ಹೇಳಿ, ಮತದಾರನೆದುರು ಅದ್ಯಾವ ಆಯ್ಕೆ ಇದೆ?

ಹೇಳಿ, ಮತದಾರನೆದುರು ಅದ್ಯಾವ ಆಯ್ಕೆ ಇದೆ? ಈ ಸಲದ ಚುನಾವಣೆಯಲ್ಲಿ...
Updated on: 

ಈ ಸಲದ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲೆಂದು ನನ್ನ ಸಹೋದ್ಯೋಗಿ ಮಿತ್ರರು ಸೇರಿ ಒಂದು ನಿಮಿಷದ ಚಿತ್ರ ಮಾಡಿ ನನಗೆ ತೋರಿಸಿದರು. ತಳ್ಳುಗಾಡಿಯಲ್ಲಿ ತರಕಾರಿ ಮಾರುವವನ ಮುಂದೆ ಗೃಹಿಣಿಯೊಬ್ಬಳು ಚೌಕಾಶಿ ಮಾಡಿ ತರಕಾರಿ ಖರೀದಿಸುವ ದೃಶ್ಯ. ಆಕೆಗೆ ಯಾವ ತರಕಾರಿಯೂ ಇಷ್ಟವಾಗುವುದಿಲ್ಲ. ಇದು ಬಲಿತಿದೆ, ಇದು ಕೊಳೆತಿದೆ, ಇದಕ್ಕೆ ಇಷ್ಟೊಂದು ಬೆಲೆಯಾ, ಕಮ್ಮಿ ಕೊಡೊಲ್ವಾ, ಇಷ್ಟು ರೇಟಿಗೆ ಕೊಟ್ಟರೆ ಕೊಳ್ಳುತ್ತೇನೆ...ಎಂದೆಲ್ಲ ಆಕೆ ಚೌಕಾಶಿ ಮಾಡುತ್ತಿರುತ್ತಾಳೆ. ತರಕಾರಿಯವನ ಹಾಗೂ ಆ ಗೃಹಿಣಿಯ ಮಾತುಕತೆಯನ್ನು ಪಕ್ಕದಲ್ಲಿ ನಿಂತ ಸಿನಿಮಾ ನಟ ಉಪೇಂದ್ರ ಕೇಳಿಸಿಕೊಳ್ಳುತ್ತಿರುತ್ತಾನೆ. 'ಅಲ್ಲಮ್ಮ, ಇಷ್ಟು ತರಕಾರಿ ಖರೀದಿಸಲು ಅಷ್ಟೆಲ್ಲಾ ಚೌಕಾಶಿ ಮಾಡ್ತೀರಲ್ಲ?' ಅಂತ ಕೇಳುತ್ತಾನೆ. ಅದಕ್ಕೆ ಆ ಗೃಹಿಣಿ, 'ಅಲ್ವಾ ಮತ್ತೆ? ಒಳ್ಳೆಯ ತರಕಾರಿ ಖರೀದಿಸಿದರೆ ಒಳ್ಳೆಯ ಅಡುಗೆ ಮಾಡಬಹುದು. ಒಳ್ಳೆಯ ಅಡುಗೆ ಸೇವಿಸಿದರೆ ಒಳ್ಳೆಯ ಆರೋಗ್ಯ, ಸಂಸಾರ...' ಎಂದು ಪ್ರತಿಕ್ರಿಯಿಸುತ್ತಾಳೆ. ಅದಕ್ಕೆ ಉಪೇಂದ್ರ ಹೇಳುತ್ತಾನೆ-'ನೀವು ತರಕಾರಿ ಖರೀದಿಸುವಾಗ ತೋರುವ ಕಾಳಜಿ, ಕಳಕಳಿಯನ್ನು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಸಂದರ್ಭದಲ್ಲೂ ತೋರಿದ್ದರೆ ಬಹಳ ಚೆನ್ನಾಗಿತ್ತು. ಒಳ್ಳೆಯ ಅಭ್ಯರ್ಥಿಯನ್ನು ಆರಿಸಿದರೆ ಒಳ್ಳೆಯ ಸರಕಾರ, ಒಳ್ಳೆಯ ಸರಕಾರ ಅಂದ್ರೆ ಒಳ್ಳೆಯ ಸಮಾಜ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಅವರಿಗೆ ಮತ ಹಾಕೋಣ.' ಇಷ್ಟೆ, ಇಲ್ಲಿಗೆ ಆ ಚಿತ್ರ ಮುಗಿಯುತ್ತದೆ. ಒಂದು ನಿಮಿಷದ ಈ ಪುಟ್ಟ ಚಿತ್ರ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದೆನಿಸಿತು.
ಆದರೆ ಈ ಚಿತ್ರ ನೋಡಿದ ಬಳಿಕ ನನ್ನ ಯೋಚನೆ ಮಗ್ಗುಲ ಹಾದಿಯನ್ನು ಹಿಡಿಯಿತು. ಅದೆಲ್ಲ ಸರಿ, ಒಳ್ಳೆಯ ಅಭ್ಯರ್ಥಿಗಳು ಅಂದ್ರೆ ಯಾರು? ಅವರೆಲ್ಲಿದ್ದಾರೆ? ತರಕಾರಿಗಳನ್ನು ಆರಿಸುವಾಗ ನಮ್ಮ ಮುಂದೆ ಆಯ್ಕೆ (options)ಗಳಿರುತ್ತವೆ. ಒಳ್ಳೆಯ ತರಕಾರಿ ಸಿಗಲಿಲ್ಲವೆಂದು ನಾವು ಕೊಳೆತ ತರಕಾರಿಯನ್ನು ಖರೀದಿಸುವುದಿಲ್ಲ. ಬೇಕಾದರೆ ಖರೀದಿಸದೇ ಖಾಲಿ ಕೈಯಲ್ಲಿ ಬಂದೇವು. ಅಭ್ಯರ್ಥಿಗಳ ವಿಷಯದಲ್ಲಿ ಹಾಗಲ್ಲವಲ್ಲ. ಮತದಾನ ಮಾಡದೇ ಸುಮ್ಮನೆ ಕುಳಿತುಕೊಳ್ಳಬಹುದು ಎಂದು ಹೇಳುವ ಹಾಗಿಲ್ಲವಲ್ಲ. ಆಗಲೂ ಅಯೋಗ್ಯ ಅಭ್ಯರ್ಥಿಯನ್ನು ಬೆಂಬಲಿಸಿದಂತೆ ಆದೀತು.
ನಾಲ್ಕೋ, ಐದೋ ಪಕ್ಷಗಳ ಅಭ್ಯರ್ಥಿಗಳ ಪೈಕಿ ಯಾರೂ ಉತ್ತಮರು ಸಿಗದಿದ್ದಾಗ, ಕಡಿಮೆ ಕೆಟ್ಟವ, ಕಡಿಮೆ ಭ್ರಷ್ಟ, ಕಡಿಮೆ ವಂಚಕನನ್ನು ಆರಿಸುವುದು ನಮ್ಮ ಮುಂದಿರುವ ಆಯ್ಕೆ, ವಿಪರ್ಯಾಸವೆಂದರೆ ಈ ಕಡಿಮೆ ಕೆಟ್ಟವ ಆರಿಸಿ ಬಂದ ಬಳಿಕ ಜಾಸ್ತಿ ಕೆಟ್ಟವನಾಗುತ್ತಾನೆ, ಕಡಿಮೆ ಭ್ರಷ್ಟ ಭಾರೀ ಭ್ರಷ್ಟನಾಗುತ್ತಾನೆ. ಇದರಿಂದ ಈ ವರ್ತುಲ ಹಾಗೇ ಮುಂದುವರಿಯುತ್ತದೆ.
ನಮ್ಮ ಮುಂದೆ ನಿದರ್ಶನವೇ ಇದೆ. ಈ ಕಾಂಗ್ರೆಸ್, ಜೆಡಿಎಸ್ನವರಿಗೆಲ್ಲ ಛಾನ್ಸ್ ಕೊಟ್ಟಿದ್ದಾಯ್ತು, ಇವರೆಲ್ಲರೂ ಭ್ರಷ್ಟರಾಗಿದ್ದಾರೆ. ಇನ್ನೂ ಅಧಿಕಾರಕ್ಕೆ ಬರದ, ಭ್ರಷ್ಟರಾಗದ ಬಿಜೆಪಿಯವರಿಗೆ ಒಂದು ಛಾನ್ಸ್ ಕೊಡೋಣ ಎಂದು ಬಿಜೆಪಿ ಅಭ್ಯರ್ಥಿಗಳನ್ನು ಆರಿಸಿದೆವು. ಬಿಜೆಪಿ ಸರಕಾರವೂ ಬಂತು.
ಏನಾಯ್ತು ಹೇಳಿ? ಕಂಡು ಕೇಳರಿಯದ ಭ್ರಷ್ಟ ಸರಕಾರವನ್ನು ನೋಡಿದೆವು. ಇವರಾದರೂ ನಮ್ಮ ಊಹೆ, ನಿರೀಕ್ಷೆಯನ್ನು ಮೂರಾಬಟ್ಟೆ ಮಾಡಲಿಕ್ಕಿಲ್ಲ ಎಂದು ಅಂದುಕೊಂಡಿದ್ದೆವು. ಆದರೆ ಬಿಜೆಪಿಯವರು ಕೊಟ್ಟಂಥ ಅತಿ ಕೆಟ್ಟ ಆಡಳಿತವನ್ನು ಹಿಂದಿನ ಯಾವ ಸರಕಾರವೂ ಕೊಟ್ಟಿರಲಿಲ್ಲ. ಅತ್ಯಂತ ಸಂಭಾವಿತರು, ಕಡಿಮೆ ಕೆಟ್ಟವರು, ಕಡಿಮೆ ಭ್ರಷ್ಟರು ಎಂದೆನಿಸಿಕೊಂಡವರು ಎಲ್ಲರನ್ನೂ ಮೀರಿಸಿಬಿಟ್ಟರು! ಕಾಂಗ್ರೆಸ್ನವರು, ಜೆಡಿಎಸ್ನವರೇ ವಾಸಿ ಎಂದು ಅನಿಸುವಷ್ಟರ ಮಟ್ಟಿಗೆ ವಾಕರಿಕೆ, ಅಸಹ್ಯ ತರಿಸಿಬಿಟ್ಟರು. ಜಗಳ, ಗದ್ದಲ, ಬಂಡಾಯ, ಹಗರಣ, ವಿವಾದ, ಅತಿರೇಕ, ಅಸಹ್ಯ, ಅಪಸವ್ಯ...ಗಳಿಲ್ಲದ ದಿನಗಳೇ ಇಲ್ಲ ಎನ್ನುವಂತಾಯಿತು. ಆಡಳಿತ ಸುಸೂತ್ರವಾಗಿ ನಡೆಯುತ್ತಿದೆಯೆಂಬ ಭರವಸೆ, ನಂಬಿಕೆಗಳು ಜನಸಾಮಾನ್ಯರಿಂದ ದೂರವಾದವು. ಎಲ್ಲರೂ ಅಂಗಡಿ ತೆರೆದು ಕುಳಿತು -ಬಿಟ್ಟಿದ್ದಾರಾ ಎಂಬ ರೀತಿಯಲ್ಲಿ ವ್ಯಾಪಾರಕ್ಕೆ ಕುಳಿತು ಬಿಟ್ಟರು. ವಿಧಾನಸೌಧಕ್ಕಿಂತ ದೊಡ್ಡ ಶಾಪಿಂಗ್ಮಾಲ್ ಯಾವುದಿದೆ ಎಂದು ಜನರು ಆಡಿಕೊಳ್ಳುವ ಮಟ್ಟಕ್ಕೆ ವ್ಯಾಪಾರ ಕುದುರಲಾರಂಭಿಸಿತು. ತಾವು ಯಾರಿಗೇನೂ ಕಡಿಮೆ ಇಲ್ಲ ಎಂಬುದನ್ನು ಬಿಜೆಪಿಯವರು 'ಪ್ರಾಮಾಣಿಕ'ವಾಗಿಯೇ ಸಾಬೀತುಪಡಿಸಿದರು. ಇನ್ನೇನು ಚುನಾವಣೆ ಘೋಷಣೆಯಾಗುವ ಕೊನೆಯ ಕ್ಷಣದವರೆಗೂ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ವಾರದಲ್ಲಿ ಎರಡೆರಡು ಕ್ಯಾಬಿನೆಟ್ ಮೀಟಿಂಗ್ಗಳು, ಇನ್ನೂರು-ಮುನ್ನೂರು ಕಡತಗಳ ವಿಲೇವಾರಿ, ನೂರಾರು ನಿರ್ಧಾರಗಳು...ಪ್ರತಿ ನಿರ್ಧಾರದ ಹಿಂದೆಯೂ ಹಣದ ಸದ್ದು.
ಇವರೆಲ್ಲರಿಗೆ ನೀತಿಬೋಧಕರಾಗಿದ್ದ, ಆತ್ಮಸಾಕ್ಷಿಯ ಪ್ರಜ್ಞೆಯಂತಿದ್ದ, ಕಿವಿ ಹಿಂಡುವ ದೊಡ್ಡಣ್ಣನಂತಿದ್ದ ಸಂಘ ಪರಿವಾರದ ನಾಯಕರು ಸಹ ಬಕ್ಕಬೋರಲಾಗಿ ಬಿದ್ದುಬಿಟ್ಟರು. ತಮ್ಮ ಕಣ್ಣೆದುರಿಗೇ ಇಷ್ಟೆಲ್ಲ ಅನಾಚಾರ, ಲೂಟಿ ನಡೆಯುತ್ತಿದ್ದರೂ ಅಸಹಾಯಕರಾಗಿ ಏನೂ ಮಾಡಲಾಗದವರಂತೆ ಕೈ ಕಟ್ಟಿ ಕುಳಿತಿದ್ದು ಮಾತ್ರ ದೊಡ್ಡ ಪ್ರಶ್ನೆಯೇ! ಐದು ವರ್ಷ ಮುಗಿಸುವ ಹೊತ್ತಿಗೆ, ಸಂಘ ಪರಿವಾರದ ನಾಯಕರನ್ನಾಗಲಿ, ಸ್ವಯಂ ಸೇವಕರನ್ನಾಗಲಿ ಕೇಳಿ ನೋಡಿ, ಅವರ್ಯಾರಿಗೂ 'ಇದು ನಮ್ಮ ಸರಕಾರ, ಇದು ನಮ್ಮ ಬಿಜೆಪಿ ಸರಕಾರ', ಎಂದು ಅಭಿಮಾನದಿಂದ ಎದೆತಟ್ಟಿ ಹೇಳಿಕೊಳ್ಳುವಂಥ ಅಧಿಕಾರವನ್ನಾಗಲಿ, ಆಡಳಿತವನ್ನಾಗಲಿ ಕೊಡಲಿಲ್ಲವಲ್ಲ ಎಂಬ ಸಂಕಟ, ನೋವು, ಬೇಗುದಿ, ವಿಷಾದ, ವಿಷಣ್ಣತೆ ಆವರಿಸದೇ ಇರದು. ಹಾಗೆ ನೋಡಿದರೆ ಅವರು ಈ ಸರ್ಕಾರವನ್ನು disownಮಾಡಿ ಬಹಳ ದಿನಗಳೇ ಕಳೆದಿದ್ದರೂ, ಅಷ್ಟು ಬೇಗ ಸಂಬಂಧವನ್ನು ಕಳೆದುಕೊಳ್ಳಲು, ಕಡಿದುಕೊಳ್ಳಲು ಆಗುವುದಿಲ್ಲವಲ್ಲ. ಆದರೆ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ, ಸಂಘ ಪರಿವಾರದ ಸ್ವಯಂ ಸೇವಕರಿಗೆ ಆಗಿರುವ ಆಘಾತ, ನಿರಾಸೆ ಅಷ್ಟಿಷ್ಟಲ್ಲ. ಕಾರಣ ಅವರ್ಯಾರಿಗೂ ಬಿಜೆಪಿ ಸರಕಾರವನ್ನಾಗಲಿ, ನಾಯಕರನ್ನಾಗಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನೀಡಿದ 'ಪ್ರಾಮಾಣಿಕ' ಆಡಳಿತದ 'ಬೆಲೆ' ಏನು, ಎಷ್ಟು ಎಂಬುದು ಅವರಿಗೆಲ್ಲ ಮನವರಿಕೆಯಾಗಿದೆ.
ಈಗ ಹೇಳಿ, ಒಳ್ಳೆಯ ಅಭ್ಯರ್ಥಿಗಳು ಯಾರು? ಉತ್ತಮ ಪಕ್ಷ ಯಾವುದು? ಯಾರಿಗೆ ವೋಟು ಕೊಡೋಣ? ನಮ್ಮ ಮುಂದಿನ ಆಯ್ಕೆಗಳಾದರೂ ಯಾವವು?
 ಒಂದೆಡೆ ತಿಂದು ತಿಂದು, ಐದು ವರ್ಷ ತಿನ್ನಲು ಏನೂ ಸಿಗದೇ ಹಸಿವಿನಿಂದ ತತ್ತರಿಸುತ್ತಾ, ಪುನಃ ತಿನ್ನಲು ಕಾದು ಕುಳಿತಿರುವವರು. ಮತ್ತೊಂದೆಡೆ ತಿಂದು ತಿಂದು, ಅಜೀರ್ಣವಾಗುವಷ್ಟು ತಿಂದು, ಜೀರ್ಣಿಸಿಕೊಳ್ಳಲು ಕಾಲಾವಕಾಶಕ್ಕೆ ಹಂಬಲಿಸುತ್ತಾ ಪುನಃ ಅದೇ ತವಕದಲ್ಲಿರುವವರು. ಈ ಇಬ್ಬರ ನಡುವೆ ಮತದಾರ ಪ್ರಭು ಆಯ್ಕೆ ಮಾಡಬೇಕಿದೆ. ಎಂಥಾ ಸ್ಥಿತಿ! ಈ ಇಬ್ಬರ ಪೈಕಿ ನೀವು ಯಾರನ್ನೇ ಆಯ್ಕೆ ಮಾಡಿ, ಸೋಲುವವರು ಮಾತ್ರ ನೀವೇ! ಅತಿ ಭ್ರಷ್ಟ ಇವತ್ತು ಕಂಟಕನಾದರೆ, ಕಡಿಮೆ ಭ್ರಷ್ಟ ನಾಳೆಗೆ ಕಂಟಕ. ಕಡಿಮೆ ಭ್ರಷ್ಟನೆಂದು ಇಂದು ಪೊರೆದರೆ, ಆತ ನಾಳೆ ಬ್ರಹ್ಮರಾಕ್ಷಸನಾಗಿ ಪುನಃ ಕಾಡುತ್ತಾನೆ. ಹೀಗಾಗಿ ನಮ್ಮ ಮುಂದೆ ಆಯ್ಕೆಗಳೇ ಇಲ್ಲದಂತಾಗಿದೆ. ಇದಕ್ಕೆ ಅಪವಾದ ಎಂಬಂತೆ ಇರುವ ಅಭ್ಯರ್ಥಿಗಳು ಇರಬಹುದು. ಆದರೆ ಅವರ ಸಂಖ್ಯೆ ಅತಿ ವಿರಳ.
ಈ ಸಲದ ಚುನಾವಣೆ ಹೇಗಿದ್ದಿರಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಈಗಾಗಲೇ ಎಲ್ಲ ಪಕ್ಷಗಳಲ್ಲೂ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಈ ಸಲ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಟಿಕೆಟ್ ಕೋರಿ ಅರ್ಜಿ ಸಲ್ಲಿಸುವವರು ಹತ್ತು ಸಾವಿರ ರೂಪಾಯಿ ನೀಡಬೇಕೆಂದು ಹೇಳಿತು. 224 ಕ್ಷೇತ್ರಗಳಿಗೆ ಮೂರು ಸಾವಿರಕ್ಕೂ ಹೆಚ್ಚು ಆಕಾಂಕ್ಷಿತರು ಅರ್ಜಿ ಸಲ್ಲಿಸಿದರು. ಆ ಮೂಲಕವೇ ಮೂರು ಕೋಟಿ ರೂಪಾಯಿ ಸಂಗ್ರಹವಾಯಿತು, ಅದಿರಲಿ.
ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮುಂದೆ ಒಂದು ವಿಚಿತ್ರ ಆಯ್ಕೆಯಿದೆ. ಅದೇನೆಂದರೆ ಶತಾಯಗತಾಯ ಟಿಕೆಟ್ ಗಿಟ್ಟಿಸಬೇಕು, ಯಾವ ಪಾರ್ಟಿಯಾದರೂ ಆದೀತು. ಅದೇ ಪಾರ್ಟಿ, ಇದೇ ಪಾರ್ಟಿ ಎಂದೇನಿಲ್ಲ. ಕೆಲವರಂತೂ ಮೂರು ಪಕ್ಷಗಳ ನಾಯಕರುಗಳನ್ನು ಭೇಟಿಯಾಗಿ 'ಕೂತು ಮಾತುಕತೆ' ನಡೆಸಿ ಬಂದಿದ್ದಾರೆ. ಕೆಲವರಿಗೆ ಎಲ್ಲ ಪಕ್ಷಗಳಿಂದಲೂ ಬೇಡಿಕೆ ಬಂದಿದೆ. ಇನ್ನು ಕೆಲವರು ಎಲ್ಲೂ ಸಲ್ಲದವರು. ಕಾಂಗ್ರೆಸ್ ಪಕ್ಷದಿಂದ ಒಂದೊಂದು ಕ್ಷೇತ್ರದಿಂದ ಕನಿಷ್ಠ ಹತ್ತು-ಹದಿನೈದು ಮಂದಿ ಉಮೇದುವಾರರಿದ್ದಾರೆ. ಇವರ ಸಂಖ್ಯೆಯನ್ನು ಮೂರಕ್ಕೋ, ಐದಕ್ಕೋ ಇಳಿಸಿ ದೆಹಲಿಗೆ ಪಟ್ಟಿ ಕಳಿಸಿಕೊಡಲಾಗಿದೆ. ಒಂದು ವೇಳೆ ಕಾಂಗ್ರೆಸ್ ಪಟ್ಟಿ ಘೋಷಣೆಯಾಗಿ, ತಮಗೆ ಟಿಕೆಟ್ ಸಿಕ್ಕಿಲ್ಲವೆಂಬುದು ಖಾತ್ರಿಯಾದರೆ, ಬೇರೆ ಪಕ್ಷಗಳ ನಾಯಕರ ಮನೆ ಬಾಗಿಲು ಬಡಿದು ಬಡಿದು ಚೂರು ಚಿಂದಿಯಾಗದಿದ್ದರೆ ಕೇಳಿ. ಒಂದೇ ದಿನ ಮೂರ್ನಾಲ್ಕು ಪಕ್ಷಗಳ ನಾಯಕರ ಮನೆಯನ್ನು ಹಾದು ಬರುವವರಿಗೇನೂ ಕೊರತೆಯಿಲ್ಲ.
ಈ ಟಿಕೆಟ್ ಆಕಾಂಕ್ಷಿಗಳಿಗೆ ಪಕ್ಷ, ಸಿದ್ಧಾಂತ ಯಾವುವೂ ಮುಖ್ಯವಲ್ಲ. ಟಿಕೆಟ್ ಗಿಟ್ಟಿಸುವುದಕ್ಕಾಗಿ ಏನು ಮಾಡಲು ಸಿದ್ಧ. ಕೆಲವರಂತೂ 'ಎಷ್ಟು ಕೊಡಬೇಕು ಸ್ವಾಮಿ? ನಿಮ್ಮ ರೇಟು ಎಷ್ಟು? ಎಂಬ ಪಲ್ಲವಿಯೊಂದಿಗೇ ಮಾತುಕತೆಗೆ ಶುರುವಿಡುತ್ತಾರೆ. 'ಸಾರ್, ನಾನು ನಾಲ್ಕು ಕೊಡ್ತೇನೆ, ಆರು ಕೊಡ್ತೇನೆ' ಎಂದೇ ಮಾತಿಗಾರಂಭಿಸುತ್ತಾರೆ. ಬೆಂಗಳೂರಿನಲ್ಲಿ ಕೆಲವು ರಿಯಲ್ ಎಸ್ಟೇಟ್ ಕುಳಗಳು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪಕ್ಷದ  ನಾಯಕರಿಗೆ ಮೂರ್ನಾಲ್ಕು ಎಕರೆ ಭೂಮಿಯ ಆಮಿಷವನ್ನೂ ಸಹ ಒಡ್ಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಪಕ್ಷದ ನಾಯಕರಿಂದ ಟಿಕೆಟ್ ಭರವಸೆ ಪಡೆದ ಅಭ್ಯರ್ಥಿಗಳು ಕಳೆದ ಮೂರ್ನಾಲ್ಕು ತಿಂಗಳಿನಿಂದ ತಾವು ಸ್ಪರ್ಧಿಸಲಿರುವ ಕ್ಷೇತ್ರದಲ್ಲಿ ಈಗಾಗಲೇ ನಾಲ್ಕೈದು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಮನೆಮನೆಗೆ ವಾಚು, ಮೊಬೈಲು ಸೀರೆ, ಪಂಚೆ, ನೋಟ್ಬುಕ್ಗಳನ್ನು ಹಂಚಿದ್ದಾರೆ. ಟಿಕೆಟ್ ಅನ್ನು ರಿಸರ್ವ್ ಮಾಡಿರುವ ಹೊಸಪರಿ ಇದು. ಚುನಾವಣೆ ಘೋಷಣೆಯಾದ ಬಳಿಕ ಇವರು ಯಾವ ರೀತಿಯಲ್ಲಿ ಹಣ ಖರ್ಚು ಮಾಡಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.
ಅಂದರೆ ಎಲ್ಲ ರಾಜಕೀಯ ಪಕ್ಷಗಳಿಂದ ಎಂಥೆಂಥ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಗಮನಿಸಿ. ಮತದಾರನಿಗೆ ಇಂದು ಯಾವ ಆಯ್ಕೆಯಿದೆ? ಎಲ್ಲ ಪಕ್ಷಗಳಿಗೂ winnabilityಯೊಂದೇ ಮಾಪಕ. ಆರಿಸಿ ಬರುವ ಸಾಮರ್ಥ್ಯ ಇದೆಯಾ ಎಂಬುದೊಂದೇ ಪರಿಗಣನೆ. ಅದು ನಿರ್ಧಾರವಾಗುವುದು ಅಭ್ಯರ್ಥಿ ಬಳಿ ಹಣವಿದೆಯಾ, ಖರ್ಚು ಮಾಡುವ ತಾಕತ್ತಿದೆಯಾ ಎಂಬ ಸಂಗತಿಯಿಂದ. ಅಂದರೆ ಇಂದು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಕನಿಷ್ಠ ಮೂರ್ನಾಲ್ಕು ಕೋಟಿ ರುಪಾಯಿಯಾದರೂ ಬೇಕೇ ಬೇಕು. ಬೆಂಗಳೂರಿನಲ್ಲಾದರೆ ಕನಿಷ್ಠ 15-20 ಕೋಟಿ ರುಪಾಯಿಯಾದರೂ ಬೇಕು. ಈ ಸಲ ಚುನಾವಣೆಗೆ ನಿಲ್ಲುವ ಪ್ರತಿ ಅಭ್ಯರ್ಥಿ ಘೋಷಿಸಿಕೊಳ್ಳುವ ತನ್ನ ಆಸ್ತಿ-ಪಾಸ್ತಿ ವಿವರಗಳ ಮೇಲೆ ನಿಗಾ ಇಡಿ. ಎಲ್ಲರೂ 'ಕೋಟಿವೀರ'ರೇ. ಹಣವಿಲ್ಲದಿದ್ದರೆ ಚುನಾವಣೆ ಸೆಣಸುವ ಮಾತಿರಲಿ, ಟಿಕೆಟ್ಟೇ ಸಿಗುವುದಿಲ್ಲ. ಹೀಗಾಗಿ ಆರಿಸಿ ಬರುವವರೆಲ್ಲ ಕೋಟಿವೀರರೇ. ಒಂದು ರೀತಿಯಲ್ಲಿ ನಮ್ಮ ವಿಧಾನಸೌಧ ಅಂದ್ರೆ ಕೋಟಿವೀರರ ಕ್ಲಬ್ ಇದ್ದಂತೆ!
ಪರಿಸ್ಥಿತಿ ಹೀಗಿರುವಾಗ ಮತದಾರರಾದರೂ ಏನು ಮಾಡಿಯಾರು? ಅವರ ಮುಂದೆ ಇರುವ ಆಯ್ಕೆಗಳಾದರೂ ಏನು? ಇನ್ನು ಅಭ್ಯರ್ಥಿಗಳು ಯಾರಾದರೂ ಇರಲಿ, ಪಕ್ಷವನ್ನು ನೋಡಿಕೊಂಡು ವೋಟು ಹಾಕೋಣ ಅಂದ್ರೆ ಅದು ಇನ್ನೂ ಆಧ್ವಾನ. ಇಂದು ಯಾವ ಪಕ್ಷವೂ ಸ್ವಚ್ಛವಾಗಿ ಉಳಿದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಯಾವುದೇ ಪಕ್ಷಗಳ ಮಧ್ಯೆ ವ್ಯತ್ಯಾಸವೇ ಇಲ್ಲ. ಇದ್ದರೂ ಅತ್ಯಂತ ತೆಳು ಗೆರೆ. ಯಾವ ಪಕ್ಷಗಳಲ್ಲೂ ಸಿದ್ಧಾಂತ, ತತ್ತ್ವಗಳಿಲ್ಲ. ಅವು ಗಾಳಿಯಲ್ಲಿ ತೇಲಿ ಹೋಗಿ ಬಹಳ ದಿನಗಳಾದವು. ಈಗ ಪೈಪೋಟಿಯಲ್ಲಿರುವ ಐದೂ ಪಕ್ಷಗಳಲ್ಲಿ ಸ್ವಲ್ಪವೂ ಫರಕು ಇಲ್ಲ. ಎಲ್ಲ ಪಕ್ಷಗಳ, ಆ ನಾಯಕರ ಉದ್ದೇಶ ಒಂದೇ- ಅಧಿಕಾರ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬುದು. ಉಳಿದವೆಲ್ಲ ನಗಣ್ಯ.
ಹಾಗಾದರೆ ಈ ಚುನಾವಣೆಯಿಂದ ಬರುವ ಸರ್ಕಾರದಿಂದ ನಾವೇನು ನಿರೀಕ್ಷಿಸಬಹುದು?
ನಾವು ಭರವಸೆ ಕಳೆದುಕೊಳ್ಳುವುದು ಬೇಡ.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com