

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಕುಟುಂಬಗಳಿಗೆ ಒಕ್ಕಲೆಬ್ಬಿಸುತ್ತಾರೆ ಎಂಬ ಭಯ ಇದೆಯೇ? ಈ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಇದೀಗ ದೊರೆಯುತ್ತಿದೆ. ಇಲ್ಲಿನ ಶೇ.90ರಷ್ಟು ಕುಟುಂಬಗಳು ಒಕ್ಕಲೇಳಲು ತಯಾರಾಗಿದ್ದಾರೆ ಎಂಬ ಅಂಶ ಅಧ್ಯಯನ, ಅಂಕಿ ಅಂಶಗಳಿಂದ ಲಭ್ಯವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಸರಿಸಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಸರ್ಕಾರಿ ಅಂಕಿಗಳ ಪ್ರಕಾರ 1,299 ಕುಟುಂಬಗಳಿದ್ದು, 6,241 ಜನಸಂಖ್ಯೆ ಇದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ದಾಖಲೆಗಳನ್ನು ಹೊಂದಿರುವ 293 ಕುಟುಂಬಗಳಿವೆ.
ಉದ್ಯಾನವನದಲ್ಲಿರುವ ಕುಟುಂಬಗಳಿಗೆ ಹೊರಬರಲು ಸರ್ಕಾರ ಮೊದಲಿಗೆ 10 ಲಕ್ಷ ಮೌಲ್ಯದ ಪ್ಯಾಕೇಜ್ ಘೋಷಿಸಿತ್ತು. ಅದರಂತೆ 12 ಕುಟುಂಬಗಳು ತಮ್ಮ 15 ಎಕರೆ ಜಾಗವನ್ನು ಅರಣ್ಯಕ್ಕೆ ಬಿಟ್ಟುಕೊಟ್ಟು ಹೊರ ಬಂದಿದ್ದವು. ಅವರಿಗೆ ಒಟ್ಟು 91,56,510 ಪರಿಹಾರ ನೀಡಲಾಗಿತ್ತು.
ಬಳಿಕ 2010- 11ರಲ್ಲಿ ಮತ್ತೆ 27 ಕುಟುಂಬಗಳು ಅರಣ್ಯದಿಂದ ಹೊರಗೆ ಬಂದಿವೆ. ಹೀಗೆ ಇದೀಗ ತಾಲೂಕಿನಲ್ಲಿ 39 ಕುಟುಂಬಗಳು ಸರ್ಕಾರ ನೀಡಿದ ಪ್ಯಾಕೇಜ್ ಸ್ವೀಕರಿಸಿ ಅಧಿಕೃತವಾಗಿ ಹೊರಗೆ ಬಂದಂತಾಗಿದೆ. ಸುಮಾರು ರು. 4,13,56,510 ಪರಿಹಾರ ನೀಡಲಾಗಿದೆ.
ಇದೀಗ ಮತ್ತೆ 2012 ಡಿಸೆಂಬರ್ 28 ರಂದು ಕುದುರೆಮುಖ ವನ್ಯಜೀವಿ ಕಾರ್ಕಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ತಂಗಡಿ ತಾಲೂಕಿನ 16 ಕುಟುಂಬಗಳು ಸ್ವ ಇಚ್ಛೆಯಿಂದ ಹೊರಗೆ ಬರಲಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ. ಅದರಲ್ಲಿ ಹೊರಗೆ ಬರುವವರ ಆಸ್ತಿಯ ಮೌಲ್ಯ 3,81,61,036 ಆಗಿರುತ್ತದೆ ಎಂದು ಸೂಚಿಸಿದ್ದಾರೆ. ಈ ಕುಟುಂಬಗಳು ಹೊರ ಬಂದರೆ ಒಟ್ಟು 55 ಕುಟುಂಬಗಳು ಹೊರಬಂದಂತಾಗುತ್ತದೆ. ಸಂರಕ್ಷಣಾಧಿಕಾರಿಗಳು ನೀಡಿದ ವಿವರಗಳ ಪ್ರಕಾರ ಚಿಕ್ಕಮಗಳೂರು, ಉಡುಪಿ ಮತ್ತು ದ.ಕ.ದಲ್ಲಿನ ಒಟ್ಟು 80 ಕುಟುಂಬಗಳು ಸ್ವಇಚ್ಛೆಯಿಂದ ಹೊರಬರಲು ಅರ್ಜಿ ಸಲ್ಲಿಸಿದ್ದವು. ಈ ಕುಟುಂಬಗಳ ಆಸ್ತಿಯ ಮೌಲ್ಯಮಾಪನ ನಡೆದಿದ್ದು ರು. 21,18,18,562 ಆಗಿದೆ ಎಂದು ಸೂಚಿಸಿದ್ದಾರೆ.
ಈ ಹಿಂದೆ ಒಂದು ಕುಟುಂಬಕ್ಕೆ ಎಷ್ಟೇ ಆಸ್ತಿ ಇರಲಿ ಅವರು ಹೊರಗೆ ಬರುವುದಾದರೆ 10 ಲಕ್ಷ ಮಾತ್ರ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ, ಈಗ ಮಾತ್ರ ಕುಟುಂಬಕ್ಕಿರುವ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನೇ ನೀಡಲು ಸರ್ಕಾರ ಸಿದ್ಧವಾಗಿದೆ. ಇದು ಈ ಹಿಂದೆ 10 ಲಕ್ಷ ತೆಗೆದುಕೊಂಡು ಬಂದವರಿಗೂ ಅನ್ವಯಿಸುತ್ತದೆ.
ಇದಕ್ಕೆ ಉದಾಹರಣೆಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿನ 35 ಕುಟುಂಬಗಳಿಗೆ ಆಸ್ತಿಯ ಮೌಲ್ಯವನ್ನೇ ನೀಡಲಾಗಿದೆ. ಹೀಗಾಗಿ ಅವರೆಲ್ಲ ಅರಣ್ಯ ಬಿಟ್ಟು ಬಂದಿದ್ದಾರೆ. ಸರ್ಕಾರದ ಈ ಕ್ರಮದಿಂದ ಅಲ್ಲಿ ಇನ್ನಷ್ಟು ಕುಟುಂಬಗಳು ಹೊರಗೆ ಬರಲು ತಯಾರಾಗಿವೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಸರ್ಕಾರ ಅರಣ್ಯ ಬಿಟ್ಟು ಹೊರೆಗೆ ಬರುವವರಿಗೆ ಕೂಡಲೇ ಸ್ಪಂದಿಸಿದರೆ ಇನ್ನೆರಡು ವರ್ಷಗಳಲ್ಲಿ ಎಲ್ಲರೂ ಹೊರಬಲಿದ್ದಾರೆ.
ಸರ್ಕಾರ ಆಸ್ತಿಯ ಸಂಪೂರ್ಣ ಮೌಲ್ಯ ನೀಡಲಿದೆ ಎಂದು ತಿಳಿದ ಬೆಳ್ತಂಗಡಿ ತಾಲೂಕಿನ ಅರಣ್ಯದಲ್ಲಿರುವ 134 ಕುಟುಂಬಗಳು ಹೊಸದಾಗಿ ಅರ್ಜಿ ನೀಡಿದ್ದಾರೆ.
ಇನ್ನು ಕೆಲವರಿಗೆ ತಮ್ಮ ಜಮೀನಿನ ದಾಖಲೆಗಳು ಸೂಕ್ತವಾಗಿ ಇಲ್ಲದಿರುವುದರಿಂದ ಅರ್ಜಿ ನೀಡಲು ತೊಂದರೆಯಾಗಿದೆ. ಅರ್ಜಿದಾರರ ಆಸ್ತಿಗಳ ಮೌಲ್ಯ ಮಾಪನ ಇನ್ನಷ್ಟೇ ನಡೆಯಬೇಕಾಗಿದೆ. ಈ ಹಿಂದೆ ಮೌಲ್ಯಮಾಪನ ಮುಗಿದಿರುವ 16 ಕುಟುಂಬಗಳ ವಿವರ ಸರ್ಕಾರಕ್ಕೆ ಹೋಗಿದೆ.
ಇನ್ನೊಂದು ಕುತೂಹಲಕಾರಿ ವಿದ್ಯಮಾನ ನಡೆದಿದೆ. ತಾಲೂಕಿನ ತುತ್ತತುದಿಯಲ್ಲಿ ಮತ್ತು ಕಟ್ಟಕಡೆಯ ಗ್ರಾಮವಾದ ಎಳನೀರಿನಲ್ಲಿ 5 ಕುಟುಂಬಗಳು ಸರ್ಕಾರಕ್ಕೆ ತಾವು ಹೊರಗೆ ಬರುತ್ತೇವೆ ಎಂದು ಅರ್ಜಿ ಸಲ್ಲಿಸಿದ್ದರು. ಅವರ ಆಸ್ತಿಯ ಮೌಲ್ಯಮಾಪನವೂ ಮುಗಿದಿತ್ತು. ತಿಂಗಳುಗಳ ಕಾಲ ಪರಿಹಾರ ದೊರೆತೀತೆಂದು ಕಾದ ಕುಟುಂಬಗಳು ಕೊನೆಗೆ ಕೋರ್ಟ್ ಮೆಟ್ಟಲೇರಿದವು. ಇದೀಗ ಕೋರ್ಟ್ 2013 ಜ. 31 ರಂದು ಐದೂ ಕುಟುಂಬಗಳ ಆಸ್ತಿ ಮೌಲ್ಯದಷ್ಟೇ ಪರಿಹಾರವನ್ನು ಎರಡು ತಿಂಗಳೊಳಗೆ ನೀಡಬೇಕು ಎಂದು ಆದೇಶ ನೀಡಿದೆ. ಈ ಆದೇಶಕ್ಕೆ ಅನುಗುಣವಾಗಿ ಅವರಿಗೆ ಪರಿಹಾರ ನೀಡಲು ಸರ್ಕಾರ 2.1 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಎಳನೀರು ಗ್ರಾಮದ ಜಿನರಾಜ ಶೆಟ್ಟಿ, ಎಸ್.ಪಿ. ಶಾಂತಿಪ್ರಸಾದ್, ಪದ್ಮಜ, ವೈ.ಎನ್. ನಾಗಕುಮಾರ್ ಶೆಟ್ಟಿ, ಸಂತೋಷ್ ಇವರೇ ನ್ಯಾಯಾಲಯಕ್ಕೆ ಹೋಗಿ ಪರಿಹಾರ ಪಡೆಯಲು ಸಿದ್ಧರಾದವರು. ಇಲ್ಲಿ ಜಿನರಾಜ ಶೆಟ್ಟಿ ಅವರ 1.31 ಸೆಂಟ್ಸ್ ಜಾಗಕ್ಕೆ ರು. 57,53,206 ಮೌಲ್ಯ ನಿಗದಿಮಾಡಲಾಗಿದೆ. ಇನ್ನುಳಿದ 4 ಮಂದಿಯ ಮೌಲ್ಯಮಾಪನವೂ ಇದೇ ರೀತಿ ಗುರುತಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಿಂದ 12, ದ.ಕ.ದಿಂದ 5 ಮತ್ತು ಉಡುಪಿಯಿಂದ 1 ಕುಟುಂಬ ನ್ಯಾಯಾಲಯಕ್ಕೆ ಮೊರೆ ಹೋಗಿ ಪರಿಹಾರ ಸಿಗುವಲ್ಲಿ ಪ್ರಯತ್ನಿಸಿದವರಾಗಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ. ಈ ರೀತಿಯ ಪ್ರಕರಣದಿಂದ ಪರಿಹಾರ ಸಿಗುತ್ತದೆ ಎಂದು ಕಾದು ಕುಳಿತ ಉಳಿದವರೂ ನ್ಯಾಯಾಲಯದ ಮೆಟ್ಟಿಲೇರಬೇಕೇ ಎಂಬ ಪ್ರಶ್ನೆಯನ್ನು ಕೇಳುವಂತಾಗಿದೆ. ಈ ಎಲ್ಲಾ ಕಾರಣಗಳಿಂದ ವನವಾಸಿಗಳು ಕೇಳಿದಷ್ಟು ಸರ್ಕಾರ ಹಣ ಕೊಟ್ಟರೆ ಹೊರಗೆ ಬರಲು ಸಿದ್ಧರಾಗಿದ್ದಾರೆ.
ಒಕ್ಕಲೆಬ್ಬಿಸುವ ಭಯ ಯಾರಿಗೂ ಇಲ್ಲ. ಭಯ ಹುಟ್ಟಿಸಲಾಗುತ್ತದೆ ಅಷ್ಟೆ. ಸರ್ಕಾರಕ್ಕೆ ಕೆಲ ಸ್ಥಾಪಿತ ಹಿತಾಸಕ್ತಿಗಳಿಂದ ಅಲ್ಲಿಂದ ಯಾರೂ ಹೊರಗೆ ಬರುವುದಿಲ್ಲ ಎಂಬ ತಪ್ಪು ಮಾಹಿತಿ ಹೋಗುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲರೂ ಒಕ್ಕಲೆದ್ದರೆ ನಕ್ಸಲ್ ಪ್ಯಾಕೇಜ್ ಬರುವುದು ನಿಂತು ಹೋಗುವುದರಿಂದ ನೀವು ಒಕ್ಕಲೇಳಬೇಡಿ ಎಂಬುದನ್ನು ಪ್ರಚಾರ ಮಾಡಿಕೊಂಡು ಬರುತ್ತಿರುವುದು ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಬಂದಿರುವ ನಕ್ಸಲ್ ಪ್ಯಾಕೇಜ್ ಅರಣ್ಯದ ತುತ್ತತುದಿಯಲ್ಲಿರುವವರಿಗೆ ಮುಟ್ಟುವುದೇ ಇಲ್ಲ. ಅವರಿಗೆ ಸಿಕ್ಕಿರುವುದು ಸೋಲಾರ್ ಲೈಟ್ ಮಾತ್ರ. ಇನ್ನುಳಿದ ರಸ್ತೆ, ವಿದ್ಯುತ್ ಇತರೇ ಮೂಲ ಸೌಕರ್ಯ ಸಿಗುತ್ತಿಲ್ಲ. ಇದು ಸಿಗುವುದೂ ಸಾಧ್ಯವಿಲ್ಲ. ಎಲ್ಲ ಸವಲತ್ತುಗಳನ್ನು ಪಡೆಯುತ್ತಿರುವವರು ತಪ್ಪಲು ಪ್ರದೇಶದಲ್ಲಿವವರು ಅಂದರೆ ಅರಣ್ಯದ ಗಡಿಯಲ್ಲಿರುವವರು ಮತ್ತು ಗಡಿಯ ಹೊರಗೆ ಇರುವವರು ಮಾತ್ರ.
ಶುದ್ಧ ಅರಣ್ಯದೊಳಗೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ಮಾಡುವ ಹಾಗಿಲ್ಲ. ಏನಿದ್ದರೂ ಸವಲತ್ತು ಸಿಗುವುದು ಉದ್ಯಾನವನದ ಗಡಿಯ ಅಂಚಿನಲ್ಲಿರುವವರಿಗೆ ಮಾತ್ರ. ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆ ಮಾಡಿರುವುದು ಅಲ್ಲಿ ಜನವಸತಿ ಇಲ್ಲವೆಂದೇ ಅರ್ಥ.
ಹೀಗಾಗಿ ಉದ್ಯಾನವನದೊಳಗೆ ಇರುವವರಿಗೆ ಹಕ್ಕು ಪತ್ರವಾಗಲಿ. ಇತರೇ ಸೌಲಭ್ಯವಾಗಲಿ ಸಿಗುವುದು ಕನಸಿನ ಮಾತೇ ಸರಿ. ಅವರೆಲ್ಲರೂ ಹೊರಗೆ ಬರುವುದು ಅನಿವಾರ್ಯ. ಅಲ್ಲಿಯೇ ಇದ್ದರೆ ಅವರಿಗೆ ಸರ್ಕಾರವೂ ಏನೂ ಮಾಡುವ ಹಾಗಿಲ್ಲ.
ರಾಜಕಾರಣಿಗಳ ಭರವಸೆ: ರಾಜಕಾರಣಿಗಳು ಅಲ್ಲಿರುವವವರಿಗೆ ಅದು ನೀಡುತ್ತೇವೆ, ಇದು ಕೊಡುತ್ತೇವೆ ಎಂದು ಹುಸಿ ಆಸೆ ಹುಟ್ಟಿಸಿ ಓಟು ಪಡೆಯುತ್ತಾರೆ ಅಷ್ಟೆ. ಇದೀಗ ಇದೆಲ್ಲವೂ ಅಲ್ಲಿನ ನಿವಾಸಿಗಳಿಗೆ ಅರ್ಥವಾಗಿದ್ದು, ಎಲ್ಲರೂ ಆಸ್ತಿ ಮೌಲ್ಯಕ್ಕನುಗುಣವಾಗಿ ಪರಿಹಾರ ಪಡೆದು ಹೊರಬರಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಆಡಳಿತ ಕೂಡಲೇ ಸ್ಪಂದಿಸುವುದು ಅಗತ್ಯ. ಸ್ಪಂದಿಸಿದರೆ ನಕ್ಸಲ್ ಸಮಸ್ಯೆ ಸಂಪೂರ್ಣ ಕೊನೆಗೊಳ್ಳಲಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುಟುಂಬಗಳ ಪುನರ್ವಸತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಹೊರಡಿಸಿರುವ ಸರ್ಕಾರಿ ಆದೇಶ ಪಾಲಿಸುವಂತೆ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಆದೇಶವನ್ನೂ ನೀಡಿದೆ. ಈ ಆದೇಶದಲ್ಲಿ ಅರಣ್ಯ ಬಿಟ್ಟು ಬರುವವರಿಗೆ ಜಾಗದ ಮೌಲ್ಯಕ್ಕನುಗುಣವಾಗಿ ಹಣ ಪಾವತಿ ಮಾಡಬೇಕು ಎಂಬ ಸೂಚನೆಯಿದೆ. ಈ ವಿಚಾರ ಗೊತ್ತಿದ್ದು ಅರಣ್ಯಾಧಿಕಾರಿಗಳು ಈಗಾಗಲೇ ಸರ್ವೆ ಆದವರ ಮತ್ತು ಅರ್ಜಿ ಕೊಟ್ಟವರ ವಿವರಗಳನ್ನು ಸರ್ಕಾರದ ಗಮನಕ್ಕೆ ತರದಿರುವುದು ವಿಪರ್ಯಾಸ. ಹೊರಬರಲು ಇಚ್ಚೆಯುಳ್ಳವರು ಸಂರಕ್ಷಾಣಾಧಿಕಾರಿಗಳ ಕದ ತಟ್ಟಿ ತಟ್ಟಿ ಬಸವಳಿದಿದ್ದಾರೆ. ಸರ್ಕಾರ ಹೊರ ಬನ್ನಿ ಎಂದು ಒಂದೆಡೆ ಹೇಳಿದರೆ ಹೊರಗೆ ಬರುವವವರಿಗೆ ಸತಾಯಿಸುವುದು ಇನ್ನೊಂದೆಡೆ ನಿರಂತರವಾಗಿ ನಡೆಯುತ್ತಿದೆ. ಇನ್ನಾದರೂ ಅರಣ್ಯ ಮಂತ್ರಿಗಳು ಕೂಡಲೇ ಗಮನ ಹರಿಸುವುದು ಅಗತ್ಯವಿದೆ.
- ದೀಪಕ್ ಅಳದಂಗಡಿ