ಬೆಂಗಳೂರಿನ ಭವಿಷ್ಯ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ?

Updated on: 

ಬೆಂಗಳೂರು ಇನ್ನಷ್ಟು ಎತ್ತರಕ್ಕೆ ಬೆಳಯಬೇಕಾ? ಈ ಪ್ರಶ್ನೆ  ಬಹಳಷ್ಟು ಸಮಯದಿಂದ ಎಲ್ಲರ ತಲೆತಿನ್ನುತ್ತಿದೆ. ಹೌದು, ಬೆಳೆಯಲೇಬೇಕು ಎನ್ನುತ್ತದೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ಕೆಐಜಿ2020 ಎನ್ನುವ ಕರ್ನಾಟಕ ಮಾಹಿತಿ- ಸಂವಹನ ತಂತ್ರಜ್ಞಾನ ಸಂಸ್ಥೆ(ಕೆಐಜಿ)ಯ ವರದಿ. ಮಹಡಿ ಸ್ಥಳದ ಏರಿಳಿತದ ಸೂಚಿ(ಎಫ್‌ಎಸ್‌ಐ) ಅಥವಾ ನೆಲ ವಿಸ್ತೀರ್ಣ ಅನುಪಾತ(ಎಫ್‌ಎಸ್‌ಐ)ವನ್ನು ಹೆಚ್ಚಿಸಬೇಕು ಎಂದು ಅದು
ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಂದರೆ ನಗರದ ಕಟ್ಟಡಗಳ ಎತ್ತರವನ್ನು ಹೆಚ್ಚಿಸುವುದಕ್ಕೆ ಬಿಲ್ಡರ್‌ಗಳಿಗೆ ಅನುವು ಮಾಡಿ ಕೊಡುವುದು! ಇದರಿಂದ ಸಂಗ್ರಹವಾದ ಹಣವನ್ನು ಬೆಂಗಳೂರಿನ ಅಭಿವೃದ್ಧಿಗೆ ಬಳಸಲಾಗುವುದು ಎಂದು ಕೆಐಜಿ ವರದಿ ಹೇಳುತ್ತದೆ.  ಆದರೆ ಸೂಕ್ತ ಮೂಲಸೌಕರ್ಯಗಳ ಬೆಂಬಲವಿಲ್ಲದೆ ಆ ಕೆಲಸಕ್ಕೆ ಮುಂದಾಗಬಾರದು ಎನ್ನುವುದು ನಿವಾಸಿ ಕಲ್ಯಾಣ ಸಂಘಗಳ ಮತ್ತು ನಾಗರಿಕ ಸಂಸ್ಥೆಗಳ ವಾದ. ಸರಿಯಾದ ರಸ್ತೆಗಳಿಲ್ಲದೆ, ನೀರು ಪೂರೈಕೆ ಇಲ್ಲದೆ, ವಿದ್ಯುತ್ ಮತ್ತು ಇನ್ನಿತರ ಸೌಲಭ್ಯಗಳಿಲ್ಲದೆ ಎಫ್‌ಎಸ್‌ಐ ಅನ್ನು ಹೆಚ್ಚಿಸುವುದು ಮರಣ ಮೃದಂಗ ಬಾರಿಸಿದಂತೆಯೇ ಸರಿ ಎಂದು ಅವು ಹೇಳುತ್ತವೆ.
ನಿವಾಸಿ ಸಂಘಗಳು ಹೇಳುತ್ತಿರುವುದರಲ್ಲಿ ಸತ್ಯವಿದೆ. ಬಿಲ್ಡರ್‌ಗಳಂತೂ ಈ ವರದಿಯಿಂದ ಹಿಗ್ಗಿಹೋಗಿರುತ್ತಾರೆ. ಇನ್ನು ಸರ್ಕಾರದ ಬೊಕ್ಕಸಕ್ಕೂ ಹಣ ಹರಿದು ಬರಲಿದೆ. ಆದರೆ ಇದಕ್ಕೆ ಪ್ರತಿಯಾಗಿ ತೆರಬೇಕಾಗಿರುವ ಬೆಲೆಯೇನು? ಎಫ್‌ಸಿಐ ಹೆಚ್ಚಿಸಿದರೆ ಸಜಹವಾಗಿಯೇ ನಗರದ ಜನದಟ್ಟಣೆ ಹೆಚ್ಚಾಗುತ್ತದೆ. ಪ್ರಸ್ತುತ ಮೂಲಸೌಕರ್ಯಗಳ ಮೇಲೆ ಇದರಿಂದಾಗಿ ಹೆಚ್ಚಿನ ಒತ್ತಡ ಬೀಳುತ್ತದೆ. ಹಾಗಿದ್ದರೆ ಸರ್ಕಾರ ಕಟ್ಟಡ ನಿರ್ಮಾತೃಗಳ ಲಾಬಿಗೆ ಕುಣಿಯುತ್ತಿದೆಯೇ? ಸದ್ಯಕ್ಕಂತೂ ಹಾಗೇ ಅನ್ನಿಸುತ್ತಿದೆ.
ಇಂದಲ್ಲದಿದ್ದರೆ ನಾಳೆಯಾದರೂ ಬೆಂಗಳೂರು 'ಎತ್ತರಕ್ಕೆ' ಬೆಳೆಯಬೇಕು ಎನ್ನುವ ಸಂಗತಿಯನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಆ ಬೆಳವಣಿಗೆಗೆ ಇದು ಸಕಾಲವೇ? ಖಂಡಿತವಾಗಿಯೂ ಇಲ್ಲ. ಮುಂಬೈ ಮತ್ತು ದೆಹಲಿಯ ವಿಷಯವನ್ನೇ ತೆಗೆದುಕೊಳ್ಳಿ. ಎಫ್‌ಸಿಐ ಹೆಚ್ಚಿಸುವ ಬಗ್ಗೆ ಈ ನಗರಗಳಲ್ಲೂ ಚರ್ಚೆ ನಡೆದಿದೆ. ದೆಹಲಿ ತನ್ನ ಹೊಸ 'ಸಾರಿಗೆ ಸಂಬಂಧೀ ಅಭಿವೃದ್ಧಿ(ಟಿಓಡಿ)ಯ ಮೂಲಕ 'ಜನ ಸಾಂದ್ರತೆಯನ್ನು' ನಿಭಾಯಿಸಬಲ್ಲ ಮೂಲಸೌಕರ್ಯಾಭಿವೃದ್ಧಿಯತ್ತ ಗಮನ ಹರಿಸಲು ಮುಂದಾಗಿದೆ. ಆ ಕೆಲಸ ಯಶಸ್ವಿಯಾದ ನಂತರವಷ್ಟೇ ಎಫ್‌ಸಿಐ ವಿಸ್ತರಿಸುವ ಕುರಿತು ಅದು ಚರ್ಚಿಸಲಿದೆ.  ಬೆಂಗಳೂರು ಕೂಡ ಇಂಥದ್ದೇ ಕಾರ್ಯವಿಧಾನ ಅಳವಡಿಸಿಕೊಳ್ಳಬಹುದಲ್ಲವೇ? ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆದರೆ ಬೆಂಗಳೂರಿನಂತೆ ಮೂಲಸೌಕರ್ಯಾಭಿವೃದ್ಧಿಯಲ್ಲಿ ವೈಫಲ್ಯ ಕಾಣುತ್ತಿರುವ ಇನ್ನೊಂದು ನಗರ ಗುರಗಾಂವ್. ತಕ್ಷಣ ಪರಿಹಾರಕ್ಕಾಗಿ ಅದು ಎಫ್‌ಸಿಐ ಅನ್ನು ನೆಚ್ಚಿಕೊಳ್ಳಬಹುದೇ? ಖಂಡಿತ ಇಲ್ಲ. ಅದು ಕಾರ್ಯಸಾಧುವೂ ಅಲ್ಲ, ಸಮರ್ಥನೀಯವೂ ಅಲ್ಲ. ಕೆಐಜಿ ವರದಿಯ ಬಗ್ಗೆ ನಿವಾಸಿಸಂಘಗಳು ವ್ಯಕ್ತಪಡಿಸುತ್ತಿರುವ ಆತಂಕಗಳ ಕುರಿತು, ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳುವುದು ಹೀಗೆ: "ಎಫ್‌ಎಸ್‌ಐ ಕುರಿತು ಸದ್ಯಕ್ಕೆ ಶಿಫಾರಸು ಮಾಡಲಾಗಿರುವ ಯೋಜನೆ ನಿಜಕ್ಕೂ ಅಪಾಯಕಾರಿಯಾದದ್ದು. ಬೆಂಗಳೂರಿಗೆ ನಿಜವಾದ ಸುಧಾರಣೆ ಬೇಕಾಗಿದೆ, ಪಟ್ಟಭದ್ರ ಹಿತಾಸಕ್ತಿಗಳು ಆಸಕ್ತಿಗನುಗುಣವಾದ ಕೆಲಸಗಳಲ್ಲ.
ರಿಯಲ್ ಎಸ್ಟೇಟ್ ಉದ್ಯಮದೊಂದಿಗೆ ಆಳವಾದ ಮತ್ತು ವರ್ಣಿಸಲಸಾಧ್ಯವಾದಂಥ ಸಂಬಂಧ ಹಲವಾರು ಚುನಾಯಿತ ಪ್ರತಿನಿಧಿಗಳಿಗಿರುವುದು ಎಲ್ಲರಿಗೂ ತಿಳಿದಿರುವಂಥದ್ದೆ. ನಗರದ ಕಳಪೆ ಆಡಳಿತಕ್ಕೆ ಇದು ಸಂಕೇತವಾದಂತೆ ಕಾಣುತ್ತಿದೆ. ಸಾರ್ವಜನಿಕ ಹಿತಾಸಕ್ತಿಯ ವಿರುದ್ಧವಾಗಿ ಕಾಂಟ್ರಾಕ್ಟರ್‌ಗಳು ಮತ್ತು ಅಧಿಕಾರಿಗಳು ಇಂತಹ ಹೊಂದಾಣಿಕೆಗೆ ಮುಂದಾಗುವುದನ್ನು ಕೂಡಲೇ ತಡೆಯಬೇಕು. ಅಲ್ಲದೆ ಇದರಿಂದ ನಗರದ ಅಭಿವೃದ್ಧಿಯನ್ನು ಬಿಲ್ಡರ್‌ಗಳ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳ ಆರ್ಥಿಕ ಆಸಕ್ತಿಯ ಮುಂದೆ ಬಲಿಕೊಟ್ಟಂತಾಗುತ್ತದೆ. ಪ್ರಪಂಚದ ಯಾವುದೇ ಭಾಗದಲ್ಲೂ ನಗರದ ನಿರ್ಮಾಣ ಜವಾಬ್ದಾರಿಯನ್ನು ಬಿಲ್ಡರ್‌ಗಳಿಗೆ ವಹಿಸಿಕೊಟ್ಟ ಉದಾಹರಣೆಗಳಿಲ್ಲ. ಇಂತಹ ನಡೆಯಿಂದಾಗಿ ನಗರದ ಅಭಿವೃದ್ಧಿಯೂ ಆಗುವುದಿಲ್ಲ/ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಇದರ ಬದಲು ಸರ್ಕಾರ ಯಲಹಂಕ, ಕೆಂಗೇರಿ, ದೇವನಹಳ್ಳಿ ಮತ್ತು ಹೊಸಕೋಟೆಯಂಥ ಪ್ರದೇಶಗಳ ಅಭಿವೃದ್ಧಿಗೆ ನೀಲನಕ್ಷೆಯೊಂದನ್ನು ರೂಪಿಸಬೇಕು ಮತ್ತು ಬೆಂಗಳೂರಿನ ಮೂಲಸೌಕರ್ಯಗಳ ಮತ್ತು ಸಾರ್ವಜನಿಕ ಸೇವೆಗಳ ಮೇಲೆ ಬೀಳುತ್ತಿರುವ ಭಾರೀ ಒತ್ತಡವನ್ನು ಕಡಿಮೆ ಮಾಡಬೇಕು. ಇಂದು ಬೆಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳನ್ನು ದೂರ ಮಾಡಬೇಕಾದರೆ, ಬೆಂಗಳೂರಿನ ನಾಗರಿಕರ ಮಹತ್ವಾಕಾಂಕ್ಷೆಯನ್ನು, ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಏಷಿಯಾ ಮತ್ತು ಪ್ರಪಂಚದ ಇನ್ನಿತರ ಅಭಿವೃದ್ಧಿಶೀಲ ನಗರಗಳು ಅನುಸರಿಸುತ್ತಿರುವ ಯೋಜನೆಯನ್ನು ಅನುಸರಿಸಬೇಕು ಎಂದು ನಾನು ಈ ಮೂಲಕ ಮನವಿ ಮಾಡುತ್ತೇನೆ."
ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಎಲ್ಲವನ್ನೂ ಹೇಳಿದ್ದಾರೆ. ಆದರೆ ಸಚಿವರು ಮತ್ತು ನಗರದ 28 ಶಾಸಕರು ಈ ಪ್ರಮುಖ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು, ಕೆಐಜಿಯ ಶಿಫಾರಸನ್ನು ಮಾನ್ಯ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವರಾ? ಸಾರ್ವಜನಿಕ ಸಮಾಲೋಚನೆಗಳ ಅನುಪಸ್ಥಿತಿಯಲ್ಲಿ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳ ಆಸಕ್ತಿಯನ್ನು ತಣಿಸಲು ಪ್ರಯತ್ನಿಸುತ್ತದೆ.
ಒಂದು ನಿವಾಸಿ ಸಂಘ: 'ತನ್ನ ಅತಿ ಎತ್ತರದ ಬಿಲ್ಡಿಂಗುಗಳಿಂದಾಗಿ ಪ್ರಪಂಚದೊಡನೆ ಪೈಪೋಟಿ ನಡೆಸುತ್ತಿರುವ ದುಬೈನತ್ತ ನಾವು ನೋಡುವುದು ಬೇಡ. ದುಬೈ ಬಳಿ ದುಡ್ಡಿದೆ. ನೀರಿನಿಂದ ಉಪ್ಪಿನಂಶ ತೆಗೆದು  ದೇಶವಾಸಿಗಳ ದಾಹ ತೀರಿಸಬಲ್ಲ ಶಕ್ತಿ ಅದಕ್ಕಿದೆ. ಅದು ನಮ್ಮಿಂದ ಸಾಧ್ಯವಿಲ್ಲ. ನಮಗೆ ನಮ್ಮದೇ ಆದ ಮಾದರಿ ಇರಲಿ..' ಎನ್ನುತ್ತದೆ. ಇನ್ನೊಂದು ಸಂಘ ಹೇಳುವುದೇನೆಂದರೆ...'ಹಿಂದೆ, ಬಡವರಿಗೆ ನಿವಾಸ ಕಟ್ಟಿಕೊಡುವುದಾಗಿ ಹೇಳಿ ಬಡ ರೈತರಿಂದ ಜಾಗ ಕಸಿದುಕೊಳ್ಳಲಾಯಿತು. ಆಗ ದೊಡ್ಡ ಭ್ರಷ್ಟಾಚಾರ ನಡೆಯಿತು. ಈಗ ಜಾಗವನ್ನು ಶ್ರೀಮಂತರಿಗೆ ಮತ್ತು ಹೈಟೆಕ್ ಉದ್ಯಮ/ ಸೇವೆಗಳಿಗೆ ನೀಡುವ ಯೋಜನೆ ರೂಪಿಸಲಾಗುತ್ತಿದೆ. ಮಲೇಷ್ಯಾದಲ್ಲಿನ ಮಾದರಿ ನಮಗಿಂತ ಎಷ್ಟೋ ಉತ್ತಮವಾಗಿದೆ. ಮಲೇಷ್ಯಾದಲ್ಲಿ ಪ್ರತಿ ಪ್ರಮುಖ ಅಭಿವೃದ್ಧಿ ಯೋಜನೆಯಲ್ಲೂ 30 ಪ್ರತಿಶತ ನಿರ್ಮಾಣಯೋಗ್ಯ ಜಾಗವನ್ನು ವಸತಿಗಾಗಿ ಕೈಗೆಟುಕುವ ದರದಲ್ಲಿ ಮೀಸಲಿಡಬೇಕು ಎಂಬ ನಿಯಮವಿದೆ. ಮತ್ತು ಇದನ್ನು ಸರ್ಕಾರದೊಂದಿಗೆ ಪೂರ್ವ ನಿಗದಿಯಾದ ದರದಲ್ಲಿ ದುರ್ಬಲ ವರ್ಗಗಳಿಗೆ ಹಂಚಲಾಗುತ್ತದೆ...'
ಸಿದ್ದರಾಮಯ್ಯ ಅವರ ಸರ್ಕಾರ ಕೆಐಜಿಯ ಶಿಫಾರಸುಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆಯೇ? ನಗರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಅದು ನಾಗರಿಕರ ಮತ್ತು ನಿವಾಸಿ ಸಂಘಗಳ ಸಹಾಯವನ್ನು ಪಡೆಯಬೇಕು. ಇಂತಹ ನಡೆಯಿಂದಾಗಿ ಸ್ಟೇಕ್‌ಹೋಲ್ಡರ್‌ಗಳ,ಸರ್ಕಾರದ ನಡುವಿನ ಸಂಬಂಧ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ.
ಕೊನೆಯ ಗುಟುಕು: ಕಳೆದ ವರ್ಷ ಜಪಾನ್‌ಗೆ ಸುನಾಮಿ ಬಂದೆರಗಿದಾಗ ಕಷ್ಟಕ್ಕೆ ಸಿಲುಕಿದವರಿಗೆ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಲು ಇಡೀ ದೇಶವೇ ಒಂದಾಗಿ ದುಡಿಯಿತು. ಆಗ ಅಲ್ಲಿ ಕಲಹಗಳು ನಡೆಯಲಿಲ್ಲ, ಆರೋಪ-ಪ್ರತ್ಯಾರೋಪಗಳ ಪ್ರವಾಹ ಹರಿಯಲಿಲ್ಲ. ಆದರೆ ಉತ್ತರಾಖಂಡ್‌ನಲ್ಲಿ ಆದ ಅನಾಹುತಕ್ಕೆ ನಮ್ಮ ದೇಶದ ರಾಜಕಾರಣಿಗಳು ಹೇಗೆ ವರ್ತಿಸುತ್ತಿದ್ದಾರೋ ನೋಡಿ!

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com