ಅಂಕಣಗಳು

ಹಿಂದುಗಳ ಸೋಲಿಗೆ ಮತ್ತಷ್ಟು ಕಾರಣಗಳು

Published On :

'ಹಿಂದುಗಳ ಸೋಲಿಗೆ ಕಾರಣವನ್ನು ಹುಡುಕುತ್ತಾ" ಎಂಬ ಲೇಖನದಲ್ಲಿ ಏರ್‌ಮಾರ್ಷಲ್ ಆರ್.ಕೆ. ನೆಹ್ರಾರವರು ಕೆಲವೊಂದು ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಅದು ವಾಸ್ತವವೂ ಹೌದು. ಹಾಗೆಯೇ ಚಾಣಕ್ಯನ ಮಿಲಿಟರಿ ರೀತಿಯನ್ನು ಅಳವಡಿಸಿಕೊಂಡಿದ್ದರೆ ಹಿಂದುಗಳು ಜಗತ್ತನ್ನೇ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದರು ಎನ್ನುತ್ತಾರೆ. ನಮ್ಮಲ್ಲಿ ಅದಕ್ಕೆ ತಕ್ಕ ವೇದಿಕೆಯೇ ಸೃಷ್ಟಿಯಾಗಲಿಲ್ಲವಲ್ಲ? ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ್ದು ನಮ್ಮಲ್ಲಿದೆ. ಆದರೆ ಯಾವುದೂ ನಮಗೆ ಬೇಕಿಲ್ಲ. ಏಕೆಂದರೆ ನಮ್ಮಲ್ಲಿ ಅತಿಯಾದ ಧಾರ್ಮಿಕ ಶ್ರದ್ಧೆ. ಹಾಗೆಂದಾಗ ಹಿಂದು ಧಾರ್ಮಿಕ ರೀತಿಯಲ್ಲಿ ರಾಷ್ಟ್ರೀಯತೆ, ರಾಷ್ಟ್ರರಕ್ಷಣೆ ಇಲ್ಲವೇ ಎಂದರೆ ಅದೂ ಸರಿಯಾಗದು. ರಾಷ್ಟ್ರರಕ್ಷಣೆ ಬಹುಮುಖ್ಯ ಎಂದು ನಮ್ಮ ಧರ್ಮಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ. ಆದರೆ ಅದಕ್ಕಾಗಿ ಕಷ್ಟಪಡಬೇಕಲ್ಲ? ಇಂತಹ ಮನೋಭಾವದಿಂದಲೇ ಸಾವಿರ ವರ್ಷಗಳ ಕಾಲ ಪರಕೀಯರ ಗುಲಾಮರಾಗಿ ಬದುಕಬೇಕಾಯಿತು. ಈ ಎಲ್ಲಾ ಸೋಮಾರಿತನದ ಮೂಲಮಂತ್ರ "ಅಹಿಂಸಾತತ್ತ್ವ". ಇದರಿಂದಲೇ ಎಲ್ಲಾ ಸಾಧಿಸಿದ್ದೇವೆ ಎಂಬ ಹುಂಬ ಧೋರಣೆ.
ಪ್ರತಿಕೂಲ ವಾತಾವರಣವನ್ನೇ ಸೃಷ್ಟಿಸುತ್ತಿದ್ದ ಗಜಪಡೆಯನ್ನೇ ನೆಚ್ಚಿಕೊಂಡಿದ್ದು ಹಿಂದುಗಳ ಸೋಲಿಗೆ ಕಾರಣ ಎನ್ನುತ್ತಾರೆ ನೆಹ್ರಾ. ಹಾಗಾದರೆ ಈ ಎಲ್ಲಾ ಹಿಂದಿನ ಯುದ್ಧದಲ್ಲಿ ಗಜಪಡೆಗಳನ್ನು ಏಕೆ ಉಪಯೋಗಿಸುತ್ತಿದ್ದರು? ಅವರ ಸೋಲುಗಳಿಗೆ ಬೇರೆ ಯಾವುದೇ ಕಾರಣಗಳು ಇಲ್ಲವೇ? ನಮ್ಮ ಹಿಂದಿನ ಯುದ್ಧಗಳಲ್ಲಿ ಗಜಪಡೆಗಳನ್ನು ಉಪಯೋಗಿಸುತ್ತಿದ್ದುದರ ಉದ್ದೇಶ: ಅಸೇತು ಹಿಮಾಲಯ ಪರ್ಯಂತ ಹರಡಿದ್ದು ದಟ್ಟವಾದ ಕಾನನಗಳು, ಗುಡ್ಡ ಬೆಟ್ಟಗಳು, ತುಂಬಿ ಹರಿಯುವ ನದಿಗಳು ಇವೆಲ್ಲವನ್ನೂ ದಾಟಿ ಬರಬೇಕಾದರೆ ಆನೆಗಳಿಗೆ ಸಾಧ್ಯವೇ ಹೊರತು ಕುದುರೆಗಳು ಅಥವಾ ಇನ್ಯಾವುದೋ ಪ್ರಾಣಿಗಳಿಂದಲೂ ಸಾಧ್ಯವಾಗುವುದಿಲ್ಲ. ಈಗಿನಂತೆ ಆಗ ಮದ್ದು ಗುಂಡುಗಳ ಬಳಕೆಯಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಮದ್ದು ಗುಂಡುಗಳ ಭಾರಿ ಸದ್ದಿಗೆ ಆನೆಗಳು ಬೆದರಿ ಓಡಾಡಿದಾಗ ಎರಡೂ ಕಡೆಗೂ ಹಾನಿಯಾಗುತ್ತಿದ್ದುದು ನಿಜ. ಆಗ ನೆಹ್ರಾರವರ ಅಭಿಪ್ರಾಯ ಸರಿಯಾಗುತ್ತಿತ್ತು. ಆಗಿನ ಕಾಲದಲ್ಲಿ ನೇರವಾದ ರಸ್ತೆಗಳಿರಲಿಲ್ಲ. ಕಾಡುಗಳ ಮಧ್ಯೆ ಭಾರೀ ಭಾರೀ ಮರಗಳು, ಗಿಡಗಂಟಿಗಳು ಎಲ್ಲಕ್ಕೂ ಹೆಚ್ಚಾಗಿ ಕ್ರೂರ ಪ್ರಾಣಿಗಳಿಗೆ ಸೈನಿಕರು ಆಹಾರವಾಗುತ್ತಿದ್ದರು. ಇವೆಲ್ಲವುಗಳನ್ನು ನಿವಾರಿಸಲು, ನದಿಗಳನ್ನು ದಾಟಲು, ಪ್ರವಾಹ ಬಂದಾಗ ರಕ್ಷಿಸಲು ಆನೆಗಳ ಪಡೆಯೇ ಬೇಕಾಗಿರುತ್ತಿತ್ತು. ಹಾಗೆಯೇ ಕಾಡುಗಳಲ್ಲಿ ಯಥೇಚ್ಛವಾಗಿ ಆನೆಗಳು ಇರುತ್ತಿದ್ದವು. ಕುದುರೆಗಳನ್ನಾಗಲಿ, ಆನೆಗಳನ್ನಾದರೂ ಪಳಗಿಸಿ ಹೇಗೆ ಅವುಗಳನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎನ್ನುವುದು ಮನುಷ್ಯನ ಬುದ್ಧಿಗೆ ಬಿಟ್ಟ ವಿಷಯ.64 ವಿದ್ಯೆಗಳಲ್ಲಿ ಅಶ್ವಶಾಸ್ತ್ರ, ಗಜಶಾಸ್ತ್ರಗಳೂ ಸೇರ್ಪಡೆಯಾಗಿದೆ.
ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಯುದ್ಧ ನೀತಿಯನ್ನು ವಿವರಿಸುವಾಗ ಯಾವ ಯಾವ ರೀತಿಯಲ್ಲಿ ದೇಶದ ರಕ್ಷಣೆಗೆ ಅಶ್ವ, ಗಜ, ರಥ ಮತ್ತು ಕಾಲ್ದಳಗಳ ಉಪಯೋಗವಿದೆ ಎಂಬ ಬಗ್ಗೆ ವಿವರಣೆ ಕೊಡುತ್ತಾ ಹೋಗುತ್ತಾನೆ. ನೂತನ ದಾರಿಗಳ ನಿರ್ಮಾಣ, ಅಡ್ಡಡ್ಡ ತಿರುಗುತ್ತಾ ಶತ್ರುಗಳನ್ನು ಬೆದರಿಸುವುದು, ಕಠಿಣ ಪ್ರದೇಶಗಳಲ್ಲೂ ಏಕಾಏಕಿ ನುಗ್ಗುವುದು, ಚೆಲ್ಲಾಪಿಲ್ಲಿಯಾದ ಸೈನ್ಯವನ್ನು ಒಗ್ಗೂಡಿಸಿ ಹುರಿದುಂಬಿಸುವುದು, ಎದುರು ಪಾಳೆಯದ ಸೈನ್ಯವನ್ನು ತನ್ನ ದೈಹಿಕ ಬಲದಿಂದ ಮುರಿಯುವುದು. ಸೇನಾ ಮುಖ್ಯಸ್ಥನೋ ನಾಯಕನೋ ಆಪತ್ತಿಗೆ ಸಿಲುಕಿದಾಗ ಕೋಟೆಯಂತೆ ನಿಂತು ಕಾಪಾಡುವುದು, ಅನಿರೀಕ್ಷಿತ ಆಕ್ರಮಣ ಮುಂತಾದವಕ್ಕೆ ಉಪಯೋಗವಾಗುವುದು ಗಜಪಡೆಯೇ. ಕೌಟಿಲ್ಯನು ಮುಂದುವರೆದು ಹೇಳುತ್ತಾ ಋತುಮಾನಗಳನ್ನು ಅನುಸರಿಸಿ ಪಡೆಗ ವ್ಯವಸ್ಥೆ ಮಾಡಬೇಕು ಎನ್ನುತ್ತಾನೆ. ಹಾಗೆಂದಾಗ ಮಳೆಗಾಲ ಹಾಗೂ ನದಿ ಪ್ರವಾಹಗಳ ಸಮಯದಲ್ಲಿ ಗಜಪಡೆಗಳ ಅನಿವಾರ್ಯತೆ ಹೆಚ್ಚು ಎಂದಂತಾಯಿತು.  ಮಹಾಭಾರತದ ಒಂದು ಭಾಗವಾದ ಭಗವದ್ಗೀತೆಯಲ್ಲಿ ಕೃಷ್ಣ ಎಲ್ಲಿಯೂ ಯುದ್ಧವಿಮುಖತೆ ಬಗ್ಗೆ ಹೇಳಿರುವುದಿಲ್ಲ. ಬದಲಿಗೆ ಧೈರ್ಯ ತುಂಬಿ ಅರ್ಜುನನ್ನು ಹುರಿದುಂಬಿಸಿದ. ಯುದ್ಧ ಭೂಮಿಯಲ್ಲಿ ಕರುಣೆಗೆ ಅವಕಾಶವೇ ಇಲ್ಲ ಎಂದ. "ಕ್ಷುದ್ರಂ ಹೃದಯ ದೌರ್ಬಲ್ಯಂ" ಹೇಡಿಗಳಿಗೆ ಮಾತ್ರ ಹೃದಯ ದೌರ್ಬಲ್ಯವಿರುವುದು. ನಿಶ್ಯಸ್ತ್ರರಾದವರ ಮೇಲೆ ಕತ್ತಿಯೆತ್ತಬಾರದು ಎನ್ನುವುದನ್ನು ಅಲ್ಲಗಳೆದ. ಕರ್ಣನ ರಥ ಹೂತು ಹೋದಾಗ ನಿಶ್ಯಸ್ತ್ರನಾದ ಕರ್ಣನ ಮೇಲೆ ಶಸ್ತ್ರ ಪ್ರಯೋಗ ಮಾಡುವುದಿಲ್ಲವೆಂದು ಅರ್ಜುನ ಹೇಳಿದಾಗ ಕೃಷ್ಣನು ಅರ್ಜುನಿಗೆ ಎಚ್ಚರಿಕೆ ನೀಡಿ "ಕರ್ಣ ಮತ್ತೊಮ್ಮೆ ಶಸ್ತ್ರ ಹಿಡಿದರೆ ನೀನು ಜಯಿಸಲು ಸಾಧ್ಯವಿಲ್ಲ" ಎನ್ನುತ್ತಾನೆ. ಹಾಗೆಯೇ ಅಭಿಮನ್ಯುವನ್ನು ವಧಿಸಿದ ಬಗೆಯನ್ನೂ ಜ್ಞಾಪಿಸುತ್ತಾನೆ. ಇದೆಲ್ಲದರ ಹಿಂದೆ ಹಿಂದುಗಳಿಗೆ ಇದ್ದರೂ ಕೂಡ ಬೌದ್ಧಮತ ಮತ್ತು ಜೈನಮತದ ಅಹಿಂಸಾತತ್ತ್ವ ಎನ್ನುವ ಧೋರಣೆಗಳನ್ನು ಅಳವಡಿಸಿಕೊಂಡು ಸೋಲುಗಳನ್ನು ಅನುಭವಿಸಿದರು.
ಇನ್ನು ಇತಿಹಾಸದ ಪುಟಗಳಲ್ಲಿ ಕಾಣಸಿಗುವ ಒಂದು ಉದಾಹರಣೆ ಹೀಗಿದೆ: ಮೈಸೂರಿನ ಸರ್ವಾಧಿಕಾರಿ ಹೈದರಾಲಿಯು ಚಿತ್ರದುರ್ಗದ ಮೇಲೆ ಮಾಡಿದ ಆಕ್ರಮಣ. ಇದಂತೂ ಹೈದರಾಲಿಯ ಕುತ್ಸಿತ ಬುದ್ಧಿಯ ಯುದ್ಧವೇ ಸರಿ. ಹೈದರಾಲಿಯು ಚಿತ್ರದುರ್ಗದ ಮೇಲೆ ಯುದ್ಧಕ್ಕೆ ಬರುತ್ತಾನೆಂದು ತಿಳಿದ ಮದಕರಿನಾಯಕ ತನ್ನ ಕೋಟೆಯ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿ ಮರಾಠರ ಸಹಾಯವನ್ನು ಕೇಳಿದ. ಮರಾಠರ ಸೈನ್ಯ ಚಿತ್ರದುರ್ಗದ ನೆರವಿಗಾಗಿ ಹೊರಟಾಗ ದಾರಿಯಲ್ಲಿ ಕೃಷ್ಣಾ ನದಿಯನ್ನು ದಾಟಬೇಕಾಯಿತು. ಅವರು ಬಂದಿದ್ದು ಕುದುರೆ, ಕಾಲಾಳುಗಳಸಮೇತ. ಆ ಸಮಯದಲ್ಲಿ ಕೃಷ್ಣಾ ನದಿಗೆ ಮಳೆಯಿಂದ ನೆರೆ ಬಂದು ಪ್ರವಾಹದಲ್ಲಿ ಮರಾಠರ ಸೈನ್ಯ ಸಿಕ್ಕಿಕೊಂಡಿತು. ನೆರೆ ಇಳಿಯುವವರೆಗೂ ಸೈನ್ಯ ಕಾಯಬೇಕಾಯಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಹೈದರಾಲಿ ಮೋಸದಿಂದ ಚಿತ್ರದುರ್ಗವನ್ನು ವಶಪಡಿಸಿಕೊಂಡು ಕೋಟೆಯ ಒಳಗೆ ಸೇರಿಕೊಂಡಿದ್ದ. ಅಕಸ್ಮಾತಾಗಿ ಗಜಪಡೆ ಇದ್ದು ಮರಾಠರ ಸೈನ್ಯ ಸಮಯಕ್ಕೆ ಸರಿಯಾಗಿ ಒದಗಿದ್ದರೆ ಚರಿತ್ರೆಯ ಚಿತ್ರಣವೇ ಬದಲಾಗುತ್ತಿತ್ತು. ಏಕೆಂದರೆ ಹೈದರಾಲಿಯಾಗಲಿ ಅವನ ಮಗ ಟಿಪ್ಪುವಾಗಲಿ ಮರಾಠರ ಮೇಲೆ ನಡೆಸಿದ ಯುದ್ಧಗಳಲ್ಲಿ ಗೆಲ್ಲಲೇ ಇಲ್ಲ. ಎಲ್ಲೋ ಒಂದು ಯುದ್ಧದಲ್ಲಿ ಅದೂ ಸಣ್ಣ ಸೈನ್ಯದ ಮೇಲೆ ಬೇರೆಯವರ ಸಹಾಯ ತೆಗೆದುಕೊಂಡು ಗೆದ್ದಿದ್ದರು ಅಷ್ಟೇ. ಅವರ ಬಗ್ಗೆ ಇರುವ ಇತಿಹಾಸವೆಲ್ಲಾ ಪಕ್ಷಪಾತದಿಂದ ಕೂಡಿದುದೇ ಆಗಿದೆ.
ನಮ್ಮ ದೇಶದಲ್ಲಿ ಅತ್ಯಂತ ಬಲಿಷ್ಠ ಯೋಧರ ಎರಡು ಪಡೆಗಳು ಎಂದರೆ ರಜಪೂತರು ಮತ್ತೊಂದು ಮರಾಠರು. ಈ ರಜಪೂತರಾಗಲೀ, ಮರಾಠರಾಗಲೀ ಯುದ್ಧದಲ್ಲಿ ಕೆಚ್ಚಿನಿಂದ ಕಾದಾಡಬಲ್ಲರು. ಆದರೆ ಅನೈಕ್ಯತೆಯ ಕೊರತೆಯಿಂದ ಬಳಲುತ್ತಿದ್ದ ಈ ಎರಡು ಗುಂಪುಗಳು ನಾಯಕತ್ವದ ಗುಣಗಳನ್ನು ಹೊಂದಿದ್ದವನನ್ನು ಒಪ್ಪಿಕೊಳ್ಳದೆ ಪಿತೂರಿ ಹಾಗೂ ಅಂತಃಕಲಹಗಳಿಂದ ನಿರ್ನಾಮವಾದರು. ಮೊಘಲರು ನಮ್ಮ ದೇಶದಲ್ಲಿ ನೆಲೆಯೂರಿ ದೆಹಲಿಯ ಗದ್ದುಗೆ ಏರಿ ಬಲಿಷ್ಠ ಸಾಮ್ರಾಜ್ಯ ಕಟ್ಟಲು ಈ ರಾಜಪುತ್ರರೇ ಬಹುಮಟ್ಟಿಗೆ ಕಾರಣ. ಯಾವನೇ ಮೊಘಲ್ ಚಕ್ರವರ್ತಿಯು ದೆಹಲಿಯ ಸಿಂಹಾಸನವನ್ನು ಏರಬೇಕಾದರೆ ರಾಜಪುತ್ರರ ಸಹಕಾರ ಬೇಕೇ ಬೇಕು ಹಾಗೂ ಅವನ ಪಟ್ಟದ ರಾಣಿಯರು ರಾಜಪುತ್ರ ಸ್ತ್ರೀಯರೇ ಆಗಿರುತ್ತಿದ್ದರು. ಹೀಗಾಗಿ ಮೊಘಲರಿಗೂ ರಾಜಪುತ್ರರಿಗೂ ಬೀಗಬೀಗರ ಸಂಬಂಧ. ರಾಷ್ಟ್ರಪ್ರೇಮಿಗಳಾದ ಹಾಗೂ ಅಭಿಮಾನಧನರಾದ ರಾಣಾ ಸಂಗ್ರಾಮಸಿಂಹನಿಗಾಗಲೀ, ರಾಣಾ ಪ್ರತಾಪಸಿಂಹನಿಗಾಗಲೀ ಮೊಘಲರಿಂದ ಸೋಲುಂಟಾಗಲು ಈ ರಾಜಪುತ್ರರ ಅಧಿಕಾರ ಲಾಲಸೆಯ ಹಪಾಹಪಿತನವೇ ಕಾರಣ. ಇವರೆಲ್ಲರೂ ಒಗಟ್ಟಾಗಿ ಪ್ರತಾಪಸಿಂಹನಂತವರಿಗೆ ದುಡಿದಿದ್ದರೆ ನಮ್ಮ ದೇಶದ ಇತಿಹಾಸದಲ್ಲಿ ಮೊಘಲರ ಹೆಸರೇ ಇರುತ್ತಿರಲಿಲ್ಲ. ಆದ್ದರಿಂದ ಇದನ್ನು ಮೊಘಲರ ಇತಿಹಾಸ ಎನ್ನುವುದಕ್ಕಿಂತ ಲಜ್ಜೆಗೇಡಿ ರಾಜಪುತ್ರರ ಇತಿಹಾಸ ಎನ್ನುವುದೇ ಒಳ್ಳೆಯದು.
ಇನ್ನು ಮರಾಠರು ಇವರಲ್ಲಿ ಹಲವಾರು ಪಂಗಡಗಳು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತಹ ಪರಿಸ್ಥಿತಿ. ಹೀಗಾಗಿ ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಶತ್ರುಗಳಿಗೆ ಒಂದು ರೀತಿಯ ಸಹಾಯಕರಾದರು. ಇವರೆಲ್ಲರೂ ಮನಸ್ಸು ಮಾಡಿದ್ದರೆ ದೆಹಲಿಯ ಗದ್ದುಗೆಯನ್ನು ಸುಲಭವಾಗಿ ಹಿಡಿಯಬಹುದಿತ್ತು. ಔರಂಗಜೇಬನಿಗೆ ದುಃಸ್ವಪ್ನವಾಗಿದ್ದ ಛತ್ರಪತಿ ಶಿವಾಜಿ ದೆಹಲಿಯ ಗದ್ದುಗೆ ಮೇಲೆ ಕಣ್ಣಿಟ್ಟಿದಿದ್ದರೆ ಯಾವಾಗಲೋ ಔರಂಗಜೇಬನನ್ನು ನಿರ್ನಾಮ ಮಾಡಿ ಅವನಿಂದಾದ ಹಾವಳಿಗಳನ್ನು, ಅನಾಚಾರಗಳನ್ನು ತಡೆಯಬಹುದಾಗಿತ್ತು. ಆದರೆ ಬದಲಿಗೆ ಅವನು ತನ್ನ ಸುತ್ತಮುತ್ತಲೂ ಇದ್ದ ಪುಡಿ ಪಾಳೆಗಾರರು ಹಾಗೂ ಸಣ್ಣಪುಟ್ಟ ಸಂಸ್ಥಾನಗಳ ಮೇಲೆ ಹೋರಾಟ ನಡೆಸಿದ. ಅವನನ್ನೂ ಕೂಡ ವಿರೋಧಿಸುವ ಪಂಗಡಗಳು ಮರಾಠರಲ್ಲಿದ್ದವು. ಇದೆಲ್ಲವೂ ಏನನ್ನು ತೋರಿಸುತ್ತದೆ ಎಂದರೆ ಐಕ್ಯಮತ್ಯ, ದೂರದೃಷ್ಟಿ ಇವೆಲ್ಲವುಗಳ ಕೊರತೆ ಎಂದೇ ಹೇಳಬೇಕು.
ಗಜಪಡೆಗಳನ್ನು ಉಪಯೋಗಿಸಿಕೊಂಡಿದ್ದರಿಂದ ಮಾತ್ರ ಹಿಂದೂಗಳಿಗೆ ಸೋಲುಂಟಾಯಿತು ಎನ್ನುವುದಕ್ಕಿಂತ ನಮ್ಮವರ ಒಳಜಗಳ, ಅಧಿಕಾರಕ್ಕಾಗಿ ರಾಜಕೀಯ ಕೊಲೆಗಳು, ಬಲಿಷ್ಠ ನಾಯಕತ್ವಕ್ಕೆ ತಲೆಬಾಗದೆ ಪಿತೂರಿ ನಡೆಸುವುದು ಹಾಗೆಯೇ ನೆಹ್ರಾರವರು ಹೇಳುವಂತೆ ಆಕ್ರಮಣದ ಸ್ವಭಾವ ಇಲ್ಲದಿರುವುದು, ಶತ್ರು ಬೆನ್ನು ತಿರುಗಿಸಿದಾಗ ಅವನ ಬೆನ್ನಟ್ಟಿ ನಿರ್ಣಾಯಕ ಹಂತಕ್ಕೆ ತಲುಪದೆ, ಶತ್ರು ಬೆನ್ನು ತಿರುಗಿಸುವಂತೆ ಮಾಡಿದುದೇ ತಮ್ಮ ದೊಡ್ಡ ಸಾಧನೆ ಎಂದು ಬೀಗುವುದು ಹಾಗೆಯೇ ಶತ್ರು ಶರಣಾಗತನಾದಂತೆ ನಟಿಸಿದಾಗ ಪೂರ್ವಾಪರ ಯೋಚನೆ ಮಾಡದೆ ಅವನನ್ನು ಮನ್ನಿಸುವುದು ಇಂತಹ ಧೋರಣೆಗಳಿಂದ ಹಾಗೂ ಐಕ್ಯಮತ್ಯವಿಲ್ಲದೆ ಇದ್ದುದರಿಂದ ಎಲ್ಲಾ ರೀತಿಯ ತಮ್ಮ ಸೋಲುಗಳಿಗೆ ಕಾರಣೀಭೂತರಾದರು.

- ಬಿ.ಎನ್. ಶಶಿಧರ್
banashashi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.