ಶಾವೆಜ್, ನಿಮ್ಮ ಸಾವಿನಿಂದ ನನಗೆ ನೋವಾಗಿಲ್ಲ!
ವೆನಿಜುವೆಲಾದ ಅಧ್ಯಕ್ಷ ಹ್ಯೂಗೋ ಶಾವೆಜ್ ಕ್ಯಾನ್ಸರ್ನಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ವಿಶ್ವದ ಅತಿ ಜನಪ್ರಿಯ ಎಡಪಂಥೀಯ ನಾಯಕ ಎಂದೂ ಅವರನ್ನು ಕರೆಯಲಾಗುತ್ತದೆ. ತೈಲ ಸಂಪದ್ಭರಿತ ವೆನಿಜುವೆಲಾ ದೇಶದ ದಿಶೆಯನ್ನೇ ಬದಲಿಸಿ ಜನತೆಯ ಆಶಾಕಿರಣವಾಗಿದ್ದರು ಎಂದೆಲ್ಲಾ ಅವರ ಗುಣಗಾನ ಮಾಡಲಾಗುತ್ತಿದೆ. ಆದರೆ ಶಾವೆಜ್, ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿರುವಂತಹ ವ್ಯಕ್ತಿತ್ವ ಹೊಂದಿರಲಿಲ್ಲ, ಅವರ ಆಡಳಿತದಡಿ ವೆನಿಜುವೆಲಾದ ಜನತೆ ಎಷ್ಟು ನೋವನುಭವಿಸಿದರು ಎಂಬುದರ ಕುರಿತು 'ಫಸ್ಟ್ಪೋಸ್ಟ್' ಜಾಲತಾಣಕ್ಕೆ 'ಪಾಂಚೋ49' ಎಂಬ ಹೆಸರಿನಿಂದ ಆ ದೇಶದ ನಾಗರಿಕನೊಬ್ಬ ಲೇಖನ ಬರೆದಿದ್ದಾನೆ. ಲೇಖನದ ಆಯ್ದ ಭಾಗ ಇಲ್ಲಿದೆ...
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಹ್ಯೂಗೋ ಶಾವೆಜ್. ಒಬ್ಬ ವೆನಿಜುವೆಲಾದ ನಾಗರಿಕನಾಗಿ, ನಿಮ್ಮ ಬಹುತೇಕ ನೀತಿಗಳು ನನಗೆ ಸರಿಬರಲಿಲ್ಲ. ಆದರೆ ನಿಮ್ಮ ಸಾವನ್ನು ನೋಡಿ ನಾನು ಸಂತಸ ಪಡುವುದಿಲ್ಲ. ನಿಮ್ಮ ಬೆಂಬಲಿಗರು ಮತ್ತು ನಿಮ್ಮ ಮನೆಯವರಿಗಾಗಿರುವ ನೋವಿಗೆ ನನ್ನ ಸಾಂತ್ವನವಿದೆ. ನೀವು ಕೈಗೊಂಡು ಪ್ರತೀ ಕಾರ್ಯವನ್ನೂ ವಿರೋಧಿಸಿದವನು ನಾನಲ್ಲ. ಆದರೂ ನಾನು ನಿಮ್ಮನ್ನು ಏಕೆ ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುವುದಕ್ಕೆ 10 ಕಾರಣಗಳನ್ನು ಕೊಡಲು ಬಯಸುತ್ತೇನೆ:
1)ನಿಮ್ಮ ನಿರಂಕುಶ ಆಡಳಿತ(ವೆನಿಜುವೆಲಾದ ಬಹುತೇಕ ನಾಗರಿಕರಲ್ಲಿ ಇರುವ ಗುಣವನ್ನೇ ಅದು ಪ್ರತಿಬಿಂಬಿಸುತ್ತಿತ್ತು) ಮತ್ತು ರಾಜಕೀಯ ವಿರೋಧಿಗಳೊಂದಿಗೆ ಪ್ರಾಮಾಣಿಕ ಮಾತುಕತೆಯಾಡುವಲ್ಲಿ ನೀವು ತೋರಿಸುತ್ತಿದ್ದ ಅಸಡ್ಡೆ. ನಿಮ್ಮ ರಾಜಕೀಯ ಮಾದರಿಯನ್ನು ಒಪ್ಪುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸಾವಿನ ಹಾಸಿಗೆಯಲ್ಲಿದ್ದಾಗಲೂ ಕೂಡ ನೀವು ಸುಪ್ರೀಂ ಕೋರ್ಟ್ ನ್ಯಾಯಾಧೀಶಳನ್ನು ಆ ಸ್ಥಾನದಿಂದ ಕಿತ್ತೆಸೆದಿರಿ.
2)ಕಾನೂನಿಗೆ ನೀವು ತೋರುತ್ತಿದ್ದ ಅಗೌರವ. 1999ರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಪನರ್ರಚಿಸಿದಿರಿ, ಅಲ್ಲದೆ ನೀವೇ ಆ ನಿಯಮವನ್ನೆಲ್ಲ ಪ್ರತಿ ಹೆಜ್ಜೆಯಲ್ಲೂ ಮುರಿಯುತ್ತಾ ಹೋದಿರಿ. ನಿಮ್ಮ ಈ ನಡೆಯೇ ರಾಷ್ಟ್ರದಲ್ಲಿ ಅಪರಾಧ ಹೆಚ್ಚುವುದಕ್ಕೆ ಕಾರಣವಾಯಿತು. ಇದೇ ಕಾರಣದಿಂದಾಗಿಯೇ ಕಳೆದ ಹದಿನಾಲ್ಕು ವರ್ಷಗಳಲ್ಲಿ ನಮ್ಮಲ್ಲಿ ನರಹತ್ಯೆಯ ಸಂಖ್ಯೆ ಮೂರು ಪಟ್ಟು ಹೆಚ್ಚಾಯಿತು. ನ್ಯಾಯಾಧೀಶರುಗಳೆಲ್ಲ ನಿಮ್ಮ ಪರ ರಾಜಕೀಯ ನಿಷ್ಠೆಯನ್ನು ತೋರಿಸುವುದರಲ್ಲೇ ಮಗ್ನರಾಗಿದ್ದರಿಂದ, ಕೇವಲ 11 ಪ್ರತಿಶತ ಅಪರಾಧ ಪ್ರಕರಣಗಳಿಗಷ್ಟೇ ಶಿಕ್ಷೆ ಜಾರಿಯಾಯಿತು.
3)ನಿಮ್ಮ ಬೂಟಾಟಿಕೆ ಮತ್ತು ಜನತೆಯ ಮನಸ್ಸಿನಲ್ಲಿ ನೀವು ಅವರಿಗೋಸ್ಕರವೇ ಬದುಕುತ್ತಿದ್ದೀರಿ ಎನ್ನುವಂತೆ ಹುಸಿ ನಂಬಿಕೆ ಹುಟ್ಟಿಸಿದ್ದು. ಕಳೆದ ಹದಿನಾಲ್ಕು ವರ್ಷಗಳಲ್ಲಿ ಯಾವ ಅಭಿವೃದ್ಧಿಯೂ ನಮ್ಮಲ್ಲಾಗಿಲ್ಲ. ಆಸ್ಪತ್ರೆಗಳಲ್ಲಿ ಮೂಲಸೌರ್ಕರ್ಯಗಳಿಲ್ಲ, ರೋಗಿಯೊಬ್ಬ ಆಸ್ಪತ್ರೆಗೆ ಹೋದನೆಂದರೆ ಔಷಧಿ, ಸರ್ಜಿಕಲ್ ಗ್ಲೌಸ್ ಮತ್ತು ಮಾಸ್ಕ್ ಅನ್ನು ತಾನೇ ಒಯ್ಯಬೇಕಾದಂತಹ ವಾತಾವರಣ. ಸತ್ಯವೇನೆಂದರೆ, ಎಲ್ಲವನ್ನೂ ಸರಿಪಡಿಸುವ ಬದಲು ನಿಮ್ಮ ಡೊಳ್ಳನ್ನು ನೀವೇ ಬಾರಿಸಿಕೊಳ್ಳುವುದರಲ್ಲೇ ನಿರತರಾಗಿದ್ದು ಈ ಅನಾಹುತಗಳಿಗೆ ಕಾರಣವಾಯಿತು.
4) ನಿಮ್ಮ ಸರ್ಕಾರದಲ್ಲಿನ ಎಲ್ಲೆ ಮೀರಿದ ಭ್ರಷ್ಟಾಚಾರ. ನಿಮ್ಮ ಹಿಂದಿನ ಸರ್ಕಾರಗಳೂ ಭ್ರಷ್ಟಾಚಾರವೆಸಗಿದ್ದವು ಎನ್ನುವುದೇನೋ ನಿಜ, ಆದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರದಲ್ಲಿದ್ದಾಗ ಅದರ ಹಳವಂಡಗಳೆಲ್ಲ ಹೊರಗೆ ಬರುವುದಿಲ್ಲ. ಅದರ ನಂತರ ಬಂದ ಸರ್ಕಾರದಿಂದ ಈ ವಿಷಯಗಳೆಲ್ಲ ಹೊರಬರುತ್ತವೆ. ಆದರೆ ನಿಮ್ಮ ಅವಧಿಯಲ್ಲಂತೂ, ಅಬ್ಬಬ್ಬ! ಕೋಟ್ಯಂತರ ರುಪಾಯಿಗಳು ಎಲ್ಲರ ಕಣ್ಮುಂದೆ ಕ್ಷಣಾರ್ಧದಲ್ಲಿ ಮಾಯವಾಗತೊಡಗಿದವು. ಆದರೆ ನೀವು ಮಾಡಿದ್ದೇನು? ನಿಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಹೊರಗೆಡವಿದ ಮಾಧ್ಯಮಗಳ ಮೇಲೇ ದಾಳಿ ಮಾಡಿದಿರಿ!
ಭ್ರಷ್ಟಾಚಾರದ ವಿಷಯವಾಗಿ ದೋಷಿಗಳೆಂದು ಪರಿಗಣಿಸಲ್ಪಟ್ಟವರು, ನಿಮ್ಮ ವಿರೋಧಿಗಳು ಮಾತ್ರ. ಉದಾಹರಣೆಗೆ ಲಿಯೋಪೋಲ್ಡೋ ಲೋಪೆಜ್. ಅವರನ್ನು ದೋಷಿ ಎಂದು ಯಾವ ನ್ಯಾಯಾಲಯವೂ ತೀರ್ಪು ನೀಡಲಿಲ್ಲ, ಆದರೆ ನೀವು ಮಾತ್ರ ಅವರು ಕಚೇರಿಯಲ್ಲಿರದಂತೆ ಮಾಡಿದಿರಿ. ಅವರ ಅಪರಾಧವಾದರೂ ಏನು? ಬೇರೇ ಖರ್ಚಿಗಾಗಿ ಮೀಸಲಿಟ್ಟಿದ್ದ ಬಜೆಟ್ನ ಹಣವನ್ನು ಶಿಕ್ಷಕರು ಮತ್ತು ಅಗ್ನಿಶಾಮಕದಳದವರ ಸಂಬಳವಾಗಿ ಕೊಟ್ಟದ್ದು(ಏಕೆಂದರೆ ಸೂಕ್ತ ನಿಧಿಯನ್ನು ನಿಮ್ಮ ಸರ್ಕಾರ ತಡೆಹಿಡಿದಿತ್ತು).
5) ಅವಕಾಶಗಳನ್ನು ಕೈ ಜಾರಲು ಬಿಟ್ಟಿದ್ದು. ನೀವು ಕಚೇರಿಗೆ ಕಾಲಿಟ್ಟಾಗ, ನಮ್ಮಲ್ಲಿ ತೈಲದ ಬೆಲೆ 9.30 ಡಾಲರ್ಗಳಷ್ಟಿತ್ತು, ಆದರದು 2008ರ ವೇಳೆಗೆ 126.33 ಡಾಲರ್ಗಳಿಗೆ ಏರಿತು. ಖಜಾನೆಯಲ್ಲಿದ್ದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬಹುದಿತ್ತು. ಆದರೆ ಅದನ್ನೆಲ್ಲ ಭ್ರಷ್ಟಾಚಾರಕ್ಕೆ, ಮತ ಮತ್ತು ಶಸ್ತ್ರಾಸ್ತ್ರ ಖರೀದಿಸುವುದಕ್ಕೆ ದುರ್ಬಳಕೆ ಮಾಡಿಕೊಂಡಿರಿ. ನೀವು ಹಾಳು ಮಾಡಿದ ಹಣವನ್ನು ಸದ್ಬಳಕೆ ಮಾಡಿಕೊಂಡಿದ್ದರೆ, ಇಂದು ವೆನಿಜುವೆಲಾದಲ್ಲಿ 10.7 ಪ್ರತಿಶತ ಜನ ಅತಿ ಬಡತನದಿಂದ ಬಳಲುವಂತಾಗುತ್ತಿರಲಿಲ್ಲ.
6)ಖಾಸಗಿ ಸ್ವತ್ತು ಮತ್ತು ಉದ್ಯಮಗಳ ಮೇಲಿನ ದಾಳಿ. ನೂರಾರು ಖಾಸಗಿ ಕಂಪನಿಗಳನ್ನು ರಾಷ್ಟ್ರೀಕೃತಗೊಳಿಸಿ ಅವುಗಳೆಲ್ಲ ದಿವಾಳಿಯಾಗುವಂತೆ ಮಾಡಿದಿರಿ. ಹಾಗೆ ನೋಡಿದರೆ ನೀವು ಕಮ್ಯುನಿಸ್ಟ್ ಅಲ್ಲ ಅಥವಾ ಸಮಾಜವಾದಿಯೂ ಅಲ್ಲ. ಆದರೆ ನಿಮ್ಮನ್ನು ಎದುರಿಸುವಂತಹ ಅಧಿಕಾರ ಯಾರ ಬಳಿಯೂ ಇರಬಾರದೆಂಬ ಪುಕ್ಕಲುತನ ಹೀಗೆ ಮಾಡಿಸಿತು. ಒಂದು ವೇಳೆ ಎಲ್ಲರೂ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಅವರನ್ನೆಲ್ಲ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು, ವಿರೋಧ ಪಕ್ಷಗಳನ್ನು ಪರದಾಡುವಂತೆ ಮಾಡಬಹುದು ಎಂಬ ದುರಾಲೋಚನೆಯೂ ಅದರೊಟ್ಟಿಗಿತ್ತು.
7)ಮಾನವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗು. ನಿಮ್ಮ ಸರ್ಕಾರದ ವಿರುದ್ಧ ಕಟು ವಿಮರ್ಶೆಗಳಿಂದ 30 ಹೆಚ್ಚು ರೇಡಿಯೋ ಚಾನೆಲ್ಗಳು ಮುಚ್ಚಿಹೋದವು. ಪ್ರಿಂಟಿಂಗ್ ಪೇಪರ್ಗಳ ಖರೀದಿಗಾಗಿ ಪತ್ರಿಕೆಗಳಿಗೆ ವಿದೇಶಿ ಕರೆನ್ಸಿ ಪಡೆಯುವುದರ ಮೇಲೆ ನಿರ್ಭಂಧ ಹೇರಿದ್ದೂ ಆಯಿತು (ನಿಮ್ಮ ಆಜ್ಞೆಯಿಲ್ಲದೆ ಜನತೆಯೂ ಕೂಡ ವಿದೇಶಿ ಕರೆನ್ಸಿಯನ್ನು ಮುಟ್ಟುವಂತಿರಲಿಲ್ಲ), ವಿಚಾರಣೆಯೇ ನಡೆಸದಿದ್ದರಿಂದ ವರ್ಷಗಳವರೆಗೆ ನಿಮ್ಮ ವಿರೋಧಿಗಳು ಜೈಲಿನಲ್ಲಿ ಒದ್ದಾಡಿದರು, ನೇರ ಮತದಾನ ಪ್ರಕ್ರಿಯೆಯನ್ನು ಮತ್ತೊಮ್ಮೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪಿಟೀಷನ್ಗೆ ಸಹಿ ಹಾಕಿದ ಸಾವಿರಾರು ಸರ್ಕಾರಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೆಸೆದದ್ದಷ್ಟೇ ಅಲ್ಲದೆ ಅವರಿಗೆ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ಸಿಗದಂತೆ ಮಾಡಿದಿರಿ.
8) ವೆನಿಜುವೆಲಾದ ಸಾರ್ವಭೌಮತ್ವದ ಬಗೆಗಿನ ನಿಮ್ಮ ಬೂಟಾಟಿಕೆ. ಅಮೆರಿಕನ್ನರನ್ನು ದೇಶದಿಂದ ಕಿತ್ತೋಡಿಸಿದ ನಂತರ ಕ್ಯೂಬನ್ನರು, ರಶಿಯನ್ನರು, ಚೀನಿಯರು ಮತ್ತು ಇರಾನಿಯರಿಗೆ ರತ್ನಗಂಬಳಿ ಹಾಸಿದಿರಿ. ವೆನಿಜುವೆಲಾದ ಸೇನೆಗೆ ಕ್ಯುಬಾದ ಅಧಿಕಾರಿಗಳು ಆಜ್ಞೆ ಕೊಡತೊಡಗಿದರು. ಚೀನಾದ ತೈಲ ಕಂಪನಿಗಳು ಉಳಿದ ಯಾವುದೇ ಪಾಶ್ಚಾತ್ಯ ಕಂಪನಿಗಳಿಗಿಂತ ಹೆಚ್ಚು ಲಾಭ ಮಾಡಿಕೊಳ್ಳತೊಡಗಿದವು. ಅಲ್ಲದೆ ಜನರ ಮಾರಣಹೋಮ ನಡೆಸುವ ಪಕ್ಷಗಳೊಂದಿಗೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತೇವೆ ಎನ್ನುವುದನ್ನು ಸ್ಪಷ್ಟಪಡಿಸಿದಿರಿ.
9) ಹಿಂಸಾಚಾರದ ಬಗ್ಗೆ ನೀವು ಹರಿಸಿದ ಮೊಸಳೆ ಕಣ್ಣೀರು. ನಾವು ಮಾಡುತ್ತಿರುವುದು ಶಾಂತಿಯುತ ಕ್ರಾಂತಿ ಎಂದು ಸೋಗು ಹಾಕುತ್ತಾ ತುಪಾಮಾರೋ, ಲಾ ಪೈಡ್ರಿಟಾ ಮತ್ತು ಎಫ್ಬಿಎಲ್ಎನ್ ನಂತಹ ಕ್ರೂರ ಸಶತ್ರ ಗುಂಪುಗಳಿಗೆ ಶಸ್ತ್ರಾಸ್ತ ಪೂರೈಸಿದಿರಿ. ನಿಮ್ಮಿಂದಾಗಿ ರಶಿಯನ್ನರು ವೆನಿಜುವೆಲಾದಲ್ಲಿ ಕಲಾಶ್ನಿಕೋವ್ ಘಟಕವನ್ನು ತೆರೆದರು. ಅಮೆರಿಕದ ಯುದ್ಧ ವೈಖರಿಯನ್ನು ಮೊದಲಿನಿಂದಲೂ ನಿಂದಿಸುತ್ತಾ ಬಂದ ನೀವು, ಹತ್ಯೆ ಮತ್ತು ಮಾದಕ ವಸ್ತು ಸಾಗಣೆಯನ್ನೇ ಬದುಕಾಗಿಸಿಕೊಂಡಿರುವ ಕೊಲಂಬಿಯನ್ ಗೆರಿಲ್ಲಾಗಳಿಗೆ ಯತೇಚ್ಛವಾಗಿ ಬಾಂಬು, ಗನ್ನುಗಳ ಸರಬರಾಜು ಮಾಡಿದಿರಿ.
10)ಪ್ರಜಾಪ್ರಭುತ್ವದ ಮೇಲಿನ ನಿಮ್ಮ ಹುಸಿ ಪ್ರೇಮ. ವಿರೋಧ ಪಕ್ಷಗಳನ್ನು ಅಪಮಾನಿಸುವುದಕ್ಕೆ ದಂಗೆಕೋರರು (್ಛ್ಟ್ಡಠ್ಝಡಡಿಡ) ಎಂಬ ಪದ ಬಳಸುತ್ತಿದ್ದಿರಿ. ಆದರೆ 1992 ನೀವೇ ಆ ಪ್ರಯತ್ನ ಮಾಡಿದ್ದಿರಲ್ಲ? ನಿಮ್ಮ ಆಡಳಿತದಲ್ಲಿ ಪ್ರಜಾಪ್ರಭುತ್ವವೆನ್ನುವ ಪದ ತನ್ನ ಅರ್ಥವನ್ನೇ ಕಳೆದುಕೊಂಡು ಬಿಟ್ಟಿತ್ತು: ನ್ಯಾಷನಲ್ ಅಸೆಂಬ್ಲಿ ಮತ್ತು ರಾಜ್ಯ ಸರ್ಕಾರಗಳಲ್ಲಿನ ಅಭ್ಯರ್ಥಿಗಳನ್ನೆಲ್ಲ ನೀವೇ ಆಯ್ಕೆ ಮಾಡಿದ್ದು. 2007ರಲ್ಲಿ ವಿರೋಧ ಪಕ್ಷ ಜನಮತಸಂಗ್ರಹದಲ್ಲಿ ಗೆದ್ದಾಗ, ಫಲಿತಾಂಶಕ್ಕೆ ಅಸಮ್ಮತಿ ಸೂಚಿಸಿ, ನೀವೇ ಎಷ್ಟು ಬಾರಿ ಬೇಕಾದರೂ ಅಧಿಕಾರಕ್ಕೆ ಬಂದು ಕೂರುವಂತೆ ಸಂವಿಧಾನವನ್ನು ಬದಲಾಯಿಸಿದಿರಿ! 2010ರಲ್ಲಿ ವಿರೋಧ ಪಕ್ಷಕ್ಕೆ 51 ಪ್ರತಿಶತಕ್ಕೂ ಹೆಚ್ಚು ಮತ ಸಿಕ್ಕರೂ, ಚುನಾವಣೆಯಲ್ಲಿ ಮಾರ್ಪಾಡು ಮಾಡಿ ಅವರು ಅಧಿಕಾರಕ್ಕೇರದಂತೆ ನೋಡಿಕೊಂಡಿರಿ. ನಿಮ್ಮ ನೀತಿ, ನಿಯಮಗಳೇನಿದ್ದರೂ ಪೇಪರ್ಗಳ ಮೇಲಷ್ಟೇ ಸತ್ಯವಾಗಿದ್ದವು, ಎಲ್ಲಾ ಸಂಸ್ಥೆಗಳೂ ನಿಮ್ಮ ಕೈಗೊಂಬೆಯಾಗಿ ಹೋಗಿದ್ದವು. ಹಾಗಾಗೆ ಹ್ಯೂಗೋ, ನಾನು ಖಂಡಿತ ನಿಮ್ಮನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನೀವು ಸೃಷ್ಟಿಸಿ ಹೋದ ಹೊಲಸನ್ನು ನಾವೆಲ್ಲ ಸ್ವಚ್ಛಗೊಳಿಸುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

