ಅವನ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ...

'ಚಿತ್ರನಟಿ ಮಾಲಾಶ್ರೀ ತುಂಬಾ ಫೇಮಸ್ ಆಗಿದ್ದ ದಿನಗಳಲ್ಲಿಯೇ ನಾನು ಹುಟ್ಟಿದ್ದಂತೆ. ಅದಕ್ಕೇ ನನ್ನ ಹೆಸರಿನ ಕೊನೆಗೆ ಒಂದು ಶ್ರೀ ಸೇರಿಸಿ...
Updated on: 

'ಚಿತ್ರನಟಿ ಮಾಲಾಶ್ರೀ ತುಂಬಾ ಫೇಮಸ್ ಆಗಿದ್ದ ದಿನಗಳಲ್ಲಿಯೇ ನಾನು ಹುಟ್ಟಿದ್ದಂತೆ. ಅದಕ್ಕೇ ನನ್ನ ಹೆಸರಿನ ಕೊನೆಗೆ ಒಂದು ಶ್ರೀ ಸೇರಿಸಿಬಿಟ್ರಂತೆ ಕಣೇ. ಆ ದಿನಗಳಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರಿಗೆ ಒಂದು ಹೆಸರು ಕಟ್ಟಿ ಅದರ ಕೊನೆಗೆ ಶ್ರೀ ಎಂದು ಸೇರಿಸುವುದೇ ಫ್ಯಾಷನ್ ಆಗಿತ್ತಂತೆ. ಮಂಜುಶ್ರೀ, ರಾಜಶ್ರೀ, ಮೈನಾಶ್ರೀ, ಕಾವ್ಯಶ್ರೀ, ಬಿಂದುಶ್ರೀ, ಪೂಜಾಶ್ರೀ ಎಂಬ ಹೆಸರುಗಳೆಲ್ಲ ಸೃಷ್ಟಿಯಾಗಲಿಕ್ಕೆ 'ಮಾಲಾಶ್ರೀ' ಹವಾ ಕೂಡ ಸ್ವಲ್ಪ ಮಟ್ಟಿಗೆ ಕಾರಣ ಅಂದಿದ್ದಳು ರೂಪಶ್ರೀ.
ತನ್ನನ್ನು ತಾನೇ ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂದು ಕರೆದುಕೊಳ್ಳುತ್ತಿದ್ದ ರೂಪಶ್ರೀಗೆ ಶಂಕರ್ ಎಂಬ ಹೆಸರಿನ ಲವರ್ ಇದ್ದ. ವಿಚಿತ್ರವೆಂದರೆ, ರೂಪಶ್ರೀ ಪ್ರತಿ ತರಗತಿಯಲ್ಲೂ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗುತ್ತಿದ್ದ ಪ್ರತಿಭಾವಂತೆ. ಅಂಥವಳು, ಬರೀ 8ನೇ ತರಗತಿ ಓದಿದ್ದ ಹುಡುಗನನ್ನು ಇಷ್ಟಪಟ್ಟಿದ್ದಳು. ಕೇಳಿದರೆ, 'ಶಂಕರ್ ನಮ್ಮ ಮನೆಯ ಹತ್ರಾನೇ ಇದ್ದವರು. ಮನುಷ್ಯ ಓದಿಲ್ಲ ನಿಜ. ಆದ್ರೆ ಅವನ ಮನಸ್ಸು ಒಳ್ಳೆಯದು. ಹುಡುಗ ದುಡೀತಾನೆ. ಹಾಗಂತ ಪ್ರಾಮಿಸ್ ಮಾಡಿದಾನೆ. ಪರಿಚಯ ಗಾಢವಾದ ಮೇಲೆ ಒಂದು ದಿನ ಅವನೇ ಅಂಜುತ್ತ, ಅಳುಕುತ್ತ ಪ್ರಫೋಸ್ ಮಾಡಿದ. ಒಂದು ವಾರ ಯೋಚಿಸಿ, ನಾನು ಎಸ್ ಅಂದೆ. ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ ನೋಡು, ಆ ಮಾತು ನಮ್ಮ ವಿಷಯದಲ್ಲಿ ನಿಜ ಆಗಿಹೋಯ್ತು' ಎಂದು ನಕ್ಕಿದ್ದಳು.
ಆದರೂ, ನಾವೆಲ್ಲ ಅಂದುಕೊಂಡಷ್ಟು ಸುಲಭವಾಗಿ ಅವರ ಮದುವೆ ನಡೆಯುವುದು ಸಾಧ್ಯವಿರಲಿಲ್ಲ. ಕಾರಣ, ಅವರಿಬ್ಬರ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ, ಕುಟುಂಬದ ಸ್ಥಿತಿಗತಿಯಲ್ಲೂ ವ್ಯತ್ಯಾಸವಿತ್ತು. ರೂಪಶ್ರೀಯ ಪೋಷಕರು ಸಾಕಷ್ಟು ಶ್ರೀಮಂತರಾಗಿದ್ದರು. ಅವರಿಗೆ ಬಂಧುಗಳ ಸಂಖ್ಯೆಯೂ ದೊಡ್ಡದಿತ್ತು. ಜಾತಿಯ ಆಚರಣೆ ಮನೆಯಲ್ಲಿರಲಿಲ್ಲ ನಿಜ. ಆದರೆ, ಮದುವೆಯಂಥ ವಿಷಯದಲ್ಲಿ ಖಂಡಿತ ಅವರು ಜಾತಿಗೆ ಪ್ರಾಮುಖ್ಯ ನೀಡುತ್ತಾರೆ ಅನಿಸುತ್ತಿತ್ತು. ರೂಪಶ್ರೀಗೆ ಈ ವಿಷಯ ಹೇಳಿದರೆ, ಅಂಥ ಸಂದರ್ಭ ಬಂದ್ರೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಆಗಿಬಿಡ್ತೀನಿ. ಸಾಕ್ಷಿ ಹೇಳಲಿಕ್ಕೆ, ಧೈರ್ಯ ತುಂಬಲಿಕ್ಕೆ ನಿಮ್ಮಂಥ ಫ್ರೆಂಡ್ಸ್ ಇದ್ದೇ ಇರ್ತಾರೆ ಅನ್ನುತ್ತಿದ್ದಳು. ಅವಳು ಡಿಗ್ರಿ ಮುಗಿಸುವ ಹೊತ್ತಿಗೆ, ಶಂಕರನೂ ತನ್ನ ಬಿಜಿನೆಸ್‌ನಲ್ಲಿ ಯಶಸ್ಸು ಕಂಡ. ಭವಿಷ್ಯದಲ್ಲಿ ರೂಪಶ್ರೀಗೆ ಅವಮಾನವಾಗದಿರಲಿ ಎಂಬ ಉದ್ದೇಶದಿಂದ ಚೆನ್ನಾಗಿ ಓದಲು, ಬರೆಯಲು ಕಲಿತ. ಇದನ್ನೆಲ್ಲ ರೂಪಶ್ರೀಯೇ ಹೇಳಿಕೊಂಡಿದ್ದಳು. ಅವನ ಜೊತೆ ಟ್ರಿಪ್ ಹೋಗಿದೀನಿ. ಸಿನಿಮಾ ನೋಡಿದೀನಿ. ಒಂದೇ ತಟ್ಟೆಯಲ್ಲಿ ಊಟ ಮಾಡಿದೀನಿ, ನೂರಕ್ಕೂ ಹೆಚ್ಚು ಫೋಟೋ ತೆಗೆಸ್ಕೊಂಡಿದೀನಿ. ಇಷ್ಟೆಲ್ಲ ವಿಷಯ ಗೊತ್ತಾದ್ರೆ ನಮ್ಮ ಮನೆಯವರು ತೆಪ್ಪಗೆ ಮದುವೆಗೆ ಒಪ್ಕೋತಾರೆ ಎಂದು ವಾದಿಸುತ್ತಿದ್ದಳು.
ವಿಪರ್ಯಾಸ ನೋಡಿ: ಹೀಗೆಲ್ಲ ವಾದಿಸುತ್ತಿದ್ದ ರೂಪಶ್ರೀ, ನಾಲ್ಕು ತಿಂಗಳಿಂದ ಫೋನ್‌ಗೆ ಸಿಕ್ಕಿರಲೇ ಇಲ್ಲ. ಯಾವಾಗ ಟ್ರೈ ಮಾಡಿದ್ರೂ ಬ್ಯುಸಿ ಎಂದೋ, ಸ್ವಿಚ್ ಆಫ್ ಎಂದೋ ಉತ್ತರ ಬರುತ್ತಿತ್ತು. ಹದಿನೈದು ದಿನಗಳ ಹಿಂದೆ ತೀರಾ ತೀರಾ ಆಕಸ್ಮಿಕವಾಗಿ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಶಂಕರ ಕಾಣಿಸಿಬಿಟ್ಟ. ಅವನ ಹಿಂದೆಯೋ, ಮುಂದೆಯೋ, ರೂಪಶ್ರೀ ಕೂಡಾ ಇದ್ದಿರಬಹುದೆಂದು ಕಣ್ಣು ಹಾಯಿಸಿದೆ. ಆಕೆ ಕಾಣಿಸಲೇ ಇಲ್ಲ. ಅವಳೆಲ್ಲಿ ಎಂದು ಕೇಳುವ ಮೊದಲೇ ಅವನು ಮುಗುಳ್ನಕ್ಕ. ಅದೇ ಮೊದಲ ಬಾರಿಗೆ 'ನಮಸ್ತೇ' ಎಂದ. ಐದು ನಿಮಿಷ ಫ್ರೀ ಇದೀರಾ? ನಾನು ಶಿರಡಿಗೆ ಹೊರಟಿದೀನಿ. ಟ್ರೈನು ಹೊರಡಲಿಕ್ಕೆ ಇನ್ನೂ ಒಂದೂವರೆಗಂಟೆ ಇದೆ' ಅಂದ. 'ಸಾರಿ, ನಾನು ಬ್ಯುಸಿ ಇದೀನಿ' ಅನ್ನಲು ಮನಸ್ಸು ಬರಲಿಲ್ಲ. ಕಾಫಿ ಕುಡೀತಾ ಮಾತಾಡಬಹುದು ಅಂದೆ.
'ನಂಗೆ ಮೋಸ ಆಗೋಯ್ತು ಮೇಡಂ. ರೂಪಾ ನನ್ನಿಂದ ದೂರ ಆಗಿಬಿಟ್ಲು. ಹೀಗೆ ಆಗಬಹುದು ಎಂಬ ಕಲ್ಪನೆ ಕೂಡ ನನಗೆ ಇರಲಿಲ್ಲ...' ಶಂಕರ, ಎಷ್ಟೇ ಸಮಾಧಾನದಿಂದ ಹೇಳಲು ಪ್ರಯತ್ನಿಸಿದರೂ ಆತನ ಮಾತುಗಳಲ್ಲಿ ಉದ್ವೇಗವಿತ್ತು. ಯಾಕೆ ಹಾಗಾಯ್ತು ಎಂದಿದ್ದಕ್ಕೆ ಶಂಕರ ವಿವರಿಸಿದ್ದು ಹೀಗೆ: 'ಮೂರು ತಿಂಗಳ ಹಿಂದೆ ರೂಪಾ ಫೋನ್ ಮಾಡಿದ್ಲು. ಇಲ್ಲಿನ ತನಕ ಗಿಫ್ಟ್ ಅಂತ ನಾನು ಕೊಟ್ಟಿರೋ ವಸ್ತುಗಳು, ಬರೆದಿರುವ ಪತ್ರಗಳನ್ನೂ ತಂದುಕೊಡು. ಅವುಗಳ ಮೇಲೆ ಆಟೋಗ್ರಾಫ್ ಹಾಕಿ, ಫ್ರೇಂ ಹಾಕಿಸ್ತೇನೆ. ಶೋ ಕೇಸ್‌ನಲ್ಲಿ ಇಡೋಣ ಅಂದಳು. ಅವಳ ಮಾತಲ್ಲಿ ನಂಬಿಕೆ ಇತ್ತು. ಎಲ್ಲವನ್ನೂ ಕೊಟ್ಟೆ. ಎರಡು ದಿನಗಳ ನಂತರ ಅವಳೇ ಫೋನ್ ಮಾಡಿ- ಜಾತಿ, ಅಂತಸ್ತು, ರೂಪ, ವಿದ್ಯೆ... ಹೀಗೆ ಪ್ರತಿಯೊಂದರಲ್ಲೂ ನಮ್ಮ ಮಧ್ಯೆ ಅಜಗಜಾಂತರವಿದೆ. ನೀನು ಡಿಗ್ರಿ ಮಾಡಿಲ್ಲ ಎಂಬುದೇ ನಮ್ಮ ಸಂಸಾರ ಛಿದ್ರವಾಗಲು ಕಾರಣ ಆಗಬಹುದು. ಜಾತಿಯ ಅಡ್ಡಗೋಡೆ ಕೂಡ ನಮ್ಮ ನೆಮ್ಮದಿಯನ್ನು ಹಾಳು ಮಾಡಬಹುದು. ಮೊನ್ನೆ ನೀನು ತಂದು ಕೊಟ್ಟ ಎಲ್ಲ ಗಿಫ್ಟ್‌ಗಳನ್ನು ಸುಟ್ಟು ಹಾಕಿದೀನಿ. ಈವರೆಗೂ ನಡೆದಿದ್ದೆಲ್ಲಾ ಕನಸು ಅಂದ್ಕೋ. ನಮ್ಮ ಕುಟುಂಬವನ್ನು ಬಿಟ್ಟು ಬರಲು ನನ್ನಿಂದ ಸಾಧ್ಯವಿಲ್ಲ. ಏನೋ, ಗೊತ್ತಿಲ್ದೆ ತಪ್ಪು ಮಾಡಿದೆ. ದಯವಿಟ್ಟು ಕ್ಷಮಿಸು. ಮತ್ತೆ ಸಂಪರ್ಕಿಸುವ ಪ್ರಯತ್ನ ಮಾಡಬೇಡ' ಎಂದು ಹೇಳಿದ್ಲು. ಅವತ್ತಿನಿಂದ ಅವಳು ಊರಲ್ಲಿಲ್ಲ. ಫೋನ್‌ಗೆ ಸಿಕ್ತಾ ಇಲ್ಲ. ಅವಳನ್ನು ಖಂಡಿತ ಮರೆತು ಬಿಡ್ತೀನಿ. ಖಂಡಿತ ಹೊಸ ಬದುಕು ಆರಂಭಿಸ್ತೀನಿ. ಆದ್ರೆ ಮೇಡಂ, ತುಂಬಾ ಹುಡುಗೀರು ಹೀಗೆ ನಂಬಿಸಿ, ಪ್ರೀತಿಯ ಮಾತಾಡಿ ಕೊನೆಗೆ ಕೊರಳು ಕುಯ್ತಾರಲ್ಲ ಯಾಕೆ?'
ಶಂಕರ ಈ ಪ್ರಶ್ನೆ ಕೇಳಿದ್ದು 15 ದಿನಗಳ ಹಿಂದೆ. ಆ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com