ಅಂಕಣಗಳು

ಹಿಂದೂ ಸೋಲಿಗೆ ಕಾರಣಗಳನ್ನು ಹುಡುಕುತ್ತ...

Published On :

ಭಾರತದ ಭದ್ರತೆಯ ಬಗ್ಗೆ ನಿರಂತರವಾಗಿ ಆತಂಕಗಳು ತಲೆಎತ್ತುತ್ತಲೇ ಇರುತ್ತವೆ. ಚೀನಾ ನಮ್ಮ ಮೇಲೆ ದಾಳಿ ಮಾಡೀತೆ? ಪಾಕಿಸ್ತಾನ ಯಾವುದಾದರೂ ದುರುಳ ನಡೆ ಅನುಸರಿಸೀತೆ? ಎಂಬ ಸಂದೇಹಗಳೆಲ್ಲ ಆಗಾಗ ಚರ್ಚೆಯಾಗುತ್ತಿರುತ್ತವೆ. ಮಿಲಿಟರಿ ಪಾರಮ್ಯದ ವಿಷಯ ಬಂದಾಗ ಹಿಂದೂರಾಷ್ಟ್ರ ಎಂದು ಪ್ರಾರಂಭದಲ್ಲಿ ಗುರುತಿಸಿಕೊಂಡ ಭಾರತದ ದೌರ್ಬಲ್ಯ ಏನು ಎಂಬುದನ್ನು ಐತಿಹಾಸಿಕ ಚೌಕಟ್ಟಿನಲ್ಲಿಟ್ಟು ಚರ್ಚಿಸಿರುವ ಲೇಖನ ಇಲ್ಲಿದೆ. ರಕ್ಷಣಾ ವಿಷಯಗಳಿಗೆಂದೇ ಮೀಸಲಾಗಿರುವ 'ಇಂಡಿಯನ್ ಡಿಫೆನ್ಸ್ ರಿವ್ಯೂ' ನಿಯತಕಾಲಿಕದಲ್ಲಿ ಸೇನಾಧಿಕಾರಿಯೊಬ್ಬರು ಬರೆದಿರುವ ಈ ಲೇಖನ ಹಲವು ಆಳ ಆಯಾಮಗಳನ್ನು ಪರಿಚಯಿಸುತ್ತದೆ.

ಹಿಂದೂ ಸೇನಾ ಸೋಲುಗಳಿಗೆ ಕಾರಣವೇನು ಎಂಬುದಕ್ಕೆ ಬಹಳ ಸರಳ ಉತ್ತರ- ಹಿಂದೂಗಳ ಮಿಲಿಟರಿ ಅದಕ್ಷತೆ. ಈ ಅದಕ್ಷತೆ ಉದ್ಭವಿಸಿದ್ದು ಎಲ್ಲಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಯುದ್ಧದ ಸ್ವಭಾವವನ್ನೂ ಅದರ ಫಲಿತಾಂಶಗಳನ್ನೂ ಅರ್ಥ ಮಾಡಿಕೊಳ್ಳಬೇಕು.
'ಯುದ್ಧ' ಎಂಬುದು ಕಲುಷಿತ ಪದ. ಏಕೆಂದರೆ ಇಲ್ಲಿ ಸಾವು, ವಿಧ್ವಂಸ, ಕೊಲೆ ಹಾಗೂ ಅಸಂತೋಷಗಳೇ ಮೆರೆದಾಡುತ್ತವೆ. ಆದಾಗ್ಯೂ ರಾಷ್ಟ್ರದ ಹಣೆಬರಹವನ್ನು ಮತ್ತು ಅದು ದೇಶಗಳ ಸಾಲಿನಲ್ಲಿ ಎಲ್ಲಿ ನಿಲ್ಲುತ್ತದೆ ಎಂಬುದನ್ನು ನಿರ್ಧರಿಸುವುದು ಮಿಲಿಟರಿ ಬಲವೇ. ಕದನದ ಭುಜದಲ್ಲಿ ಕುಳಿತೇ ಪ್ರಮುಖ ನಾಗರಿಕತೆಗಳು ಮೇಲೆದ್ದವು. ಉದಾಹರಣೆಗೆ ಗ್ರೀಕ್, ರೋಮನ್, ಕ್ರೈಸ್ತ, ಇಸ್ಲಾಂ ನಾಗರಿಕತೆಗಳನ್ನು ಹೆಸರಿಸಬಹುದು. ಇದನ್ನು ಅರ್ಥ ಮಾಡಿಕೊಳ್ಳದ ನಾಗರಿಕತೆಗಳೆಲ್ಲ ಬದಿಗೆ ಬಿದ್ದವು. ಹಿಂದೂ ನಾಗರಿಕತೆಯೂ ಈ ಸಾಲಿಗೆ ಸೇರುತ್ತದೆ.
ಹಿಂದೂಗಳು ಸಮರದ ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದಲ್ಲ. ಹಾಗೆ ನೋಡಿದರೆ ಯುದ್ಧದೊಂದಿಗೆ ಮನುಷ್ಯನ ವ್ಯವಹಾರವನ್ನು ಹಾಗೂ ಅದರ ನಿಖರ ಮಿಡಿತವನ್ನು ಮೊದಲಿಗೆ ಅರ್ಥ ಮಾಡಿಕೊಂಡಿದ್ದು ಒಬ್ಬ ಹಿಂದುವೇ. ಆತನನ್ನು ಚಾಣಕ್ಯ, ಕೌಟಿಲ್ಯ ಎಂದೆಲ್ಲ ಕರೆಯಲಾಗುತ್ತದೆ. ಯುದ್ಧದ ಬಗ್ಗೆ ಏನೆಲ್ಲವನ್ನು ತಿಳಿದುಕೊಂಡಿರಬೇಕೋ ಅವೆಲ್ಲವನ್ನೂ ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ವೇಳೆಗೇ ಶೌರ್ಯದ ಗಡಸು ಭಾಷೆ ಉಪಯೋಗಿಸಿ ಹೇಳಿದ್ದ ಚಾಣಕ್ಯ. ಹಿಂದುಗಳು ಅದನ್ನು ಅನುಸರಿಸಿದ್ದರೆ ಜಗತ್ತನ್ನೆ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಿದ್ದರು.
ಕಂಪ್ಯೂಟರ್‌ನ ವಿಷಯದಲ್ಲಿದ್ದಂತೆ ಯುದ್ಧದಲ್ಲೂ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎಂಬ ಎರಡು ಆಯಾಮಗಳನ್ನು ಗುರುತಿಸಬಹುದು. ಮನೋಧೋರಣೆ, ಕಾರ್ಯತಂತ್ರ, ನಾಯಕತ್ವ, ತಂತ್ರಗಳು, ಕೌಶಲಗಳೆಲ್ಲ ಸಾಫ್ಟ್‌ವೇರ್ ವಿಭಾಗದಲ್ಲಿ ಬರುತ್ತವೆ. ಎಷ್ಟು ದೊಡ್ಡ ಪಡೆ ಇದೆ, ಶಸ್ತ್ರಗಳ ಪ್ರಮಾಣ ಮತ್ತು ಅವುಗಳ ತಂತ್ರಜ್ಞಾನದ ಮಟ್ಟ, ರಣರಂಗವು ಸ್ವಸ್ಥಳದಿಂದ ಎಷ್ಟು ದೂರವಿದೆ, ಯುದ್ಧದಲ್ಲಿ ಬಳಸುತ್ತಿದ್ದ ಅಶ್ವ ಮತ್ತು ಆನೆಗಳು ಇವೆಲ್ಲ ಬಾಹುಬಲದ ಹಾರ್ಡ್‌ವೇರ್ ಅಂಶಗಳು.
ಯಾವುದೇ ಯುದ್ಧದಲ್ಲಿ ಈ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳೆರಡರ ಪ್ರಮಾಣ ಮತ್ತು ಗುಣಮಟ್ಟಗಳಲ್ಲಿ ಹದಮಿಳಿತವಿದ್ದಿರಬೇಕಾಗುತ್ತದೆ. ಇತಿಹಾಸದ ದಾಖಲೆಗಳು ನಮಗೆ ಸ್ಪಷ್ಟಪಡಿಸುವ ಅಂಶವೆಂದರೆ- ಹಾರ್ಡ್‌ವೇರ್‌ನ ಆಯಾಮದಲ್ಲಿ ಬಹಳ ಕೊರತೆಯಿದ್ದೂ ಸಾಫ್ಟ್‌ವೇರ್ ವಿಭಾಗವು ತೀಕ್ಷ್ಣವಾಗಿದ್ದ ಕಾರಣಕ್ಕಾಗಿ ಸೇನೆ ಯುದ್ಧ ಗೆದ್ದುಕೊಂಡ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದಾಗಿದೆ. ಆದರೆ ಹಾರ್ಡ್‌ವೇರ್ ಆಯಾಮ ಉತ್ತಮವಿದ್ದು ಸಾಫ್ಟ್‌ವೇರ್ ವಿಭಾಗವು ಕೈಕೊಟ್ಟ ಸಂದರ್ಭದಲ್ಲಿ ವಿಜಯ ಸಾಧಿಸಿರುವ ಉದಾಹರಣೆಗಳು ವಿರಳ.
ಹಿಂದೂಗಳ ವಿಷಯಕ್ಕೆ ಬರುವುದಾದರೆ ಪೃಥ್ವಿರಾಜ್ ಚೌಹಾಣ್ ಅತ್ಯುನ್ನತ ಮಟ್ಟದ ಸಾಮರ್ಥ್ಯ ಹೊಂದಿದವನಾಗಿದ್ದ. ಆದರೆ ಕ್ರಿಸ್ತಶಕ 1192ರಲ್ಲಿ ಆತ ಮೊಹಮದ್ ಘೋರಿಯಿಂದ ಸೋಲುಂಡ ಎಂಬುದನ್ನು ಮನ್ನಿಸಲೇಬೇಕಾಗುತ್ತದೆ. ಹಿಂದೂಗಳು ಮುಸ್ಲಿಮರಿಂದ ಸೋಲನುಭವಿಸಿದ ಎರಡು ಪ್ರಮುಖ ಸಮರಗಳು ಅವರನ್ನು ಕೆಳಕ್ಕೆ ತಳ್ಳಿದವು. ಕ್ರಿಸ್ತಶಕ 1009ರಲ್ಲಿ ನಡೆದ ಘಜ್ನಿ ಮೊಹಮದ್ ಮತ್ತು ಆನಂದಪಾಲ್ ನಡುವಿನ ಯುದ್ಧ. ಕ್ರಿಸ್ತಶಕ 1192ರಲ್ಲಿ ಮೊಹಮದ್ ಘೋರಿ ಮತ್ತು ಪೃಥ್ವಿರಾಜ್ ಚೌಹಾಣ್ ನಡುವೆ ನಡೆದ ಯುದ್ಧ. ಮೊದಲನೆಯ ಯುದ್ಧದಲ್ಲಿ ಹಿಂದೂಗಳು ಎಷ್ಟು ಬಲಹೀನರು ಎಂಬುದು ಜಾಹೀರಾದರೆ ಎರಡನೆ ಯುದ್ಧದಲ್ಲಿ ಇವರನ್ನು ಎಷ್ಟು ದೀರ್ಘ ಅವಧಿಗೆ ಮರಳು ಮಾಡಬಹುದು ಎಂಬುದು ತಿಳಿಯಿತು. ಆ 2 ಸಮರಗಳ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಆಯಾಮಗಳ ಪರಿಶೀಲನೆ ಅಗತ್ಯ.

ಸಾಫ್ಟ್‌ವೇರ್ ಆಯಾಮ:
ಮುಸ್ಲಿಮರಿಗೆ ಈ ಆಯಾಮದಲ್ಲಿ ಹಲವು ಸಕಾರಾತ್ಮಕ ಅಂಶಗಳಿದ್ದವು. ಅವರ ಬಳಿ ಒಳ್ಳೆಯ ಕುದುರೆ ಸವಾರರಿದ್ದರು, ನಿಖರವಾಗಿ ಬಾಣಗಳನ್ನು ಹೂಡುವವರ ವಿಶೇಷ ಪಡೆಯೇ ಅವರಲ್ಲಿತ್ತು. ಇವಕ್ಕೆಲ್ಲ ಹಿಂದು ಪಡೆಯಿಂದ ಉತ್ತರವೇ ಇರಲಿಲ್ಲ. ನಾಯಕತ್ವದ ವಿಚಾರಕ್ಕೆ ಬಂದರೆ ಮುಸ್ಲಿಮರ ಜನರಲ್‌ಶಿಪ್ ಉತ್ತಮವಾಗಿರುತ್ತದೆ ಎಂಬುದು ಲೋಕಾರೂಢಿ ಅಭಿಮತ. ಘಜ್ನಿ ಜಗತ್ತಿನ ಅತ್ಯುತ್ತಮ ಜನರಲ್‌ಗಳಲ್ಲಿ ಒಬ್ಬನೆಂದು ಪರಿಗಣಿತನಾಗಿದ್ದ. ಪೃಥ್ವಿರಾಜನ ಶೌರ್ಯ ಕಡಿಮೆ ಇರಲಿಲ್ಲವಾದರೂ ಸೋತಿದ್ದನ್ನು ಮರೆಯುವಂತಿಲ್ಲ.
ಹಾರ್ಡ್‌ವೇರ್ ವಿಭಾಗದತ್ತ ನೋಡುವುದಾದರೆ ವಾಯವ್ಯ ಭಾರತದ ಎಲ್ಲ ರಜಪೂತ ರಾಜರೂ ಈ ಯುದ್ದಗಳಿಗೆ ತಮ್ಮ ಸೇನೆಯನ್ನು ಕಳುಹಿಸಿದ್ದರಿಂದ ಮುಸ್ಲಿಂ ಸೇನೆಗಿಂತ ಹಲವು ಪಟ್ಟು ಹೆಚ್ಚಿನ ಸಮರ ಪಡೆ ನಮ್ಮದಾಗಿತ್ತು ಎಂಬ ನಿರ್ಧಾರಕ್ಕೆ ಬರಬಹುದು. ಆದರೂ ಹಿಂದೂಗಳು ಯುದ್ಧ ಸೋತರು ಎಂಬುದು ವಿಪರ್ಯಾಸ. ಶಸ್ತ್ರ ತಂತ್ರಜ್ಞಾನವೂ ಆ ಕಾಲದಲ್ಲಿ ಅತ್ಯುನ್ನತವಾಗಿಯೇ ಇತ್ತು. ಮುಸ್ಲಿಮರಿಗಿಂತ ಹೆಚ್ಚಲ್ಲದಿದ್ದರೂ ಅವರ ಮಟ್ಟಕ್ಕಿಂತ ಕಡಿಮೆ ಎಂಬ ತಂತ್ರಜ್ಞಾನವಂತೂ ಖಂಡಿತ ಆಗಿರಲಿಲ್ಲ. ಯುದ್ಧದಲ್ಲಿ ಆನೆಯನ್ನು ಬಳಸುವುದು ಅಂಥ ಕಾರ್ಯಸಾಧು ವಿಚಾರವಲ್ಲ ಎಂಬುದು ತಿಳಿದಿದ್ದರೂ ಹಿಂದೂಗಳು ಅವನ್ನೇ ಪ್ರಮುಖವಾಗಿ ಬಳಸಿದ್ದು ಏಕೊ ತಿಳಿದಿಲ್ಲ. ಯುದ್ಧ ನಡೆದ ಸ್ಥಳವೂ ನಮ್ಮ ನೆಲದಲ್ಲೇ ಆದ್ದರಿಂದ ಅದೂ ಹಿಂದೂಗಳಿಗೆ ಪೂರಕವಾಗಿಯೇ ಇತ್ತು. ಎಲ್ಲಿಂದಲೋ ಎಲ್ಲವನ್ನೂ ಪೇರಿಸಿಟ್ಟುಕೊಂಡುಬಂದ ಮುಸ್ಲಿಮರಿಗಿಂತ ಇದೇ ನೆಲದಲ್ಲಿರುವವರಿಗೆ ಪೂರೈಕೆ ವ್ಯವಸ್ಥೆ ಸುಲಭವಾಗುತ್ತದೆ. ಹಾಗಿದ್ದೂ ಸಮರ ಗೆಲ್ಲಲಾಗಲಿಲ್ಲ.
ಶಸ್ತ್ರ ತಂತ್ರಜ್ಞಾನವು ಇವತ್ತಿನ ಆಧುನಿಕ ಮಟ್ಟಕ್ಕೆ ಬರುವುದಕ್ಕೆ ಮೊದಲು ಕುದುರೆಯ ಪಾತ್ರ ನಿರ್ಣಾಯಕವಾಗಿತ್ತು. ಅದನ್ನು ಶಸ್ತ್ರ ವ್ಯವಸ್ಥೆ ಎಂದೇ ಪರಿಗಣಿಸಲಾಗುತ್ತಿತ್ತು. ಇತಿಹಾಸದ ಪ್ರಖ್ಯಾತ ಜನರಲ್‌ಗಳೆಲ್ಲ ತಮ್ಮ ಕುದುರೆಯನ್ನು ಆಸ್ಥೆಯಿಂದ ಆರಿಸಿಕೊಂಡಿರುವುದನ್ನು ನೋಡುತ್ತೇವೆ. ಹಿಂದೂಗಳು ಮಾತ್ರವೇ ರಣರಂಗದಲ್ಲಿ ಆನೆಗಳ ವ್ಯಾಮೋಹಕ್ಕೆ ಬಿದ್ದಿದ್ದು. ಕುದುರೆ ಅತಿ ಬುದ್ಧಿವಂತ ಪ್ರಾಣಿ. ತನ್ನ ಮೇಲೆ ಕುಳಿತವನ ದೇಹ ಕಂಪನಗಳನ್ನು ಅನುಭವಿಸಿಯೆ ಅದು ಆತನ ಮನಸ್ಥಿತಿ ಅಂದಾಜಿಸಿ ಸೂಕ್ತವಾಗಿ ನಡೆದುಕೊಳ್ಳಬಲ್ಲದು. ವೇಗ, ದೀರ್ಘ ಅವಧಿಗೆ ತಾಕತ್ತು ಉಳಿಸಿಕೊಳ್ಳುವುದು, ಹೊಂದಾಣಿಕೆ, ತಾಳಿಕೆ, ನಿಯಂತ್ರಣಕ್ಕೆ ಸುಲಭವಾಗಿ ಸಿಗುವಿಕೆ ಹೀಗೆ ರಣರಂಗಕ್ಕೆ ಬೇಕಾದ ಎಲ್ಲ ಗುಣಗಳನ್ನು ಹೊಂದಿರುವ ಪ್ರಾಣಿಯದು. ರಾಣಾ ಪ್ರತಾಪನಿಗೆ ಅಪಾಯಕಾರಿ ಸ್ಥಿತಿಯಿಂದ ರಕ್ಷಿಸಿದ್ದು ಆತನ ಕುದುರೆ ಚೇತಕ್ ಎಂಬ ಬಗ್ಗೆ ಕತೆಗಳಿವೆ. ಇಂಥ ಹಲವು ನಿದರ್ಶನಗಳು ಇತಿಹಾಸದಲ್ಲಿ ಲಭ್ಯ. ಇಂಥ ಯಾವ ಲಾಭಗಳನ್ನೂ ತರದ, ಬದಲಿಗೆ ಪ್ರತಿಕೂಲ ವಾತಾವರಣವನ್ನೇ ಸೃಷ್ಟಿಸುವ ಗಜಪಡೆಯನ್ನು ನೆಚ್ಚಿಕೊಂಡಿದ್ದು ಹಿಂದೂಗಳ ಸೋಲಿಗೆ ಕಾರಣವಾಯಿತು.
ಭಾರತದ ಮೇಲೆ ದಂಡೆತ್ತಿ ಬಂದ ನಾಲ್ವರು ಪ್ರಮುಖ ಕಮಾಂಡರ್‌ಗಳು ಅಶ್ವಾರೋಹಿಗಳಾಗಿದ್ದರು ಹಾಗೂ ಯುದ್ಧ ಗೆದ್ದರು. ಸೋತ ನಾಲ್ವರು ಹಿಂದೂ ರಾಜರು ಆನೆಯನ್ನು ನೆಚ್ಚಿಕೊಂಡಿದ್ದರು. ಒಂದು ಉದಾಹರಣೆ ನೀಡಬಹುದಾದರೆ ಕ್ರಿಸ್ತಪೂರ್ವ 326ರಲ್ಲಿ ಪುರೂರವನ ವಿರುದ್ಧ ನಡೆದ ಯುದ್ಧ. ಗ್ರೀಕರ ತುರುಸಿನ ಬಾಣಗಳಿಗೆ ಆತ ಆನೆಗಳನ್ನು ರಕ್ಷಣಾ ಕವಚವಾಗಿ ಬಳಸಿದ. ಆದರೆ ಒಂದು ಹಂತದಲ್ಲಿ ಕಂಗಾಲಾದ ಆನೆಗಳು ತಮ್ಮದೇ ಪಡೆಯ ಮೇಲೆ ಪದಾಘಾತ ಮಾಡಿದವು. ಖುದ್ದು ಪುರೂರವ ಆನೆಯ ಮೇಲೆಯೇ ಕುಳಿತಿದ್ದ.

ಹಿಂದೂ ಮಿಲಿಟರಿ ಧೋರಣೆ:
ಇತಿಹಾಸ ಹೇಳುವಂತೆ ಕೆಲವು ನಾಗರಿಕತೆಗಳು ಹುಟ್ಟುತ್ತಲೇ ತಮ್ಮೊಳಗೆ ಆಕ್ರಮಣಕಾರಿ ಮನೋಭಾವವನ್ನು ರೂಢಿಸಿಕೊಂಡಿರುತ್ತವೆ. ಗ್ರೀಕ್, ರೋಮನ್, ಕ್ರೈಸ್ತ, ಇಸ್ಲಾಮಿಕ್ ಗುಂಪುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಮಂಗೋಲ್, ಹನ್ಸ್, ಗೋತ್ಸ್‌ರಂಥ ಕೆಲ ಬುಡಕಟ್ಟು ಗುಂಪು ರಕ್ತಪಾತ ಸೃಷ್ಟಿಸಿ ಕುಖ್ಯಾತವಾಗಿವೆ.
ಆದರೆ ಹಿಂದೂ ನಾಗರಿಕತೆ ಮಾತ್ರ ತನ್ನಲ್ಲಿ ಆಕ್ರಮಣಕಾರಿ ಧೋರಣೆ ಇಲ್ಲದಿರುವುದನ್ನು, ತನ್ನ ನಾಗರಿಕತೆಯ ಇತಿಹಾಸದಲ್ಲೇ ವಿದೇಶಿ ನೆಲದ ಮೇಲೆ ಆಕ್ರಮಣಕ್ಕೆ ಹೋಗಿಲ್ಲದೆ ಇರುವುದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಇದೊಂದು ಪೊಳ್ಳು ವೈಭವ ಅಷ್ಟೆ. ಮಿಲಿಟರಿ ತತ್ವಕ್ಕೆ ತುಂಬ ವಿರೋಧವಾದ ನಡೆ ಇದು. ರಕ್ಷಣಾತ್ಮಕವಾಗಿರುವುದಕ್ಕಿಂತ ಬಲಪ್ರದರ್ಶನವೇ ಲೇಸು ಎಂದು ಮಿಲಿಟರಿ ಸಿದ್ಧಾಂತ ಸಾರುತ್ತದೆ. ಹಿಂದೂ ರಾಜರಿಗೆ ಅಂಥ ಹಲವು ಅವಕಾಶಗಳಿದ್ದಾಗಿಯೂ ಸುಮ್ಮನಿದ್ದರು. ಮುಸ್ಲಿಮರ ಆಕ್ರಮಣಕಾರಿ ಧೋರಣೆಯೇ ಅವರು ಎಲ್ಲ ಯುದ್ಧಗಳನ್ನು ಗೆಲ್ಲುವುದಕ್ಕೆ ಕಾರಣವಾಯಿತು. ನೆರೆರಾಜ್ಯ ದುರ್ಬಲವಾಗಿರುವಾಗ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ರಾಜನ ಕರ್ತವ್ಯ ಎಂದೇ ಚಾಣಕ್ಯ ಹೇಳಿದ್ದಾನೆ. ಜಗತ್ತಿನಲ್ಲಿ ಪಾರಮ್ಯ ಮೆರೆದಿರುವ ರಾಷ್ಟ್ರಗಳೆಲ್ಲ 'ಶರಣಾಗಿ, ಇಲ್ಲವೇ..' ಎಂಬ ಖದರಿನಲ್ಲೇ ಹಲವು ವಿಜಯಧ್ವಜಗಳನ್ನು ನೆಟ್ಟಿವೆ. ವೈರಿ ತನ್ನತ್ತ ಬರುವುದನ್ನು ಕಾಯದೆ ಆತನ ನೆಲಕ್ಕೆ ತಾನೇ ಹೋಗಿ ಗೆದ್ದದ್ದರಿಂದಲೇ ಅಲೆಕ್ಸಾಂಡರ್‌ನನ್ನು ಇತಿಹಾಸ ಇವತ್ತು ಸ್ತುತಿಸುತ್ತದೆ. ಚೆಂಗೀಸ್ ಖಾನ್ ಉಗ್ರನಂತೆಯೆ ನಡೆದುಕೊಂಡರೂ ಒಬ್ಬ ವೈರಿ ಬಲಿಯಾಗುತ್ತಲೇ ಇನ್ನೊಂದರ ಬಗ್ಗೆ ಯೋಚಿಸಿದ್ದಕ್ಕೆ ಆತ ವಿಜಯಿ ಎನ್ನಿಸಿಕೊಂಡ. ಇಂಥ ಉದಾಹರಣೆಗಳು ಇತಿಹಾಸದುದ್ದಕ್ಕೂ ಜಗತ್ತಿನ ಎಲ್ಲ ಭಾಗಗಳಲ್ಲಿ ಸಿಗುತ್ತವೆ.
ಆದರೆ ಹಿಂದೂ ನಾಗರಿಕತೆ ಮಾತ್ರ ಸಂಸ್ಕೃತ ಶ್ಲೋಕವೊಂದನ್ನು ಮರೆತುಬಿಟ್ಟಿತು. 'ವೀರಾ ಭೋಗಾ ವಸುಂಧರಾ' ಅಂದರೆ ವೀರನಾದವನಿಗೆ ಮಾತ್ರ ಭೂಮಿಯನ್ನು ಅನುಭವಿಸುವ ಹಕ್ಕು. ಇದನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಕಾರ್ಯಕ್ಷಮತೆಯ ಲೋಪಕ್ಕೆ ಕಾರಣಗಳನ್ನು ಕಟ್ಟಿಕೊಡುವುದರಲ್ಲೆ ನಾವು ಕಾಲ ಕಳೆದಿದ್ದೇವೆ. ನಮಗೆಲ್ಲ ಪವಿತ್ರವಾಗಿರುವ 'ಭಗವದ್ಗೀತೆ'ಯನ್ನೆ ಅನುಸರಿಸಿದರೆ ಸಾಕು. ಅದರ ಮೂಲ ಸಂದೇಶ ಹೀಗೆ ಹೇಳುತ್ತದೆ:
- ಅನ್ಯಾಯ ಸಹಿಸಬೇಡ, ಯಾವುದೇ ಸನ್ನಿವೇಶವಿದ್ದರೂ!
- ಒಳ್ಳೆಯದರ ಸಂಸ್ಥಾಪನೆಯಲ್ಲಿ ತೊಡಗು. ಮಾಡು ಇಲ್ಲವೇ ಮಡಿ. ಇನ್ಯಾವ ಆಯ್ಕೆಯಿಲ್ಲ.
- ಸಂಹರಿಸು ಮತ್ತು ಭೂಮಿಯ ಫಲವನ್ನು ಆಸ್ವಾದಿಸು.
- ರಣರಂಗದಲ್ಲಿ ಸತ್ತರೆ ಸ್ವರ್ಗದಲ್ಲಿ ಸುಖ ಆಸ್ವಾದಿಸು.

ಉದ್ದೇಶ ಸಾಧನೆಯಾದರೂ ಅಥವಾ ಮಡಿದರೂ ನಿನಗೆ ಸಿಗುವುದು ಸ್ವರ್ಗವೇ ಎಂಬ ಶ್ರೀಕೃಷ್ಣನ ಉಪದೇಶದ ನೆಲೆಯಲ್ಲೇ ಅರ್ಜುನ ಯುದ್ಧ ಜಯಿಸಿದ್ದು. ಹಿಂದೂಗಳಿಗೆ ಪವಿತ್ರವಾದ ಋಗ್ವೇದವೂ ಇಂದ್ರನು ಹಲವು ರಾಕ್ಷಸರನ್ನು ಸಂಹರಿಸಿದ್ದನ್ನು ವಿವರವಾಗಿ ಕಟ್ಟಿಕೊಡುತ್ತದೆ. ಕೆಟ್ಟದ್ದರ ಬಗ್ಗೆ ಆಕ್ರಮಣಕಾರಿಯಾಗಿರಬೇಕು ಎಂಬುದನ್ನೇ ರಾಮಾಯಣ- ಮಹಾಭಾರತಗಳು ಸಾರುತ್ತವೆ. ರಾವಣನಿಂದ ರಾಮ ಸೀತೆಯನ್ನು ಮಾತ್ರವೇ ಬಚಾವು ಮಾಡಿ ತರಲಿಲ್ಲ. ಸೇನೆಯೊಂದಿಗೆ ಸಮುದ್ರೋಲ್ಲಂಘನ ಮಾಡಿ ವೈರಿಗೆ ನರಕವನ್ನೆ ತೋರಿಸಿದ. ಕಾಳಿಯನ್ನು ಆಕ್ರಮಣಕಾರಿಯಾಗಿಯೇ ಚಿತ್ರಿಸಲಾಗುತ್ತದೆ. ರಕ್ಕಸ ಶಕ್ತಿಗಳನ್ನು ಆಕೆ ಎಂದಿಗೂ ಸಹಿಸಳು.
ಘಜ್ನಿ, ಘೋರಿಗಳು ಆಕ್ರಮಣಕ್ಕೂ ಮೊದಲು ನೂರಾರು ಮಹಿಳೆಯರನ್ನು ಅಪಹರಿಸಿದ್ದರು. ಆಗಲೇ ಹಿಂದೂಗಳು ಆಕ್ರಮಣಶೀಲರಾಗಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಬೇಕಿತ್ತು. ಅವರು ಕೈಕಟ್ಟಿ ಕುಳಿತಿದ್ದಕ್ಕೆ ಯಾವ ಸಮರ್ಥನೆಯೂ ಇಲ್ಲ. ಕ್ರಿ.ಶ. 1176ರಿಂದ 1186ರವರೆಗೆ ಮೊಹಮದ್ ಘೋರಿ ಪಂಜಾಬ್ ಪ್ರಾಂತ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತ ಬಂದ. ಪೃಥ್ವಿರಾಜ್ ಚೌಹಾಣ್ ಮಾಡಿದ್ದೇನು? ಕೈಕಟ್ಟಿ ಕುಳಿತಿದ್ದು! ಆತಂಕ ಬೆಳೆಯುತ್ತಿರುವಾಗಲೆ ಅದನ್ನು ಮುನ್ನುಗ್ಗಿ ಸಂಹರಿಸಬೇಕಾದದ್ದು ಮಿಲಿಟರಿ ತತ್ವವೇ ಹೊರತು ನೈಜ ಅಪಾಯಕ್ಕಾಗಿ ಕಾಯುವುದಲ್ಲ.
ಕ್ರಿ.ಶ. 1191ರ ಯುದ್ಧದಲ್ಲಿ ಪೃಥ್ವಿರಾಜ್, ಘೋರಿಯನ್ನು ಮಣಿಸಿದ್ದ. ಆದರೆ ಗಾಯಗೊಂಡ ಘೋರಿ ಹಿಂತಿರುಗಿ ಹೋಗದಂತೆ ರಣರಂಗದಲ್ಲೆ ಸಾಯಿಸಬೇಕಿತ್ತು. ಇನ್ನೂ ಮುಂದಡಿ ಇರಿಸಿ ಘಜ್ನಿ- ಘೋರಿಗಳ ಬುಡಕ್ಕೇ ಹೋಗಿ ಆ ಸಮಯದಲ್ಲೇ ಸಂಹರಿಸಿ ಬಂದಿದ್ದರೆ ಹಿಂದೂ ನಾಗರಿಕತೆಯ ಕತೆಯೇ ಬೇರೆ ಇರುತ್ತಿತ್ತು.
ಅಹಿಂಸೆಯ ಅತಿ ವ್ಯಾಮೋಹಕ್ಕೆ ಬಿದ್ದು ಅಲ್ಲದೆ ಆಗಿನ ಪುರೋಹಿತರು ರಾಜರಿಗೆ ಸತ್ತ ನಂತರದ ಜನ್ಮದಲ್ಲಿ ಅತಿ ಉತ್ಸುಕತೆ ತುಂಬಿದ್ದರಿಂದ ಹಿಂದೂ ಮನೋಭೂಮಿಕೆಯಲ್ಲಿ ಮಿಲಿಟರಿ ಧೋರಣೆಯೇ ಮಾಯವಾಯಿತು. ಆ ಮೂಲಕ 'ಗೆಲ್ಲುವವರೆಗೆ ಕಾದಾಡು' ಎಂಬ ಶ್ರೀಕೃಷ್ಣನ ಉಪದೇಶಕ್ಕೆ ನಾವು ಕಿವುಡರಾಗಿದ್ದೇವೆ.

- ಆರ್. ಕೆ. ನೆಹ್ರಾ
ಏರ್‌ಮಾರ್ಷಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.