ಬಡವರ ಹೆಸರಲ್ಲಿ ಮಧ್ಯಮ ವರ್ಗದವರಿಗೇಕೆ ಏಟು?
ಸರ್ಕಾರ ರಾಜ್ಯದ ಬಡವರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮುವ ಪ್ರಯತ್ನಕ್ಕೆ ಕೈ ಹಾಕಿರುವುದು ಸ್ವಾಗತಾರ್ಹ. ಆದರೆ, ಅಗ್ಗದ ದರದಲ್ಲಿ ಅಕ್ಕಿ ಕೊಡುವ ಕಾರಣಕ್ಕಾಗಿ ಮಧ್ಯಮ ವರ್ಗದವರ ಅನ್ನ ಕಿತ್ತು ಕೊಳ್ಳುತ್ತಿರುವುದು ಮಾತ್ರ ಬೇಸರದ ಸಂಗತಿ.
ರಾಜ್ಯದಲ್ಲಿರುವ ಎಪಿಎಲ್ ಕಾರ್ಡ್ದಾರರಿಗೆ ಅಕ್ಕಿ ವಿತರಣೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಸಿಎಂ ಹೇಳುತ್ತಿರುವುದು ರಾಜ್ಯದ ಮಧ್ಯಮ ವರ್ಗದ ಜನರಲ್ಲಿ ಆತಂಕ ಸೃಷ್ಟಿಸಿದೆ.
ನಾಲ್ಕೈದು ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳವಾಗಿದೆ. ಆದರೆ, ಮಧ್ಯಮ ವರ್ಗದ ಜನರ (ಸಂಬಳ) ಆದಾಯ ಮಾತ್ರ ಶೇ. 15ರಷ್ಟು ಹೆಚ್ಚಳವಾಗಿದೆ. ಆದರೆ, ಸರ್ಕಾರ ಪಡಿತರ ಅಂಗಡಿಗಳ ಮೂಲಕ ಮಧ್ಯಮ ವರ್ಗದವರಿಗೆ ನೀಡುತ್ತಿದ್ದ ಅಕ್ಕಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಎಷ್ಟು ಸರಿ ಎನ್ನುವ ವಿಷಯ ಚರ್ಚೆಯಾಗಬೇಕಿದೆ. ಸರ್ಕಾರ ಮಧ್ಯಮ ವರ್ಗ ಎಂದು ಯಾರನ್ನು ಪರಿಗಣಿಸುತ್ತದೆಯೋ ಅದೇ ವ್ಯವಸ್ಥೆಯಲ್ಲಿಯೂ ಮೂಲ ಲೋಪವಾಗಿದೆ ಎಂದರೆ ತಪ್ಪಾಗಲಾರದು.
ಒಬ್ಬ ವ್ಯಕ್ತಿಯ ತಿಂಗಳ ಆದಾಯ ರು. 10 ಸಾವಿರ ದಾಟಿದಲ್ಲಿ ಅವನನ್ನು ಮಧ್ಯಮ ವರ್ಗದಲ್ಲಿ ಗುರುತಿಸುವ ಕಾರ್ಯವನ್ನು ನಮ್ಮನ್ನಾಳುವ ಸರ್ಕಾರಗಳು ಮಾಡುತ್ತಿವೆ. ಆದರೆ, ಮಧ್ಯಮ ವರ್ಗದ ವಿಚಾರದಲ್ಲಿ ಅವರ ತಿಂಗಳ ಖರ್ಚಿನ ವಿಷಯವನ್ನು ಸರ್ಕಾರ ಪರಿಗಣಿಸದೇ ಏಕಾಏಕಿ ಎಪಿಎಲ್ ಕಾರ್ಡ್ಗಳಿಗೆ ನೀಡುತ್ತಿದ್ದ ರಿಯಾಯಿತಿ ದರದ ಅಕ್ಕಿ ಸ್ಥಗಿತಗೊಳಿಸುವ ಚಿಂತನೆಯನ್ನಾದರೂ ಏತಕ್ಕೆ ಮಾಡಿತು? ನೂತನ ಸರ್ಕಾರದ ಲೆಕ್ಕದಲ್ಲಿ ಮಧ್ಯಮ ವರ್ಗದವರಿಗೆ ಸರ್ಕಾರದ ಸೌಲಭ್ಯಗಳು ಸಿಗುವುದು ಬೇಡವೇ? ಅಥವಾ ಮಧ್ಯಮ ವರ್ಗ ಆಳುವ ಸರ್ಕಾರಕ್ಕೆ ಚುನಾವಣೆಯ ವೇಳೆಯಲ್ಲಿ ಸಹಕರಿಸಿಲ್ಲ ಎನ್ನುವ ಆಕ್ರೋಶವೇ? ಇಂತಹ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಎದುರಾಗುತ್ತವೆ.
ಕಾಂಗ್ರೆಸ್ ಸರ್ಕಾರ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಬಿಪಿಎಲ್ ಕಾರ್ಡ್ದಾರರಿಗೆ ರು. 1ಕ್ಕೆ ಕೇಜಿಯಂತೆ ಅಕ್ಕಿಯನ್ನು ಕೊಡಲು ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಅಂಕಿ ಅಂಶಗಳ ಆಧಾರದಲ್ಲಿ ರಾಜ್ಯದಲ್ಲಿ 98.17 ಲಕ್ಷ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಇವರಿಗೆ ರು. 1ರಂತೆ ಪ್ರತಿ ತಿಂಗಳು 30 ಕೇಜಿ ಅಕ್ಕಿ ವಿತರಣೆ ಮಾಡಬೇಕಾದಲ್ಲಿ ಸರ್ಕಾರ ಹೆಚ್ಚುವರಿಯಾಗಿ ರು. 460 ಕೋಟಿ ಪ್ರತಿ ತಿಂಗಳು ಭರಿಸಬೇಕಾಗುತ್ತದೆ ಎನ್ನುತ್ತಾರೆ. ಇದಾದ ಕೆಲ ದಿನಗಳ ಬಳಿಕ ಪ್ರತಿ ಬಿಪಿಎಲ್ ಕಾರ್ಡ್ಗೆ 30 ಕೆಜಿ ಅಕ್ಕಿ ವಿತರಣೆ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ. (ಜೂನ್ ತಿಂಗಳಲ್ಲಿ) ಅದಕ್ಕಾಗಿ ಕಡಿಮೆ ವಿತರಣೆ ಮಾಡಲಾಗುವುದು ಎನ್ನುವ ಮೂಲಕ, ಪಡಿತರ ಅಕ್ಕಿ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ಮತ್ತಷ್ಟು ಇಂಬು ನೀಡಿದರು. ಬಡವರಿಗೆ ಅಕ್ಕಿ ಕೊಟ್ಟು (ಪ್ರಣಾಳಿಕೆ ಮಾತು ಉಳಿಸಿಕೊಳ್ಳಲು) ಮಧ್ಯಮ ವರ್ಗದವರ (ಎಪಿಎಲ್ ಕಾರ್ಡ್ದಾರರ) ಆಹಾರ ಧಾನ್ಯಗಳನ್ನು ಕಿತ್ತುಕೊಳ್ಳುತ್ತಿದೆ ಎನ್ನುವ ಕೂಗು ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ.
ಮಧ್ಯಮ ವರ್ಗದವರೂ ಇಂದಿಗೂ ತಮ್ಮ ನಿತ್ಯದ ಊಟಕ್ಕಾಗಿ ಪಡಿತರ ಅಕ್ಕಿಯನ್ನೇ ಅವಲಂಬಿಸಿದ್ದರು ಎನ್ನುವುದು, ರಾಜ್ಯ ಸರ್ಕಾರಕ್ಕೆ ತಿಳಿಯುತ್ತಿಲ್ಲವೋ ಗೊತ್ತಿಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ಎಪಿಎಲ್ ಕಾರ್ಡ್ಗಳ ಮಾಹಿತಿ ಹಾಗೂ ಅವರು ಪಡಿತರ ಪಡೆದುಕೊಳ್ಳುವ ದಾಖಲೆಗಳನ್ನು ಗಮನಿಸಿದಲ್ಲಿ ಶೇ. 76ರಷ್ಟು ಜನ ಪ್ರತಿ ತಿಂಗಳು ತಪ್ಪದೇ ಪಡಿತರ ಅಕ್ಕಿಯನ್ನು ಪಡೆದುಕೊಂಡಿದ್ದಾರೆ. ಆದರೆ, ಸರ್ಕಾರ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸದೇ, ಎಪಿಎಲ್ ಕಾರ್ಡ್ಗಳಿಗೆ ಅಕ್ಕಿ ವಿತರಣೆಯನ್ನು ನಿಲ್ಲಿಸಲು ಹೊರಟಿದೆ.
ಮಧ್ಯಮ ವರ್ಗದವರನ್ನು ಸರ್ಕಾರ ಕಡೆಗಣಿಸುತ್ತಿದೆ ಎನ್ನುವುದನ್ನು ಒತ್ತಟ್ಟಿಗಿರಿಸೋಣ, ಬಡವರ ಬಗ್ಗೆ ಮೊದ ಮೊದಲು ಕಾಳಜಿ ತೋರಿಸುತ್ತಿದ್ದ ಸಿಎಂ ಆತುರದಲ್ಲಿ, ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಎಲ್ಲ ಬಿಪಿಎಲ್ ಕಾರ್ಡ್ಗಳಿಗೆ 30 ಕೇಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಘೋಷಿಸಿಯೇ ಬಿಟ್ಟರು. ಆದರೆ, ಈಗ ಆ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಮನೆಯಲ್ಲಿ ಒಬ್ಬರೇ ಇರುವ ಬಿಪಿಎಲ್ ಕಾರ್ಡ್ಗೆ 10 ಕೇಜಿ, ಇಬ್ಬರಿದ್ದರೆ 20 ಕೆಜಿ, ಇಬ್ಬರಿಗಿಂತ ಹೆಚ್ಚಿದ್ದರೆ 30 ಕೇಜಿ ನೀಡಲು ತೀರ್ಮಾನಿಸಿದೆ. ಇದನ್ನೆಲ್ಲ ಗಮನಿಸಿದಲ್ಲಿ ಸರ್ಕಾರವೇ ಈ ವಿಷಯದಲ್ಲಿ ಇನ್ನು ಸ್ಪಷ್ಟವಾಗಿಲ್ಲ ಎನ್ನುವುದು ಗೋಚರವಾಗುತ್ತದೆ.
ಸರ್ಕಾರದ ಅಂಕಿ ಅಂಶಗಳ ಆಧಾರದಲ್ಲಿ ರಾಜ್ಯದಲ್ಲಿ ಸದ್ಯ 2.45 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿದೆ. 1.44 ಲಕ್ಷ ಮೆಟ್ರಿಕ್ಟನ್ ಅಕ್ಕಿ ಬರುವ ನಿರೀಕ್ಷೆಯಲ್ಲಿ ಸರ್ಕಾರವಿದೆ. ಇದೆರಡನ್ನು ಹೊರತುಪಡಿಸಿ ಕಡಿಮೆ ಬೀಳುವ 1 ಲಕ್ಷ ಮೆಟ್ರಿಕ್ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಈ ವಿಷಯದಲ್ಲಿ ಸರ್ಕಾರ ಮಧ್ಯಮ ವರ್ಗದವರನ್ನು ಕಡೆಗಣಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಈಗಾಗಲೇ ರಾಜ್ಯಾದ್ಯಂತ ಪಡಿತರ ಕಾರ್ಡ್ಗಳ ವಿತರಣೆಯ ವಿಷಯದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರಗಳಿಂದಲೂ ಪಡಿತರ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಇನ್ನು ಆತಂಕದ ವಿಷಯವೆಂದರೆ ರಾಜ್ಯದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆ ಹಾಗೂ ಈಗಾಗಲೇ ವಿತರಣೆಯಾಗಿರುವ ಒಟ್ಟು ಪಡಿತರ ಕಾರ್ಡ್ಗಳ ಸಂಖ್ಯೆಯನ್ನು ಹೋಲಿಕೆ ಮಾಡಿದಲ್ಲಿ ಎರಡೂ ಸರಿಸಮಾನವಾಗಿವೆ. ಇದೆಲ್ಲದರ ಮಧ್ಯೆ ಶೇ. 30ರಷ್ಟು ಕುಟುಂಬಗಳಿಗೆ ಇಂದಿಗೂ ಪಡಿತರ ಕಾರ್ಡ್ ದೊರೆತಿಲ್ಲ ಎನ್ನುವುದು ಆಶ್ಚರ್ಯದ ಸಂಗತಿ.
ಸರ್ಕಾರ ಇದೇ ರೀತಿ ಬಡವರು ಮತ್ತು ಮಧ್ಯಮವರ್ಗದ ಮಧ್ಯೆ ಕಂದಕ ಸೃಷ್ಟಿಸುವ ಪ್ರಯತ್ನವನ್ನು ಪಡಿತರ ಕಾರ್ಡ್ಗಳ ಮೂಲಕ ಮಾಡುತ್ತಿದೆ. ಇದರಿಂದಾಗಿ ಬಹುತೇಕ ಮಧ್ಯಮ ವರ್ಗದ ಜನರೂ ಬಿಪಿಎಲ್ ಕಾರ್ಡ್ ಹೊಂದಲು ಹವಣಿಸುತ್ತಾರೆ. ಇದಕ್ಕಾಗಿ ಎಂತಹ ವಾಮ ಮಾರ್ಗವನ್ನಾದರೂ ಹಿಡಿಯುತ್ತಾರೆ. ಈಗಾಗಲೇ ಪಡಿತರ ಕಾರ್ಡ್ ವಿತರಣೆಯಲ್ಲಿ ರಾಜ್ಯದಲ್ಲಿರುವ ಹಲವಾರು ಇಂಟರ್ನೆಟ್ ಸೆಂಟರ್ಗಳಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ.
ಮುಂಬರುವ ದಿನಗಳಲ್ಲಿ ಎಪಿಎಲ್ ಕಾರ್ಡ್ಗಳಿಗೆ ಪಡಿತರ ಅಕ್ಕಿಯನ್ನು ನೀಡುವುದಿಲ್ಲ ಎನ್ನುವ ಸರ್ಕಾರದ ಹೇಳಿಕೆಯಿಂದ ಎಲ್ಲ ಮಧ್ಯಮ ವರ್ಗದವರೂ ಬಿಪಿಎಲ್ ಕಾರ್ಡ್ ಪಡೆಯಲು ಹವಣಿಸುವಂತಾಗಿ, ಸಮಾಜದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗುತ್ತದೆ.
ಹಲವಾರು ಜನರು ತಮ್ಮ ಆದಾಯ ಮುಚ್ಚಿಟ್ಟು ಬಿಪಿಎಲ್ ಕಾರ್ಡ್ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಸರ್ಕಾರ ಈ ವಿಷಯದಲ್ಲಿ ಅದೇಕೆ ಇಂತಹ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ಹೆಚ್ಚಿನ ತಲೆ ನೋವು ಸರ್ಕಾರಕ್ಕೇ ಎನ್ನುವುದನ್ನು ಇಲಾಖೆ ಸಚಿವರು ಹಾಗೂ ಸಿಎಂ ಗಮನಿಸಬೇಕಿದೆ.
-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

