ತೀರ್ಪುಗಾರರಲ್ಲ, ಪ್ರೇಕ್ಷಕರು ನೋಡುವಂಥ ಚಿತ್ರಗಳಿಗೆ ಪ್ರಶಸ್ತಿ ಬರಲಿ
ಅದು 'ಲಗಾನ್' ಚಿತ್ರ ಆಸ್ಕರ್ಗೆ ಎಂಟ್ರಿ ಪಡೆದಿದ್ದ ಸಮಯ. ಪ್ರಶಸ್ತಿ ಘೋಷಣೆಯ ದಿನ, ಇಡೀ ದೇಶ ಟಿವಿ ಮುಂದೆ ಕೂತು ಆಸ್ಕರ್ನ ನಿರೀಕ್ಷೆಯಲ್ಲಿತ್ತು. ಪ್ರಶಸ್ತಿ ಬಂತೋ ಇಲ್ಲವೋ, ಆದರೆ ಸಿನಿಮಾ ನೋಡಿ ಇಷ್ಟಪಟ್ಟಿದ್ದ ಕೋಟ್ಯಾಂತರ ಪ್ರೇಕ್ಷಕರು ಕಾದು ಕುಳಿತಿದ್ದು, ಪ್ರಶಸ್ತಿ ಬರದೇ ಇದ್ದಾಗ ವ್ಯಕ್ತಪಡಿಸಿದ ನಿರಾಶೆ, ಆ ಚಿತ್ರತಂಡಕ್ಕೆ ಆಸ್ಕರ್ಗಿಂತಲೂ ದೊಡ್ಡ ಪ್ರಶಸ್ತಿ. ಅದು ಅಂಥ ಚಿತ್ರ ಮಾಡಿದ ನಿರ್ದೇಶಕನೊಬ್ಬನಿಗೆ 'ಪ್ರಶಸ್ತ ಸಮಯ'.
ಒಂದು ಸಿನಿಮಾ ತಯಾರಾಗಬೇಕು, ಬಿಡುಗಡೆಯಾಗಬೇಕು. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಹಿಟ್ಟೋ, ಪ್ಲಾಪೋ ಆಗಬೇಕು. ನಂತರ ಪ್ರಶಸ್ತಿ ಆಯ್ಕೆ ಮಾಡುವ ಸಮಯದಲ್ಲಿ ಈ ವರ್ಷ ಬಂದ ಚಿತ್ರಗಳ ಪಟ್ಟಿ ನೋಡಿದಾಗ, 'ಹೌದಪ್ಪಾ ಇಂಥದೊಂದು ಸಿನಿಮಾ ಬಂದಿದೆ, ಚೆನ್ನಾಗಿದೆ' ಎಂಬ ಅನಿಸಿಕೆಯೊಂದಿಗೆ ಅದನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಇದು ನಮಗೆಲ್ಲ ಬೇಕೆನಿಸುವಂಥ ಪ್ರಶಸ್ತಿ ಪ್ರಕ್ರಿಯೆ. ಆದರೆ ನಮ್ಮ ರಾಷ್ಟ್ರಪ್ರಶಸ್ತಿಗಳ ವಿಷಯದಲ್ಲಿ ಅದು ಆಗುವುದೇ ಬೇರೆ ರೀತಿ. ಯಾರಿಗೂ ಗೊತ್ತಿಲ್ಲದಂತೆ ಹವ್ಯಾಸಕ್ಕಾಗಿ ಮಾಡುವ ಹೋಮ್ಮೇಡ್ ಸಿನಿಮಾಗಳಂತೆ ಇಂಥ ಚಿತ್ರಗಳು ತಯಾರಾಗುತ್ತವೆ. ಹೆಚ್ಚೆಂದರೆ, ಪ್ರಶಸ್ತಿ ಬಂದ ನಂತರ ಸಿನಿ ಮಾಲ್ಗಳಲ್ಲಿ ಮೂರು ದಿನ ಮಾರ್ನಿಂಗ್ ಶೋನಲ್ಲಿ ಮಿನಿಮಮ್ ಪ್ರದರ್ಶನ ಕಾಣುತ್ತವೆ. ಇಂಥ ಪ್ರಶಸ್ತಿಗಳು ಯಾರಿಗೆ ಬಂತು ಎಲ್ಲಿಗೆ ಬಂತು ಎಂದು ಗೊತ್ತಾಗುವುದೇ ಕಷ್ಟ. ಹೆಗಲ ಮೇಲೆ ಕೈ ಹಾಕಿ ಮಾತನಾಡುವಷ್ಟು ಆತ್ಮೀಯರಾದ 6 ಜನ ಜ್ಯೂರಿಗಳು ನೋಡಿ ಕೊಟ್ಟರೆ ಸಾಕು, 6 ಕೋಟಿ ಜನಗಳ ಎದೆಯ ಒಳಗೆ ಇಳಿಯುವಂಥ ಚಿತ್ರಗಳು ಬೇಕಾಗಿಯೇ ಇಲ್ಲ. ಹಾಗಾಗಿ, 'ಶಿಕಾರಿ', 'ಎದೆಗಾರಿಕೆ', 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಮುಂತಾದ ಜನಮೆಚ್ಚಿದ ಚಿತ್ರಗಳನ್ನು ಮೀರಿಸಿ ಈ ಬಾರಿ ಶೇಷಾದ್ರಿ ನಿರ್ದೇಶನದ
'ಭಾರತ್ ಸ್ಟೋರ್ಸ್' ಪ್ರಶಸ್ತಿ ದಕ್ಕಿಸಿಕೊಂಡಿದೆ. ಚಿಲ್ಲರೆ ಅಂಗಡಿಗಳ ದುರ್ಗತಿಯ ಬಗ್ಗೆ ಮಾತನಾಡುವ ಈ ಚಿತ್ರಕ್ಕೆ ಮನ್ನಣೆ ದೊರೆತಿದೆ. ಆದರೆ, ಅವಾರ್ಡ್ ಸಿನಿಮಾಗಳೆಂದರೆ ಇದೇ ಕೆಟಗರಿಯ ಚಿತ್ರಗಳು ಎಂಬ ಧೋರಣೆ ಹೋಗಬೇಕು, ಕಮರ್ಷಿಯಲ್ ಚಿತ್ರಗಳ ವಿಷಯದಲ್ಲಿ ಮಾತ್ರ ಅಲ್ಲ, ಇಂತ ಪ್ರಶಸ್ತಿಗಳ ವಿಷಯದಲ್ಲೂ 'ಜನ ಛೇಂಜ್ ಕೇಳ್ತಾರೆ' ಎಂಬ ಬೇಡಿಕೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಅದು ಹೋಗಲಿ ಎಂದರೆ, ಈ ವರ್ಷ ಸ್ಪರ್ಧೆಯಲ್ಲಿದ್ದ ಅಷ್ಟೂ ಚಿತ್ರಗಳ ಪೈಕಿ 'ಭಾರತ್ ಸ್ಟೋರ್ಸ್' ಶ್ರೇಷ್ಠ ಚಿತ್ರವಾಗಿತ್ತು ಎಂಬ ಸಾರ್ವತ್ರಿಕ ಅಭಿಪ್ರಾಯ ಎಲ್ಲಿಯೂ ಕೇಳಿಬರುತ್ತಿಲ್ಲ.
ಒಬ್ಬ ನಿರ್ದೇಶಕನನ್ನು ಕೇವಲ ಅವನ ಸುತ್ತಮುತ್ತಲಿನ ಗೆಳೆಯರ ಬಳಗವಷ್ಟೇ ಅಲ್ಲದೆ, ಒಂದು ಚಿತ್ರಮಂದಿರದ ಗೇಟ್ಕೀಪರ್, ಟಿಕೇಟ್ ಹರಿಯುವವನು ಮತ್ತು ಕ್ಯಾಂಟೀನ್ನಲ್ಲಿ ಪಾಪ್ಕಾರ್ನ್ ಮಾರುವವನೂ ಕೂಡ ನೋಡಿ ಗುರುತು ಹಿಡಿಯುವಂತಾದರೆ ಮಾತ್ರ ಅವನಿಗೆ ಬೆಲೆ. ಆದರೆ, ಪಿ. ಶೇಷಾದ್ರಿ ಅವರ ಇದುವರೆಗಿನ ಎಲ್ಲಾ ಚಿತ್ರಗಳಿಗೂ ಪ್ರಶಸ್ತಿ ಬಂದಿದೆ. ಆ ಲೆಕ್ಕದಲ್ಲಿ ಶೇಷಾದ್ರಿ ಅವರು ಕರ್ನಾಟಕದ ನಂಬರ್ ಒನ್ ನಿರ್ದೇಶಕ ಎನಿಸಿಕೊಳ್ಳಬೇಕಿತ್ತು. ಎಲ್ಲರನ್ನೂ ಮೀರಿಸಿದ ಹೆಸರು ಮಾಡಬೇಕಿತ್ತು. ಆದರೆ ಇಂದಿಗೂ ಕಿರುತೆರೆಯ ಧಾರಾವಾಹಿ ನಿರ್ದೇಶಕ ಎ.ಜಿ.ಶೇಷಾದ್ರಿ ಮತ್ತು ಪಿ. ಶೇಷಾದ್ರಿ ಅವರ ಹೆಸರುಗಳ ಮಧ್ಯೆ ಕನ್ಫ್ಯೂಸ್ ಆಗುವವರೇ ಹೆಚ್ಚು. ಪಿ. ಶೇಷಾದ್ರಿ ಎಂದಾಗ 'ಓ ಸೀರಿಯಲ್ ಮಾಡ್ತಾರಲ್ಲ ಅವರು ತಾನೇ?' ಎಂದು ಕೇಳುವವರೂ ಉಂಟು. ಅದಕ್ಕೆ ಕಾರಣ ಜನರನ್ನು ತಲುಪಲಾಗದ ಅವರ ಚಿತ್ರಗಳು. ಪಿ.ಶೇಷಾದ್ರಿ ಅವರ ಹೆಸರು ಒಂದಷ್ಟು ಜನಕ್ಕೆ ಗೊತ್ತಿದ್ದರೆ ಅದು ಅವರ ಆಪ್ತವಲಯಕ್ಕೆ. ಇಂಥದೇ ಆಪ್ತವಲಯಕ್ಕೇ ಶೇಷಾದ್ರಿ ಅವರು ಪ್ರಶಸ್ತಿಗೆ ಕಳಿಸುವ ಮುಂಚೆ, ತಮ್ಮ ಈ ಸಿನಿಮಾ ತೋರಿಸಿದ್ದು. ಮೂಲಗಳ ಪ್ರಕಾರ ಅಲ್ಲಿ ಸಿನಿಮಾ ನೋಡಿದವರ್ಯಾರೂ ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಲ್ಲ. ಬದಲಾಗಿ 'ಚಿತ್ರವನ್ನು ಮಾಧ್ಯಮದವರಿಗೆ ತೋರಿಸಲು ಹೋಗಬೇಡಿ, ಪತ್ರಿಕೆ ಟಿವಿಗಳಲ್ಲಿ ಪಾಸಿಟಿವ್ ರಿವ್ಯೂ ಬರದಿದ್ದರೆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆಯುವ ಕೆಲಸಕ್ಕೆ ಅಡ್ಡಿಯಾಗಬಹುದು' ಎಂಬ ಸಲಹೆ ಕೊಟ್ಟಿದ್ದಾರೆ. ರಾಷ್ಟ್ರಪ್ರಶಸ್ತಿ ಬಂದಮೇಲೆ ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬ ಜಾಣ ನಂಬಿಕೆ ಅವರದ್ದು.
ಹೋಗಲಿ ಬಿಡಿ. ಆದರೆ, ಭಾರತ ಪಾಕಿಸ್ತಾನದಂಥ ಬದ್ಧ ವೈರಿಗಳ ಕ್ರಿಕೆಟ್ ಮ್ಯಾಚ್ನ ನಂತರವೂ ಗೆದ್ದವರು, 'ಎದುರಾಳಿಗಳು ಚೆನ್ನಾಗಿಯೇ ಆಡಿದರು, ಆದರೆ, ಅದೃಷ್ಟ ನಮ್ಮ ಜೊತೆಗಿತ್ತು' ಎನ್ನುವಂಥ ಜೆಂಟಲ್ಮನ್ಗೆ ತಕ್ಕಂಥ ಮಾತುಗಳನ್ನಾಡುತ್ತಾರೆ. ಆದರೆ ರಾಷ್ಟ್ರಪ್ರಶಸ್ತಿ ವಿಜೇತ ಶೇಷಾದ್ರಿ ಅವರ ವರಸೆಯೇ ಬೇರೆ!
ಎಲ್ಲರೂ 'ಈ ಬಾರಿ ಪ್ರಶಸ್ತಿಗೆ ಅರ್ಹವಾದ ಬೇಕಾದಷ್ಟು ಕನ್ನಡ ಚಿತ್ರಗಳಿದ್ದವು. ಈ ಬಾರಿ ಕನ್ನಡಕ್ಕೆ ಅನ್ಯಾಯವಾಗಿದೆ' ಎನ್ನುತ್ತಿದ್ದರೆ ಶೇಷಾದ್ರಿಯವರು ಮಾತ್ರ, ತಮ್ಮ ಚಿತ್ರದ ಬೆನ್ನನ್ನು ಮಾತ್ರ ತಟ್ಟಿಕೊಂಡು, 'ರಾಷ್ಟ್ರಪ್ರಶಸ್ತಿಯ ವಿಷಯದಲ್ಲಿ ಅನ್ಯಾಯ ಆಗಿದೆ ಎಂದು ನನಗನಿಸುತ್ತಿಲ್ಲ. ಉಳಿದವರ್ಯಾರೂ ಸಿನಿಮಾದಲ್ಲಿ ಪ್ರೀತಿ ತುಂಬೊಲ್ಲ, ನಾನು ಪ್ರೀತಿ ತುಂಬುತ್ತೇನೆ. ಹಾಗಾಗಿ ನನಗೆ ಪ್ರತಿಸಲ ಅವಾರ್ಡ್ ಬರುತ್ತೆ. ಬೇರೆ ಯಾವ ಸಿನಿಮಾಕ್ಕೂ ಪ್ರಶಸ್ತಿ ಗಳಿಸುವ ಯೋಗ್ಯತೆ ಇರಲಿಲ್ಲ. ಗುಣಮಟ್ಟ ಇಲ್ಲದ ಸಿನಿಮಾಗಳಿಗೆ ಪ್ರಶಸ್ತಿ ಸಿಗೋಕೆ ಸಾಧ್ಯವಿಲ್ಲ. ಅನ್ಯಾಯ ಖಂಡಿತಾ ಆಗಿಲ್ಲ, ಅಲ್ಲಿ ಅರ್ಹತೆಯೊಂದೇ ಮಾನದಂಡ' ಎನ್ನುತ್ತಿದ್ದಾರೆ. ಆದರೆ ನಿಜಕ್ಕೂ ಅರ್ಹತೆಯೊಂದೇ ಮಾನದಂಡವಾಗಿದ್ದರೆ ಶೇಷಾದ್ರಿಯವರ ಚಿತ್ರಕ್ಕೆ ಹೇಗೆ ಪ್ರಶಸ್ತಿ ಬರುತ್ತಿತ್ತು ಎಂದು ಕುಹಕವಾಡುತ್ತಿರುವವರೂ ಇದ್ದಾರೆ ಬಿಡಿ.
ಬಿಡುಗಡೆಯಾಗಿ ಲೋಕಲ್ ಲೆವೆಲ್ನಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರಶಂಸೆ ಪಡೆದ 'ಎದೆಗಾರಿಕೆ', ಹಳೆಯ ಕಾಲದ ಸಬ್ಜೆಕ್ಟ್ಗಳನ್ನು ಬಿಟ್ಟು ಸೋ ಕಾಲ್ಡ್ ಕಲಾತ್ಮಕ ಚಿತ್ರಗಳಿಗೆ ಆಧುನಿಕ ಸ್ಪರ್ಶ ಕೊಟ್ಟ 'ಶಿಕಾರಿ', ವಾಸ್ತವವನ್ನು ಬದಿಗಿಟ್ಟು, ಸಿನಿಮಾ ಆಗಿ ನೋಡಿದಾಗ 'ಅಟ್ಟಹಾಸ', ನ್ಯೂ ಜನರೇಶನ್ನ ಪ್ರೇಕ್ಷಕರ ಮಧ್ಯೆಯೂ 100 ದಿನ ಓಡಿದ 'ಸಂಗೊಳ್ಳಿರಾಯಣ್ಣ', ಇವ್ಯಾವೂ ಶೇಷಾದ್ರಿಯವರಿಗೆ ಯಾಕೆ ಉತ್ತಮ ಚಿತ್ರಗಳಾಗಿ ಕಾಣಲಿಲ್ಲ? ಇನ್ನು, ಸ್ವತಃ, ಗಿರೀಶ್ ಕಾಸರವಳ್ಳಿ ಈ ವರ್ಷ ಸ್ಪರ್ಧೆಯಲ್ಲಿದ್ದ 'ತಲ್ಲಣ' ಎಂಬ ಚಿತ್ರದ ಬಗ್ಗೆ ಒಂದಷ್ಟು ಕಡೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಶೇಷಾದ್ರಿ ಅವರಿಗೆ ಮಾತ್ರ, ತಮ್ಮ ಚಿತ್ರ ಬಿಟ್ಟು ಇನ್ನೆಲ್ಲೂ ಗುಣಮಟ್ಟ ಕಾಣುವುದಿಲ್ಲ. ಅಂದರೆ ಗಿರೀಶ್ ಕಾಸರವಳ್ಳಿಯವರ ಜಡ್ಜ್ಮೆಂಟ್ ಕೂಡ ಸರಿ ಇಲ್ಲ ಎಂಬ ಅಭಿಪ್ರಾಯ ಶೇಷಾದ್ರಿ ಅವರದ್ದು. ಪ್ರಶಸ್ತಿ ಬಂದ ಸಂಭ್ರಮದಲ್ಲಿ, ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಏನು ಬದಲಾವಣೆ ಆಗಬೇಕು ಎಂದು ಶೇಷಾದ್ರಿ ಹೇಳುತ್ತಾರೆ, 'ನಾವು ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ, ಕೇವಲ ಸಿನಿಮಾ ಸಂಖ್ಯೆ ಹೆಚ್ಚಿಸುತ್ತಿದ್ದೇವೆ'. ಇಲ್ಲಿ, ಕೇವಲ
ತಮ್ಮ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿಸುತ್ತಿರುವ ಶೇಷಾದ್ರಿ, ಇಲ್ಲಿಯವರೆಗೆ ಎಷ್ಟು ಜನ ಪ್ರೇಕ್ಷಕರನ್ನು ಬೆಳೆಸಿದ್ದಾರೆ ಎಂಬುದು ಕೇಳಬೇಕಾದ ಪ್ರಶ್ನೆ. ಪ್ರೇಕ್ಷಕರನ್ನು ಬೆಳೆಸಲು ನಿರ್ಮಾಪಕ ದುಡ್ಡು ಖರ್ಚು ಮಾಡಿ ಸಿನಿಮಾ ಪ್ರಚಾರ, ಬಿಡುಗಡೆ ಮಾಡಬೇಕು. ಅದಕ್ಕೆ ಮುಂಚೆ, ಎಲ್ಲದಕ್ಕಿಂತ ಮೊದಲು, ಮತ್ತು ಮುಖ್ಯವಾಗಿ, ಪ್ರೇಕ್ಷಕ ನೋಡುವಂಥ ಸಿನಿಮಾ ಮಾಡಬೇಕು. ಅದು ಅವರಿಂದ ಆಗಿದೆಯೇ?
ಎದೆಗಾರಿಕೆ, ಶಿಕಾರಿ, ಸಂಗೊಳ್ಳಿರಾಯಣ್ಣದಂಥ ಚಿತ್ರಗಳಿಗೆ ಕೇವಲ ಜ್ಯೂರಿಗಳಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕ ಕೂಡ ಪ್ರಶಸ್ತಿ ಬರಬೇಕೆಂದು ಅಪೇಕ್ಷಿಸಿದ್ದ. ಆದರೆ, ಶೇಷಾದ್ರಿ ಅವರ 'ಭಾರತ್ ಸ್ಟೋರ್ಸ್' ಸಿನಿಮಾಕ್ಕೆ ಪ್ರಶಸ್ತಿ ಬರಬೇಕು ಎಂದು ಒಬ್ಬ ಪ್ರೇಕ್ಷಕನಾದರೂ ಅಂದುಕೊಳ್ಳಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಅವರು ಪ್ರೇಕ್ಷಕರಿಗೆ ತಮ್ಮ ಚಿತ್ರವನ್ನು ತೋರಿಸಿಯೇ ಇಲ್ಲ. ಅವರ ಪಾಲಿಗೆ ಪ್ರೇಕ್ಷಕರೆಂದರೆ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ಮಾತ್ರ.
ನೊಂದವರಿಗೆ ನಷ್ಟ ಹೊಂದಿದವರಿಗೆ ಪ್ರಶಸ್ತಿ ಕೊಡುವಂತಾಗಬಾರದು. ಪ್ರಶಸ್ತಿ ಅನ್ನೋದು ಸೈಟ್ ಹಂಚಿಕೆ ರೀತಿ ಅಲ್ಲ ಎನ್ನುವುದು ಶೇಷಾದ್ರಿ ಅವರ ಇನ್ನೊಂದು ಮಾತು. ಆದರೆ, ಅವರು ಇಲ್ಲಿ ಯಾವ ನೊಂದವರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದೇ ವಿಚಿತ್ರ. ಈ ಬಾರಿಯ ಪ್ರಶಸ್ತಿಯ ಸಾಲಿನಲ್ಲಿ ಹಲವು ವರ್ಷಗಳ ಕಾಲ ಪ್ರಶಸ್ತಿಗಾಗಿ ಸಿನಿಮಾ ಮಾಡಿ ಪ್ರಶಸ್ತಿ ಬಾರದೆ ನಿರಾಶರಾದ ಹಳೆ 'ಬೇರು'ಗಳಿಗಿಂತ ಈಗಷ್ಟೇ ಬೆಳೆಯುತ್ತಿರುವ ಹೊಸ ಚಿಗುರುಗಳೇ ಹೆಚ್ಚಿದ್ದವು ಎಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇದು, ತಮಗೆ ಬಂದ ಪ್ರಶಸ್ತಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇತರರನ್ನು ಕೀಳಾಗಿ ನೋಡುವ ಮನಸ್ಥಿತಿಯೋ, ಈ ಬಾರಿಯ ರಾಷ್ಟ್ರಪ್ರಶಸ್ತಿಗೆ ಸ್ಟೇ ತರಬೇಕು ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಅದರಿಂದ ಬಂದ ಗಾಬರಿಯ ಮಾತುಗಳೋ ಗೊತ್ತಿಲ್ಲ. ಒಟ್ಟಿನಲ್ಲಿ, 'ಸರಸಮ್ಮನ ಸಮಾಧಿ'ಯ ಋಣ ತೀರಿಸಲೋ ಎಂಬಂತೆ ಕೆಎನ್ಟಿ ಶಾಸ್ತ್ರಿ ತಮ್ಮ ನಿರ್ಮಾಪಕರ ಚಿತ್ರವನ್ನು ಬಿಟ್ಟು ಸ್ಪರ್ಧೆಯಲ್ಲಿದ್ದ ಉಳಿದ ಚಿತ್ರಗಳಿಗೆ ಸಮಾಧಿ ಕಟ್ಟಿದ್ದನ್ನು ಶೇಷಾದ್ರಿ ಸಮರ್ಥಿಸಿಕೊಂಡಿದ್ದಾರೆ ಅಷ್ಟೆ.
ಆದರೆ, ಮಾತು ರಾಷ್ಟ್ರಪ್ರಶಸ್ತಿಯಿಂದ ರಾಜ್ಯಪ್ರಶಸ್ತಿಗೆ ಹೊರಳಿದಾಗ, ಇದೇ ಶೇಷಾದ್ರಿ 'ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬಂದರೂ, ರಾಜ್ಯಮಟ್ಟದಲ್ಲಿ ಬರುವುದಿಲ್ಲ' ಎಂದು ಅಲವತ್ತುಕೊಂಡಿದ್ದಾರೆ. ರಾಷ್ಟ್ರಮಟ್ಟದ ಜ್ಯೂರಿಗಳಿಗೆ ಒಂದು ಚಿತ್ರ ಇಷ್ಟವಾದರೆ, ರಾಜ್ಯಮಟ್ಟದ ಜ್ಯೂರಿಗಳು ಅದನ್ನು ಕುರಿಗಳಂತೆ ತಲೆತಗ್ಗಿಸಿ ಒಪ್ಪಿಕೊಳ್ಳಬೇಕು ಎಂಬ ನಿಯಮ ಅವರದು. 'ಸಚಿನ್ ವಿದೇಶದಲ್ಲಿ ಶತಕ ಹೊಡೆದರೆ, ಭಾರತದಲ್ಲಿ ಹೊಡೆಯಬಾರದಾ?' ಎಂದು ಕೇಳುವ ಅವರಿಗೆ, 'ಸಚಿನ್ ಬಾಂಗ್ಲಾದೇಶದಲ್ಲಿ ಸೆಂಚುರಿ ಹೊಡೆದರೆ, ಆಸ್ಟ್ರೇಲಿಯಾದ ವಿರುದ್ಧ ಭಾರತದಲ್ಲೂ ಸೆಂಚುರಿ ಹೊಡೆಯಲೇಬೇಕು ಎಂದರ್ಥವೇ?' ಎಂಬುದು ಉತ್ತರವಾಗಬಲ್ಲದೇನೋ.
ಇಲ್ಲಿ ಕೇಳಬೇಕಾದ ಇನ್ನೊಂದು ಮುಖ್ಯವಾದ ಪ್ರಶ್ನೆ ಎಂದರೆ, ತಮ್ಮ ಚಿತ್ರದ ಗುಣಮಟ್ಟದ ಸಿನಿಮಾಗಳ ಬಗ್ಗೆ ಅಷ್ಟೊಂದು ನಂಬಿಕೆ ಇರುವ ಶೇಷಾದ್ರಿ ಅವರು ಇಲ್ಲಿಯವರೆಗೂ ಗಿರೀಶ್ ಕಾಸರವಳ್ಳಿ ಅವರ ಜೊತೆ ಯಾಕೆ ಕಾಂಪೀಟ್ ಮಾಡಿಲ್ಲ. ಈ ವರ್ಷ ಕಾಸರವಳ್ಳಿ ಅವರ ಸಿನಿಮಾ ಇದೆ ಅಂತ ಗೊತ್ತಾದ್ರೆ, ಆ ವರ್ಷ ಶೇಷಾದ್ರಿಯವರು ಸಿನಿಮಾ ಮಾಡಿದ ಉದಾಹರಣೆಗಳೇ ಇಲ್ಲ. ಯಾಕೆ?
ಶೇಷಾದ್ರಿ ಅವರ ಮಾತುಗಳನ್ನು ಬಿಟ್ಟು ಪ್ರಶಸ್ತಿ ಪ್ರಕ್ರಿಯೆಯ ಬಗ್ಗೆ ಮಾತನಾಡುವುದಾದರೆ, ಈ ವರ್ಷದ ಪ್ರಶಸ್ತಿಯ ಪಟ್ಟಿಯಲ್ಲಿದ್ದ ಸುಮನಾ ಕಿತ್ತೂರು ನಿರ್ದೇಶನದ 'ಎದೆಗಾರಿಕೆ' ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು ಎಂಬುದು ಹೆಮ್ಮೆಯ ಸಂಗತಿಯಾದರೂ, ಯಾವ ವಿಭಾಗದಲ್ಲೂ ಪ್ರಶಸ್ತಿ ಬರಲಿಲ್ಲ ಎಂಬುದು ಬೇಸರವೇ. ಆದರೆ, ಅದೇ ಸಮಯದಲ್ಲಿ ಬರಗೂರು ರಾಮಚಂದ್ರಪ್ಪ ಅವರ 'ಅಂಗುಲಿಮಾಲ' ಒಂದು ವಿಭಾಗದಲ್ಲೂ ಶಿಫಾರಸುಗೊಳ್ಳದಷ್ಟು ಕೆಟ್ಟ ಚಿತ್ರವಾಗಿತ್ತೇ? ಎಂಬ ಪ್ರಶ್ನೆಯೂ ಕೇಳಬೇಕಾದದ್ದೇ. ಒಂದು ಮೂಲದ ಪ್ರಕಾರ, ಅಂಗುಲಿಮಾಲ ಚಿತ್ರವನ್ನು ಪೂರ್ತಿ ನೋಡದೆಯೇ ತಿರಸ್ಕರಿಸಲಾಗಿದೆಯಂತೆ. ಪ್ರಶಸ್ತಿ ಆಯ್ಕೆಗಾಗಿ, ಸಿನಿಮಾ ನೋಡುವ ಅವಧಿಯಲ್ಲಿ 'ಅಯ್ಯೋ ಬಿಡ್ರೀ, ಎಂಥಾ ಸಿನಿಮಾ ಇದು, ಇವರಿಗೆ ಪೀರಿಯೆಡ್ ಸೆನ್ಸೇ ಇಲ್ಲ' ಎಂದು ಹೇಳಿ ಪೀರಿಯಡ್ ಮುಗಿಸಲಾಗಿದೆಯಂತೆ. ಹಾಗಾಗಿ, ಇಲ್ಲಿ, ಕೆಲವು ನಿರ್ದೇಶಕರ ಜೊತೆಗಿನ ವೈಯಕ್ತಿಕ ಸಂಬಂಧಗಳೂ ಪ್ರಭಾವ ಬೀರುತ್ತವೆ. ಧನಾತ್ಮಕ ಮತ್ತು ಋಣಾತ್ಮಕವಾಗಿ. ಇನ್ನು ಎಲ್ಲರಿಗೂ ತಿಳಿದಿರುವಂತೆ ಜ್ಯೂರಿಗಳ ತಂಡದಲ್ಲಿ, ಕೆಲವು ಪ್ರಾಮಾಣಿಕತೆ, ಅಭಿರುಚಿ ಉಳ್ಳವರಿದ್ದರೂ ಅವರ ಮಾತಿಗೆ ಬೆಲೆ ಸಿಗುವುದಿಲ್ಲ. ಇನ್ನು ತೀರ್ಪುಗಾರರಾಗಿ ಶಾಸ್ತ್ರಿ ಅವರ ಆಯ್ಕೆಯ ಬಗೆಗೂ ಪ್ರಶ್ನೆಗಳಿವೆ. ಈ ಬಾರಿ ರಾಜ್ಯಪ್ರಶಸ್ತಿ ಪಡೆದ ಶಾಸ್ತ್ರಿ ಅವರ 'ಸರಸಮ್ಮನ ಸಮಾಧಿ' ಚಿತ್ರದ ನಿರ್ಮಾಪಕರ ಇನ್ನೊಂದು ಸಿನಿಮಾ ಈ ಬಾರಿ ರಾಷ್ಟ್ರಪ್ರಶಸ್ತಿಯ ಸ್ಪರ್ಧೆಯಲ್ಲಿತ್ತು. ಹಾಗಾಗಿ ತೀರ್ಪುಗಾರರಾಗಿ ಶಾಸ್ತ್ರಿ ಅವರ ಆಯ್ಕೆ ಎಷ್ಟು ಸೂಕ್ತ?. ಈ ವಿಷಯದಲ್ಲಿ ಮಲಯಾಳಂ ಚಿತ್ರರಂಗ ಒಂದು ಒಳ್ಳೆಯ ಉದಾಹರಣೆ. ಇಂಥ ಅವ್ಯವಹಾರಗಳು ನಡೆಯುತ್ತವೆ ಅಂತಲೇ, ಪ್ರಶಸ್ತಿ ವಿಷಯದಲ್ಲಿ, ಮಲಯಾಳಂ ಚಿತ್ರಗಳಿಗೆ ಕೇರಳದ ಯಾವ ಜ್ಯೂರಿಗಳೂ ಇರುವುದಿಲ್ಲ. ಅಂಥ ಪದ್ಧತಿ ಕನ್ನಡ ಚಿತ್ರಗಳಿಗೂ ಬೇಡವೇ?
ಅಲ್ಲದೆ, ಪ್ರಶಸ್ತಿಗಳ ವಿಚಾರದಲ್ಲಿ ಸಾಮಾನ್ಯವಾಗಿ ಹೊಸಬರು ಈಗಾಗಲೇ ಪ್ರಶಸ್ತಿ ಪಡೆದಿರುವವರ ಸಲಹೆ ಕೇಳುವುದು ಸಹಜ. ಆದರೆ, ಈ ಬಾರಿ ತಮ್ಮ ಚಿತ್ರಗಳನ್ನೂ ಪ್ರಶಸ್ತಿಗೆ ಕಳಿಸಿರುವ ಹಳಬರು, ಫಾರ್ಮಾಲಿಟಿಗಳ ವಿಷಯದಲ್ಲಿ ಹೊಸಬರನ್ನು ಮಿಸ್ ಗೈಡ್ ಮಾಡಿ, ಅವರ ಚಿತ್ರಗಳಿಗೆ ಪ್ರಶಸ್ತಿ ಬಾರದಂತೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಅದು ನಿಜವಾಗಿದ್ದರೆ ಅದಕ್ಕಿಂಥ ನಾಚಿಕೆಗೇಡಿನ ವಿಷಯ ಇನ್ನೊಂದಿಲ್ಲ.
ಈ ಎಲ್ಲ ಬೆಳವಣಿಗೆಗಳ ನಂತರ, ಕೊನೆಗೂ ಉಳಿದಿರುವ ನಿರಾಸೆ ಎಂದರೆ, ಈ ವರ್ಷದ ರಾಷ್ಟ್ರಪ್ರಶಸ್ತಿಯ ನಂತರವೂ, ಜನ ನೋಡುವಂಥ ಚಿತ್ರಗಳಿಗೆ ಯಾಕೆ ಪ್ರಶಸ್ತಿ ಬರುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೆಸರೇ ಕೇಳಿಲ್ಲದಂಥ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು, ಪ್ರಶಸ್ತಿ ಪಡೆದು ಬಿಡುಗಡೆಯಾದ ಮೇಲೆಯೂ ಹೇಳಹೆಸರಿಲ್ಲದಂತೆ ಮಾಯವಾಗುವ ಚಿತ್ರಗಳ ಸಂತತಿ ಕಡಿಮೆಯಾಗಿಲ್ಲ.
'ಲಗಾನ್' ಎಂದರೆ ಸಾಕು ಆ ಇಡೀ ಚಿತ್ರ ಒಮ್ಮೆ ಸಿನಿಮಾ ಪ್ರಿಯರ ಕಣ್ಣಮುಂದೆ ಹಾದುಹೋಗುತ್ತದೆ. ಆ ಚಿತ್ರದ ಹೆಸರಿನ ಹಿಂದೆ 'ಅಮೀರ್ಖಾನ್ ನಾಯಕತ್ವದ', 'ಅಶುತೋಷ್ ಗೌವಾರೀಕರ್ ನಿರ್ದೇಶನದ' ಎಂಬೆಲ್ಲ ಒಕ್ಕಣೆಗಳ ಅಗತ್ಯವಿಲ್ಲ. ಏಕೆಂದರೆ ಅದು ಜನ ನೋಡಿ ಇಷ್ಟಪಟ್ಟಿರುವ ಚಿತ್ರ. ಅಂಥ ಚಿತ್ರಗಳಿಗೆ ಆಸ್ಕರ್, ರಾಷ್ಟ್ರಪ್ರಶಸ್ತಿ ಬಂದರೆ, ಅದು ನಿಜವಾದ 'ಪ್ರಶಸ್ತಿ ಸಮಯ'.
-ಹರಿ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

