ಪ್ರಹ್ಲಾದ್ ಜೋಶಿಯವರನ್ನು ಮುಂದಿಟ್ಟುಕೊಂಡು 'ಕೊಳಕೆಲ್ಲ ಕಳಚಿದೆ, ನಾವೀಗ ಶುಭ್ರಾಂಗರು' ಎಂದರೆ ಮತದಾರ ಪ್ರಭು ನಂಬುತ್ತಾನೆಯೇ?
ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯ್ಬಡಕೊ....
ಮತಸಮರಕ್ಕೆ ಹದವಾದ ರಾಜ್ಯ ರಾಜಕಾರಣದ ರಣಕಣದಲ್ಲಿ ಯುದ್ಧಾಹ್ವಾನಕ್ಕೆ ಶಂಖ ಮೊಳಗಿಸಲು ತಂದು ನಿಲ್ಲಿಸಿರುವ ಬಿಜೆಪಿಯ ಹೊಸ ಸೇನಾಧಿಪತಿಯ ಸಾಮರ್ಥ್ಯ ವಿಶ್ಲೇಷಣೆಗೆ ಇದಕ್ಕಿಂತ ಬೇರೆ ಶಬ್ದಗಳು ಸಿಗುತ್ತಿಲ್ಲ !
ಹಲವು ತಿಂಗಳುಗಳ ಹಗ್ಗಜಗ್ಗಾಟದ ನಂತರ ಕೊನೆಗೂ ರಾಜ್ಯ ಬಿಜೆಪಿಗೆ ಒಬ್ಬ ಅಧ್ಯಕ್ಷರನ್ನು 'ಭಿನ್ನಮತ' ಮರೆತು 'ಸರ್ವಾನುಮತ'ದಿಂದ ಪ್ರತಿಷ್ಠಾಪಿಸಲಾಗಿದೆ. ಸದಾನಂದಗೌಡ, ನಳೀನ್‌ಕುಮಾರ್ ಕಟೀಲ್, ಗೋವಿಂದ ಕಾರಜೋಳ ಮೊದಲಾದವರನ್ನೆಲ್ಲ ಹಿಂದಿಕ್ಕಿ ಬಿಜೆಪಿಯ ಅಧ್ಯಕ್ಷ ಧ್ವಜವನ್ನು ಸಂಸದ ಪ್ರಹ್ಲಾದ್ ಜೋಶಿ ಪಡೆದಿದ್ದಾರೆ.
ಕಳೆದ ಐದು ವರ್ಷದಿಂದ ಬಿಜೆಪಿಗೆ ಅಂಟಿದ ಕೊಳೆ ತೊಳೆಯಲು ಇರುವವರ ಪೈಕಿ ಮಿಸ್ಟರ್ ಕ್ಲೀನ್ ಇಮೇಜ್ ಹೊಂದಿರುವ ಪ್ರಹ್ಲಾದ್ ಜೋಶಿ ಅವರಿಗೆ ಪಟ್ಟಕಟ್ಟಲಾಗಿದೆ ಎಂದು ಬಿಜೆಪಿಯ ಚತುರಂಗ ಬಲ ವ್ಯಾಖ್ಯಾನಿಸುತ್ತಿದೆ. ಸ್ವಚ್ಛ, ಶುಭ್ರ, ಪ್ರಾಮಾಣಿಕ ಆಳ್ವಿಕೆಗೆ ಬಿಜೆಪಿಗೆ ಒಮ್ಮೆ ಅವಕಾಶ ಕೊಡಿ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಅದೆಲ್ಲವನ್ನೂ ಮರೆತು ಭ್ರಷ್ಟ ಆಡಳಿತ ಕೊಟ್ಟು ಅಧಿಕಾರದ ಮೆಟ್ಟಿಲು ಇಳಿಯುವ ಹೊತ್ತಿಗೆ ಮತ್ತೆ ಹಳೆಯ ರಾಗದ ಆಲಾಪನೆ ಆರಂಭಿಸಿದೆ. ಈ ರಾಗಕ್ಕೆ ಶೃತಿ ಹಿಡಿಯಲು ಹಾರ್ಮೋನಿಯಂ ಪೆಟ್ಟಿಗೆ ಹಿಡಿದು ಬಂದಿರುವ ಹೊಸ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸ್ವರ ಲೆಕ್ಕಾಚಾರಕ್ಕೂ ಬೇರೆಯವರ ಮುಖ ನೋಡಬೇಕಿದೆ.
ವೈಯಕ್ತಿಕವಾಗಿ ಒಳ್ಳೆಯವರಾದರೂ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಛಾಯೆ. ಇದನ್ನು ಜೋಶಿ, ಅನಂತ್‌ಕುಮಾರ್, ಶೆಟ್ಟರ್, ಈಶ್ವರಪ್ಪ ಅಲ್ಲಗಳೆದರೂ ಊರು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವರನ್ನು ಬಿಜೆಪಿಯ ನಾವಿಕನ ಸ್ಥಾನದಲ್ಲಿ ಕುಳ್ಳಿರಿಸಿರುವುದರಿಂದ ಬಿರುಗಾಳಿಗೆ ಸಿಲುಕಿ ತಳ ಒಡೆದು ಮುಳುಗುತ್ತಿರುವ ಹಡಗಿನ ಮೇಲೆ ನೂರು ಟನ್ ತೂಕದ ಕಬ್ಬಿಣವನ್ನು ಹೇರಿದಂತಾಗಿದೆ.
ಅಧಿಕಾರ ಸ್ವೀಕರಿಸಿದ ದಿನವೇ ಜೋಶಿ, ಅನಂತ್‌ಕುಮಾರ್ ಆಡಿರುವ ಮಾತುಗಳನ್ನು ಗಮನಿಸಿದಾಗ ' ಕೋಬ್ರಾ ಬ್ರ್ಯಾಂಡ್' ಫಿನೈಲ್ ಹಾಕಿ '555 ಮಂಕಿ ಬ್ರ್ಯಾಂಡ್ ' ಪೊರಕೆಯಲ್ಲಿ ' ಪಕ್ಷವನ್ನು ಶುಚಿಗೊಳಿಸುವ ಪ್ರಯತ್ನ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ವೈಯಕ್ತಿವಾಗಿ ಜೋಶಿ ಸ್ವಚ್ಚ ಚಾರಿತ್ರ್ಯದವರಾಗಿರಬಹುದು ಆದರೆ ಅವರು ಸಾರಥ್ಯ ವಹಿಸಿಕೊಂಡಿರುವ ಪಕ್ಷ ಈಗ ಆ ಸ್ಥಿತಿಯಲ್ಲಿ ಇಲ್ಲ. ಸಂಪುಟದಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಚಿವರು ಕಳಂಕಿತರಾಗಿದ್ದು, ಕೈ ಹಾಕಿದಲ್ಲೆಲ್ಲ ಭ್ರಷ್ಟಚಾರದ ಕೊಳಕು ಮೆತ್ತಿಕೊಂಡಿದೆ. ಇಂಥ ಸಂದರ್ಭದಲ್ಲಿ ಅನನುಭವಿ ಜೋಶಿ ಅಧ್ಯಕ್ಷರಾಗಿದ್ದಾರೆ. ಇದು ಅಕ್ಷರಶಃ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗುಡಿಸಿ ತೊಳೆದು ರಂಗೋಲಿ ಹಾಕುವ ಪ್ರಯತ್ನವಲ್ಲದೇ ಮತ್ತೇನು ಅಲ್ಲ.
ಹಾಗೆ ನೋಡಿದರೆ ಜೋಶಿ ಆಯ್ಕೆ ಹಿಂದೆ ಕಾಣುತ್ತಿರುವುದು ಮತ್ತದೇ ಬಿಜೆಪಿಯ ಬ್ಲ್ಯಾಕ್‌ಮೇಲ್ ರಾಜಕಾರಣವೇ ! ಹಿಂದೆ ಈ ತಂತ್ರವನ್ನು ಆ ಪಕ್ಷದ ನಿರ್ಗಮಿತ ನಾಯಕ ಬಿ.ಎಸ್.ಯಡಿಯೂರಪ್ಪ ವರಿಷ್ಠರ ಮುಂದೆ ಉರುಳಿಸಿ ತಮಗೆ ಬೇಕಾಗಿದ್ದನ್ನು ಸಾಧಿಸಿಕೊಳ್ಳುತ್ತಿದ್ದರು. ಈಗ ಆ ಸ್ಥಾನವನ್ನು ಅನಂತ್‌ಕುಮಾರ್ ಆವರಿಸಿಕೊಂಡಿದ್ದಾರೆ. ಆದರೆ ಈಗಲೂ ಅವರು ದಾಳವನ್ನು ತೆರೆಮರೆಯಲ್ಲಿ ನಿಂತೇ ಉರುಳಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜಿನಾಮೆ ನೀಡಿದಾಗ ಯಾರು ಮುಂದಿನ ಆಯ್ಕೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಒಡೆದ ಮನೆಯಾಗಿರುವ ಬಿಜೆಪಿಯಲ್ಲಿ ಸಹಜವಾಗಿಯೇ ಭಿನ್ನ ಆಯ್ಕೆಗಳೇ ಹುಟ್ಟಿಕೊಂಡವು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ನಳೀನ್‌ಕುಮಾರ್ ಕಟೀಲ್, ಆರ್.ಅಶೋಕ, ಗೋವಿಂದ ಕಾರಜೋಳ, ಪ್ರಹ್ಲಾದ್ ಜೋಶಿಯವರ ಹೆಸರುಗಳು ಕೇಳಿ ಬಂದವು. ಆದರೆ ಯಾರ ಆಯ್ಕೆಯೂ ಸುಲಭವಾಗಿರಲಿಲ್ಲ. ಏಕೆಂದರೆ ಪ್ರತಿಯೊಬ್ಬರ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳು, ಭವಿಷ್ಯದ ರಾಜಕೀಯ ಚಿಂತನೆಗಳು, ಹಿಂಬಾಗಿಲ ಕುಚೋದ್ಯಗಳು ಕಾಣುತ್ತಿದ್ದವು. ಒಟ್ಟಾರೆಯಾಗಿ ರಾಜ್ಯಾಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಉಳಿದಿದ್ದು ಮಾತ್ರವಲ್ಲ, ಪ್ರಕ್ರಿಯೆ ಸುಲಲಿತವಾಗಿ ಸಾಗದಿದ್ದರೆ ಮತ್ತೆ ಈಶ್ವರಪ್ಪನವರನ್ನೇ ಮುಂದುವರಿಸುವ ಪ್ರಸ್ತಾಪಗಳು ಕೇಳಿ ಬಂದವು.
ಆದರೆ ಖುದ್ದು ಈಶ್ವರಪ್ಪನವರಿಗೆ ಇದು ಬೇಕಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಸೋತು ಸುಣ್ಣವಾಗುವುದನ್ನು ಮೊದಲೇ ಗ್ರಹಿಸಿದ್ದ ಈಶ್ವರಪ್ಪ ಹೈಕಮಾಂಡ್‌ಗೆ ರಾಜಿನಾಮೆ ಪತ್ರ ರವಾನಿಸಿದ್ದು ಮಾತ್ರವಲ್ಲ, ಪಕ್ಷದ ಜವಾಬ್ದಾರಿ ಸಾಕಪ್ಪಾ ಸಾಕು ಎಂಬ ಹಂತ ತಲುಪಿದ್ದರು. ಪಕ್ಷದ ಭವಿಷ್ಯಕ್ಕಿಂತ ಹೆಚ್ಚಾಗಿ ಶಿವಮೊಗ್ಗದಲ್ಲಿ ತಮ್ಮ ಹಣೆಬರಹ ಸುಧಾರಿಸಿಕೊಳ್ಳುವುದು ಅವರ ಮುಂದಿನ ದೊಡ್ಡ ಸವಾಲಾಗಿತ್ತು. ತಮ್ಮ ಒಂದು ಕಣ್ಣು ಹೋದರೂ ಚಿಂತೆಯಿಲ್ಲ, ಈಶ್ವರಪ್ಪನವರನ್ನು ಖಾಯಂ ದೃತರಾಷ್ಟ್ರನನ್ನಾಗಿ ಮಾಡುವ ಶಪಥವನ್ನು ಬಿ.ಎಸ್.ಯಡಿಯೂರಪ್ಪ ತೊಟ್ಟಿದ್ದಾರೆ. ಹೀಗಾಗಿ ರಾಜ್ಯ ಸುತ್ತಿ ಪಕ್ಷ ಕಟ್ಟುವ ಬದಲು, ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಯಡಿಯೂರಪ್ಪ ಬಿಡುವ ಬಾಣಗಳನ್ನು ತುಂಡರಿಸುವ ಲೆಕ್ಕಾಚಾರದಲ್ಲಿ ಈಶ್ವರಪ್ಪ ಮುಳುಗಿದ್ದರು. ಹಾಗಂಥ ರಾಜ್ಯ ಬಿಜೆಪಿಯಲ್ಲಿ ತಾವು ಹೊಂದಿರುವ ಹಿಡಿತ ಬಿಟ್ಟುಕೊಡುವ ಮನಸ್ಸು ಇರಲಿಲ್ಲ. ಹೀಗಾಗಿ ತಮ್ಮ ಮೂಗಿನ ನೇರಕ್ಕೆ ವರ್ತಿಸುವ ವ್ಯಕ್ತಿಯ ಆಯ್ಕೆಗೆ ಅವರೂ ಪ್ರಯತ್ನಿಸಿದ್ದು ಸತ್ಯ. ಸಹಜವಾಗಿಯೇ ಅವರ ಕಣ್ಣುಗಳು ಸಂಸದ ನಳೀನ್‌ಕುಮಾರ್ ಕಟೀಲ್ ಅವರತ್ತ ಹೊರಳಿತ್ತು.
ಇದೇ ಕಾಲಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬ ವಾತಾವರಣ ಹೈಕಮಾಂಡ್‌ನಲ್ಲಿ ಮೂಡಿತ್ತು. ಸಂಘ-ಪರಿವಾರದ ಹಿನ್ನೆಲೆ ಇರುವ , ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿರುವ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಳಿಸಿದ ಹೆಸರು ಅವರಿಗೆ ವರವಾಗಿ ಪರಿಣಮಿಸಿತ್ತು. ಇದನ್ನು ಮೀರಿ ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಎನಿಸಬಲ್ಲ ಕೆಲ ಶಕ್ತಿ ಅವರ ಜತೆ ಇತ್ತು. ಸದಾ ನಗುವ ಸದಾನಂದಗೌಡ ಮುಖಕ್ಕೆ ಹೊಡೆದಂತೆ ಮಾತನಾಡುವುದರಲ್ಲೂ ನಿಸ್ಸೀಮರು. ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಟೀಕಾ ಪ್ರಹಾರಗಳಿಗೆ ಪ್ರತ್ಯುತ್ತರ ನೀಡಬಲ್ಲ ಚಾಕಚಕ್ಯತೆಯೂ ಅವರಲ್ಲಿ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವರು ರಾಜ್ಯದ ಎರಡನೇ ಪ್ರಬಲ ಒಕ್ಕಲಿಗ ಸಮುದಾಯವನ್ನು ಅವರು ಪ್ರತಿನಿಧಿಸುತ್ತಿದ್ದರು.
ಹೀಗಾಗಿ ಕಟೀಲ, ಸದಾನಂದಗೌಡ ಇಬ್ಬರ ಪೈಕಿ ಒಬ್ಬರ ಆಯ್ಕೆ ಖಚಿತವಾಗುತ್ತಿದ್ದಂತೆ ಸಚಿವ ಗೋವಿಂದ ಕಾರಜೋಳ ಅವರ ಹೆಸರು ತೇಲಿ ಬಿಡಲಾಯಿತು. ಪರಿಶಿಷ್ಟ ಜಾತಿಗೆ ಸೇರಿದ ಕಾರಜೋಳರನ್ನು ರಾಜ್ಯಧ್ಯಕ್ಷರಾಗಿ ಆಯ್ಕೆ ಮಾಡುವುದರಿಂದ ಕಾಂಗ್ರೆಸ್ ಜತೆಗಿರುವ ಪ್ರಬಲ ಸಮುದಾಯವನ್ನು ತಮ್ಮತ್ತ ಸೆಳೆಯಬಹುದೆಂಬ ಚಿತ್ರಣ ನೀಡಲಾಯಿತು. ಅಂದ ಹಾಗೆ ಈ ಪ್ರಯತ್ನದ ಹಿಂದಿದ್ದ ಶಕ್ತಿ ಅನಂತ್‌ಕುಮಾರ್. ಆದರೆ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಮುಖಂಡ ಅರುಣ್ ಜೇಟ್ಲಿ ಅಳೆದು-ತೂಗಿ ಅಂತಿಮಗೊಳಿಸಿದ್ದು ಕಟೀಲ್ ಹಾಗೂ ಸದಾನಂದಗೌಡರನ್ನು. ಈ ಆಯ್ಕೆ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ ಜೇಟ್ಲಿ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕಟಿಸುವುದಾಗಿ ಬೆಂಗಳೂರು ಬಿಡುವ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು.
ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಈಗ ಬಿಜೆಪಿಯ ಜತೆಗಿಲ್ಲ. ಮೇಲಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ತಮ್ಮ ನಾಯಕರು ಎಂದು ಒಪ್ಪಿಕೊಳ್ಳಲು ಲಿಂಗಾಯತರು ಸಿದ್ದರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ವೀರಶೈವ ಸಮುದಾಯ ಯಾವ ಪಕ್ಷದ ಜತೆಯೂ ಒಟ್ಟಾಗಿ ನಿಲ್ಲುವುದಿಲ್ಲ ಎಂಬ ಸ್ಪಷ್ಟ ರಾಜಕೀಯ ಲೆಕ್ಕಾಚಾರ ಹಿಡಿದ ಜೇಟ್ಲಿ ಇನ್ನೊಂದು ಪ್ರಬಲ ಸಮುದಾಯ ಪ್ರತಿನಿಧಿಸುವ ಸದಾನಂದಗೌಡರತ್ತಲೇ ಒಲವು ಹೊಂದಿದ್ದರು.
ಆದರೆ ಸದಾನಂದಗೌಡರಂಥ ಚತುರ ರಾಜಕಾರಣಿಯ ಕೈಗೆ ಬಿಜೆಪಿಯ ಪಾರಪತ್ಯವನ್ನು ನೀಡುವುದು ಅನಂತ್‌ಕುಮಾರ್ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹಾಗಂಥ ತಾವೇ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಕ್ಕೂ ಅವರು ಸಿದ್ಧರಿರಲಿಲ್ಲ. ಏಕೆಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಏನಾಗಬಹುದು ಎಂಬ ಸತ್ಯದ ಅರಿವಿದೆ. ಮುಳುಗುತ್ತಿರುವ ಹಡಗನ್ನು ದಡ ಸೇರಿಸಲು ಪ್ರಯತ್ನಿಸಿ ಉಪ್ಪು ನೀರು ಕುಡಿಯುವ ಬದಲು ದಡದಲ್ಲಿ ನಿಂತು ದುರಂತ ವೀಕ್ಷಣೆ ಲೇಸೆಂದು ತರ್ಕಿಸಿದ ಅವರು ಶರಣಾಗಿದ್ದು, ತಾವು ಯಡಿಯೂರಪ್ಪನವರಿಂದ ಕಲಿತ ಬ್ಲ್ಯಾಕ್‌ಮೇಲ್ ರಾಜಕಾರಣಕ್ಕೆ. ಮೊದಲಿನಿಂದಲೂ ಹಿಂಬದಿ ರಾಜಕಾರಣದ ಲಾಭವನ್ನೇ ಪಡೆದಿರುವ ಅವರು ಹೋರಾಟದ ಕಣದಲ್ಲಿ ಎಂದೂ ಕಾಣಿಸಿಕೊಂಡವರಲ್ಲ. 2004ರಲ್ಲೂ ಇದೇ ವಿದ್ಯೆ ಪ್ರದರ್ಶನ ಮಾಡಿದ್ದ ಅವರು, ಹೊಂದಾಣಿಕೆ ಮೂಲಕ ಅಧಿಕಾರ ಸಿಕ್ಕುವ ಸಾಧ್ಯತೆ ಗ್ರಹಿಸಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಳಂಬವಾಗುವಂತೆ ಮಾಡಿದ್ದರು. ಈ ಬಾರಿಯೂ ಅದೇ ತಂತ್ರ ಹೂಡಿದ ಅನಂತ್ ಕೊನೆಗೂ ತಮ್ಮ ಛಾಯಾ ಸ್ವರೂಪಿ ಪ್ರಹ್ಲಾದರನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದರು. ಪ್ರಹ್ಲಾದ್ ಜೋಶಿ ಅವರ ಹೆಸರಿನೊಂದಿಗೆ 12 ಜನ ಸಂಸದರ ನಿಯೋಗವನ್ನು ಹೈಕಮಾಂಡ್ ಮುಂದೆ ಕರೆದೊಯ್ದ ಅನಂತ್‌ಕುಮಾರ್ ವರಿಷ್ಠರ ಮೇಲೆ ಒತ್ತಡ ತಂದು ತಮ್ಮ ಉದ್ದೇಶ ಸಾಧನೆಯಲ್ಲಿ ಸಫಲರಾಗಿದ್ದಾರೆ.
ಅನಂತ್‌ಕುಮಾರ್ ಅವರಿಗೇನೋ ಜೋಶಿ ಆಯ್ಕೆ ಜೋಶ್ ನೀಡಿರಬಹುದು. ಆದರೆ ಬಿಜೆಪಿಗೇ ? ಹಿರಿಯ ತಲೆಗಳನ್ನು ಗುಟ್ಟಾಗಿ ಕರೆದು ಪ್ರಶ್ನಿಸಿದರೆ ಯಾರೂ ಇದೊಂದು ಉತ್ತಮ ಆಯ್ಕೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಪಕ್ಷವನ್ನು ಮುನ್ನೆಡೆಸಬಹುದಾದ ಯಾವ ಗುಣಗಳು ಜೋಶಿ ಅವರಲ್ಲಿ ಇನ್ನೂ ಬೆಳೆದಿಲ್ಲ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿದ್ದರೂ, ಅದಕ್ಕೆ ಅವರು ನೆಚ್ಚಿಕೊಂಡಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅವರು ಪ್ರತಿನಿಧಿಸುವ ಲಿಂಗಾಯಿತ ಸಮುದಾಯವನ್ನು. ಬಿಜೆಪಿಯ ಪಿತಾಮಹರ ಪೈಕಿ ಒಬ್ಬರಾಗಿರುವ ಜಗನ್ನಾಥ್‌ರಾವ್ ಜೋಶಿ ಅವರಂಥವರ ಕೈ ಹಿಡಿಯದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಗೆಲುವು ಸಾಧಿಸಿದ್ದು, ಲಿಂಗಾಯಿತ ಮುಖಂಡರ ಬೆಂಬಲದೊಂದಿಗೆ ಹೊರತು ಬೇರೆ ಯಾವುದೇ ಮಾನದಂಡಗಳಿಂದ ಅಲ್ಲ. ಆದರೂ ಅವರ ಜತೆಗೊಂದು ಅಸ್ತ್ರವಿದೆ. ಅದು ಸಜ್ಜನಿಕೆ ಮಾತ್ರ. ಆದರೆ ಬಿಜೆಪಿ ಆ ಶಬ್ದ ಹೊರಸೂಸುವ ಅರ್ಥವ್ಯಾಪ್ತಿಯಿಂದ ದೂರ ಸರಿದು ಬಹಳ ಸಮಯ ಕಳೆದು ಹೋಗಿದೆ. ಹಣ, ಜಾತಿ, ತೋಲ್ಬಲದ ಆಧಾರದ ಮೇಲೆ ಚುನಾವಣೆ ಜಯಿಸುವುದೇ ಸುಲಭ ಎಂಬ ಪುರಾತನ ಚುನಾವಣಾ ತಂತ್ರಗಾರಿಕೆಯನ್ನು ಬಿಜೆಪಿಯ ಪ್ರತಿಯೊಬ್ಬ ಶಾಸಕರು, ಸಚಿವರು, ಮುಖಂಡರು ಅರಿತುಕೊಂಡಿರುವುದು ಮಾತ್ರವಲ್ಲ, ಅದರ ಬಳಕೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳನ್ನು ಮೀರಿಸುತ್ತಿದ್ದಾರೆ.
ಸಜ್ಜನಿಕೆ, ಪ್ರಾಮಾಣಿಕತೆ, ನಮಸ್ತೇ ಸದಾ ವತ್ಸಲೆ ಮಾತೃಭೂಮಿ ಎಂಬ ರಾಷ್ಟ್ರಭಕ್ತಿಯ ಪರಾಕಾಷ್ಠೆ ಪಕ್ಷದ ಪಡಸಾಲೆಯಿಂದ ಕಾಣೆಯಾಗಿ ಹಲವು ಸಮಯ ಸರಿದು ಹೋಗಿದೆ. ಆ ಜಾಗದಲ್ಲಿ ಸ್ವಾರ್ಥ, ದ್ವೇಷದ ರಾಜಕಾರಣ, ಭ್ರಷ್ಟತೆ, ಸ್ವಜನ ಪಕ್ಷಪಾತ ಆವರಿಸಿಕೊಂಡಿದೆ. ಪ್ರಹ್ಲಾದ್ ಜೋಶಿಯವರನ್ನು ಮುಂದಿಟ್ಟುಕೊಂಡು 'ಕೊಳಕೆಲ್ಲ ಕಳಚಿದೆ, ನಾವೀಗ ಶುಭ್ರಾಂಗರು' ಎಂಬ ಸೋಗಿನಲ್ಲಿ ಚುನಾವಣೆ ಗೆಲ್ಲುವುದು ಕೇವಲ ಭ್ರಮೆ ಎಂಬುದು ಜನತೆಯ ಅಭಿಪ್ರಾಯ.
ಲಗೋರಿ : ಸಮರದಲ್ಲಿ ಸಜ್ಜನಿಕೆಯನ್ನು ಆಯುಧವಾಗಿ ಬಳಸುವುದು ಸಮ್ಮತವಲ್ಲ.
- ಪಿ. ತ್ಯಾಗರಾಜ್
thyagarjun@gmail.com