ಅಂಕಣಗಳು

ರೈತರ ಅಭ್ಯುದಯಕ್ಕೆ ರಚಿಸಬೇಕಿದೆ ಹೊಸ ನೀತಿ

Published On :

ರಾಜ್ಯದ ರೈತರು ಮೂರು ವರ್ಷಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬದುಕೇ ಒಂದರ್ಥದಲ್ಲಿ ಸಂಕ್ರಮಣದ ಕಾಲದಲ್ಲಿದೆ. ನೂರಾರು ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಿದರೆ, ಹಲವರು ಕೃಷಿಯಿಂದ ವಿಮುಖರಾಗಿ ಸ್ವಂತ ಜಮೀನುಗಳಿದ್ದರೂ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇದನ್ನೆಲ್ಲ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಸಮಗ್ರ ಕೃಷಿ ನೀತಿ ಅವಶ್ಯಕತೆ ಇದೆ.
1980ರ ದಶಕ ಎಂದರೆ ರಾಜ್ಯದ ಪಾಲಿಗೆ ಅದು ರೈತ ಚಳವಳಿಯ ಕಾಲ. ಈ ಸಂದರ್ಭದಲ್ಲಿ ನರಗುಂದ ಮತ್ತು ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ನಿಂದ ತೀವ್ರ ಹೋರಾಟಕ್ಕಿಳಿದ ರಾಜ್ಯ ರೈತ ಸಮುದಾಯ ದೊಡ್ಡ ಕ್ರಾಂತಿಯನ್ನೇ ಮಾಡಿತು. ರೈತರ ಹೋರಾಟದ ಬಿರುಸಿಗೆ ಅಂದಿನ ಗುಂಡೂರಾವ್ ಸರ್ಕಾರವೇ ನಡುಗಿ ಹೋಗಿತ್ತು. ನಂತರ ರೈತ ಚಳವಳಿ ರಾಜ್ಯದಲ್ಲಿ ಸಕ್ರಿಯವಾಗಿ, ಅಂದಿನಿಂದ ಇಂದಿನವರೆಗೂ ರಾಜ್ಯದ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸಮಗ್ರ ಕೃಷಿ ನೀತಿ ರೂಪಿಸಬೇಕು ಎನ್ನುವ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೆ ಆಳಿದ ಯಾವ ಸರ್ಕಾರಗಳೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿಯೇ ಅಂದಿನ ಸಿಎಂ ಹಸಿರು ಶಾಲು ಹೊದ್ದುಕೊಂಡು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಬಿಟ್ಟರೆ, 5 ವರ್ಷದ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಬಗೆ ಹರಿಸುವ ಬದಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಸಾವಯವ ಕೃಷಿಯನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಸಾವಯವ ಕೃಷಿ ಮಿಷನ್ ಸ್ಥಾಪಿಸಿ, ಅದಕ್ಕೆ ನೂರಾರು ಕೋಟಿ ಅನುದಾನ ನೀಡಿದರೂ ಅದು ಉಪಯೋಗವಾಗಲಿಲ್ಲ. ಬದಲಾಗಿ ಅವರ ಸರ್ಕಾರದ ಸಿಎಂ ಹಾಗೂ ಮಂತ್ರಿಗಳ ಪ್ರಚಾರಕ್ಕೆ ಆ ಹಣ ಹೆಚ್ಚಾಗಿ ಬಳಕೆಯಾಯಿತು.
ಅದೊಂದು ದಿನ ಒಬ್ಬ ರೈತನನ್ನು ಮೆರವಣಿಗೆ ಮಾಡಿದ್ದನ್ನು ಬಿಟ್ಟರೆ ಅದು ರೈತ ಸ್ನೇಹಿ ಕಾರ್ಯಕ್ರಮವಾಗಿ ರೂಪುಗೊಳ್ಳಲೇ ಇಲ್ಲ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ ಅದೂ ಸ್ಥಗಿತಗೊಂಡಿದ್ದು ವಿಪರ್ಯಾಸವೇ ಸರಿ. ಕೆಲ ಹಿಂದಿನ ಸರ್ಕಾರಗಳು ಮಂಡಿಸಿದ ಬಜೆಟ್‌ನಲ್ಲಿದ್ದ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದೇವೆ ಎಂದು ಬೀಗಿದರು. ಆದರೆ, ರಾಜ್ಯದ ಕೃಷಿ ವಲಯದಲ್ಲಿ ಬದಲಾವಣೆ ಏನೂ ಆಗಲಿಲ್ಲ.
ಕೃಷಿ ಬಜೆಟ್ ಮಂಡನೆ ಮೊದಲು ಹಾಗೂ ನಂತರದ ರೈತರ ಜೀವನವನ್ನು ಗಮನಿಸಿದಲ್ಲಿ ಇದು ತೀರಾ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ವಿಷಯವಾಗಿದೆ. ಕೃಷಿ ಬಜೆಟ್‌ನಿಂದ ಯಾವುದೇ ಮಹತ್ತರ ಬದಲಾವಣೆಯಾಗಿಲ್ಲ. ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ. ಈ ಹಿಂದೆ ರಾಜ್ಯವನ್ನಾಳಿದ ಯಾವುದೇ ಸರ್ಕಾರಗಳು ನಿಜವಾಗಿಯೂ ನಮ್ಮ ರಾಜ್ಯದ ಕೃಷಿ ಕ್ಷೇತ್ರ (ರೈತರು) ಎದುರಿಸುತ್ತಿರುವ ಬಿಕ್ಕಟ್ಟುಗಳ್ಯಾವವು, ಇದರ ಮೂಲವೆಲ್ಲಿದೆ, ಯಾಕೆ ರೈತ ಸಮುದಾಯ ತಮ್ಮ ಕುಟುಂಬವನ್ನೇ ಬಿಟ್ಟು ಹೋಗುವಂತಹ ಕಠೋರ (ಆತ್ಮಹತ್ಯೆ) ಸ್ಥಿತಿಗೆ ಬಂದಿದ್ದಾರೆ, ಮುಖ್ಯವಾಗಿ ಕೃಷಿಯನ್ನೇ ಒಂದು ವೃತ್ತಿಯನ್ನಾಗಿ ನಂಬಿದವರು ಅದರಿಂದ ಅದೇಕೆ ವಿಮುಖರಾಗುತ್ತಿದ್ದಾರೆನ್ನುವ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ.
ರಾಜ್ಯದ ಪ್ರಗತಿಪರ ಚಿಂತಕರು ಈ ಬಗ್ಗೆ ಚಿಂತನೆ ಮಾಡಿದರೂ ಅದನ್ನು ಕೇಳಿ, ಅದು ಸಮಸ್ಯೆ ಎನ್ನುವ ಸೌಜನ್ಯವನ್ನು ಯಾವ ಸರ್ಕಾರಗಳು ಈ ಹಿಂದೆ ಒಪ್ಪಲಿಲ್ಲ. ತಾವು ನಡೆದದ್ದೇ ಹಾದಿ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದೇ ಇಂದು ಕೃಷಿ ಕ್ಷೇತ್ರಕ್ಕೆ ದೊಡ್ಡ ಮುಳುವಾಗಿ ಪರಿಣಮಿಸುತ್ತಿದೆ. ರಾಜ್ಯದ ಕೃಷಿ ಕ್ಷೇತ್ರದ ಶೇ. 65ರಷ್ಟು ಭೂಮಿ ಒಣ ಬೇಸಾಯ ಪದ್ಧತಿಯನ್ನು ಹೊಂದಿದ್ದು, ಈ ಭಾಗದಲ್ಲಿ ಶೇ. 75ಕ್ಕೂ ಅಧಿಕ ಪ್ರಮಾಣದಲ್ಲಿ ಬಡತನ ತಾಂಡವವಾಡುತ್ತಿದೆ. ಇದುವರೆಗೂ ರಾಜ್ಯದಲ್ಲಿ ಅನುಷ್ಠಾನವಾಗಿರುವ ನೀರಾವರಿ ಯೋಜನೆಗಳನ್ನು ಗಮನಿಸಿದಲ್ಲಿ ಅವುಗಳು ದೊಡ್ಡ ಭೂಮಾಲೀಕರು ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ಉಪಯೋಗವಾಗುತ್ತಿವೆ ಎನ್ನುವುದು ಸ್ಪಷ್ಟವಾಗುತ್ತದೆ.
ರಾಜ್ಯ ಸರ್ಕಾರದ ಅಂಕಿ ಅಂಶಗಳ ಆಧಾರದಲ್ಲಿಯೇ ರಾಜ್ಯದಲ್ಲಿ 55 ಲಕ್ಷ ಜನ ಭೂ ರಹಿತ ಕೃಷಿ ಕಾರ್ಮಿಕರಿದ್ದು, ಅವರೆಲ್ಲ ತಮ್ಮ ನಿತ್ಯದ ದುಡಿಮೆಗಾಗಿ ಪರಿತಪಿಸುತ್ತಿದ್ದಾರೆ. ಇನ್ನು 71 ಲಕ್ಷಕ್ಕೂ ಅಧಿಕ ಜನರು ಭೂ ಸಾಗುವಳಿಯನ್ನು (ಕೃಷಿಯನ್ನು) ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಅಭ್ಯುದಯಕ್ಕೆ ಹೊಸ ಚಿಂತನೆ ಮಾಡಬೇಕಿದೆ. ಸರ್ಕಾರ ಈ ಕ್ಷೇತ್ರಗಳಿಗೆ ಹೂಡುತ್ತಿರುವ ಬಂಡವಾಳ ನೈಜವಾಗಿ ರೈತರು ಹಾಗೂ ಅವರನ್ನೇ ನಂಬಿರುವವರಿಗೆ ಲಭ್ಯವಾಗುತ್ತಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದ್ದು, ಸ್ವಾತಂತ್ರ್ಯಾ ನಂತರ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ನೀಡಿದ ಅನುದಾನವನ್ನು ಗಮನಿಸಿದಲ್ಲಿ, ಸರ್ಕಾರದ ಎಲ್ಲ ಯೋಜನೆಗಳೂ ಸಂಪೂರ್ಣ ಹಾದಿ ತಪ್ಪಿವೆ. ಇಂತಹ ಯೋಜನೆಗಳಿಂದ ರೈತರು ಬಡವರಾಗಿಯೇ ಉಳಿದು, ಮಧ್ಯವರ್ತಿಗಳೇ ಶ್ರೀಮಂತರಾಗುತ್ತಾ ಸಾಗಿದ್ದಾರೆ ಎನ್ನುವುದನ್ನು ರಾಜ್ಯದ ಪ್ರತಿಯೊಂದು ರೈತನ ಮನೆಗಳು ಸಾರಿ ಹೇಳುತ್ತಿವೆ. ರಾಜ್ಯದಲ್ಲಿನ ಒಣಬೇಸಾಯ ಪದ್ಧತಿಯ ಸಮಗ್ರ ಅಭಿವೃದ್ಧಿಗೆ ಗಂಭೀರ ಚಿಂತನೆ ನಡೆಯಬೇಕಿದೆ. ಇದರಿಂದ ರೈತರು ಹಾಗೂ ಅವರನ್ನು ನಂಬಿರುವ ಕೃಷಿ ಕೂಲಿ ಕಾರ್ಮಿಕರ ಬಡತನ ನಿರ್ಮೂಲನೆಯಾಗುತ್ತದೆ. ಮಳೆ ಕೊಯ್ಲು, ಚೆಕ್ ಡ್ಯಾಂಗಳ ನಿರ್ಮಾಣ, ಅರಣ್ಯ ಪ್ರದೇಶದ ಅಭಿವೃದ್ಧಿ, ಜಲಾನಯನ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಪೂರಕವಾಗುವಂತಹ ಎಲ್ಲ ಇಲಾಖೆಗಳಲ್ಲಿ ಸಮನ್ವಯತೆ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಸಮಿತಿಯನ್ನು ರಚಿಸಬೇಕಿದೆ.
ತೋಟಗಾರಿಕೆ ಬೆಳೆಗಳ ಉತ್ತೇಜನಕ್ಕೆ ಆದ್ಯತೆ ನೀಡಬೇಕಿದೆ. ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಕಡೆಗೆ ಬೊಟ್ಟು ಮಾಡುವುದನ್ನು ನಿಲ್ಲಿಸಿ, ಪ್ರತಿ ಜಿಲ್ಲೆಯಲ್ಲಿ ಶೇ. 25ರಷ್ಟು ಜನರು ತೋಟಗಾರಿಕೆ ಬೆಳೆ ಬೆಳೆಯುವಂತಹ ವಾತಾವರಣ ನಿರ್ಮಿಸಬೇಕಿದೆ. ಕೃಷಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸಾರ್ವಜನಿಕರ ಬಂಡವಾಳ ಹೂಡಿಕೆ ಮಾಡಲು ಸರ್ಕಾರ ಪ್ರೇರಣಾತ್ಮಕ ಅಂಶಗಳನ್ನು ಬಹಿರಂಗ ಪಡಿಸಬೇಕಿದೆ.
ಕೃಷಿ ಕಾರ್ಪೋರೇಟ್‌ಕರಣ ಕಂಡು ಬರುತ್ತಿದ್ದು, ಅದನ್ನು ಸ್ಥಗಿತಗೂಳಿಸುವತ್ತ ಗಮನ ನೀಡಬೇಕಿದೆ. ರಾಜ್ಯದಲ್ಲಿರುವ ಪ್ರತಿಯೊಂದು ಎಪಿಎಂಸಿಗಳು ಹಾಗೂ ಸಣ್ಣ ತರಕಾರಿ ಮಾರುಕಟ್ಟೆಗಳಲ್ಲಿ ರೈತರ ನಿರಂತರ ಶೋಷಣೆ ನಡೆಯುತ್ತಿದ್ದು, ಇದರಿಂದ ಒಂದೆಡೆ ರೈತರಿಗೆ ಅನ್ಯಾಯವಾಗುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕ ವಲಯದ ಪಾತ್ರವೂ ದಿನೇ ದಿನೇ ಕಡಿಮೆಯಾಗುತ್ತಿದೆ. ಇವೆರಡನ್ನು ಸರಿಪಡಿಸುವತ್ತ ಗಮನ ನೀಡಬೇಕಿದೆ. ಕೃಷಿ ಅಭಿವೃದ್ಧಿ ಎಂದರೆ ಅದಕ್ಕೆ ಹೆಚ್ಚಿನ ಹಣ ನೀಡುವುದು, ಪ್ರತ್ಯೇಕ ಬಜೆಟ್ ಮಂಡಿಸುವುದು ಅಲ್ಲ. ಕೃಷಿಯು ವೈಜ್ಞಾನಿಕವಾಗಿ ಬದಲಾವಣೆಯಾಗಬೇಕಿದೆ. ರಾಜ್ಯದಲ್ಲಿನ ಜನಸಂಖ್ಯೆಯ ಬೆಳವಣಿಗೆ, ಅದರ ಗತಿ ಆಧಾರದಲ್ಲಿ ಪರಿಸರಕ್ಕೆ ಆಘಾತವಾಗದ ರೀತಿಯಲ್ಲಿ ಕೃಷಿ ನೀತಿಯನ್ನು ರೂಪಿಸಬೇಕಿದೆ.
ಎಸ್‌ಇಝೆಡ್ ಹಾಗೂ ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ನಾಶಪಡಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ. ಭೂ ರಹಿತ ದಿನಗೂಲಿ ದುಡಿಮೆದಾರರ ಕುರಿತು ರಾಜ್ಯದಲ್ಲಿ ಸಮಗ್ರ ಗಣತಿ ನಡೆಸಬೇಕಿದೆ. ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವಲ್ಲಿ ಸರ್ಕಾರ ವಿಶೇಷ ಗಮನ ನೀಡಬೇಕಿದೆ. ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾದ ಹವಾಮಾನ ಹಾಗೂ ಪ್ರತ್ಯೇಕ ಬೆಳೆಗಳ ಬೆಳೆಯುವ ಸ್ಥಿತಿ ಇದೆ. ಈ ಕುರಿತು ತಜ್ಞರಿಂದ ಅಧ್ಯಯನ ನಡೆಸಿ, ಪ್ರತಿ ಜಿಲ್ಲೆಗಳ ವ್ಯಾಪ್ತಿಗೆ ವಿಶೇಷ ಆದ್ಯತೆ ನೀಡಬೇಕಿದೆ.
ಮುಖ್ಯವಾಗಿ ನಮ್ಮ ರಾಜ್ಯದಲ್ಲಿರುವ ಶೇ. 60ರಷ್ಟು ಕೈಗಾರಿಕೆಗಳು ಇಂದಿಗೂ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ನಡೆಯುತ್ತಿವೆ. ನೂತನ ಸರ್ಕಾರ ಕೃಷಿ ಕ್ಷೇತ್ರದ ಸಮಗ್ರ ಅಭ್ಯುದಯಕ್ಕೆ ನಾಂದಿಯಾಗುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿ ರೂಪಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ಆತಂಕಕಾರಿಯಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಆಹಾರ ಅಸಮತೋಲನ ಉಂಟಾಗಲಿದೆ. ಕೃಷಿ ಮಾಡುವವರನ್ನು ಹುಡುಕುವಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ. ಸರ್ಕಾರ ಎಲ್ಲ ಕ್ಷೇತ್ರಗಳಿಗಿಂತ ಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹೊಸ ಸಮಗ್ರ ಕೃಷಿ ನೀತಿಯನ್ನು ರೂಪಿಸಬೇಕಿದೆ. ಅಂತಹ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುವರೇ?

- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.