ಅತ್ಯಾಚಾರದ ಪ್ರಮುಖ ಆರೋಪಿ ರಾಮ್ಸಿಂಗ್ ದೆಹಲಿಯ ತಿಹಾರ್ ಜೈಲಿನಲ್ಲಿ ಸೋಮವಾರದಂದು ನೇಣು ಬಿಗಿದುಕೊಂಡು ಸತ್ತಿದ್ದಾನೆ. ಈ ಬಗ್ಗೆ ತನಿಖೆಯೂ ಶುರುವಾಗಿದೆ. ಈಗ ಆತನ ಸಾವಿನ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗತೊಡಗಿದೆ. ಆದರೆ ಈ ಸಮಯದಲ್ಲಿ ಸಂತ್ರಸ್ತೆಯ ಕುಟುಂಬದ ಬಗ್ಗೆ ಯಾರಿಗೂ ನೆನಪಾಗುತ್ತಿಲ್ಲ. ಗಾರ್ಡಿಯನ್ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಕತ್ತಲೆಯಲ್ಲಿ ಕಳೆದುಹೋಗಿರುವ ಆ ಕುಟುಂಬದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದೆ:
'ದೆಹಲಿಯಲ್ಲಿ ದಿನವೂ ನೂರಾರು ಕುಟುಂಬಗಳು ಹೆಚ್ಚು ಅನುಕೂಲಕರ ಮನೆಗಳಿಗೆ ಶಿಫ್ಟ್ ಆಗುತ್ತವೆ. ಆದರೆ ಎರಡು ರೂಮುಗಳ ಚಿಕ್ಕ ಮನೆಯಿಂದ, 24 ಗಂಟೆ ನೀರು ಮತ್ತು ವಿದ್ಯುತ್ ಸೌಲಭ್ಯವಿರುವ ಮನೆಗೆ ಸ್ಥಳಾಂತರವಾಗುತ್ತಿದ್ದರೂ ಒಂದು ಕುಟುಂಬದ ಮುಖದಲ್ಲಿ ಮಾತ್ರ ಸಂತೋಷವೇ ಇಣುಕುತ್ತಿಲ್ಲ. ಇದು ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ನಿರ್ಭಯಾಳ ಕುಟುಂಬ. ಆಕೆ ಸತ್ತು ಈ ವಾರಕ್ಕೆ ಮೂರು ತಿಂಗಳಾಗುತ್ತದೆ. ಸರ್ಕಾರ ಆಕೆಯ ಕುಟುಂಬಕ್ಕೆ 'ಪರಿಹಾರ'ವಾಗಿ ಈ ಮನೆಯನ್ನು ಕೊಟ್ಟಿದೆ. "ನಾನು ಆಸ್ಪತ್ರೆಗೆ ಹೋದಾಗ ಆಕೆಯನ್ನು ಸ್ಟ್ರೆಚರ್ ಮೇಲೆ ಮಲಗಿಸಿದ್ದರು. ಬಹುಶಃ ಪ್ರಜ್ಞೆಯಿಲ್ಲವೇನೋ ಎಂದುಕೊಂಡು ಹಣೆಯ ಮೇಲೆ ಕೈಯಾಡಿಸಿದೆ. ಮೆಲ್ಲಗೆ ಕಣ್ತೆರೆದು, ಬಿಕ್ಕಳಿಸತೊಡಗಿದಳು ಎಂದೆಲ್ಲಾ ಭಯಾನಕ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.'
-----
'ಬಡತನದಿಂದ ಕಂಗೆಟ್ಟಿದ್ದ ನಿರ್ಭಯಾಳ ತಂದೆ, ಉತ್ತರ ಪ್ರದೇಶದ ಚಿಕ್ಕ ಹಳ್ಳಿಯೊಂದರಿಂದ ಕೆಲಸ ಅರಸಿಕೊಂಡು ದೆಹಲಿಗೆ ಬಂದವರು. ನಿರ್ಭಯಾ ಹುಟ್ಟಿದ್ದು ದೆಹಲಿಯಲ್ಲಿಯೇ. ಮೊದಲು ಹಲವಾರು ಕಾರ್ಖಾನೆಗಳಲ್ಲಿ ಕೂಲಿಯಾಗಿ ದುಡಿದ ಅವರು ನಂತರ ಖಾಸಗಿ ವಿಮಾನ ನಿಲ್ದಾಣವೊಂದರಲ್ಲಿ ಲೋಡರ್(ಸಾಮಾನು ಸಾಗಿಸುವವ) ಆಗಿ ಕೆಲಸ ಮಾಡಿದರು. ದಿನಕ್ಕೆ 16 ತಾಸು ದುಡಿದರೆ 200 ರುಪಾಯಿ ಸಿಗುತ್ತಿತ್ತು. ಮಗಳನ್ನು ಫಿಸಿಯೋಥೆರಪಿ ಶಿಕ್ಷಣಕ್ಕೆ ಸೇರಿಸುವುದಕ್ಕಾಗಿ ಊರಿನಲ್ಲಿದ್ದ ತಮ್ಮ ಚಿಕ್ಕ ಜಮೀನನ್ನು ಮಾರಿ 45,000 ಕಲೆಹಾಕಿದರು. ಈ ಖರ್ಚನ್ನು ಸರಿದೂಗಿಸಲು ನಿರ್ಭಯಾ, ಕಾಲ್ಸೆಂಟರ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡತೊಡಗಿದಳು. ಓದಿಗೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಆ ಚಿಕ್ಕ ಮನೆಯಲ್ಲೇ ಪ್ರತ್ಯೇಕ ಕೋಣೆಯನ್ನು ತಂದೆ ಆಕೆಗೆ ಬಿಟ್ಟುಕೊಟ್ಟರು.
ಆದರೆ ನಿರ್ಭಯಾ ಸತ್ತ ನಂತರ ಆ ಕುಟುಂಬದ ಚಿತ್ರಣವೇ ಬದಲಾಗಿದೆ. ಕನಸಿನಲ್ಲೂ ಊಹಿಸಿರದ ಮನೆಯೊಂದಕ್ಕೆ ಅವರು ಶಿಫ್ಟ್ ಆಗುತ್ತಿದ್ದಾರೆ. ಮೂರು ರಾಜ್ಯಗಳು ಈಗ ಆ ಕುಟುಂಬಕ್ಕೆ ಒಟ್ಟು 50 ಸಾವಿರ ಪಾಂಡ್ಗಳಷ್ಟು ಮೌಲ್ಯದ ಹಣ ನೀಡಿವೆ. ಈ ಹಿಂದೆ ಅವರಿಗೆ 100 ಪೌಂಡ್ಗಿಂತಲೂ ಹೆಚ್ಚು ಹಣ ಉಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ನಿರ್ಭಯಾಳ ಕಿರಿಯ ಸಹೋದರನಿಗೆ ಈಗ ಭಾರತೀಯ ರೇಲ್ವೆಯಲ್ಲಿ ಚಿಕ್ಕ ನೌಕರಿ ಸಿಕ್ಕಿದೆ.
ನಿರ್ಭಯಾ ಆಡಿ, ಬೆಳೆದ ಮನೆಗೆ ಹತ್ತಿರದಲ್ಲೇ ಇರುವ ಅಪಾರ್ಟ್ಮೆಂಟನ್ನು ಆ ದಂಪತಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ಬಟ್ಟೆ, ಬುಕ್ಕುಗಳನ್ನೆಲ್ಲ ಪ್ಯಾಕಿಂಗ್ ಮಾಡಿಕೊಂಡು ಹೊಸಮನೆಗೆ ಹೋಗಲು ಸಿದ್ಧರಾಗಿದ್ದಾರೆ. 'ಸರ್ಕಾರ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ವಿಧಿಸಲಿದೆ ಎನ್ನುವ ನಂಬಿಕೆ ನನಗಿದೆ. ಅವರನ್ನು ಈಗಲೇ ಕೊಂದು ಬಿಡಬೇಕು ಅನ್ನಿಸುತ್ತೆ, ಆದರೆ ನಾನು ಅಸಹಾಯಕ' ಎಂದು ಕಣ್ಣೀರಿಡುವ ನಿರ್ಭಯಾಳ ತಂದೆ, ಒಂದು ನಿಮಿಷ ಸುಮ್ಮನಾಗಿ ನಂತರ -'ಅವಳು ತುಂಬಾ ಒಳ್ಳೆಯ ಹುಡುಗಿಯಾಗಿದ್ದಳು' ಎಂದು ಮಗಳನ್ನು ನೆನಪಿಸಿಕೊಂಡು ನಿಟ್ಟುಸಿರುಬಿಟ್ಟರು.'