ಬಾಯ್‌ಫ್ರೆಂಡ್ ಇಲ್ವಾ? ಹಂಗಾದ್ರೆ ವೇಸ್ಟ್ ಬಿಡು...

Updated on: 

ಭಾನುವಾರ ಬಂತೆಂದರೆ ಸಾಕು; ಪಿ.ಜಿ.ಯ ಓನರ್‌ಗಳು ಸಂಭ್ರಮದಿಂದ ಮುಖ ಅರಳಿಸುತ್ತಾರೆ. ಕಾರಣ, ಅವತ್ತು ಮಾತ್ರ ತರಕಾರಿ ತರಲೆಂದು ಮಾರ್ಕೆಟ್‌ಗೆ ಹೋಗುವ, ಎಂಟು ಗಂಟೆಗೂ ಮೊದಲೇ ಎಲ್ಲರಿಗೂ ತಿಂಡಿ ಮಾಡಬೇಕು ಎನ್ನುವ ಗಡಿಬಿಡಿ ಇರುವುದಿಲ್ಲ. ಅವತ್ತು ಯಾವುದೋ ಒಂದು ತಿಂಡಿ ಮಾಡಿಟ್ಟರೆ ಆಯ್ತು. ಹುಡುಗಿಯರು ದೂಸರಾ ಮಾತಿಲ್ಲದೆ ತಿಂದು ಎದ್ದು ಹೋಗುತ್ತಾರೆ. ಅವತ್ತು ಮಾತ್ರ, ಚಿತ್ರಾನ್ನಕ್ಕೆ ಉಪ್ಪು ಕಡಿಮೆಯಾಗಿರುವುದು, ಪುಳಿಯೊಗರೆಯಲ್ಲಿ ಕುರುಂ ಕುರುಂ ಕಡ್ಲೆ ಬೀಜವೇ ಮಾಯವಾಗಿರುವುದು, ಹುರಿಯದ ರವೆಯನ್ನೇ ಉಪ್ಪಿಟ್ಟಿಗೆ ಹಾಕಿರುವುದು... ಇಂಥ ಸಂಗತಿಗಳನ್ನು ಹುಡುಗಿಯರು ಗಮನಿಸುವುದೇ ಇಲ್ಲ. ತುಂಬ ಅವಸರದಲ್ಲಿಯೇ ತಿಂಡಿ ತಿಂದ ಶಾಸ್ತ್ರ ಮಾಡಿ ಗಡಿಬಿಡಿಯಿಂದ ಹೊರಟು ಬಿಡುತ್ತಾರೆ. ಪಿ.ಜಿ.ಯ ಓನರ್‌ಗಳೊಂದಿಗೆ ಸ್ವಲ್ಪ ಹೆಚ್ಚಿನ ಸಲುಗೆಯಿದ್ದರೆ, ಬಾಯ್ ಎಂದು ಮೆಲ್ಲಗೆ ಹೇಳಿ, ಒಮ್ಮೆ ಕಣ್ಣು ಹೊಡೆದು, ಕಿಲಕಿಲನೆ ನಕ್ಕು, ಟೈಂ ಆಗೋಯ್ತು ಬರ್ಲಾ ಎಂದು ಥೇಟ್ ಜಿಂಕೆ ಮರಿಗಳಂತೆಯೇ ಕಾಲ್ಕೀಳುತ್ತಾರೆ. ಕಾರಣ, ಭಾನುವಾರ ಬೆಳಗ್ಗೆ ಒಂಭತ್ತೂವರೆಗೆ ಸರಿಯಾಗಿ ಹಾಸ್ಟೆಲ್ ಮುಂದೆ 'ಅವನು' ಕಾಯುತ್ತಾ ನಿಂತಿರುತ್ತಾನೆ. ಅವನು-ಬಾಯ್‌ಫ್ರೆಂಡು!
ನಿಮಗೆ ಆಶ್ಚರ್ಯ ಅನ್ನಿಸಬಹುದು. ಆದರೆ ಇದಿಷ್ಟು ಸತ್ಯ ಮಾತ್ರ. ಓದುವ ನೆಪದಲ್ಲಿ ಉದ್ಯೋಗದ ನೆಪದಲ್ಲಿ, ಪಿ.ಜಿ.ಗಳಲ್ಲಿ ಉಳಿದಿರುತ್ತಾರಲ್ಲ; ಆ ಪೈಕಿ ಶೇಕಡಾ 60ರಷ್ಟು ಹುಡುಗಿಯರಿಗೆ ಬಾಯ್‌ಫ್ರೆಂಡ್‌ಗಳಿರುತ್ತಾರೆ. ಬಾಯ್‌ಫ್ರೆಂಡ್ ಇಲ್ಲ ಅಂದ ಮೇಲೆ ಅದೂ ಒಂದು ಬದುಕಾ ಎಂದು ವಾದಿಸುವವರೂ ಇರುತ್ತಾರೆ. ಭಾನುವಾರ ಕೂಡ ಯಾವುದೇ ರೋಮಾಂಚನಕ್ಕೆ ಈಡಾಗದೆ ಪೇಪರ್‌ಗಳ ಮಧ್ಯೆ ಕಳೆದು ಹೋಗಿರುವ; ಎಫ್.ಎಂ. ಹಾಡುಗಳ ಮಧ್ಯೆ ಮೈಮರೆತಿರುವ ಗೆಳತಿಯ ಎದುರು ನಿಂತು ಮುಲಾಜಿಲ್ಲದೆ ಹೇಳಿ ಬಿಡುತ್ತಾರೆ: 'ಬಾಯ್‌ಫ್ರೆಂಡ್ ಇಲ್ವಾ? ಹಂಗಾದ್ರೆ ವೇಸ್ಟು ಬಿಡು...'
'ಅವನೊಂದಿಗೆ' ಹೊರಡಲು ನಿಂತವರು ಮಾಡಿಕೊಳ್ಳುವ ತಯಾರಿಗಳು ಒಂದೆರಡಲ್ಲ: ವಾರವಿಡೀ ಚೂಡಿದಾರ್‌ಗಳಲ್ಲಿಯೇ ಕಳೆದು ಹೋಗುವ ಹುಡುಗಿ, ಭಾನುವಾರ ಜೀನ್ಸ್-ಮಿಡಿ ಹಾಕಿಕೊಂಡು 'ಕ್ಯೂಟ್‌' ಆಗಿ ಕಾಣಿಸ್ತಿದೀನಾ ಎಂದು ಮತ್ತೆ ಮತ್ತೆ ಚೆಕ್ ಮಾಡಿಕೊಳ್ಳುತ್ತಾಳೆ. ಇದೇನಮ್ಮಾ, ಇವತ್ತೇನಾದ್ರೂ ಶೂಟಿಂಗ್ ಇದೆಯಾ ಎಂದು ರೇಗಿಸಿದರೆ- ನಾಲ್ಕು ತಿಂಗಳ ಹಿಂದೆ ಇದು ಅವನೇ ಕೊಡಿಸಿದ್ದು. ಅವನಿಗೆ ಬೇಸರ ಮಾಡಲು ಮನಸ್ಸಿಲ್ಲ. ಹಾಗಾಗಿ ಹಾಕ್ಕೊಂಡು ಹೋಗ್ತೇನೆ' ಎಂದು ಉತ್ತರಿಸುತ್ತಾಳೆ.
ಬೆಳಗಿಂದ ಸಂಜೆಯವರೆಗೂ ಪಾರ್ಕು, ಹೋಟೆಲು, ಸಿನಿಮಾ, ದೇವಸ್ಥಾನ ಅಥವಾ ಹೆಚ್ಚು ಜನ ಸಂಚಾರವಿಲ್ಲದ ಜಾಗದಲ್ಲಿರುವ ಕಲ್ಲು ಬೆಂಚ್‌ಗಳ ಮೇಲೆ ಈ ರೋಮಿಯೋ -ಜೂಲಿಯಟ್‌ಗಳ ಪ್ರಣಯ ಚೇಷ್ಟೆ ನಡೆಯುತ್ತದೆ. ಕೆಲವೊಮ್ಮೆ ಜಗಳವಾಗುತ್ತದೆ. ಕೆಲವೊಮ್ಮೆ ರಾಜಿಯಾಗುತ್ತದೆ. ಕೆಲವೊಮ್ಮೆ ಪರಸ್ಪರರ ಆಫೀಸುಗಳಲ್ಲಿ ಏನೇನಾಯಿತು ಎಂಬುದರ ಚರ್ಚೆಯಾಗುತ್ತದೆ. ಮುಂದಿನ ವಾರ ಎಲ್ಲಿಗೆ ಹೋಗಬೇಕು ಎಂಬ ವಿಷಯವಾಗಿ ಪ್ಲಾನ್ ಸಿದ್ಧವಾಗುತ್ತದೆ. ಆನಂತರ, ಪರಸ್ಪರರನ್ನು ಬಿಡಲಾರದೆ ಬಿಟ್ಟು, ಹುಡುಗನ ಬೈಕು ಪಿ.ಜಿ.ಯ ಮುಂದೆ ನಿಲ್ಲುವ ವೇಳೆಗೆ ರಾತ್ರಿ ಏಳೂವರೆ ದಾಟಿರುತ್ತದೆ.
ತುಂಬ ಸಂಭ್ರಮದಿಂದಲೇ ರೂಂ ತಲುಪಿಕೊಂಡ ಹುಡುಗಿಯರ ಕೈಗಳಲ್ಲಿ ಕೆಲವೊಮ್ಮೆ ಸ್ವೀಟ್ ಇರುತ್ತದೆ. ಡ್ರೆಸ್ ಇರುತ್ತದೆ. ಕಿವಿಯ ರಿಂಗ್‌ಗಳಿರುತ್ತವೆ. ಹೊಸ ಡಿಸೈನ್‌ನ ಬಳೆಗಳಿರುತ್ತವೆ. ಎದುರು ಕೂತ ಗೆಳತಿಯರು-'ಎಲ್ಲಿ ತಗೊಂಡ್ಯೇ' ಎಂದು ಕೇಳಿದರೆ, ಅವಳು ಸ್ವಲ್ಪ ಹೆಮ್ಮೆಯಿಂದ, ಸ್ವಲ್ಪ ನಾಚಿಕೆಯಿಂದ ಹೇಳುತ್ತಾಳೆ: 'ಇದೆಲ್ಲಾ ಬೇಡ ಅಂತ ನಾನು ಹತ್ತು ಸಲ ಹೇಳಿದೆ. ಅವನು ಕೇಳಲಿಲ್ಲ. ನೀನು ತಗೊಳ್ಳಲೇಬೇಕು ಅಂತ ಹಠ ಹಿಡಿದ. ಏನ್ಮಾಡ್ಲಿ?' ಬೆಳಗಿನಿಂದ 'ಅವನು' ಪಾರ್ಕ್‌ಗಳನ್ನು ಸುತ್ತಾಡಿಸಿದ್ದನ್ನು, ಐಸ್‌ಕ್ರೀಂ ತಿನ್ನಿಸಿದ್ದನ್ನು, ಭವಿಷ್ಯದ ಬದುಕಿನ ಬಗ್ಗೆ ಮಾತಾಡಿದ್ದನ್ನು ಆಕಾಶವಾಣಿ ವಾರ್ತೆಯಂತೆ ಬಿತ್ತರಿಸುವ ಹುಡುಗಿ, ರಾತ್ರಿ ಉಳಿದವರೆಲ್ಲರೂ ಮಲಗಿದ್ದಾರೆ ಎಂಬುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡು ತನ್ನ ಜೀವದ ಗೆಳತಿ ಎನ್ನಿಸಿಕೊಂಡವಳ ಬಳಿ ಪಿಸುಗುಡುತ್ತಾಳೆ: ಮಧ್ಯಾಹ್ನ ಪಿಚ್ಚರ್‌ಗೆ ಹೋಗಿದ್ದೆವಲ್ಲ; ಆಗ ನನ್ನ ಹುಡುಗ ಮುತ್ತು ಕೊಟ್ ಬಿಟ್ಟ ಕಣೇ. ಅದನ್ನು ಪ್ರತಿಭಟಿಸಬೇಕು ಅನ್ನಿಸ್ತು ಆದರೆ, ಅವನಿಗೆ ಬೇಜಾರುತ್ತೆ ಅಂತ ಸುಮ್ಮನಾಗಿ ಬಿಟ್ಟೆ...' 'ಬಾಯ್‌ಫ್ರೆಂಡ್ ಬೇಕೇ ಬೇಕು ಎಂಬ ಹಪಾಹಪಿ ಪಿ.ಜಿ.ಯಲ್ಲಿರುವ ಹುಡುಗಿಯರಿಗೆ ಬರೋದ್ಯಾಕೆ ಎಂದು ಹಲವರು ಕೇಳಬಹುದು. ಅದಕ್ಕೆ ಹೀಗೆ ಉತ್ತರಿಸಬಹುದೇನೋ: ಪಿ.ಜಿ.ಗಳಲ್ಲಿರುವ ಹುಡುಗಿಯರು ಹೆತ್ತವರಿಂದ ದೂರವಿರುತ್ತಾರೆ. ಇಡೀ ವಾರ ಹಾಸ್ಟೆಲ್‌ನಲ್ಲಿ, ಕೆಲಸ ಮಾಡುವ ಜಾಗದಲ್ಲಿ ಒಂಟಿತನದ ಮತ್ತು ಕೆಲಸದ ಮಧ್ಯೆ ಸುಸ್ತಾಗಿ ಹೋಗಿರುತ್ತಾರೆ. ಸಿಗುವುದು ಒಂದೇ ದಿನದ ರಜೆಯಾದ್ದರಿಂದ ಊರಿಗೆ ಹೋಗಿ ಬರುವ ಸಾಧ್ಯತೆಯೇ ಇಲ್ಲವಾಗುತ್ತದೆ. ಇಂಥ ಸಂದರ್ಭದಲ್ಲಿ ಇಡೀ ದಿನ ಜೊತೆಗಿದ್ದು ತನ್ನ ಬಗ್ಗೆ ವಿಶೇಷ ಕಾಳಜಿ ವಹಿಸುವ, ಕನಿಕರ ತೋರುವ, ತನ್ನ ಅಹಮಿಕೆಯನ್ನೆಲ್ಲ ಸಹಿಸಿಕೊಳ್ಳುವ ಜೀವವೊಂದು ಜೊತೆಗಿರಬೇಕು ಅನಿಸುತ್ತದೆಯಲ್ಲ; ಆಗಲೇ ಪ್ರತಿ ಹುಡುಗಿಯ ಕಂಗಳಲ್ಲೂ ಬಾಯ್‌ಫ್ರೆಂಡ್ ಕನಸು ಚಿಗುರೊಡೆಯುತ್ತದೆ. ಆನಂತರದ ಕೆಲವೇ ದಿನಗಳಲ್ಲಿ ಅದು ಹೇಗೋ ಒಬ್ಬ ಬಾಯ್‌ಫ್ರೆಂಡ್ ಸಿಕ್ಕಿ ಬಿಡುತ್ತಾನೆ. ಆನಂತರದಲ್ಲಿ ಹುಡುಗಿಯ ಪಾಲಿಗೆ ಪ್ರತಿ ಭಾನುವಾರವೂ ಮಲ್ಲಿಗೆಯ ಹೂವಾಗುತ್ತದೆ. ಸಂಪಿಗೆಯ ಹಾಡಾಗುತ್ತದೆ. ರೋಮಾಂಚನವೆಂಬುದು ಮೈಯ ಅಂಗಾಂಗದಲ್ಲೆಲ್ಲ ತುಂಬಿಕೊಂಡು... ಅಲ್ಲ, ಹುಚ್ಚು ಖೋಡಿ ಮನಸು ಎಂದು ಕವಿ ಹೇಳಿರುವುದು ಸುಮ್ಮನೆ ಅಂದುಕೊಂಡಿರಾ?
ಹಾಗಂತ ಬಾಯ್‌ಫ್ರೆಂಡ್‌ಗಳನ್ನು ಹೊಂದಿರುವ ಹುಡುಗಿಯರೆಲ್ಲ ಖುಷಿಯಾಗಿದ್ದಾರೆ ಅಂದುಕೊಳ್ಳಬೇಡಿ. ಬಾಯ್‌ಫ್ರೆಂಡ್‌ಗಳಲ್ಲೂ ಅಧಮರಿದ್ದಾರೆ. ವಂಚಕರಿದ್ದಾರೆ. ಕ್ರೂರಿಗಳಿದ್ದಾರೆ. ಇಡೀ ವರ್ಷ ಹೋಟೆಲು, ಸಿನಿಮಾ, ಪಾರ್ಕು, ಪಿಕ್‌ನಿಕ್ಕು ಎಂದು ಅಲೆದಾಡಿ, ಕಡೆಗೊಂದು ದಿನ 'ಮನೇಲಿ ಅಪ್ಪ-ಅಮ್ಮ ಮದುವೆಗೆ ಒಪ್ತಾ ಇಲ್ಲ. ಅವರನ್ನು ಬಿಟ್ಟು ನಾನು ಬದುಕಲ್ಲ. ಸಾರಿ' ಎಂದೋ, ಜಾತಿಯ ಕಾರಣ ಹೇಳಿಯೋ ಕೈಕೊಡವಿಕೊಂಡು ಹೋಗಿ ಬಿಡುವ ಹೇಡಿಗಳಿದ್ದಾರೆ. ಇದೆಲ್ಲ ಗೊತ್ತಿದ್ದರೂ ಬಹಳಷ್ಟು ಹುಡುಗಿಯರು ಬಾಯ್‌ಫ್ರೆಂಡು ಎಂಬ ಮಾಯಾಜಿಂಕೆಯ ಕನಸು ಕಾಣುತ್ತಲೇ ಇರುತ್ತಾರೆ.
ಭಾನುವಾರಗಳಲ್ಲಿ ಕೆಲವರ ಖುಷಿ ಕಂಡಾಗ ನನಗೂ ಬಾಯ್‌ಫ್ರೆಂಡ್ ಬೇಕು ಅನಿಸುತ್ತದೆ. ಮತ್ತೆ ಕೆಲವರ ಬಿಕ್ಕಳಿಕೆಯನ್ನು ಕೇಳಿಕೊಂಡಾಗ 'ಅವನ' ಸಹವಾಸವೇ ಬೇಡ ಅನಿಸುತ್ತದೆ!

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com