ಕಳೆದ ಎರಡು ತಿಂಗಳಿನಿಂದ ದೇಶದ ಚಿತ್ತವೆಲ್ಲ ಪವಿತ್ರ ಗಂಗಾ ನದಿಯ ತಟದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದತ್ತ ನೆಟ್ಟಿದೆ. ಆದರೆ ಇದೇ ಸಮಯದಲ್ಲಿ, ಆ ನದಿಯ ಪ್ರಾಮಾಣಿಕ ಭಕ್ತ ಮೆಲ್ಲಗೆ ಉಪವಾಸ ಸತ್ಯಾಗ್ರಹಕ್ಕೆ ಜಾರಿರುವುದನ್ನು ನೋಡಲು ಯಾರಿಗೂ ವ್ಯವಧಾನವಿಲ್ಲ. ಗಂಗಾ ನದಿಯನ್ನು ಜೀವಂತವಾಗಿಡುವ, ಅಧಿಕಾರದಲ್ಲಿರುವವರ ಸ್ವಾರ್ಥ ಮನೋಭಾವದಿಂದ ಅದು ಅವಸಾನವಾಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡಿ ಈಗ ನುಣುಚಿಕೊಂಡಿರುವ ಸರ್ಕಾರದ ವಂಚನೆಯನ್ನು ಜಾಹೀರು ಮಾಡಲು ಅವರು ಹೋರಾಡುತ್ತಿದ್ದಾರೆ.
ಪ್ರೊಫೆಸರ್ ಜಿ.ಡಿ. ಅಗರ್ವಾಲ್ ಅವರು ಜನವರಿ 26 ರಿಂದ ಅಮರ್ಕಂಟಕದಲ್ಲಿ ಉಪವಾಸ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಇನ್ನೊಂದೆಡೆ ಕುಂಭಮೇಳದಲ್ಲಿ ತಮ್ಮ ಪಾಪವನ್ನು ತೊಳೆದುಕೊಳ್ಳಲು ಬರುವ ಜನರ ಸಂಖ್ಯೆಯೂ ಹೆಚ್ಚುತ್ತಾ, ಅದರೊಡನೆ ಕಲುಷಿತ ಗಂಗಾ ನದಿಯ ಒಡಲಿಗೆ ಇನ್ನಷ್ಟು ಹೊಲಸೂ ಸೇರುತ್ತಿದೆ. ರಾಜಕಾರಣಿಗಳು, ದೇವಮಾನವರು ಒತ್ತುವರಿ, ಹಸ್ತಕ್ಷೇಪ ಮತ್ತು ಮಾಲಿನ್ಯದಿಂದಾಗಿ ಕಲುಷಿತಗೊಂಡು ಸ್ವಚ್ಛವಾಗಲು ಪರದಾಡುತ್ತಿರುವ ಗಂಗಾ ನದಿಯಲ್ಲಿ ಹಿಂಡು ಹಿಂಡಾಗಿ ಧುಮುಕಿ ಪಾವನರಾಗುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರೊ. ಜಿ.ಡಿ ಅಗರ್ವಾಲ್ (ಸ್ವಾಮಿ ಸನಂದ) ಅವರು 'ಜಲ ಗಾಂಧಿ' ರಾಜೇಂದ್ರ ಸಿಂಗ್ ಅವರೊಡಗೂಡಿ 2008-2009ರಲ್ಲಿ ಉತ್ತರಾಖಂಡದಲ್ಲಿ ಸಾರ್ವಜನಿಕ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದರು. ಆಣೆಕಟ್ಟು ನಿರ್ಮಾಣದಿಂದಾಗಿ ಭಾಗೀರಥಿ ನದಿಗೆ ಹೊಡೆತ ಬೀಳುವುದಲ್ಲದೆ, ಪರಿಸರಕ್ಕೂ ಹಾನಿಯಾಗಲಿದೆ ಎನ್ನುವ ಕಾರಣಕ್ಕೆ ಆ ಹೋರಾಟ ನಡೆಸಲಾಯಿತು. ಈ ಪ್ರತಿಭಟನೆಯ ಫಲವಾಗಿ ಕೆಲವು ಆಣೆಕಟ್ಟುಗಳ ನಿರ್ಮಾಣ ಕಾರ್ಯ ಮಧ್ಯದಲ್ಲಿಯೇ ಸ್ಥಗಿತವಾಯಿತು. ಆದರೆ ಬಹುತೇಕ ನಿರ್ಮಾಣ ಕಾರ್ಯಗಳು ಈಗ ತ್ವರಿತಗತಿ ಪಡೆದಿವೆ. ಸ್ಥಳೀಯರ ಮತ್ತು ಪ್ರೊ. ಅಗರ್ವಾಲ್ ಅವರ ಹೋರಾಟ ನಡೆಯುತ್ತಲೇ ಇದೆಯಾದರೂ ಅಧಿಕಾರದಲ್ಲಿರುವವರಿಗೆ ಇದನ್ನೆಲ್ಲಾ ನೋಡುವ ವ್ಯವಧಾನ, ದೃಷ್ಟಿ ಇಲ್ಲ. ಖಾಸಗಿ ಮತ್ತು ಸರ್ಕಾರಿ ಕಟ್ಟುಗರೆಲ್ಲ ತಮ್ಮ ಕೆಲಸವನ್ನು ಸುಸೂತ್ರವಾಗಿ ಮುಂದುವರಿಸುತ್ತಿದ್ದಾರೆ, ಅಲ್ಲದೆ ಹೊಸ ಡ್ಯಾಂಗಳ ನಿರ್ಮಾಣಕ್ಕೂ ಯೋಜನೆ ರೂಪಿಸುತ್ತಿದ್ದಾರೆ. ಈ ವ್ಯವಹಾರ ನಿಜಕ್ಕೂ ಲಾಭದಾಯಕವಾಗಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ ಭಾರತದ ಅಗ್ರಗಣ್ಯ ಪರಿಸರವಾದಿಯ ಜೀವನದ ಬಗ್ಗೆ ಬೆಲೆಯೇ ಇಲ್ಲದಂತಾಗಿದೆ.
ಪ್ರೊ. ಅಗರ್ವಾಲ್ ಅಂಥವರ ಹೋರಾಟದಿಂದಾಗಿಯೇ ಸರ್ಕಾರ ಗೋಮುಖದಿಂದ ಉತ್ತರಕಾಶಿಯವರೆಗಿನ ಸುಮಾರು 135 ಕಿ.ಮಿ. ವ್ಯಾಪ್ತಿ ಪ್ರದೇಶದ ಗಂಗಾನದಿ ಮತ್ತು ಪರಿಪ್ರದೇಶಗಳಲ್ಲಿ, ಒತ್ತುವರಿ ಮತ್ತು ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇನ್ನು ಕೋಟ್ಲಾಭೇಲ್ ಮತ್ತು ವಿಷ್ಣುಗಢದಲ್ಲಿನ ನಿರ್ಮಾಣ ಕಾರ್ಯಗಳನ್ನು ಅರ್ಧಕ್ಕೇ ನಿಲ್ಲಿಸುವಲ್ಲೂ ಸಾರ್ವಜನಿಕ ಪ್ರತಿಭಟನೆಗಳು ಯಶಸ್ವಿಯಾಗಿವೆ. ಆದರೆ ಶ್ರೀನಗರದಲ್ಲಿನ ಆಣೆಕಟ್ಟು ಮಾತ್ರ ಕಾರ್ಯಾರಂಭ ಮಾಡಿ ವಿಧ್ವಂಸವೆಸಗಲು ಸಿದ್ಧವಾಗಿ ಕುಳಿತಿದೆ.
ಯೋಜನೆ ರೂಪಿಸುವವರು ಮತ್ತು ನಿರ್ಮಾಣ ಕಂಪೆನಿಗಳು ಒಟ್ಟುಗೂಡಿ ಭಾಗೀರಥಿ ಮತ್ತು ಅಲಕನಂದಾ ನದಿಗಳಲ್ಲಿ ಸುಮಾರು 200 ನಿರ್ಮಾಣ ಯೋಜನೆಗಳನ್ನು ರೂಪಿಸಿದ್ದಾರೆ. ಕೆಲವೊಂದು ಆಣೆಕಟ್ಟುಗಳಂತೂ 1 ಕಿ.ಮಿ. ಅಂತರದಲ್ಲಿಯೇ ನಿರ್ಮಾಣವಾಗಲಿವೆ. ಪರಿಸರ ಮತ್ತು ಅರಣ್ಯ ಸಚಿವಾಲಯಂತೂ, ಪರಿಸರಕ್ಕೆ ಮತ್ತು ಅರಣ್ಯಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಯಾವ ನಿರ್ಮಾಣ ಕಾರ್ಯವನ್ನೂ ಇದುವರೆಗೂ ತಡೆಹಿಡಿದಿಲ್ಲ. ಹೆಚ್ಚೆಂದರೆ ನಿರ್ಮಾಣ ಯೋಜನೆಗಳಿಗೆ ಅನುಮತಿ ನೀಡುವುದರಲ್ಲಿ ಅದು ವಿಳಂಬ ಅನಿಸರಿಸಿದ ಉದಾಹರಣೆಗಳಿವೆಯಷ್ಟೆ. ಕಳೆದ ಕೆಲವು ವರ್ಷಗಳಲ್ಲಿ ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕೆ ಬಹಳಷ್ಟು ಹಣಕಾಸಿನ ನೆರವು ನೀಡಲಾಗಿದೆಯಾದರೂ, ಹಣ ಖರ್ಚು ಮಾಡುವುದನ್ನು ಬಿಟ್ಟು ಬೇರಾವ ಕೆಲಸವೂ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಆ ನದಿ ಕಲುಷಿತಗೊಳ್ಳುತ್ತಲೇ ಸಾಗಿದೆ. ಸತ್ಯವೇನೆಂದರೆ, ಗಂಗಾ ಮತ್ತು ಅದರ ಬಹುದೊಡ್ಡ ಉಪನದಿಯಾದ ಯಮುನಾದ ದಿಕ್ಕು ಬದಲಾಯಿಸಿ ಕೃಷಿ ಭೂಮಿ ಮತ್ತು ಕಾರ್ಖಾನೆಗಳ ದಾಹವನ್ನು ತಣಿಸಲು ಬಳಸಿಕೊಳ್ಳಲಾಗುತ್ತಿದೆ. ಹೀಗೆ ದಿಕ್ಕು ತಪ್ಪಿಸಿಕೊಂಡು ಹರಿಯುವ ಈ ನದಿಗಳು ನಗರಗಳ ಹೊಲಸನ್ನು ಮತ್ತುಕಾರ್ಖಾನೆಗಳ ವಿಷವನ್ನು ಹೊತ್ತು ಹೈರಾಣಾಗುತ್ತಿವೆ.
ಹಾಗೆ ನೋಡಿದರೆ, ಇದುವರೆಗಿನ ಎಲ್ಲಾ ವಿಶೇಷಜ್ಞರ ಸಮಿತಿಗಳು(1998ರಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸಿದ ಸಮಿತಿಯನ್ನೊಳಗೊಂಡು) 'ನೀರಿನ ನೈಸರ್ಗಿಕ ಹರಿವೇ ಇಲ್ಲದಿರುವಾಗ, ಎಷ್ಟೇ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೂ ಪ್ರಯೋಜನವಾಗುವುದಿಲ್ಲ' ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಈ ಸತ್ಯ ಯಾರ ಕಿವಿಗೂ ಮುಟ್ಟುತ್ತಿಲ್ಲ. ಪ್ರೊ. ಅಗರ್ವಾಲ್ ಅವರು ಮಾತುಕತೆಯ ಮೂಲಕ, ಪ್ರತಿಭಟನೆಗಳ ಮೂಲಕ ನದಿಗಳನ್ನು, ಅದರಲ್ಲೂ ಮುಖ್ಯವಾಗಿ ಗಂಗಾ ನದಿಯನ್ನು ಉಳಿಸಲು ಎಲ್ಲಾ ನ್ಯಾಯೋಚಿತ ಮತ್ತು ತಾರ್ಕಿಕ ಪ್ರಯತ್ನಗಳನ್ನು ಮಾಡಿದ್ದಾರೆ. ಈಗ ಆ ನದಿಯನ್ನು ಉಳಿಸುವ ಸಲುವಾಗಿ ಆಮರಣಾಂತ ಉಪವಾಸ ನಡೆಸುವ ಅನಿವಾರ್ಯತೆ ಅವರಿಗೆ ಎದುರಾಗಿದೆ.
ಜಲಜೀವನವನ್ನು ಉಳಿಸುವುದಕ್ಕಾಗಿ ತಮ್ಮ ಜೀವನವನ್ನೇ ಅಪಾಯಕ್ಕೆ ಒಡ್ಡಿರುವ ವ್ಯಕ್ತಿಯತ್ತ ನೋಡುವ ಮನಃಸಾಕ್ಷಿಯೇ ನಮ್ಮ ಸರ್ಕಾರಕ್ಕೆ, ಅದರ ತಜ್ಞರಿಗೆ ಮತ್ತು ಜನರಿಗೆ ಇಲ್ಲವಾಯಿತೇ? ನಮ್ಮ ಸ್ವಾರ್ಥ ಮನೋಭಾವ ಯಾವ ಮಟ್ಟಕ್ಕೆ ಮುಟ್ಟಿದೆ ಎನ್ನುವುದನ್ನು ಲೆಕ್ಕಹಾಕಿ? ನದಿಗಳನ್ನು, ಅವುಗಳನ್ನು ಉಳಿಸಲು ಹೋರಾಡುತ್ತಿರುವ ವ್ಯಕ್ತಿಯನ್ನು ಉಳಿಸಿಕೊಳ್ಳುವು ಅವಕಾಶ ಕೈ ಜಾರುವ ಮುನ್ನ ಎಚ್ಚೆತ್ತುಕೊಳ್ಳುವ ಒಂದು ಜೀವವೂ ನಮ್ಮಲ್ಲಿ ಇಲ್ಲವಾಯಿತೇ?
- ಮಧು ಬಾಧು