ಕಾಂಗ್ರೆಸ್ ಮಹಾನಾಯಕಿ ಮತ್ತು ಮಾಧ್ಯಮಗಳ ಮರ್ಮ
ಕಾಂಗ್ರೆಸ್ನ ವಿದ್ಯಮಾನಗಳ ಬಗ್ಗೆ ವರದಿ ಮಾಡುವ ಪ್ರತಿಯೊಬ್ಬ ವರದಿಗಾರನೂ ಎದುರಿಸಬಹುದಾದಂಥ ಅಪಾಯದ ಮೊದಲ ಅನುಭವ ನನಗಾಗಿದ್ದು 2005ರಲ್ಲಿ. ಆ ವರ್ಷ ಜಾರ್ಖಂಡ್ನಿಂದ ಹೊರಬಿದ್ದ ಚುನಾವಣಾ ತೀರ್ಪು ಎನ್ಡಿಎ ಪರವಾಗಿತ್ತು. ಆದರೂ ಸೋನಿಯಾಗಾಂಧಿಯವರ 'ಆಪ್ತ ರಾಜ್ಯಪಾಲರಾದ' ಸೈಯದ್ ಸಿಬ್ತೆ ರಝಿ, ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದು ಕಾಂಗ್ರೆಸ್ ಬೆಂಬಲಿತ ಶಿಬು ಸೊರೆನ್ಗೆ! ತಮ್ಮ ಬಹುಮತವನ್ನು ಸಾಬೀತುಪಡಿಸಲು ಸೊರೆನ್ಗೆ ರಾಜ್ಯಪಾಲರಿಂದ 20 ದಿನಗಳ ಕಾಲಾವಕಾಶವೂ ದೊರೆಯಿತು. ಸರಿಹಾದಿಯಲ್ಲಿಯೋ ಅಥವಾ ಅಡ್ಡದಾರಿ ಹಿಡಿದೋ ಸರ್ಕಾರ ರಚಿಸಲು ಇಷ್ಟು ಸಮಯ ಅವರಿಗೆ ಸಾಕಾಗಿತ್ತು.
ರಝಿ ಅವರ ಇಂತಹ ಸಾಂವಿಧಾನಿಕ ವಿರೋಧಿ ನಿರ್ಣಯಕ್ಕೆ ವಿರೋಧ ಪಕ್ಷಗಳಿಂದ ಮತ್ತು ಮಾಧ್ಯಮಗಳಿಂದ ತೀವ್ರ ಟೀಕೆ ಎದುರಾಯಿತು. ಸುಪ್ರಿಂ ಕೋರ್ಟ್ ಕೂಡ ಮಧ್ಯ ಪ್ರವೇಶ ಮಾಡಿ ಬಹುಮತ ಸಾಬೀತು ಪಡಿಸುವ ಕಾಲಾವಕಾಶವನ್ನು ಕಡಿಮೆ ಮಾಡುವಂತೆ ಆಜ್ಞೆ ನೀಡಿತು. ಆಕ್ಷೇಪಣೆ/ ಟೀಕೆ ಹೆಚ್ಚುತ್ತಾ ಹೋದಂತೆಲ್ಲ ಸುದ್ದಿಯೊಂದು ಹರಿದಾಡತೊಡಗಿತು. ಜಾರ್ಖಂಡ್ ರಾಜ್ಯಪಾಲರ ಈ ನಡೆಯಿಂದಾಗಿ ಸೋನಿಯಾ ಗಾಂಧಿಯವರಿಗೆ 'ಅಸಮಾಧಾನವಾಗಿದೆ' ಎಂಬ ಸುದ್ದಿಯದು(ಈ 'ಅಸಮಾಧಾನಗೊಂಡ' ಹೈಕಮಾಂಡ್ ನಂತರ ರಝಿ ಅವರನ್ನು ಅಸ್ಸಾಂಗೆ ವರ್ಗಾಯಿಸಿತು. ಆ ಸಮಯದಲ್ಲೇ ಅವರ ಜಾರ್ಖಂಡ್ ಸಹೋದ್ಯೋಗಿಗಳ ಮೇಲೆ ಸಿಬಿಐ ಭ್ರಷ್ಟಾಚಾರದ ಆರೋಪ ಹೊರಿಸಿದ್ದರಿಂದ ರಝಿ ಅವರನ್ನು ಕಿತ್ತೆಸೆಯಲಾಯಿತು). ಈ ಬದಲಾದ ಸುದ್ದಿಯನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲವಾದರೂ, ನನ್ನ ಬಹುತೇಕ ಸಹೋದ್ಯೋಗಿಗಳು ಆದಾಗಲೇ ಹಳಿ ಬದಲಿಸಿಬಿಟ್ಟಿದ್ದರು!
ಸೋನಿಯಾ ಗಾಂಧಿಯವರ ಮನೆಯ ಮುಂದೆ ನಿಂತು ಸುದ್ದಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾಗ ನನ್ನ ಬಾಸ್ ಬಳಿ ಬಂದು 'ಸೋನಿಯಾಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನುವ ಧಾಟಿಯಲ್ಲೇ ವರದಿಯನ್ನು ಬದಲಿಸು' (ತಿರುಚು) ಎಂದು ಆಜ್ಞೆ ನೀಡಿದರು. ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ. ಹಾಗೆ ನೋಡಿದರೆ ಈ ಕುರಿತು ಸೋನಿಯಾ ಒಂದೂ ಹೇಳಿಕೆಯನ್ನೂ ನೀಡಲಿಲ್ಲ. ಆದರೂ ಸುದ್ದಿ ಬದಲಾಯಿತು. ಸೋನಿಯಾಗೆ ಅಸಮಾಧಾನ ಎಂಬ ಸುದ್ದಿ, ಮರುದಿನ ಬೆಳಗ್ಗೆ ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿ ಪತ್ರಿಕೆಗಳಲ್ಲಿನ ವರದಿಗಳಲ್ಲಿ ಪ್ರಕಟವಾಗಿತ್ತು.
ಅಷ್ಟು ದಿನಗಳವರೆಗೆ ಅರಿವಿಗೆ ಬಾರದ ಸಂಗತಿಯೊಂದು ಅಂದು ನನಗೆ ಸ್ಪಷ್ಟವಾಗಿ ಮನದಟ್ಟಾಯಿತು. ಇಂತಹ ಸುದ್ದಿಗಳನ್ನು ಕಲೆಹಾಕುವಾಗ 'ಸ್ವಂತ ಜಡ್ಜ್ಮೆಂಟ್' ಕೊಡುವ ಸ್ವಾತಂತ್ರ್ಯ ವರದಿಗಾರನಿಗಿರುವುದಿಲ್ಲ. ವರದಿಗಾರ ಸುದ್ದಿಯೊಂದಕ್ಕೆ ಆಕೃತಿ ಕೊಡುವುದಿಲ್ಲ. ಅದೇನಿದ್ದರೂ ಮೇಲಿನವರ ಕೆಲಸ!
ಸೋನಿಯಾರಿಗೆ ಸಂಬಂಧಿಸಿದ ಸುದ್ದಿಗಳೆಲ್ಲವೂ ಮೇಲ್ಮಟ್ಟದಲ್ಲೇ ರೂಪು ತಳೆಯುತ್ತವೆ. ಪ್ರವರ್ತಕರು ಮತ್ತು ಸಂಪಾದಕರಿಗೆ 'ಸೋನಿಯಾರ ಸುದ್ದಿ ಹೇಗಿರಬೇಕು' ಎಂದು ತಿಳಿಸಿಹೇಳುವ ಕೆಲಸಕ್ಕೆ ಕಾಂಗ್ರೆಸ್ನ ಅನೇಕ ನಾಯಕರು ನೇಮಕಗೊಂಡಿದ್ದಾರೆ. ಅದರಲ್ಲಿ ಅಹ್ಮದ್ ಪಟೇಲ್ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ಆದರೆ ಅಹ್ಮದ್ ಪಟೇಲ್ರಂತಹ 'ಸ್ಪಿನ್ ಡಾಕ್ಟರ್'ಗಳಿಗೆ ಸಾಮಾನ್ಯ ವರದಿಗಾರರ ಸಹಾಯವೂ ಬೇಕಿರುತ್ತದೆ. 24/7 ಸುದ್ದಿ ಹರಿದಾಡುವ ಇಂಥ ಕಾಲದಲ್ಲಿ ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದಾರೆ. 'ಹೇಳಿಕೊಡದ' ಒಂದು ಪುಟ್ಟ ಸಾಲು ಕಾಂಗ್ರೆಸ್ ಅಧ್ಯಕ್ಷೆಯ ಹೆಸರನ್ನೇ ಕೆಡಿಸಿಬಿಡಬಹುದು ಎನ್ನುವುದು ಪಟೇಲ್ಗೆ ಚೆನ್ನಾಗಿ ಗೊತ್ತು. ಇಂತಹ ಒಪ್ಪಂದಗಳಿಂದ ಎರಡೂ ಕಡೆಯವರಿಗೆ ಲಾಭವಾಗುತ್ತದೆ. 'ತಾನು ಎಂಥ ಗುಪ್ತ ಸಮಾಚಾರವನ್ನು ಕಲೆಹಾಕಿದ್ದೇನೆ ನೋಡಿ' ಎಂದು ಸಾಮಾನ್ಯ ವರದಿಗಾರನೊಬ್ಬ ತನ್ನ ಬಾಸ್ ಮುಂದೆ ಬೀಗುತ್ತಾನೆ, ಇನ್ನೊಂದೆಡೆ ಸೋನಿಯಾರ ಇಮೇಜ್ಗೆ ಗ್ರಹಣ ಬಡಿಯದಂತೆ ನೋಡಿಕೊಳ್ಳಲು ಪಟೇಲ್ಗೂ ಸಾಧ್ಯವಾಗುತ್ತದೆ.
ಒಂದು ವೇಳೆ ನೀವೇನಾದರೂ ಈ ಆಟದ ನಿಯಮಗಳಿಗೆ ಒಗ್ಗಿಕೊಂಡರೆ ಪಟೇಲ್ ನಿಮ್ಮ ಮೇಲೆ ಅನುರಾಗದ ಹೊಳೆಯನ್ನೇ ಹರಿಸಿಬಿಡುತ್ತಾರೆ. ನಿಮ್ಮ ಮದುವೆಗೂ ಬಂದು ಆಶೀರ್ವಾದ ಮಾಡುತ್ತಾರೆ. ಅಷ್ಟೇ ಅಲ್ಲ, ಅವರೊಟ್ಟಿಗೆ ಯುವರಾಜ ರಾಹುಲ್ ಗಾಂಧಿಯವರೂ ಆಗಮಿಸಬಹುದು! ಹೀಗೇಕೆ ಹೇಳುತ್ತಿದ್ದೇನಂದರೆ, ಇತ್ತೀಚೆಗೆ ಒಬ್ಬ 'ಸಾಮಾನ್ಯ' ವರದಿಗಾರನೊಬ್ಬನ ಮದುವೆಯಾಯಿತು. ಆತನಿಗೆ ಬಾಸ್ಗಳ ಮುಂದೆ ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಬೇರೇನೂ ಬರುವುದಿಲ್ಲ. ಎಲ್ಲರಿಗೂ ಆಶ್ಚರ್ಯ ತರಿಸಿದ ಸಂಗತಿಯೆಂದರೆ ಅಂತಹ 'ಸಾಮಾನ್ಯ' ವ್ಯಕ್ತಿಯ ಮದುವೆಗೆ ಅಸಾಮಾನ್ಯರಾದ ರಾಹುಲ್ ಗಾಂಧಿ ಮತ್ತು ಅಹ್ಮದ್ ಪಟೇಲ್ ಆಗಮಿಸಿ, ವಧು ವರರನ್ನು ಹಾರೈಸಿ ಹೋಗಿದ್ದು!
ಇದರಿಂದಾಗಿ ಈಗ ಆತನ ವರ್ಚಸ್ಸೂ ಹೆಚ್ಚಾಗಿದೆ. ಅಲ್ಲದೆ ಹಲವು ಆಯ್ಕೆಗಳೂ ಆತನಿಗೆ ಎದುರಾಗಿವೆ. ಪ್ರಧಾನ ಮಂತ್ರಿಗಳ ಮುಂದಿನ ವಿದೇಶ ಯಾತ್ರೆಗೆ ಅವರ ಜೊತೆಯಾಗುವ ಆಯ್ಕೆಯೂ (ಬಹುಶಃ) ಇದೆ. ಗಾಂಧಿಗಳ ಬಗ್ಗೆ ವರದಿ ಮಾಡುವಾಗ ವರದಿಗಾರರು, ಅದರಲ್ಲೂ ಮುಖ್ಯವಾಗಿ ನ್ಯೂಸ್ ಚಾನೆಲ್ಗಳು ಹೇಗೆ ವರ್ತಿಸುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಹೆಸರಾಂತ ನ್ಯೂಸ್ ಚಾನೆಲ್ ಒಂದರಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಮಾನಗಳನ್ನು ನಾನು ವರದಿ ಮಾಡುತ್ತಿದ್ದೆ. ಆ ಚಾನೆಲ್ನಲ್ಲಿ 'ಕಾಂಗ್ರೆಸ್ ವರದಿಗಾರರ' ಬೃಹತ್ ಸೇನೆಯೇ ಇತ್ತು. ಕೆಲವರಂತೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ(ಡೌನ್ಟೈಮ್) ಕಾಂಗ್ರೆಸ್ ಭಜನೆ ಮಾಡುತ್ತಿದ್ದರು, ಇನ್ನುಳಿದವರು ಸಂಜೆ(ಪ್ರೈಮ್ಟೈಮ್) ಆ ಕೆಲಸಕ್ಕಿಳಿಯುತ್ತಿದ್ದರು.
'ದೊಡ್ಡ ಸುದ್ದಿಯನ್ನು' ವರದಿ ಮಾಡಬೇಕಾದಾಗ ನನ್ನಂತಹ 'ಅಮುಖ್ಯ' ವರದಿಗಾರರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕೈಬಿಡಲಾಗುತ್ತಿತ್ತು. ಇದಷ್ಟೇ ಅಲ್ಲ, ಕೆಲವರನ್ನಂತೂ ಕಾಂಗ್ರೆಸ್ನ ಕಾರ್ಯಕಾರೀ ಸಮಿತಿ ಮತ್ತು ಎಐಸಿಸಿಯ ಸಭೆಗಳ ಬಗ್ಗೆ ವರದಿ ಮಾಡಲು ವಿಶೇಷವಾಗಿ ಆಯ್ಕೆ ಮಾಡಲಾಗುತ್ತಿತ್ತು. ಕಾಂಗ್ರೆಸ್ನ ಸುದ್ದಿಯನ್ನು ಕಲೆಹಾಕುವುದು ನನ್ನ ಮುಖ್ಯ ಕೆಲಸವಾಗಿದ್ದರೂ, 2006ರಲ್ಲಿ ಹೈದ್ರಾಬಾದ್ನಲ್ಲಿ ನಡೆದ ಎಐಸಿಸಿ ಸಭೆಗೆ ನನ್ನನ್ನು ಕಳುಹಿಸಲಿಲ್ಲ. ಇದಕ್ಕೆ ಕಾರಣವೇನೆಂಬುದನ್ನೂ ನನಗೆ ತಿಳಿಸಲಿಲ್ಲ. ಏನೋ ನೆಪಕ್ಕೆಂಬಂತೆ ನಮ್ಮ ಸಂಪಾದಕರಿಂದ ಈ ಕುರಿತು ಮಿಂಚಂಚೆಯೊಂದು ಬಂದಿತಷ್ಟೆ.
ರಾಯ್ಬರೇಲಿ ಮತ್ತು ಅಮೇಥಿಯಿಂದ ಕೆಲವರು ಕಳುಹಿಸುತ್ತಿದ್ದ ಸುದ್ದಿಗಳಂತೂ ಕಾಂಗ್ರೆಸ್ನ ಜಾಲತಾಣದಲ್ಲೂ ಪ್ರಕಟವಾದವು. ಆ ಪಕ್ಷದ ಬಗ್ಗೆ ನಾನು ಒಂದು ವರ್ಷ ವರದಿ ಮಾಡಿದೆನಾದರೂ ಈ ಎರಡೂ ಕ್ಷೇತ್ರಗಳಿಗೆ ಮಾತ್ರ ನನ್ನನ್ನು ಕಳುಹಿಸಲಿಲ್ಲ. 'ಹೀಗೇಕೆ?' ಎನ್ನುವ ಪ್ರಶ್ನೆಗೆ ನನಗೆ ಉತ್ತರ ಸಿಗಲಿಲ್ಲ.
ಕೊನೆಯಲ್ಲಿ ನನ್ನನ್ನು ಆ ಬೀಟ್ನಿಂದ ಬದಲಿಸಲಾಯಿತು. ಹೀಗೊಂದು ಶುಭ ದಿನ ಬಂದ ಮಿಂಚಂಚೆಯೊಂದರಲ್ಲಿ, ನನಗೆ ಬೇರೆ ಕೆಲಸಕ್ಕೆ ವರ್ಗಾಯಿಸಲಾಗಿದೆ ಎಂಬ ಕಿರು ಮಾಹಿತಿ ನೀಡಲಾಗಿತ್ತು. ಆ ಚಾನೆಲ್ನ ಮುಖ್ಯ ವರದಿಗಾರರ ಮೇಲೆ ನನಗೆ ನಂಬಿಕೆ ಇತ್ತು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, 'ನಿನ್ನನ್ನು ಕಾಂಗ್ರೆಸ್ನ ವರದಿಗಾರಿಕೆಯ ಬೀಟ್ನಲ್ಲೇ ಇಡಬೇಕೆಂದು ನಾನು ಎಷ್ಟೋ ಪ್ರಯತ್ನ ಪಟ್ಟೆ. ಆದರೆ ಸಂಪಾದಕರು ನನ್ನ ಮಾತನ್ನು ಕೇಳಲಿಲ್ಲ' ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಸಂಪಾದಕರು ಅವರಿಗೂ 'ಕಾರಣವನ್ನು' ಕೊಡುವ ಗೋಜಿಗೆ ಹೋಗಲಿಲ್ಲವಂತೆ. ಈ ಕೆಲಸ ಮಾಡಲು ನಾನು ಅನರ್ಹ ಎಂದೇನಾದರೂ ಹೇಳಿದ್ದರೆ ನಾನು ಸುಮ್ಮನಾಗಿ ಬಿಡುತ್ತಿದ್ದೆ. ಅದನ್ನೂ ಆ ಸಂಪಾದಕರು ಹೇಳಲಿಲ್ಲ.
ಇಷ್ಟು ವರ್ಷಗಳಾದರೂ ಪರಿಸ್ಥಿತಿ ಬದಲಾಗಿಲ್ಲ. ಕಾಂಗ್ರೆಸ್ನ ವರದಿ ಮಾಡುತ್ತಿರುವ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆಗಾಗ ಎದುರಾದಾಗಲೆಲ್ಲ 'ಅಹ್ಮದ್ ಪಟೇಲ್ ಇಲ್ಲದಿದ್ದರೆ ಕಾಂಗ್ರೆಸ್ ತುಂಬಾ ಇಕ್ಕಟ್ಟಿಗೆ ಸಿಲುಕುತ್ತದೆ. ಅವರು ಹೋದರೆಂದರೆ ಅವರಂತಹ 'ತಿರುಚು ತಜ್ಞರನ್ನು' ಅದು ತಯಾರು ಮಾಡಲೇಬೇಕಾಗುತ್ತದೆ' ಎಂದು ನಗುತ್ತಾ ಹೇಳುತ್ತಾರೆ.
ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಮಾಧ್ಯಮಗಳ ನವಯುಗದಲ್ಲಿ 'ದೋಷದಂತೆ' ಇರುವ ಈ ಗಾಂಧಿ ಕುಟುಂಬ ಅಹ್ಮದ್ ಪಟೇಲ್ರಂಥ ಸುಳ್ಳು ಸುದ್ದಿ ಉತ್ಪಾದಕರಿಂದಲೇ ಬದುಕುಳಿದಿದೆ. ಇದೇ ಕಾರಣಕ್ಕೇ ಗಾಂಧಿ ಕುಟುಂಬ ಮಾಧ್ಯಮಗಳಿಂದ ದೂರ ಮತ್ತು ದುರ್ಗಮವಾಗಿದೆ.
(ಕೃಪೆ: ಓಪನ್ ಮ್ಯಾಗಜಿನ್)
- ಸಂದೀಪ್ ಭೂಷಣ್
ಅಧ್ಯಾಪಕರು, ಜಾಮಿಯಾ ಮಿಲಿಯಾ ಇಸ್ಲಾಮಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

