ ಕರೆದುಕೊಂಡು ಹೋಗಿ ಫ್ರೀಡಂ ಪಾರ್ಕ್ಗೆ ತೆರಳಿ ಪ್ರತಿಭಟಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಹೆಚ್ಚಿನ ಪರಿಹಾರ ನೀಡುವ ಭರವಸೆ ಬಂದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದಕ್ಕೆ ಹೋಯಿತು. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಜೂ. 5ಕ್ಕೆ ಪ್ರತಿಭಟನೆ ನಿಶ್ಚಯವಾಯಿತು. ಈಗಿನ ಸರ್ಕಾರ ಮತ್ತೆ ಭರವಸೆ ನೀಡಿದ್ದರಿಂದ ಮತ್ತೆ ಪ್ರತಿಭಟನೆ ಹಿಂದೆಗೆದುಕೊಂಡಿದ್ದಾರೆ.
ಮೊದಲೇ ಗೇರು ನಿಗಮ ಜೀವನ ನಾಶ ಮಾಡಿತು. ಬದುಕು ಮತ್ತೆ ಕಟ್ಟಿಕೊಡಬೇಕಿದ್ದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸಹಾಯ ಮಾಡಬೇಕಾದ ಸ್ವಯಂ ಸೇವಾ ಸಂಸ್ಥೆಗಳು ಕೇವಲ ಮಾಧ್ಯಮಗಳ ಮುಂದೆ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದೇ ಪ್ರಚಾರ ಪಡೆಯುತ್ತಿವೆ. ಸಿನಿಮಾ ನಟ ಚೇತನ್ ಇತ್ತೀಚೆಗೆ ಎಂಡೋ ಪೀಡಿತ ಮಕ್ಕಳ ಬಳಿ ಬಂದು ಮೈ ಸವರಿದಾಗ ಮುಗ್ಧ ಮುಖಗಳಲ್ಲಿ ಮೂಡಿದ ನವ ಚೈತನ್ಯ ವರ್ಣಿಸಲು ಅಸಾಧ್ಯ. ಈ ಮಕ್ಕಳಿಗೆ ಉತ್ತಮ ಆಹಾರ, ಮದ್ದು, ಸಾಂತ್ವನದ ಅವಶ್ಯಕತೆ ಇದೆ. ಆದರೆ ಸರ್ಕಾರಕ್ಕೆ ಈ ಮುಗ್ಧರ ಕೂಗು ಕೇಳಿಸೀತೇ?
- ಜಿತೇಂದ್ರ ಕುಂದೇಶ್ವರ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

