ಅವಧಿಗೆ ಮುನ್ನವೇ ಲೋಕಸಭೆ ಚುನಾವಣೆ...

ಕೇಂದ್ರದಲ್ಲಿ ಆಳುವ ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಜನಪ್ರಿಯತೆ ಇಳಿಜಾರಿನಲ್ಲಿದೆ ...
Updated on: 

ಕೇಂದ್ರದಲ್ಲಿ ಆಳುವ ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಜನಪ್ರಿಯತೆ ಇಳಿಜಾರಿನಲ್ಲಿದೆ ಎನ್ನುವ ಮಾಧ್ಯಮ ಪ್ರಪಂಚದ ಸಮೀಕ್ಷಾ ವರದಿಗಳಿಗೆ ಪ್ರಚಾರ ಸಿಕ್ಕಿರುವಂತೆಯೇ, ಅವಧಿ ಮುಗಿಯುವುದಕ್ಕೆ ಮುಂಚೆಯೇ ಲೋಕಸಭೆ ಚುನಾವಣೆ ನಡೆಯಬಹುದೆನ್ನುವ ವದಂತಿಗಳೂ ದಟ್ಟವಾಗಿ ಹಬ್ಬಿವೆ.
ಒಂದು ವರ್ಷದ ಅವಧಿಯಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಕರ್ನಾಟಕ ವಿಧಾನ ಸಭೆಗಳ ಚುನಾವಣೆಯಲ್ಲಿನ ವಿಜಯದ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಮಂಡಲದ ಪುನಾರಚನೆಯೂ ಆಗಿದೆ. ಮಂತ್ರಿಮಂಡಲದ ಪುನಾರಚನೆಗೂ, ಆಡಳಿತ ವ್ಯವಸ್ಥೆಗೂ ಸಂಬಂಧವೇ ಇಲ್ಲದಂತೆ, ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನ ಸಭೆ ಚುನಾವಣೆ, ಅನಂತರದ ಲೋಕಸಭೆಯ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡೇ ಮಂತ್ರಿಗಳ ಆಯ್ಕೆಯಾಗಿರುವುದಂತೂ ಸ್ಪಷ್ಟವಾಗಿ ಗೋಚರವಾಗಿದೆ.
ಬಿಹಾರದಲ್ಲಿ ಬಿಜೆಪಿ- ಸಂಯುಕ್ತ ಜನತಾದಳಗಳ  ನಡುವಣ ರಾಜಕೀಯ ಸಂಬಂಧ ಕಡಿದು ಬಿದ್ದ ಅನಂತರ ಆದಷ್ಟು ಬೇಗ ಲೋಕಸಭೆ ಚುನಾವಣೆ ಸಂಭವನೀಯ ಎನ್ನುವ ವದಂತಿಗಳಿಗೆ ರೆಕ್ಕೆ-ಪುಕ್ಕ ಬಂದಿರುವುದೂ ನಿಜ.  ಈಗ ಪ್ರಚಾರದಲ್ಲಿರುವ ವದಂತಿಗಳಲ್ಲಿ ಎಷ್ಟು ನಿಜ ಎನ್ನುವುದನ್ನು ಯಾರೂ ಚರ್ಚಿಸುತ್ತಿಲ್ಲ. ಆದರೂ ಅಲ್ಲಿ-ಇಲ್ಲಿ ಚರ್ಚೆ ನಡೆದಾಗ ಅದು ಪ್ರಚಾರ ಪ್ರಪಂಚದಲ್ಲಿ ರೋಚಕ ಶೀರ್ಷಿಕೆಗಳನ್ನು ಸೃಷ್ಟಿಸುತ್ತಿರುವುದು ನಿಜ. ಕೇಂದ್ರ ಸರ್ಕಾರಕ್ಕೆ ಚುನಾವಣೆ ಆಯೋಗಕ್ಕೆ ನವೆಂಬರ್- ಡಿಸೆಂಬರ್‌ನಿಂದ ಮೇ ವರೆಗೆ ಯಾವಾಗ ಬೇಕಾದರೂ ಲೋಕಸಭೆ ಚುನಾವಣೆ ನಡೆಸುವ ಅವಕಾಶ, ಅಧಿಕಾರ ಎರಡೂ ಇದೆ. ಆದ್ದರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ಅನುಕೂಲವನ್ನು ನೋಡಿಕೊಂಡು ಸಮಯ ನಿಗದಿ ಮಾಡುವುದೆಂದು ನಿರೀಕ್ಷಿಸಬಹುದು.
ಸಂಯುಕ್ತ ಜನತಾದಳದ ನಿತೀಶ್ ಕುಮಾರ್, ಬಿಜೆಪಿಯ ಸಹವಾಸವನ್ನು ಬಿಟ್ಟಿದ್ದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಉತ್ತೇಜನಕಾರಿಯಾದ ಬೆಳವಣಿಗೆಯೇ. ಅದರಲ್ಲಿ ಅನುಮಾನವಿಲ್ಲ. ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ಈಗ ಹೊಗಳಿದ್ದಾರೆ. ನಿತೀಶ್ ಕಾಂಗ್ರೆಸ್ಸಿನತ್ತ ಸಾಗುವುದು, ಬಿಡುವುದು ಬೇರೆ ವಿಚಾರ. ಆದರೆ ಅವರ ನಿರ್ಗಮನದಿಂದ ಬಿಜೆಪಿಯ ಕೂಟವಂತೂ ದುರ್ಬಲವಾಗುವುದು ನಿಜ.
ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯೇ ಕಾಂಗ್ರೆಸ್ಸಿನ ಸಮೀಪದ ಎದುರಾಳಿ. ಆದರೆ, ಈಗ ಆ ಪಕ್ಷದಲ್ಲಿ ಕಂಡು ಬಂದಿರುವ ಒಡಕು ಪಕ್ಷದ ಶಕ್ತಿಯನ್ನು ಕುಗ್ಗಿಸಿದೆ. ಈಗಂತೂ ಯಾರು ಏನೇ ಹೇಳಿಕೊಳ್ಳಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಬಿಜೆಪಿ ಕೂಟದ ಪ್ರಚಾರ ರಥದ ಸಾರಥಿ. ಅವರ ಇತ್ತೀಚಿನ ಉತ್ತರಾಖಂಡದ ಮಿಂಚಿನ ಕಾರ್ಯಾಚರಣೆ, ಪಠಾಣ ಕೋಟೆಯಲ್ಲಿನ ಭರ್ಜರಿ ಭಾಷಣದ ಪರಿಣಾಮವಾಗಿ, ಅವರಿಗೆ ಬಿಜೆಪಿ ಕೂಟದ ಮೂಲ ಸಂಗಾತಿಗಳ (ಅಕಾಲಿದಳ- ಶಿವಸೇನೆ) ಬೆಂಬಲವೂ ಸಿಕ್ಕಿರುವಂತಿದೆ.
ಉಳಿದಂತೆ, ಇತರ ಪ್ರಾದೇಶಿಕ ನಾಯಕರು, ಮಾಧ್ಯಮ ಪ್ರಪಂಚದಲ್ಲಿ ಚರ್ಚೆಯಾಗುತ್ತಿರುವಂತೆ ಯಾವ ಐಕ್ಯರಂಗದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಎಷ್ಟು ಐಕ್ಯರಂಗಗಳು ಅಸ್ತಿತ್ವದಲ್ಲಿ ಬರಬಹುದು ಎನ್ನುವ ಅಂದಾಜೂ ಇಲ್ಲ. ಪ್ರಾದೇಶಿಕ ನಾಯಕರು ರಾಷ್ಟ್ರೀಯ ಪ್ರಾಮುಖ್ಯ ಪಡೆಯದೇ ಅವರವರ ಪ್ರಭಾವ ವಲಯಗಳಲ್ಲೇ ಮಿಂಚುವ ಸಂಭವ ಜಾಸ್ತಿ.
ಮಮತಾ ಬ್ಯಾನರ್ಜಿ, ಬಿಜೂ ಪಟ್ಟನಾಯಕ್, ಚಂದ್ರಬಾಬು ನಾಯ್ಡು, ಜಯಲಲಿತಾ ಅವರಿಗೆಲ್ಲ ಈಗ ತಮ್ಮ ತಮ್ಮ ಕೋಟೆಗಳನ್ನು ಕಾಯ್ದುಕೊಳ್ಳುವುದು ಮುಖ್ಯ. ಅನಂತರವೇ ರಾಷ್ಟ್ರೀಯ ರಾಜಕೀಯದ ಚಿಂತೆ.
ಇದನ್ನೆಲ್ಲ ಗಮನಿಸಿಯೇ, ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಅವರು ರಂಗಗಳು ತಮ್ಮಷ್ಟಕ್ಕೆ ತಾವೇ ಉದ್ಭವವಾಗುವುದಿಲ್ಲ. ಕಾಂಗ್ರೆಸ್ ಕೂಟಕ್ಕೆ ಪರ್ಯಾಯ ಶಕ್ತಿ ರೂಪಗೊಳ್ಳಬೇಕಾದರೆ ಅದಕ್ಕೆ ಪರ್ಯಾಯ ನೀತಿ ಯೋಜನೆ ಬೇಕು ಎಂದು ಹೇಳಿರುವುದು. ಯೆಚೂರಿ ಅವರಂತಹವರಿಗೆ ಒಪ್ಪಿಗೆಯಾಗುವಂತಹ ಪರ್ಯಾಯ ನೀತಿಯನ್ನು ರೂಪಿಸುವುದು ಇತರರಿಗೆ ಕಷ್ಟವಾಗಬಹುದು. ಆ ದೃಷ್ಟಿಯಿಂದ ಕಾಂಗ್ರೆಸ್ಸನ್ನು ಎದುರಿಸಲು ಒಂದೇ ರಾಷ್ಟ್ರೀಯ ರಂಗದ ರಚನೆ ಅಸಾಧ್ಯ.

ಕರ್ನಾಟಕದ ಸ್ಥಿತಿಗತಿ: 
ಈಗಾಗಲೇ ಪ್ರಸ್ತಾಪವಾಗಿರುವಂತೆ, ಇನ್ನೂ ವದಂತಿಯ ಹಂತದಲ್ಲೇ ಇರುವ, "ಶೀಘ್ರ ಲೋಕಸಭೆ ಚುನಾವಣೆಯ ಪ್ರಸ್ತಾಪ", ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆಯ ಅನಂತರ ಸ್ವಲ್ಪ ಮಟ್ಟಿಗೆ ಸ್ಥಗಿತವಾಗಿದ್ದ ರಾಜಕೀಯ ಚಟುವಟಿಕೆ ಅಥವಾ "ಓಡಾಟಕ್ಕೆ" ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೆಸ್ಸಿನಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರೇ ಅದಕ್ಕೆ ಚಾಲನೆ ನೀಡಿದ್ದಾರೆ. ಎಐಸಿಸಿ ಆದೇಶದಂತೆ ಎಲ್ಲ ಲೋಕಸಭೆ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳುಹಿಸುವ ವ್ಯವಸ್ಥೆಯನ್ನು ಕುರಿತು ಮಾತಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ ಎಂದೂ ಹೇಳಿದ್ದಾರೆ. ಇಷ್ಟು ಬೇಗ ಬೇಕಿತ್ತಾ ಇಂತಹ ಮಾತುಗಳು? ಆದರೆ ಪೂರ್ಣಾವಧಿಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಇಂತಹ ಪ್ರಕಟಣೆಯನ್ನು ನೀಡುವುದು ಅನಿವಾರ್ಯವಾಗಿತ್ತೇನೋ. ಅದಕ್ಕೆ ಏನಾದರೂ ವಿಶೇಷ ಕಾರಣಗಳಿರಬಹುದು.
 ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ತಮಗೆ ಸಮನ್ವಯದ ಕೊರತೆ ಇಲ್ಲವೆಂದೂ, ರುಪಾಯಿಗೊಂದು ಕೇಜಿ ದರದಲ್ಲಿ ಬಡವರಿಗೆ ಅಕ್ಕಿ ಹಂಚಿಕೆಯ ಯೋಜನೆಗಳು ಪಕ್ಷದ ಯೋಜನೆಗಳು, ಆ ವಿಚಾರದಲ್ಲಿ ಯಾರೂ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದ್ದು ನಿಜಕ್ಕೂ ಸಾಮಯಿಕ. ಈಗ ಪರಮೇಶ್ವರ ಈ ಮಾತುಗಳನ್ನು ಸ್ಪಷ್ಟವಾಗಿ ಹೇಳದೇ ಇದ್ದರೆ, ಜನರಲ್ಲಿ ರಾಜಕಾರಣಿಗಳ ಆಡುಮಾತಿನಲ್ಲಿ ಕೇಳಿ ಬಂದಿದ್ದ ಒಂದೆರಡು ಪ್ರಸಂಗಗಳನ್ನು ಕುರಿತು ಅಪಾರ್ಥ ಉಂಟಾಗಬಹುದಾಗಿತ್ತೇನೋ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಪರಮೇಶ್ವರ ಅವರು ಗೈರು ಹಾಜರಾಗಿದ್ದೇ ಅಂತಹ ಮಾತುಗಳು ಕೇಳಿ ಬರಲು ಕಾರಣ. ಅದಕ್ಕಿಂತ ಹೆಚ್ಚಾಗಿ ಆಸಕ್ತ ವಲಯಗಳಲ್ಲಿ ಸರ್ಕಾರ ಮತ್ತು ಪ್ರದೇಶ ಕಾಂಗ್ರೆಸ್ ನಡುವಣ ಸಮನ್ವಯ ಸಮಿತಿಯ ರಚನೆಯ ವಿಚಾರ ಪ್ರಸ್ತಾಪವಾಗಿದ್ದು.

ಸಿದ್ದರಾಮಯ್ಯ ತಲೆಯಾಳು:  ಕರ್ನಾಟಕದಲ್ಲಿ ಈಗ ನಿಸ್ಸಂದೇಹವಾಗಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಸರ್ಕಾರದಮೊದಲ ತಲೆಯಾಳು. ಅವರ ಒಲವುಗಳ ವಿಚಾರದಲ್ಲೂ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿರುವುದೂ ಸಾಧ್ಯವಿಲ್ಲ.  ಸದ್ಯಕ್ಕೆ ಸಿದ್ದರಾಮಯ್ಯ ಅವರ ಮುಂದಿರುವ ಆದ್ಯತೆಯ ಕಾರ್ಯಕ್ರಮ ಎಂದರೆ ರುಪಾಯಿಗೊಂದು ಕೇಜಿ ಅಕ್ಕಿಯನ್ನು ಬಡವರಿಗೆ ಒದಗಿಸುವುದು. ಹಾಗೂ "ಅಹಿಂದ" (ಅಲ್ಪ ಸಂಖ್ಯಾತ ಹಿಂದುಳಿದ ದಲಿತ) ಕಾರ್ಯಕ್ರಮವನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸುವುದು. ಅದು ಬಜೆಟ್‌ನಲ್ಲಿ ಆಗಬಹುದಾದ ಕೆಲಸ.
ಈಗ ತಾನೇ ದೆಹಲಿಯಲ್ಲಿ ಯೋಜನೆಯ ವಾರ್ಷಿಕ ಗಾತ್ರದ ಚರ್ಚೆಯಾಗಿದೆ. ಪ್ರಗತಿಗೆ ಸಂಬಂಧಿಸಿದಂತೆ, ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರು ಯಾವ ಸಮಸ್ಯೆಯನ್ನೂ ಎದುರಿಸಲಿಕ್ಕಿಲ್ಲ. ಉದ್ಯಮ ವಲಯವನ್ನು ಬಿಟ್ಟರೆ, ನೀರಾವರಿ, ಹೆದ್ದಾರಿಗಳು ಇಂತಹ ಕಾರ್ಯಕ್ರಮಗಳನ್ನು ನಿಭಾಯಿಸುವುದು ಕಷ್ಟವೇನೂ ಇಲ್ಲ. ಸದ್ಯಕ್ಕೆ, ಪಕ್ಷದಲ್ಲಿನ ಆಂತರಿಕ ಪರಿಸ್ಥಿತಿಯೂ ಚೆನ್ನಾಗಿಯೇ ಇದೆ.
ಲೋಕಸಭೆ ಚುನಾವಣೆ ಯಾವಾಗ ನಡೆದರೂ 28 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ಸಿಗೆ ಆಂಧ್ರ ಪ್ರದೇಶದಲ್ಲಿ ತಪ್ಪುವ ಸ್ಥಾನಗಳ ಸಂಖ್ಯೆಯನ್ನು ಸರಿದೂಗಿಸುವ ವಿಶ್ವಾಸ ಪಕ್ಷದ ನಾಯಕರಿಗೆ ಇದೆ.  ಚುನಾವಣೆಯ ದೃಷ್ಟಿಯಿಂದ ಪ್ರದೇಶ ಕಾಂಗ್ರೆಸ್ ಸಮಿತಿಯ  ಪುನಾರಚನೆ, ಚುನಾವಣೆಯ ಮುನ್ನಾ ದಿನಗಳಲ್ಲೇ ಚೇತರಿಸಿಕೊಳ್ಳುವ ಮಹಿಳಾ ವಿಭಾಗ, ಪರಿಶಿಷ್ಟ ಜಾತಿ- ಪಂಗಡಗಳ ವಿಭಾಗ, ಕಾರ್ಮಿಕ ವಿಭಾಗಗಳಿಗೆ ಜೀವ ತುಂಬುವ ಕೆಲಸವೂ ಆಗಬೇಕಾಗಿದೆ.

 ಪರಾಭವದ ಗುಂಗು:  ಭಾರತೀಯ ಜನತಾ ಪಾರ್ಟಿ, ಇನ್ನೂ ಚುನಾವಣೆ ಪರಾಭವದ ಗುಂಗಿನಿಂದ ಹೊರ ಬಂದಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿ ಹೋಗಿದೆ. ಹಿಂದಿನಂತೆ, ಚುನಾವಣೆಯಲ್ಲಿ ಸೋತಾಗಲೂ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ಮುಂದೆ ಗೆಲ್ತೀವಿ ಎಂದು ಹೇಳುವ ಚೈತನ್ಯವೂ ಇಲ್ಲವಾಗಿದೆ. ತತ್ವ-ಸಿದ್ಧಾಂತದ ಮಾತಿಗೆ ಇದಲ್ಲ ಸಮಯ.
 ರಾಜ್ಯದಲ್ಲಿನ ಬೇರು ಮಟ್ಟದ ರಾಜಕೀಯದಲ್ಲಿ ಜಾತಿಯ ಪಾತ್ರ ಬಿಜೆಪಿಗೆ ಇನ್ನೂ ಅರ್ಥವಾದಂತಿಲ್ಲ. ಸಂಸದ ಪ್ರಹ್ಲಾದ ಜೋಷಿ ಅವರು ಪಕ್ಷವನ್ನು ಮುನ್ನಡೆಸುವುದರಲ್ಲಿವಿಫಲರಾಗಿದ್ದಾರೆ. ಅದು ಅವರಿಗೆ ಅಭ್ಯಾಸವಿಲ್ಲದ ಕೆಲಸ. ಖಾಲಿಯಾಗಲೇ ಬೇಕಾಗಿದ್ದ ಕುರ್ಚಿಯನ್ನು ತುಂಬುವುದಕ್ಕಷ್ಟೇ ಅವರನ್ನು ಪ್ರದೇಶ ಸಮಿತಿಯ ಅಧ್ಯಕ್ಷರಾಗಿ ಆರಿಸಿದ್ದು. ಆದರ್ಶ- ಶಿಸ್ತು- ಸಿದ್ಧಾಂತಗಳು ಇಲ್ಲಿ ಕೆಲಸ ಮಾಡಲಿಲ್ಲ.  ಹಾಗಿದ್ರೆ ಈಗ ಸ್ಥಳೀಯ ಬಿಜೆಪಿಯ ಮುಂದಿರುವ ನಿಜವಾದ ಸಮಸ್ಯೆ ಯಾವುದು? ಚುನಾವಣೆಯನ್ನು ಎದುರಿಸಿದ ರೀತಿ- ನೀತಿಯ ವಿಚಾರದಲ್ಲಿ ಪಕ್ಷದಲ್ಲಿನ ಸಾಮಾನ್ಯ ಸದಸ್ಯರಿಗೆ ತೃಪ್ತಿ ಇದೆಯೇ?
 ನಿಜ ಹೇಳಬೇಕೆಂದರೆ, ಪಕ್ಷದ ಎಲ್ಲ ಹಂತಗಳಲ್ಲೂ ಯಡಿಯೂರಪ್ಪ ನಮ್ಮ ಜತೆ ಇದ್ದಿದ್ರೆ ಚೆನ್ನಾಗಿತ್ತು. ಈಗಲೂ ಅವರು ಬಂದರೆ ಒಳಿತು ಎನ್ನುವ ಭಾವನೆ ಇರುವವರ ಸಂಖ್ಯೆಯೇ ಹೆಚ್ಚು. ಹಿಂದೆ ಪಕ್ಷದಲ್ಲಿ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಮಾತುಗಳು ಈಗ ಕೇಳಿಬರುತ್ತಿಲ್ಲ.
 ಯಡಿಯೂರಪ್ಪ ಅವರ ಆತ್ಮೀಯ, ಧನಂಜಯ ಕುಮಾರ್, ಆಡ್ವಾಣಿ ಅವರ ಮೇಲೆ ಮಾಡಿರುವ ಆರೋಪಗಳನ್ನು ಸಹಿಸುವುದು ಬಿಜೆಪಿಯ ಕಟ್ಟರ್ ಆರೆಸ್ಸೆಸ್ ಜನರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಆ ಆರೋಪಗಳ ವಿಚಾರದಲ್ಲಿ ಯಡಿಯೂರಪ್ಪ ಸಹಮತವನ್ನು ಸೂಚಿಸಿಲ್ಲದೇ ಇರುವುದರಿಂದ, 'ಅವರನ್ನು ಪಕ್ಷದಿಂದ ಹೊರಗೇ ಇಡಬೇಕಾದ ಪ್ರೇಮೇ'ಯ ಇಲ್ಲ ಎನ್ನುವವರು ಅವರಲ್ಲೂ ಇದ್ದಾರೆ.
 ಈಗ ಉಳಿದಿರುವ ಪ್ರಶ್ನೆ ಯಡಿಯೂರಪ್ಪ ಅವರ ಜತೆ ಸಂಧಾನ ಮಾಡುವವರು ಯಾರು? ಎನ್ನುವುದೇ. ಯಡಿಯೂರಪ್ಪ ಅವರಿಗೂ ಈಗ ಹೊರಗಿನ ಬೆಂಬಲ ಬೇಕಾಗಿದೆ. ಅವರುತಾನೇ ಇನ್ನೆಲ್ಲಿಗೆ ಹೋದಾರು?
 ಈ ಪ್ರಶ್ನೆಗಳು ಬಿಜೆಪಿ ನಾಯಕರನ್ನು ಕಾಡಿರುವ ಸಮಯದಲ್ಲೇ ಹಿರಿಯ ಸಂಸದ ಡಿ.ಬಿ. ಚಂದ್ರೇಗೌಡರು ವೇದಿಕೆಯನ್ನು ಪ್ರವೇಶಿಸಿದ್ದಾರೆ.
 ಅವರಿಗೆ ಯಡಿಯೂರಪ್ಪ ಜತೆ ಸಮಾಲೋಚನೆ, ಸಂಧಾನ ನಡೆಸುವುದಕ್ಕೆ ಯಾವ ಸಂಕೋಚವೂ ಇಲ್ಲ, ಇದಕ್ಕಿಂತಲೂ ಕಠಿಣವಾದ ರಾಜಕೀಯ ಸನ್ನಿವೇಶಗಳನ್ನು ಅವರು ಹಿಂದೆ, ಕಾಂಗ್ರೆಸ್, ಜನತಾ ಪಕ್ಷಗಳಲ್ಲೂ ನಿಭಾಯಿಸಿದ್ದಾರೆ. ಈಗ ಬಿಜೆಪಿಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಬೆಸುಗೆ ಹಾಕುವ ಪ್ರಯತ್ನಕ್ಕೆ ಅವರೇ ಅರ್ಹ ವ್ಯಕ್ತಿ. ಚಂದ್ರೇಗೌಡರನ್ನು ಬಿಜೆಪಿಗೆ ತಂದವರೇ ಯಡಿಯೂರಪ್ಪ. ಆದರೆ ಯಡಿಯೂರಪ್ಪ- ಬಿಜೆಪಿ ನಡುವಣ ಸಂಬಂಧದಲ್ಲಿ ಪಕ್ಷದ ನಿಲವು ಹಾಗೂ ಬಯಕೆ ಸ್ಪಷ್ಟವಾಗದೇ ಚಂದ್ರೇಗೌಡರೇ ಸ್ವಂತವಾಗಿ ಏನನ್ನೂ ಮಾಡುವುದು ಸಾಧ್ಯವಿಲ್ಲ.

ಸೆಕ್ಯುಲರ್- ಕಮ್ಯುನಲ್: ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಸೆಕ್ಯುಲರ್ ಘೋಷಣೆಯಿಂದ ಹೆಚ್ಚು ಲಾಭ ಪಡೆಯುವಂತಿಲ್ಲ. ರಾಜ್ಯದಲ್ಲಿ ಅದು ಒಂದು ವಿಶೇಷವಾದ ಸಮಸ್ಯೆಯೇ ಅಲ್ಲ. ಇಲ್ಲಿನ ಸೆಕ್ಯುಲರ್- ಕಮ್ಯುನಲ್ ಸಂಘರ್ಷ ಇತ್ಯರ್ಥವಾಗಬೇಕಾಗಿರುವುದು ಜಾತಿಗಳ ಮೇಲಾಟದ ಹಿನ್ನೆಲೆಯಲ್ಲಿ. ಇಲ್ಲಿ ಜಾತಿಯದ್ದೇ ಪ್ರಾಮುಖ್ಯ.
 ಆ ದೃಷ್ಟಿಯಿಂದ ಕಾಂಗ್ರೆಸ್, ಸಿದ್ದರಾಮಯ್ಯ ಅವರ ಅಹಿಂದ ಆಂದೋಲನವನ್ನು ಬೆಂಬಲಿಸುವುದು ಅನಿವಾರ್ಯ. ಪ್ರಬಲ ಜನಾಂಗಗಳೆನಿಸಿದ ಲಿಂಗಾಯಿತ- ಒಕ್ಕಲಿಗರ ನಡುವಣ ಬಿರುಕು ದೊಡ್ಡದು. ಎರಡೂ ಪ್ರಬಲ ಜಾತಿಗಳೇ. ಸಾಮಾಜಿಕ ಪ್ರತಿಷ್ಠೆ, ಆರ್ಥಿಕ ಶಕ್ತಿ, ಸಂಖ್ಯಾಬಲ ಎಲ್ಲದರಲ್ಲೂ ಸೆಣಸುವ ಶಕ್ತಿ ಎರಡೂ ಜನಾಂಗಗಳಲ್ಲಿ. ಈ ಎರಡೂ ಜಾತಿಗಳಲ್ಲಿ ಕಲಿತ, ಪ್ರಬಲವಾದ ಮಧ್ಯಮ ವರ್ಗವೂ ಇದೆ. ಆ ಜಾತಿಗಳ ನಡುವೆ ಏಕತೆ ಕಷ್ಟ.
 ಹೀಗಾಗಿ ಯಡಿಯೂರಪ್ಪ ಅವರ ಮುಂದೆ ಇರುವ ಆಯ್ಕೆಯೂ ಸೀಮಿತವೇ. ಅವರು ಕಾಂಗ್ರೆಸ್- ಜೆಡಿಎಸ್ ಕಡೆಗೆ ವಾಲುವುದು ಕಷ್ಟ. ಈಗಲೂ ಯಡಿಯೂರಪ್ಪ ಅವರು ಬಿಜೆಪಿಯ ಜತೆ ಮಾತುಕತೆಯ ಪ್ರಸ್ತಾಪ ಕುರಿತು ಖಚಿತವಾಗಿ ಏನನ್ನೂ ಹೇಳಿಲ್ಲ.

ಕಿಡಿಗೇಡಿತನ: ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಒಂದು ರೀತಿಯಲ್ಲಿ ಒಂಟಿ ಸಲಗದಂತೆ. ಅವರ ಚಿಂತಕರ ಚಾವಡಿಯಸದಸ್ಯರು ಯಾರು ಎನ್ನುವುದನ್ನು ಎಷ್ಟು ದಿನ ರಹಸ್ಯವಾಗಿ ಇಡುವುದು ಸಾಧ್ಯ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com