ಉಗ್ರ ನಿಗ್ರಹಕ್ಕೆ ಬೇಕೆ ಇನ್ನೊಂದು ಬಿಳಿಯಾನೆ?
ಇಸ್ವಿ 2009. ಮುಂಬಯಿ ದಾಳಿಯ ಅವಶೇಷಗಳನ್ನು ಇನ್ನೂ ತಡಕಲಾಗುತ್ತಿತ್ತು. ಅದಾಗಲೇ ಅವತ್ತಿನ ಗೃಹಮಂತ್ರಿ ಪಿ. ಚಿದಂಬರಂ ಅವರು ಉಗ್ರ ನಿಗ್ರಹದ ಮಾದರಿಗಳನ್ನು ಹುಡುಕಾಡುತ್ತಿದ್ದರು. ಭಯೋತ್ಪಾದನೆ ವಿರುದ್ಧ ಅಮೆರಿಕ ಅನುಸರಿಸಿರುವ ಮಾದರಿ ಹಾಗೂ ಅದರ ರಹಸ್ಯ 'ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್' ವಿಭಾಗವನ್ನು ಅವರು ಉದ್ವೇಗದಿಂದ ಗಮನಿಸುತ್ತಿದ್ದರು. ದೈತ್ಯ ವಿಡಿಯೋ ತೆರೆಯನ್ನು ಹೊದ್ದ ಗೋಡೆಯಲ್ಲಿ ಜಗತ್ತಿನ ನಾನಾ ಭಾಗದ ವಿದ್ಯಮಾನಗಳು ಏಕಕಾಲಕ್ಕೆ ಬಿತ್ತರವಾಗುತ್ತಿದ್ದವು. ವರ್ಗೀಕೃತ ಮಾಹಿತಿಗಳ ಬಗ್ಗೆಯೂ ಅಲ್ಲಿ ಉತ್ತರಗಳು ಲಭ್ಯವಾಗುತ್ತಿದ್ದವು.
ಇವನ್ನೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ನೋಡಿಕೊಂಡು ಬಂದ ಚಿದಂಬರಂ ಅವರು, ತಮ್ಮೆಲ್ಲ ಜ್ಞಾನವನ್ನು ಯುಪಿಎ ಸರ್ಕಾರದ ಆಲೋಚನಾ ಕಾರ್ಖಾನೆಯಲ್ಲಿ ಮಥನಕ್ಕೆ ಬಿಟ್ಟು, ಕೊನೆಯಲ್ಲಿ ರಾಷ್ಟ್ರೀಯ ಭದ್ರತೆಯ ಮೂರ್ಖ ನೀತಿಯೊಂದನ್ನು ಹಡೆದೇಬಿಟ್ಟರು. ಅಂಥದೊಂದು ಉಗ್ರ ನಿಗ್ರಹ ದಳವನ್ನು ಸ್ಥಾಪಿಸುವುದಕ್ಕೆ ಅಮೆರಿಕ 36 ತಿಂಗಳುಗಳನ್ನು ತೆಗೆದುಕೊಂಡಿತ್ತು. ಅಷ್ಟೆಲ್ಲ ಕಾಯುವುದಕ್ಕೆ ಭಾರತ ಸಿದ್ಧವಿಲ್ಲ ಎಂದ ಚಿದು, 2010ರ ಅಂತ್ಯಕ್ಕೆಲ್ಲ ಎನ್ಸಿಟಿಸಿ ಕಾರ್ಯಾರಂಭಿಸುತ್ತದೆ ಎಂದು ಘೋಷಿಸಿಯೇ ಬಿಟ್ಟರು.
ಎರಡು ದಿನಗಳ ಹಿಂದೆ ದೆಹಲಿಯಲ್ಲಾದ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರತಿಪಕ್ಷ ಪಾಳಯದ ಮುಖ್ಯಮಂತ್ರಿಗಳೆಲ್ಲ ಗೃಹಮಂತ್ರಿ ಸುಶೀಲ್ ಕುಮಾರ್ ಶಿಂದೆ ಅವರ ವಿನಂತಿ ಪಕ್ಕಕ್ಕೆ ಸರಿಸಿ ಎನ್ಸಿಟಿಸಿಯ ಪರಿಕಲ್ಪನೆಯನ್ನು ಪ್ರಶ್ನಿಸಿದರು. ಈ ಮೊದಲೇ ವ್ಯಕ್ತವಾಗಿದ್ದ ಮುಖ್ಯಮಂತ್ರಿಗಳ ಪಡೆಯ ವಿರೋಧವನ್ನು ತುಸು ತಣ್ಣಗಾಗಿಸುವ ನಿಟ್ಟಿನಲ್ಲಿ ಶಿಂದೆಯವರು ಮಾರ್ಚ್ನಲ್ಲೇ ಹೇಳಿಕೆಯೊಂದನ್ನು ನೀಡಿದ್ದರು. ಆ ಪ್ರಕಾರ ಇಂಟಲಿಜೆನ್ಸ್ ಬ್ಯೂರೋ ನೇತೃತ್ವದ ಎನ್ಸಿಟಿಸಿಗೆ ಬಂಧನದ ಹಕ್ಕನ್ನು ಮೊಟಕುಗೊಳಿಸಿದ್ದರು. ಎನ್ಸಿಟಿಸಿ ಕೂಡ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಸಂಸ್ಥೆಯಾಗಿ ಬಿಂಬಿಸಲಾಗಿತ್ತು. ಆದರೆ ಈಗಲೂ ವಿರೋಧ ಮುಗಿದಿಲ್ಲವಾದ್ದರಿಂದ, ರಾಜಕೀಯ ಕಾರಣಗಳಿಗಾಗಿ ಪ್ರತಿಪಕ್ಷಗಳು ಉಗ್ರ ನಿಗ್ರಹದ ಪ್ರಯತ್ನವನ್ನೇ ಮಣ್ಣಾಗಿಸುತ್ತಿವೆ ಎಂದು ಕಾಂಗ್ರೆಸ್ ಪ್ರಚಾರಕ್ಕೆ ಇಳಿಯಬಹುದೇನೋ.
ಎನ್ಸಿಟಿಸಿ ಎಂಬ ಆಂಗ್ಲ ಅಕ್ಷರಗಳ ಅವತರಣಿಕೆಯಿಂದ ಉಗ್ರವಾದವನ್ನು ನಿಗ್ರಹಿಸಬಹುದು ಎಂದು ಈ ಸರ್ಕಾರ ಯೋಚಿಸಿದಂತಿದೆ. ಇದರ ಸ್ಥಾಪನೆಗೆ ಅಂದಾಜಿಸಲಾಗಿರುವ ಮೊತ್ತ 3400 ಕೋಟಿ ರುಪಾಯಿಗಳು. ಲಷ್ಕರೆ ತಯ್ಬಾ ಹಾಗೂ ಮಾವೋವಾದಿಗಳಿಗೆ ಲಂಚ ಕೊಟ್ಟು ಸುಮ್ಮನಿರಿ ಎನ್ನುವುದಕ್ಕೆ ಈ ಹಣ ಬಳಸಿಕೊಂಡರೂ ಯಶಸ್ವಿಯಾಗುವುದು ಕಷ್ಟವಿದೆ.
ಗುಪ್ತಚರ ಮಾಹಿತಿಯ ಸಮರ್ಪಕ ಹಂಚಿಕೆ ಕೊರತೆಯೇ ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳು ಯಶಸ್ವಿಯಾಗುವುದಕ್ಕೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅಮೆರಿಕದಲ್ಲಾದರೆ ಈ ಪರಿಸ್ಥಿತಿ ಇಲ್ಲ. 9/11ರ ದಾಳಿಗೆ ಪೂರ್ವಭಾವಿಯಾಗಿ ಅವರಲ್ಲಿ ಬೃಹತ್ ಪ್ರಮಾಣದ ಗುಪ್ತಚರ ಮಾಹಿತಿಗಳು ಇದ್ದವು. ಆದರೆ ಅವೆಲ್ಲವನ್ನೂ ಪರಿಶೀಲನೆಗೆ ಒಳಪಡಿಸುವುದು ತಡವಾಯಿತು. ಆದರೆ ಭಾರತದಲ್ಲಿ ಮೂಲತಃ ಗುಪ್ತಚರ ಮಾಹಿತಿಗಳೇ ಇರುವುದಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ಮಾಹಿತಿ ಲಭ್ಯವಾದರೂ ಆ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವ ಸಂಪನ್ಮೂಲ ಇರುವುದೇ ಇಲ್ಲ.
ಉದಾಹರಣೆಗೆ ಮುಂಬಯಿ ದಾಳಿಗೆ ಹಲವು ವಾರಗಳ ಮೊದಲು ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ಎರಡು ನಿರ್ದಿಷ್ಟ ಎಚ್ಚರಿಕೆಗಳನ್ನು ರವಾನಿಸಿತ್ತು. 2008ರ ಸೆಪ್ಟೆಂಬರ್ 18 ಮತ್ತು 24ರಂದು ಮುಂಬಯಿಯಲ್ಲಿ ವಿಧ್ವಂಸ ಸೃಷ್ಟಿಸುವುದಕ್ಕೆ ಲಷ್ಕರೆ ತಯ್ಬಾ ಆತ್ಮಹತ್ಯಾ ದಳವನ್ನು ಕಳುಹಿಸಲಿದೆ ಎಂದು ಅದು ಸೂಚಿಸಿತ್ತು. ಭಾರತದ ಗುಪ್ತಚರ ದಳವೂ ಲಷ್ಕರೆಯ ದಾಳಿಯನ್ನು ನಿರೀಕ್ಷಿಸಿತ್ತು. ಆದರೆ, ಸಮುದ್ರದ ಮೇಲ್ಮೈ ವಾತಾವರಣ ಪೂರಕವಾಗಿರಲಿಲ್ಲವಾದ್ದರಿಂದಲೇ ಏನೋ ಲಷ್ಕರೆ ತಯ್ಬಾ ತನ್ನ ದಾಳಿಯನ್ನು ಮುಂದೂಡಿತು. ಅಂದುಕೊಂಡ ವೇಳೆಗೆ ಹೇಗೆಂದರೂ ದಾಳಿ ಆಗಿಲ್ಲವಲ್ಲ ಎಂದು ನಮ್ಮ ವ್ಯವಸ್ಥೆ ನಿರಾಳವಾಗಿಬಿಟ್ಟಿತು. ಗುಪ್ತಚರ ಮಾಹಿತಿ ಆಧಾರದಲ್ಲಿ ಮುಂಬೈನ ತಾಜ್ ಹೊಟೇಲ್ ಎದುರು ನಿಲ್ಲಿಸಿದ್ದ ಪೊಲೀಸರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಒಂದು ವೇಳೆ ದಾಳಿ ನಡೆಯುವ ಸಂದರ್ಭದಲ್ಲಿ ಅವರು ಅಲ್ಲೇ ಇದ್ದಿದ್ದರೂ ವಿಶೇಷವಾಗಿ ಏನೂ ಮಾಡಲಿಕ್ಕಾಗುತ್ತಿರಲಿಲ್ಲ. ಏಕೆಂದರೆ ಅವರಿಗೆ ಪೂರಕ ತರಬೇತಿ ಹಾಗೂ ಶಸ್ತ್ರಗಳನ್ನು ಒದಗಿಸಿರಲೇ ಇಲ್ಲ.
ಈ ವರ್ಷದ ಆರಂಭದಲ್ಲಿ ಹೈದರಾಬಾದ್ನ ದಿಲ್ಖುಷ್ ನಗರದ ಮೇಲೆ ಆದ ಬಾಂಬ್ ದಾಳಿಯನ್ನೇ ಗಮನಿಸಿ. ಸಯ್ಯದ್ ಮಕ್ಬೂಲ್ ಹಾಗೂ ಇಮ್ರಾನ್ ಖಾನ್ ಎಂಬ ಇಬ್ಬರು ಜಿಹಾದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಆಧಾರದಲ್ಲಿ ಪೊಲೀಸ್ ಗುಪ್ತಚರ ವಿಭಾಗವು ಆರು ಸಂಭಾವ್ಯ ಗುರಿಗಳನ್ನು ಗುರುತಿಸಿತ್ತು. 2012ರ ನವೆಂಬರ್ 15ಕ್ಕೆ ಎಚ್ಚರಿಕೆಯನ್ನೂ ಹೊರಡಿಸಿತು. ಇಂಡಿಯನ್ ಮುಜಾಹಿದೀನ್ನ ಕಮಾಂಡರ್ ರಿಯಾಜ್ ಷಾಬಂದ್ರಿ ಆದೇಶದಂತೆ 2012ರ ಜುಲೈನಲ್ಲಿ ತಾವು ದಿಲ್ಖುಷ್ ನಗರ ಹಾಗೂ ಬೇಗಂ ಬಜಾರ್ನಲ್ಲಿ ಪರಿವೀಕ್ಷಣೆ ನಡೆಸಿದ್ದಾಗಿ ಆ ಆರೋಪಿಗಳು ಹೇಳಿದ್ದರು.
2013ರಲ್ಲಿ ಸಂಭಾವ್ಯ ದಾಳಿಗಳ ಬಗ್ಗೆ ಗುಪ್ತಚರ ವಿಭಾಗವು ಮೂರು ಸಾಧ್ಯತೆಗಳನ್ನು ಮುಂದಿಟ್ಟಿತು. ಅಫ್ಜಲ್ ಗುರು ನೇಣಿಗೇರಿದ್ದಕ್ಕೆ ಪ್ರತಿಯಾಗಿ ಉಗ್ರದಾಳಿ ನಡೆಯಬಹುದು ಎಂದು ಫೆಬ್ರುವರಿ 16ರಂದು ಹೇಳಿತು. ಉಗ್ರರು ಪರಿವೀಕ್ಷಣೆ ಮಾಡಿರುವ ಹಾಗೂ ಈ ಹಿಂದೆ ದಾಳಿ ನಡೆಸಿದ ನೆಲವೇ ಮತ್ತೆ ಭಯೋತ್ಪಾದಕ ಆಘಾತಕ್ಕೆ ತುತ್ತಾಗುವ ಸಂಭವವಿದೆ ಎಂದು ಫೆಬ್ರವರಿ 18ರಂದು ಹೇಳಿತು. ಫೆಬ್ರವರಿ 19ರಂದು ಉಗ್ರರು ಸರ್ವೇ ನಡೆಸಿರುವ ಪ್ರದೇಶಗಳು ಹಾಗೂ ದಾಳಿಗೆ ಒಳಗಾಗಬಹುದಾದ ಪ್ರದೇಶಗಳನ್ನು ನಿಖರವಾಗಿ ಸೂಚಿಸಿತು. ಈ ಮೂರೂ ಎಚ್ಚರಿಕೆಗಳು ಭಯೋತ್ಪಾದಕ ದಾಳಿಯನ್ನು ತಡೆಯುವುದಕ್ಕೆ ನೆರವಾಗಲಿಲ್ಲ.
ಆಂಧ್ರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಎಚ್ಚರಿಕೆಗಳನ್ನು ಹೀಗೆ ವಿಶ್ಲೇಷಿಸುತ್ತಾರೆ- 'ಆಗಸ್ಟ್ 2005ರಲ್ಲಿ ಶಾಸಕರೊಬ್ಬರು ಮಾವೋವಾದಿಗಳಿಂದ ಹತ್ಯೆಯಾದರು. ಹೀಗೊಂದು ಹತ್ಯೆಗೆ ಸಂಚು ರೂಪುಗೊಂಡಿದೆ ಎಂಬ ಮಾಹಿತಿಯೇನೋ ನಮಗೆ ಲಭಿಸಿತ್ತು. ಆದರೆ ಗುರಿ ಯಾರು, ಯಾರಿಗೆಲ್ಲ ನಾವು ರಕ್ಷಣೆ ಹೆಚ್ಚಿಸುವುದು? ಎಲ್ಲರಿಗೂ ಭದ್ರತೆ ಮೇಲ್ಮಟ್ಟಕ್ಕೆ ಏರಿಸುವ ಸಂಪನ್ಮೂಲ ನಮ್ಮ ಬಳಿ ಇಲ್ಲ. ಪ್ರತಿಬಾರಿ ಆಗಸ್ಟ್ 15 ಬಂದಾಗಲೂ ಶಾಸಕರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ನನ್ನ ಮೇಜಿಗೆ ಬರುತ್ತದೆ...'
ನಿಜಕ್ಕೂ ಆಘಾತಕಾರಿಯಾಗಿರುವ ವಿಷಯವೆಂದರೆ ಮುಂಬಯಿ ದಾಳಿ ನಂತರವೂ ಯುಪಿಎ ಸರ್ಕಾರ ನೈಜ ಸಮಸ್ಯೆಯ ಆಳಕ್ಕೆ ಇಳಿಯುವುದಕ್ಕೆ ಇನಿತೂ ಪ್ರಯತ್ನಿಸದೇ ಇರುವುದು. ಗುಪ್ತಚರ ಮಾಹಿತಿ ಕೊರತೆ ಹಾಗೂ ಪ್ರತಿಕ್ರಿಯೆ ನೀಡುವುದಕ್ಕೆ ಇರದ ಸಾಮರ್ಥ್ಯಗಳೇ ಆ ನೈಜ ಸಮಸ್ಯೆಗಳು. ಈ ವರ್ಷದ ಮಾರ್ಚ್ನಲ್ಲಿ ಗೃಹಖಾತೆ ಸಹಾಯಕ ಸಚಿವ ಆರ್ಪಿಎನ್ ಸಿಂಗ್ ಅವರು ಸಂಸತ್ತಿಗೆ ತಿಳಿಸಿರುವಂತೆ ಇಂಟಲಿಜೆನ್ಸ್ ಬ್ಯೂರೊ 18,975 ಸಿಬ್ಬಂದಿಯನ್ನು ಹೊಂದಿದೆ. 26, 867 ಇರಬೇಕಿದ್ದ ಸಿಬ್ಬಂದಿ ಸಂಖ್ಯೆ. 2009ರಲ್ಲಿ ಅಂದಿನ ಗೃಹಸಚಿವ ಪಿ. ಚಿದಂಬರಂ ಅವರು 6 ಸಾವಿರ ಸಿಬ್ಬಂದಿ ನೇಮಕಕ್ಕೆ ಅಸ್ತು ಎಂದಿದ್ದರು. ಆ ನೇಮಕವಿನ್ನೂ ಆಗಬೇಕಿದೆ. ಈ ಹಂತದಲ್ಲಿ ಏಕಾಏಕಿ 8 ಸಾವಿರ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡುಬಿಡೋಣ ಎಂದರೆ ಅದೂ ಸಾಧ್ಯವಾಗುವುದಿಲ್ಲ. ಏಕೆಂದರೆ ಗುಪ್ತಚರ ದಳದ ನಾರ್ಥ್ ಬ್ಲಾಕ್ ಕಚೇರಿ ವರ್ಷಕ್ಕೆ 600-700 ಸಿಬ್ಬಂದಿಯನ್ನು ಸಮರ್ಪಕವಾಗಿ ತರಬೇತುಗೊಳಿಸಬಲ್ಲದು ಅಷ್ಟೆ.
ಇದಕ್ಕಿಂತ ಕೆಟ್ಟ ಸಂಗತಿ ಎಂದರೆ ಅಲ್ಲಿರುವವರಲ್ಲೇ ಹೆಚ್ಚಿನವರನ್ನು ಕೆಲಸಕ್ಕೆ ಬಾರದ ಜಾಗದಲ್ಲಿ ನಿಯೋಜಿಸಲಾಗಿದೆ. ಗುಪ್ತಚರ ದಳದ ಉಗ್ರ ನಿಗ್ರಹ ಪ್ರಯತ್ನದ ಘಟಕ 'ಆಪರೇಷನ್ ಡೈರೆಕ್ಟೊರೇಟ್'ನಲ್ಲಿ 30 ವಿಶ್ಲೇಷಕರು ಹಾಗೂ ಅಷ್ಟೇ ಸಂಖ್ಯೆಯ ಬೇರುಮಟ್ಟದ ಕೆಲಸಗಾರರಿದ್ದಾರೆ. ಇನ್ನೂ 30 ಮಂದಿ ಮಾವೋವಾದಿಗಳ ಮೇಲೆ ನಿಗಾ ಇರಿಸುವುದಕ್ಕೆ ನಿಯುಕ್ತರಾಗಿದ್ದಾರೆ. 2008ರಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ರಚಿಸಲಾಗಿದ್ದ ತಂಡಗಳು ಸಿಬ್ಬಂದಿ ಕೊರತೆಯಿಂದ ಮುಚ್ಚಿವೆ. ದೆಹಲಿಯಲ್ಲಿ ಕುಳಿತಿರುವ 28 ಜಂಟಿ ಕಾರ್ಯದರ್ಶಿಗಳ ಪೈಕಿ ಐವರು ಉಗ್ರ ನಿಗ್ರಹ ವಿಷಯವನ್ನೇ ನಿರ್ವಹಿಸುತ್ತಿದ್ದಾರೆ. ಉಳಿದವರನ್ನು ಚುನಾವಣೆ ನಿರ್ವಹಣೆ, ಕೈಗಾರಿಕಾ ಸಂಬಂಧ, ಆಹಾರ ಭದ್ರತೆಯಂಥ ವಿಷಯಗಳ ನಿರ್ವಹಣೆಗೆ ಬಿಡಲಾಗಿದೆ!
ಹೋಗಲಿ, ಈ ಎನ್ಸಿಟಿಸಿ ಎಂಬುದು ಸಿದ್ಧಗೊಂಡಿರುವ ಪಡೆಯಾ? ಇಲ್ಲ. ಇದಕ್ಕೆ ಈಗಲೇ ಅಸ್ತಿತ್ವದಲ್ಲಿರುವ ಘಟಕಗಳಿಂದ ಸಿಬ್ಬಂದಿಯನ್ನು ಎಳೆದುಕೊಳ್ಳಬೇಕು. ಅವು ಯಾವವು?
'ಕ್ರೈಮ್ಸ್ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಆ್ಯಂಡ್ ಸಿಸ್ಟಮ್'- ಇದರ ಸಾಫ್ಟ್ವೇರ್ ಪದೇ ಪದೆ ಕ್ರಾಶ್ ಆಗುತ್ತಿದೆ. 'ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್'- ಸರ್ಕಾರದ ಡಾಟಾಬೇಸ್ಗಳನ್ನು ತಕ್ಷಣಕ್ಕೆ ಒದಗಿಸಬೇಕಾದ ಈ ವ್ಯವಸ್ಥೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎನ್ನುತ್ತವೆ ಮೂಲಗಳು. ಇನ್ನು 'ಮಲ್ಟಿ ಏಜೆನ್ಸಿ ಸೆಂಟರ್' ಎಲ್ಲ ಗುಪ್ತಚರ ಘಟಕಗಳ ಮಾಹಿತಿ ಇಟ್ಟುಕೊಂಡು ಪ್ರತಿದಿನ ಎರಡು ಮೀಟಿಂಗ್ ಮಾಡಿ ದಾಳಿಯ ಆತಂಕಗಳನ್ನು ದೇಶದೆಲ್ಲೆಡೆ ರವಾನಿಸುವ ಕೆಲಸ ಮಾಡಿಕೊಂಡಿದೆ.
ಹೀಗಾಗಿ ಎನ್ಸಿಟಿಸಿ ಸ್ಥಾಪನೆಗೆ ಕೋಟ್ಯಂತರ ರುಪಾಯಿಗಳನ್ನು ಚೆಲ್ಲುವುದಕ್ಕೆ ಮೊದಲು ಸರ್ಕಾರವು ಈಗಿರುವ ಇಂಟಲಿಜೆನ್ಸ್ ಬ್ಯೂರೋವನ್ನೇ ಬಲಪಡಿಸಬೇಕಿದೆ. ಸಿಬ್ಬಂದಿ ಕೊರತೆ ನೀಗಿಸಲಿ. ಅದರ ಕಾರ್ಯ ವಿಸ್ತರಣೆಗೆ ಅಗತ್ಯ ಹಣಕಾಸು ನೆರವು ಒದಗಿಸಲಿ. ಆಗ ರಾಜ್ಯಗಳ ಗುಪ್ತಚರ ವಿಭಾಗದ ಮೇಲಿನ ಒತ್ತಡವನ್ನೂ ಕಡಿಮೆ ಮಾಡಿದಂತಾಗುತ್ತದೆ. ಯಾವುದೇ ದಾಳಿಗೆ ಮೊದಲಿಗರಾಗಿ ಸ್ಪಂದಿಸುವ ಪೊಲೀಸರು ಗುಪ್ತಚರ ಮಾಹಿತಿಯ ಮೊದಲ ಮೂಲವೂ ಆಗಿರುತ್ತಾರೆ. 2007ರಲ್ಲಿ 11, 32,302ರಷ್ಟಿದ್ದ ಪಡೆ 2011ರಲ್ಲಿ ಯಕಶ್ಚಿತ್ ಏರಿಕೆ ಕಂಡು 12, 81, 317ಕ್ಕೆ ಮುಟ್ಟಿದೆ.
ನಮ್ಮ ಗುಪ್ತಚರ ಮತ್ತು ಪೊಲೀಸ್ ಇಲಾಖೆಗಳನ್ನು ದಶಕಗಳಿಂದ ಶಿಥಿಲಗೊಳಿಸಿ, ತಳಮಟ್ಟದಲ್ಲಿ ಕೆಟ್ಟಿರುವ ಈ ವ್ಯವಸ್ಥೆಯ ನಿಗಾ ಮತ್ತು ಸಮನ್ವಯಗಳಿಗೆ ಹೊಸ ಹೊಸ ಪದರಗಳನ್ನು ನಿರ್ಮಿಸುತ್ತಿದ್ದೇವೆ ಎನ್ನುತ್ತಾರೆ ಹೊಸದೆಹಲಿಯ 'ವಿಪತ್ತು ನಿರ್ವಹಣೆ ಸಂಸ್ಥೆ' ನಿರ್ದೇಶಕ ಅಜಯ್ ಸಾಹ್ನಿ.
- ಪ್ರವೀಣ್ ಸ್ವಾಮಿ
ಖ್ಯಾತ ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

