ಆಗಬೇಕಿದೆ ಸ್ತ್ರೀವಾದಿ ಚಿಂತನೆಯ ಮರುವ್ಯಾಖ್ಯಾನ
ನಾವೆಲ್ಲಾ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಆದರೆ ಕಳೆದ ತಿಂಗಳು ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಮೇಲಧಿಕಾರಿಗಳ, ಸಹೋದ್ಯೋಗಿಗಳ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ದುರಂತ ನಡೆದು ಹೋಗಿದೆ. ಇದು ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿ ತಲೆತಗ್ಗಿಸುವಂತೆ ಮಾಡಿದೆ. ಅದರಲ್ಲೂ ಲಿಂಗ ಸಮಾನತೆ, ಮಹಿಳಾ ಸಬಲೀಕರಣ, ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಮೊದಲಾದ ವಿಷಯಗಳ ಬಗ್ಗೆ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಇಂಥ ಘಟನೆಗಳು ನಡೆದಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ.
ಟಿ. ನರಸೀಪುರ ತಾಲೂಕಿನಲ್ಲಿ ಶಿಕ್ಷಣ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದ ಎಸ್.ಪಿ. ರೂಪಾ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಯ ವಿರುದ್ಧ ಕಿರುಕುಳ ಆರೋಪ ಮಾಡಿ, ಆಲನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತ್ರವನ್ನು ಕೂಡ ಬರೆದಿಟ್ಟಿದ್ದರು. ಈ ಘಟನೆ ನಡೆದು ಒಂದು ತಿಂಗಳಾದರೂ ಈವರೆಗೆ ಆರೋಪಿಯನ್ನು ಬಂಧಿಸಿಲ್ಲ. ಅವರು ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ. ತಲೆಮರೆಸಿಕೊಂಡಿರುವ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣ ನಡೆದ ಮರುದಿನವೇ ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಟಿ. ನರಸೀಪುರ ಬಿಇಒ ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ಬಂದರು. ಆರೋಪಿಯ ವಿರುದ್ಧ ಪ್ರತಿಭಟನೆಗಳು ನಡೆದವು. ಇವುಗಳ ನಡುವೆ ಜಾತಿಯೂ ನುಸುಳಿತು. ಆರೋಪಿಯ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಮನವಿ ಸಲ್ಲಿಕೆಯೂ ನಡೆಯಿತು. ಈ ಪ್ರಕರಣದ ತನಿಖೆ ಅಲ್ಲಿಗೇ ನಿಂತು ಬಿಟ್ಟಿದೆ. ರೂಪಾ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ನಜರ್ಬಾದ್ ಪೊಲೀಸರು ಏನೂ ಮಾಡುತ್ತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಿಇಒ ವಿರುದ್ಧ ಕ್ರಮ ಬೆಂಗಳೂರು ಮಟ್ಟದಲ್ಲಿ ಆಗಬೇಕಿದೆ ಎಂದು ಅತ್ತ ಕೈತೋರಿ ಸುಮ್ಮನೆ ಕುಳಿತಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಮೈಸೂರು ತಾಲೂಕು ಜಯಪುರ ಹೋಬಳಿಯ ಅರಸನಕೆರೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಂಧ್ಯಾರಾಣಿಯೂ ಆತ್ಮಹತ್ಯೆ ಮಾಡಿಕೊಂಡರು. ಅವರು ಕೂಡ ಪತ್ರದಲ್ಲಿ ತಮ್ಮ ಸಾವಿಗೆ ಸಹೋದ್ಯೋಗಿಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರ ಕಿರುಕುಳವೇ ಕಾರಣ ಎಂದು ಬರೆದಿದ್ದಾರೆ. ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡು, ಆ ನೋವನ್ನು ನುಂಗಿಕೊಂಡು ತಾಯಿಯ ಜೊತೆ ವಾಸಿಸುತ್ತಿದ್ದರು. ಆದರೆ ಆ ಶಿಕ್ಷಕಿಯ ಬಗ್ಗೆ ಸಹೋದ್ಯೋಗಿಗಳು ನಿಂದನೆಯ ಮಾತಗಳನ್ನಾಡುತ್ತಿದ್ದರು. ಇದರಿಂದ ಅವರು ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಪುರ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ. ಕೆಲವರ ಬಂಧನವಾಗಿದೆ. ಇನ್ನೂ ಕೆಲವರು ತಲೆಮರಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕೂಡ ಎಲ್ಲಾ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ.
ಈ ಪ್ರಕರಣಗಳನ್ನು ಗಮನಿಸಿದಾಗ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸರ್ಕಾರಿ ಇಲಾಖೆಗಳಲ್ಲೂ ಕೂಡ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎನ್ನುವುದು ಸ್ಪಷ್ಟ. ಅದೂ ಅಲ್ಲದೇ ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ಶಿಕ್ಷಣ ಇಲಾಖೆಯಲ್ಲಿಯೇ ಈ ರೀತಿ ನಡೆದಿರುವುದನ್ನು ನೋಡಿದರೆ ಸಮಾಜವನ್ನು ತಿದ್ದಬೇಕಾದ ಶಿಕ್ಷಕರೇ ರಾಕ್ಷಸರಾಗುತ್ತಿದ್ದಾರೆಯೇ ಎಂಬ ಅನುಮಾನ ಕಾಡದಿರದು. ಸಹೋದ್ಯೋಗಿಗಳನ್ನು ಕುರಿತು ಅತ್ಯಂತ ಕೆಟ್ಟದಾಗಿ ಮಾತನಾಡುವ ಶಿಕ್ಷಕರು ಯಾವ ನೈತಿಕತೆ ಇಟ್ಟುಕೊಂಡು ಮಕ್ಕಳಿಗೆ ಪಾಠ ಮಾಡುತ್ತಾರೆ. ಮಕ್ಕಳಿಗೆ ಇನ್ನೆಂಥ ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ. ಪ್ರತಿಯೊಬ್ಬರ ಖಾಸಗಿ ಬದುಕನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯ. ಸಂಧ್ಯಾರಾಣಿ ಪ್ರಕರಣದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಕಿರುಕುಳ ನೀಡಿರುವವರಲ್ಲಿ ಪುರುಷರೊಂದಿಗೆ ಮಹಿಳೆಯರೂ ಕೈಜೋಡಿಸಿರುವುದು ವಿಷಾದನೀಯ.
ಇವತ್ತು ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದರೂ ಕೂಡ ಲಿಂಗ ತಾರತಮ್ಯ ಧೋರಣೆ ಹೋಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿಗೆ ಸಿಲುಕಿ ನಲುಗಿದ್ದರೆ ಸ್ವಾತಂತ್ರ್ಯ ನಂತರ ಅಸಮಾನತೆ, ಲಿಂಗ ತಾರತಮ್ಯ, ಮನೆಗೆಲಸ, ವರದಕ್ಷಿಣೆ, ಶೋಷಣೆ ಮೊದಲಾದವುಗಳಿಗೆ ಗುರಿಯಾದಳು. ಇವತ್ತಿಗೂ ಕೂಡ ಉದ್ಯೋಗಸ್ಥೆಯರೂ ಸೇರಿದಂತೆ ಎಲ್ಲಾ ಮಹಿಳೆಯರು ಗಂಡು ಮಕ್ಕಳಿಗಾಗಿ ಹಪಾಹಪಿಸುತ್ತಾರೆ. ಪರಿಣಾಮ ಲಿಂಗಾನುಪಾತದಲ್ಲಿ ಅಸಮತೋಲನ. ಸ್ತ್ರೀಯರ ಮನೋಧರ್ಮ ಬದಲಾಗಬೇಕು, ಸ್ತ್ರೀವಾದಿ ಚಿಂತನೆಯ ಮರು ವ್ಯಾಖ್ಯಾನ ಆಗಬೇಕು. ಹೆಣ್ಣನ್ನು ಗೌರವಿಸುವ ಬಗ್ಗೆ ಮಕ್ಕಳಿಗೆ ತಾಯಿ- ತಂದೆಯರು ಮನೆಯಲ್ಲಿಯೇ ನೈತಿಕ ಪಾಠ ಹೇಳಿಕೊಡಬೇಕು. ಉದ್ಯೋಗದಲ್ಲಿರುವ ಮಹಿಳೆಯರು ಕೂಡ ಇಂತಹ ಕಿರುಕುಳಗಳನ್ನು ಧೈರ್ಯವಾಗಿ ಎದುರಿಸಿ, ತಪ್ಪಿತಸ್ಥರಿಗೆ ಪಾಠ ಕಲಿಸಬೇಕು. ಇದನ್ನು ಬಿಟ್ಟು ಕೆಡುಕಿನ ಮಾತುಗಳಿಂದ ನೊಂದು ದುಡುಕಿನ ನಿರ್ಧಾರಗಳನ್ನು ಕೈಗೊಂಡು ಜೀವಕ್ಕೆ ಹಾನಿ ಮಾಡಿಕೊಳ್ಳಬಾರದು.
ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯು ಉದ್ಯೋಗ ಸ್ಥಳಗಳಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ದೂರು ಸಮಿತಿ ರಚಿಸಿದೆ. ವಿಶಾಖ ಪ್ರಕರಣದಲ್ಲಿ ಸುಪ್ರೀಕೋರ್ಟ್ ಈ ಹಿಂದೆ ಈ ರೀತಿಯ ಸಮಿತಿ ರಚಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಅದು ಪಾಲನೆಯಾಗಿರಲಿಲ್ಲ. ದೇಶ, ರಾಜ್ಯದ ವಿವಿಧೆಡೆ ವರದಿಯಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮೈಸೂರು ಜಿಲ್ಲೆಯ ಇಬ್ಬರು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಆಗಬೇಕು. ಅವರದೂ ಕೂಡ ತಪ್ಪಿಲ್ಲ ಎಂಬುದಾದಲ್ಲಿ ನ್ಯಾಯ ಸಿಗುವಂತಾಗಬೇಕು.
- ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

