ನಮ್ಮ ಬೆಂಗಳೂರಿಗರಿಗೆ ನಮಿಸುವ ಸಮಯ

Updated on: 

ಕಳೆದ ಕೆಲವು ವರ್ಷಗಳಿಂದ, ಬೆಂಗಳೂರು ನಗರದಲ್ಲಿ ಹಲವು ಬಗೆಗಳಿಂದ ಸೇವೆ ಸಲ್ಲಿಸುತ್ತಿರುವ ಅಜ್ಞಾತ ನಾಗರಿಕ ಬಂಧುಗಳನ್ನು, ವಾರ್ಷಿಕ ಪ್ರಶಸ್ತಿಗಳ ಮೂಲಕ 'ನಮ್ಮ ಬೆಂಗಳೂರು ಪ್ರತಿಷ್ಠಾನ' ಗುರುತಿಸಿ ಗೌರವಿಸುತ್ತಿದೆ. ಪ್ರಶಸ್ತಿಗಳು ಆರಂಭವಾದಾಗಿನಿಂದಲೂ ನಾನು ತೀರ್ಪುಗಾರರ ಸಮಿತಿಯಲ್ಲಿರುವುದರಿಂದ ಬೆಂಗಳೂರಿನ ಅನೇಕ ವಿಶಿಷ್ಟ ಸಾಧಕರ ಬಗ್ಗೆ ತಿಳಿದುಕೊಂಡಿರುವುದಷ್ಟೆ ಅಲ್ಲದೆ ಕೆಲವೊಮ್ಮೆ ಅಂತಹವರ ಜೊತೆ ಕೆಲಸ ಮಾಡುವ ಸದವಕಾಶವನ್ನು ಪಡೆದಿದ್ದೇನೆ.

ಮೊದಲ ಕಂತಿನಲ್ಲಿ ಪ್ರಶಸ್ತಿಗಳಿಗಾಗಿ ಕೆಲವು ಸಾವಿರ ನಾಮ ನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಮುಂದಿನ ಎರಡು ವರ್ಷಗಳಲ್ಲಿ ಸುಮಾರು 14,000 ನಾಮನಿರ್ದೇಶನಗಳು ಲಭಿಸಿದ್ದರೆ, ಈ ಬಾರಿ 61,000 ನಾಮನಿರ್ದೇಶನಗಳು ಸಲ್ಲಿಕೆಯಾಗಿವೆ. ಈ ಪ್ರಶಸ್ತಿಗಳು ಜನಮನ್ನಣೆಗಳಿಸಿರುವುದು ಸ್ಪಷ್ಟ ಮತ್ತು ಇದರ ಕುರಿತಾಗಿ ಬೆಳೆಯುತ್ತಿರುವ ಸಾರ್ವಜನಿಕರ ಆಸಕ್ತಿ ನಿಜಕ್ಕೂ ಹೃದಯಸ್ಪರ್ಷಿಯಾಗಿದೆ.

ಒಂದು ನಗರವೆಂದರೆ ಕೇವಲ ಅಲ್ಲಿನ ನೆರೆಹೊರೆಗಳ ಸಮಷ್ಟಿಯಲ್ಲ, ನಾಗರಿಕರ ಮತ್ತು ಸರ್ಕಾರದ ಒಟ್ಟುಗೂಡಿಕೆಯಷ್ಟನ್ನೆ ಒಂದು ನಗರವೆನ್ನಲಾಗುವುದಿಲ್ಲ. ಸುಮಾರು ಒಂದು ಕೋಟಿ ಜನಸಂಖ್ಯೆಯುಳ್ಳ ಯಾವುದೇ ಮಹಾನಗರದಲ್ಲಿ ಅನುದಿನವೂ ಅನೇಕ ರೀತಿಯ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ. ನಮ್ಮ ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಈ ಎಲ್ಲ ಗಲಿಬಿಲಿ ಗದ್ದಲಗಳ ನಡುವೆಯೂ ಬೆಂಗಳೂರು ನಗರದಲ್ಲಿ ಮಹತ್ತರವಾದ ಸಾಧನೆಗಳು ಸಂಭವಿಸುತ್ತಿವೆ. ಈ ಸಾಧನೆಗಳ ಹಿಂದಿರುವ ಸಾವಿರಾರು ಸಹೃದಯ ನಾಗರಿಕರ ಶ್ರಮವನ್ನು ನಾವು ಗಮನಿಸಬೇಕು.

ನಮ್ಮ ನಗರದಲ್ಲಿ ನಗರಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅದೆಷ್ಟೋ ಸಾಧಕರು ಸದ್ದಿಲ್ಲದೆ, ಅರ್ಹ ಮನ್ನಣೆಯನ್ನೂ ಬಯಸದೆ ತಮ್ಮ ಸೇವಾ ಕಾಯಕದಲ್ಲಿ ತಲ್ಲೀನರಾಗಿದ್ದಾರೆ - ಅನಾಥ ಮಕ್ಕಳನ್ನು, ನಿರ್ಗತಿಕ ವಯೋವೃದ್ಧರನ್ನು ನೋಡಿಕೊಳ್ಳುವವರಿದ್ದಾರೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕೊಡುವವರಿದ್ದಾರೆ.  ಆದರ್ಶ ಸರ್ಕಾರಿ ಅಧಿಕಾರಿಗಳಿದ್ದಾರೆ ಸಮಸ್ಯೆಗಳಿಗೆ ವಿನೂತನ ಪರಿಹಾರಗಳನ್ನು ಕಲ್ಪಿಸುವ ಇಂತಹ ಅನೇಕ ಸಾಧಕರು ನಮ್ಮ ನಡುವೆಯೇ ಇದ್ದಾರೆ. ಅವರ ಶ್ರಮ ಮತ್ತು ಸಾಧನೆಗಳೇ ನಮ್ಮ ನಗರವನ್ನು ನಮಗೆ ಇನ್ನೂ ಹೆಚ್ಚು ಆತ್ಮೀಯವನ್ನಾಗಿಸುತ್ತಿದೆ. ಆದರೆ ಅವರಿಂದ ನಾವು ಉಪಕೃತರಾಗುತ್ತಿದ್ದೇವೆ ಎಂಬ ಪರಿವೆಯೇ ನಮಗಿಲ್ಲ.

ಇತ್ತೀಚಿನ ದಿನಗಳಲ್ಲಿ ನಮ್ಮ ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸಮಾಡಬೇಕೆನ್ನುವ ಸಂಸ್ಕೃತಿ ಬೆಳೆಯುತ್ತಿರುವುದು ಬಹಳ ಒಳ್ಳೆಯ ಲಕ್ಷಣ. ಭಾರತದ ಪರಿವರ್ತನೆಯ ಈ ಯುಗದಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ. ಈಗ ಭವಿಷ್ಯ ಭಾರತದ ನಗರವಾಗಿ ಬೆಂಗಳೂರು ಗುರುತಿಸಲ್ಪಡುತ್ತಿರುವುದರ ಜೊತೆಗೆ ಅನ್ಯ ನಗರಗಳಲ್ಲಿ ಸಾಧ್ಯವಾಗದಿರುವುದು ಇಲ್ಲಿ ಸಾಧ್ಯವಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ನಾಗರಿಕ ತೊಡಗುವಿಕೆಯಿರುವುದು ಬೆಂಗಳೂರಿನಲ್ಲಿಯೇ. ಆಡಳಿತದ ಅನುಷ್ಠಾನದಲ್ಲಿ ಅಧಿಕಾರಗಳ ಮತ್ತು ನಾಗರಿಕರ ಸಹಭಾಗಿತ್ವವು ಇಲ್ಲಿ ಹೆಚ್ಚುತ್ತಿದ್ದು, ಪ್ರಗತಿಗಾಗಿ ಸರ್ಕಾರದ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಇಲ್ಲಿ ನಾಗರಿಕರ ಚಿಂತನೆಗಳು ಹಲವು ಬಾರಿ ಸರ್ಕಾರದ ಯೋಜನೆಗಳಾಗಿ ಪರಿವರ್ತಿತವಾಗುತ್ತಿವೆ. ಇವು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯತ್ತಿನಲ್ಲಿ ಆಶಾಭಾವನೆಯನ್ನು ಮೂಡಿಸುತ್ತಿರುವುದು ಮಾತ್ರವಲ್ಲ, ಇದೆಲ್ಲದರ ನಡುವೆ ನಾವಿದ್ದೇವೆ ಎಂಬ ಸಂಭ್ರಮವನ್ನೂ ಉಂಟುಮಾಡುತ್ತಿದೆ.

ಈ ವಾರಾಂತ್ಯದಲ್ಲಿ ಮತ್ತೊಮ್ಮೆ ಬೆಂಗಳೂರು ತನ್ನ ಅತ್ಯುತ್ತಮ ನಾಗರಿಕರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತಿದೆ. ಪ್ರತಿವರ್ಷ ಇದನ್ನು ಪಾಲಿಸಿಕೊಂಡು ಬರುತ್ತಿರುವ ಭಾರತದ ಏಕಮಾತ್ರ ನಗರ ನಮ್ಮ ಬೆಂಗಳೂರು. ನಾಗರಿಕರ ಮೆಚ್ಚುಗೆ ಇನ್ಯಾವ ಪ್ರಶಸ್ತಿಗಳಿಗೂ ಇಲ್ಲದ ಶ್ರೇಷ್ಠತೆಯನ್ನು 'ನಮ್ಮ ಬೆಂಗಳೂರು' ಪ್ರಶಸ್ತಿಗಳಿಗೆ ತಂದುಕೊಟ್ಟಿದೆ. ಈ ಹಿಂದಿನ ಪ್ರಶಸ್ತಿ ವಿಜೇತರು, ಈ ಪ್ರಶಸ್ತಿಯನ್ನು ಪಡೆದಿರುವುದು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಪ್ರೇರಕವಾಗಿದೆ ಎಂದಿರುವುದು ಇದರ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಶಸ್ತಿ ವಿಜೇತರಷ್ಟೇ ಅಲ್ಲದೆ ನಮ್ಮ ಬೆಂಗಳೂರು ಪ್ರಶಸ್ತಿಗಳ ನಾಮನಿರ್ದೇಶಿತರೂ ಕೂಡ ಅಸಂಖ್ಯಾತ ಸಹನಾಗರಿಕರಿಗೆ ಪ್ರೇರಣೆ ನೀಡುತ್ತಿರುವುದು ಇದರ ಮತ್ತೊಂದು ಅತಿ ವಿಶಿಷ್ಟ ಹಿರಿಮೆ.

- ಅಶ್ವಿನ್ ಮಹೇಶ್
ಅಬೈಡ್ ಸದಸ್ಯರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com