ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಪರೋಕ್ಷ ಘೋಷಣೆ
ನರೇಂದ್ರ ಮೋದಿಯೇ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಔಪಚಾರಿಕವಾಗಿ ಘೋಷಿಸುವ ಅಗತ್ಯ ಈಗ ಬಿಜೆಪಿಗಿಲ್ಲ. ದೆಹಲಿಯಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸಾಗಿದ ರೀತಿಯೇ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದೆ.
ಮೂರು ಉದ್ದೇಶಗಳು ಈ ಸಭೆಯಿಂದ ಈಡೇರಿದಂತಾಗಿವೆ- ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂಸದೀಯ ಮಂಡಳಿಗೆ ಇನ್ಮುಂದೆ ಈ ವಿಷಯವಾಗಿ ಗೊಂದಲಗೊಳ್ಳುವ ಪ್ರಮೇಯ ಬರುವುದಿಲ್ಲ. ಏಕೆಂದರೆ ಪಕ್ಷದ ಚಹರೆಯಾಗಿ ಯಾರನ್ನು ಬಿಂಬಿಸಲಿದ್ದೀರಿ ಎನ್ನುವ ಬಿಜೆಪಿ ಕಾರ್ಯಕರ್ತರ ಪ್ರಶ್ನೆ ನಿರಂತರವಾಗಿ ಹಿರಿತಲೆಗಳನ್ನು ಒತ್ತಡಕ್ಕೆ ಒಳಪಡಿಸುತ್ತಲೇ ಇತ್ತು. ಈಗ ಆ ಪ್ರಶ್ನೆಗೆ ಉತ್ತರ ದೊರಕಿದೆ.
ಎರಡನೆಯದಾಗಿ, ಅಧಿಕೃತವಾಗಿ ಯಾರ ಹೆಸರೂ ಹೊರಬೀಳಲಿಲ್ಲವಾದ್ದರಿಂದ ನಿತೀಶ್ ಕುಮಾರ್ ಅವರ ಜೆಡಿ(ಯು)ಗೆ ಬಿಜೆಪಿಯ ಮೇಲೆ ಹರಿಹಾಯುವ ಅವಕಾಶ ಸಿಗದಂತಾಗಿದೆ.
ಮೂರನೆಯದಾಗಿ, ಮೋದಿ ಅವರು ನಿಶ್ಚಿಂತರಾಗಿ ಗುಜರಾತ್ನಲ್ಲೇ ಮುಂದುವರಿಯಬಹುದು. ಅವರು ತಮ್ಮ ಹೊಸ ಸ್ಥಾನವನ್ನು ಪಡೆಯಲು ದೆಹಲಿಗೆ ಸ್ಥಳ ಬದಲಾಯಿಸಬೇಕೇ ಇಲ್ಲವೇ ಎನ್ನುವ ಚರ್ಚೆ ನಡೆಸುವ ಅವಕಾಶ ಅವರ ವಿಮರ್ಶಕರಿಗೆ ಕೈ ತಪ್ಪಿಹೋಗಿದೆ.
ಭಾನುವಾರ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಮೋದಿಯವರ 1 ಗಂಟೆಗೂ ಮೀರಿದ ಭಾಷಣ ಕೇಳಿದ ನಂತರ, ಹಲವರ ತಲೆಯಲ್ಲಿದ್ದ ಸಂದೇಹ ಸಂಪೂರ್ಣವಾಗಿ ಬಗೆಹರಿದಂತಾಗಿದೆ. ಒಂದು ರೀತಿಯಲ್ಲಿ ಅದು, ಪ್ರಧಾನ ಮಂತ್ರಿ ಅಭ್ಯರ್ಥಿ ಸ್ಥಾನದ ಸ್ವೀಕೃತಿ ಭಾಷಣದಂತೆಯೇ ಇತ್ತು- ಪಕ್ಷಕ್ಕೆ ಸಲಹೆ ನೀಡುವುದರ ಜೊತೆಗೆ, 'ಬಿಜೆಪಿಗಿದೆ ಮಿಷನ್, ಕೈ ಗುರಿ ಬರೀ ಕಮೀಷನ್' ಎಂದು ಕಾಂಗ್ರೆಸ್ ಅನ್ನು ಜಾಡಿಸಿದರು ಮೋದಿ.
ಇನ್ನು ಅಳಿಯನ(ರಾಬರ್ಟ್ ವಾದ್ರಾರ ಹೆಸರೆತ್ತದೆ) ಉಲ್ಲೇಖವೂ ಅವರ ಭಾಷಣದಲ್ಲಿತ್ತು. ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಇದ್ದ ಆ ಭಾಷಣದ ಮೂಲಕ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಮೋದಿ ಪರೋಕ್ಷವಾಗಿ ಹೇಳಿದರು.
ಪಕ್ಷದ ಅಧ್ಯಕ್ಷ ರಾಜ್ನಾಥ್ ಸಿಂಗ್ ತಮ್ಮ ಹಾವಭಾವದ ಮೂಲಕ ಬಿಜೆಪಿಯಲ್ಲಿ ಮೋದಿಯವರ ಸ್ಥಾನವನ್ನು ಸ್ಪಷ್ಟವಾಗಿ ಸೂಚಿಸಿದರು. ಸಿಂಗ್ ಮೋದಿಯವರನ್ನು ಭಾಷಣ ಮಾಡಲು ವೇದಿಕೆಗೆ ಆಹ್ವಾನಿಸುತ್ತಿದ್ದಂತೆ, ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 2000 ಮಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಘೋಷಣೆಗಳು ಕಿವಿಗಡಚಿಕ್ಕುವಂತೆ ಕೇಳಿಬಂದವು, ಸಭಾಂಗಣದ ತುಂಬೆಲ್ಲ ಮೋದಿ ಮಾಯೆ ಆವರಿಸಿಕೊಂಡಿತು. ಆ ಸದ್ದು ಯಾವ ಮಟ್ಟದಲ್ಲಿತ್ತೆಂದರೆ ಕೆಲವು ನಿಮಿಷಗಳವರೆಗೆ ಯಾರ ಮಾತೂ ಯಾರಿಗೂ ಕೇಳಿಸುವಂತಿರಲಿಲ್ಲ. ವೇದಿಕೆಯೇರಿದ ಮೋದಿ ತಮ್ಮ ಟ್ರೇಡ್ಮಾರ್ಕ್ ಆದ 'ಭಾರತ್ ಮಾತಾ ಕೀ ಜೈ' ಎಂಬ ಸಾಲಿನೊಂದಿಗೆ ಭಾಷಣ ಆರಂಭಿಸಿದರು.
ವೈಭವದ ಆನಂದದಲ್ಲಿದ್ದ ಮೋದಿ, ಬಿಜೆಪಿಯ ಸಂಸದೀಯ ಮಂಡಳಿಯೆದುರು ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುವಾಗ ವಿನಮ್ರವಾಗಿ ವರ್ತಿಸಿದರೆ, ಎದುರಾಳಿ ಕಾಂಗ್ರೆಸ್ ಮತ್ತು 'ರಾಜಕೀಯ ಪಂಡಿತರ' ವಿಷಯ ಬಂದಾಗ ಉಗ್ರರಾದರು.
ಅವರ ಧ್ವನಿ ಮತ್ತು ಭಾಷಣದ ತಾತ್ಪರ್ಯ, ನಾಯಕತ್ವದ ಬಗ್ಗೆ ಮಾತನಾಡದೆಯೇ ತಮಗೆ ಕೊಟ್ಟ ಹೊಸ ಪಾತ್ರವನ್ನು ವಹಿಸಿಕೊಂಡಿದ್ದಾಗಿ ಹೇಳುತ್ತಿರುವಂತಿತ್ತು. ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರವನ್ನು ಜಾಡಿಸಲು ಕುಟುಂಬ ರಾಜಕಾರಣದ(ನೆಹರು-ಗಾಂಧಿ) ವಿಷಯ ಎತ್ತಿದ ಮೋದಿ, ಅಷ್ಟೇ ಚಾಣಾಕ್ಷತನದಿಂದ ಕಾಂಗ್ರೆಸ್ನ ಪ್ರಬಲ ನಾಯಕರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಸೀತಾರಾಮ್ ಕೇಸರಿ ಅವರನ್ನು ಹೊಗಳಿದರು.
'ಜೈ ಜವಾನ್ ಜೈ ಕಿಸಾನ್' ಎನ್ನುವ ಘೋಷವಾಕ್ಯವನ್ನು ಕೊಟ್ಟ ಶಾಸ್ತ್ರಿಯವರನ್ನು ಕೊಂಡಾಡಿದ ಮೋದಿ, ಆ ವಾಕ್ಯ ದೇಶದ ರೈತರನ್ನು ಹುರಿದುಂಬಿಸುವಂತಿದೆ ಎಂದರು. ನಂತರ ಸೀತಾರಾಮ್ ಕೇಸರಿ ಅವರಿಗೆ ಆದ ಅವಮಾನದ ಬಗ್ಗೆ ಹೇಳುತ್ತಾ ಕಾಂಗ್ರೆಸ್ನಲ್ಲಿ 'ಕುಟುಂಬದಿಂದ' ಹೊರಗಿರುವವರಿಗೆ ಪಕ್ಷವನ್ನು ಮುನ್ನಡೆಸುವ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಕುಟುಕಿದರು.
ಶಾಸ್ತ್ರಿ ಮತ್ತು ಕೇಸರಿಯವರ ಹೆಸರನ್ನು ಉಲ್ಲೇಖಿಸಿದ್ದರ ಹಿಂದೆ ರಾಜಕೀಯ ತಂತ್ರವಿದ್ದರೂ ಇರಬಹುದು. ಶಾಸ್ತ್ರಿ ಉತ್ತರಪ್ರದೇಶದವರಾಗಿದ್ದರೆ, ಕೇಸರಿ ಬಿಹಾರದವರು. ಈ ರಾಜ್ಯಗಳಲ್ಲಿ ಬಿಜೆಪಿ ತನ್ನ ಬುನಾದಿಯನ್ನು ಬಲಪಡಿಸಿಕೊಳ್ಳಬೇಕಿದೆ. ಶಾಸ್ತ್ರಿ ಶೈಕ್ಷಣಿಕವಾಗಿ ಅಸ್ಥಿರವಾಗಿರುವ ಕಾಯಸ್ಥ ಸಮುದಾಯದವರಾದರೆ, ಕೇಸರಿ ಸಂಖ್ಯಾತ್ಮಕವಾಗಿ ಮಹತ್ವಪೂರ್ಣವಾಗಿರುವ ಹಿಂದುಳಿದ ವರ್ಗಕ್ಕೆ ಸೇರಿದವರು.
ತಮ್ಮಲ್ಲಿ ಕಾಂಗ್ರೆಸ್ನ ಹಣೆಬರಹವನ್ನು ನಿರ್ಧರಿಸುವ ಶಕ್ತಿಯಿದೆ ಎನ್ನುವುದನ್ನು ಸಿಟ್ಟಿನ ಮೂಲಕ ಮೋದಿ ತೋರಿಸಿದರು. ಕಾಂಗ್ರೆಸ್ ಮುಳುಗುತ್ತಿರುವ ಹಡುಗು, ಪಕ್ಷದ ಮತ್ತು ದೇಶದ ಹಿತಾಸಕ್ತಿಯನ್ನು ಪಣಕ್ಕಿಟ್ಟು
ಕುಟುಂಬಕ್ಕೆ ಮಾತ್ರ ನಿಷ್ಠೆ ತೋರುವ ಮೂಲಕ ತನಗೇ ತಾನೇ ಗಾಯಮಾಡಿಕೊಂಡಿದೆ. ಪ್ರಧಾನಿ ಹುದ್ದೆಗೆ ಹೆಚ್ಚು ಅರ್ಹರಾಗಿದ್ದ ಪ್ರಣಬ್ ಮುಖರ್ಜಿಯವರನ್ನು ದೂರವಿಟ್ಟು ಆ ಜಾಗದಲ್ಲಿ 'ನೈಟ್ ವಾಚ್ಮನ್'(ಮನಮೋಹನ್ ಸಿಂಗ್) ಅವರನ್ನು ಕೂರಿಸಲಾಯಿತು.' ಎಂದರು. ಇನ್ನು ತಮ್ಮ ಭಾಷಣದಲ್ಲಿ ಅವರು ಸೋನಿಯಾ ಗಾಂಧಿಯವರ ಹೆಸರೆತ್ತಲಿಲ್ಲವಾದರೂ, ಸೋನಿಯಾರ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್(ಎನ್ಎಸಿ) ಮಾತ್ರ ತೀಕ್ಷ್ಣ ಟೀಕೆಗೊಳಗಾಯಿತು.
ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪಕ್ಷದ ಹಿಡಿತವಿಲ್ಲ ಎನ್ನುವುದು ಮೋದಿಯವರಿಗೆ ಚೆನ್ನಾಗಿ ಗೊತ್ತು. ಈ ಭಾಗಗಳಲ್ಲಿ ಭದ್ರ ನೆಲೆ ಹೊಂದಿರುವುದು ಕಾಂಗ್ರೆಸ್ಗೆ 2014ರಲ್ಲಿ ಉಪಯೋಗಕ್ಕೆ ಬರಲಿದೆ.
ಹಾಗಾಗೆ, ಮೋದಿ ಇಂತಹ ಅಂಕಿ ಅಂಶಗಳನ್ನು ಸೃಷ್ಟಿಸುವ ರಾಜಕೀಯ ಪಂಡಿತರನ್ನು ಟೀಕಿಸಿದ್ದು. ಆದರೆ
ಇಂತಹ ವಿಶ್ಲೇಷಣೆಗಳಿಗೆ ಪಕ್ಕಾಗದಂತೆ ತಮ್ಮ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಅವರು ಎಚ್ಚರಿಕೆ ನೀಡಿದರು. 'ಜನರು ಕಾಂಗ್ರೆಸ್ ಅನ್ನು ಕಿತ್ತೆಸೆಯುವ ನಿರ್ಧಾರ ಮಾಡಿದ್ದಾರೆ. ಅವರ ನಿರ್ಧಾರ ನಿಜಸ್ಥಿತಿಗೆ ಬರುವುದಕ್ಕೆ ನೀವು ಹೇಗೆ ಪ್ರಯತ್ನ ಪಡುವಿರಿ ಎನ್ನುವುದು ಮುಖ್ಯವಾಗುತ್ತದೆ' ಎಂದರು.
ಒಂದು ವೇಳೆ ತಮ್ಮ ಹೆಸರೇ ರಾಷ್ಟ್ರದ ಜನತೆಗೆ ಮುಖ್ಯವಾಗಿರುವುದಾದರೆ, ಸಾಂಸ್ಥಿಕ ಶಕ್ತಿಯ ಪ್ರಾಮುಖ್ಯತೆ ಅಷ್ಟೇನು ದೊಡ್ಡ ಪಾತ್ರವಹಿಸುವುದಿಲ್ಲ ಎನ್ನುವುದು ಅವರ ಸಂದೇಶದ ಒಳಾರ್ಥದಂತಿತ್ತು. ಕಾಂಗ್ರೆಸ್ ಅನ್ನು ಎದುರಿಸುವ ಶಕ್ತಿಯನ್ನು ಬಿಜೆಪಿಯ ಮಂದಿಗೆ ತುಂಬುವ ಜೊತೆಗೆ ಅವರಲ್ಲಿ ನಿಶ್ಚಿತಾಭಿಪ್ರಾಯದ ಪ್ರಜ್ಞೆಯನ್ನು ಬೆಳೆಸುವ ಆಶಯ ಅವರ ಮಾತಿನಲ್ಲಿತ್ತು.
'ಕಾಂಗ್ರೆಸ್ ದೇಶದ ಮೇಲೆ ಹತಾಶ ಭಾವವನ್ನು ಹೇರಿಬಿಟ್ಟಿದೆ. ಆ ಜಾಗದಲ್ಲಿ ಮಹಾತ್ವಾಕಾಂಕ್ಷೆ ಮತ್ತು ಭರವಸೆಯನ್ನು ತುಂಬಬೇಕಿದೆ. ಕೇಂದ್ರದಲ್ಲಿ ಸರ್ಕಾರವೊಂದು ಇದೆಯೋ ಇಲ್ಲವೋ ಎನ್ನುವಂತಹ ಗೊಂದಲ ಜನರಲ್ಲಿ ಆವರಿಸಿದೆ' ಎಂದ ಮೋದಿ, 'ಇದು ನಮಗೆ ನಿಜಕ್ಕೂ ದೊಡ್ಡ ಸವಾಲು, ಬಿಜೆಪಿಯ ಎಲ್ಲಾ ಕಾರ್ಯಕರ್ತರು ಕಾಂಗ್ರೆಸ್ ಪಾಳಯವನ್ನು ಕಿತ್ತೆಸೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು' ಎಂದು ಗುಡುಗಿದರು. ಅವರ ಭಾಷಣ ಮುಕ್ತಾಯವಾಗಿದ್ದು 'ಮಾನಾ ಕೀ ಅಂಧೇರಾ ಘನಾ ಹೈ, ಪರ್ ದಿಯಾ ಜಲಾನಾ ಕಹಾಂ ಮನಾ ಹೈ' ಎನ್ನುವ ಸಾಲುಗಳೊಂದಿಗೆ.
ಅವರ ಭಾಷಣ ಮುಗಿಯುತ್ತಿದ್ದಂತೆ ಭಾವಪರವಶರಾದ ಬಿಜೆಪಿಯ ಮಂದಿ ಸಭಾಂಗಣದ ಹೊರಗಡೆ ಹೋದ ನಂತರವೂ ಈ ವಿಷಯದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ಬಹಳ ವರ್ಷಗಳ ನಂತರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯೊಂದರಲ್ಲಿ ಎಲ್ಲರಲ್ಲೂ ಒಂದೇ ಉದ್ದೇಶದ ಪ್ರಜ್ಞೆ ಆವರಿಸಿತ್ತು.
- ಸಂಜಯ್ ಸಿಂಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

