ಅಭಯಚಂದ್ರ ಜೈನ್ಗೆ ಧರ್ಮ ಮುಖ್ಯವೋ, ಸಂವಿಧಾನವೋ?
ಮಳೆ ನಿಂತರೂ ಮಳೆ ಹನಿ ನಿಲ್ಲೋದಿಲ್ಲ ಎನ್ನುವ ಹಾಗೆ ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆ ನೀಡಿದ ಬಗ್ಗೆ ಎದ್ದಿದ್ದ ಧಾರ್ಮಿಕ ಸಂಘರ್ಷ ದಿನೇ ದಿನೇ ಬೆಳೆಯುತ್ತಲೇ ಇದೆ. ಜೈನ ಸಮುದಾಯದವರು ಅಹಿಂಸಾವಾದಿಗಳು. ಹಾಗಾಗಿ ತಮಗೆ ಮೀನುಗಾರಿಕೆ ಖಾತೆ ಬೇಡ ಎಂದು ಅಭಯಚಂದ್ರ ಜೈನ್ ಹೇಳಿಕೆ ನೀಡಿದ ಬೆನ್ನಲ್ಲೇ ಜೈನ ಯತಿಗಳು ಕೂಡ ಅದರ ಪರವಾಗಿ ಧ್ವನಿ ಎತ್ತಿದ್ದಾರೆ.
ಈಗಾಗಲೇ ಕುಂತುಗಿರಿಯಲ್ಲಿ ಸಭೆ ಸೇರಿದ್ದ 150ಕ್ಕೂ ಹೆಚ್ಚು ಜೈನ ಮುನಿಗಳು ಅಭಯಚಂದ್ರ ಜೈನ್ ಅವರಿಗೆ ಈ ಖಾತೆ ಬೇಡವೆಂದು ಫರ್ಮಾನು ಕೂಡ ಹೊರಡಿಸಿದ್ದಾರೆ. ಜತೆಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಇಷ್ಟು ಸಾಲದೆಂಬಂತೆ ಇದೇ ತಿಂಗಳ 30ರಂದು ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಬಳಿ ನಿಯೋಗದೊಂದಿಗೆ ಹೋಗುವುದಾಗಿಯೂ ಹೇಳಿಕೊಂಡಿದ್ದಾರೆ. ಇವೆಲ್ಲದರ ಮಧ್ಯೆ ಜೈನ ಯತಿಗಳಾದ ಗುಣಧರನಂದಿ ಅವರು, ಜೈನ ಸಮುದಾಯ ಅಹಿಂಸಾ ತತ್ವವನ್ನು ನಂಬಿಕೊಂಡು ಬಂದಿದೆ. ಹೀಗಾಗಿ ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆ ಕೊಟ್ಟರೆ ನಿಭಾಯಿಸುವುದು ಕಷ್ಟ ಎಂದು ಅಹಿಂಸೆಯ ಪರ ಧ್ವನಿ ಎತ್ತಿದ್ದಾರೆ.
ಈಗ ಪ್ರಶ್ನೆ ಉದ್ಭವಿಸಿರುವುದು ಅಭಯಚಂದ್ರ ಜೈನ್ ಅವರು ಸಂವಿಧಾನದ ತತ್ವದಡಿ ನಂಬಿಕೆ ಇಟ್ಟುಕೊಂಡು ಸಚಿವರಾಗಿ ಕಾರ್ಯನಿರ್ವಹಿಸುತ್ತಾರೋ ಅಥವಾ ಜೈನ ಧರ್ಮವನ್ನು ಒಪ್ಪಿಕೊಂಡು ಮಂತ್ರಿಗಿರಿಗೆ ರಾಜಿನಾಮೆ ನೀಡುತ್ತಾರೋ ಎಂಬುದು. ಅವರನ್ನು ಬೆಂಬಲಿಸುತ್ತಿರುವ ಜೈನ ಯತಿಗಳು ಕೂಡಾ ಸಂವಿಧಾನ ಮುಖ್ಯವೋ? ಅಥವಾ ಧರ್ಮ ಮುಖ್ಯವೋ? ಎಂಬುದನ್ನು ಮೊದಲು ಹೇಳಬೇಕು. ಒಬ್ಬ ಮುಖ್ಯಮಂತ್ರಿಗೆ ಪರಮಾಧಿಕಾರ ಇರುತ್ತದೆ. ತನ್ನ ಸಹೋದ್ಯೋಗಿ ಸಚಿವ ಯಾವ ಖಾತೆ ನಿಭಾಯಿಸಬೇಕು ಎಂಬುದರ ಸ್ಪಷ್ಟ ಅರಿವಿರುತ್ತದೆ. ಧಾರ್ಮಿಕ ನೆಲೆಗಟ್ಟನ್ನು ಮುಂದಿಟ್ಟುಕೊಂಡು ಸಿಎಂ ಪರಮಾಧಿಕಾರವನ್ನು ಪ್ರಶ್ನಿಸುವುದು ಎಷ್ಟು ಸರಿ?
ಅಹಿಂಸಾ ತತ್ವವನ್ನು ಎತ್ತಿ ಹಿಡಿದು ಜೈನ್ ಅವರಿಗೆ ಮೀನುಗಾರಿಕೆ ಸಚಿವ ಸ್ಥಾನ ಬೇಡವೆನ್ನುತ್ತಿರುವ ಯತಿಗಳಿಗೆ ಸಚಿವರಾದವರು ಈ ನೆಲದ ಕಾನೂನನ್ನು ಗೌರವಿಸುವುದು ಮುಖ್ಯವೋ ಅಥವಾ ಧರ್ಮವನ್ನು ಗೌರವಿಸುವುದೇ ಮುಖ್ಯವೋ ಎಂಬುದು ಸ್ಪಷ್ಟವಾಗಬೇಕು. ಒಂದು ವೇಳೆ ಅಭಯಚಂದ್ರ ಜೈನ್ ಅವರಿಗೆ ಧರ್ಮವೇ ಮುಖ್ಯವಾಗಿದ್ದರೆ, ಮೀನುಗಾರಿಕೆ ಖಾತೆಯಿಂದ ಜೈನ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗುವುದಿದ್ದರೆ ಅವರು ವೈಯಕ್ತಿಕ ನೆಲೆಯಲ್ಲಿ ವ್ಯಾಪಾರವೋ, ಬೇರೆ ಉದ್ಯೋಗವೋ ಅಥವಾ ಮತ್ತಿನ್ನೇನಾದರೂ ವೃತ್ತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಆದರೆ ಭಾರತದ ಸಂವಿಧಾನದಡಿ ಕೆಲಸ ಮಾಡಬೇಕಾದರೆ ಧಾರ್ಮಿಕ ಚೌಕಟ್ಟನ್ನು ಮುಂದು ಮಾಡಿಕೊಂಡು ಬೇರೆ ಖಾತೆ ಕೊಡಿ ಎಂಬುವುದು ಸಂವಿಧಾನ ವಿರೋಧಿಯಲ್ಲವೇ?
ಭಾರತದ ಸಂವಿಧಾನದಡಿ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಾದರೆ ಎಲ್ಲಾ ಧರ್ಮ, ಜಾತಿ, ವರ್ಗಗಳ ಹಿತಾಸಕ್ತಿಯನ್ನು ಕಾಯಬೇಕಾದದ್ದು ಎಲ್ಲಕ್ಕಿಂತ ಮುಖ್ಯವಾದ 'ಧರ್ಮ'ವಾಗುತ್ತದೆ. ಮುಖ್ಯವಾಗಿ ಅಭಯಚಂದ್ರ ಜೈನ್ ಅವರು ಮೂಡುಬಿದರೆಯಲ್ಲಿ ಗೆದ್ದಿದ್ದು ಕೇವಲ ಜೈನ ಮತಗಳಿಂದಲ್ಲ. ಬದಲಿಗೆ ಎಲ್ಲಾ ವರ್ಗದ ಮತಗಳನ್ನು ಪಡೆದು ಅವರು ಶಾಸಕರಾಗಿ ಆಯ್ಕೆಯಾಗಿ ಈಗ ಮಂತ್ರಿಯಾಗಿದ್ದಾರೆ. ಈಗ ಮೀನುಗಾರಿಕೆ ಖಾತೆ ಜೈನ ಧರ್ಮಕ್ಕೆ ವಿರುದ್ಧವಾದುದು ಎಂಬ ಬಾಲಿಶ ಹೇಳಿಕೆಯನ್ನು ಹರಿಬಿಡಲಾಗಿದೆ. ಆದರೆ ಅಭಯಚಂದ್ರ ಜೈನ್ ಅವರಿಗೆ ಮೀನು ಕೃಷಿಕರು, ಮೀನು ಮಾರಾಟಗಾರರು, ಸಮುದ್ರದಡಿ ಹೋಗಿ ಮೀನು ಹಿಡಿದು ತರುವವರೆಲ್ಲರೂ ಮತ ಹಾಕಿ ಗೆಲ್ಲಿಸಿದ್ದಾರೆ. ಕೇವಲ ಜೈನ ಧರ್ಮೀಯರ ಮತಗಳಿಂದ ಗೆದ್ದಿಲ್ಲ ಎಂಬ ನೆನಪು ಅವರಿಗೆ ಇರಬೇಕು. ಈಗ ಗೆದ್ದ ಮೇಲೆ ಮೀನುಗಾರಿಕೆ ಖಾತೆ ಬೇಡ ಎನ್ನುತ್ತಿರುವ ಸಚಿವರು ಕಳೆದ ಚುನಾವಣೆಯಲ್ಲಿ ಮೀನು ಕೃಷಿಕರ ಮತವೂ ಬೇಡವೆಂದು ಹೇಳಿ ಅಲ್ಪಸಂಖ್ಯಾತ ಜೈನ ಧರ್ಮಿಯರ ಮತಗಳನ್ನು ನಂಬಿಕೊಂಡಿದ್ದರೆ ಅವರು ಗೆಲ್ಲುವ ಸಾಧ್ಯತೆಯೇ ಇರುತ್ತಿರಲಿಲ್ಲ. ಮೀನುಗಾರಿಕೆ ಖಾತೆಯಿಂದ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಧಕ್ಕೆಯಾಗುತ್ತದೆ ಎಂದೋ, ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತದೆ ಎಂದು ಅಭಯಚಂದ್ರ ಜೈನ್ ಅವರಿಗೆ ಅನಿಸಿದರೆ ಅವರು ರಾಜಕೀಯಕ್ಕೆ ಬರಲೇಬಾರದು. ಆದರೆ ರಾಜಕೀಯಕ್ಕೆ ಬಂದ ಮೇಲೆ ಜನಪ್ರತಿನಿಧಿಯಾದ ಮೇಲೆ ಅವರು ಬಹು ಆಹಾರ ಸಂಸ್ಕೃತಿ, ಬಹುಜಾತಿ, ಬಹು ಧರ್ಮದವರ ಹಿತಾಸಕ್ತಿಗೆ ಅನುಸಾರ ಕೆಲಸ ನಿರ್ವಹಿಸಬೇಕಾಗುತ್ತದೆ. ಕಾನೂನು ಮತ್ತು ಸಂವಿಧಾನದಡಿಯಲ್ಲಿ ಕೆಲಸ ಮಾಡಬೇಕಾದರೆ ತಮ್ಮ ಧರ್ಮದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವುದು ಎಷ್ಟು ಸರಿ?
ಇತಿಹಾಸದಲ್ಲಿ ಜೈನ ಧರ್ಮದ ಅನೇಕ ರಾಜ ಮಹಾರಾಜರು, ಸೇನಾ ನಾಯಕರು, ದಂಡಾಧಿಪತಿಗಳು ಆಗಿ ಹೋಗಿದ್ದಾರೆ. ಅವರೆಲ್ಲರೂ ಯುದ್ಧದಲ್ಲಿ ಶತ್ರು ಸೈನಿಕರನ್ನು ಕೊಲ್ಲದೇ ರಾಜ್ಯವಾಳಿದ್ದಾರೆಯೇ?
ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆ ಬಿಟ್ಟು ಬೇರೆ ಖಾತೆ ಕೊಡಿಸುವ ಪ್ರಯತ್ನದಲ್ಲಿ ತೊಡಗಿರುವ ಗುಣಧರ ನಂದಿ ಸೇರಿದಂತೆ ಹಲವಾರು ಜೈನ ಯತಿಗಳು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಧಾರ್ಮಿಕ ಆಚರಣೆಗಳನ್ನು ನಂಬಿರುವವರಿಗೆ ಧರ್ಮ ಸೂಕ್ಷ್ಮ ಎಷ್ಟು ಮುಖ್ಯವೋ, ಜನರ ಹಿತ ಕಾಯಲೆಂದೇ ಜನರ ಮತ ಪಡೆದು ಆರಿಸಿ ಬಂದ ಜನಪ್ರತಿನಿಧಿಗೆ ಪ್ರಭುತ್ವ ಹಾಗೂ ರಾಜ್ಯ, ರಾಷ್ಟ್ರ ಸೂಕ್ಷ್ಮವೂ ಎಲ್ಲಕ್ಕಿಂತ ಮುಖ್ಯ ಅಲ್ಲವೇ? ಸಂವಿಧಾನದಡಿ ಕಾರ್ಯನಿರ್ವಹಿಸಬೇಕಾದರೆ ಅನಗತ್ಯವಾಗಿ ಧರ್ಮ ಸೂಕ್ಷ್ಮತೆಗಳನ್ನು ದೊಡ್ಡದು ಮಾಡುವುದು ಸರಿಯಲ್ಲ. ಒಂದು ವೇಳೆ ಅಭಯಚಂದ್ರ ಜೈನ್ ಅವರಿಗೆ ಶಿಕ್ಷಣ, ವೈದ್ಯಕೀಯ, ಆರೋಗ್ಯ ಇನ್ನಿತರ ಯಾವುದೇ ಖಾತೆ ಕೊಟ್ಟರೂ ಅಲ್ಲೂ ಕೂಡ ಹಲವರು ಸಸ್ಯಹಾರಿಗಳಿಗೆ ಒಂದು ರೀತಿಯ ಮನ್ನಣೆ, ಮಾಂಸಹಾರಿಗಳಿಗೆ ಇನ್ನೊಂದು ರೀತಿ ಮನ್ನಣೆ ನೀಡುವುದಿಲ್ಲ ಹಾಗೂ ಉಚ್ಚ, ನೀಚ ಎಂದು ಜಾತಿ ವರ್ಗೀಕರಣ ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?
ಇದು ಪವಿತ್ರ, ಇದು ಅಪವಿತ್ರ ಎಂಬ ಯೋಚನೆ ತಲೆಗೆ ಬಂದರೆ ಯಾವುದೇ ಜನಪ್ರತಿನಿಧಿ ಸಾರ್ವಜನಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಭತ್ತ ಬೆಳೆಯಬೇಕಾದರೆ ಗೊತ್ತೇ ಆಗದ ಹಾಗೆ ಲಕ್ಷಾಂತರ ಕ್ರಿಮಿ ಕೀಟಗಳು ಸಾಯುತ್ತವೆ. ಭತ್ತ ಅನ್ನವಾಗಿ ಮಾರ್ಪಾಡಾಗುವುದರೊಳಗೆ ನಿಸರ್ಗದಲ್ಲೇ ಹಿಂಸೆ ನಡೆದು ಹೋಗಿರುತ್ತದೆ.
ಕೇವಲ ಒಂದು ಧರ್ಮ ಅಥವಾ ಒಂದು ಜಾತಿಗೆ ಜೋತು ಬೀಳುವುದು ಸರಿಯಲ್ಲ. ಧರ್ಮ ಸೂಕ್ಷ್ಮಗಳೇನಿದ್ದರೂ ವೈಯಕ್ತಿಕ ನೆಲೆಯ ಆಚರಣೆಗೆ ಮಾತ್ರ ಅನ್ವಯವಾಗುವಂಥದ್ದು. ಈ ದೇಶಕ್ಕೊಂದು ಸಂವಿಧಾನವಿದೆ. ಜನಪ್ರತಿನಿಧಿಗಳು ಅದರ ತತ್ವದಡಿಯೇ ಕೆಲಸ ಮಾಡಬೇಕಾಗುತ್ತದೆ. ಜನರ ಸೇವೆ ಮಾಡುವುದಕ್ಕೆ ಬಂದವರು ಧರ್ಮ ಸೂಕ್ಷ್ಮತೆಯ ಬಗ್ಗೆ ಮಾತನಾಡಬೇಕಾದರೆ ಎಚ್ಚರ ವಹಿಸಬೇಕು. ಗಿರೀಶ್ ಕಾರ್ನಾಡರ 'ಹಿಟ್ಟಿನ ಹುಂಜ' ನಾಟಕದಲ್ಲಿ ಬರುವ ಒಂದು ಪ್ರಸಂಗವನ್ನು ಜೈನ ಮುನಿಗಳು ಅರ್ಥ ಮಾಡಿಕೊಳ್ಳಬೇಕು. 'ಹಿಂಸೆ ಮನಸ್ಸಿನಲ್ಲಿ ಮೂಡದೇ ಇದ್ದರೆ ಹಿಂಸೆ ಆಗೋದಿಲ್ಲ. ಅದು ಬಿಟ್ಟು ತಲೆ ಒಳಗಡೆ ಹಿಂಸೆ ಇಟ್ಟುಕೊಂಡು ಅಹಿಂಸೆಯ ಬಗ್ಗೆ ಮಾತನಾಡಿದರೆ ಅದು ಕೂಡ ಹಿಂಸೆಯೇ ಆಗುತ್ತದೆ'. ಜೈನ ಯತಿಗಳು ನಮ್ಮ ಮಠಾಧಿಪತಿಗಳಂತಲ್ಲ. ಅವರು ದಿಗಂಬರ ಮುನಿಗಳೆಂದೇ ಪ್ರಸಿದ್ಧರು. ಅವರು ಲೌಕಿಕದ ಆಗು ಹೋಗುಗಳನ್ನು ಮೀರಿ ಲೋಕ ವ್ಯವಹಾರಗಳಿಂದ ಜನವಸತಿಯಿಂದ ದೂರವಿದ್ದು ಅಲೌಕಿಕದ ಚಿಂತನೆಯಲ್ಲಿ ತೊಡಗಿಸಿಕೊಂಡಿರುತ್ತಾರಲ್ಲವೇ? ಆದರೆ ಈಗೀಗ ಅವರು ನಗರಗಳನ್ನು ದಿಗಂಬರರಾಗಿಯೇ ಪ್ರವೇಶಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡಿ ಜನರಿಗೆ ಮುಜುಗರವನ್ನೂ ಉಂಟು ಮಾಡುತ್ತಿದ್ದಾರೆ. ಈಗ ಅಭಯ ಚಂದ್ರ ಜೈನ್ ಅವರು ತಮ್ಮ ಧರ್ಮದವರು ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಮೀನುಗಾರಿಕೆ ಖಾತೆ ಬೇಡವೆಂದು ಹೇಳುವ ಮೂಲಕ ಸಂವಿಧಾನದ ಮೂಲ ತತ್ವವಾದ ಸಾಮಾಜಿಕ ಸಹಬಾಳ್ವೆ, ಜಾತ್ಯತೀತ ನಿಲುವು, ಸೋದರತ್ವ, ಸಾಮಾಜಿಕ ನ್ಯಾಯದ ವಿರುದ್ಧ ಹೇಳಿಕೆ ನೀಡಿದಂತಾಗುತ್ತದೆ.
ಎಲ್ಲಕ್ಕೂ ಮಿಗಿಲಾಗಿ ಮೀನುಗಾರಿಕೆ ಖಾತೆಯನ್ನು ಅಭಯಚಂದ್ರ ಜೈನ್ ಅವರಿಗೆ ಕೊಡುವುದು ಬೇಡ ಎನ್ನುವ ಮೂಲಕ ಜೈನ ಯತಿಗಳು ಮೀನು ಕೃಷಿ ಹಿಂಸಾತ್ಮಕವಾದುದು ಎಂಬ ಸಂದೇಶವನ್ನು ಬಿತ್ತಿದಂತೆ. ಜೈನ ಯತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಅಲ್ಲವೇ?
ಮೀನುಗಾರಿಕೆ ಖಾತೆ ಬೇಡೆವೆಂದು ಮೊದಲು ತಕರಾರು ಎತ್ತಿದ್ದ ಅಭಯಚಂದ್ರ ಜೈನ್ ಅವರು ಮುಖ್ಯಮಂತ್ರಿಗಳು ಖಾತೆ ಬದಲಾವಣೆ ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ ನಂತರ ಅಧಿಕಾರದ ಆಸೆಯಿಂದ ಈಗ ಸುಮ್ಮನಾಗಿದ್ದಾರೆ. ಆದರೆ, ಆ ಸಮುದಾಯದವರು, ಯತಿಗಳು ಈಗ ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಜೈನರು ಅಹಿಂಸಾವಾದಿಗಳು ಹಾಗಾಗಿ ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆ ಬೇಡವೆಂದು ಜೈನ ಯತಿಗಳು ತಕರಾರು ತೆಗೆದಿರುವುದು ಈ ಹಿನ್ನೆಲೆಯಲ್ಲಿ ಅಸಂವಿಧಾನಾತ್ಮಕವಾಗುತ್ತದೆ. ಒಂದು ವೇಳೆ ಜೈನ ಯತಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾತೆ ಬದಲಾಯಿಸಿ ಬೇರೆ ಖಾತೆ ಕೊಟ್ಟರೆ ಅದು ಕೂಡ ಅಸಂವಿಧಾನಾತ್ಮಕವಾಗುತ್ತದೆ. ಸಂವಿಧಾನದ ಘನತೆಯನ್ನು ಗೌರವಿಸುವವರೆಲ್ಲರೂ ಇದನ್ನು ಎಚ್ಚರಿಕೆಯಿಂದ ಅವಲೋಕಿಸಬೇಕು.
- ಉಗಮ ಶ್ರೀನಿವಾಸ್
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

