'ಒಂದು ವ್ಯತ್ಯಾಸ ಗಮನಿಸಿದೆಯಾ? ಈ ಬಾರಿ ಚಳಿಗಾಲ ಬರಲೇ ಇಲ್ಲ! ಪ್ರತಿ ವರ್ಷ ಡಿಸೆಂಬರ್ ಶುರು ಆಗುತ್ತಿದ್ದಂತೆಯೇ ಚಳಿಗಾಲವೂ ಮೆಲ್ಲಗೆ ಬಂದು ಬಾಗಿಲು ಬಡಿಯುತ್ತಿತ್ತು. ತಕ್ಷಣವೇ ಎಲ್ಲರಿಗೂ ಸ್ವೆಟರ್ಗಳ ನೆನಪಾಗುತ್ತಿತ್ತು. ದಿನಗಳು ಉರುಳಿದಂತೆ ಚಳಿ ಜಾಸ್ತಿಯಾದರೆ , ಮಂಕಿ ಕ್ಯಾಪ್ ಹಾಕಿಕೊಂಡು ತಿರುಗಾಡುವುದನ್ನು ಜನ ಅಭ್ಯಾಸ ಮಾಡಿಕೊಂಡಿದ್ದರು. ಇಷ್ಟಾದರೂ ತುಟಿಗಳು ಒಡೆಯುತ್ತಿದ್ದವು. ಚರ್ಮ ಬಿರುಕು ಬಿಡುತ್ತಿತ್ತು. ಎಲ್ಲರೂ ಮೆಡಿಕಲ್ಶಾಪ್ಗೆ ನುಗ್ಗಿ-ಬೇಗ ವ್ಯಾಸಲಿನ್ ಕೊಡಪ್ಪಾ ಎನ್ನುತ್ತಿದ್ದರು. ಅಕಸ್ಮಾತ್ ಮನೇಲಿ ವ್ಯಾಸಲಿನ್ ಇಲ್ಲದಿದ್ದರೆ ಕೊಬ್ಬರಿ ಎಣ್ಣೆಯನ್ನೋ, ಹಾಲಿನ ಕೆನೆಯನ್ನೋ ಒಡೆದಿದ್ದ ತುಟಿಗಳಿಗೆ, ಕೈ-ಕಾಲಿಗೆ ಹಚ್ಚಿಕೊಂಡು- ಉಫ್, ಈ ಚಳಿಗಾಲ ಮುಗಿದ್ರೆ ಸಾಕು ಎನ್ನುತ್ತಿದ್ದರು. ಆದರೆ , ಈ ವರ್ಷ ಅಂಥ ಮಾತುಗಳೇ ಕೇಳಿಸಲಿಲ್ಲ ಅಲ್ವೇನೆ? ' ಎಂದಳು ರೂಂಮೇಟ್ ಪಾರ್ವತಿ.
ಅವಳ ಮಾತುಗಳಲ್ಲಿ ಸತ್ಯವಿದೆ ಅನ್ನಿಸಿತು. ಏಕೆಂದರೆ ಈ ವರ್ಷ ಡಿಸೆಂಬರ್ನಿಂದಲೇ ಬಿಸಿಲು ಶುರುವಾಯಿತು. ಹಾಗಾಗಿ ಚಳಿಗಾಲ ಕೇವಲ ಹತ್ತಿಪ್ಪತ್ತು ದಿನಗಳಿಗೆ ಮಾತ್ರವೇ ಸೀಮಿತವಾಯ್ತೇನೋ ಅನ್ನಿಸಿತು. ಅದನ್ನೇ ಗೆಳತಿಯರಿಗೆ ಹೇಳಿದೆ. ಚಳಿಗಾಲದಲ್ಲಿ ಬೆಳಗಿನ ಹೊತ್ತು ಮರದ ಎಲೆಗಳ ಮೇಲೆ ಮುತ್ತಿನ ಹನಿಗಳಂಥ ಇಬ್ಬನಿ ಬಿದ್ದಿರ್ತಾ ಇದ್ದದ್ದನ್ನು ನೆನಪಿಸಿದೆ. ಅದೇ ಸಂದರ್ಭಕ್ಕೆ ಮಧ್ಯೆ ಬಾಯಿ ಹಾಕಿದ ರೂಪಶ್ರೀ-' ಅಯ್ಯೋ, ಚಳಿಗಾಲ ಬರಲಿಲ್ಲ ಎಂಬ ಒಂದೇ ಕಾರಣದಿಂದ ಅದೆಷ್ಟೋ ಮನೆಗಳಲ್ಲಿ ಅತ್ತೆ, ಸೊಸೆಯರ ಮಧ್ಯೆ ಜಗಳಗಳಾಗಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಸೊಸೆ ಬೇಗ ಏಳುವುದಿಲ್ಲ ಎಂಬ ಒಂದೇ ಕಾರಣದಿಂದ ಅತ್ತೆಯರು ಜಗಳ ತೆಗೆಯುತ್ತಿದ್ದರು. ನಿಜ ಏನೆಂದರೆ, ಚಳಿಯ ನೆಪದಲ್ಲಿ ಸೊಸೆಯಂದಿರು ಸ್ವಲ್ಪ ಜಾಸ್ತಿ ರೊಮಾನ್ಸ್ ಮಾಡುವುದನ್ನು ಸಹಿಸಿಕೊಳ್ಳಲು ಅತ್ತೆಯ ಮನಸ್ಸು ಒಪ್ಪುತ್ತಿರಲಿಲ್ಲ. ಈ ಸಿಲ್ಲಿ ಕಾರಣಕ್ಕಾಗಿಯೇ ಜಗಳ ಶುರುವಾಗಿ, ಅದು ತಾರಕಕ್ಕೆ ಹೋಗಿ, ಕೊನೆಗೆ ಗಂಡ-ಹೆಂಡತಿ ಬೇರೊಂದು ಮನೆ ಮಾಡುವುದರೊಂದಿಗೆ ಕಥೆ ಮುಕ್ತಾಯವಾಗುತ್ತಿತ್ತು. ಅದನ್ನೆಲ್ಲಾ ನೆನಪಿಸಿಕೊಂಡ್ರೆ ಚಳಿಗಾಲ ಬರದೇ ಇದ್ದುದರಿಂದ ಒಳ್ಳೆಯದೇ ಆಗಿದೆ ಎನ್ನಬಹುದು ' ಎಂದಳು. ಒಂದೆರಡು ನಿಮಿಷಗಳ ನಂತರ ದಿಢೀರನೆ ಟಾಪಿಕ್ ಬದಲಾಯಿಸಿ ಚಳಿಗಾಲ, ಅತ್ತೆ, ಸೊಸೆಯನ್ನು ಪಕ್ಕಕ್ಕಿಡಿ. ಪ್ರತಿಷ್ಠೆ, ಅಸಹನೆ, ಅನುಮಾನ ಹಾಗೂ ನಾನು ಹೇಳಿದ್ದೇ ಸರಿ ಎಂಬ ಮಾತಿನ ನಿಲುವಿನಿಂದಾಗಿ ಏನೆಲ್ಲಾ ಅನಾಹುತ ಆಗ್ತವೋ ಕೇಳಿಸ್ಕೊಳ್ಳಿ ಎನ್ನುತ್ತಾ ಒಂದು ಕಥೆ ಹೇಳಿದಳು. ಅದರ ವಿವರಣೆ ಹೀಗೆ:
ಒಂದೂರಲ್ಲಿ ವೀರೇಶ್ ಎಂಬ ಹುಡುಗನಿದ್ದ. ಅವನಿಗೊಬ್ಬಳು ಪ್ರೇಯಸಿಯಿದ್ದಳು. ಎಲ್ಲರಂತೆಯೇ ಅವರೂ ಒಂದಾಗಿ ಬಾಳುವ ಕನಸು ಕಂಡರು. ಭವಿಷ್ಯದ ದಿನಗಳ ಬಗ್ಗೆ ಚರ್ಚಿಸಿದರು. ಪರಸ್ಪರರಿಗೆ ಉಡುಗೊರೆ ಕೊಟ್ಟರು. ಜೊತೆಯಾಗಿ ಸಿನಿಮಾಗೆ ಹೋದರು. ಒಂದೇ ತಟ್ಟೆಯಲ್ಲಿ ಊಟ ಮಾಡಿದರು. ಬದುಕುವುದಿದ್ದರೆ ನಿನ್ನೊಂದಿಗೆ ಮಾತ್ರ ಎಂದು ಪತ್ರಗಳಲ್ಲಿ ಬರೆದುಕೊಂಡರು. ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರೂ ದೇವಸ್ಥಾನಕ್ಕೆ ಜೊತೆಯಲ್ಲೇ ಹೋಗಿ ಬಂದರು. ಒಂದೆರಡು ಸಮಾರಂಭಗಳಲ್ಲಿ ಜೊತೆಯಾಗಿ ಫೋಟೋ ತೆಗೆಸಿಕೊಂಡರು. ಮುಂದೆ ಅನಿರೀಕ್ಷಿತವೊಂದು ನಡೆದು ಹೋಯಿತು. ಒಂದು ಸಿಲ್ಲಿ ಕಾರಣದಿಂದ ಈ ಅಮರ ಪ್ರೇಮಿಗಳ ಸಂಬಂಧದಲ್ಲಿ ಬಿರುಕು ಬಿಟ್ಟಿತು. ಮುಂದಿನ ಕೆಲವೇ ದಿನಗಳಲ್ಲಿ ಆ ಹುಡುಗಿ, ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಿ ಬೇರೊಂದು ಊರಿಗೆ ಹೋಗಿ ಬಿಟ್ಟಳು. ಈ ಹುಡುಗ ವೀರೇಶ್ ದೇವದಾಸ್ ಥರಾ ಆಗಲಿಲ್ಲ. ಬದಲಿಗೆ, ಅವಳಿಲ್ಲದೆಯೂ ನಾನು ಬದುಕಬಲ್ಲೆ ಎಂಬ ಹಠಕ್ಕೆ ಬಿದ್ದ. ಮುಂದಿನ ದಿನಗಳಲ್ಲಿ ಅವಳಿಗಿಂತ ದುರ್ಬಲಳಾದ ಹೆಣ್ಣಿಗೆ ಬಾಳು ಕೊಡಲು ನಿರ್ಧರಿಸಿದ. ಈ ಸಂದರ್ಭದಲ್ಲಿಯೇ ಅವನಿಗೆ ಗಂಡನಿಂದ ದೂರವಾಗಿದ್ದ. ಒಂದು ಹೆಣ್ಣು ಮಗುವನ್ನೂ ಹೊಂದಿದ್ದಾಕೆಯ ಪರಿಚಯವಾಯಿತು. ಆಕೆ ಇವನೊಂದಿಗೆ ತನ್ನ ಸಂಕಟದ ಕಥೆ ಹೇಳಿಕೊಂಡಳು. ಈತ ಸಮಾಧಾನದ ಮಾತು ಹೇಳಿದ. ದಿನಗಳೆದಂತೆಲ್ಲ ಅವರ ಮಧ್ಯೆ ಸಲುಗೆ ಹೆಚ್ಚಿತು. ಅದೊಂದು ದಿನ- ' ನಿನಗೆ ಬಾಳು ಕೊಡ್ತೇನೆ ' ಎಂದು ಇವನು ಹೇಳಿಯೂ ಬಿಟ್ಟ. ಮರುದಿನದಿಂದಲೇ ಸ್ನೇಹ, ಪ್ರೇಮವಾಗಿ ಬದಲಾಯಿತು. ವೀರೇಶನಿಗೆ ಗೆಳೆಯ-ಗೆಳತಿಯರು ಜಾಸ್ತಿ. ಅದನ್ನು ಗಮನಿಸಿದ ಈ ಹೊಸ ಗೆಳತಿ ಹೇಳಿದಳು: 'ಇನ್ನು ಮುಂದೆ ನೀನು ಬೇರೆ ಹುಡುಗಿಯರೊಂದಿಗೆ ಜಾಸ್ತಿ ಹರಟಬಾರದು. ಹೆಚ್ಚು ಸಲುಗೆಯಿಂದ ವರ್ತಿಸಬಾರದು. ನೀನು ಸಂಪೂರ್ಣವಾಗಿ ನನ್ನವನು. ನೀನು ಇನ್ನೊಂದು ಹುಡುಗಿಯ ಜೊತೆ ಇರುವುದನ್ನು ಕಂಡರೆ ಮನಸ್ಸಿಗೆ ತುಂಬಾ ಸಂಕಟವಾಗುತ್ತೆ...'
ವೀರೇಶ ಈ ಕಂಡೀಷನ್ಗೂ ಒಪ್ಪಿದ. ಅವಳನ್ನು ಮದುವೆಯಾಗುವ ಮುನ್ನ, ತನ್ನ ಭಗ್ನ ಪ್ರೇಮದ ಕಥೆಯನ್ನು ಹೇಳಲು ನಿರ್ಧರಿಸಿದ. ಅದೊಮ್ಮೆ ಗೆಳತಿಯೊಂದಿಗೆ ಪಾರ್ಕ್ಗೆ ಹೋಗಿ, ತನ್ನ ಹಳೆಯ ಕಥೆಯನ್ನು ವಿವರವಾಗಿಯೇ ಹೇಳಿಕೊಂಡ. ಈತ ಮಾತು ಮುಗಿಸುತ್ತಿದ್ದಂತೆಯೇ ಆಕೆ ಸಿಡಿದಳು: ನೀನು ಅವಳೊಂದಿಗೆ ಹೋಟೆಲಿಗೆ ಹೋಗಿದೀಯ. ಜೊತೇಲಿ ದೇವಸ್ಥಾನಕ್ಕೆ, ಮದುವೆಗೆ, ಸಿನಿಮಾಕ್ಕೆ, ಪಾರ್ಕ್ಗೆ ಹೋಗಿ ಬಂದಿದ್ದೀಯ. ಅವಳನ್ನು ಮುಟ್ಟಿದ್ದೀಯ. ನಂಗೆ ಯಾಕೋ ನಿನ್ನ ಮೇಲೆ ನಂಬಿಕೆ ಬರ್ತಾ ಇಲ್ಲ...' ಇಷ್ಟಾಗುವ ವೇಳೆಗೆ ವೀರೇಶನೂ ಈ ಹುಡುಗಿಯ ಅತೀ ಎಂಬಂಥ ಪೊಸಿಸಿವ್ನೆಸ್, ಅನುಮಾನ ಹಾಗೂ ಮುಂಗೋಪವನ್ನು ಗಮನಿಸಿದ್ದ. ಈಕೆಯ ಸಿಡಿಮಿಡಿಯ ಮಾತು ಕೇಳಿ ಹೀಗೆಂದ: ಒಂದು ಮದುವೆಯಾಗಿ, ಮಗು ಇರುವ ನಿನ್ನ ಮೇಲೆ ನನಗೆ ನಂಬಿಕೆ ಇದೆ. ಆದರೆ, ನನಗೆ ವರ್ಷಗಳ ಹಿಂದೆ ಒಬ್ಬಳು ಪ್ರೇಯಸಿ ಇದ್ದಳು ಎಂಬುದನ್ನೇ ನೀನು ಸಹಿಸಿಕೊಳ್ಳುವುದಿಲ್ಲ ಎಂದ ಮೇಲೆ ಈ ಸಂಬಂಧ ಹೆಚ್ಚು ದಿನ ಉಳಿಯಲ್ಲ... ನಿನಗೆ ಗುಡ್ಬೈ...'
ಪರಿಣಾಮ: ವೀರೇಶ ಬೇರೊಂದು ಮದುವೆಯಾದ. ದುಡುಕಿ ಮಾತಾಡಿದ ಹುಡುಗಿ, ಹಾಗೇ ಉಳಿದಳು...
ರೂಪಶ್ರೀ ಈ ಕಥೆ ಹೇಳಿ ವಾರ ಕಳೆದಿದೆ. ಈಗಲೂ ಮನಸ್ಸಿನ ತುಂಬಾ ದುಡುಕಿ ಮಾತಾಡಿದ ಆ ಹೆಂಗಸೇ ಕೂತುಬಿಟ್ಟಿದ್ದಾಳೆ. ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಅವಳೇಕೆ ಹಾಗೆ ಮಾಡಿಬಿಟ್ಟಳು? ಅರ್ಥವಾಗುತ್ತಿಲ್ಲ...
-ನಾನು ಪ್ರಣತಿ