ಮಣಿ ಶಂಕರ್ ಕುಲವನ್ನು ನಾಲಗೆಯೇ ಅರುಹಿದೆ!
ಮಣಿ ಶಂಕರ್ ಅಯ್ಯರ್. ನೆಹರು-ಗಾಂಧಿ ಕುಟುಂಬದ ಹೊಗಳುಭಟರ ಸ್ಪರ್ಧೆಯನ್ನಿಟ್ಟರೆ ಉಳಿದೆಲ್ಲ ಪ್ರತಿಸ್ಪರ್ಧಿಗಳು (ಅಂಥವರ ಸಂಖ್ಯೆ ಬಹಳ ದೊಡ್ಡದು) ಅವರಿಂದ ಕಿಲೋಮೀಟರ್ಗಳಷ್ಟು ಹಿಂದೆ ಬಿದ್ದುಬಿಡುತ್ತಾರೆ ಎಂಬುದನ್ನು ಅನಾಯಾಸವಾಗಿ ಊಹಿಸಬಹುದು. ಸೋನಿಯಾ, ರಾಹುಲ್ ಇವರನ್ನು ಯಾರೆಷ್ಟೇ ವಿಷಯಾಧಾರಿತವಾಗಿ ಟೀಕಿಸಿದರೂ, ಪ್ರತಿಯಾಗಿ ಮಣಿ ಶಂಕರ್ ಅಯ್ಯರ್ ಅವರಿಂದ 'ಅಂಥವನೇ...ಇಂಥವನೇ..' ಎಂಬ ಧಾಟಿಯಲ್ಲಿ ಬಯ್ಗುಳ ಕೇಳಬೇಕಾಗುತ್ತದೆ.
ಕುಟುಂಬ ನಿಷ್ಠೆಯ ಅಸಹನೀಯ ಮಾದರಿ ಎಂದರೆ ಮಣಿ ಶಂಕರ್ ಅಯ್ಯರ್. ಸೋನಿಯಾ ಕುಟುಂಬವನ್ನು ಹೊಗಳಿ ಪಾವನರಾಗುವುದಕ್ಕೆ ಅವರು ಇನ್ನೊಬ್ಬರ ವಿರುದ್ಧ ಎಂಥ ಅನಾಗರಿಕ ಮಟ್ಟಕ್ಕಾದರೂ ಇಳಿಯಬಲ್ಲರು. ಭಾರತದ ಆಡಳಿತ ಸೇವೆಯಲ್ಲಿದ್ದ ತನ್ನಂಥ ವ್ಯಕ್ತಿ ಈ ರೀತಿ ವರ್ತಿಸುವುದು ತರವಲ್ಲ ಎಂಬ ಸಾಮಾನ್ಯ ತಿಳಿವಳಿಕೆಯೂ ಈ ವ್ಯಕ್ತಿಗೆ ಇದ್ದಂತಿಲ್ಲ. ಕೆಲ ವರ್ಷಗಳ ಹಿಂದೆ ಅಮರ್ ಸಿಂಗ್ ಜತೆ ಖಾಸಗಿ ಸಮಾರಂಭವೊಂದರಲ್ಲಿ ಈ ಮಣಿಶಂಕರ್ ಅಯ್ಯರ್ ಅದೆಷ್ಟು ಅತಿರೇಕದಿಂದ ವರ್ತಿಸಿದರು ಎಂದರೆ ಇಂಥ ವ್ಯಕ್ತಿ ತನ್ನ ಭಾಗವಾಗಿದ್ದಾನಲ್ಲ ಎಂದು ಯಾವುದೇ ಪಕ್ಷ ತಲೆ ತಗ್ಗಿಸುವಷ್ಟು. ಅಯ್ಯರ್ ಹಾಗೂ ಅಮರ್ ಸಿಂಗ್ ನಡುವೆ ತಿಂಗಳ ಹಿಂದೆ ಪಾರ್ಟಿಯೊಂದರಲ್ಲಿ ಶುರುವಾದ ಮಾತಿನ ಚಕಮಕಿ ಕೊನೆಗೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು. ಸತೀಶ್ ಗುಜ್ರಾಲ್ ಎಂಬುವವರ ಪಾರ್ಟಿಯಲ್ಲಿ ಆಗಿದ್ದೇನು ಅಂತ ಕೇಳಿದರೆ ಮಣಿ ಈಗಲೂ ಕೆಂಡ. ಇನ್ನೊಂದೆಡೆ ಅಮರ್ ಸಿಂಗ್ ಅಲ್ಲಿ ನಡೆದಿದ್ದೇನು ಎಂಬುದಕ್ಕೆ ದೀರ್ಘ ವಿವರಣೆ ನೀಡಿದ್ದಾರೆ. ಈ ವಿವರಣೆಯೆಲ್ಲ ಸರಿಯಾ ಅಂತ ಕೇಳಿದರೆ ಮಣಿ ಶಂಕರ್ ಅಯ್ಯರ್ದು ಮತ್ತದೇ ಉರಿಮುಖ. ಅಮರ್ ಹೇಳುವಂತೆ ಪಾರ್ಟಿ ಆರಂಭದಿಂದಲೂ ವಿನಾಕಾರಣವಾಗಿ ಅಮರ್ ಸಿಂಗ್ರನ್ನು ಕೆಣಕುವ ಕಾಯಕಕ್ಕೆ ಮಣಿ ಶಂಕರ್ ಶುರುವಿಟ್ಟುಕೊಂಡಿದ್ದರು. ತುಂಬ ಕುಡಿದು ಅಮರ್ ಬಳಿ ಸಾರಿದ ಮಣಿ ಶಂಕರ್, 'ನೀನು ರೇಸಿಸ್ಟ್ ಕಣಯ್ಯಾ, ವಿದೇಶಿ ಮೂಲ ಹೊಂದಿದ್ದು ಎಂಬ ಒಂದೇ ಕಾರಣಕ್ಕೆ ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಿದೆ' ಅಂತ ಕೂಗಿಕೊಡಿದ್ದಾರೆ. ರಾಜಕೀಯದ ಆವೇಶಗಳನ್ನು ತೋರಿಸುವ ವೇದಿಕೆಯೇ ಅದಾಗಿರಲಿಲ್ಲ. ಸುಮ್ಮನೇ ಪ್ರಚೋದನೆಗೆ ಒಳಗಾಗಬಾರದು ಎಂದು ಅಮರ್ ಸಿಂಗ್ ಸಹ ಸುಮ್ಮನಾದರು. ಅಷ್ಟಕ್ಕೇ ಸುಮ್ಮನಾಗದ ಅಯ್ಯರ್, 'ನೀನು ಅವಕಾಶವಾದಿ. ಯಾರಿಗೆ ಬೇಕೋ ಅವರಿಗೆ ಫಿಟ್ ಆಗುತ್ತೀಯಾ' ಎಂದು ಕೆಣಕಿದಾಗ, 'ನೀನು ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ ಮಮತಾ ಬ್ಯಾನರ್ಜಿ ಬಳಿ ಓಡಿ ಹೋದೆ. ಅಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋದಾಗ ಮಮತಾ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದೆ' ಎಂದು ಅಮರ್ ಸಿಂಗ್ ಕಡೆಯಿಂದ ತಿರುಗೇಟು ಬಿತ್ತು. 'ನೀವು ಅಂಬಾನಿಯ ಕುನ್ನಿಗಳು' ಅಂತ ಮಣಿಶಂಕರ್ ಮತ್ತೆ ಅರಚಿದಾಗ, 'ಕಾಂಗ್ರೆಸ್ ಕೈಗಾರಿಕೋದ್ಯಮಿಗಳೊಂದಿಗೆ ಎಂಥ ಸಂಬಂಧ ಹೊಂದಿದೆ ಅಂತ ಗೊತ್ತು, ಸುಮ್ನಿರಪ್ಪಾ. ಒಟ್ಟಿನಲ್ಲಿ ಈಗ ನೀನು ಮಾತನಾಡುತ್ತಿಲ್ಲ; ನಿನ್ನೊಳಗಿನ ಸಾರಾಯಿ ಮಾತನಾಡುತ್ತಿದೆ' ಅಂತ ಅಮರ್ ಸಿಂಗ್ ವಾಗ್ಯುದ್ಧದಿಂದ ಹಿಂದೆ ಸರಿಯುವುದಕ್ಕೆ ಹೋದರು. ಈ ಮಣಿಶಂಕರ್ ಅಯ್ಯರ್ ಬಿಡಲೊಲ್ಲ! 'ನಾನು ಇಷ್ಟು ಹೇಳಿದರೂ ರೋಷ ಉಕ್ಕಿಸಿಕೊಳ್ಳದ ನೀನೆಂಥ ಠಾಕೂರ್' ಎನ್ನುವ ಮೂಲಕ ತಾನು ಬಂದಿದ್ದೇ ಜಗಳಕ್ಕೆ ಎಂಬಂತೆ ವರ್ತಿಸಿದ್ದಾರೆ ಅಯ್ಯರ್. 'ಹೀಗೆಲ್ಲ ಆಟವಾಡಿ, ನಾನು ಅಮರ್ ಸಿಂಗ್ಗೆ ನೀರಿಳಿಸಿ ಬಂದೆ ಎಂದು ಸೋನಿಯಾ ಬಳಿ ಸ್ಕೋಪ್ ತೆಗೆದುಕೊಳ್ಳುವ ನಿನ್ನ ಯೋಜನೆ ಗೊತ್ತಿದೆ ಬಿಡಪ್ಪಾ' ಅಂತ ಕುಟುಕಿದ್ದಾರೆ ಅಮರ್ ಸಿಂಗ್. 'ಸೋನಿಯಾರಿಗೆ ನಾನೆಷ್ಟು ಕ್ಲೋಸ್ ಅಂತ ಗೊತ್ತಿಲ್ಲ. ಭಾಷಣ ಬರೆದುಕೊಡೋದೇ ನಾನು. ಈ ಹಿಂದೆ ರಾಜೀವ್ಗೂ ನಾನೇ ಭಾಷಣ ಬರೆದುಕೊಡುತ್ತಿದ್ದೆ...' ಅಯ್ಯರ್ ಆರ್ಭಟ! 'ನಿನ್ನಂಥವನಿಂದ ಭಾಷಣ ಬರೆಸಿಕೊಂಡರೆ ಪಕ್ಷದ ಗತಿ ಅಷ್ಟೇ ಬಿಡು' ಎಂದು ಅಮರ್ ಸಿಂಗ್ ಕಡೆಯಿಂದ ವ್ಯಂಗ್ಯ ಸಂದಾಯವಾಗಿದೆ.
ಆಗ ಮಣಿಶಂಕರ್ ಅಯ್ಯರ್ ಮರ್ಯಾದೆಯ ಎಲ್ಲ ಮೇರೆಗಳನ್ನು ಉಲ್ಲಂಘಿಸಿ ಹೇಳಿದ ಮಾತುಗಳಿವು, 'ನಾವು ಆಕ್ಸ್ಫರ್ಡ್, ಕೇಂಬ್ರಿಡ್ಜ್ ಗುಂಪಿಗೆ ಸೇರಿದವರು. ನಿನ್ನ ಲೀಡರ್ ಮುಲಾಯಂಗೆ ಇಂಗ್ಲಿಷಿನಲ್ಲಿ ಮಾತಾಡೋಕೇ ಬರಲ್ಲ. ನೋಡೋಕೆ ನನ್ನ ಹಾಗೇ ಇದಾನೆ. ಬಹುಶಃ ನನ್ನ ಅಪ್ಪ ಹಿಂದೊಮ್ಮೆ ಉತ್ತರ ಪ್ರದೇಶಕ್ಕೆ ಹೋಗಿದ್ದಿರಬಹುದು. ನೀನೇಕೆ ಮುಲಾಯಂ ಅಮ್ಮನ ಬಳಿ ಈ ಬಗ್ಗೆ ವಿಚಾರಿಸಬಾರದು..?'
ಅಷ್ಟೇ. ಅಮರ್ ಸಿಂಗ್ ಸಹನೆಯ ಕಟ್ಟೆ ಒಡೆದಿದೆ. ನಾನೂ ಮನುಷ್ಯ. ನನ್ನ ನಾಯಕನ ತಾಯಿ ಬಗ್ಗೆ ಅಷ್ಟು ನೀಚತನದಿಂದ ಮಾತನಾಡಿದರೆ ಇನ್ನೇನು ಮಾಡೋದು ಅಂದಿದ್ದಾರೆ. ಇಂಥವರನ್ನು ಸಮಾರಂಭಗಳಿಗೆ ಕರೆಯಬೇಡಿ; ಕರೆದರೂ 2 ಪೆಗ್ಗಿಂತ ಹೆಚ್ಚು ಹೆಂಡ ಕೊಡಬೇಡಿ ಎಂಬುದು ಸಿಂಗ್ ಸಲಹೆ.
ಇದೀಗ, ಮೋದಿ ಹಾವು-ಚೇಳು- ಹಿಟ್ಲರ್ ಅಂತೆಲ್ಲ ಎಗರಾಡುತ್ತಿರುವ ಮಣಿ ಶಂಕರ್ ಅಯ್ಯರ್ ಮುಖವನ್ನು ಮಾಧ್ಯಮದಲ್ಲಿ ನೋಡಿದಾಗ ಹೀಗೊಂದು ಹಿಂದಿನ ಪ್ರಕರಣ ನೆನಪಿಸಿಕೊಳ್ಳಬೇಕೆನಿಸಿತು.
- ಗೌತಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

